ಸ್ಫೂರ್ತಿಯ ಸೆಲೆಬ್ರಿಟಿ ಸತ್ತ ಮೇಲೂ ಮತ್ತೊಬ್ಬರ ದೇಹದಲ್ಲಿ ನಮ್ಮ ಹೃದಯ ಮಿಡಿಯುತ್ತೆ ಎಂದ್ರೆ... ಚಿರಂತನವಾಗಲಾರದ ಮನುಷ್ಯ ಇದರಿಂದ ತನ್ನ ಸಾವನ್ನು ತುಸು ಮುಂದೆ ಹಾಕಿದಂತೆ. ಬದುಕಿರುವಾಗ ಏನನ್ನೂ ಸಾಧಿಸಲಾಗದವನು ಮರಣ ನಂತರ ಮತ್ತೊಬ್ಬರಿಗೆ ಜೀವದಾನ ಮಾಡುವುದೆಂದರೆ ಸಣ್ಣ ಸಾಧನೆಯಲ್ಲ. ಮಣ್ಣು ಮಾಡುವ ಬದಲು ಅಂಗಾಂಗಗಳನ್ನು ಮೊತ್ತೊಬ್ಬರಿಗೆ ಕಸಿ ಮಾಡಬಹುದಾದರೆ ದಾನ ಮಾಡಬಾರದೇಕೆ? ಕನ್ನಡದ ಕಣ್ಮಣಿ ಡಾ.ರಾಜ್‌ಕುಮಾರ್ ತಮ್ಮ ಕಣ್ಣುಗಳನ್ನು ದಾನ ಮಾಡಿದ ನಂತರವೇ ಕನ್ನಡಿಗರಲ್ಲಿ ಈ ಬಗ್ಗೆ ಸಾಕಷ್ಟು ಅರಿವು ಮೂಡಿದ್ದು. ಮಗನ ಜೀವ ಉಳಿಸಲು ತನ್ನ ಹೃದಯವನ್ನೇ ದಾನ ಮಾಡುವ ಕಥಾ ಹಂದರವುಳ್ಳ ಸುಗ್ರೀವ ಚಿತ್ರದಲ್ಲಿ ನಟಿಸಿದ ರಾಜ್ ಪುತ್ರ ಶಿವಣ್ಣ ತಮ್ಮ ದೇಹವನ್ನು ದಾನ ಮಾಡಿದ್ದಾರೆ. ದಕ್ಷಿಣ ಭಾರತದ ಮೇರು ನಟ ಕಮಲ್ ಹಾಸನ್ ಸಹ ತಮ್ಮ ದೇಹವನ್ನು ದಾನ ಮಾಡಿಯಾಗಿದೆ. ಐ ಕೊಟ್ಟ ಐಶ್ ಬಾಲಿವುಡ್ ನಟರೂ ತಮ್ಮ ಅಂಗಾಂಗ ದಾನದಿಂದ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅರಿವು ಮೂಡಿಸುವಲ್ಲಿಯೂ ಬ್ಯುಸಿಯಾಗಿದ್ದಾರೆ. 'ಕಜರಾರೆ ಕಜರಾರೆ ಕಾಲೆ ಕಾಲೇ ನೈನಾ' ಎನ್ನುತ್ತಾ ತನ್ನ ಬ್ಯೂಟಿಪುಳ್ ಕಣ್ಣುಗಳಿಂದಲೇ ಎಲ್ಲರನ್ನೂ ಆಕರ್ಷಿಸುವ ಐಶ್ವರ್ಯ ರೈ ಕಣ್ಣನ್ನು ದಾನ ಮಾಡಿಯಾಗಿದೆ. ಐ ಬ್ಯಾಂಕ್ ಅಸೋಸಿಯೇಷನ್ ರಾಯಭಾರಿ ಆಗಿಯೂ ಯುವಕರಲ್ಲಿ ಕಣ್ಣಿನ ದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಐಶ್ ಯಶ ಕಂಡಿದ್ದಾಳೆ. ಅಷ್ಟೇ ಅಲ್ಲ ಐಶ್ ಅತ್ತೆ ಜಯಾ ಹಾಗೂ ಮಾವ ಬಿಗ್ ಬಿ ಅಮಿತಾಭ್ ಬಚ್ಚನ್ ಸಹ ಕತ್ತಲು ಕವಿದ ದೃಷ್ಟಿ ಹೀನರ ಬಾಳಲ್ಲಿ ಬೆಳಕು ಹರಿಸಲು ಇಚ್ಛಿಸಿದ್ದಾರೆ. ಅಪ್ಪನಿಗೆ ಅಗತ್ಯವಿದ್ದ ಅಂಗಾಂಗ ದಾನದ ಮಹತ್ವದ ಅರಿವಿದೆ ಎನ್ನುವ 'ದೇಸಿ ಗರ್ಲ್‌' ಪ್ರಿಯಾಂಕಾ ಛೋಪ್ರಾಳ ಮರಣಾ ನಂತರ ಸರ್ವ ಅಂಗಗಳನ್ನೂ ತೆಗೆದುಕೊಳ್ಳಬಹುದಂತೆ. 'ಬೊಗಸೆ ಕಂಗಳ' ಸೌತ್ ಇಂಡಿಯನ್ ನಾಟಿ ಗೈ ಮಾಧವನ್ ಮತ್ತೊಬ್ಬರ ಜೀವ ಉಳಿಸಲು ಸಾಧ್ಯವಿರುವ ಹೃದಯ, ಅಸ್ತಿ ಮಜ್ಜೆ, ಕಣ್ಣು, ಶ್ವಾಸಕೋಶ ಸೇರಿದಂತೆ ಎಲ್ಲ ಅಂಗಾಂಗಗಳನ್ನೂ ದಾನ ಮಾಡಿಯಾಗಿದೆ. ಸತ್ತ ನಂತರವೂ ಮತ್ತೊಬ್ಬರನ್ನು ನಮ್ಮ ಅಂಗಾಂಗಳು ಬದುಕಿಸುತ್ತೆ ಎನ್ನುವುದಾದರೆ ಹಿಂದು ಮುಂದು ನೋಡೋದ್ಯಾಕೆ ಎನ್ನುವುದು ಬ್ಲ್ಯಾಕ್ ಬ್ಯೂಟಿ ನಂದಿತಾ ದಾಸ್ ಪ್ರಶ್ನೆ. 'ಶಿಪ್ ಆಫ್ ಥಿಸೀಸ್ ತತ್ವದಂತೆ ಹಾಳಾದ ಹಡಗಿನ ಮೂಲ ಘಟಕಗಳನ್ನೇ ಬಳಸಿಕೊಂಡು ಹೊಸದನ್ನು ಸೃಷ್ಟಿಸಿದರೂ ಅದು ಹಡಗೇ ಆಗುತ್ತದೆ. ಹಾಗೆಯೇ ನಮ್ಮ ಅಂಗಾಂಗಗಳನ್ನು ಇನ್ನೊಬ್ಬರಿಗೆ ಸಕಿ ಮಾಡುವುದರಿಂದ ಒಂದರ್ಥದಲ್ಲಿ ನಾವೇ ಮರು ಹುಟ್ಟು ಪಡೆದಂತೆ' ಎನ್ನುವ ಫಿಲಾಸಫಿ ಮೇಲೆ ಸತ್ತ ಕೂಡಲೇ ಸಂಬಂಧಪಟ್ಟವರಿಗೆ ಕರೆ ಮಾಡಿ ಯೂಸ್ ಮಾಡಬಹುದಾದ ಅಂಗಾಂಗಗಳನ್ನೆಲ್ಲ ತೆಗೆದುಕೊಳ್ಳುವಂತೆ ಹೇಳಲು ಮಿ. ಪರ್ಫೆಕ್ಷನಿಸ್ಟ್ ಅಮಿರ್ ಖಾನ್ ಪತ್ನಿ ಕಿರಣ್‌ಗೆ ಪರ್ಮಿಷನ್ ಕೊಟ್ಟಾಗಿದೆ. ಅಂಗಾಂಗ ದಾನಕ್ಕೆ ಧರ್ಮದ ವಿರೋಧವಿದೆ. ಅದಕ್ಕೆ ಇನ್ನೊಬ್ಬರ ಜೀವ ಉಳಿಸಲು ನಮ್ಮ ದೃಷ್ಟಿಕೋನವನ್ನೇ ಬದಲಿಸಿಕೋ ಬೇಕು ಎನ್ನುತ್ತಾರೆ ಮೂಲ್ಕಿ ಮೂಲಕ ಬಾಲಿವುಡ್ ಹೀರೋ ಸುನೀಲ್ ಶೆಟ್ಟಿ. 'ಬ್ಲ್ಯಾಕ್‌' ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿ ಕಣ್ಣಿಲ್ಲದವರ ನೋವನ್ನು ಅರ್ಥ ಮಾಡಿಕೊಂಡ ರಾಣಿ ಮುಖರ್ಜಿಗೂ ಸಾವಿನ ನಂತರ ತಮ್ಮೆರಡು ಕಣ್ಣುಗಳಿಂದ ಇಬ್ಬರ ಬಾಳಲ್ಲಿ ಬೆಳಕು ಮೂಡಿಸುವಾಸೆ. ಬದುಕಿನ 'ಆಟ'ದ ನಂತರ ಕ್ರಿಕೆಟಿಗರೂ ಮರಣಾನಂತರ ಅಗತ್ಯವಿರುವ ಅಂಗಾಂಗಗಳನ್ನು ಬಳಸಿ ಎಂದು ಬದೆದಿಟ್ಟಿದ್ದಾರೆ. ಸತ್ತ ನಂತರ ಫ್ಯಾಮಿಲಿ ಮೆಂಬರ್ಸ್ ದೇಹದ ಯಾವುದೇ ಅಂಗವನ್ನೂ ತೆಗೆದುಕೊಳ್ಳಲು ಅನುವು ಮಾಡಿಕೊಳ್ಳುವುದಿಲ್ಲ. ಅದಕ್ಕೆ ಬದುಕಿರುವಾಗಲೇ ಅಂಗಾಂಗ ದಾನದ ಬಗ್ಗೆ ಸಹಿ ಮಾಡುವುದೊಳಿತು ಎನ್ನುವುದು ಅನಿವ್ ಕುಂಬ್ಳೆ ಅಭಿಮತ. ಸದಾ ಜೋಕಿನ ಮೂಲಕ ನಗುವಿನ ಅಲೆ ಸೃಷ್ಟಿಸುವ ನವಜೋತ್ ಸಿಂಗ್ ಸಿದ್ದು ಮಾತ್ರ ಜೀವನದ ಬಗ್ಗೆ ತುಂಬಾ ಸೀರಿಯಸ್. ಇವರು ತಮ್ಮೆಲ್ಲ ಅಂಗಾಂಗಗಳನ್ನೂ ದಾನ ಮಾಡಿಯಾಗಿದೆ. ಮುಂಬೈನ ನರ್ಮದಾ ಕಿಡ್ನಿ ಫೌಂಡೇಷನ್‌ಗೆ ವಿನೋದ್ ಕಾಂಬ್ಳಿ ತಮ್ಮ ಅಂಗಾಂಗ ದಾನ ಮಾಡಿಯಾಗಿದೆ. ಟೀಮ್ ಮೇಟ್ಸ್‌ಗೂ ರಿಕ್ವೆಸ್ಟ್ ಮಾಡಿಕೊಳ್ಳುವುದರೊಂದಿಗೆ ಗೌತಮ್ 'ಗಂಭೀರ'ವಾಗಿ ಇಂಥದ್ದೊಂದು ಕಾರ್ಯಕ್ಕೆ ಕೈ ಹಾಕಿದ್ದಾರೆ. ಈ ಸಮಾಜಮುಖಿ ಕಾರ್ಯದಲ್ಲಿ ಬಿಷನ್ ಸಿಂಗ್ ಬೇಡಿ ಹಾಗೂ ಕಪಿಲ್ ದೇವ್ ಸಹ ಹಿಂದೆ ಬಿದ್ದಿಲ್ಲ. ಸೊಲ್ಲೆತ್ತಿದ ಸಲ್ಲು ಎಲ್ಲ ಗಣ್ಯರು ಸತ್ತ ಮೇಲೆ ಅಂಗಾಂಗ ದಾನ ಮಾಡುವ ಬಗ್ಗೆ ಮಾತನಾಡಿದರೆ ಸಲ್ಲು ಬಾಯ್ ತುಸು ಢಿಫರೆಂಟ್. ನಮ್ಮ ಪ್ರಾಣಕ್ಕೆ ತೊಂದರೆಯಾಗದ ಅಸ್ಥಿಮಜ್ಜೆ ದಾನದ ಬಗ್ಗೆ ಧ್ವನಿ ಎತ್ತಿದ್ದಾರೆ. ರಕ್ತದಂತೆ ನೀಡಬಹುದಾದ ಅಸ್ಥಿಮಜ್ಜೆಯನ್ನು ನೀಡಿ ಎನ್ನುತ್ತಾರೆ. ಲ್ಯುಕೆಮಿಯಾ, ಲಿಂಪೋಮಾ ಮತ್ತು ಸಿಕಲ್ ಸೆಲ್ ಅನಿಮಿಯಾದಂಥ ಮಾರಕ ರೋಗಗಳಿಂದ ಬಳಲುವ ರೋಗಿಗಳ ದೇಹದ ಮುಖ್ಯ ಎಲುಬಿನಲ್ಲಿರುವ ಅಸ್ಥಿ ಮಜ್ಜೆ ರಕ್ತವನ್ನು ಉತ್ಪಾದಿಸುವುದಿಲ್ಲ. ಇಂಥವರಿಗೆ ಅನಸ್ತೇಷಿಯಾ ನೀಡಿ ತೆಗೆಯಬಹುದಾದ ಮಜ್ಜೆ ಬೇಕು. ಕೆಲವು ಸೈಡ್ ಎಫೆಕ್ಟ್‌ಗಳಿದ್ದರೂ ಯಾರೆದ್ದೋ ಬದುಕಿನಲ್ಲಿ ಮಂದಹಾಸ ಮೂಡಿಸಬುದಾದ ಈ ಕೆಲಸ ನಿಜಕ್ಕೂ ಗ್ರೇಟ್. ಎಲ್ಲರೂ ಅಸ್ಥಿ ಮಜ್ಜೆ ಡೊನೇಟ್ ಮಾಡಿ ಎನ್ನುವುದು ಸಲ್ಮಾನ್ ಖಾನ್ ರಿಕ್ವೆಸ್ಟ್. ಯಕೃತ್ ಪಡೆದ ಸ್ಟೀವ್ ಗಂಭೀರವಾದ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಆ್ಯಪಲ್ ಸಿಇಒ ಸ್ಟೀವ್ ಜಾಬ್ಸ್ ತಮ್ಮ ಸಾವನ್ನು ಮುಂದೂಡಿದ್ದೊ ಯಕೃತ್ತನ್ನು ಧಾನವಾಗಿ ಪಡೆದ ನಂತರವೇ. ಇನ್ನೇನು ಜೀವನವೇ ಮುಗಿದು ಹೋಯಿತು ಎನ್ನುವಾಗಲೇ ಯಕೃತ್ ಪಡೆದು ಮರುಹುಟ್ಟು ಪಡೆದ ಸ್ಟೀವ್ ಐಪಾಡ್ ಮತ್ತು ಆಪೋನ್ ಅನ್ನು ವಿಶ್ವಕ್ಕೆ ಪರಿಚಯಿಸಿದ್ದು, ಬಹುಷಃ ಸ್ಟೀವ್ ಅಂಗಾಂಗವನ್ನು ದಾನವಾಗಿ ಪಡೆಯದೇ ತಮ್ಮ ಸಾವನ್ನು ಮುಂದೂಡದೇ ಹೋಗಿದ್ದರೆ ವಿಶ್ವಕ್ಕೆ ಸ್ಮಾರ್ಟ್ ಪೋನ್ ತುಸು ತಡವಾಗಿ ಪರಿಯವಾಗುತ್ತಿತ್ತು ಎನ್ಸುತ್ತೆ. -ಕೆ.ಎಸ್.ನಿರುಪಮಾ