ಸಪ್ತಪದಿ ತುಳಿಯದೇ ಇರಲು 7 ಹೆಜ್ಜೆಗಳು ಸಂಬಂಧದಲ್ಲಿ ನರಕವಾಸ ಅನುಭವಿಸ್ತಿದ್ರೆ ಅದರಷ್ಟು ಕಷ್ಟದ ಸಂಗತಿ ಇನ್ನೊಂದಿಲ್ಲ, ಅಲ್ಲವೇ? ಅತ್ಯಂತ ಬೆಚ್ಚಗಿನ ಸಂಗತಿಯೂ ಅಹಿತಕರವಾಗುತ್ತ, ಮೊದಲಿದ್ದ ಸಿಹಿ ಸಂಗತಿ ಕಹಿಯಾಗುತ್ತ, ಪ್ರೇಮ ದ್ವೇಷಕ್ಕೆ ತಿರುಗುತ್ತ, ಜೊತೆಗಿದ್ದ ಆಧಾರ ನಮ್ಮ ಬುಡವನ್ನೇ ಅಲ್ಲಾಡಿಸುತ್ತ ಹೋಗುತ್ತೆ. ಪ್ರೇಮದ ಮೂಲ ಬತ್ತಿ ಹೋಗಿ ಮಾಯದ ಗಾಯ ವಿಷದಂತೆ ಹಾನಿ ಮಾಡುತ್ತ ಹೋಗುತ್ತೆ. ಆದರೆ ಕೆಲವು ಸಂಬಂಧಗಳು ಮೊದಲಿಂದಲೂ 'ದೋಷಪೂರಿತ, ಕಿರಿಕ್ ಆಗುವಂಥ, ಗಲಾಟೆಗಳೇ ಇರುವಂಥ ಸಂಬಂಧ' ಎಂದು ತಿಳಿದಿರುತ್ತೆ. ಸಂಬಂಧದಲ್ಲಿ ಕಿರಿಕಿರಿ ಆದಾಗ ಅವರು ನಮ್ಮ ಜೀವನವನ್ನೇ ಛಿದ್ರ ಮಾಡುವಂತೆ ಇರುತ್ತಾರೆ. ಮೊದಮೊದಲು ಅತ್ಯಂತ ಮೃದುವಾಗಿರುವ ಇವರು ಕ್ರಮೇಣ ಕ್ರೌರ್ಯದ ಕರಾಳ ಹಸ್ತವನ್ನು ಚಾಚುತ್ತಾರೆ. ಮೊದಮೊದಲು ಕನಸಂತೆ ಇರುವ ಜನ ಇವರು. 'ಅಯ್ಯೋ ನಾನು ಸ್ವರ್ಗದಲ್ಲಿದ್ದೆ, ಸ್ಮಶಾನಕ್ಕೆ ಹೇಗೆ ಬಂದೆ' ಎಂದು ನೀವು ತಲೆ ಕೆಡಿಸಿಕೊಂಡು ಪ್ರಶ್ನೆ ಕೇಳುತ್ತ ಹೋಗುತ್ತೀರಿ. 'ಓ ಮೈ ಗಾಡ್, ನಾನೆಷ್ಟು ಅದೃಷ್ಟವಂತ. ನನ್ನಲ್ಲಿ ಇರುವ ಎಲ್ಲ ಸಂಗತಿಗಳನ್ನೂ ಮೆಚ್ಚುವ, ನನ್ನಲ್ಲಿ ದೋಷವನ್ನೇ ಕಾಣದ ಪಕ್ಕಾ ಅನುರೂಪದ ಸಂಗಾತಿ ನನಗೆ ಸಿಕ್ಕಳಲ್ಲ' ಎಂದು ನೀವು ಈ ಮೊದಲು ಭಾವಿಸಿದ್ದಾಗ ಎಷ್ಟೊಂದು ಹಿತವಿತ್ತಲ್ಲವಾ? ಇಂಥ 'ಸದ್ಭಾವನೆ' ಬಂದಾಗೆಲ್ಲ ಎಚ್ಚರದಿಂದಿರಿ. ತಲೆಗೆ ಪ್ರೇಮವನ್ನು ಎಷ್ಟು ಹತ್ತಿಸಿಕೊಂಡಿದ್ದೀರಿ ಎಂದರೆ, ಇಂಥ ಚಿಹ್ನೆಗಳೆಲ್ಲ ನಿಮ್ಮ ತಲೆಯ ಮೇಲೆ ಕತ್ತಿ ಎತ್ತಿ ತೂಗುತ್ತಿದ್ದರೂ, ನೀವು ನಿಮ್ಮ ಕತ್ತೆತ್ತಿ ಕೂಡಾ ನೋಡದಷ್ಟು ಕುರುಡರಾಗಿ ಬಿಡುತ್ತೀರಿ. ನಿಮ್ಮ ಬೂಟಲ್ಲಿ ಸಿಕ್ಕಿಕೊಂಡ ಪುಟ್ಟ ಕಲ್ಲೆಂಬಂತೆ ಕಡೆಗಣಿಸುತ್ತೀರಿ, ಆದರೆ ರಾಕ್ಷಸ ಗಾತ್ರದ ಜೆಸಿಬಿ ಗಾಡಿಗೆ ಡಿಕ್ಕಿ ಹೊಡೆಯಲಿದ್ದೀರಿ ಎಂಬ ಪರಿಜ್ಞಾನವೂ ನಿಮಗಿರುವುದಿಲ್ಲ. ಈ ಭಯಾನಕ ಪಯಣ ನಿಮ್ಮ ಜೀವನಕ್ಕೇ ಮಾರಕವಾಗುವಂಥದ್ದು ಎಂಬ ಅರಿವೇ ಇರುವುದಿಲ್ಲ. ಪ್ರೇಮ ಹಂಗೇ! ಆಕಾಶದಲ್ಲಿ ರೋಲರ್ ಕೋಸ್ಟರ್ ಪಯಣದಲ್ಲಿ ತೇಲಾಡುವಾಗ ಆ....ಹಾ....!!! ಇದ್ದಕ್ಕಿದ್ದಂತೆ ಭೂಮಿಗೆ ಬಿದ್ದ ಮೇಲೆ ನಿಮಗೆ ತಿಳಿಯುತ್ತದೆ. ಇಷ್ಟು ಹೊತ್ತು ಕೂಗಿದ್ದು ಸರಿಯೇ, ಆದರೆ ಇದು ಉಲ್ಲಾಸದಿಂದ ಕೂಗಿದ್ದಲ್ಲ. ಅದೇ ವ್ಯಾಮೋಹದಿಂದ ನಿಮ್ಮ ಮತ್ತು ಸಂಗಾತಿಯ ಕೋಪದ ಚೀತ್ಕಾರದ ಕೂಗಿದು. ಹೀಗೆ ಹಲವು ಬಾರಿ ಮೇಲೆ ಕೆಳಗೆ ಆದಾಗ ಈ ಆಟ ಎಷ್ಟು ಹಿಂಸೆಗೆ ಕಾರಣವಾಗುತ್ತಿದೆ ಎಂದೆನ್ನಿಸಿ- ಅತ್ಯಂತ ನೇರವಾದ, ಸಮಾಧಾನದ, ನಿಧಾನದ, ಹಿತಕರವಾದ ಪಯಣವಷ್ಟೇ ಬೇಕನ್ನಿಸುತ್ತದೆ. ನೀವು ಬೇಡಿಕೊಳ್ಳುವುದು ಒಂದೇ -ಶಾಂತಿ, ಮನಶಾಂತಿ!!! ಆದರೆ... ನಿಮ್ಮ ಹನಿಮೂನ್ ಮುಗಿದ ತಕ್ಷಣ ಕೆಲವು ಕೀಟಾಣುಗಳು ಬರ್ತವೆ. ಚಂದಿರನ ತಿಂದು ಮುಗಿಸಲಿಕ್ಕೆ. ಇವು ಚಂದಿರನನ್ನಷ್ಟೇ ತಿಂದರೆ ಸುಮ್ಮನಿರಬಹುದಿತ್ತು, ನಿಮ್ಮ ಜೀವನದ ಜೇನು ಕೂಡಾ ತಿನ್ನುವ ಈ ಕೀಟಾಣುಗಳು ಯಾವುದು ಎಂದು ನಾನಿಲ್ಲಿ ಸ್ವ ಅನುಭವದಿಂದ ಪಟ್ಟಿ ಮಾಡಿರುವೆ. 'ಸಂಬಂಧ ಕೆಲ್ಸ ಮಾಡ್ತಿಲ್ಲ, ಕೈ ಕೊಡ್ತಿದೆ ಮತ್ತು ಇನ್ನು ಈ ಸಂಬಂಧ ಸಾಕು' ಎಂದು ಸೂಚಿಸುವ ಏಳು ಚಿಹ್ನೆಗಳು ಇಲ್ಲಿವೆ. ಈ ಚಿಹ್ನೆಗಳನ್ನು ಮೊದಲೇ ಗುರುತಿಸಿದ್ರೆ ಮುಂದೆ ಎರಗಲಿರುವ ನೋವಿನ ಪ್ರಪಂಚದಿಂದ ರಕ್ಷಿಸಬಹುದು. ಅಥವಾ ಮುಂದೆ ನೊಂದು ಬೆಂದು ಹೋಗುವ ಬದಲು ಸಂಬಂಧದಿಂದ ಬೇಗನೆ ಕಳಚಿಕೊಳ್ಳಲು ಸಹಾಯ ಮಾಡಬಹುದು. ನೀವು ಪ್ರೀತಿಸುತ್ತಿರುವ ಸಂಗಾತಿಯ ಜೊತೆ ಸಪ್ತಪದಿ ತುಳಿಯಬೇಕು ಎಂದುಕೊಂಡಿರುವ ನಿಮಗೆ ಇಲ್ಲಿ ಏಳು ಅಪಾಯಕಾರಿ ಚಿಹ್ನೆಗಳನ್ನು ಹೇಳಲಾಗಿದೆ. ಆದ್ದರಿಂದಲೇ ಈ ಲೇಖನಕ್ಕೆ 'ಸಪ್ತಪದಿ ತುಳಿಯದಿರಲು 7 ಹೆಜ್ಜೆಗಳು' ಎಂದು ಅಗ್ರಶೀರ್ಷಿಕೆ ಇರುವುದು. ಇದು ನನ್ನ ಸ್ವಾನುಭವದ ಲೇಖನ. ನಿಮ್ಮದೂ ಆಗಬೇಕೆಂದಿಲ್ಲ... 1. ಅದೇ ರಾಗ ಅದೇ ಹಾಡು ಇಬ್ಬರೂ ಕುಸ್ತಿಯ ಕಣದಲ್ಲಿದ್ದಂತೆ ಇದ್ದೀರಿ, ಅಲ್ಲಿ ಕೊನೆಯ ಬೆಲ್ ಇಲ್ಲ ಮತ್ತು ಅಂತಿಮ ನಿರ್ಧಾರವೂ ಇಲ್ಲ, ಒಂದೇ ಒಂದು ಪುಟ್ಟ ಬ್ರೇಕ್ ಕೂಡಾ ಇಲ್ಲ, ಕುಸ್ತಿ ಮುಂದುವರಿದಿದೆ!!! ಪದೇಪದೇ ಅದೇ ಅದೇ ವಾದಗಳು. ಮತ್ತವು ಎಂದೂ ಕೊನೆಗೊಳ್ಳುವುದೂ ಇಲ್ಲ. ಬಹುಶಃ ಇದು ಸಂಬಂಧ ಕೆಲ್ಸ ಮಾಡ್ತಿಲ್ಲ ಎಂಬುದಕ್ಕೆ ಅತ್ಯಂತ ಗಮನಾರ್ಹ ಚಿಹ್ನೆ. ಸಂಪರ್ಕ ಅನ್ನೋದು ಕಟ್ ಆಗುತ್ತೆ. ನಿಮಗಿಬ್ಬರಿಗೂ ವಾಸ್ತವದ ಕುರಿತು ಬೇರೆ ಬೇರೆ ಅಭಿಪ್ರಾಯಗಳಿರುತ್ತವೆ. ಆ ಭಿನ್ನ ಅಭಿಪ್ರಾಯಗಳೇ ಅಣು ಬಾಂಬಿನಂತೆ ಕ್ಷಣಕ್ಷಣವೂ ಸಿಡಿಯುತ್ತ ಹೋಗುತ್ತದೆ. ಎರಡು ವಾರದ ಹಿಂದೆ / ಎರಡು ತಿಂಗಳ ಹಿಂದೆ ಅದೂ ಅಲ್ಲ ಎರಡು ವರ್ಷದ ಹಿಂದೆ ನೀವು ಮಾಡಿದ ಕೆಲಸವನ್ನು ಪದೇಪದೇ ಕೆರೆಯುವ ಕೆಲಸ ಮಾಡುತ್ತಿದ್ದರೆ- ಉದಾ: ಕಸವನ್ನು ಕಸದ ಗಾಡಿಗೆ ಹಾಕಲು ಮರೆತಿದ್ದರಿಂದ ಹಿಡಿದು, ಮೊದಲ ವಿವಾಹ ವಾರ್ಷಿಕೋತ್ಸವವನ್ನು ಮರೆತು ಹೋಗಿದ್ದನ್ನು ಜ್ಞಾಪಿಸುತ್ತ ಹೋಗುತ್ತಾರೆ!! ಮತ್ತದಕ್ಕೆ ಕೊನೆ ಎಂಬುದೇ ಇರದು. ಇಬ್ಬರೂ ಕುಸ್ತಿಯ ಕಣದಲ್ಲಿದ್ದಂತೆ ಇರುತ್ತೀರಿ, ಅಲ್ಲಿ ಕೊನೆಯ ಬೆಲ್ ಇಲ್ಲ ಮತ್ತು ಅಂತಿಮ ನಿರ್ಧಾರವೂ ಇಲ್ಲ, ಒಂದೇ ಒಂದು ಪುಟ್ಟ ಬ್ರೇಕ್ ಕೂಡಾ ಇಲ್ಲ, ಕುಸ್ತಿ ಮುಂದುವರಿದಿದೆ!! ಸುಮ್ಮಸುಮ್ಮನೆ ಮುಟ್ಟಿಕೊಳ್ಳುತ್ತ ಕೊನೆಗೆ ಇಬ್ಬರಲ್ಲಿ ಒಬ್ಬರು ನಿಲ್ಲಲೂ ಶಕ್ತಿ ಇಲ್ಲದೆ ಸುಸ್ತಾಗಿ ಮಲಗಬೇಕಾಗುತ್ತೆ... 2. ದೂರದೂರಿಂದ ದೂರುವುದು ಸಂಬಂಧ ಕೆಲ್ಸ ಮಾಡದೇ ಇರೋ ಸಂಗಾತಿಗಳು ಎಂದೂ ಅಕೌಂಟೆಬಲ್ ಆಗಿರುವುದಿಲ್ಲ. ಸಂಗತಿಯನ್ನು ತಿರುಚುವುದು, ಅವರಿಗೆ ಬೇಡದೇ ಇರುವುದನ್ನು ಸಂಕಲಿಸುವುದು, ಆಗಿದ್ದನ್ನು ಬೇರೆಯೇ ಕ್ರಮದಲ್ಲಿ ನಿರೂಪಿಸುವುದು - ಸಂಬಂಧ ಕೆಲ್ಸ ಮಾಡದೇ ಇರೋ ದಂಪತಿಗಳ ದೊಡ್ಡ ಲಕ್ಷಣ. ಯಾವಾಗಲೂ ಏನೇ ಆದರೂ ಎಲ್ಲಾ ನಿಮ್ಮ ತಪ್ಪೇ. ಅಂದ್ರೆ ಪ್ರತಿಯೊಂದೂ ನಿಮ್ಮಿಂದಲೇ ಆದ ಕಿರಿಕ್ಕು. ಸಂಬಂಧ ಕಿತ್ತು ಹೋಗುತ್ತಿರೋ ಸಂಗಾತಿಗಳು ಎಂದೂ ಅಕೌಂಟೆಬಲ್ ಆಗಿರುವುದಿಲ್ಲ. ಸಂಗತಿಯನ್ನು ತಿರುಚುವುದು, ಅವರಿಗೆ ಬೇಡದೇ ಇರುವುದನ್ನು ಸಂಕಲಿಸುವುದು, ಆಗಿದ್ದನ್ನು ಬೇರೆಯೇ ಕ್ರಮದಲ್ಲಿ ನಿರೂಪಿಸುವುದು - ಸಂಬಂಧ ಕೆಲ್ಸ ಮಾಡದೇ ಇರೋ ಸಂಗಾತಿಗಳ ದೊಡ್ಡ ಲಕ್ಷಣ. ತಮ್ಮ ಅಸಂತೋಷಕ್ಕೆ ನಿಮ್ಮನ್ನು ದೂರುವುದಲ್ಲದೆ, ಅದಕ್ಕೆ ಪರಿಹಾರವನ್ನೂ ನೀವೇ ಸರಿ ಹೋಗಿಸಬೇಕಿರುವುದು ನಿಮ್ಮ 'ಜವಾಬ್ದಾರಿ' ಎಂದು ಬಯಸುತ್ತಾರೆ. ಇದಕ್ಕೆ ಕಾರಣ- ಬಾಲ್ಯದ ನೋವೇ? ಬಾಲ್ಯದಲ್ಲಿ ಸಿಗದ ಪ್ರೇಮವನ್ನು ನೀವೀಗ ತುಂಬಬೇಕು! ದುರ್ಬಲ ತಂದೆ ಅಥವಾ ತಾಯಿಯೇ? ನೀವೇ ಈಗ ಅದ್ಭುತ ತಂದೆಯೋ ತಾಯಿಯೋ ಆಗಲೇಬೇಕು. ಕೋಪವನ್ನು ನಿಯಂತ್ರಿಸಲಿಕ್ಕೆ ಆಗುತ್ತಿಲ್ಲವೇ? ನಿಮ್ಮ ಸಂಗಾತಿ ಅಪ್‌ಸೆಟ್ ಆಗದೇ ಇರೋ ಹಾಗೆ ನೀವಿರಬೇಕು - ಅಂದ್ರೆ- ಗಡಿರೇಖೆ ಎಳೆಯೋ ಹಂಗಿಲ್ಲ, ಸತ್ಯ ಮಾತಾಡಬೇಕು, ನಿಮ್ಮ ಭಾವನೆ ಹೇಳಬೇಕು ಮತ್ತು ನೀವು ನೀವಾಗಿರಬೇಕು. 3. ಅಪರಾಧ ಎಸಗದಿದ್ದರೂ ಅಪರಾಧಿ ಪ್ರಜ್ಞೆ ಬೆಳಿಗ್ಗೆಯ ಕಾಫಿ ಮಾಡಲು ಮರೆತುಬಿಟ್ರಾ, ಅಥವಾ ತುಂಬಾ ಸುಸ್ತಾಗಿತ್ತಾ? ನಿಮ್ಮ ಜೀವನ ಮುಗಿದೇ ಹೋಯ್ತು!! ಸಂಗಾತಿಯ ಕುಟುಂಬದವರ ಕುರಿತು ವಿಮರ್ಶಿಸಿ ಮಾತನಾಡಿದ್ರಾ? ದೇವರೇ ಗತಿ!!! ನೀವು ಮಾಡಿರದ ತಪ್ಪಿಗೂ ಕ್ಷಮೆ ಯಾಚಿಸುತ್ತಿದ್ದೀರಿ. ಪ್ರತಿಯೊಂದು ಸಲವೂ ಅಗತ್ಯವಾಗಿರುವ ಶಾಂತ ಮನಸ್ಸಿಗಾಗಿ ನೀವು ತಲೆ ತಗ್ಗಿಸಿ ಬದುಕುವುದನ್ನು ಕಲಿತಿದ್ದೀರಿ. ಇದು ಜೋಕಲ್ಲ. ಕ್ರಮೇಣ ನೀವು ನಿಮ್ಮ ಕುರಿತೇ ಜಿಗುಪ್ಸೆ ಉಂಟಾಗುವಂತೆ ನಿಮ್ಮನ್ನು ನಾಚಿಕೆಗೊಳಪಡಿಸಿ, 'ನನ್ನ ಜೀವನವೇ ವ್ಯರ್ಥ' ಅನ್ನಿಸತೊಡಗುತ್ತದೆ. ನಿಮ್ಮ ಸಂಗಾತಿಯ ಕೋಪದ ವರ್ತನೆ ಸರಿ ಎನ್ನಿಸತೊಡಗುತ್ತ ಹೋಗುತ್ತದೆ. ಹೆಚ್ಚೆಚ್ಚು ಕೈಗೂ ಎಟುಕದ ಬಯಕೆಗಳನ್ನು ಹೇಳುತ್ತ ಹೋಗುವ ಸಂಗಾತಿಯ ಎದುರು ನೀವು ತಗ್ಗಿಬಗ್ಗಿ ನಡೆದಾಗಲೂ ನೀವು ಅಪ್ರಾಮಾಣಿಕರು ಎಂದು ನಿಮ್ಮ ಚರಿತ್ರೆಯ ಕುರಿತೇ ಮಾತನಾಡುತ್ತಾರೆ. ಬೆಳಿಗ್ಗೆಯ ಕಾಫಿ ಮಾಡಲು ಮರೆತುಬಿಟ್ರಾ, ಅಥವಾ ತುಂಬಾ ಸುಸ್ತಾಗಿತ್ತಾ? ನಿಮ್ಮ ಜೀವನ ಮುಗಿದೇ ಹೋಯ್ತು!! ಸಂಗಾತಿಯ ಕುಟುಂಬದವರ ಕುರಿತು ವಿಮರ್ಶಿಸಿ ಮಾತನಾಡಿದ್ರಾ? ದೇವರೇ ಗತಿ!!! ನಿಮ್ಮ ಸಂಗಾತಿಗೆ ಇಷ್ಟವಾಗದ ನಿಮ್ಮ ಕುಟುಂಬದ ಸದಸ್ಯರ ಜೊತೆ ಮಾತನಾಡಿ ನೋಡಿದ್ದೀರಾ? ಆ ರಾತ್ರಿ ನಿಮ್ಮ ಅಗ್ನಿಪರೀಕ್ಷೆ ಆಗುತ್ತೆ. 'ಐ ಆ್ಯಮ್ ಸಾರಿ' ಎನ್ನೋ ಪದ ನಿಮ್ಮ ಬಾಯಿಂದ ಸಾವಿರಾರು ಸಲ ಜಂಪ್ ಮಾಡಿ ನೆಗೆದು ಬಿದ್ದಿರುತ್ತೆ. ಆದರೆ ನಿಮ್ಮ ಮನಸ್ಸಲ್ಲಿ ಇರುತ್ತೆ- ಏನು ತಪ್ಪೂ ಮಾಡದೇ ಎಷ್ಟೊಂದು ಬಾರಿ ಸಾರಿ ಕೇಳುತ್ತಿದ್ದೇನೆ! ನೀವು ಶಾಂತವಾಗಿರಲು, ರಿಲ್ಯಾಕ್ಸ್ ಆಗಲು ಪ್ರಯತ್ನಿಸುತ್ತೀರಿ... ಆದರೆ ನಿಮ್ಮ ಮನದಲ್ಲಿ ಸದಾ ಜಾಗೃತವಾದ, ಭಯದಲ್ಲಿ ಕಂಪಿಸುತ್ತಿರುವ ಹೃದಯವಿದೆ. ಅದಕ್ಕೆ- ಮುಂದಿನ ಗಲಾಟೆ ಹೇಗಿರುತ್ತೆ ಎನ್ನುವ ನಿದ್ದೆಯೇ ಮಾಡಲು ಬಿಡದ ಪ್ರಶ್ನೆಯಿದೆ. 4. ಒತ್ತಡದ ಬೆಂಕಿಯ ಬಲೆ ನನ್ನ ಸೈಕಾಲಜಿಸ್ಟ್ ಹೇಳುತ್ತಿದ್ದರು- ಇಬ್ಬರೂ ಶಾಂತವಾಗಿದ್ದಾಗ ನೀವು ಹುಚ್ಚುಚ್ಚಾಗಿ ವರ್ತಿಸಿದ ಸಮಸ್ಯೆಗಳನ್ನು ಮಾತನಾಡಿ ಪರಿಹರಿಸಿಕೊಳ್ಳಿ. ಆದರೆ ನನಗದು ಸರಿಯೆನ್ನಿಸಿರಲಿಲ್ಲ. ಏಕೆಂದರೆ ಶಾಂತವಾಗಿದ್ದಾಗ, ಹಳೇ ಸಮಸ್ಯೆಗಳನ್ನು ಹೇಳಿಕೊಂಡು ಏನು ಮಾಡಬೇಕೆಂದು ನಾನಂದುಕೊಳ್ಳುತ್ತಿದ್ದೆ. ಅದಲ್ಲದೆ ಶಾಂತವಾಗಿದ್ದಾಗ ಇನ್ನೊಂದು ಗಲಾಟೆ ಆಗದಿರಲಿ ಎಂಬುದು ನನ್ನ ಮನಸಿನ ಭಾವನೆಯಾಗಿತ್ತು. ನಿಮಗೆ ಗೊತ್ತೇ ಇದೆ. ಈ ರೀತಿ ಸಂಬಂಧ ಕುಲಗೆಟ್ಟಿದ್ದಾಗ ನೀವು ಜೀವನದಲ್ಲಿ ಎಂಜಾಯ್ ಮಾಡೋ ಸಂದರ್ಭವೇ ಇರೋದಿಲ್ಲ. ಸಣ್ಣ ಪುಟ್ಟ ಖುಷಿ ಇರುವಾಗಲೂ, ನಿಮ್ಮಲ್ಲಿ ಇರುವ ಭಯದಿಂದ ಈ ಖುಷಿಯೆಲ್ಲಾ ಕತ್ತಲಿಗೆ ಹೋಗುತ್ತೆ. ನೀವು ಜಗಳ ಆಡದೇ ಇರುವ ಸಂದರ್ಭದಲ್ಲಿ ಸ್ವಲ್ಪ ವಿಶ್ರಮಿಸಲು ಹೋಗ್ತೀರಿ. ಎಲ್ಲದೂ ಸರಿ ಇದೆ ಎನ್ನಿಸೋ ದಿನ ಇದೆ ಎಂದುಕೊಳ್ಳಿ, ನಿಮ್ಮ ತತ್ವಗಳನ್ನೆಲ್ಲ ಗಾಳಿಗೆ ತೂರಿ ನೀವು ಕುಟುಂಬದಲ್ಲಿ ಒಂದಾಗಿ ಹೋಗಿದ್ದ ದಿನ ಎಂದುಕೊಳ್ಳಿ. ನಿಮ್ಮೆಲ್ಲ ಅಹಂಕಾರವನ್ನು ಮರೆತು ನೀವು ಇದ್ದಾಗಲೂ ನಿಮ್ಮ ಮನದಲ್ಲಿ ಆತಂಕ ತುಂಬಿದ ಭಯವೊಂದು ನಿಮ್ಮನ್ನು ಆವರಿಸಿಕೊಂಡಿರುತ್ತೆ. ಮುಂದಿನ ಜಗಳ ಯಾವಾಗ, ಹೇಗೆ? 5. ಖಚಿತತೆ ಇಲ್ಲದೇ ಇರುವುದು ನೀವು ಮನೆಗೆ ಹೋದಾಗ ಯಾರಿರ್ತಾರೆ? ಎಂಬ ಐಡಿಯಾ ಕೂಡಾ ನಿಮಗಿರುವುದಿಲ್ಲ. ಒಂದು ರಾತ್ರಿ ನಿಮ್ಮ ಸಂಗಾತಿ ಸಿಹಿಮುತ್ತುಗಳನ್ನು ಸುರಿಸಿದರೆ, ಮಾರನೇ ರಾತ್ರಿ ಬೈಗುಳದ ಉಗುಳನ್ನು ಬೆಂಕಿ ಚೆಂಡಾಗಿ ಎಸೆಯಬಹುದು. ನೀವು ಮನೆ ಬಾಗಿಲಿಗೆ ಬಂದು ನಿಂತ ಆ ಕ್ಷಣವೇ ನೀವು ಚೂರು ಚೂರಾಗಬಹುದು ಎಂಬ ಭಾವನೆ ನಿಮ್ಮನ್ನು ಜಿಗುಪ್ಸೆಗೆ ಒಯ್ಯುತ್ತದೆ. ನೀವು ಅಂಚಿನಲ್ಲಿ ಬದುಕಿದಂತೆ- ನಿಮ್ಮ ಪ್ರತಿ ನಡೆಯನ್ನೂ ಎಚ್ಚರದಿಂದ ಗಮನಿಸುತ್ತ, ನಿಮ್ಮ ದನಿಯ ಏರುಪೇರನ್ನು ಎಚ್ಚರದಿಂದ ರಿಪೇರಿ ಮಾಡುತ್ತ, ಯಾವುದೇ ಗಲಾಟೆ ಆಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೀರಿ. ಕೆಲವೊಮ್ಮೆ ತೀರಾ ಶರಣಾಗತರಾದಂತೆ ಅಥವಾ ದಯನೀಯವಾಗಿ ವರ್ತಿಸಿ, ದುಂದುವೆಚ್ಚ ಮಾಡಿ ಅಥವಾ ಇದೆರಡರ ಸಂಗಮವನ್ನೂ ಅನುಸರಿಸಿ 'ಕೂಡಲು' 'ಸಂಗಮವಾಗಲು' ಪ್ರಯತ್ನಿಸುತ್ತೀರಿ. ನಿಮಗಿರುವ ಕೆಲಸವನ್ನೂ ಅರ್ಧದಲ್ಲಿ ಬಿಟ್ಟು ಮನೆಗೆ ಬೇಗ ಹೋಗುತ್ತೀರಿ. ನಿಮ್ಮ ಸಂಬಳದ ಅರ್ಧವನ್ನು ಒಂದು ಸಣ್ಣ ಬಂಗಾರದ ಚೂರಿಗೆ ಖರ್ಚು ಮಾಡುತ್ತೀರಿ. ಅಥವಾ ನಿಮಗಿಷ್ಟವಾದ ಭೋಜನ ರೆಡಿ ಮಾಡುತ್ತೀರಿ- ಯಾವ ಪಾತ್ರೆಯನ್ನೂ (ಅವರು) ಬಿಸಾಕುವುದಿಲ್ಲವೆಂಬ ಸದಭಿಪ್ರಾಯದಲ್ಲಿ. ನೀವೇನೇ ಮಾಡಿದರೂ ಅದು ಕಸ!! ಹೆಚ್ಚೆಂದರೆ ಏನಾಗಬಹುದೆಂದರೆ - ನಿಮ್ಮ ಜೀವನದ ಅತ್ಯಂತ ಉತ್ಕೃಷ್ಟ ಸೆಕ್ಸ್ ಅಥವಾ ಯಾವುದೋ ಮಠದಲ್ಲಿ ಉಳಿಯುವುದು ಎಷ್ಟೋ ಉತ್ತಮವಿತ್ತು ಎಂಬ ಯೋಚನೆ ಅಥವಾ ಸಂಗಾತಿಯಿಂದ ದೂರ ಗಗಗನದ ನೆರಳಲ್ಲಿ ಬದುಕಿದ್ದರೆ ಎಷ್ಟು ಹಿತವಿತ್ತು ಎಂಬ 'ಡ್ರೀಮ್‌ಲ್ಯಾಂಡ್‌'. 6. ಜಿಗುಪ್ಸೆಯ ಜಾರುಬಂಡೆಯಲ್ಲಿ ಅತ್ಯಂತ ಸಣ್ಣ ಸಂಗತಿಯನ್ನು ಮಾಡುವುದೂ ಈಗ ದೊಡ್ಡ ಸಂಗತಿಯಾಗಿ ಕಾಣಿಸುತ್ತಿದೆ. ನಿಮ್ಮೆಲ್ಲ ಅತ್ಯುತ್ತಮ ಪ್ರಯತ್ನ ಇದ್ದರೂ, ತಲೆ ಬಾಗಿಸಿ ಕೆಲಸ ಮಾಡುತ್ತಿದ್ದರೂ ನೀವು ತಂಡವಾಗಿ ನಿಮ್ಮ ಸಂಗಾತಿಯ ಜೊತೆ ಇರಲಾಗುತ್ತಿಲ್ಲ. ನೀವು ಮುಂದಾಳತ್ವ ವಹಿಸಿದಲ್ಲಿ ನಿಮ್ಮ ಮೇಲೆ ಅಟ್ಯಾಕ್ ಆಗುತ್ತೆ. ನೀವು ಹಿಂಬಾಲಿಸಲು ಹೋದಲ್ಲಿ ನೀವು ಬೇಕಾದಷ್ಟು ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಾರೆ. ಇಬ್ಬರೂ ಸೇರಿ ನಿರ್ಧಾರ ಕೈಗೊಳ್ಳುವುದು ಎಷ್ಟು ಕಠಿಣ ವಿಷಯ, ಏಕೆಂದರೆ ಇಲ್ಲಿ ನಿಮ್ಮ ತರ್ಕವನ್ನು ಕಿಟಕಿಯಿಂದ ಹೊರಗೆ ಬಿಸಾಕಲಾಗಿರುತ್ತೆ. ನಿಮ್ಮ ಸಂಗಾತಿಯ ಅಜೆಂಡಾ ಇವುಗಳಿಂದ ತುಂಬಿರುತ್ತೆ - ಅಹಂಕಾರ, ಅಭದ್ರತೆ, ಹಳೆಯ ನೋವುಗಳು ಮತ್ತು ಅನವಶ್ಯಕ ವಸ್ತುಗಳಿಗಾಗಿ. ಇದೇ ಸಮಯದಲ್ಲಿ ನೀವು - ಪ್ರಾಕ್ಟಿಕಲ್ ಆಗಿರಲು ಪ್ರಯತ್ನ ಪಡುತ್ತಿದ್ದೀರಿ, ನಿಮ್ಮ ಸಲಹೆಗಳನ್ನು ಅಣಕಿಸಿ ಸಂಗಾತಿ ಮಾತನಾಡಿದಾಗ ವ್ಯಥೆ ಪಡುತ್ತೀರಿ. ನಿರ್ಧಾರ ಮಾಡುವಾಗ ನೀವು ತಪ್ಪು ಮಾಡುತ್ತೀರಿ ಎಂಬ ದೂಷಣೆ. ಅಥವಾ ಇದೆಲ್ಲವನ್ನೂ ಸೇರಿ ಹೇಳಿರುತ್ತಾರೆ. ಇದೆಲ್ಲ ಸೇರಿ ನೀವು ಕೂಡಾ ಸಂಗಾತಿಯ ಜೊತೆ ಖುಷಿಯಾಗಿರಲು ಪ್ರಯತ್ನ ಪಡುವುದೂ ಮರೆತು ಬಿಡುತ್ತೀರಿ. ಇಲ್ಲಾ - 1. ಎಲ್ಲ ಭಾರವನ್ನೂ ನೀವೇ ಹೊರಲು ಹೋಗ್ತೀರಿ. 2. ಕೆಟ್ಟ ಮಾರ್ಗಗಳನ್ನು ಅನುಸರಿಸ ಹೋಗ್ತೀರಿ. 3. ಭುಜದ ಮೇಲೆ ಬಿದ್ದ ಎಲ್ಲಾ ಜವಾಬ್ದಾರಿಯನ್ನೂ ದುಃಖದಿಂದಲೇ ನಿಭಾಯಿಸಲು ಹೋಗ್ತೀರಿ. 7.ಎಲ್ಲಿಗೋ ಪಯಣ? ನಿಮಗೂ ಕೂಡಾ ಇದಕ್ಕೆ ಮುನ್ನ ಸಂತೃಪ್ತಿ ಕೊಡುವ ಸ್ನೇಹ ಮತ್ತು ಸಂಬಂಧ ಇರುತ್ತೆ. ಆ ಎಲ್ಲಾ ಸ್ನೇಹಿತರ ಜೊತೆ ಯಾವ ಬಗೆಯ ವ್ಯತ್ಯಾಸ ಇತ್ತು ಎಂಬುದನ್ನು ನಿಮಗೂ ಹೇಳಿರ್ತಾರೆ. ಅವರೆಲ್ಲರ ಜೊತೆಗೆ ತನಗೆ ಈಗ ಯಾವ ಸಂಪರ್ಕವೂ ಇಲ್ಲ ಎಂಬುದನ್ನು ಸಂಗಾತಿ ಹೇಳಿರಬಹುದು ಕೂಡಾ. ನಿಮ್ಮ ತಲೆಯ ಮೇಲೆ ದೊಡ್ಡದೊಂದು ಕಾರ್ಮೋಡ ಇದೆ ಎಂದು ನಿಮಗನ್ನಿಸುತ್ತೆ. ಅದು ಯಾವ ಸೂರ್ಯ ಬಂದರೂ ಎಂಬಂತ ಹವಾಮಾನ ನಿಮ್ಮ ಜೀವಮಾನದಲ್ಲಿ ಬರೆದಿದೆ ಎಂದು ನಿಮಗೆ ಖಚಿತವಾಗಿದೆ. ಇದು ಇರುವುದರಲ್ಲಿಯೇ ಅತ್ಯಂತ ಕೆಟ್ಟ ದುಃಖಕರ ಸಂಗತಿ. ನಿಮ್ಮ ಆಶಾವಾದ ಕಳೆದುಕೊಂಡು, ಬೆಳಕೂ ಇಲ್ಲದೆ, ಸಣ್ಣಕಿಡಿಯೂ ಇಲ್ಲದೆ ನೀವು ಬದುಕುತ್ತ ಹೋಗ್ತೀರಿ. ನೀವು ಕುಗ್ಗಿ ಹೋದಂತೆ ಭಾವಿಸುತ್ತ, ನೀವು ಈ ಸಂಬಂಧದಿಂದ ಹೊರ ಹೋಗಬಯಸಿದರೂ ಅದು ಸಾಧ್ಯವಿಲ್ಲ ಎಂದು ನೀವೇ ಸಮಾಧಾನ ಮಾಡಿಕೊಳ್ಳುತ್ತೀರಿ. ಇದು ನನ್ನ ಹಣೆಬರಹ, ಈ ನೋವು ಶಾಶ್ವತ ಎಂದು ನಂಬಿ ಬದುಕು ನಡೆಸುತ್ತೀರಿ. ನಿಮ್ಮ ಸಂಗಾತಿ ಉಣ್ಣಿಸುತ್ತಿರುವ ತಂಗಳನ್ನ ತಿಂದುಕೊಂಡೇ ಸಂಗಾತಿಯನ್ನು ಸಂಧಿಸುವ ಮುನ್ನ ನೀವು ಎಂಥಾ ಸೋಮಾರಿಯಾಗಿದ್ದಿರಿ ಎಂದು ಹೇಳುತ್ತ ಸುಳ್ಳನ್ನು ಸತ್ಯವಾಗಿಸುವತ್ತ ಹೊರಡುತ್ತೀರಿ. ಇದರಿಂದಲೇ ನಿಮಗೆ ನಿಜ ಸಂತೋಷ ಸಿಗುತ್ತಿದೆ ಎಂದು ಹೇಳುತ್ತೀರಿ. ನಿಮಗೂ ಕೂಡಾ ಇದಕ್ಕೆ ಮುನ್ನ ಸಂತೃಪ್ತಿ ಕೊಡುವ ಸ್ನೇಹ ಮತ್ತು ಸಂಬಂಧ ಇರುತ್ತೆ. ಆ ಎಲ್ಲಾ ಸ್ನೇಹಿತರ ಜೊತೆ ಯಾವ ಬಗೆಯ ವ್ಯತ್ಯಾಸ ಇತ್ತು ಎಂಬುದನ್ನು (ನಿಮ್ಮ ಸಂಗಾತಿ ಕೂಡಾ ತನ್ನ ಚರಿತ್ರೆಯನ್ನು) ನಿಮಗೂ ಹೇಳಿರ್ತಾರೆ. ಅವರೆಲ್ಲರ ಜೊತೆಗೆ ತನಗೆ ಈಗ ಯಾವ ಸಂಪರ್ಕವೂ ಇಲ್ಲ ಎಂಬುದನ್ನು ಸಂಗಾತಿ ಹೇಳಿರಬಹುದು ಕೂಡಾ. ನಿಮ್ಮ ಜೀವನದ ಗುರಿ ಕೂಡಾ ಈಗ ಒಂದೇ- ಹೇಗೆ ಒಬ್ಬ ದುಃಖಿತ ಸಂಗಾತಿಗೆ ಸಂತೋಷ ತರುವುದಕ್ಕೆ ನೀವು ಏನೆಲ್ಲಾ ತ್ಯಾಗ ಮಾಡಬೇಕು ಎಂಬುದೊಂದೇ. ಅತ್ಯಂತ ದೊಡ್ಡ ದೊಡ್ಡ ಅಗತ್ಯಗಳಿರುವ ಸಂಗಾತಿ ನಿಮಗೆ ವಾಪಸ್ ಏನನ್ನೂ ಕೊಡದಿದ್ದರೂ- ಅದೆಲ್ಲ ಮರೆತು ಸಂಗಾತಿಯ ಸಂತೋಷಕ್ಕೆ ನಿಮ್ಮ ಇಡೀ ಜೀವನ ತೇಯಬೇಕು ಎಂಬುದು. ಅದಕ್ಕಾಗಿ ಇಡೀ ಜೀವನ ಪೂರ್ತಿ ಋಣಿಯಾಗಿಯೂ ಇರಬೇಕು. ಈ ಎಲ್ಲವೂ ನಿಮ್ಮ ಅಂತರಂಗದಲ್ಲಿ ಏನಾದರೂ ಕಲ್ಲು ಹಾಕಿದವೇ? ಈ ಉದಾಹರಣೆಗಳೇನಾದರೂ ನಿಮ್ಮಲ್ಲಿ ಪ್ರತಿಧ್ವನಿಸಿದವೇ? ಒಂದುವೇಳೆ ನಿಮ್ಮ ಉತ್ತರ ಹೌದು ಎಂದಾದಲ್ಲಿ - ನೀವು ಅತ್ಯಂತ ಗಂಭೀರ ಅಪಾಯಕಾರಿ ಸ್ಥಿತಿಯಲ್ಲಿದ್ದೀರಿ ಎಂದರ್ಥ. ಇದು ನಿಮ್ಮ ಭಾವುಕ ಸುರಕ್ಷತೆಗೂ ಬೆಂಕಿ ಹಚ್ಚುವಂಥದ್ದು, ಇನ್ನೊಬ್ಬರ ಮೇಲೆ ಅವಲಂಬಿತ ಜೀವನ ನಡೆಸಿ ಗುಲಾಮರಂತಾಗುವ ಸಂದರ್ಭ. ನಿಮ್ಮ ಜೀವನದಲ್ಲಿ ಈ 7 ಚಿಹ್ನೆಗಳಲ್ಲಿ ಒಂದು ಅಥವಾ ಹೆಚ್ಚಿನ ಚಿಹ್ನೆಗಳು ಕಾಣಿಸುತ್ತಿದ್ದಲ್ಲಿ ಯಾರದ್ದಾದರೂ ಸಹಾಯ ಪಡೆಯಿರಿ. ಇನ್ನೊಬ್ಬರನ್ನು ಅವಲಂಬಿಸಿ ಜೀವನ ನಡೆಸಿ ದುಃಖಿಸುತ್ತಿರುವವರ ಅನುಭವ ಕಥನ ಸಿಗಬಹುದಾ ನೋಡಿ! ಮಾನಸಿಕ ಆರೋಗ್ಯದ ಕುರಿತು ಅಥವಾ ಹುಚ್ಚುತನದ ಬಗೆಗಿನ ಪುಸ್ತಕಗಳನ್ನು ಓದಿ. ಅಷ್ಟೇ ಮುಖ್ಯವಾಗಿ ನಿಮ್ಮ ಮೇಲೆ ನಿಮಗೆ ನಂಬಿಕೆ ಹೆಚ್ಚಾಗುತ್ತ ಹೋಗಲಿ. ಯಾವುದು ನಿಮ್ಮ ಹೃದಯಕ್ಕೆ ಸರಿ ಅನ್ನಿಸುತ್ತದೋ, ಆರೋಗ್ಯಕರ ಮತ್ತು ಸತ್ಯ ಎನ್ನಿಸುತ್ತದೋ ಅದಕ್ಕೆ ಪ್ರಾಮುಖ್ಯತೆ ಕೊಡಿ. ನಿಮ್ಮ ಸಂಗಾತಿಗೆ ದ್ರೋಹ ಮಾಡುವುದರ ಕುರಿತು ಯೋಚಿಸಬೇಡಿ. ಅಥವಾ ನಿಮ್ಮ ಸಂಗಾತಿಯ ಕುರಿತು ಸ್ನೇಹಿತನಿಗೆ, ಕುಟುಂಬದ ಸದಸ್ಯನಿಗೆ ಅಥವಾ ಮಾನಸಿಕ ತಜ್ಞನಿಗೆ ಹೇಳುವುದು ತಪ್ಪೆಂದುಕೊಳ್ಳಬೇಡಿ. ಅದೆಲ್ಲಕ್ಕಿಂತ ಮುಖ್ಯವಾಗಿ, ಈ ಪದಗಳನ್ನು ನಿಮ್ಮ ಹೃದಯದಲ್ಲಿಟ್ಟುಕೊಳ್ಳಿ. ಇದನ್ನು ಬರೆದಿಟ್ಟುಕೊಳ್ಳಿ, ಟೈಪ್ ಮಾಡಿಕೊಳ್ಳಿ ಅಥವಾ ದಿನವೂ ನೀವು ನೋಡುವಂತ ಜಾಗದಲ್ಲಿಟ್ಟುಕೊಳ್ಳಿ. 'ಸಂಬಂಧದಿಂದ ಹೊರ ಹೋಗುವುದು ಎಂದರೆ ನಿಮ್ಮನ್ನು ನೀವು ಸೋಲಿಗೆ ಅರ್ಪಿಸಿಕೊಂಡಂತೆ ಅಲ್ಲ, ಒಂದುವೇಳೆ ಅದೇ ಸಂಬಂಧದಲ್ಲಿ ನೀವು ಉಳಿದುಕೊಂಡಲ್ಲಿ ಅದುವೇ ಜೀವನದ ಅತಿ ದೊಡ್ಡ ಶರಣಾಗತಿ' - ಕು.ಸು.ಮ. (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.