ಮದನನ ಕದನದ ಪರಿ ವೀರರು ಕದನದಲ್ಲಿ ಏಕೆ ಗೆಲ್ಲುತ್ತಾರೆ? ಇದಕ್ಕೆ ಹಲವು ಕಾರಣಗಳಿರಬಹುದು. ಎದುರಾಳಿಗಿಂತ ಮೊದಲೇ ಆಕ್ರಮಣ .... ವೀರರು ಕದನದಲ್ಲಿ ಏಕೆ ಗೆಲ್ಲುತ್ತಾರೆ? ಇದಕ್ಕೆ ಹಲವು ಕಾರಣಗಳಿರಬಹುದು. ಎದುರಾಳಿಗಿಂತ ಮೊದಲೇ ಆಕ್ರಮಣ ಮಾಡುವುದು, ಎದುರಾಳಿಯನ್ನು ದುರ್ಬಲಗೊಳಿಸುವುದು, ಎದುರಾಳಿಯ ದೌರ್ಬಲ್ಯ ಅರಿತಿರುವುದು ಮುಖ್ಯವಾದ ತಂತ್ರಗಳು. ಮದನಕದನದಲ್ಲೂ ಈ ತಂತ್ರಗಳು ಕೆಲಸ ಮಾಡುತ್ತವೆಯೆ? ವಿವೇಚಿಸಬೇಕು. ಶೃಂಗಾರಶುಕಸಪ್ತತಿಯಲ್ಲಿ ಬರುವ ಉಕ್ತಿ ಹೀಗೆ ಹೇಳುತ್ತದೆ. ಪ್ರೀತಿಃ ಸ್ವಾದ್ಧರ್ಶನಾದ್ಮೈಃ ಪ್ರಥಮಥಃ ಮನಃಸಂಗಸಂಕಲ್ಪಭಾವೋ ನಿದ್ರಾಛೇದಸ್ತನುತ್ವಂ ವಪುಷಿ ಕಲುಷಿತಾ ಚೇಂದ್ರಿಯಾಣಾಂ ನಿವೃತ್ತಿಃ ಹ್ರೀನಾಶೋನ್ಮಾದಮೂರ್ಛಾ ಮರಣಮಿತಿ ಜಗದ್ಯಾತ್ಯವಸ್ಥಾದಶೈತಾಃ ಲಗ್ನೆರ್ಯತುಷ್ಪಾಣೈಃ ಸ ಜಯತಿ ಮದನಃ ಸನ್ನಿರಸ್ತಾನ್ಯಧನ್ವೀ ವೀರನಾದ ಮನ್ಮಥನ ಎದುರು ಇತರ ಧನುರ್ಧರರು ವಿಜಯಿಗಳಾಗುವುದನ್ನೂ ಊಹಿಸಿ ಕೊಳ್ಳಲೂ ಆಗದು. ಯಾಕೆಂದರೆ ಆತ ಊಹಿಸುವುದಕ್ಕೂ ಮೊದಲೇ ಕುಸುಮಶರಗಳನ್ನು ಪ್ರಯೋಗಿಸುತ್ತಾನೆ. ಇದರ ಪ್ರಯೋಗವಾಗುವುದು ತರುಣ ತರುಣಿಯರ ಪ್ರರ್ಥಮ ದರ್ಶನ ಸಂದರ್ಭದಲ್ಲೇ. ಅಲ್ಲೇ ಅನುರಾಗ ಸ್ಫುರಿಸುವುದು. ತದನಂತರ ಪರಸ್ಪರರನ್ನು ಪ್ರೇಮಿಯ ಸ್ವರೂಪದಲ್ಲಿ ಕಲ್ಪಿಸಿಕೊಂಡು, ಅವರನ್ನು ಕೂಡಬೇಕೆಂಬ ಅಭಿಲಾಷೆ ಉಂಟಾಗುತ್ತದೆ. ಇದರಿಂದ ನಿದ್ರೆ ಹತ್ತಿರ ಸುಳಿಯದೆ ಚಿತ್ತಾಲಸ್ಯ, ಅದರಿಂದ ಶರೀರ ದೌರ್ಬಲ್ಯ, ದೇಹದ ಇಂದ್ರಿಯಗಳು ಕೆಲಸ ಮಾಡಲು ನಿರಾಕರಿಸುತ್ತವೆ. ಪ್ರೇಮಿಯ ಹೊರತಾಗಿ ಇನ್ನೆಲ್ಲ ವಿಷಯವ ವರ್ಜ್ಯವಾಗುತ್ತವೆ. ನಾಚಿಕೆಯೂ ಹೊರಟುಹೋಗಿ ಅಪಾಲಾಪ ಶುರುವಾಗುತ್ತದೆ. ಉನ್ಮಾದ ಉಂಟಾಗುತ್ತದೆ, ಮೂರ್ಛೆ ಹೋಗಬಹುದು. ಮರಣವೂ ಸಂಭವಿಸಬಹುದು. ಹೀಗೆ ಮದನನು ಯುದ್ಧವನ್ನು ಜಯಿಸುತ್ತಾನೆ. -ಹರಿಹರ