ಮೂಕ 'ಸಾಕ್ಷಿ' ನನ್ನ ಮಗಳು 'ಶ್ವೇತ' 14 ವರ್ಷಗಳ ಹಿಂದೆ ನಾನೊಂದು ಟಿವಿ ಧಾರವಾಹಿಯಲ್ಲಿ ನಟಿಸುತ್ತಿದ್ದೆ. ಒಂದೆರಡು... ಸಾಕ್ಷಿ ತನ್ವರ್ ಎಂಬಾಕೆಯನ್ನು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. 'ಕಹಾನಿ ಘರ್ ಘರ್ ಕಿ' ಮುಂತಾದ ಟೆಲಿ ಸೀರಿಯಲ್‌ಗಳನ್ನು ನೋಡಿದವರಿಗೆ ಈಕೆಯ ಬಗ್ಗೆ ಗೊತ್ತಿರುತ್ತದೆ. ಕಿರುತೆರೆಯ ಪ್ರಧಾನ ನಟಿಯರಲ್ಲಿ ಈಕೆ ಒಬ್ಬಳು. ಇತ್ತೀಚಿಗೆ ಶ್ವೇತಾ ಬಸು ಪ್ರಸಾದ್ ಎಂಬ ನಟಿ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದಿದ್ದು, ನಾವೆಲ್ಲ ಆಕೆಯ ಬಗ್ಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಕಂಡು ಕ್ರುದ್ಧಳಾಗಿ ಈ ರೀತಿ ಬರೆದುಕೊಂಡಿದ್ದಾಳೆ... 14 ವರ್ಷಗಳ ಹಿಂದೆ ನಾನೊಂದು ಟಿವಿ ಧಾರವಾಹಿಯಲ್ಲಿ ನಟಿಸುತ್ತಿದ್ದೆ. ಒಂದೆರಡು ಎಪಿಸೋಡ್‌ಗಳಾದ ಮೇಲೆ ನನ್ನ ಮಗಳ ಪಾತ್ರಕ್ಕೆ ಚೂಟಿ ಹುಡುಗಿಯೊಬ್ಬಳು ಬಂದಳು. 9 ವರ್ಷದ ಆಕೆ ಆ ಪಾತ್ರಕ್ಕೇ ಹೇಳಿ ಮಾಡಿಸಿದ್ದಳೇನೋ ಎಂಬಂತಿದ್ದಳು. ನಂತರ ನಮ್ಮ ಬಾಂಧ್ಯವ್ಯ ತೆರೆಯಾಚೆಗೂ ಬೆಳೆಯಿತು. ಕಳೆದ 13 ವರ್ಷಗಳಿಂದ, ಪ್ರತಿ ವರ್ಷದ ತಾಯಂದಿರ ದಿನಾಚರಣೆಗೂ ಆಕೆ ನನಗೆ ಕರೆ ಮಾಡಿ ವಿಶ್ ಮಾಡುತ್ತಾಳೆ. ಬೆಚ್ಚಗಿನ ಭಾವ ಹುಟ್ಟಿಸುವ ಆ ವರ್ತನೆ, ಅದರಾಚೆಗೂ ಆಕೆ ಬೆಳೆದು ಬಂದ ಮೌಲ್ಯಯುತ ಸಂಸ್ಕಾರದ ಪ್ರತಿಬಿಂಬವಾಗಿತ್ತು. ಆಕೆಯ ಓದು ಮತ್ತು ಕೆಲಸದ ಬಗ್ಗೆ ಕೇಳಿದಾಗಲೂ ಅದೇ ಘನತೆಯ ಉತ್ತರ. ಕಳೆದ ಕೆಲ ದಿನಗಳಿಂದ ಈ ನನ್ನ ಮಗು, ಕೆಲಸ ತಪ್ಪು ಕಾರಣಗಳಿಂದಾಗಿ ಸುದ್ದಿಯಾಗುತ್ತಿದೆ. ಅದರ ನಂತರ, ನನಗೆ ಫೋನ್ ಮಾಡಿದ ಕೆಲವರು 'ನಿಮ್ಮ ಧಾರವಾಹಿಯ ಮಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದೆವು....' ಎನ್ನತೊಡಗಿದರು. ನಾನು ಉತ್ತರಿಸಿದೆ: ನಿಜ! ನಾನೂ ಓದಿದೆ. ಆ ವರದಿಗಳು ಆಕೆಯ ಬಗ್ಗೆ ಮಾತ್ರ, ಬರೆದಿವೆ. ಆದರೆ ಆಕೆಯ ಹೈ ಪ್ರೊಫೈಲ್ ಗಿರಾಕಿಗಳ ಬಗ್ಗೆ ಬರೆದಿದ್ದರೆ, ಅದನ್ನೂ ನಾನು ಓದುತ್ತಿದ್ದೆ. ಈ ಗಿರಾಕಿಗಳ ಗುರುತು ಮತ್ತು ಹೆಸರನ್ನು ಮುಚ್ಚಿಟ್ಟದ್ದಾಗಿ ನನಗೆ ಮೀಡಿಯಾಗಳ ಬಗ್ಗೆ ಅಸಮಾಧಾನವಾಗಿದೆ. ಆ ಕೊಳೆತ ವ್ಯಕ್ತಿಗಳ ಹೆಸರು ಮುನ್ನೆಲೆಗೆ ಬರಬೇಕಾಗಿತ್ತು. ಕನಿಷ್ಠ ಅವರ ಕುಟುಂಬಸ್ಥರಿಗಾದರೂ ತಮ್ಮ ಯಜಮಾನರ ಮನರಂಜನಾ ಚಟುವಟಿಕೆಗಳ ಬಗ್ಗೆ ಗೊತ್ತಾಗುತ್ತಿತ್ತು. ನಾವು ಸೋಶಿಯಲ್ ಮೀಡಿಯಾಗಳಲ್ಲಿ ಆಕೆಯ ಬಗ್ಗೆ ತೀರ್ಮಾನಗಳನ್ನು ಪಾಸು ಮಾಡುವುದರಲ್ಲಿ ನಿರತರಾಗಿದ್ದೇವೆ. ಆದರೆ ಆಕೆಯ ಪರಿಸ್ಥಿತಿಯನ್ನು ಅರಿತು ಮಾತನಾಡಲು ವಿಫಲರಾಗಿದ್ದೇವೆ. ಆಕೆಯ ಬಗ್ಗೆ ನಿರ್ಧರಿಸಲು ನಮಗೆ ಹಕ್ಕಿದೆಯಾ? ನನಗೆ ಆಕೆಯ ಸಮಸ್ಯೆಗಳೂ ಗೊತ್ತಿಲ್ಲ, ಪರಿಹಾರಗಳೂ ತಿಳಿದಿಲ್ಲ. ಆದರೆ ಆಕೆಯನ್ನೊಂದು ರಿಮಾಂಡ್ ಹೋಂನಲ್ಲಿ ಇರಿಸಲಾಗಿದೆ, ತಪ್ಪೊಪ್ಪಿಗೆ ಪಡೆಯಲಾಗಿದೆ ಎಂಬುದು ಗೊತ್ತು. ಕನಿಷ್ಠ ಪಕ್ಷ ಆಕೆಗೆ ಅದನ್ನು ಒಪ್ಪಿಕೊಳ್ಳುವ ಧೈರ್ಯವಿದೆ. ಇದನ್ನು ಬರೆಯುವ ಮುನ್ನ ಆಕೆಯ ಜತೆ ಮಾತನಾಡಬಯಸಿದ್ದೆ, ಆದರೆ ಸಾಧ್ಯವಾಗಲಿಲ್ಲ. ಆಕೆಯ ತಾಯಿ ಜತೆ ಮಾತಾಡಿದೆ. ಆಕೆಯನ್ನು ರಿಮಾಂಡ್ ಹೋಂನಲ್ಲಿ ನೋಡಲು ಅವಳ ತಾಯಿಯನ್ನು ಬಿಡಲಿಲ್ಲ ಅನ್ನೋದು ನಿಮಗೆ ಗೊತ್ತಾ? ರಿಮಾಂಡ್ ಹೋಂನಲ್ಲಿ ಸಂಗೀತ, ಸಿನೆಮಾಗಳ ಬಗ್ಗೆ ಮಾತಾಡುತ್ತಾ ಅಲ್ಲಿರುವ ಮಕ್ಕಳು ಮತ್ತು ಇತರ ಸ್ತ್ರೀಯರನ್ನು ಆಕೆ ಖುಷಿಯಾಗಿಟ್ಟಿದ್ದಾಳೆ ಎಂದು ನ್ಯಾಯಾಧೀಶರು ತಿಳಿಸಿದರಂತೆ. ಅವಳ ತಾಯಿ ಸೋತುಹೋದ ಭಾವದಲ್ಲಿದ್ದಾರೆ. ಆಕೆಯಲ್ಲಿ ಕೆಲವು ಪ್ರಶ್ನೆಗಳಿವೆ: ನನ್ನ ಮಗಳು ಕ್ರಿಮಿನಲ್ ಅಲ್ಲ. ಆಕೆಯ ಹೆಸರನ್ನೇಕೆ ಇಷ್ಟು ಕೆಡಿಸಲಾಗಿದೆ? ಈ ಮೀಡಿಯಾ ವರದಿಗಳು ಆಕೆಯ ಜೀವನದಲ್ಲಿ ಅಳಿಸಲಾಗದ ಕಲೆಗಳಾಗುವುದಿಲ್ಲವೆ? ಇವು ಮೂಡಿಸಿದ ಗಾಯಗಳನ್ನು ನಿವಾರಿಸಿಕೊಳ್ಳಲಾಗದೆ ಆಕೆ ಅನಾಹುತ ಮಾಡಿಕೊಂಡು ಬಿಟ್ಟರೇನು ಗತಿ? ಅವಳ ತಾಯಿ, ನಾನೂ ಸೇರಿ ಹಲವಾರು ಮಹಿಳೆಯರಿಗೆ ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರ ಬೇಕಿದೆ: ಮೀಡಿಯಾ ಯಾಕೆ ಹುಡುಗಿಯನ್ನು ಮಾತ್ರ ತೋರಿಸುತ್ತಿದೆ? ಆ ದೊಡ್ಡ ಜನರ ಪರಿಯಗಳನ್ನೇಕೆ ಅಡಗಿಸಲಾಗುತ್ತಿದೆ? ಆ ದೊಡ್ಡ ಜನರ ಪರಿಚಯಗಳನ್ನೇಕೆ ಅಡಗಿಸಲಾಗುತ್ತಿದೆ? ಅವರ ಅಜ್ಞಾತತೆಯ ಹಕ್ಕನ್ನು ಆಕೆಗೇಕೆ ಕೊಟ್ಟಿಲ್ಲ? ಆಕೆ ನಟಿಯೆಂಬ ಕಾರಣಕ್ಕೆ ಆಕೆ ಗುರಿಯಾದಳೆ? ನಮ್ಮ ನೈತಿಕ ಪೊಲೀಸರೇಕೆ ಈ ವಿಚಾರದಲ್ಲಿ ಮೌನಿಗಳಾಗಿದ್ದಾರೆ? ಕೊಲೆಗಾರರಿಗೂ ನೀಡಲಾಗುವ ಖಾಸಗಿತನದ ಹಕ್ಕನ್ನು ಆಕೆಗೇಕೆ ನಿರಾಕರಿಸಲಾಗಿದೆ?