ಶಾಲಾ ಗೆಳೆಯರ ವಿಚಿತ್ರ ಪುನರ್ಮಿಲನದ ಕಥೆ ಇದು ನ್ಯಾಯಾಲಯದಲ್ಲಿ ಅಪರಾಧ ವಿಚಾರಣೆ ವೇಳೆಯಲ್ಲಾದ ವಿಚಿತ್ರ ನಾಟಕೀಯ ಪುನರ್ಮಿಲನ ಇದು. ಮಯಾಮಿ: ನ್ಯಾಯಾಲಯದಲ್ಲಿ ಅಪರಾಧ ವಿಚಾರಣೆ ವೇಳೆಯಲ್ಲಾದ ವಿಚಿತ್ರ ನಾಟಕೀಯ ಪುನರ್ಮಿಲನ ಇದು. ಮಯಾಮಿಯ ಫ್ಲೋರಿಡಾದ ನ್ಯಾಯಾಧೀಶೆ ಮಿಂಡಿ ಗ್ಲೇಜರ್ ಗುರುವಾರ ಕಳ್ಳತನ ಆರೋಪದ ಮೇಲೆ ಬಂಧಿತನಾಗಿದ್ದ ಪುರುಷನೊಬ್ಬನ ವಿಚಾರಣೆ ನಡೆಸುವಾಗ ನಡೆದ ಘಟನೆ ಇದು. ಆದರೆ ಈ ಬಂಧಿತನನ್ನು ಹಿಂದೆಲ್ಲೋ ನೋಡಿದ ನೆನಪಾಗಿ ಹೌದು ತನ್ನ ಶಾಲಾ ಗೆಳೆಯ ಅವನೆಂದು ತಿಳಿದು, ಆಪಾದಿತನ ಶಾಲೆಯ ಬಗ್ಗೆ ವಿಚಾರಿಸಿದಾಗ ಅವನು ಕೂಡ ನ್ಯಾಯಮೂರ್ತಿಯನ್ನು ಗುರುತು ಹಚ್ಚಿದ್ದಾನೆ. ತನ್ನ ಶಾಲಾ ಗೆಳತಿಯನ್ನು ಗುರುತು ಹಚ್ಚಿದಾಕ್ಷಣ ದೊಡ್ಡ ನಗು ಬೀರಿದ್ದರೂ, ನಂತರ ತಾನು ಆರೋಪಿ ಎಂದು ನೆನಪಿಸಿಕೊಂಡು ಜೋರಾಗಿ ಅಳಲು ಪ್ರಾರಂಭಿಸಿದನಂತೆ. 'ಶಾಲಾ ದಿನಗಳಲ್ಲಿ ಬೂತ್(ಆರೋಪಿ) ಬಹಳ ಒಳ್ಳೆಯ ಗೆಳೆಯನಾಗಿದ್ದ, ಅವನ ಜೊತೆ ನಾನು ಫುಟ್ಬಾಲ್ ಆಡುತ್ತಿದ್ದೆ" ಎಂದು ನೆನಪಿಸಿಕೊಂಡ ನ್ಯಾಯಾಧೀಶೆ "ಈಗ ನೊಡಿ ಎಂತಹ ಪರಿಸ್ಥಿತಿ ಬಂದೊದಗಿದೆ" ಎಂದಿದ್ದಾರೆ. ನೀನಿಲ್ಲಿರುವುದಕೆ ನಾನು ವಿಷಾದಿಸುತ್ತೇನೆ ಆದರೆ ನನಗೆ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದಿರುವ ಮಿಂಡಿ, ಆರೋಪಿಗೆ ೪೪೦೦೦ ಡಾಲರ್ ಬಾಂಡ್ ನೊಂದಿಗೆ ಜಾಮೀನು ನೀಡಿದ್ದಾರೆ. "ನಿನಗೆ ಮುಂದೆ ಒಳ್ಳೆಯದಾಗಲಿ, ನಿನ್ನ ಜೀವನ ಬದಲಾಯಿಕೊಳ್ಳುವಂತೆ ಆಶಿಸುತ್ತೇನೆ" ಎಂದು ಜಡ್ಜ್ ಹಾರೈಸಿದ್ದಾರೆ ಎಂದು ತಿಳಿದುಬಂದಿದೆ.