ಮಾವ ಸೂಪರು ಆದ್ರೆ ಸ್ವಲ್ಪ ಡೇಂಜರು! ಮಾವಂದಿರೆಲ್ಲ ಕೆಟ್ಟವರಲ್ಲ. ಅಥವಾ ಅವರೆಲ್ಲ ಅಳಿಯನಿಗೆ ವಿಲನ್‌ಗಳಂತೆಯೇ ಕಾಣಬೇಕು ಎಂದೂ ಇಲ್ಲ. ಅಳಿಯನಿಗೆ ಗೆಳೆಯರಂತೆ ಇರುವ ಮಾವಂದಿರು ಬೇಕಾದಷ್ಟಿದ್ದಾರೆ. ಏನ್.... ಮಾವಂದಿರೆಲ್ಲ ಕೆಟ್ಟವರಲ್ಲ. ಅಥವಾ ಅವರೆಲ್ಲ ಅಳಿಯನಿಗೆ ವಿಲನ್‌ಗಳಂತೆಯೇ ಕಾಣಬೇಕು ಎಂದೂ ಇಲ್ಲ. ಅಳಿಯನಿಗೆ ಗೆಳೆಯರಂತೆ ಇರುವ ಮಾವಂದಿರು ಬೇಕಾದಷ್ಟಿದ್ದಾರೆ. ಏನ್ ಅದೃಷ್ಟ ಮಾಡಿದ್ದೀಯಪ್ಪ, ನಿನ್ ಹೆಂಡ್ತಿ ಸಖತ್ ಹಾಟ್ ಎಂದು ಅಳಿಯನ ಬಳಿ ಮಗಳ ಬಗ್ಗೆಯೇ ಜೋಕ್ ಮಾಡುವಷ್ಟು ಸಲುಗೆ ಹಾಗೂ ಫ್ರೆಂಡ್‌ಶಿಪ್ ಹೊಂದಿರುವ ಅಲ್ಟ್ರಾಮಾಡರ್ನ್ ಮಾವಂದಿರೂ ಇದ್ದಾರೆ. ಇನ್ನು ಕೆಲವರು ಬಾ ಗುರು ಗುಂಡು ಹಾಕೋಣ ಎಂದು ಅಳಿಯನ ಜೊತೆಗೇ ಕೂರುತ್ತಾರೆ. ಕೊಡಗಿನಲ್ಲಿ ಇದು ಕಾಮನ್ನು ಎಂಬುದು ಬೇರೆ ವಿಷಯ. ಗುಂಡು ಹಾಕಬೇಕು ಎಂಬುದು ಅಲ್ಲಿ ಅಳಿಯನಾಗುವವನಿಗೆ ಮಾವನ ದೃಷ್ಟಿಯಲ್ಲಿ ಇರಬೇಕಾದ ಕ್ವಾಲಿಫಿಕೇಶನ್ನುಗಳಲ್ಲಿ ಒಂದು. ಇನ್ನು ಕೆಲ ಮಾವ-ಅಳಿಯನ ನಡುವೆ ಸಲುಗೆಯೂ ಇರುವುದಿಲ್ಲ, ದ್ವೇಷವೂ ಇರುವುದಿಲ್ಲ. ಪರಸ್ಪರ ಗೌರವವಿರುತ್ತದೆ. ಅವರು ತಮ್ಮಿಬ್ಬರ ನಡುವೆ ಅಂತರ ಕಾಯ್ದುಕೊಳ್ಳುತ್ತಾರೆ. ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ಅವರ ಮಾತುಕತೆ ಇರುತ್ತದೆ. ಈ ಮಾವಂದಿರು ಮಗಳ ಮನೆಯ ವ್ಯವಹಾರದಲ್ಲಿ ಮೂಗು ತೂರಿಸುವುದಿಲ್ಲ. ಮದುವೆ ಮಾಡಿಕೊಟ್ಟ ಮೇಲೆ ಮಗಳುಂಟು, ಅವಳ ಗಂಡನುಂಟು ಎಂದು ಸುಮ್ಮನಿರುತ್ತಾರೆ. ತೀರಾ ಮಗಳ ಸಂಸಾರದಲ್ಲಿ ಭೂಕಂಪವಾಗುತ್ತಿದೆ ಎಂದಾಗ ಮಾತ್ರ ಮಧ್ಯಪ್ರವೇಶ ಮಾಡುತ್ತಾರೆ. ಗಂಡ-ಹೆಂಡತಿ ನಡುವಿನ ಸಣ್ಣಪುಟ್ಟ ಮನಸ್ತಾಪಕ್ಕೆಲ್ಲ ಅವರು ಸಲಹೆ ಸೂಚನೆ ಕೊಡಲು, ರಾಜಿ ಸಂಧಾನ ಮಾಡಲು ಬರುವುದಿಲ್ಲ. ಮತ್ತೆ ಕೆಲ ಮಾವಂದಿರು ಯಾವತ್ತೂ ಅಳಿಯನ ತಂಟೆಗೆ ನೇರವಾಗಿ ಬರುವುದಿಲ್ಲ. ಆದರೆ ಮಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇದು ಅಳಿಯನಿಗೆ ಕೆಲವೊಮ್ಮೆ ಕಿರಿಕಿರಿ ಉಂಟುಮಾಡಿದರೂ ಬಹಳ ತೊಂದರೆಯನ್ನೇನೂ ಕೊಡುವುದಿಲ್ಲ. ಈ ಮೂರು ರೀತಿಯ ಮಾವಂದಿರಲ್ಲಿ ಮೊದಲೆರಡು ರೀತಿಯ ಮಾವಂದಿರನ್ನು ಎ ಗ್ರೇಡ್‌ಗೂ, ಮೂರನೇ ರೀತಿಯವರನ್ನು ಬಿ ಗ್ರೇಡ್‌ಗೂ ಸೇರಿಸಬಹುದು. ಸಿ ಗ್ರೇಡ್ ಮಾವಂದಿರು ನಿಜಕ್ಕೂ ಅಳಿಯನಿಗೆ ಡೇಂಜರ್ ಅನ್ನಿಸಬಹುದು. ಮಗಳಿಗೆ ಮದುವೆಯಾದ ಮೇಲೆ ಅವಳ ಬದುಕಿನಲ್ಲಿ ನನ್ನ ಪಾತ್ರವೇನು ಎಂಬುದನ್ನು ಮಾವ ಅರ್ಥ ಮಾಡಿಕೊಳ್ಳದಿದ್ದರೆ ಹೀಗಾಗುತ್ತದೆ. ಇಂಥ ಮಾವಂದಿರ ಬಗ್ಗೆಯೇ ಈ ಲೇಖನವಿರುವುದು.ಟಿ ಬೇಗ ಎದ್ದು ಹಾಲು ತರೋದಕ್ಕಾಗಲ್ವಾ, ಕರೆಂಟ್ ಬಿಲ್ಲು ವಾಟರ್ ಬಿಲ್ಲುಗಳನ್ನೆಲ್ಲ ನೀನೇ ಕಟ್ಟೋದಕ್ಕಾಗಲ್ವಾ ಎಂಬಂತಹ ವಾಗ್ವಾದಗಳು ಆಗಾಗ ನಡೆಯತೊಡಗುತ್ತವೆ. ಹೆಚ್ಚಿನ ಸಲ ಇವು ನೇರವಾಗಿ ನಡೆಯುವುದಿಲ್ಲ, ಪರೋಕ್ಷವಾಗಿ ಕಾಲೆಳೆತದ ರೂಪದಲ್ಲಿರುತ್ತವೆ. ಮಗಳ ಮನೆಗೆ ಮಾವನ ಮನೆ ಹತ್ತಿರದಲ್ಲಿ ಇದ್ದಷ್ಟೂ ಈ ಸಲುಗೆ ಹೆಚ್ಚುತ್ತದೆ. ಆ ಅನುಪಾತದಲ್ಲೇ ಅಳಿಯನ ನೆಮ್ಮದಿ ಕಡಿಮೆಯಾಗುತ್ತದೆ. ಸ್ವಾತಂತ್ರ್ಯಹರಣ ಮಾವನಿಂದ ಅಳಿಯನಿಗಾಗುವ ಬಹುದೊಡ್ಡ ತೊಂದರೆಯೆಂದರೆ ಸ್ವಾತಂತ್ರ್ಯಹರಣ. ಮಾವ-ಅಳಿಯ ಬೇರೆ ಬೇರೆ ದೇಶ ಅಥವಾ ರಾಜ್ಯಗಳಲ್ಲಿದ್ದರೆ ಬಚಾವು. ಒಂದೇ ಊರು ಅಥವಾ ಹತ್ತಿರದ ಊರುಗಳಲ್ಲಿದ್ದರೆ ಅಳಿಯನಿಗೆ ಆಗಸ್ಟ್ 15ರಂದೂ ಸ್ವಾತಂತ್ರ್ಯೋತ್ಸವ ಇರುವುದಿಲ್ಲ. ಏನು ಮಾಡುವುದಿದ್ದರೂ ಮಾವ ಏನು ಹೇಳುತ್ತಾರೋ ಎಂದು ಯೋಚಿಸಬೇಕು. ಮಾವನ ಉಪದೇಶಗಳನ್ನು ಕಡೆಗಣಿಸುವಂತಿಲ್ಲ. ಮಾವನ ಇಷ್ಟಕ್ಕೆ ವಿರುದ್ಧವಾಗಿ ಹೋಗುವಂತಿಲ್ಲ. ಸಾಮಾನ್ಯವಾಗಿ ಮಾವನ ಇಷ್ಟವೇ ಅವನ ಮಗಳ ಇಷ್ಟವೂ ಆಗುತ್ತದೆ. ಮಾವನ ಸ್ನೇಹಿತರು ಎಲ್ಲೆಲ್ಲೂ ಇರುವುದರಿಂದ ಎಲ್ಲೆಲ್ಲಿ ಮಾವ ಇರಲು ಸಾಧ್ಯವಿಲ್ಲವೋ ಅಲ್ಲೆಲ್ಲ ಅಳಿಯನ ಮೇಲೆ ಈ ಸ್ನೇಹಿತರ ಕಣ್ಣಿರುತ್ತದೆ. ಯಾವುದೋ ಏರಿಯಾದಲ್ಲಿ ಅಪರೂಪಕ್ಕೊಮ್ಮೆ ಅಳಿಯ ಬಿಸಿಲಿನ ಝಳ ತಾಳಲಾರದೆ ತೂರಾಡುತ್ತ ಹೋಗುತ್ತಿದ್ದರೂ ಮಾವನಿಗೆ ಕೆಟ್ಟ ರಿಪೋರ್ಟ್ ಬರುತ್ತದೆ! ಇನ್ನು, ಮಗಳ ಮನೆಗೆ ಮಾವ ಬಂದಷ್ಟು ಹೊತ್ತು ಅಳಿಯ ಪಂಜರದಲ್ಲಿರುವ ಕರಡಿಯಂತಾಗುತ್ತಾನೆ. ಮೊದಲೇ ಹೆಂಡತಿಯಿಂದಾಗಿ ಈ ಆಸಾಮಿಗೆ ಸಿಗುವ ಸ್ವಾತಂತ್ರ್ಯ ಅಷ್ಟಕ್ಕಷ್ಟೇ ಆಗಿರುತ್ತಿತ್ತು. ಬ್ರಿಟೀಷರ ಜೊತೆಗೆ ಫ್ರೆಂಚರೂ ಸೇರಿಕೊಂಡರೆ ಕೇಳಬೇಕೇ. ಟಾಮ್ ಅಂಡ್ ಜೆರ್ರಿ ಹೆಚ್ಚಿನ ಸಲ ಮಾವ-ಅಳಿಯನ ನಡುವಿನ ಯುದ್ಧ ಟಾಮ್ ಅ್ಯಂಡ್ ಜೆರಿಯಂತೆ ನೋಡಲು ಮಜವಾಗಿರುತ್ತದೆ. ಇಲ್ಲಿ ಮಾವ ಗೆಲ್ಲುವುದಿಲ್ಲ, ಅಳಿಯ ಸೋಲುವುದಿಲ್ಲ, ಥೇಟ್ ಟಾಮ್ ಮತ್ತು ಜೆರಿಯಂತೆ. ಒಬ್ಬರನ್ನು ಇನ್ನೊಬ್ಬರು ಮಾನಸಿಕವಾಗಿ ಅಟ್ಟಿಸಿಕೊಂಡು ಹೋಗುತ್ತಿರುತ್ತಾರೆ. ಇನ್ನೊಬ್ಬರು ಸದಾ ತಪ್ಪಿಸಿಕೊಳ್ಳುತ್ತಿರುತ್ತಾರೆ. ಸಂಬಂಧಿಕರು ಇದರ ಮಜಾ ತೆಗೆದುಕೊಳ್ಳುತ್ತಾರೆ. ಅತ್ತೆ ರೆಫರಿಯಾಗಿರುತ್ತಾಳೆ. ನೀರಸ ಬದುಕಿಗೆ ಇದು ಸ್ವಲ್ಪ ಜೀವ ತುಂಬಬಹುದು. ಆದರೆ ಮಿತಿಮೀರಿದರೆ ಅಪಾಯ. ಮಗಳಿಗೆ ಅತಿ ಮುದ್ದು ಕೆಲ ಮಾವಂದಿರು ಮಗಳನ್ನು ಅತಿಯಾಗಿ ಮುದ್ದು ಮಾಡಿ ಅಳಿಯನನ್ನು ಕಂಗೆಡಿಸುತ್ತಾರೆ. ಅಪ್ಪ ತನ್ನ ಮಗಳನ್ನು ಮುದ್ದು ಮಾಡುವುದು ತಪ್ಪಲ್ಲ. ಆದರೆ ಅವಳಿಗೆ ಪದೇಪದೇ ದುಡ್ಡು ಕೊಡುವುದು, ಗಿಫ್ಟ್ ಕೊಡುವುದು, ಬಟ್ಟೆ ಕೊಡಿಸುವುದು ಮತ್ತು ಅಳಿಯನಿಗಂತೂ ಈ ಯೋಗ್ಯತೆಯಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸುವುದರಿಂದ ಕೆಲಸ ಕೆಡುತ್ತದೆ. ಇದರಿಂದ ಅಳಿಯನಿಗೇ ಫಾಯಿದೆಯಲ್ವಾ, ಅವನಿಗೆ ಅಷ್ಟು ದುಡ್ಡು ಉಳಿಯಿತಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸಬಹುದು. ಆದರೆ ಕ್ರಮೇಣ ಅಳಿಯನಿಗೆ ತನ್ನ ಬಗ್ಗೆ ಕೀಳರಿಮೆ ಹುಟ್ಟಬಹುದು ಅಥವಾ ಮಾವನೇ ಕೀಳರಿಮೆಹುಟ್ಟಿಸಬಹುದು. ಹೀಗೆ ಮಾಡುವ ಮೂಲಕಅಳಿಯನ ವಿರುದ್ಧ ಮಗಳನ್ನು ಅಸ್ತ್ರವಾಗಿ ಬಳಸುವ ಮಾವಂದಿರೂ ಇದ್ದಾರೆ. ಕೆಲವೊಮ್ಮೆ ಇವರೇ ನಾನು ಬೇಕೋ? ನಿನ್ನ ಗಂಡ ಬೇಕೋ? ಆಯ್ಕೆ ನಿನ್ನದು ಎಂಬಂತೆ ವರ್ತಿಸಿ ಮಗಳನ್ನು ಇಕಟ್ಟಿಗೆ ಸಿಲುಕಿಸುತ್ತಾರೆ. ಇನ್ನೊಂದು ವಿಶೇಷ ಸೂಚನೆ: ಇಲ್ಲಿರುವುದೆಲ್ಲ ಯಾವ ಮಾವಂದಿರಿಗೆ ಅನ್ವಯಿಸುತ್ತದೆಯೋ ಆ ಮಾವಂದಿರಿಗೆ ಮಾತ್ರ ಅನ್ವಯಿಸುತ್ತದೆ. ಮಾವ ಯಾಕೆ ಹೀಗೆ ವರ್ತಿಸುತ್ತಾನೆ? ಯಾಕೆಂದರೆ ಅವನಿಗೆ ಮಧ್ಯ ವಯಸ್ಸು ದಾಟಿದೆ. ಅವನು ಬದುಕಿನ ಕೆಲ ವಿಷಯಗಳಲ್ಲಿ ಡೆಸ್ಪರೇಟ್ ಆಗಿದ್ದಾನೆ. ಮಗಳನ್ನು ಅವನು ಬಹಳ ಪ್ರೀತಿಸುವುದರಿಂದ ಅಳಿಯ ಬಂದಮೇಲೆ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂದು ಅವನ ಒಳಮನಸ್ಸು ಹೇಳುತ್ತಿರುತ್ತದೆ. ಗಂಡನಿಗೆ ತನ್ನ ಮಗಳು ಹೆಚ್ಚು ಹತ್ತಿರವಾದಷ್ಟೂ ಅವನು ಹೆಚ್ಚೆಚ್ಚು ಅಸ್ಥಿರವಾಗುತ್ತಾನೆ. ಆಗ ಮಗಳ ಹೃದಯ ಗೆಲ್ಲಲು ಮತ್ತೊಮ್ಮೆ ಶ್ರೀಕಾರದಿಂದ ಶುರುಮಾಡಬೇಕು ಎಂದು ಅವನಿಗೆ ಅನ್ನಿಸಬಹುದು. ಅದೊಂದು ತಪ್ಪು ಕಲ್ಪನೆ. ಅಪ್ಪನ ಮೇಲೆ ಮಗಳಿಗಿರುವ ಪ್ರೀತಿಯೇ ಬೇರೆ, ಗಂಡನ ಮೇಲಿರುವ ಪ್ರೀತಿಯೇ ಬೇರೆ. ಅವಳ ಹೃದಯದಲ್ಲಿ ಅಪ್ಪನಿಗೆ ಯಾವತ್ತೂ ಜಾಗವಿದೆ. ಆದರೆ ಎಲ್ಲ ಅಪ್ಪಂದಿರಿಗೂ ಇದು ಅರ್ಥವಾಗುವುದಿಲ್ಲ. ಆದ್ದರಿಂದಲೇ ಅವರು ಅಳಿಯನನ್ನು ಒಂದು ಆ್ಯಂಗಲ್‌ನಿಂದ ತನ್ನ ಪ್ರತಿಸ್ಪರ್ಧಿಯೆಂಬಂತೆ ನೋಡತೊಡಗುತ್ತಾರೆ. ಮಗಳು ತನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಗಂಡನನ್ನು ಪ್ರೀತಿಸುತ್ತಾಳೆ ಎಂಬುದು ಅವನ ತಳಮಳಕ್ಕೆ ಕಾರಣವಾಗಬಹುದು. ಈ ಕಾರಣಕ್ಕಾಗಿ ಅವನು ಅಳಿಯನನ್ನು ಅನ್ಯಗ್ರಹ ಜೀವಿಯಂತೆ ಅಥವಾ ಹೊರಗಿನಿಂದ ಬಂದ ವ್ಯಕ್ತಿಯಂತೆ ಟ್ರೀಟ್ ಮಾಡಬಹುದು. ಅಳಿಯನಿಗೆ ಈ ವಾಸ್ತವ ಅರ್ಥವಾದರೆ ಅವನು ಮಾವನನ್ನು ಕನಿಕರದಿಂದ ನೋಡುತ್ತಾನೆಯೇ ಹೊರತು ದ್ವೇಷಿಸುವುದಿಲ್ಲ. ಆದರೆ ಅಷ್ಟೊಂದು ಪ್ರಬುದ್ಧವಾಗಿ ಯೋಚಿಸಲು ಇವನಿಗೆ ಸಾಮರ್ಥ್ಯ ಇರುವ ಸಾಧ್ಯತೆ ಕಡಿಮೆ. ಸೆನ್ಸಿಬಲ್ಲಾಗಿ ಯೋಚಿಸುವುದಾದರೆ ಇಲ್ಲಿ ಅಳಿಯನಿಗಿಂತ ಹೆಚ್ಚು ಮಾವನ ಮೇಲೆ ಜವಾಬ್ದಾರಿಯಿದೆ. ಏಕೆಂದರೆ ಅವನು ದೊಡ್ಡವನು. ಬದುಕಿನ ವಾಸ್ತವಗಳು ಅಳಿಯನಿಗಿಂತ ಹೆಚ್ಚು ಅವನಿಗೇ ಅರ್ಥವಾಗಿರುತ್ತವೆ. ಆದರೆ, ತನಗೆ ಹೆಚ್ಚು ಗೊತ್ತು ಎಂಬ ಕಾರಣದಿಂದಲೇ ಕೆಲ ಮಾವಂದಿರು ಅಳಿಯನನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಾರೆ ಎಂಬುದು ವಿಪರ್ಯಾಸ. ಮಾವನನ್ನು ಸರಿದಾರಿಗೆ ತರುವುದು ಹೇಗೆ? ಇದಕ್ಕೆ ಮೊಟ್ಟಮೊದಲನೆಯದಾಗಿ ಅಳಿಯ ಮಾಡಬೇಕಿರುವ ಕೆಲಸ ತನ್ನ ಮನಸ್ಸಿನಲ್ಲಿ ಮಾವನ ಬಗ್ಗೆ ಇರುವ ಅಸಹನೆಯನ್ನು ತೆಗೆದುಹಾಕುವುದು. ಇದು ಅಷ್ಟೇನೂ ಸುಲಭವಲ್ಲ. ಆದರೆ ಮಾವನ ಜಾಗದಲ್ಲಿ ನಿಂತು ನೋಡಿದರೆ ಅರ್ಥವಾಗಬಹುದು. ಮಾವನಿಗೆ ಅಳಿಯನ ಮೇಲೆ ದ್ವೇಷವೇನೂ ಇರುವುದಿಲ್ಲ. ಅವನಿಗೆ ಅಳಿಯ ಎಂಬ ವ್ಯಕ್ತಿಯ ಬಗ್ಗೆ ತಕರಾರಿಲ್ಲ, ಅವನ ಸಮಸ್ಯೆಯಿರುವುದು ಅಳಿಯ ಎಂಬ ಸ್ಥಾನದ ಬಗ್ಗೆ. ಹಾಗಾಗಿ ನಿನ್ನ ಸ್ಥಾನಕ್ಕೆ ನನ್ನಿಂದ ಅಪಾಯವೇನೂ ಇಲ್ಲ ಎಂಬುದನ್ನು ಅಳಿಯ ಅವನಿಗೆ ಮನದಟ್ಟು ಮಾಡಿಕೊಡಬೇಕು. ಇದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ನಡೆಯಲ್ಲಿ ತೋರಿಸಬೇಕು. ಮಾವನಿಗೆ ಗೌರವ ಕೊಡುವುದು ಹಾಗೂ ಅವನ ಉಪದೇಶ ಹಿಡಿಸಿದರೂ ಹಿಡಿಸದಿದ್ದರೂ ಕಿವಿಗೊಟ್ಟು ಕೇಳಿದಂತೆ ನಟಿಸುವುದು ಸುಲಭ ಉಪಾಯ. ನಿನ್ನ ಮಗಳ ಭವಿಷ್ಯ ನನ್ನ ಕೈಲಿದೆ ಎಂಬಂತೆ ಬಾಲ ಬಿಚ್ಚಿ ಹೂಂಕರಿಸಿದರೆ ಎಂಥ ಮಾವನಾದರೂ ರೊಚ್ಚಿಗೇಳುತ್ತಾನೆ. ಮಾವನನ್ನು ಬುಟ್ಟಿಗೆ ಹಾಕಿಕೊಳ್ಳಲು ಇನ್ನೊಂದು ಉಪಾಯವೆಂದರೆ ಅವನ ಕೆಟ್ಟ ಜೋಕುಗಳಿಗೂ ಬಿದ್ದುಬಿದ್ದು ನಗುವುದು! ಇದರಿಂದ ಮಾವ ಇಂಪ್ರೆಸ್ ಆಗುತ್ತಾನೆ ಎಂಬುದಷ್ಟೇ ಅಲ್ಲ, ಹಾಸ್ಯ ವಿನಿಮಯದಿಂದ ಬಿಗುವಿನ ವಾತಾವರಣ ಸಡಿಲವಾಗುತ್ತದೆ. ಮಗಳು ತನಗಿಂತ ಹೆಚ್ಚಾಗಿ ಗಂಡನನ್ನು ಪ್ರೀತಿಸುತ್ತಾಳೆ ಎಂಬುದು ಕೆಲ ಮಾವಂದಿರಿಗೆ ಅಸ್ಥಿರತೆ ಉಂಟುಮಾಡುವ ಸಂಗತಿಯಾಗಿದ್ದರೂ, ತನಗಿಂತ ಹೆಚ್ಚಾಗಿ ಅಳಿಯ ಅವಳನ್ನು ಪ್ರೀತಿಸುತ್ತಾನೆ ಎಂಬುದು ಅವನಿಗೆ ಯಾವಾಗಲೂ ನೆಮ್ಮದಿ ತರುವ ಸಂಗತಿ. ಹಾಗಾಗಿ ತನ್ನ ಮಗಳನ್ನು ಅಳಿಯ ಪ್ರೀತಿಸಿದಷ್ಟೂ ಮಾವನಿಗೆ ಅವನ ಬಗೆಗಿನ ಅಭಿಮಾನ ಹೆಚ್ಚುತ್ತದೆ. 'ಮಾವಾ, ನನ್ನ ಕೈಲಿ ನಿನ್ನ ಮಗಳು ಸೇಫು' ಎಂಬ ಭಾವನೆ ಮೂಡಿಸಿದರೆ ಅಳಿಯನೂ ಮಾವನಿಂದ ಸೇಫು. ಅಳಿಯ-ಮಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬುದೇ ಮಾವನನ್ನು ಅಳಿಯದ್ವೇಷಿಯನ್ನಾಗಿ ಮಾಡುವ ಬಹುಮುಖ್ಯ ಸಂಗತಿ. ಮಾವನ ಜೊತೆ ಏಗುವುದು ಅಳಿಯನಿಗೆ ಕಷ್ಟವಾಗುತ್ತಿದೆಯೆಂದಾದರೆ ಅವನು ಅದನ್ನು ಹೆಂಡತಿಯ ಬಳಿ ಹೇಳಿಕೊಳ್ಳಬೇಕು. ಅವಳಿಗೆ ಅಪ್ಪನಲ್ಲಿ ಸಲುಗೆಯಿರುತ್ತದೆ. ಉಪಾಯವಾಗಿ ಅವನನ್ನು ಸರಿದಾರಿಗೆ ತರಲು ಅವಳೂ ಪ್ರಯತ್ನಿಸಬಹುದು. ಅಥವಾ ಮಾವ-ಅಳಿಯನ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ತಹಬದಿಗೆ ತಂದು ನಿಷೇಧಾಜ್ಞೆ ತೆರವುಗೊಳಿಸುವ ಕೆಲಸವನ್ನು ಅವಳೇ ಮುಂದಾಗಿ ಮಾಡಬಹುದು. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ ಫಲಿತಾಂಶ ನಿಶ್ಚಿತ. ಆದರೆ ಹೆಂಡತಿಯ ಜೊತೆಗೇ ಹೊಂದಾಣಿಕೆ ಸರಿಯಿಲ್ಲದಿದ್ದರೆ ಮಾವನ ಜೊತೆ ಹೊಂದಿಕೊಂಡು ಹೋಗುವುದು ಅಸಾಧ್ಯ. ಅದರಿಂದ ಪ್ರಯೋಜನವೂ ಇಲ್ಲ ಬಿಡಿ. ಹಣ್ಣು ಬೇಕು ಎಂದು ಗಿಡಕ್ಕೆ ನೀರು ಹಾಕುತ್ತೇವೆ. ಹಣ್ಣೇ ಸಿಗದಿದ್ದರೆ ಗಿಡದಿಂದೇನು ಉಪಯೋಗ? ಮಾವ-ಅಳಿಯ ಶತ್ರುಗಳಲ್ಲ. ಪರಿಸ್ಥಿತಿ ಅವರನ್ನು ಹಾಗೆ ಮಾಡಿರಬಹುದು. ಅಥವಾ ಮಾವ ಉಪದ್ವ್ಯಾಪಿಯಾಗಿದ್ದರೆ ಅಳಿಯನಿಗೆ ಶತ್ರುವಿನಂತೆ ವರ್ತಿಸುವುದು ಅನಿವಾರ್ಯವಾಗಿ ಪರಿಣಮಿಸಬಹುದು. ಆದರೆ, ರಿಪೇರಿ ಮಾಡಲು ಸಾಧ್ಯವೇ ಇಲ್ಲದ ವ್ಯಕ್ತಿ ಯಾರೂ ಇಲ್ಲ. ಮಗಳು-ಅಳಿಯ ಇಬ್ಬರೂ ಸೇರಿದರೆ ಇದು ಸುಲಭ. -ಗೇಬ್ರಿಯಲ್ (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.