ಕಿಸ್ ಖಾಸ್‌ಬಾತ್ ಈಗ ಎಲ್ಲೆಲ್ಲೂ 'ಕಿಸ್ ಆಫ್ ಲವ್‌' ಎಂಬ ವಿನೂತನ ಪ್ರತಿಭಟನೆಯದ್ದೇ ಸುದ್ದಿ.. ಈಗ ಎಲ್ಲೆಲ್ಲೂ 'ಕಿಸ್ ಆಫ್ ಲವ್‌' ಎಂಬ ವಿನೂತನ ಪ್ರತಿಭಟನೆಯದ್ದೇ ಸುದ್ದಿ. ಕೇರಳ, ದೆಹಲಿ ಹಾಗೂ ಚೆನ್ನೈ ಸೇರಿದಂತೆ ದೇಶದ ಹಲವೆಡೆ ಈ ಪ್ರತಿಭಟನೆಯನ್ನು ಬೆಂಗಳೂರಿನಲ್ಲೂ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕವಾಗಿ ಚುಂಬಿಸುವ, ಆಲಿಂಗಿಸುವ ಈ ಅಭಿಯಾನಕ್ಕೆ ಬಹಳಷ್ಟು ವಿರೋಧವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಿಸ್ ಆಫ್ ಲವ್ ಬಗ್ಗೆ ಒಂದಿಷ್ಟು ಮಾಹಿತಿ. ಏನಿದು ಅಭಿಯಾನ? ನೈತಿಕ ಪೊಲೀಸ್‌ಗಿರಿಯನ್ನು ವಿರೋಧಿಸಿ ಆರಂಭವಾದ ಪ್ರತಿಭಟನೆಯಿದು. ಈ ಅಭಿಯಾನವು ಮೊದಲು ಹುಟ್ಟಿಕೊಂಡಿದ್ದು ಕೇರಳದಲ್ಲಿ. ನಂತರ ದೇಶಾದ್ಯಂತ ವಿವಿಧ ನಗರಗಳಿಗೆ ಇದು ವ್ಯಾಪಿಸಿತು. ಸಮಾನಮನಸ್ಕರೆಲ್ಲ ಒಂದೆಡೆ ಸೇರಿ ಸಾರ್ವಜನಿಕವಾಗಿ ಪರಸ್ಪರ ಚುಂಬಿಸುವ ಹಾಗೂ ಆಲಿಂಗಿಸುವ ಮೂಲಕ ನೈತಿಕ ಪೊಲೀಸರ ದಾಳಿಯನ್ನು ಖಂಡಿಸುವುದು ಇದರ ಉದ್ದೇಶ. ಕೊಚ್ಚಿಯ ಮೆರೈನ್‌ಡ್ರೈವ್ ಬೀಚಿನಲ್ಲಿ ಮೊದಲ ಬಾರಿ ನ.2ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಆದರೆ ಅನೇಕ ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳು ಇದನ್ನು ವಿರೋಧಿಸಿದ್ದರಿಂದ ಈ ಪ್ರತಿಭಟನೆ ಯಶಸ್ವಿಯಾಗಲಿಲ್ಲ. ಹುಟ್ಟಿಕೊಂಡಿದ್ದು ಏಕೆ? ಕೇಳದ ಕಲ್ಲಿಕೋಟೆಯ ಡೌನ್‌ಟೌನ್ ಕೆಫೆಯಲ್ಲಿ ಯುವ ಜೋಡಿಗಳು ಪರಸ್ಪರ ಮುತ್ತಿಕ್ಕುವ, ಅಪ್ಪಿಕೊಳ್ಳುವಂತಹ ದೃಶ್ಯಗಳನ್ನು ಚಾನೆಲ್‌ವೊಂದು ಪ್ರಸಾರ ಮಾಡಿತ್ತು. ಇದರ ಬೆನ್ನೆಲ್ಲೇ ಆ ಕೆಫೆ ಮೇಲೆ ದಾಳಿ ನಡೆಸಿದ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಇಡೀ ಕೆಫೆಯಲ್ಲಿ ದಾಂದಲೆ ಎಬ್ಬಿಸಿದರು. ಕೇರಳದಲ್ಲಿ ನೈತಿಕ ಪೊಲೀಸರ ಅಟ್ಟಹಾಸದಿಂದ ರೋಸಿ ಹೋಗಿದ್ದ ಕೆಲವರು ಸಾರ್ವಜನಿಕವಾಗಿ ಪ್ರೀತಿಪಾತ್ರರಿಗೆ ಮುತ್ತಿಕ್ಕುವ ಮೂಲಕ ನೈತಿಕ ಪೊಲೀಸ್‌ಗಿರಿಯನ್ನು ಖಂಡಿಸಲು ನಿರ್ಧರಿಸಿದರು. ಸುಪ್ರೀಂ ಕೋರ್ಟ್ ಏನು ಹೇಳುತ್ತದೆ? ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಅಶ್ಲೀಲವಾಗಿ ವರ್ತಿಸಿದೆ ಅದು ಶಿಕ್ಷಾರ್ಹ ಅಪರಾಧ. ಅಂಥವರಿಗೆ 3 ತಿಂಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294(ಎ) ಹೇಳುತ್ತದೆ. ಆದರೆ ಇಲ್ಲಿ 'ಅಶ್ಲೀಲ' ಎಂಬ ಪದದ ಅರ್ಥವನ್ನು ವಿವರಿಸಲಾಗಿಲ್ಲ. ಇದೇ ವೇಳೆ ಸಾರ್ವಜನಿಕವಾಗಿ ಮುತ್ತು ಕೊಡುವುದು ಮತ್ತು ಆಲಿಂಗನ ಮಾಡುವುದು 'ಅಶ್ಲೀಲ'ವಲ್ಲ ಎಂದು ಸುಪ್ರೀಂ ಕೋರ್ಟ್ ಹಾಗೂ ದೆಹಲಿ ಹೈಕೋರ್ಟ್ ಹೇಳಿದೆ. ಇಬ್ಬರು ವ್ಯಕ್ತಿಗಳು ಪರಸ್ಪರ ಒಪ್ಪಿಗೆಯಿಂದ ಸಾರ್ವಜನಿಕವಾಗಿ ಮುತ್ತಿಕ್ಕುವುದು, ಅಪ್ಪಿಕೊಳ್ಳುವುದು ಮಾಡಿದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ ಎಂದೂ ಹೇಳಿದೆ.