ಸೂಪರ್‌ಸ್ಟಾರ್‌ನ ಆತ್ಮಕಥೆ: ಅಪೂರ್ವ ರಾಗಂಗಳ್ ಮಾರ್ಚ್ 27 1975 ಬಿ.ಎಸ್. ಲೋಕನಾಥ್.. ಮಾರ್ಚ್ 27 1975 ಬಿ.ಎಸ್. ಲೋಕನಾಥ್ ಅವರ ಕ್ಯಾಮರಾ ಮುಚ್ಚಿದ್ದ ಗೇಟನ್ನು ಚಿತ್ರೀಕರಿಸುವುದರಲ್ಲಿ ಮಗ್ನವಾಗಿದೆ. ಕೆದರಿದ ತಲೆ, ಗಡ್ಡದೊಡನೆ, ಕೆಟ್ಟ ಬಿಗಿಯಾದ ಉಡುಪು ಧರಿಸಿದ ರಜನಿಕಾಂತ್ ಆ ಗೇಟನ್ನು ತಳ್ಳಿ ದಾಪುಗಾಲು ಹಾಕುವಾಗ ಫ್ರೇಮ್ ಸ್ಥಬ್ಧವಾಗುತ್ತದೆ. ತೆರೆಯ ಮೇಲೆ ತಮಿಳಿನಲ್ಲಿ 'ಶೃತಿ ಬೇಧಂ' (ಶೃತಿಯಲ್ಲಿ ಬದಲಾವಣೆ) ಎನ್ನುವ ಸಾಲು ಬರುತ್ತದೆ. ಹಲವು ಕಡೆಗಳಲ್ಲಿ ಹೇಳಿರುವಂತೆ ಭವಿಷ್ಯದ ಸೂಪರ್‌ಸ್ಟಾರ್‌ನ ಮೊದಲ ದೃಶ್ಯ ಮೊದಲ ಬಾರಿಗೆ ಓಕೆ ಆಗಿರಲಿಲ್ಲ. ಆ ಗೇಟಿನ ದೃಶ್ಯವನ್ನು ಐದಾರು ಸಲ ಚಿತ್ರೀಕರಿಸಲಾಯಿತು, ಎಂದು ಸತ್ಯನಾರಾಯಣ ನೆನೆಪಿಸಿಕೊಳ್ಳುತ್ತಾರೆ. 'ಅದು ಅದ್ಭುತವಾಗಿತ್ತು, ಅಲ್ಲಿ ನೆರೆದಿದ್ದ ಜನರೂ ಸಹ ಈ ಹೊಸ ಹುಡುಗನಲ್ಲಿ ಹೊಸದಾದ ಸ್ಟೈಲ್ ಇದೆಯೆಂದು ಉದ್ಘರಿಸಿದ್ದರು' ಎಂದು ಹೇಳುತ್ತಾರೆ. ಶೂಟಿಂಗ್‌ನ ಆರಂಭಿಕ ದಿನಗಳಲ್ಲಿ ಕಷ್ಟಪಡುತ್ತಿದ್ದ ರಜನಿಗೆ ಬಾಲಚಂದರ್ ಸದಾ ಹೇಳಿಕೊಡುತ್ತಿದ್ದರು. ಆಗ ಹಾಸ್ಯನಟರಾಗಿ ಅಭಿನಯಿಸುತ್ತಿದ್ದ ನಾಗೇಶ್ ರಜನಿಯನ್ನು ಕರೆದು ಬಾಲಚಂದರ್ ಹೇಳಿಕೊಡುವ ಹಾಗೆ ಮಾಡಿದರೆ ಸಾಕೆಂದೂ, ತಾನೂ ಅವರು ಹೇಳಿಕೊಡುವುದನ್ನೇ ಮಾಡುತ್ತಿರುವುದಾಗಿ ತಿಳಿಸಿದರು. 'ಅದರ ಬಳಿಕ ನನಗೆ ಎಲ್ಲವೂ ಸುಲಭವಾಯಿತು. ನಾಗೇಶ್ ಅವರ ಹಾಸ್ಯ ನೋಡಿದಾಗ ಅದರಲ್ಲಿ ಬಾಲಚಂದರ್ ಅವರ ಹಾಸ್ಯ ಕಾಣುತ್ತದೆ. ನಾಗೇಶ್ ಬಾಲಚಂದರ್ ಅವರ ಮೊದಲ ಶಿಷ್ಯ' ಎಂದು ರಜನಿ ನೆನೆಸಿಕೊಳ್ಳುತ್ತಾರೆ. 1975ರಲ್ಲಿ ಬಿಡುಗಡೆಯಾದ 'ಅಪೂರ್ವ ರಾಗಂಗಳ್‌' ಚಿತ್ರದಲ್ಲಿ ಕಮಲಹಾಸನ್, ಮೇಜರ್ ಸುಂದರರಾಜನ್, ಶ್ರೀವಿದ್ಯಾ, ಜಯಸುಧಾ ಮತ್ತು ನಾಗೇಶ್ ಅಭಿನಯಿಸಿದ್ದಾರೆ. ಗೌರವಪೂರ್ವಕವಾಗಿ ಅಭಿನಯಿಸಿದ ಕವಿನರ್ ಕಣ್ಣದಾಸನ್, ಮಕ್ಕಳ್ ಕಲೈನರ್ ಜೈಶಂಕರ್ ಮತ್ತು ಮದರಾಸಿನ ಯುನೈಟೆಡ್ ಅಮೆಚೂರ್ ಆರ್ಟಿಸ್ಟ್ ಹೆಸರುಗಳು ಚಿತ್ರ ಆರಂಭವಾಗುವ ಮುನ್ನ ತೋರಿಸಲಾಗಿದೆ. ರಜನಿಕಾಂತ್ ಹೆಸರನ್ನು ಮುಖ್ಯ ಕಲಾವಿದರ ಹೆಸರುಗಳ ಬಳಿಕ ದೊಡ್ಡ ಅಕ್ಷರಗಳಲ್ಲಿ ಇತರೆ ಪೋಷಕ ಪಾತ್ರಗಳಿಗಿಂತಲೂ ವಿಶಿಷ್ಟ ಹಾಗೂವಿಭಿನ್ನವಾಗಿ ತೋರಿಸಲಾಯಿತು. 'ಅಪೂರ್ವ ರಾಗಂಗಳ್‌' ಎಲ್ಲಾ ರೀತಿಯಲ್ಲೂ ವಿಭಿನ್ನ ಚಿತ್ರ. ಎರಡು ತಲೆಮಾರುಗಳ ನಡುವಿನ ರೋಮ್ಯಾಂಟಿಕ್ ಪ್ರೀತಿಯನ್ನು ತೋರಿಸುವುದು ಮಾತ್ರವಲ್ಲ, ನಿಷಿದ್ಧ ಸಂಬಂಧವನ್ನೂ ತೋರಿಸುತ್ತದೆ. ಸಂಬಂಧಗಳ ಮಾದರಿಯೂ ಇಲ್ಲಿ ಬಹಳ ಸಂಕೀರ್ಣವಾಗಿದೆ. ಆ ಕಾಲಕ್ಕೆ ಇಂಥಾ ಕಥಾವಸ್ತು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಐವತ್ತರ ಪ್ರಾಯದ ಮಹೇಂದ್ರನ್ (ಮೇಜರ್ ಸುಂದರರಾಜನ್) ಇಪ್ಪತ್ತರ ಪ್ರಾಯದ ಮಗ ಪ್ರಸನ್ನ (ಕಮಲಹಾಸನ್)ನೊಡನೆ ಅಂಥಾ ಹೇಳಿಕೊಳ್ಳುವಂತಾ ಸಂಬಂಧವನ್ನು ಹೊಂದಿರುವುದಿಲ್ಲ. ಮಹೇಂದ್ರನ್ ಉತ್ಸಾಹದ ಚಿಲುಮೆಯಾದ ರಂಜಿನಿಯನ್ನು (ಜಯಸುಧಾ) ಭೇಟಿಆಗುತ್ತಾನೆ. ಅವರ ಭೇಟಿ ಸ್ನೇಹಕ್ಕೆ ತಿರುಗಿ ಇಬ್ಬರೂ ಬಹಳ ಆತ್ಮೀಯವಾಗುತ್ತಾರೆ. ಈ ನಡುವೆ ಪ್ರಸನ್ನ ಪ್ರಖ್ಯಾತ ಶಾಸ್ತ್ರೀಯ ಗಾಯಕಿ ಭೈರವಿ (ಶ್ರೀವಿದ್ಯಾ) ಯ ಮನೆಯ ಮುಂದೆ ಜಗಳದಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಳ್ಳುತ್ತಾನೆ. ಭೈರವಿ ಪ್ರಸನ್ನನ ತನ್ನ ಮನೆಯಲ್ಲೇ ಶುಶ್ರೂಷೆ ಮಾಡುತ್ತಾಳೆ. ಆ ಸಮಯದಲ್ಲಿ ಇಬ್ಬರೂ ಬಹಳ ಹತ್ತಿರವಾಗುತ್ತಾರೆ. ಸಂಪ್ರದಾಯವಾದಿ ನೋಟದಲ್ಲಿ ನೋಡಿದಾಗ ಈ ಎರಡೂ ಸಂಬಂಧಗಳು - ಹದಿಹರೆಯದ ಹುಡುಗಿ ರಂಜಿನಿ ತನ್ನ ತಂದೆಯ ವಯಸ್ಸಿನ ಮಹೇಂದ್ರನ್‌ನನ್ನು ಪ್ರಣಯಿಸುವುದು ಮತ್ತು ಹದಿಹರೆಯದ ಹುಡುಗ ಪ್ರಸನ್ನ ತನ್ನ ತಾಯಿಯ ವಯಸ್ಸಿನ ಭೈರವಿಯನ್ನು ಮೋಹಿಸುವುದು ಆ ಕಾಲಕ್ಕೆ ದಿಟ್ಟ ಹೆಜ್ಜೆಯಾಗಿತ್ತು. ಇದು ಸಾಲದೆಂಬಂತೆ ಪ್ರಸನ್ನ ಮತ್ತು ಭೈರವಿಯ ಸಂಬಂಧವನ್ನು ಕಾಮಪ್ರಚೋದಕವಾಗಿ ಸಂಯೋಜಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಮಹೇಂದ್ರನ್ ರಂಜಿನಿಯನ್ನು ಮಗಳ ಹಾಗೆ ಕಂಡರೂ, ರಂಜಿನಿ ಆತನನ್ನು ಪ್ರೀತಿಸುತ್ತ ಇರುವುದಾಗಿ ಒಪ್ಪಿಕೊಳ್ಳುತ್ತಾಳೆ. ಈ ಸಂಬಂಧಗಳು ಮನಸ್ಸಿಗೆ ನಾಟುವುದು ರಂಜಿನಿ ಭೈರವಿಯ ಮಗಳು ಎನ್ನುವುದು ತಿಳಿದಾಗ. ಇದರಿಂದ ಒಂದು ಪ್ರಶ್ನೆ ಮೇಲೇಳುತ್ತದೆ: ಒಂದು ವೇಳೆ ರಂಜಿನಿ ಮಹೇಂದ್ರನ್‌ನನ್ನು ಮದುವೆಯಾದರೆ, ಭೈರವಿಯನ್ನು ಪ್ರೀತಿಸುತ್ತಿರುವ ಪ್ರಸನ್ನ ಇದನ್ನು ಹೇಗೆ ಸ್ವೀಕರಿಸುತ್ತಾನೆ ಮತ್ತು ಅವರ ಸಂಬಂಧಗಳು ಯಾವ ರೂಪ ಪಡೆಯುತ್ತವೆ ಇಂಥಾ ಪ್ರಬಲವಾದ ಗೊಂದಲಕ್ಕೆ ಬಾಲಚಂದರ್ ವೈಮನಸ್ಯದಿಂದಾಗಿ ದೂರಾದ ಭೈರವಿಯ ಪತಿ ಪಾಂಡಿಯನ್ (ರಜನಿಕಾಂತ್) ಎನ್ನುವ ಪಾತ್ರವನ್ನೂ ಸೇರಿಸುತ್ತಾರೆ. ಯಾವುದೇ ಆಹ್ವಾನಇಲ್ಲದೆ ಗೇಟನ್ನು ತಳ್ಳಿ ಒಳನುಗ್ಗುವ ಪಾಂಡಿಯನ್ ಮಾತ್ರ ಚಿತ್ರದ 94ನೇ ನಿಮಿಷದಲ್ಲಿ ಬರುತ್ತದೆ. ಪಾಂಡಿಯನ್ ಭೈರವಿಯ ಎರಡು-ಅಂತಸ್ತಿನ ಮಹಲಿನ ಗೇಟನ್ನು ತಳ್ಳಿ ಒಳಬಂದಾಗ, ಪ್ರಸನ್ನ ಗೇಟಿಗೆ ಬೆನ್ನು ಹಾಕಿ ಬಾಲ್ಕನಿಯಲ್ಲಿ ನಿಂತು ಭೈರವಿಯ ಚಿತ್ರವಿರುವ ಕೀ ಚೈನ್ ಜೊತೆ ಆಟವಾಡುತ್ತಿರುತ್ತಾನೆ. ಆ ಕೀ ಚೈನ್ ನೆಲಕ್ಕೆ ಬೀಳುತ್ತದೆ. ಪಾಂಡಿಯನ್ ಅದರ ಬಳಿ ಬಂದು ನಿಲ್ಲುವುದಕ್ಕೂ ಅದು ಬೀಳುವುದಕ್ಕೂ ಸರಿ ಹೋಗುತ್ತದೆ. ಪ್ರಸನ್ನ ತಿರುಗಿ, ಅವನನ್ನು ಯಾರೆಂದು ಕೇಳುತ್ತಾನೆ. ವಿಚಿತ್ರವೆಂದರೆ ಮುಂದೆ ಹಲವಾರು ಪಂಚ್‌ಲೈನ್‌ಗಳನ್ನು ನೀಡುವ ನಾಯಕ ತನ್ನ ಮೊದಲ ಸಂಭಾಷಣೆಯನ್ನು ಕ್ಯಾಮರಾಕ್ಕೆ ಬೆನ್ನು ಹಾಕಿ ನೀಡುತ್ತಾನೆ. ಇದು ಭೈರವಿಯ ಮನೆಯೇ ಹೌದೆಂದು ಉತ್ತರಿಸಿದ ಪ್ರಸನ್ನ ಮತ್ತೆ ಅವನಾರೆಂದು ಕೇಳುತ್ತಾನೆ. ಈಗ ಕ್ಯಾಮರಾ ಪಾಂಡಿಯನ್ ಮುಖದ ಕಡೆಗೆ ಹೋಗುತ್ತದೆ. ಅಳುಕುತ್ತಲೇ, 'ನಾನು ಅವಳ ಗಂಡ' ಎಂದು ಹೇಳುತ್ತಾನೆ. ಮುಖದ ಮೇಲೆ ಒಂದು ಕ್ಷಣ ನಿಲ್ಲುವ ಕ್ಯಾಮರಾ ನಮಗೆ ಆತನ ಕಾಂತಿಹೀನ ಕಣ್ಣುಗಳ ಸುತ್ತಲೂ ಕಪ್ಪು ವರ್ತುಲಗಳಿರುವುದನ್ನು ಗಮನಕ್ಕೆ ತರುತ್ತದೆ. ಪ್ರಸನ್ನನಿಗೆ ಸಿಡಿಲೆರಗಿದಂತಾಗಿ ಕೆಳಗೆ ದೌಡಾಯಿಸುತ್ತಾನೆ. ಮೊದಲ ಬಾರಿಗೆ ಕಮಲಹಾಸನ್ ಮತ್ತು ರಜನಿಕಾಂತ್ ಕ್ಯಾಮರಾದ ಮುಂದೆ ಒಟ್ಟಿಗೆ ಎದುರುಬದರಾಗಿ ನಿಲ್ಲುತ್ತಾರೆ. ಪಾಂಡಿಯನ್ ತಾನು ನಿಜವಾಗಿಯೂ ಭೈರವಿಯ ಗಂಡ ಮತ್ತು ಅವಳ ಮಗಳ ತಂದೆ ಎಂದು ಹೇಳಿದಾಗ, ಅದನ್ನು ನಂಬದ ಪ್ರಸನ್ನ ಕೋಪದಲ್ಲಿ ಅವನ ಕತ್ತಿನ ಪಟ್ಟಿ ಹಿಡಿದು ಸುಳ್ಳು ಹೇಳಬೇಡ ಎಂದು ಎಚ್ಚರಿಸುತ್ತಾನೆ. ಅದರಿಂದ ವಿಚಲಿತನಾಗದ ಪಾಂಡಿಯನ್ ಒಳಗೆ ಹೋಗಿ ಭೈರವಿಯನ್ನೇ ಕೇಳುವ ಎನ್ನುತ್ತಾನೆ. 'ನಾನು ಇದನ್ನು ಸಾಬೀತುಪಡಿಸಲು ಸಾಧ್ಯವಿಲ್ಲ, ಆದರೆ ಅವಳು ಅದನ್ನು ಮರೆಯಲು ಸಾಧ್ಯವಿಲ್ಲ'. ತಲೈವರ್ (ದೊರೆ) ಹೇಳಿದ ಮೊದಲ ಪಂಚ್‌ಲೈನ್ ಪ್ರೇಕ್ಷಕರ ಮನದಲ್ಲಿ ನಿಲ್ಲುತ್ತದೆ. ಮೃದು ಧ್ವನಿಯಲ್ಲಿ, ಯಾವುದೇ ಅಬ್ಬರವಿಲ್ಲದೆ ಹೊರಬಂದ ಈ ಸಾಲು ಸಾಕಷ್ಟು ಪ್ರಬಲವಾಗಿತ್ತು. ಅವನ ಜೊತೆ ಮಾತನಾಡಬೇಕೆಂದು ಪ್ರಸನ್ನ ಪಾಂಡಿಯನ್‌ನನ್ನು ತನ್ನ ಬೈಕಿನ ಕಡೆಗೆ ಕರೆದೊಯ್ಯುತ್ತಾನೆ. ಒಳಗಿನಿಂದಲೇ ಆ ಗಲಾಟೆ ಏನೆಂದು ಕೇಳುವ ಭೈರವಿಗೆ ಪೂಜೆಯನ್ನು ಹಾಳುಮಾಡಲು ಬಂದಿರುವ ಕರಡಿಯೆಂದು ಹೇಳಿ, ಯಾರೋ ಭಿಕ್ಷುಕ ಎಂದು ಪ್ರಸನ್ನ ಹೇಳುತ್ತಾನೆ. ಪಾಂಡಿಯನ್‌ನನ್ನು ಬೈಕಿನಲ್ಲಿ ಕೂರಿಸಿಕೊಂಡು ಪ್ರಸನ್ನ ನಿರ್ಜನವಾದ ಪ್ರದೇಶಕ್ಕೆ ಹೋಗಿ ಅವನನ್ನು ಚೆನ್ನಾಗಿ ಥಳಿಸುತ್ತಾನೆ. ಭೈರವಿಯ ಆಸ್ತಿಗಾಗಿ ಆತ ಮರಳಿ ಬಂದಿರುವುದಾಗಿ ಆರೋಪಿಸಿದಾಗ, ಪಾಂಡಿಯನ್ ಅದನ್ನು ನಿರಾಕರಿಸುತ್ತಾನೆ. ಕ್ಯಾನ್ಸರಿನಿಂದ ಬಳಲುತ್ತಿರುವ ತಾನು, ಕೊನೆಯ ದಿನಗಳನ್ನೆಣಿಸುತ್ತಿರುವುದಾಗಿಯೂ, ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಬಂದಿರುವುದಾಗಿಯೂ ಹೇಳುತ್ತಾನೆ. ಆದರೆ ವಿಚಲಿತನಾಗದ ಪ್ರಸನ್ನ ತಾನು ಭೈರವಿಯನ್ನು ಮದುವೆಯಾಗುತ್ತಿರುವುದಾಗಿಯೂ, ಮತ್ತೆ ಆಕೆಯ ಜೀವನದಲ್ಲಿ ಬರಬಾರದೆಂದೂ ಹೇಳುತ್ತಾನೆ. ಭೈರವಿ ಸಂತೋಷವಾಗಿರುತ್ತಾಳೆಂದರೆ ತಾನು ಇಬ್ಬರ ಮಧ್ಯೆ ಬರುವುದಿಲ್ಲವೆಂದು ಪಾಂಡಿಯನ್ ಮಾತು ಕೊಡುತ್ತಾನೆ. ತನ್ನ ಗುರುತು ಸಾಬೀತು ಪಡಿಸಲೆಂದು ಆ ದಿನ ಭೈರವಿಯ ಹುಟ್ಟುಹಬ್ಬ ಎಂದು ಹೇಳುತ್ತಾನೆ. ಅಲ್ಲಿಂದ ಪ್ರಸನ್ನ ತೆರಳಿದ ಮೇಲೆ ಖಿನ್ನನಾಗಿ ಪಾಂಡಿಯನ್ ಬಂಡೆಯ ಮೇಲೆ ಬೀಳುತ್ತಾನೆ. ಮನೆಗೆ ಮರಳಿದ ಪ್ರಸನ್ನ ಭೈರವಿಗೇ ಹೂಗಳನ್ನು ನೀಡಿ ಹುಟ್ಟುಹಬ್ಬಕ್ಕೆ ಹಾರೈಸುತ್ತಾನೆ. ಮಾತ್ರವಲ್ಲ ತನ್ನೊಡನೆ ಅವಳು ಬಹಳ ಸಂತೋಷವಾಗಿರುವಲೆಂದು ಕೂಗಿ ಹೇಳುವಂತೆ ಮಾಡುತ್ತಾನೆ. ಮನೆಯ ಹೊರಗೆ ಮರೆಯಲ್ಲಿ ನಿಂತ ಪಾಂಡಿಯನ್ ಇದನ್ನು ಕೇಳಿ ಕೆಲವು ನಿಮಿಷಗಳ ಹಿಂದೆ ತಳ್ಳಿಕೊಂಡು ಒಳಬಂದ ಗೇಟನ್ನು ತಾನೇ ಮುಚ್ಚಿಕೊಂಡು ನಿಧಾನವಾಗಿ ಹೊರಗೆ ಹೋಗುತ್ತಾನೆ. ತನ್ನ ಸಾವಿನ ಬಳಿಕ ತಾನು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಪಟ್ಟಿರುವುದಾಗಿ ಭೈರವಿಗೆ ತಿಳಿಸಬೇಕೆಂದು ಪ್ರಸನ್ನನನ್ನು ಕೋರಿಕೊಳ್ಳುತ್ತಾನೆ. ಇದರಿಂದ ಮಿಡಿದ ಪ್ರಸನ್ನ 'ನೀನೊಬ್ಬ ಸಂಭಾವಿತ ಮನುಷ್ಯ' ಎಂದು ಹೇಳುತ್ತಾನೆ. ಮಾತ್ರವಲ್ಲ, ಅವನ ಚಿಕಿತ್ಸೆಗೂ ವ್ಯವಸ್ಥೆ ಮಾಡುತ್ತಾನೆ. ಕೆಲವು ದಿನಗಳ ಬಳಿಕ ಸಂಗೀತ ಕಚೇರಿಯೊಂದರಲ್ಲಿ ಶ್ರೋತೃಗಳ ಮಧ್ಯೆ ಪಾಂಡಿಯನ್‌ನನ್ನು ಭೈರವಿ ಕಾಣುತ್ತಾಳೆ. ಕಚೇರಿ ಮುಗಿದ ಬಳಿಕ ಆತನನ್ನು ಹುಡುಕಿಕೊಂಡು ಹೋದ ಆಕೆಗೆ ಕೈಯಲ್ಲಿ ಹೂಮಾಲೆ ಹಿಡಿದು, ಗೋಡೆಗೆ ಒರಗಿಕೊಂಡು ಮುಗುಳ್ನಗುತ್ತಿರುವ ಪಾಂಡಿಯನ್ ಕಣ್ಣಿಗೆ ಬೀಳುತ್ತಾನೆ. ಹಲವು ವರ್ಷಗಳ ಹಿಂದೆ ಅವನೊಡನೆ ಕಳೆದ ಮದುರ ಕ್ಷಣಗಳು ಅವಳ ಮನಸ್ಸಿನಲ್ಲಿ ಮೂಡುತ್ತವೆ. 'ಇನ್ನೂ ಏಕೆ ಹಿಂಜರಿಯುತ್ತಿರುವೆ? ಹಲವು ವರ್ಷಗಳ ಬಳಿಕವೂ ನನ್ನ ಕುತ್ತಿಗೆ ನಿನ್ನ ಈ ಹೂಮಾಲೆಗಾಗಿ ಕಾದಿದೆ' ಎನ್ನುತ್ತಾಳೆ. ಅವನ ಆರೋಗ್ಯ ವಿಚಾರಿಸುತ್ತಾಳೆ, ಅವನು ಉತ್ತರಿಸುವುದಿಲ್ಲ. ಮಾತನಾಡು ಎಂದು ಅವನ ಬಳಿ ಬಂದು ಮುಟ್ಟಿದಾಗ, ಅವನ ಕೈಯಿಂದ ಹೂಮಾಲೆ ಕೆಳಗೆ ಬೀಳುತ್ತದೆ. ಅವನ ಶರೀರ ಪಕ್ಕಕ್ಕೆ ವಾಲುತ್ತದೆ. ಇಲ್ಲಿ ರಜನಿ ಖಳನಾಯಕನಾಗಿ ಕಾಣಿಸುವುದಿಲ್ಲ. ಅವನು ಭೈರವಿಯನ್ನು ಗರ್ಭಿಣಿ ಮಾಡಿ ದೂರ ಸರಿದರೂ ಮರಳಿ ಬಂದಾಗ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿರುವುದು ಗೋಚರವಾಗುತ್ತದೆ. ಪತ್ನಿ ಪ್ರಸನ್ನನೊಡನೆ ಸಂತೋಷವಾಗಿರುವುದನ್ನು ಕಂಡು ದೂರ ಉಳಿಯುತ್ತಾನೆ. ಪ್ರಸನ್ನ ಹೊಡೆಯುವಾಗಲೂ ಮೌನವಾಗಿರುತ್ತಾನೆ, ಅಲ್ಲದೆ ಪ್ರಸನ್ನನೊಡನೆ ಭೈರವಿಯನ್ನು ಸೇರಿಸಲು ನೆರವಾಗುತ್ತಾನೆ. ಅವನ ಸಾವಿನ ಬಳಿಕ, ಭೈರವಿ ತನ್ನ ಕುಂಕುಮವನ್ನು ವಿಧವೆಯ ಹಾಗೆ ಅಳಿಸುತ್ತಾಳೆ. ಬಹುಶಃ ಚಿತ್ರದಲ್ಲಿ ಅನುಕಂಪ ಗಿಟ್ಟಿಸುವ ಪಾತ್ರ ಇದೇ ಇರಬಹುದು. ಒಂದು ರೀತಿಯಲ್ಲಿ ರಜನಿಕಾಂತ್ ಪ್ರವೇಶ ಖಳನಾಯಕನ ಪಾತ್ರದಲ್ಲಾಗಲಿಲ್ಲ ಎಂದೇ ಹೇಳಬಹುದು. 'ಅಪೂರ್ವ ರಾಗಂಗಳ್‌' ಚಿತ್ರೀಕರಣದ ನಂತರ ಬೆಂಗಳೂರಿಗೆ ಮರಳಿದ ರಜನಿ, ಚಿತ್ರ ಬಿಡುಗಡೆಯಾದ ಬಳಿಕ ಕಪಾಲಿ ಚಿತ್ರಮಂದಿರದಲ್ಲಿ ಗೆಳೆಯ ರಾಜ ಬಧಾರ್ ಜೊತೆಯಲ್ಲಿ ತಾನು ನಟಿಸಿದ ಚಿತ್ರವನ್ನು ನೋಡುತ್ತಾರೆ. 'ಹೊರಗೆ ಬಂದ ಬಳಿಕ, ಅವನು ಅಳತೊಡಗಿದ. ನಾನು ಕಾರಣ ಕೇಳಿದಾಗ, ಕೊನೆಗೂ ನಾನು ಬೆಳ್ಳಿತೆರೆಯ ಮೇಲೆ ಬಂದೆ. ಇದು ಸಂತೋಷದ ಕಣ್ಣೀರು' ಎಂದು ಹೇಳಿದ ಹೀಗೆಂದು ಬಧಾರ್ ನೆನೆಸಿಕೊಳ್ಳುತ್ತಾರೆ.(ಮುಂದುವರಿಯುವುದು) - ಚೈತ್ರಾ ಅರ್ಜುನಪುರಿ @. (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.