ಸೂಪರ್‌ಸ್ಟಾರ್‌ನ ಆತ್ಮಕಥೆ: ಶಿವಾಜಿ ರಜನಿಯಾದ ದಿನ ಗುರುವಾರವನ್ನು ಹಲವರು ಶುಭಕರ ಹಾಗೂ... ಗುರುವಾರವನ್ನು ಹಲವರು ಶುಭಕರ ಹಾಗೂ ಮಂಗಳಕರ ಎಂದು ಕರೆಯುತ್ತಾರೆ. ರಾಘವೇಂದ್ರರ ದಿನವಾದ ಈ ದಿನ ಶಿವಾಜಿಯ ಪ್ರಿಯವಾದ ದಿನ. ಆತನ ಜೀವನವನ್ನೇ ಬದಲಾಯಿಸಿದ ದಿನ. 'ಕ್ಯಾಮರಾದ ಮುಂದೆ ಶಿವಾಜಿ ಮೊದಲ ಬಾರಿಗೆ ನಿಂತದ್ದು ಇದೇ ಗುರುವಾರ. ಆದರೆ ಶಿವಾಜಿ ಎನ್ನುವ ಹೆಸರಿನೊಂದಿಗೆ ಚಿತ್ರರಂಗ ಪ್ರವೇಶ ಸಾಧ್ಯವಿರಲಿಲ್ಲ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಬ್ಬನೇ ಶಿವಾಜಿ, ಅದು ಶಿವಾಜಿ ಗಣೇಶನ್. ಸರಿ, ಮಾಡುವುದಿನ್ನೇನು? ಶಿವಾಜಿ ರಾವ್‌ಗೆ ಒಂದು ಹೊಸ ಹೆಸರಿಡಬೇಕಾಯಿತು. ಆಗ ಬಾಲಚಂದರ್ ನೆರವಿಗೆ ಬಂದಿದ್ದು ಅವರೇ ನಿರ್ದೇಶಿಸಿದ್ದ ಚಿತ್ರದ ಪಾತ್ರವೊಂದು' ಎಂದು ಲೇಖಕ ರಜನಿಯ ಹೆಸರಿನ ಗುಟ್ಟನ್ನು ಹೇಳುತ್ತಾರೆ. 'ಮೇಜರ್ ಚಂದ್ರಕಾಂತ್‌' ಎಂಬ ಚಿತ್ರದಲ್ಲಿ ಬರುವ ಪಾತ್ರದ ಹೆಸರನ್ನು ಶಿವಾಜಿ ರಾವ್‌ಗೆ ನೀಡುವುದೆಂದು ಬಾಲಚಂದರ್ ನಿರ್ಧರಿಸಿದ್ದರು. ಎವಿಎಂ ರಾಜನ್ 'ರಜನಿಕಾಂತ್‌' ಎನ್ನುವ ಪಾತ್ರವನ್ನು ಆ ಚಿತ್ರದಲ್ಲಿ ನಿರ್ವಹಿಸಿದ್ದರು. ಶಿವಾಜಿ ರಾವ್ ಹೀಗೆ ರಜನಿಕಾಂತ್ ಆದರು. ದಕ್ಷಿಣ ಭಾರತದ ಮನೆಮನೆಮಾತಾದರು. ರಜನಿಕಾಂತ್ ಪದದ ಅರ್ಥರಾತ್ರಿಯ ಬಣ್ಣ. ಅಂದರೆ ಅದು ಶಿವಾಜಿ ರಾವ್‌ನ ಬಣ್ಣದ ಬಗ್ಗೆ ನೀಡಿದ್ದ ವ್ಯಾಖ್ಯೆಆಗಿತ್ತು. ಸದಾ ಹೊಸತನ್ನು ಹುಡುಕುವ ಬಾಲಚಂದರ್ ಕಪ್ಪು ಬಣ್ಣದ ಶಿವಾಜಿ ರಾವ್‌ನನ್ನು ಆಯ್ಕೆ ಮಾಡಿಕೊಂಡು ತಮ್ಮ ಹೊಸತನದ ಗೀಳನ್ನು ಮುಂದುವರೆಸಿದರು. ಆ ದಿನಗಳಲ್ಲಿ ಯಾವುದೇ ನಿರ್ದೇಶಕ ಯಾವುದೇ ಪಾತ್ರಕ್ಕಾದರೂ ಸರಿ ಕಪ್ಪು ಬಣ್ಣದ ಹುಡುಗರನ್ನು ಆಯ್ಕೆ ಮಾಡುತ್ತಿರಲಿಲ್ಲ. ಸಣ್ಣ ಪಾತ್ರವಾದರೂ ಸರಿ, ಕಪ್ಪು ಬಣ್ಣದ ಹುಡುಗ ಅದಕ್ಕೆ ಆಯ್ಕೆಯಾಗುತ್ತಿರಲಿಲ್ಲ. 'ನಾನು ಸಾಕಷ್ಟು ಕಪ್ಪಗಿದ್ದೇನೆ, ನನ್ನ ತಂದೆ ನನಗಿಂತಲೂ ಕಪ್ಪಗಿದ್ದರು. ಹೊಸ ಪಾತ್ರಕ್ಕೆ ನಾನೇಕೆ ಒಬ್ಬ ಕಪ್ಪು ಹುಡುಗನನ್ನು ಪರಿಚಯಿಸಬಾರದೆಂದುಕೊಂಡೆ. ಅದರಲ್ಲೂ ಒಬ್ಬ ಖಳನಾಯಕನಾಗಿ... ಅದು ಯಶಸ್ವಿಯಾಯಿತು, ಬಹಳ ಯಶಸ್ವಿಯಾಯಿತು' ಎಂದು ಬಾಲಚಂದರ್ ನೆನೆಸಿಕೊಳ್ಳುತ್ತಾರೆ. ಹುಣ್ಣಿಮೆಯ ದಿನ, ಹೋಳಿ ಹಬ್ಬದ ಆಚರಣೆಯಲ್ಲಿ ಬಣ್ಣಗಳೊಂದಿಗೆ ಜನರೆಲ್ಲಾ ಆಡುತ್ತಿದ್ದರೆ, ಬಾಲಚಂದರ್ ಶಿವಾಜಿ ರಾವ್ ಎನ್ನುವ ಹುಡುಗನನ್ನು 'ರಜನಿಕಾಂತ್‌' ಎಂದು ನಾಮಕರಣ ಮಾಡಿ ಹೊಸ ಜನ್ಮ ನೀಡಿದರು. ಇಬ್ಬರೂ ಆ ದಿನವನ್ನು ಬಹಳ ಪ್ರೀತಿಯಿಂದ ನೆನೆಸಿಕೊಳ್ಳುತ್ತಾರೆ. ಎಂಟು ವರ್ಷಗಳವರೆಗೆ ಪ್ರತಿ ವರ್ಷವೂ ಹೋಳಿ ಹಬ್ಬದ ದಿನ ರಜನಿ ತಮಗೆ ಹೊಸ ತಿರುವು ನೀಡಿದ ನಿರ್ದೇಶಕ ಬಾಲಚಂದರ್ ಅವರನ್ನು ಭೇಟಿ ಮಾಡುವುದು ಅಥವಾ ಕರೆ ಮಾಡುವುದನ್ನು ರೂಢಿಸಿಕೊಂಡಿದ್ದರು ಎಂದು ಲೇಖಕ ಬರೆಯುತ್ತಾರೆ. ನಂತರದ ವರ್ಷಗಳಲ್ಲಿ ಕೆಲಸ ಕಾರ್ಯದಿಂದಾಗಿ ಇದು ಕಡಿಮೆಯಾಗಿದ್ದರ ಬಗ್ಗೆ ರಜನಿಗೆ ವಿಷಾದವಿದೆ. ಆದರೆ 'ಆ ಅದ್ಭುತವಾದ ದಿನವನ್ನು ನಾನೆಂದೂ ಮರೆಯುವುದಿಲ್ಲ' ಎಂದು ರಜನಿ ಆಗಾಗ ನೆನೆಸಿಕೊಳ್ಳುತ್ತಿರುತ್ತಾರೆ. ಪುಸ್ತಕದ ಕೊನೆಯ ಪುಟಗಳಲ್ಲಿ ಲೇಖಕ ರಜನಿ ಅಭಿನಯಿಸಿರುವ ಎಲ್ಲಾ ಚಿತ್ರಗಳು, ಚಿತ್ರದ ನಿರ್ದೇಶಕರು ಮತ್ತು ಸಹ ನಟ-ನಟಿಯರ, ಚಿತ್ರ ಬಿಡುಗಡೆಯಾದ ವರ್ಷ, ಗೆದ್ದ ಪ್ರಶಸ್ತಿಗಳ ವಿವರಗಳನ್ನು ಕೊಡಲು ಮರೆಯುವುದಿಲ್ಲ. ವಿಕಿಪೀಡಿಯ ಶೈಲಿಯ ಚಿತ್ರದ ಕಥೆಗಳು, ನಿರ್ದೇಶಕರು ಮತ್ತು ಅವರೊಂದಿಗೆ ಕೆಲಸ ಮಾಡಿದ ನಟ-ನಟಿಯರಿಂದ ಪಡೆದ, ಹಲವು ಬಾರಿ ಈಗಾಗಲೇ ಉಲ್ಲೇಖಿಸಿದ ಜನಪ್ರಿಯ ಭಾಷಣಗಳು ಎಲ್ಲಾ ಸೇರಿ ಇದೊಂದು ರಜನಿಯ ಚಿತ್ರಗಳ ಬಗೆಗಿನ ಪುಸ್ತಕವೇನೋ ಎನ್ನುವ ಭಾಸ ಮೂಡಿಸುತ್ತವೆ. ಆದರೆ ತಮಿಳು ಚಿತ್ರ ಕಥೆಗಳು ವಿವಿಧ ಸಂಸ್ಕೃತಿಗಳಲ್ಲಿ, ರಾಷ್ಟ್ರಗಳಲ್ಲಿ, ಭಾಷೆಗಳಲ್ಲಿ, ಐತಿಹಾಸಿಕವಾಗಿ ಮರು ಅಳವಡಿಸಿಕೊಂಡ ಬಗ್ಗೆ ಬಹಳಷ್ಟು ಒಳನೋಟ ನೀಡುತ್ತದೆ. ಕುಡಿತದ ಕೆಡುಕು 'ಅಪೂರ್ವ ರಾಗಂಗಳ್‌' ಬಳಿಕ ಇನ್ನೂ ಮೂರು ಚಿತ್ರಗಳಲ್ಲಿ ಬಾಲಚಂದರ್ ರಜನಿಯನ್ನು ತಮ್ಮ ಚಿತ್ರಗಳಿಗೆ ಆಯ್ಕೆ ಮಾಡಿಕೊಂಡರು. ನಡುನಡುವೆ ಆಗಾಗ ಕನ್ನಡ ಚಿತ್ರಗಳಲ್ಲಿಯೂ ನಟಿಸುವ ಅವಕಾಶಗಳು ಬಂದವು. ಒಮ್ಮೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಮುಗಿದು ರಾತ್ರಿ ಎಂಟು ಗಂಟೆಗೆ ತನ್ನ ರೂಮಿಗೆ ಹೋದ ರಜನಿ ಕುಡಿಯುತ್ತಾ ಕುಳಿತರು. ಹತ್ತು ಗಂಟೆಗೆ ಬಾಲಚಂದರ್ ಅವರ ಸಹ ನಿರ್ದೇಶಕರಾದ ಅಮೀರ್‌ಖಾನ್ ಅವರು ಬಂದು ಆ ದಿನ ಶೂಟಿಂಗ್ ಆಗಬೇಕಿದ್ದ ಒಂದು ಸೀನ್ ಈಗಲೇ ಶೂಟಿಂಗ್ ಆಗಬೇಕೆಂದೂ, ನಿರ್ದೇಶಕರು ತಕ್ಷಣವೇ ಸ್ಪಾಟ್‌ಗೆ ಬರಬೇಕೆಂದು ಹೇಳಿರುವರೆಂದೂ ತಿಳಿಸಿದರು. ಇದನ್ನು ಕೇಳಿ ಕುಡಿದ ಅಮಲಿನಲ್ಲಿದ್ದ ರಜನಿ ಒಂದು ಕ್ಷಣ ಕಂಪಿಸಿಹೋದರು. ತಕ್ಷಣವೇ ಸ್ನಾನ ಮಾಡಿ, ಹಲ್ಲುಜ್ಜಿ, ಸುಗಂಧವನ್ನು ಪೂಸಿಕೊಂಡು ಸೆಟ್‌ಗೆ ತೆರಳಿದ ಆತ ಆದಷ್ಟು ಬಾಲಚಂದರ್ ಬಳಿ ಹೋಗದಂತೆ ಎಚ್ಚರ ವಹಿಸಿದರು. ಆದರೆ ನಿರ್ದೇಶಕರಿಗೆ ಆತ ಕುಡಿದಿರುವ ವಿಚಾರ ಅರಿವಾಯಿತು. ಶೂಟಿಂಗ್ ಮುಗಿದ ಬಳಿಕ ತನ್ನನ್ನು ಕಾಣಬೇಕೆಂದು ಅವರು ಹೇಳಿದಾಗಲಂತೂ ರಜನಿಗೆ ಆಕಾಶವೇ ತಲೆಯ ಮೇಲೆ ಕಳಚಿಬಿದ್ದಂತಾಯ್ತು. ಅಲ್ಲಿಗೆ ತೆರಳಿದ ರಜನಿಗೆ ಅವರು ನೇರವಾಗಿ ಹೇಳದೆ 'ನಾಗೇಶ್‌ಗೆ ಹೋಲಿಸಿದರೆ ಇರುವೆಗಿಂತಲೂ ನೀನು ಕಡಿಮೆ' ಎಂದು ಎಚ್ಚರಿಸಿದ ಅವರು ನಾಗೇಶ್ ಹೇಗೆ ತನ್ನ ಜೀವನವನ್ನು ಕುಡಿತಕ್ಕೆ ಸಿಲುಕಿ ಹಾಳುಮಾಡಿಕೊಂಡರೆಂಬುದನ್ನು ತಿಳಿಸಿದರು. ಮಾತ್ರವಲ್ಲ, 'ಮತ್ತೇನಾದರೂ ನೀನು ಶೂಟಿಂಗ್ ಸಮಯದಲ್ಲಿ ಕುಡಿಯುವುದನ್ನು ಕಂಡರೆ ಅಥವಾ ಕೇಳಿದರೆ ಬಂದು ಚಪ್ಪಲಿಯಲ್ಲಿ ಹೊಡೆಯುತ್ತೇನೆ' ಎಂದು ನನ್ನನ್ನು ಎಚ್ಚರಿಸಿದರು ಎಂದು ರಜನಿ ನೆನೆಸಿಕೊಳ್ಳುತ್ತಾರೆ. 'ಆಗಿನಿಂದ ಎಷ್ಟೇ ಚಳಿಯಿದ್ದರೂ, ನಾನು ಶೂಟಿಂಗ್‌ನಲ್ಲಿದ್ದಾಗ ಕುಡಿಯುವುದಿಲ್ಲ' ಎಂದು ರಜನಿ ಹೇಳುತ್ತಾರೆ. ಈ ನಡುವೆ ರಜನಿ ಹಾಲಿವುಡ್ ಚಿತ್ರದಲ್ಲೂ ನಟಿಸುತ್ತಾರೆ ಎನ್ನುವ ಲೇಖಕ 1988ರಲ್ಲಿ ಹೊರಬಂದ 'ಬ್ಲಡ್ ಸ್ಟೋನ್‌' ಚಿತ್ರದಲ್ಲಿ ರಜನಿ ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದನ್ನು ನೆನಪಿಸುತ್ತಾರೆ. ಬಾಲಿವುಡ್‌ನಲ್ಲೂ ಕಾಣಿಸಿಕೊಂಡ ರಜನಿಯ ಬಗ್ಗೆ 'ಹಮ್‌' ಚಿತ್ರದಲ್ಲಿ ನಟಿಸಿದ್ದ ನಾಯಕಿ ದೀಪಾ ಸಾಹಿ, ಆತ ದಕ್ಷಿಣದಲ್ಲಿ ದೊಡ್ಡ ನಟನೆಂಬುದೇ ನಮಗೆ ತಿಳಿದಿರಲಿಲ್ಲ ಎಂದು ನೆನೆಸಿಕೊಳ್ಳುತ್ತಾರೆ. 'ಶೂಟಿಂಗ್ ಮುಗಿದ ಬಳಿಕ ನಾವೆಲ್ಲಾ ಅಮಿತಾಬ್ ರೂಮಿನಲ್ಲಿ ಸೇರುತ್ತಿದ್ದೆವು. ರಜನಿ ನಮ್ಮ ಜೊತೆ ಬರುತ್ತಿರಲಿಲ್ಲ. ಆತ ತನ್ನ ಕೋಣೆಗೆ ಹೋಗಿ ಜಾನಿ ವಾಕರ್ ಬ್ಲೂ ಲೇಬಲ್ (ಪ್ರಪಂಚದ ದುಬಾರಿ ಸಂಯೋಜಿತ ಸ್ಕಾಚ್ ವಿಸ್ಕಿಗಳಲ್ಲೊಂದು) ಬಾಟಲಿ ತೆರೆದು ಒಂದೆರಡು ಪೆಗ್ ಕುಡಿದು ಮಿಕ್ಕಿದ್ದನ್ನು ಸೆಟ್ ಹುಡುಗರಿಗೆ ಕೊಟ್ಟುಬಿಡುತ್ತಿದ್ದ. ಮಾರನೆಯ ಸಾಯಂಕಾಲ ಮತ್ತೆ ಹೊಸ ಬಾಟಲಿ ತೆರೆಯುತ್ತಿದ್ದ. ಅದರಿಂದ ಆತನ ಶ್ರೀಮಂತಿಕೆ ಮಾತ್ರ ತಿಳಿಯುತ್ತಿರಲಿಲ್ಲ, ಆತನ ಉದಾರ ಮನೋಭಾವನೆಯೂ ತಿಳಿಯುತ್ತಿತ್ತು' ಎಂದು ಹೇಳುತ್ತಾರೆ. ಕಮಲ್ 'ದೊಡ್ಡ ಹೀರೋ' ಲೇಖಕ ಈ ಪುಸ್ತಕಕ್ಕಾಗಿ ಅತ್ಯಂತ ಜಾಗರೂಕತೆಯಿಂದ ಸಂಶೋಧನೆ ನಡೆಸಿರುವುದು ತಿಳಿಯುತ್ತದೆ. ಸೂಪರ್‌ಸ್ಟಾರ್‌ನ ವೈಯಕ್ತಿಕ ನೆನಪುಗಳ ಬಗ್ಗೆಯೂ ಆಸಕ್ತಿದಾಯಕ ಒಳನೋಟವನ್ನು ಈ ಪುಸ್ತಕ ಒದಗಿಸುತ್ತದೆ. ಮೊದಲಿಗೆ '1975ರಲ್ಲಿ ಕಮಲಹಾಸನ್ ಎಷ್ಟು ದೊಡ್ಡ ನಾಯಕನೆಂದು ಈಗಿನ ಜನರಿಗೆ ತಿಳಿದಿಲ್ಲ. ಆಗ ಇನ್ನೂ ದೊಡ್ಡ ನಟ ಆತ. ಆತನಂತೆ ಇಡೀ ದೇಶವನ್ನು ಅಲ್ಲಾಡಿಸಿದ ಇನ್ನೊಬ್ಬ ನಾಯಕ ಸಿಗಲಾರ. ನಾನು ಅದೇ ತಾನೇ ಚಿತ್ರರಂಗ ಪ್ರವೇಶಿಸಿದ್ದೆ. 'ಅಪೂರ್ವ ರಾಗಂಗಳ್‌' (1975), 'ಮೂನ್ದ್ರು ಮುಡಿಚ್ಚು' (1976) ಮತ್ತು 'ಅವರ್ಗಳ್‌' (1977) ನನ್ನ ಗುರು ಬಾಲಚಂದರ್ ಅವರ ಚಿತ್ರಗಳು. ಈ ಮೂರು ಚಿತ್ರಗಳಿಂದಾಗಿ ನಾನು ನಾಯಕನಾದೆ. ಅವುಗಳ ನಂತರ ಬಂದ ಚಿತ್ರಗಳಾದ '16 ವಯಥಿನಿಲೆ' (1977), 'ಆಡು ಪುಲಿ ಆಟಂ' (1977), 'ಇಳಮೈ ಊನ್ಜಲ್ ಆಡುಕಿರದು' (1978) ಮತ್ತು 'ಅವಳ್ ಅಪ್ಪಡಿತಾನ್‌' (1978) - ಬಹಳ ಯಶಸ್ವಿಯಾದವು. ಈ ಚಿತ್ರಗಳಿಗೆ ಕಮಲ್ ಒಂದು ವೇಳೆ ರಜನಿಯನ್ನು ಹಾಕಿಕೊಳ್ಳಬೇಡಿ ಎಂದಿದ್ದ್ದರೆ ನನ್ನನ್ನು ಯಾರೂ ಹಾಕಿಕೊಂಡು ಚಿತ್ರ ತೆಗೆಯುತ್ತಿರಲಿಲ್ಲ' ಎಂದು ರಜನಿಕಾಂತ್ ಈಗಲೂ ನೆನೆಸಿಕೊಳ್ಳುತ್ತಾರೆ. 'ನಾನು ದೊಡ್ಡ ನಟನಾದ ಮೇಲೆ ಒಂದು ದಿನ ಕಮಲ್ ನನ್ನನ್ನು ಕರೆದು, ನಿನಗೆ ನಿನ್ನದೇ ಆದ ಜಾಗ ಸಿಗುವುದು ನೀನೇ ನಟನಾಗಿ ಒಂಟಿಯಾಗಿ ಅಭಿನಯಿಸಿದಾಗ. ಇಲ್ಲದಿದ್ದರೆ ನೀನು ಬೆಳೆಯುವುದಿಲ್ಲ' ಎಂದು ತಿಳಿ ಹೇಳಿದರು ಎನ್ನುತ್ತಾರೆ ರಜನಿ. ಅದನ್ನು ಪಾಲಿಸಿದ ರಜನಿ ಬಳಿಕದ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದರು. ಆತ ದೊಡ್ಡ ನಟನಾದ ಬಳಿಕ ಮತ್ತೆ ಅವರನ್ನು ಕರೆದ ಕಮಲ್, 'ತಮಿಳು ಚಿತ್ರರಂಗದಲ್ಲಿ ನೀನು ಬಹಳ ಎಚ್ಚರವಾಗಿರಬೇಕು. ನಾನು ಬಾಲ್ಯದಿಂದಲೂ ಒಂದು ವಿಷಯವನ್ನು ಗಮನಿಸುತ್ತಾ ಬಂದಿದ್ದೇನೆ. ಎಂಜಿಆರ್ ಮತ್ತು ಶಿವಾಜಿಯವರ ನಡುವೆ ವೈಯಕ್ತಿಕವಾಗಿ ಯಾವುದೇ ಪೈಪೋಟಿಯಿಲ್ಲದಿದ್ದರೂ, ಚಿತ್ರರಂಗ ಅವರಿಬ್ಬರನ್ನೂ ಬೇರೆ ಮಾಡಿದೆ. ಅದರಿಂದ ಅವರ ಅಭಿಮಾನಿಗಳೂ ಬೇರೆಯಾಗಿದ್ದಾರೆ. ಅದು ನಮ್ಮಿಬ್ಬರ ನಡುವೆ ಆಗಬಾರದು. ನಾನು ಕೆಲಸ ಮಾಡುವ ನಿರ್ದೇಶಕರ ಜೊತೆ, ನಿರ್ಮಾಪಕರ ಜೊತೆ ನೀನೂ ಕೆಲಸ ಮಾಡಬೇಕು' ಎಂದು ಹೇಳಿದರು. 'ನಿಜವಾಗಿಯೂ ಕಮಲ್‌ಗೆ ಹೇಗೆ ಧನ್ಯವಾದ ಹೇಳಬೇಕೆನ್ನುವುದೇ ನನಗೆ ತಿಳಿಯುವುದಿಲ್ಲ' ಎಂದು ಹೇಳುವ ರಜನಿ, 'ಭಾರತೀಯ ಚಿತ್ರರಂಗದ ಮಮ್ಮೂಟ್ಟಿ, ಮೋಹನ್ ಲಾಲ್, ವೆಂಕಟೇಶ್, ಚಿರಂಜೀವಿ, ಅಮಿತಾಬ್ ಬಚ್ಚನ್ ಮತ್ತು ದಿಲೀಪ್ ಕುಮಾರ್ ನನ್ನನ್ನು ನೋಡಿ ಕಮಲ್ ಇರುವಂಥಾ ಚಿತ್ರರಂಗದಲ್ಲಿ ನಾನು ಹೇಗೆ ಹೆಸರು ಮಾಡಿದೆ ಎಂದು ಅಚ್ಚರಿ ಪಡುತ್ತಾರೆ. ಕಾರಣ ಸರಳ. ನಾನು ಕಮಲ್ ನಟನೆಯನ್ನು ನೋಡುತ್ತಾ ಬೆಳೆದವನು. ಅವರ ನಟನೆಯನ್ನು ಬಹಳ ಹತ್ತಿರದಿಂದ ನೋಡುವ ಭಾಗ್ಯ ನನಗೆ ದೊರೆಯಿತು. 'ಅವರ್ಗಳ್‌' ಚಿತ್ರೀಕರಣ ಸಮಯದಲ್ಲಿ ನಾನು ಹೊರಗೆ ಸಿಗರೇಟು ಸೇದುವುದನ್ನು ನೋಡಿ ಬಾಲಚಂದರ್ ನೀನು ಸಿಗರೇಟು ಸೇದಲು ಹೊರಗೆ ಹೋಗಿದ್ದೆಯಾ? ಕಮಲ್ ನಟಿಸುತ್ತಿದ್ದಾನೆ. ಅವನನ್ನು ನೋಡು, ಅವನಿಂದ ಕಲಿ. ಆಗಲೇ ನಿನ್ನ ನಟನೆ ಉತ್ತಮವಾಗುವುದು, ಎಂದು ತಿಳಿ ಹೇಳಿದರು. ಅದರ ಬಳಿಕ ಕಮಲ್ ನಟಿಸುವಾಗಲೆಲ್ಲಾ ಅಲ್ಲೇ ಕುಳಿತು ಅವರ ನಟನೆಯನ್ನು ನೋಡುತ್ತಿದ್ದೆ, ಕಲಿಯುತ್ತಿದ್ದೆ' ಎಂದು ನೆನೆಸಿಕೊಳ್ಳುತ್ತಾರೆ. ಕಮಲ್ ಕೂಡ ರಜನಿಯನ್ನು ಮುಕ್ತ ಕಂಠದಿಂದ ಹೊಗಳುತ್ತಾರೆ. 'ಯಾರು ನನ್ನನ್ನು ಅಷ್ಟು ಹೊಗಳುತ್ತಾರೆ? ನಮ್ಮ ಕಾಲದಲ್ಲಿ ನಮ್ ಹಾಗೆ ಬೇರೆ ಗೆಳೆಯರಿರಲಿಲ್ಲ. ಆತ ಕೇವಲ ನನ್ನನ್ನು ಹೊಗಳಿ ಸುಮ್ಮನಾಗಬಹುದಿತ್ತು. ಆದರೆ ಆತ ತನ್ನನ್ನು ನನಗಿಂತಲೂ ಕೆಳಗೆ ಇಟ್ಟು ಹೊಗಳಿದ್ದಾನೆ' ಎಂದು ಹೇಳುತ್ತಾರೆ. ಮನೆ ಕೊಳ್ಳುವಿಕೆ ಸದಾ ಹೊಟೇಲಿನಲ್ಲಿ ಉಳಿದುಕೊಳ್ಳುತ್ತಿದ್ದ ರಜನಿ ತನ್ನ ಗೆಳೆಯ ವಿಠಲ್ ಪ್ರಸಾದ್ ನೆರವಿನಿಂದ 'ಅನ್ನೈ ಒರು ಆಲಯಂ' ಚಿತ್ರೀಕರಣದ ಸಮಯದಲ್ಲಿ ಪೊಯೆಸ್ ಗಾರ್ಡನ್‌ನಲ್ಲಿ ಒಂದು ಮನೆಯಿರುವುದನ್ನು ತಿಳಿದುಕೊಳ್ಳುತ್ತಾರೆ. 'ಆ ಮನೆ ಮುಸ್ಲಿಂ ಮನೆತನದವರದಾಗಿತ್ತು. ಅದನ್ನು ಕಂಡ ರಜನಿ ಇಷ್ಟ ಪಟ್ಟು ಕೊಂಡುಕೊಂಡ. ಕೆಲವು ರಿಪೇರಿಗಳನ್ನು ಮಾಡಿ ಬೃಂದಾವನ ಎಂದು ಮನೆಗೆ ಹೆಸರಿಡಲಾಯಿತು. ಮನೆಯ ಗೃಹಪ್ರವೇಶ ಮಾಡಿದ ಮೇಲೆ ರಜನಿ ಅಲ್ಲಿಗೆ ವಾಸ ಮಾಡಲು ತೆರಳಿದ' ಎಂದು ಅಣ್ಣ ಸತ್ಯನಾರಾಯಣ ನೆನೆಸಿಕೊಳ್ಳುತ್ತಾರೆ. 'ಅದಕ್ಕೂ ಮುನ್ನ ಒಂದು ಸ್ಥಳವನ್ನು 1977ರಲ್ಲಿ ನಾನು ಕೊಂಡುಕೊಂಡಿದ್ದೆ' ಎಂದು ನೆನಪಿಸಿಕೊಳ್ಳುವ ರಜನಿಯ ತಂದೆ ಅವರಿಗೆ ಸದಾ ಮೊದಲು ಸ್ವಲ್ಪ ಜಾಗ ತೆಗೆದುಕೋ, ಕಷ್ಟದ ಸಮಯದಲ್ಲಿ ನಿನಗೆ ನೆರವಾಗುತ್ತದೆ ಎಂದು ಬುದ್ಧಿ ಹೇಳುತ್ತಿದ್ದರು. ಮೊದಲು ಮನೆ, ಆಮೇಲೆ ಕಾರು, ಬಳಿಕ ಮದುವೆ ಎಂದು ತಿಳಿ ಹೇಳುತ್ತಿದ್ದರು. 'ಆಗ ನನಗೆ ಒಂದು ಚಿತ್ರಕ್ಕೆ ಸಿಗುತ್ತಿದ್ದದ್ದು 15,000 ರೂಪಾಯಿ. ಸ್ಥಳದ ಬೆಲೆ 24 ಲಕ್ಷ. ಸ್ವಲ್ಪ ಅಡ್ವಾನ್ಸ್ ನೀಡಿ ಒಂದೂವರೆ ವರ್ಷದಲ್ಲಿ ಮಿಕ್ಕ ಹಣವನ್ನು ಸಂದಾಯ ಮಾಡುವುದಾಗಿ ಸಮಯ ತೆಗೆದುಕೊಂಡೆ. ಆ ಸಮಯದಲ್ಲಿ ವರ್ಷಕ್ಕೆ 18 ಚಿತ್ರಗಳನ್ನು ಮಾಡುತ್ತಿದ್ದೆ. ದಿನಕ್ಕೆ 22 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ನನಗೆ ಮಲಗಲು ಕೇವಲ ಎರಡು ಗಂಟೆ ದೊರೆಯುತ್ತಿತ್ತು. ಅದರಿಂದಾಗಿ ನರದೌರ್ಬಲ್ಯ ಕಾಣಿಸಿಕೊಂಡಿತು. ಮನೆ ಕೊಂಡ ಬಳಿಕ ಜಾಗ ತೋರಿಸಲು ನಾನು ಕರೆದ ಮೊದಲ ವ್ಯಕ್ತಿ ಬಾಲಚಂದರ್ ಸರ್‌' ಎಂದು ನೆನೆಸುತ್ತಾರೆ. ಲತಾ ಭೇಟಿ 'ತಿಳ್ಳು ಮುಳ್ಳು' (1981) ಚಿತ್ರೀಕರಣದ ಸಮಯದಲ್ಲಿ ಎತಿರಾಜ್ ಕಾಲೇಜಿನ ವಿದ್ಯಾರ್ಥಿನಿ ಲತಾ ರಂಗಾಚಾರಿ ತನ್ನ ಕಾಲೇಜಿನ ಪತ್ರಿಕೆಗಾಗಿ ರಜನಿಯ ಸಂದರ್ಶನ ಮಾಡಲು ಬಂದಳು. 'ಅವರ ಜೊತೆಯಲ್ಲಿದ್ದ ಸಮಯದಲ್ಲಿ ನನಗೆ ಒಬ್ಬ ದೊಡ್ಡ ನಟನ ಜೊತೆಯಿದ್ದೇನೆ ಅನಿಸಲಿಲ್ಲ. ಅವರ ಪರಿಚಯ ಹಲವು ವರ್ಷಗಳಿಂದ ನನಗಿದೆ ಎನಿಸುತ್ತಿತ್ತು' ಎಂದು ರಜನಿ ಪತ್ನಿ ಲತಾ ಈಗ ನೆನೆಸಿಕೊಳ್ಳುತ್ತಾರೆ. 'ಆಕೆಯನ್ನು ನೋಡಿದ ರಜನಿ ಆಕೆಯನ್ನು ಮೆಚ್ಚಿ ಮದುವೆಯಾಗುವಂತೆ ಕೇಳಿದ. ಅದಕ್ಕೆ ಆಕೆ ತನ್ನ ಪೋಷಕರನ್ನು ಕೇಳುವಂತೆ ಹೇಳಿದಳು' ಎಂದು ಸತ್ಯನಾರಾಯಣ ನೆನೆಸಿಕೊಳ್ಳುತ್ತಾರೆ. ಲತಾ ಅವರ ಪೋಷಕರು ಅಯ್ಯಂಗಾರಿ ಮನೆತನದವರು. ಜೊತೆಗೆ ಬೆಂಗಳೂರಿನವರು. ಮಲ್ಲೇಶ್ವರಂನಲ್ಲಿ ಅವರ ಮನೆಯಿತ್ತು. ಆಕೆಯ ಮನೆಯವರನ್ನು ಒಪ್ಪಿಸುವ ಜವಾಬ್ದಾರಿ ನಟ ವಯಿಜಿ ಮಹೇಂದ್ರನ್ ಅವರ ಮೇಲೆ ಬಿತ್ತು. ಮಹೇಂದ್ರನ್ ಅವರಿಗೆ ರಜನಿಯ ಒಡನಾಟ 'ಅಪೂರ್ವ ರಾಗಂಗಳ್‌' ಸಮಯದಿಂದಲೂ ಚೆನ್ನಾಗಿತ್ತು. ನಂತರದ ದಿನಗಳಲ್ಲಿ ಮಹೇಂದ್ರನ್ ಲತಾ ಅವರ ತಂಗಿ ಸುಧಾ ಅವರನ್ನು ಮದುವೆಆದರು. ಮನೆಯವರೆಲ್ಲ ಒಪ್ಪಿದ ಬಳಿಕ ಲತಾ ಅವರನ್ನು ಬಾಲಚಂದರ್ ಅವರ ಬಳಿಗೆ ಕರೆದೊಯ್ದ ರಜನಿಗೆ ಅವರು ಆಶೀರ್ವದಿಸುತ್ತಾರೆ: 'ಒಳ್ಳೆಯ ಹುಡುಗ, ಆದರೆ ಸ್ವಲ್ಪ ಮುಂಗೋಪಿ, ಅದರ ಬಗ್ಗೆ ಗಮನವಿರಲಿ'. 'ಗುರುವಾರ, ಫೆಬ್ರವರಿ 26, 1981ರಂದು ರಜನಿ ಮತ್ತು ಲತಾ ಮುಂಜಾನೆ 4.30ರ ಸಮಯದಲ್ಲಿ ತಿರುಪತಿಯಲ್ಲಿ ಮದುವೆಯಾದರು. ಮನೆಯವರು, ಹತ್ತಿರದವರಾದ ಕೇವಲ 15 ಜನರು ಅಲ್ಲಿ ಉಪಸ್ಥಿತರಿದ್ದರು. ಮದುವೆಯ ಬಳಿಕ ಬೆಂಗಳೂರಿಗೆ ಹೋಗಿ ತಂದೆ ರಾಣೋಜಿಯವರ ಆಶೀರ್ವಾದ ಪಡೆದರು. ಮಾರ್ಚ್ 14, 1981ರಂದು ಮದರಾಸಿನ ತಾಜ್ ಕೋರಮಂಡಲ್ ಹೊಟೇಲಿನಲ್ಲಿ ಗೆಳೆಯರಿಗಾಗಿ ರಿಸೆಪ್ಷನ್ ನೀಡಿದರು' ಎಂದು ಲೇಖಕ ತಿಳಿಸುತ್ತಾರೆ. ಬಳಿಕ ಕೆಲವೇ ವರ್ಷಗಳಲ್ಲಿ ಮಕ್ಕಳಾದ ಐಶ್ವರ್ಯ ಮತ್ತು ಸೌಂದರ್ಯ ಜನಿಸಿದರು. 'ಅಮ್ಮ ನಮ್ಮನ್ನು ಅಪ್ಪನ ಚಿತ್ರಗಳನ್ನು ನೋಡಲು ಬಿಡುತ್ತಿರಲಿಲ್ಲ. ನನಗೆ 11 ವರ್ಷವಾಗುವವರೆಗೂ ಅಪ್ಪ ಇಷ್ಟು ದೊಡ್ಡ ನಟ ಎನ್ನುವುದು ಗೊತ್ತಿರಲಿಲ್ಲ. ಮನೆಯಲ್ಲಿ ಅಪ್ಪ ಎಲ್ಲರ ಅಪ್ಪನ ಹಾಗೆಯೇ ಇರುತ್ತಿದ್ದರು. ತಾನೊಬ್ಬ ದೊಡ್ಡ ನಾಯಕನೆಂಬ ಭಾವನೆ ಬರುವ ಹಾಗೆ ಎಂದೂ ನಡೆದುಕೊಳ್ಳುತ್ತಿರಲಿಲ್ಲ' ಎಂದು ಐಶ್ವರ್ಯ ನೆನೆಸಿಕೊಳ್ಳುತ್ತಾರೆ. ಜಪಾನಿಯರ ಅಭಿಮಾನ ಜುನ್ ಎಡೋಕಿ ಎಂಬ ವಿಮರ್ಶಕನನ್ನು ಸಿಂಗಾಪೂರಿನಲ್ಲಿ ಭೇಟಿ ಮಾಡಿದ 'ಮುತ್ತು' (1995) ಚಿತ್ರ ನಿರ್ಮಿಸಿದ ಕವಿತಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಭರತನ್ ಕಂದಸ್ವಾಮಿಯವರಿಗೆ ಅಚ್ಚರಿಯೊಂದು ಕಾದಿರುತ್ತದೆ. ಅವರಿಂದ 'ಮುತ್ತು' ಚಿತ್ರದ ಡಿವಿಡಿ ಪಡೆದ ಎಡೋಕಿ ಟೋಕಿಯೋಗೆ ತೆರಳಿ ಚಿತ್ರವನ್ನು ಕಂಡು ಮೆಚ್ಚಿ ಅದನ್ನು ಜಪಾನಿನಲ್ಲಿ ಬಿಡುಗಡೆ ಮಾಡುವ ಹಂಬಲ ವ್ಯಕ್ತಪಡಿಸುತ್ತಾರೆ. ವಿತರಣಾ ಹಕ್ಕುಗಳನ್ನು ಪಡೆಯಬೇಕಾದ ಪ್ರಶ್ನೆ ಬಂದಾಗ, ಕಂದಸ್ವಾಮಿಯವರಿಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗುತ್ತದೆ. ಎಷ್ಟು ಹಣ ಕೇಳಬೇಕೆನ್ನುವ ಗೊಂದಲಕ್ಕೀಡಾದ ಅವರು ಟೋಕಿಯೋಗೆ ಕರೆ ಮಾಡಿ ಎಷ್ಟು ಹಣ ನೀಡುವಿರೆಂದು ಅವರನ್ನೇ ಕೇಳುತ್ತಾರೆ. ಅಲ್ಲಿಯೂ ಅವರು ಕಕ್ಕಾಬಿಕ್ಕಿಯಾಗುತ್ತಾರೆ. ಕಾರಣ ಅದುವರೆಗೂ ಅಲ್ಲಿ ಯಾವುದೇ ಭಾರತದ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಕೊನೆಗೆ ಇಬ್ಬರ ಕಡೆಯಿಂದಲೂ ಒಂದು ನಿರ್ಧಾರಕ್ಕೆ ಬರುವುದು ಸಾಧ್ಯವಾಗದಿದ್ದಾಗ, ಕಂದಸ್ವಾಮಿಯವರು ಗಟ್ಟಿ ಮನಸ್ಸು ಮಾಡಿ, 'ಒಂದು ಡಾಲರ್. ಬೆಲೆ ಒಂದು ಡಾಲರ್‌' ಎಂದು ಹೇಳುತ್ತಾರೆ. ಅದನ್ನು ಕೇಳಿ ನಾನು ಅವರನ್ನು ಪರಿಹಾಸ್ಯ ಮಾಡುತ್ತಿದ್ದೇನೆಂದುಕೊಂಡರು. ಆದರೆ 'ಮುತು'್ತ ಒಂದು ವೇಳೆ ಅಲ್ಲಿ ಯಶಸ್ವಿಯಾದರೆ ಮುಂದೆ ಬರುವ ಎಲ್ಲಾ ಭಾರತೀಯ ಚಿತ್ರಗಳನ್ನು ಕವಿತಾಲಯದ ಮೂಲಕ ಜಪಾನಿನ ವಿತರಣೆಗೆ ತೆಗೆದುಕೊಳ್ಳಬೇಕೆಂಬ ಕರಾರನ್ನು ಹಾಕಲಾಯಿತು. ಆರ್ಥಿಕ ಇಳಿತದಿಂದ ತತ್ತರಿಸಿದ್ದ ಜಪಾನಿನಲ್ಲಿ ಆಗ ಜನರು ಅಳೆದು ತೂಗಿ ಹಣವನ್ನು ಖರ್ಚು ಮಾಡುತ್ತಿದ್ದರು. ಅಂಥಾ ಸಮಯದಲ್ಲಿ 'ಮುತ್ತು' ಅಲ್ಲಿ ಬಿಡುಗಡೆಯಾಗಿತ್ತು. '1998ರಲ್ಲಿ ಜಪಾನಿನಲ್ಲಿ ಸಿನೆಮಾ ಟಿಕೆಟ್ ಬೆಲೆ 15 ಡಾಲರ್. ಅದು ಭಾರತೀಯ ಚಿತ್ರ ಎನ್ನುವ ಕಾರಣಕ್ಕಾಗಿ ಅದರ ಬೆಲೆ ಇಳಿಸುವುದಕ್ಕೆ ನಾನು ಸಮ್ಮತಿಸಲಿಲ್ಲ' ಎಂದು ಕಂದಸ್ವಾಮಿ ಹೇಳುತ್ತಾರೆ. ಎಲ್ಲರ ನಿರೀಕ್ಷೆಯನ್ನೂ ಮೀರಿ ಜನ ಮುಗಿಬಿದ್ದು ಅದನ್ನು ನೋಡಿದರು. ಅದರಲ್ಲಿ ಎಲ್ಲವೂ ಇತ್ತು. ನಟನೆ, ನೃತ್ಯ, ಸಂಗೀತ, ಪ್ರೀತಿ, ಪ್ರೇಮ, ಹೊಡೆದಾಟ, ಕಣ್ಣೀರು, ಎಲ್ಲವೂ. ಒಂದು ಮಿಲಿಯನ್‌ಗೂ ಹೆಚ್ಚು ಜಪಾನಿಯರು ಆ ಚಿತ್ರವನ್ನು ನೋಡಿದರು. 'ಸತತವಾಗಿ 23 ವಾರಗಳ ಪ್ರದರ್ಶನ ಕಂಡ 'ಮುತ್ತು' 1.7 ಮಿಲಿಯನ್ ಡಾಲರ್ ಹಣ ಬಾಚಿತು. ಮಾತ್ರವಲ್ಲ ಈ ಚಿತ್ರದ ಬಳಿಕ ಬಹಳಷ್ಟು ಜಪಾನಿಯರು ಸಲ್ವಾರ್ ಕಮೀಜ್ ಧರಿಸಲು ತೊಡಗಿದರು. ಮತ್ತೆ ಕೆಲವರು ಮಸಾಲೆ ದೋಸೆ ತಿನ್ನಲು ಪ್ರಾರಭಿಸಿದರು. ದೇಶದ ಎಲ್ಲಾ ಕಡೆಗಳಲ್ಲೂ ಬಾಲಿವುಡ್ ನೃತ್ಯ ಶಾಲೆಗಳು ತೆರೆಯಲ್ಪಟ್ಟವು. ಎಂದು ಲೇಖಕ ತಿಳಿಸುತ್ತಾರೆ.(ಮುಂದುವರಿಯುವುದು) - ಚೈತ್ರಾ ಅರ್ಜುನಪುರಿ @. (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.