ಸೂಪರ್‌ಸ್ಟಾರ್‌ನ ಆತ್ಮಕಥೆ: ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿದ್ದು ಬಧಾರ್ ಮತ್ತು ಇತರ ಗೆಳೆಯರು ಶಿವಾಜಿಗೆ.. ಬಧಾರ್ ಮತ್ತು ಇತರ ಗೆಳೆಯರು ಶಿವಾಜಿಗೆ ಅದೇ ತಾನೇ ಶುರುವಾಗಿದ್ದ ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್ ಸೇರುವಂತೆ ಸಲಹೆ ನೀಡಿದರು. ಮದರಾಸು ಆಗ ಚಲನಚಿತ್ರರಂಗದ ಅಧಿಕಕೇಂದ್ರವಾಗಿತ್ತು. ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗವಿದ್ದರೂ ಮದರಾಸು ಚಿತ್ರರಂಗದ ಸಾಗರ. ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿದರೆ ನಿರ್ದೇಶಕರು ಮತ್ತು ನಿರ್ಮಾಪಕರು ಶಿವಾಜಿಯ ನಟನಾ ಸಾಮರ್ಥ್ಯವನ್ನು ಕಂಡು ಅವನಿಗೆ ಅವಕಾಶ ಕೊಡುತ್ತಾರೆಂದು ಬಧಾರ್ ಗೆಳೆಯನನ್ನು ಪುಸಲಾಯಿಸಿದರು' ಎಂದು ಲೇಖಕ ಬರೆಯುತ್ತಾರೆ. ಆದರೆ ಎರಡು ವರ್ಷದ ಕೋರ್ಸನ್ನು ಪೂರೈಸಲು ಕೆಲಸವನ್ನೂ ಬಿಟ್ಟು ಹೋದರೆ ಮದರಾಸಿನಲ್ಲಿ ಬೇಕಾಗುವ ಹಣಕಾಸು ಖರ್ಚಿಗೆ ಏನು ಮಾಡುವುದೆಂದು ಶಿವಾಜಿ ಯೋಚಿಸುವಾಗ, ಎರಡೂ ವರ್ಷಕ್ಕೆ ಬೇಕಾಗುವ ಹಣದ ವ್ಯವಸ್ಥೆಯನ್ನೂ ತಾನು ನೋಡಿಕೊಳ್ಳುವುದಾಗಿ ಬಧಾರ್ ಧೈರ್ಯ ತುಂಬುತ್ತಾರೆ. 'ನನಗೆ ನಿನ್ನ ಮೇಲೆ, ನಿನ್ನ ನಟನಾ ಕೌಶಲ್ಯದ ಮೇಲೆ ಸಂಪೂರ್ಣ ನಂಬಿಕೆಯಿದೆ. ನೀನು ದೊಡ್ಡ ಕಲಾವಿದನಾಗುವೆ' ಎಂದು ಹುರಿದುಂಬಿಸಿದರು. ಆಗ ಶಿವಾಜಿಗೆ ತಮಿಳು ಚೂರುಪಾರು ಮಾತ್ರವೇ ತಿಳಿದಿತ್ತು. ಅಣ್ಣನಿಗೆ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರುವ ಬಗ್ಗೆ ಹೇಳಿದಾಗ, 'ನೀನು ಮನೆಯ ಬಗ್ಗೆ ಯೋಚಿಸಬೇಡ. ರಾಘವೇಂದ್ರರ ಕೃಪೆಯಿಂದ ಮುಂದೆ ನೀನೊಬ್ಬ ದೊಡ್ಡ ಕಲಾವಿದನಾಗುವೆ' ಎಂದು ಹೇಳಿ ಕಳುಹಿಸಿಕೊಡಲು ಸಮ್ಮತಿಸಿದರು. ಬೆಂಗಳೂರು ಸಾರಿಗೆ ಸೇವೆಯಿಂದ ಸಾಂದರ್ಭಿಕ ರಜೆ ಪಡೆದು ಫಿಲ್ಮ್ ಇನ್ಸ್ಟಿಟ್ಯೂಟ್ ಸೇರುವುದೆಂದು ನಿರ್ಧರಿಸಿದ ಶಿವಾಜಿಯ ಖರ್ಚಿಗೆ ಅಣ್ಣ ಸತ್ಯನಾರಾಯಣ ಮತ್ತು ಗೆಳೆಯ ಬಧಾರ್ ತಕ್ಕಷ್ಟು ಹಣ ಹೊಂದಿಸಿಕೊಟ್ಟರು. ಆದರೆ ಕಿರಿಯ ಮಗನ ಈ ನಿರ್ಧಾರ ತಂದೆ ರಾಣೋಜಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಬೆಂಗಳೂರು ಸಾರಿಗೆ ಸೇವೆಯಲ್ಲಿ ಮಗ ದೊಡ್ಡ ಹುದ್ದೆಗೇರಬೇಕು, ಮದುವೆಯಾಗಿ ಸಂಸಾರ ಹೂಡಬೇಕೆಂದು ಕನಸು ಕಟ್ಟಿಕೊಂಡಿದ್ದ ತಂದೆಯನ್ನು ಒಪ್ಪಿಸುವ ಮಹತ್ತರ ಜವಾಬ್ದಾರಿ ಸತ್ಯನಾರಾಯಣರ ಮೇಲಿತ್ತು. ಆತನ ಸಂಬಳದಿಂದ ಮನೆಗೆ ಸಹಾಯವಾಗುತ್ತಿದ್ದುದನ್ನು ತಂದೆ ಮರೆತಿರಲಿಲ್ಲ. 'ಮೂರು ಹೊತ್ತು ತಿನ್ನುವ ಬದಲು ಎರಡು ಹೊತ್ತು ತಿನ್ನುವ. ಅವನ ಕನಸು ನನಸು ಮಾಡಲು ನಮ್ಮ ಕೈಲಾದಷ್ಟು ಸಹಾಯ ಮಾಡುವ' ಎಂದು ತಂದೆಯನ್ನು ಒಪ್ಪಿಸಲಾಯಿತು. ಒಂದು ರೀತಿಯಲ್ಲಿ ಸತ್ಯನಾರಾಯಣ ತಮ್ಮನ ಮೂಲಕ ತಮ್ಮ ಆಸೆಯನ್ನು ಪೂರೈಸಿಕೊಳ್ಳುವ ಪ್ರಯತ್ನದಲ್ಲಿದ್ದರು ಎನ್ನುವ ಲೇಖಕ 'ಚಲನಚಿತ್ರದಲ್ಲಿ ಅತಿಯಾದ ಆಸಕ್ತಿಯಿದ್ದ ಅವರಿಗೆ ಸಂಸಾರದ ಜಂಜಾಟದಲ್ಲಿ ಏನೂ ಮಾಡಲಾಗಲಿಲ್ಲವೆನ್ನುವ ಕೊರಗು ಕಾಡುತ್ತಲೇ ಇತ್ತು. ಕನ್ನಡ, ತಮಿಳು ಚಿತ್ರಗಳಲ್ಲದೆ ಹಿಂದಿ ಚಿತ್ರಗಳನ್ನೂ ತಪ್ಪದೆ ನೋಡುತ್ತಿದ್ದರು' ಎಂದು ಬರೆಯುತ್ತಾರೆ. ಬಧಾರ್‌ಗೆ ಬರುತ್ತಿದ್ದ 400 ರೂಪಾಯಿ ಸಂಬಳದ ಜೊತೆಗೆ ಅವರ ಮನೆಯವರ ಬಳಿ 50 ಹಾಲು ಕರೆಯುವ ಹಸುಗಳಿದ್ದವು. 'ನಾನು ಬ್ರಹ್ಮಚಾರಿಯಾಗಿದ್ದೆ. ಸಂಸಾರದ ನೊಗ ನನ್ನ ಹೆಗಲ ಮೇಲಿರಲಿಲ್ಲ. ಮನೆಯಲ್ಲಿ ಯಾರೂ ನನ್ನ ಸಂಬಳವನ್ನು ಅವಲಂಭಿಸಿರಲಿಲ್ಲ' ಎಂದು ಹೇಳುವ ಬಧಾರ್ ಕಾಕತಾಳೀಯವೇನೋ ಎಂಬಂತೆ ಈಗಲೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ ಎಂದು ಹೇಳುವುದನ್ನು ಲೇಖಕ ಮರೆಯುವುದಿಲ್ಲ. ಮೊದಲಾರ್ಧದಲ್ಲಿ ಬರುವ ರಜನೀಕಾಂತ್ ಅವರ ಬಾಲ್ಯ ಚಲನಚಿತ್ರ ಪ್ರವೇಶ ಮತ್ತು ಆತ ನಟಿಸಿದ ಚಲನಚಿತ್ರಗಳ ಆರಂಭಿಕ ವರ್ಷಗಳ ಚರ್ಚೆ ಒಳಗೊಂಡಿದ್ದರೆ, ದ್ವಿತೀಯಾರ್ಧ ಮೇರು ನಟನ ವೃತ್ತಿ ಜೀವನವನ್ನು ಒಳಗೊಂಡಿದೆ. ಲೇಖಕ ಸಾಧ್ಯವಾದಷ್ಟು ವಸ್ತುನಿಷ್ಠವಾಗಿರುವ ಪ್ರಯತ್ನ ಮಾಡಿದ್ದಾರೆ. ಅದು ಸ್ಪಷ್ಟವಾಗಿ ಸುಲಭದ ಕೆಲಸವಲ್ಲ ಎಂಬುದು ಓದುಗರಿಗೂ ತಿಳಿದಿದೆ. ಬಾಲಚಂದರ್ ಭೇಟಿ ಮದರಾಸು ತಲುಪಿದ ಶಿವಾಜಿಗೆ ಉಳಿದುಕೊಳ್ಳಲು ಜಾಗ ಇರುವುದಿಲ್ಲ. ಆಗ ಆತನ ನೆರವಿಗೆ ಬಂದವರು ಇನ್ಸ್ಟಿಟ್ಯೂಟ್‌ನ ಕನ್ನಡ ವರ್ಗದಲ್ಲಿದ್ದ ರಘುನಂದನ್ ಮತ್ತು ರವೀಂದ್ರನಾಥ್. ಇಬ್ಬರೂ ಶಿವಾಜಿಯನ್ನು ತಮ್ಮ ರೂಮಿನಲ್ಲಿ ಉಳಿದುಕೊಳ್ಳಲು ಜಾಗ ಕೊಡುವುದು ಮಾತ್ರವಲ್ಲದೆ, ರಘುನಂದನ್ ಕೆಲಸ ಮಾಡುತ್ತಿದ್ದ ಹೊಟೇಲಿನಿಂದ ಶಿವಾಜಿ ಮತ್ತು ರವೀಂದ್ರನಾಥ್‌ಗಾಗಿ ಉಳಿದ ಚೂರುಪಾರು ಊಟವನ್ನು ತರುತ್ತಿದ್ದರು. ಇನ್ಸ್ಟಿಟ್ಯೂಟ್‌ನಲ್ಲಿ ನಟನೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನೂ ನೀಡಲಾಗುತ್ತಿತ್ತು. ಒಮ್ಮೆ ಅತಿಥಿ ಉಪನ್ಯಾಸಕರಾಗಿ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಆಗಮಿಸಿದರು. ನಟನೆಯ ಬಗ್ಗೆ ಅವರು ನೀಡಿದ ಎರಡು ಗಂಟೆಯ ಸುದೀರ್ಘ ಉಪನ್ಯಾಸ ಶಿವಾಜಿಯ ಮೇಲೆ ಬಹಳ ಮೋಡಿ ಮಾಡಿತು. 'ನೀವೆಲ್ಲಾ ನಿಮ್ಮ ಅಭ್ಯಾಸ ಮತ್ತು ತರಬೇತಿ ಪೂರೈಸಿದ್ದೀರಿ. ಆದರೆ ನೀವು ಮೇಲೆ ಬರುವುದು ನಿಮ್ಮ ಪ್ರತಿಭೆಯ ಮೇಲೆ ನಿಂತಿದೆ' ಎಂದು ಬಾಲಚಂದರ್ ಹೇಳಿದಾಗ ಶಿವಾಜಿ ಆ ನಿರ್ದೇಶಕನನ್ನು ವೃಯಕ್ತಿಕವಾಗಿ ಭೇಟಿ ಮಾಡುವ ಇಚ್ಚೆಯನ್ನು ತನ್ನ ಉಪನ್ಯಾಸಕರೊಬ್ಬರ ಬಳಿ ತೋಡಿಕೊಳ್ಳುತ್ತಾನೆ. ಶಿವಾಜಿಯನ್ನು ಭೇಟಿ ಮಾಡಿದ ಸಂದರ್ಭವನ್ನು ಬಾಲಚಂದರ್ ಸಹ ಆತ್ಮೀಯವಾಗಿ ನೆನಪಿಸಿಕೊಳ್ಳುತ್ತಾರೆ. 'ಅದೊಂದು ಹಳೆಯ ಕಥೆ. ಅವನು ಇನ್ಸ್ಟಿಟ್ಯೂಟ್‌ಗೆ ವಿದ್ಯಾರ್ಥಿಯಾಗಿ ಬಂದಿದ್ದ. ನನ್ನನ್ನು ಭೇಟಿ ಮಾಡಬೇಕೆಂದು ತನ್ನ ಉಪನ್ಯಾಸಕರೊಬ್ಬರ ಬಳಿ ಹೇಳಿದ್ದ. ಅವರು ನನ್ನ ಬಳಿ ಬಂದು ಹೀಗೊಬ್ಬ ಬಾಲಕ ನಿಮ್ಮನ್ನು ಭೇಟಿ ಮಾಡಬೇಕೆನ್ನುವ ಆಸೆಯಿಂದಿದ್ದಾನೆಂದು ಹೇಳಿದರು. ಪ್ರಾಯೋಗಿಕ ಪರೀಕ್ಷೆಗಾಗಿ ನಾನು ಒಂದು ದಿನ ಅಲ್ಲಿಗೆ ಹೋಗಿದ್ದೆ. ಅವನು ಕನ್ನಡದ ವರ್ಗದಲ್ಲಿದ್ದ. ನಾನು ಎಲ್ಲಾ ತಮಿಳು ಹುಡುಗರನ್ನೂ ಭೇಟಿಯಾಗಿದ್ದೆ' ಎಂದು ನೆನೆಸಿಕೊಳ್ಳುತ್ತಾರೆ. 'ಸರಿಯೆಂದು ನಾನು ಅವನನ್ನು ಭೇಟಿ ಮಾಡಿದೆ. ಏಕೋ ಏನೋ ಗೊತ್ತಿಲ್ಲ, ಅವನನ್ನು ನೋಡಿದ ಮೇಲೆ ಒಂದು ಕ್ಷಣ ರೋಮಾಂಚನವಾಯಿತು. ಅವನ ಕೃಶ ಶರೀರ, ಪ್ರಬಲ ಕಣ್ಣುಗಳು, ಕೆತ್ತಿ ರೂಪಿಸಿದಂಥಾ ಮುಖ ಕಂಡು ಪುಳಕಿತಗೊಂಡೆ. ಮೇಲಾಗಿ ಅವನ ಬಣ್ಣ ಕಪ್ಪು. ಆ ಕಪ್ಪು ಬಣ್ಣ ಅವನಿಗೆ ಲಾಭಕಾರಿ ಎನಿಸಿತು. ಏಕೆಂದರೆ ಅದು ಇತರರಿಗಿಂತಲೂ ಭಿನ್ನ. ಶ್ವೇತ ಮತ್ತು ಗೋಧಿ ಮೈಬಣ್ಣದವರಿಗೆ ಚಲನಚಿತ್ರಗಳಲ್ಲಿ ಅವಕಾಶಗಳು ಹೇರಳವಾಗಿ ದೊರೆಯುತ್ತವೆ. ನಾನೇಕೆ ಈ ಹುಡುಗನಿಗೆ ಒಂದು ಅವಕಾಶ ಕೊಟ್ಟು ನೋಡಬಾರದೆನಿಸಿತು' ಎಂದು ಬಾಲಚಂದರ್ ಹೇಳುತ್ತಾರೆ. ಆ ಸಮಯದಲ್ಲಿ ಬಾಲಚಂದರ್ 'ಅಪೂರ್ವ ರಾಗಂಗಳ್‌' ಚಿತ್ರದ ಹಸ್ತಪ್ರತಿ ತಯಾರಿಸಿದ್ದರು. 'ಇದರಲ್ಲಿ ನಿನಗೊಂದು ಚಿಕ್ಕ, ಆದರೆ ಗಮನ ಸೆಳೆಯುವ ಪಾತ್ರವೊಂದಿದೆ. ನಾನು ನಿರ್ಧರಿಸಿದ್ದೇನೆ. ಆದರೆ ಇದಕ್ಕಾಗಿ ನೀನು ತಮಿಳು ಕಲಿಯಬೇಕು' ಎಂದು ಶಿವಾಜಿಗೆ ಹೇಳಿದಾಗ ತಕ್ಷಣವೇ ಒಪ್ಪಿ ಅವರ ಕಾಲಿಗೆರಗಿದ. ಕೆಲವು ಕಡೆಗಳಲ್ಲಿ ಓದುಗರನ್ನೂ ರಜನಿಯವರ ಅಭಿಮಾನಿಯಾಗುವ ಹಾಗೆ ಇದು ಮಾಡುವುದರಲ್ಲಿ ಸಂಶಯವಿಲ್ಲ. ಮಾತ್ರವಲ್ಲ ಹಳೆಯ ಚಿತ್ರಗಳನ್ನು ಹುಡುಕಿ ನೋಡಬೇಕೆಂದು ಹೊಸ ಪೀಳಿಗೆಗೆ ಅನಿಸಿದರೆ ಅದು ಲೇಖಕರ ತಪ್ಪಲ್ಲ. ರಜನಿ ತಾನು ಅಭಿನಯಿಸದ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿದವರು ಬಾಲಚಂದರ್, ಪ್ರಾಯಶಃ ಅವರ ಮೇಲೆಯೂ ಒಂದು ಪುಸ್ತಕ ಬರಬೇಕೆಂಬ ಆಸೆ ಓದುಗರ ಮನಸ್ಸಿನಲ್ಲಿ ಮೂಡಿ ಮಾಯವಾಗುತ್ತದೆ. ಬೆಂಗಳೂರಿಗೆ ಮರಳಿದ ಶಿವಾಜಿ ತನ್ನ ಅಣ್ಣ ಮತ್ತು ಗೆಳೆಯನಿಗೆ ಈ ವಿಷಯವನ್ನು ತಿಳಿಸಿ ತಮಿಳು ಕಲಿಯಬೇಕಾದ ಪ್ರಸಂಗವನ್ನೂ ತಿಳಿಸಿದ. ಅದೃಷ್ಟ ದೇವತೆ ಬಾಲಚಂದರ್ ರೂಪದಲ್ಲಿ ಶಿವಾಜಿಯ ಜೀವನವನ್ನೂ ಆಗಲೇ ಹೊಕ್ಕಿಯಾಗಿತ್ತು. ಇನ್ನು ಕ್ಷಣಗಣನೆ ಮಾತ್ರ ಬಾಕಿಯುಳಿದಿತ್ತು. ಗೆಳೆಯನಿಗೆ ತಮಿಳು ಕಲಿಸುವ ಜವಾಬ್ದಾರಿ ಬಧಾರ್ ಹೆಗಲ ಮೇಲಿತ್ತು. 'ಅವನು ತಮಿಳನ್ನು ಬಹಳ ಬೇಗ ಕಲಿತ. ಕೇವಲ ಇಪ್ಪತ್ತು ದಿನಗಳಲ್ಲಿ ತಮಿಳರೂ ನಾಚುವಂತೆ ತಮಿಳಿನಲ್ಲಿ ಮಾತನಾಡಲು ಕಲಿತ. ಬಾಲಚಂದರ್ ಶಿವಾಜಿಯನ್ನು ಭೇಟಿ ಮಾಡಿದಾಗ ಅವರೊಡನೆ ಇವನು ತಮಿಳಿನಲ್ಲಿ ಮಾತನಾಡಿದ. ನಿರ್ದೇಶಕರಿಗೆ ಅಚ್ಚರಿಯಾಗುವಷ್ಟು ಸರಾಗವಾಗಿತ್ತು ಅವನ ಭಾಷೆಯ ಮೇಲಿನ ಹಿಡಿತ. ಅಲ್ಲಿಂದ ಅವನ ಜೀವನದ ಹೊಸ ಅಧ್ಯಾಯ ಶುರುವಾಯಿತು. ಚಿಕ್ಕ ಪಾತ್ರವಾದರೂ ಅದು ಎಲ್ಲರ ಗಮನವನ್ನೂ ಸೆಳೆದು ಇತಿಹಾಸವನ್ನೇ ನಿರ್ಮಿಸಿತು' ಎಂದು ಬಧಾರ್ ನೆನೆಸಿಕೊಳ್ಳುತ್ತಾರೆ. (ಮುಂದುವರಿಯುವುದು) - ಚೈತ್ರಾ ಅರ್ಜುನಪುರಿ @. (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.