ತಂಪು ಇಂಪಿನ ಇಂಫಾಲ್ ಭಾರತದ ಒಡವೆ ಅಂತ ಪಂಡಿತ್ ಜವಹರಲಾಲ್ ನೆಹರು ಮಣಿಪುರ... ಭಾರತದ ಒಡವೆ ಅಂತ ಪಂಡಿತ್ ಜವಹರಲಾಲ್ ನೆಹರು ಮಣಿಪುರವನ್ನು ಪ್ರೀತಿಯಿಂದ ಕರದಿದ್ದಂತೆ. ಭಾರತದ ಉತ್ತರ ಈಶಾನ್ಯ ಈ ಹಸಿರಿನ ಸುಂದರಿ ಮಣಿಪುರವು ಮೊಟ್ಟೆಯಾಕಾರಾದಲ್ಲಿರುವ ಕಣಿವೆ. ಸುತ್ತಲೂ ನೀಲಿ ಮಿಶ್ರಿತ ಹಸಿರು, ಮಧ್ಯೆ ಮಧ್ಯೆ ನದಿಗಳು, ಹೂಗಳ ರಾಶಿ, ಹಸಿರಿನ ಹಾಸಿಗೆ, ಎಕ್ಸೋಟಿಕ್ ಬ್ಲೂಮ್, ಸೋಮಾರಿ ಸರೋವರಗಳು, ಜೊತೆಗೆ ಶ್ರೀಮಂತ ಸಂಸ್ಕೃತಿ ಮನೆ ಮಾಡಿದೆ. ಈ ಅಂದಕ್ಕೆ ಪೂರ್ವದ ಸ್ವಿಟ್ಜರ್‌ಲ್ಯಾಂಡ್ ಎಂದೂ ಕರೆಯುತ್ತಾರೆ. ಇಂಥ ಸರಳ ಸುಂದರಿಯನ್ನು ನೋಡಲು ಮಣಿಪುರಕ್ಕೆ ಹೋಗುವ ಅವಕಾಶ. ಅಂಗರಚನಾಶಾಸ್ತ್ರದ ರಾಷ್ಟ್ರೀಯ ಕಾನ್ಫರೆನ್ಸ್ ನೆಪದಲ್ಲಿ ಸಿಕ್ಕಿತು. ರಾಜಧಾನಿ ಇಂಫಾಲಾದಲ್ಲಿ ಹೋಗಿ ಇಳಿಯುತ್ತಿದ್ದಾಗ ನನ್ನ ವಾಚೇ ಕೆಟ್ಟು ನಿಂತಿದೆಯೇನೋ ಎಂಬ ಅನುಮಾನ ಕಾಡಿತು. ಏಕೆಂದರೆ ಅಲ್ಲಿ ಸಂಜೆ 4.30ಕ್ಕೆಲ್ಲ ಕತ್ತಲೆ ಆವರಿಸಿತ್ತು. ವಾಚ್‌ನ ಕಾರ್ಯವೈಖರಿ ಮೇಲಿನ ಅನುಮಾನ ಮರುಬೆಳಗೆಯೂ ಮುಂದುವರಿಯಿತು. ಏಕೆಂದರೆ ಕೋಳಿಯ ಹಂಗಿಲ್ಲದೆ 4 ಗಂಟಗೇ ಸೂರ್ಯ ಮೂಡಣದಲ್ಲಿ ನೆತ್ತಿ ಹತ್ತತೊಡಗಿದ್ದ. ಮಣಿಪುರದಲ್ಲಿ ಶಾಪಿಂಗ್ ಇಂಫಾಲಾ ರಾಜಧಾನಿಯಾದರೂ ಪ್ಲಾನ್ಡ್ ನಗರವಲ್ಲ. ಕೆಂಗೇರಿ ಮೋರಿ ಥರ ಇರುವ ಚರಂಡಿ ಊರು ತುಂಬಾ ಹಾದು ಹೋಗಿದೆ. ಜೊತೆಗೆ ನಾನು ಹೋದಾಗ ರಸ್ತೆ ಅಗಲೀಕರಣ ನಡೆಯುತ್ತಿದ್ದುದೂ ಊರಿನ ಅಂದಗೆಡಿಸಿತ್ತು. ನಾಗ, ಮೀಟಿಯೋಸ್. ಕುರ್ಕಿಸ್, ಗೂರ್ಕಾ ಜನಾಂಗಗಳ ಜೊತೆಗೆ ಮುಸ್ಲಿಮರೊಂದಿಗೆ ಸಹಬಾಳ್ವೆ ಕಾಣುತ್ತಿರುವ ನಗರ. ಮೊದಲು ಮಾರ್ಕೆಟ್ ನೋಡಲು ಹೊರಟೆವು. ಇಮಾ ಮಾರ್ಕೆಟ್‌ಗೆ ಭೇಟಿ ನೀಡುತ್ತಿದ್ದಂತೆ ಆಶ್ಚರ್ಯವಾಯಿತು, ಏಕೆಂದರೆ ಇಡೀ ಮಾರ್ಕೆಟ್ಟನ್ನು ಕೇವಲ ಹೆಂಗಸರು ನಡೆಸುತ್ತಿದ್ದರು. ಕೆ.ಆರ್ ಮಾರುಕಟ್ಟೆ ಥರ ತರಕಾರಿ, ಮೊಟ್ಟೆ, ಮೀನು, ಮಾಂಸ ದಿನಸಿ, ಬಟ್ಟೆ ಇತ್ಯಾದಿ ವಸ್ತುಗಳ ಮಾರಾಟದಲ್ಲಿ ಹೆಂಗಸರ ದನಿ ಜೋರಾಗಿತ್ತು. ಇಲ್ಲಿನ ಕ್ವಾಯ್‌ರಂ ಬಂದ್ ಬಜಾರ್ ಕೂಡಾ ಮಹಿಳೆಯರಿಂದ ನಡೆಯುತ್ತಿರುವ ಮಾರ್ಕೆಟ್. ನಗರದ ಹೃದಯ ಭಾಗದಲ್ಲಿ ಮ್ಯೂಸಿಯಂ ಇದೆ. ಮಣಿಪುರದರಸರು ಉಪಯೋಗಿಸುತ್ತಿದ್ದ ವಸ್ತುಗಳು, ಧರಿಸುತ್ತಿದ್ದ ಬಟ್ಟೆ, ಒಡವೆಗಳು, ಪಾದರಕ್ಷೆಗಳು, ಕತ್ತಿಗುರಾಣಿ, ಸಂಗೀತಾ ವಾದ್ಯಗಳು, ಮಡಕೆಗಳು, ಕಾರು, 72 ಅಡಿ ಉದ್ದದ ದೋಣಿ... ಅಬ್ಬಬ್ಬಾ! ಇದನ್ನು ನೋಡಲು 2ರಿಂದ 3 ಗಂಟೆ ಹಿಡಿಯಿತು. ಮಣಿಪುರದಲ್ಲಿ ಇನ್ನೊಂದು ಅತ್ಯಂತ ಮುಖ್ಯವಾಗಿ ನೋಡಲೇಬೇಕಾದ ಸ್ಥಳವೆಂದರೆ ವಾರ್ ಸಿಮೆಂಟರಿ. ಇಲ್ಲಿ 2ನೇ ವಿಶ್ವಯುದ್ಧ ವೇಳೆ ಹೋರಾಡಿ ಮಡಿದ ಭಾರತೀಯ ಸೇನಾನಿಗಳ ಬೂದಿಯನ್ನು ಸಂಗ್ರಹಿಸಿಡಲಾಗಿದೆ. ಜೊತೆಗೆ ಸಿಮೆಂಟ್ ಮತ್ತು ಬ್ರಾಂಚ್‌ನ ಪ್ಲೇಟ್‌ನಲ್ಲಿ ಅವರ ಹೆಸರು, ವಯಸ್ಸು, ಗ್ರೇಡ್ ಅನ್ನು ಬರೆದಿಡಲಾಗಿದೆ. ಇವರೆಲ್ಲರ ವಯಸ್ಸು 20-25ರ ಒಳಗಿದ್ದುದನ್ನು ಗಮನಿಸುವಾಗ ನೋವಾಯಿತು. ಇನ್ನು ಪೋಲೋಗ್ರೌಂಡ್‌ನಲ್ಲಿರುವ ಶಾಹಿದ್ ಮಿನಾರ್ ಬ್ರಿಟಿಶ್‌ರ ವಿರುದ್ಧ ಹೋರಾಡಿ ಮಡಿದ ಮಣಿಪುರಿ ಹುತಾತ್ಮರನ್ನು ನೆನಪು ಮಾಡಿಕೊಳ್ಳುವ ಪೆರೇಡ್. ತೇಲುವ ಸರೋವರ ಊರು ಸುತ್ತಿ, ಮರುದಿನದ ಕಾನ್ಫರೆನ್ಸ್ ಮುಗಿಸಿದ ನಂತರ ನಾವು 300 ಜನ ಅಂಗರಚನಾಶಾಸ್ತ್ರಜ್ಞರಿಗೆ ನಾಲ್ಕು ಬಸ್‌ಗಳಿಗೆ ತೇಲುವ ಸರೋವರಕ್ಕೆ ಹೋಗಿಬರಲು ವ್ಯವಸ್ಥೆಯಾಗಿತ್ತು. ಇಂಫಾಲ್ ನಗರದಿಂದ 40 ಕಿ.ಮೀ ದೂರದಲ್ಲಿತ್ತು ಈ ಮನೋಹರ ಲೋಕ್‌ಟಕ್ ಸರೋವರ. ಸಣ್ಣ ಸಮುದ್ರದ ಹಾಗಿರುವ ಇಲ್ಲಿ ಸೆಂಡ್ರದ್ವೀಪ, ಪಕ್ಷಿಗಳು, ಅಲ್ಲಲ್ಲಿ ತೇಲುವ ಹುಲ್ಲುಗಾವಲು, ಸುಂದರ ರೆಸಾರ್ಟ್‌ಗಳನ್ನು ನೋಡಿ, ಬೋಟಿಂಗ್ ಹೋಗಿ ಸಂಭ್ರಮಿಸಿದೆವು. ಹಿಂದಿರುಗಲೇ ಮನಸ್ಸು ಬಾರದಷ್ಟು ಮನಸ್ಸಿಗೆ ಹಿಡಿಸಿತು ಮಣಿಪುರ. ಆದರೆ ನನ್ನ ವಿಮಾನದ ಬುಕ್ ಆಗಿದ್ದ ಕಾರಣ ಒಲ್ಲದ ಮನಸ್ಸಿನೊಂದಿಗೆ ನೆನಪಿನ ಬುತ್ತಿ ಕಟ್ಟಿಕೊಂಡು ನನ್ನೂರು ಶ್ರೀಗಂಧದ ಬೀಡಿನ ಕೇಂದ್ರ ಸ್ಥಾನ, ಸಿಡಿಲಿಗೂ ಬೆಚ್ಚದ ಕೋಟೆಯ ಊರು ಚಿತ್ರದುರ್ಗಕ್ಕೆ ಹಿಂದಿರುಗಿದೆ. -ಡಾ.ಎಸ್. ಪಾರ್ವತಿ