ಗಡಿ ಪ್ಯಾರ್ ವೀರ್ ಝರಾ ಸಿನಿಮಾದಲ್ಲಿ ತೋರಿದಂತೆ ಅದೇನೆ ಕಷ್ಟಗಳು ಎದುರಾದರೂ ಎಲ್ಲವನ್ನೂ.. ಭಾರತ-ಪಾಕ್ ದೇಶಗಳ ಜೋಡಿಗಳು ವೀರ್ ಝರಾ ಸಿನಿಮಾದಲ್ಲಿ ತೋರಿಸಿದಂತೆ ಅದೇನೆ ಕಷ್ಟಗಳು ಎದುರಾದರೂ ಎಲ್ಲವನ್ನೂ ಮೀರಿ ಮದುವೆಯಾಗುತ್ತಿದ್ದಾರೆ. ಪಾಕ್ ಮನೆ ಸೊಸೆಯಾಗಿ ಕಾಲಿರಿಸಿ ಸೊಗಸಾಗಿಯೇ ಸಂಸಾರ ಮಾಡುತ್ತಿರುವವರೂ ಇದ್ದಾರೆ. ದೂರವೂ ಆಗಿದ್ದಾರೆ. ಉಭಯ ದೇಶಗಳ ನಡುವಿನ ಇಂಥ ಪ್ರೀತಿ, ಪ್ರೇಮ, ಪ್ರಣಯಗಳ ಲವ್ಲಿ ಝಲಕ್... ಭಾರತ-ಪಾಕಿಸ್ತಾನ ಗಡಿಯಲ್ಲಿ ಗುಂಡಿನ ಚಕಮಕಿ ಶುರುವಾಗಿ, ಈಗ ತಣ್ಣಗಾಗಿಯೂ ಬಿಟ್ಟಿದೆ. ಜತೆ ಜತೆಗೆ ಉಭಯ ದೇಶಗಳು ಶಾಂತಿ ನೊಬೆಲ್ ಪಾರಿತೋಷಕವನ್ನು ಹಂಚಿಕೊಳ್ಳಬೇಕಾಗಿದೆ. ಏನೇ ಆದರೂ ಉಭಯ ದೇಶಗಳ ಜನರು ಒಬ್ಬರಿಗೊಬ್ಬರು ಸಾಂಪ್ರಾದಾಯಿಕ ವೈರಿಗಳೆಂದೇ ಪರಿಗಣಿಸೋದು. ಅವರು ನಮ್ಮನ್ನು, ನಾವು ಪಾಕಿಗಳನ್ನು ಪಾಪಿಗಳೆಂದೇ ಆದರಿಸುತ್ತೇವೆ. ವೈರತ್ವವಿದ್ರೂ ಪ್ರೀತಿಯ ಮೊಳಕೆಯೊಡೆಯಲೇನು ಅಡ್ಡಿ? ಭಾರತದಿಂದ ಪಾಕಿಸ್ತಾನ ಬೇರೆಯಾದಾಗಿನಿಂದಲೂ ಯುವ ಜೋಡಿಗಳ ಹೃದಯಗಳು ಪ್ರೀತಿಗಾಗಿ ಹಪಹಪಿಸುತ್ತಲೇ ಇವೆ. ಜಾತಿ, ಧರ್ಮ, ನಾಗರೀಕತ್ವ..ಎಲ್ಲವನ್ನೂ ಕೇಳಿ ಪ್ರೀತಿ ಹುಟ್ಟೊಲ್ಲ. ಅದು ಏಕೆ, ಹೇಗೆ, ಯಾರಿಗೆ ಹುಟ್ಟುತ್ತೋ..ಯಾರಿಗ್ಹೊತ್ತು? ಒಟ್ಟಿನಲ್ಲಿ ರಾಜತಾಂತ್ರಿಕವಾಗಿ ಭಾರತ-ಪಾಕ್ ಸಂಬಂಧ ಸೊಗಸಾಗಿಲ್ಲ. ಆದರೂ ಈ ಎರಡು ದೇಶಗಳ ಜೋಡಿಗಳು ಮೀರ್ ಝರಾ ಸಿನಿಮಾದ ಹೀರೋ, ಹೀರೋಯಿನ್ನಂತೆ ಅದೇನೆ ಕಷ್ಟಗಳು ಎದುರಾಗಲಿ, ಎಲ್ಲವನ್ನೂ ಮೀರಿ ಮದ್ವೆಯಾಗುತ್ತಿದ್ದಾರೆ. ಪಾಕ್ ಮನೆ ಸೊಸೆಯಾಗಿ ಕಾಲಿರಿಸಿ ಸೊಗಸಾಗಿಯೇ ಸಂಸಾರ ಮಾಡುತ್ತಿರುವವರೂ ಇದ್ದಾರೆ. ದೂರವೂ ಆಗಿದ್ದಾರೆ. ಉಭಯ ದೇಶಗಳ ನಡುವಿನ ಇಂಥ ಪ್ರೀತಿ, ಪ್ರೇಮ, ಪ್ರಣಯಗಳ ಲವ್ಲಿ ಝಲಕ್... ಶೋಯಬ್ ಮಲ್ಲಿಕ್-ಸಾನಿಯಾ ಮಿರ್ಜಾ ಇದೀಗ ನಾಲ್ಕು ವರ್ಷಗಳ ಹಿಂದೆಯಷ್ಟೇ ಹಲವು ವಿರೋಧಗಳ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಈ ಟೆನ್ನಿಸ್-ಕ್ರಿಕೆಟ್ ಜೋಡಿ ಈಗ ಸುಖವಾಗಿದೆ. ಭಾರತದ ಪರ ಆಡುತ್ತಿರುವ ಸಾನಿಯಾ ಪಾಕ್ ಸೊಸೆಯಾದರೂ ಭಾರತೀಯ ಮಗಳೆಂದೇ ಸಾರುತ್ತಿದ್ದಾಳೆ. ಈ ಮದ್ವೆಗೆ ಇಬ್ಬರ ಕುಟುಂಬಗಳು ಸಹಮತ ವ್ಯಕ್ತಪಡಿಸಿದ್ದರೂ ವಿರೋಧವಾಗಿದ್ದು ಭಾರತೀಯರಿಂದ. ನಂತರ ಹೈದ್ರಾಬಾದ್ನ ಆಯೇಶಾ ಎಂಬಾಕೆ ಶೋಯಬ್ ನನ್ನನ್ನು ವರಿಸಿದ್ದ ಎಂದು ಹೇಳಿಕೊಂಡಿದ್ದು ದೊಡ್ಡ ಗಲಾಟೆಯೇ ಆಗಿತ್ತು. ಅದನ್ನು ಹೌದೆಂದು ಒಪ್ಪಿಕೊಂಡು ಶೋಯಬ್ ಆಯೇಶಾಗೆ ಡಿವೋರ್ಸ್ ನೀಡಿ, ಸಾನಿಯಾಳನ್ನು ವರಿಸಿದ. ಕೋಚ್ ಕುಛ್ ಹೋತಾ ಹೈ! ಕೊಹ್ಲಿಗೆ ಅನುಷ್ಕಾ ಕೋಚ್ ಬಾಲಿವುಡ್ ನಲ್ಲಿ ಆಕೆ ಯಾವತ್ತೋ ಹಾಫ್ ಸೆಂಚುರಿಯ ಆಸೆಯನ್ನು ಕೈ ಬಿಟ್ಟಿದ್ದಾಳೆ. ಸಿನಿಮಾ ಲಿಸ್ಟಿನಲ್ಲಿ ಇನ್ನೂ 10 ಸಂಖ್ಯೆ ದಾಟದ ಅನುಷ್ಕಾ ಶರ್ಮಾಳ ಸ್ಥಿತಿಯೇ ಈಗ ಮೈದಾನದಲ್ಲಿ ವಿರಾಟ್ ಕೊಹ್ಲಿಗೆ ಬಂದಿರುವುದು. ಫಾರ್ಮ್ಗೆ ಬರಲು ತಿಣುಕಾಡುತ್ತಿರುವ ಕೊಹ್ಲಿಗೆ ಈಗ ಅನುಷ್ಕಾ ಶರ್ಮಾಳೇ ಕೋಚ್ ಅಂತೆ! ಅರೆ, ಅನುಷ್ಕಾಳಿಗೇನು ಬ್ಯಾಟಿಂಗ್, ಫೀಲ್ಡಿಂಗ್ ಗೊತ್ತು? ಅನ್ನೋ ಪ್ರಶ್ನೆಗಳನ್ನೆಲ್ಲ ಬಾಲಿವುಡ್ನ ಡಸ್ಟ್ಬಿನ್ಗೆ ಬಿಸಾಕಿ. ಅನುಷ್ಕಾ ಕೋಚ್ ಆಗುತ್ತಿರುವುದು, ವಿರಾಟ್ ಕೊಹ್ಲಿಯ ಜಾಹಿರಾತುಗಳಿಗೆ. ಕೊಹ್ಲಿಗೆ ಕ್ಯಾಮೆರಾ ಮುಂದೆ ಹೇಗೆ ನಟಿಸಬೇಕೆಂಬುದು ಗೊತ್ತಿಲ್ಲ. ಅನ್ನೋದು ಅನುಷ್ಕಾಳ ದೂರು, ನಟನೆಯಲ್ಲಿ ಚೂರುಪಾರು ಉಪ್ಪಿನಕಾಯಿ ತಿಂದಿರುವ ಅನುಷ್ಕಾ ತಾನೀಗಾಗಲೇ ಎಕ್ಸ್ಪರ್ಟ್ ಎಂಬ ಭ್ರಮೆ ಹುಟ್ಟಿಸಿಕೊಂಡಿದ್ದಾಳೆ. ಹೀಗಾಗಿ ಕೊಹ್ಲಿಯ ಜಾಹಿರಾತು ಚಿತ್ರೀಕರಣಕ್ಕೆ ಇವಳೇ ನೆರವಾಗುತ್ತಿದ್ದಾಳಂತೆ. ಅತ್ತ ಅನುಷ್ಕಾಳನ್ನು ನೋಡುತ್ತಾ, ಇತ್ತ ಜಾಹಿರಾತಿನಲ್ಲಿ ದುಡ್ಡೆಣಿಸುವ ಕನಸನಲ್ಲಿರುವ ಕೊಹ್ಲಿಗೆ ಬ್ಯಾಂಟಿಗ್ ಅಷ್ಟೇನೂ ಕೈ ಹಿಡಿಯುತ್ತಿಲ್ಲ. ಫಾರ್ಮ್ಗೆ ಬರುವ ಫಾರ್ಮುಲಾವನ್ನು ಯಾರಾದರೂ ಕೊಚ್ನಿಂದ ಕಲಿಯಬೇಕು ಎನ್ನುವಾಗಲೇ ಅನುಷ್ಕಾಳ ಕೋಚಿಂಗ್ ಏಕಾಗ್ರತೆಗೆ ಅಡ್ಡಿ ತರುತ್ತಿದೆಯೇನೋ ಎಂಬುದು ಕೊಹ್ಲಿ ಅಭಿಮಾನಿಗಳ ಕಳವಳ. ಕೊಹ್ಲಿ ಇಷ್ಟು ಡಲ್ ಆಗಿ ಆಡುತ್ತಿರುವುದಕ್ಕೆ ಅನುಷ್ಕಾಳೇ ಕಾರಣ ಎಂಬ ಆಕ್ರೋಶಕ್ಕೆ ಬಹುಶಃ ಇವರಿಬ್ಬರ ಮದುವೆಯೇ ಮುಕ್ತಿಯೇನೋ! ಮೋಹ್ಸಿನ್ ಖಾನ್ ರೀನಾ ರಾಯ್ ಸುಮಾರು 48 ಟೆಸ್ಟ್ ಹಾಗೂ 15 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ ಮೋಹ್ಸಿನ್ ಬೋಲ್ಡ್ ಆಗಿದ್ದು, ನಟಿ ರೀನಾ ರಾಯ್ಗೆ. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಿರುವ ಮೋಹ್ಸಿನ್-ರೀನಾ ಪ್ರೇಮಕ್ಕೆ ಸಾಕ್ಷಿಯಾಗಿ ಮಗಳೊಬ್ಬಳಿದ್ದಾಳೆ. ಇಬ್ಬರ ಸಂಬಂಧ ಮಾತ್ರ ಡಿವೋರ್ಸ್ನಲ್ಲಿ ಕೊನೆಯಾಗಿದೆ. ಇಮ್ರಾನ್ ಖಾನ್-ಜೀನತ್ ಅಮಾನ್ ಹಾಲಿವುಡ್ ಹೀರೋ ಲುಕ್ ಇರುವ, ಆಕ್ಸಫರ್ಡ್ ನಲ್ಲಿ ಶಿಕ್ಷಣ ಪಡೆದ, ಎಲ್ಲರನ್ನೂ ಮೋಡಿ ಮಾಡುವ ವ್ಯಕ್ತಿತ್ವವಿರುವ ಕ್ರಿಕೆಟಿಗ ಇಮ್ರಾನ್ ಖಾನ್ ಬ್ರಿಟನ್ನ ಜೆಮಿಮಾ ಗೋಲ್ಡ್ ಸ್ಮಿತ್ಳನ್ನು ಮದ್ವೆಯಾಗೋ ಮುಂಚೆ ವಿಶ್ವದ ಅನೇಕ ಸುಂದರಿಯರೊಂದಿಗೆ ಡೇಟಿಂಗ್ ಮಾಡಿದ್ದಿದೆ. ಮುಸ್ಲಿಂ ತಂದೆ. ಆಂಗ್ಲೋ ಇಂಡಿಯನ್ ತಾಯಿಯ ಮಗಳು ಮಾಜಿ ಮಿಸ್ ಏಷ್ಯಾ ಫೆಸಿಫಿಕ್ ಆಗಿದ್ದ ಬಾಲಿವುಡ್ ನಟಿ ಜೀನತ್-ಅಮಾನ್ ಹೆಸರು ಇಮ್ರಾನ್ ನೊಂದಿಗೆ ತಳುಕು ಹಾಕ್ಕೊಂಡಿದ್ದ ಕಾಲವೊಂದಿತ್ತು. ಬುದ್ದಿವಂತ ಆಧುನಿಕತೆಯ ಅವತಾರವೆಂದೆನಿಸುತ್ತಿದ್ದ ಜೀನತ್-ಇಮ್ರಾನ್ದು ಪರ್ಫೆಕ್ಟ್ ಮ್ಯಾಚ್ ಎನಿಸಿದ್ದೂ ಹೌದು. ಆದರೂ ಈ ಜೋಡಿಮದ್ವೆ ಮಾಡಿಕೊಳ್ಳುವುದಕ್ಕೆ ಮನಸ್ಸು ಮಾಡಲೇ ಇಲ್ಲ. ಜೀನತ್ ತನಗಿಂತಲೂ ಎರಡು ವರ್ಷ ಚಿಕ್ಕವನಾದ ನಟ ಮಜರ್ ಖಾನ್ನೊಂದಿಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರೆ, ಸುಮಾರು ಎರಡು ದಶಕಗಳಷ್ಟು ಕಿರಿಯವಳಾದ ಜೆಮಿಮಾಳನ್ನು ಇಮ್ರಾನ್ ವರಿಸಿದ. ಶೋಯೆಬ್ ಅಖ್ತರ್-ಸೋನಾಲಿ ಬೇಂದ್ರೆ ಉಪೇಂದ್ರ ಜತೆ ಕನ್ನಡದ ಪ್ರೀತ್ಸೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ರಾವಲ್ಪಿಂಡಿ ಎಕ್ಸ್ಪ್ರೆಸ್ ಶೋಯೆಬ್ ಅಖ್ತರ್ ಫುಲ್ ಫಿದಾ ಆಗಿದ್ದ. ಕಿಡ್ನಾಪ್ ಮಾಡಿಯಾದ್ರೂ ಸೈ, ನಾನವಳನ್ನು ಮದ್ವೆಯಾಗಿಯೇ ತೀರುತ್ತೇನೆಂದೂ ಹೇಳ್ಕೊಂಡು ತಿರುಗುತ್ತಿದ್ದ. ಆದ್ರೆ ಸೋನಾಲಿ ಯಾವತ್ತೂ ಈ ವಿಚಾರ ಎತ್ತಿರಲಿಲ್ಲ. ಆಮೇಲೊಂದು ದಿನ ನಾನು ಸೋನಾಲಿಯನ್ನು ಭೇಟಿಯಾಗಿಯೇ ಇಲ್ಲ. ಕಿಡ್ನಾಪ್ ಮಾಡಲು ಯೋಚಿಸಿದ್ದೂ ಸುಳ್ಳೆಂದು ಸಂದರ್ಶನವೊಂದರಲ್ಲಿ ಹೇಳ್ದ ಅಖ್ತರ್. ಇವರಿಬ್ಬರ ನಡುವೆ ಕುಛ್ ಕುಛ್ ಇತ್ತೆಂದು ಸುದ್ದಿ ಹರಡಿದ್ದು ಸುಳ್ಳಲ್ಲ. ನೋನಿತಾ ಲಾಲ್-ಫೈಸಲ್ ಖುರೇಷಿ ಇಸ್ಲಾಮಾಬಾದ್ನಲ್ಲಿ ನಡೆದ ಗಾಲ್ಫ್ ಟೂರ್ನಮೆಂಟ್ವೊಂದರಲ್ಲಿ ಭಾರತೀಯ ಗಾಲ್ಫರ್ ನೋನಿತಾ ಲಾಲ್ ಪಾಕಿಸ್ತಾನದ ಫೈಸಲ್ ಖುರೇಷಿಯನ್ನು ಭೇಟಿಯಾಗಿದ್ದಳು. ತಿಂಗಳ ನಂತರ ಖುರೇಷಿ ನೋನಿತಾಳನ್ನು ಮದುವೆಯಾಗುವೆಯಾ ಎಂದು ಕೇಳಿದ. ಆಯಿತೆಂದ ನೋನಿತಾ 1992ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಪಾಕ್-ಭಾರತೀಯ ಜೋಡಿ ಸಂಸಾರ ನಡೆಸಿಯೇ ಸೈ ಎನಿಸಿಕೊಳ್ಳುತ್ತಿರುವಾಗ ಎರಡು ದೇಶಗಳು ಉತ್ತಮ ಸಂಬಂಧವೊಂದನ್ನು ಕಾಪಾಡಿಕೊಳ್ಳಲು ಮನಸ್ಸು ಮಾಡಬಹುದಲ್ಲವೇ? ಜಹೀರ್ ಅಬ್ಬಾಸ್-ರೀತಾ ಲುಥ್ರಾ ಇಂಗ್ಲೀಷರ ಪರವಾಗಿ ಆಡುತ್ತಿದ್ದ ಜಹೀರ್, ಯುಕೆನಲ್ಲಿ ಇಂಟೀರಿಯರ್ ಡಿಸೈನ್ ಕೋರ್ಸ್ ಮಾಡುತ್ತಿದ್ದ ರೀತಾಳನ್ನು ಭೇಟಿಯಾಗಿದ್ದು 1980ರಲ್ಲಿ. ಈ ಜೋಡಿಗೆ 1988ರಲ್ಲಿ ಮದ್ವೆಯೂ ಆಯಿತು. ರೀತಾ ಮುಸ್ಲಿಂ ಆಗಿ ಮತಾಂತರಗೊಂಡಿದ್ದು ಸಮೀನಾ ಅಬ್ಬಾಸ್ ಆಗಿದ್ದಾಳೆ. ಭಾರತ-ಪಾಕ್ ಇಬ್ಭಾಗವಾಗುವ ಮೊದಲು ರೀತಾ ಫೋಷಕರು ಈಗಿನ ಪಾಕಿಸ್ತಾನದ ಫೈಸಲಾಬಾದ್ನಲ್ಲಿಯೇ ಇದ್ದವರು. ಇವರಿಬ್ಬರ ತಂದೆಯರು ಫ್ರೆಂಡ್ಸ್ ಆಗಿದ್ದರಿಂದ ಮದ್ವೆಗೆ ಯಾರೂ ಚಕಾರ ಎತ್ತಲೇ ಇಲ್ಲ. ಈ ಜೋಡಿಯೀಗ ಕರಾಚಿಯಲ್ಲಿದ್ದು, ರೀತಾ ಅಲಿಯಾಸ್ ಸಮೀನಾ ತನ್ನ ಇಂಟೀರಿಯರ್ ಡಿಸೈನ್ ಬ್ಯುಸಿನೆಸ್ನಲ್ಲಿ ಬ್ಯುಸಿಯಾಗಿದ್ದಾಳೆ. ವಾಸಿಂ ಅಕ್ರಮ-ಸುಸ್ಮಿತಾ ಸೇನ್ ಟಿವಿ ಶೋ, ಕೊಲ್ಕತಾ ನೈಟ್ ರೈಡರ್ಸ್ನೊಂದಿಗಿನ ಸಂಬಂಧ, ಫ್ಯಾಷನ್ ಉದ್ಯಮದೊಂದಿಗಿನ ನಂಟು ಮುಂತಾದ ಕಾರಣಗಳಿಂದ ಹೆಚ್ಚಾಗಿ ಭಾರತದಲ್ಲಿಯೇ ಕಾಲ ಕಳೆಯುವ ವಾಸಿಂ ಸೌಂದರ್ಯದ ಖನಿ ಹ್ಯೂಮಾಳನ್ನು 1995ರಲ್ಲಿ ಮದ್ವೆಯಾಗಿದ್ದ. ಹಿಪ್ನೋ ಥೆರಪಿಸ್ಟ್ ಆಗಿದ್ದ ಆಕೆಯೊಂದಿಗೆ ಸುಮಾರು 15 ವರ್ಷಗಳ ಕಾಲ ಅಕ್ರಂ ಸಕ್ರಮವಾಗಿಯೇ ಸಂಸಾರ ಮಾಡಿದ್ದ. ಹಾರ್ಟ್ ಅಟ್ಯಾಕ್ ಆಗಿದ್ದ ಹ್ಯೂಮಾಳನ್ನು 2009ರಲ್ಲಿ ಸಿಂಗಾಪುರಕ್ಕೆ ಕರೆದೊಯ್ಯಲಾಗುತ್ತಿತ್ತು. ಇಂಧನ ತುಂಬಿಸಿಕೊಳ್ಳಲು ಏರ್ ಆ್ಯಂಬುಲೆನ್ಸ್ ಚೆನ್ನೈನಲ್ಲಿ ಲ್ಯಾಂಡ್ ಆಗಿದ್ದಾಗಲೇ ಹ್ಯೂಮಾ ಕೊನೆಯುಸಿರೆಳೆದಳು. 2008ರಲ್ಲಿ ರಿಯಾಲಿಟಿ ಶೋವೊಂದರಲ್ಲಿ ಭಾರತದ ಸುರಸುಂದರಿ ಸುಸ್ಮಿತಾ ಸೇನ್ಳನ್ನು ವಾಸಿಂ ಭೇಟಿಯಾಗಿದ್ದ. ಆಗ ಅವರಿಬ್ಬರ ಸ್ನೇಹದ ಬಗ್ಗೆ ಗುಸುಗುಸು ಹರಡಿತ್ತು. ಆದರೆ ಸುಸ್ಮಿತಾ ಮಂದಸ್ಮಿತಳಾಗಿಯೇ ಈ ಸುದ್ದಿ ಸುಳ್ಳೆಂದಳು. ಇತ್ತೀಚೆಗೆ 47ರ ಹರಯೆದ ವಾಸಿಂ ತನಗಿಂತ 17 ವರ್ಷ ಕಿರಿಯಳಾದ ಶನೇಕಾ ಥಾಮ್ಸ್ನ್ಳನ್ನು ವರಿಸಿದ್ದಾನೆ. -ಕೆ.ಎಸ್.ನಿರುಪಮಾ