ಕಾಮನ್ ವೆಲ್ತ್ ಸಣ್ಣ ಕಥಾ ಸ್ಪರ್ಧೆ ಗೆದ್ದ ಮೊದಲ ಭಾರತೀಯ ಪ್ರೊ. ಪರಾಶರ್ ಕುಲಕರ್ಣಿ ಸಿಂಗಪುರ್ ನ ವಿಶ್ವವಿದ್ಯಾಲಯದ ಪ್ರೊಫೆಸರ್ ಪರಾಶರ್ ಕುಲಕರ್ಣಿ ಅವರು ಕಾಮನ್ ವೆಲ್ತ್ ಸಣ್ಣ ಕಥಾ ಪ್ರಶಸ್ತಿ ಗೆದ್ದ ಮೊದಲ ಭಾರತಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ನವದೆಹಲಿ: ಸಿಂಗಪುರ್ ನ ವಿಶ್ವವಿದ್ಯಾಲಯದ ಪ್ರೊಫೆಸರ್ ಪರಾಶರ್ ಕುಲಕರ್ಣಿ ಅವರು ಕಾಮನ್ ವೆಲ್ತ್ ಸಣ್ಣ ಕಥಾ ಪ್ರಶಸ್ತಿ ಗೆದ್ದ ಮೊದಲ ಭಾರತಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ೫೦೦೦ ಪೌಂಡ್ ಮೊತ್ತದ ಈ ಪ್ರಶಸ್ತಿಗೆ ೪೦೦೦ ಜನ ತಮ್ಮ ಕಥೆಗಳನ್ನು ಕಳುಹಿಸಿದ್ದರು. ಇವರಲ್ಲಿ ಕುಲಕರ್ಣಿ ತಾವು ಬರೆದ ಮೊದಲ ಕಥೆಗೆ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಸಿಂಗಪುರ್ ನ ಎನ್ ಯು ಎಸ್ ಕಾಲೇಜಿನ ಸಾಮಾಜಿಕ ವಿಜ್ಞಾನ ವಿಭಾಗದ ಪ್ರೊಫೆಸರ್ ಪರಾಶರ್ ಕುಲಕರ್ಣಿ ಅವರಿಗೆ ಜೂನ್ ೫ ರಂದು ಜಮೈಕಾದ ಕಲಬಾಶ್ ಸಾಹಿತ್ಯೋತ್ಸವದಲ್ಲಿ ಬುಕರ್ ಪ್ರಶಸ್ತಿ ವಿಜೇತ ಲೇಖಕ ಮಾರ್ಲನ್ ಜೇಮ್ಸ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 'ಕೌ ಅಂಡ್ ಕಂಪನಿ' (ಹಸು ಮತ್ತು ಸಂಸ್ಥೆ) ಎಂಬ ಕಥೆಗೆ ಪ್ರಶಸ್ತಿ ಬಂದಿದ್ದು, ಇದು ೧೯೯೦ರಲ್ಲಿ ಭಾರತದಲ್ಲಿ ನಡೆಯುವ ಕಥೆ. ಅಗೆಯುವ ಗಮ್ ಜಾಹಿರಾತಿಗಾಗಿ ಹಸುವನ್ನು ಹುಡುಕ ಹೊರಟ ನಾಲ್ಕು ಜನರ ಕಥೆ ಇದು. "ಕಾಮನ್ ವೆಲ್ತ್ ಸಣ್ಣ ಕಥಾ ಸ್ಪರ್ಧೆ ಗೆದ್ದಿದ್ದಕ್ಕೆ ಬಹಳ ಸಂತಸವಾಗಿದೆ. ಹೊಸ ಬರಹಗಾರರಿಗೆ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾಗವಹಿಸಲು ಇದು ಒಳ್ಳೆಯ ಅವಕಾಶ ನೀಡುತ್ತದೆ" ಎಂದು ಕುಲಕರ್ಣಿ ಹೇಳಿದ್ದಾರೆ. ಕಾಮನ್ ವೆಲ್ತ್ ದೇಶಗಳ ಹೊಸ ಬರಹಗಾರರ ಪ್ರಕಟಿತವಲ್ಲದ ಕಥೆಗಳಿಗೆ ನಡೆಯುವ ಈ ಸ್ಪರ್ಧೆಗೆ ೪೭ ವಿವಿಧ ದೇಶಗಳಿಂದ ೪೦೦೦ ಕಥೆಗಳು ಸ್ವೀಕೃತವಾಗಿದ್ದವು.