ಬೇಲೂರು ಬಾಲೆಯರು ಏನು ಹೇಳುವರು? ಹೌದು! ಇಲ್ಲಿ ಶಿಲೆಗಳು ಸಂಗೀತ ಹಾಡುತ್ತವೆ, ನರ್ತಿಸುತ್ತವೆ, ನೋಡುಗರ... ಈ ಶಿಲಾಬಾಲಿಕೆಯರನ್ನು ನೋಡೋಣ, ದೇವಾಲಯದ ಪೂರ್ವದ್ವಾರದಿಂದ, ಎಡದಿಂದ ಬಲಕ್ಕೆ ಆಲಯದ ಸುತ್ತ, ಅಂದರೆ ಪ್ರದಕ್ಷಿಣೆ ಮಾಡುವಂತೆ ನಡೆಯುತ್ತಾ ಕತ್ತೆತ್ತಿ ನೋಡುತ್ತಾ ಹೋದರೆ ಇವು ಕಾಣುತ್ತವೆ. ಇವುಗಳ ಹಿಂದೆ, ಪುಷ್ಪಲತೆಯ ಸುಂದರ ಪ್ರಭಾವಳಿಯಿದೆ. ಬನ್ನಿ, ಈಗ ಈ ವಿವಿಧ ಭಂಗಿಗಳ ಸುಂದರ ಶಿಲಾಬಾಲಿಕೆಯರ ಪರಿಚಯ ಮಾಡಿಕೊಳ್ಳೋಣ, ಅವರ ಗಾಯನ, ನರ್ತನ, ವೈಯಾರಗಳನ್ನು ಆನಂದಿಸೋಣ. ಹೌದು! ಇಲ್ಲಿ ಶಿಲೆಗಳು ಸಂಗೀತ ಹಾಡುತ್ತವೆ, ನರ್ತಿಸುತ್ತವೆ, ನೋಡುಗರ ಕಣ್ಮನಸೂರೆಗೊಳ್ಳುತ್ತವೆ, ಹಲವು ಬಗೆಯ ಭಾವನೆಗಳನ್ನುಕ್ಕಿಸುತ್ತವೆ. ಯಾವ ಶಿಲೆಗಳು ಇವು? ದೂರದೂರದ ನೆಲೆಗಳಿಂದಲೂ ತಮ್ಮೆಡೆಗೆ ಕೈಬೀಸಿ ಕರೆಯುತ್ತಿರುವ, ಬಗೆಬಗೆಯ ಭಂಗಿಗಳಲ್ಲಿ, ಬೆಡಗು ಬಿನ್ನಾಣಗಳಲ್ಲಿ, ಕಲಾಶ್ರೀಮಂತಿಕೆಯಿಂದ ಕಂಗೊಳಿಸುತ್ತಾ ನಿಂತಿರುವ ಮುದ್ದಾದ ಶೃಂಗಾರಬಾಲೆಯರು ಈ ಶಿಲೆಗಳು! ಬೇಲೂರಿನ ಶಿಲಾಬಾಲಿಕೆಯರು! ಇವರನ್ನು ನೋಡಿ ಮೆಚ್ಚದವರಿಲ್ಲ, ಆಶ್ಚರ್ಯಪಡದವರಿಲ್ಲ, ಆನಂದಿಸದವರಿಲ್ಲ. ಭಾರತದ ಪ್ರಾಚೀನ ದೇವಾಲಯಗಳ ಹೊರಗೋಡೆಗಳು ಸೊಗಸಾದ ಅಲಂಕಾರಗಳಿಂದ ಶ್ರೀಮಂತವಾಗಿರುತ್ತವೆ. ಪೌರಾಣಿಕ ಮತ್ತು ನೀತಿ ಕಥಾವಸ್ತುಗಳ, ದೇವ-ದೇವಿಯರ, ಅಪ್ಸರೆಯರ, ಗಂಧರ್ವರ, ಶೃಂಗಾರ ಕ್ರೀಡೆಗಳ, ಯುದ್ಧ ದೃಶ್ಯಗಳ, ನವಿಲು, ಹಂಸ, ಗಜಾಶ್ವಗಳೇ ಮೊದಲಾದ ಪ್ರಾಣಿಪಕ್ಷಿಗಳ, ವಿವಿಧ ವಿನ್ಯಾಸಗಳ, ಪುಷ್ಪಗಳ, ಮೊದಲಾದವುಗಳ ಸುಂದರ ಕೆತ್ತನೆಗಳು ಈ ಹೊರಗೋಡೆಗಳ ಮೇಲೆ ತುಂಬಿರುತ್ತವೆ. ಬೇಲೂರಿನ ಸುಪ್ರಸಿದ್ಧ ಚೆನ್ನಕೇಶವ ದೇವಾಲಯವೂ ಇಂಥ ಸುಂದರ ಕೆತ್ತನೆಗಳಿಗೆ ಹೆಸರುವಾಸಿಯಾದುದಾಗಿದೆ. ಹಾಸನ ಜಿಲ್ಲೆಯ ಬೇಲೂರಿನ ಈ ದೇವಾಲಯವನ್ನು ನೋಡದ, ಕೇಳದ ಕನ್ನಡಿಗನಿಲ್ಲ ಎಂದರೆ ಅತಿಶಯವಾಗಲಾರದು. ಈ ದೇವಾಲಯದ ಹಲವು ವಿಧದ ಕೆತ್ತನೆಗಳಲ್ಲಿ ಶಿಲಾಬಾಲಿಕೆಯರು ಎಂದು ಕರೆಯಲಾಗುವ ಸುಂದರ ಸ್ತ್ರೀ ಪುತ್ಥಳಿಗಳು ವಿಶಿಷ್ಟವಾಗಿವೆ. ಇವು ಒಟ್ಟು ನಲವತ್ತೆರಡಿದ್ದು ಹೊರಗೆ ಮೂವತ್ತೆಂಟು ದೇವಾಲಯದೊಳಗೆ ನವರಂಗದಲ್ಲಿ ಇನ್ನು ನಾಲ್ಕಿವೆ. ವಾಸ್ತವವಾಗಿ, 4ನೇ ಮತ್ತು 5ನೆಯದರ ಮಧ್ಯೆ ಹಾಗೂ 17ನೇ ಮತ್ತು 18ನೆಯದರ ನಡುವೆ ಇರಬೇಕಿದ್ದ ಇನ್ನೆರಡು ಶಿಲಾಬಾಲಿಕೆಯರ ವಿಗ್ರಹಗಳು ಈಗ ಇಲ್ಲವಾಗಿವೆ. ಬೇಲೂರು ದೇವಾಲಯದ ಆವರಣದಲ್ಲೇ ಇರುವ ಕಪ್ಪೆಚೆನ್ನಿಗರಾಯನ ದೇವಾಲಯದ ನವರಂಗದಲ್ಲೂ 3 ಶಿಲಾಬಾಲಿಕೆಗಳು ಹಾಗೂ ಕಿಕ್ಕೇರಿ ಬ್ರಹ್ಮೇಶ್ವರ ದೇವಾಲಯ (ಮಂಡ್ಯ)ದನವರಂಗದಲ್ಲೂ ಶಿಲಾಬಾಲಿಕೆಗಳು ಕಂಡುಬರುತ್ತವೆ. ಇಲ್ಲೂ ಹಲವು ಪುತ್ಥಳಿಗಳು ಕಾಣೆಯಾಗಿ ಕೆಲವಷ್ಟೇ ಈಗ ಉಳಿದಿವೆ. ಅಲ್ಲದೇ ಈ ಭಂಗಿಗಳ ರಚನೆಗಳು ಹಳೆಬೀಡು ಹಾಗೂ ಇತರ ಹೊಯ್ಸಳ ದೇವಾಲಯಗಳಲ್ಲೂ ಕಂಡುಬರುತ್ತವೆ. ಆದರೆ ಚೆನ್ನಕೇಶವ ದೇವಾಲಯದ ಶಿಲಾಬಾಲಿಕೆಗಳು ಪ್ರಮುಖವಾದವುಗಳಾಗಿವೆ. ಈ 42 ಶಿಲಾಬಾಲಿಕೆಯರ ಮೂರ್ತಿಗಳು ಒಂದೊಂದೂ ವಿಭಿನ್ನ ಹಾಗೂ ಸುಂದರ ಭಂಗಿಗಳಲ್ಲಿದ್ದು ಚೆನ್ನಕೇಶವನ ಆಲಯಕ್ಕೆ ಸೊಗಸಾದ ಅಲಂಕಾರಗಳಾಗಿವೆ. ಇವುಗಳು ನವರಂಗದ ಹೊರಗೋಡೆಯ ಕಂಬಗಳ ಮೇಲೆ 45 ಡಿಗ್ರಿ ಕೋನದಲ್ಲಿರಿಸಲಾಗಿವೆ. ಮೂರು ಪುತ್ಥಳಿಗಳನ್ನು ಹೊರತುಪಡಿಸಿ ಇನ್ನೆಲ್ಲವೂ ಸ್ತ್ರೀಪುತ್ಥಳಿಗಳೇ ಆಗಿರುವುದರಿಂದ ಇವನ್ನು ಶಿಲಾಬಾಲಿಕೆಯರೆಂದು ಕರೆಯಲಾಗಿದೆ. ಇದಕ್ಕೆ ಆಧಾರವಾಗಿ ಬೇಲೂರಿನ ಕೆಲವು ಶಾಸನಗಳಲ್ಲಿ 'ಶಿಲಾಪುತ್ರಿಕಾ' ಎಂಬ ಪದವೂ ಇದೆ. ಇವುಗಳನ್ನು 'ಸಾಲಭಂಜಿಕೆ'ಗಳೆಂದೂ 'ಮದನಿಕೆ'ಗಳೆಂದೂ ಕರೆಯುತ್ತಾರೆ.ಸಂಸ್ಕೃತದ ಸಾಲಭಂಜಿಕಾ ಪದವು 'ಸಾಲ' ಅಥವಾ 'ಶಾಲ' ಎಂದರೆ ಹೊರಗೋಡೆ ಎಂದೂ, 'ಭಂಜಿಕಾ' ಎಂದರೆ ಗೊಂಬೆ ಅಥವಾ ಪುತ್ಥಳಿ ಎಂದೂ ಅರ್ಥವಿರುವ ಪದಗಳಿಂದ ಉಂಟಾಗಿದೆ. ಇದರ ಕನ್ನಡ ರೂಪಾಂತರವಾದ 'ಸಾಳಬಂದಿಕೆ' ಎಂಬ ಪದವು 36ನೇ ಶಿಲಾಬಾಲಿಕೆಯ ಪೀಠ ಶಾಸನದಲ್ಲಿದೆ. 'ಮದನಿಕಾ' ಎಂಬ ಪದವು 'ಮದನ ಕೈ' ಎಂಬ ಪದಗಳಿಂದ ಉಂಟಾಗಿದ್ದು, ಕಂಬದ ಬೋದಿಗೆಗೆ ಆಧಾರವಾಗಿರಿಸಿರುವ ಅಲಂಕಾರಶಿಲೆ ಎಂದು ಇದರ ಅರ್ಥ. ಹಾಗಾಗಿ ಇದು ಪ್ರಾಯಶಃ ಸ್ತ್ರೀಸೂಚಕ ಸಂಸ್ಕೃತದ ಪದವಷ್ಟೇ ಅಲ್ಲದೇ ಕನ್ನಡದಿಂದಲೂ ಆಗಿದೆ. ಈ ಸುಂದರ ಶಿಲಾಬಾಲಿಕೆಗಳು ಶೃಂಗಾರಮಯವಾಗಿ ಕಂಡರೆ, ಕೆಲವರಿಗೆ ಆಧ್ಯಾತ್ಮಿಕವಾಗಿಯೂ ಕಂಡಿವೆ. ಒಂದೊಂದು ಪುತ್ಥಳಿಯ ಭಂಗಿ ಮತ್ತು ಚಟುವಟಿಕೆಯ ಆಧಾರದ ಮೇಲೆ ಒಂದೊಂದು ಹೆಸರನ್ನು ಕೊಡಲಾಗಿದೆ. ಆದರೆ ಈ ಹೆಸರುಗಳಲ್ಲಿ ವ್ಯತ್ಯಾಸಗಳೂಅಲ್ಲಲ್ಲಿವೆ. ದೇವಾಲಯದ ಮಾರ್ಗದರ್ಶಿಗಳು ಒಂದು ರೀತಿಯ ಹೆಸರುಗಳನ್ನು ಹೇಳಿದರೆ, ಪುಸ್ತಿಕೆಗಳಲ್ಲಿ ಸ್ವಲ್ಪ ವ್ಯತ್ಯಾಸದಿಂದ ಇರುವುದನ್ನು ಕಾಣಬಹುದು. ಜನರೂ ಸ್ವಲ್ಪ ವ್ಯತ್ಯಾಸ ಮಾಡಿ ಹೇಳಬಹುದು. ಹಾಗಾಗಿ ಇವುಗಳ ಹೆಸರುಗಳು ನಿರ್ದಿಷ್ಟವೆಂದು ಹೇಳಲಾಗುವುದಿಲ್ಲ. ಈ ಶಿಲಾಬಾಲಿಕೆಯರು ಶ್ರೀಕೇಶವನ ಅಂತಃಪುರದ ಸಖಿಯರು ಎಂಬ ಭಾವದಲ್ಲಿ ಶ್ರೀ ಡಿ.ವಿ.ಗುಂಡಪ್ಪನವರು ಇಲ್ಲಿರುವ ಒಂದೊಂದು ಶಿಲಾಬಾಲಿಕೆಯರ ಕುರಿತೂ ಸುಂದರ ಪದ್ಯಗಳನ್ನು ಬರೆದಿದ್ದು, ಆ ಪದ್ಯಗಳು 'ಅಂತಃಪುರಗೀತೆಗಳು' ಎಂಬ ಹೆಸರಿನಲ್ಲಿ ಸಂಕಲನಗೊಂಡಿವೆ. ಈ ಶಿಲಾಬಾಲಿಕೆಗಳನ್ನು ನೋಡುವುದು ಒಂದು ದಿವ್ಯ ಶೃಂಗಾರರಸಾನುಭವ! ಈಗ ಈ ಶಿಲಾಬಾಲಿಕೆಯರನ್ನು ನೋಡೋಣ, ದೇವಾಲಯದ ಪೂರ್ವದ್ವಾರದಿಂದ, ಎಡದಿಂದ ಬಲಕ್ಕೆ ಆಲಯದ ಸುತ್ತ, ಅಂದರೆ ಪ್ರದಕ್ಷಿಣೆ ಮಾಡುವಂತೆ ನಡೆಯುತ್ತಾ ಕತ್ತೆತ್ತಿ ನೋಡುತ್ತಾ ಹೋದರೆ ಇವು ಕಾಣುತ್ತವೆ. ಇವುಗಳ ಹಿಂದೆ, ಪುಷ್ಪಲತೆಯ ಸುಂದರ ಪ್ರಭಾವಳಿಯಿದೆ. ಬನ್ನಿ, ಈಗ ಈ ವಿವಿಧ ಭಂಗಿಗಳ ಸುಂದರ ಶಿಲಾಬಾಲಿಕೆಯರ ಪರಿಚಯ ಮಾಡಿಕೊಳ್ಳೋಣ, ಅವರ ಗಾಯನ, ನರ್ತನ, ವೈಯಾರಗಳನ್ನು ಆನಂದಿಸೋಣ. 1. ದರ್ಪಣ ಸುಂದರಿ ಈ ಸುಂದರ ಶಿಲಾಬಾಲಿಕೆ ತನ್ನ ಎಡಗೈಯಲ್ಲಿ ಕನ್ನಡಿ ಹಿಡಿದು ಬಲಗೈಯಲ್ಲಿ ಕುಂಕುಮ ಹಿಡಿದು ತನ್ನ ಹಣೆಗೆ ಹಚ್ಚಿಕೊಳ್ಳಲು ಕನ್ನಡಿ ನೋಡಿಕೊಳ್ಳುತ್ತಿದ್ದಾಳೆ. ಕನ್ನಡಿಯ ಹಿಂಭಾಗದಲ್ಲಿ ಕಟ್ಟು ಇದ್ದು, ಅದು ಆಧುನಿಕ ಕನ್ನಡಿಯಂತಿದೆ! ಸುಂದರವಾದ ಆಭರಣಗಳನ್ನುಧರಿಸಿರುವ ಇವಳು, ಕಾಳಿದಾಸನು ಮೇಘದೂತದಲ್ಲಿ ವರ್ಣಿಸಿರುವ ಅತ್ಯಂತ ಸುಂದರ ಹೆಣ್ಣಿನ ರೂಪದ ಯಥಾವತ್ತಾದ ಚಿತ್ರಣವಾಗಿದ್ದಾಳೆ. ತೆಳುವಾದ ತನು, ಸುಂದರ ದಂತಪಂಕ್ತಿಗಳು, ಯೌವನದಿಂದ ತುಂಬಿರುವವಳು, ಪಕ್ವಗೊಂಡ ಬಿಂಬಫಲದಂಥ ತುಟಿಗಳು, ಸಣ್ಣದಾದ ಸೊಂಟ, ಆಳವಾದ ನಾಭಿ, ಹೆದರಿದಹರಿಣದಂಥ ಕಣ್ಣುಳ್ಳವಳು, ತುಂಬಿದ ಕುಚಗಳ ಭಾರದಿಂದ ಸ್ವಲ್ಪ ಬಾಗಿರುವವಳು, ತುಂಬು ನಿತಂಬಗಳ ಭಾರದಿಂದ ಮೆಲ್ಲನೆ ನಡೆಯುವವಳು.. ಹೀಗೆ! ಆದರೆ ಈ ಮದನಿಕೆಯ ಮುಖದಲ್ಲಿ ವಿರಹದ ಛಾಯೆಯನ್ನೂ ಕಾಣಬಹುದು. ತಾನು ಇಷ್ಟು ಸುಂದರವಾಗಿದ್ದರೂ ತನ್ನ ಪ್ರಿಯತಮನಿಂದ ದೂರವಾಗಿರುವುದರಿಂದ ತನ್ನ ಸೌಂದರ್ಯದಿಂದ ಏನು ಪ್ರಯೋಜನ ಎಂಬಂತೆ ವಿರಹಿತಳಾಗಿರುವಂತಿದೆ. ಇವಳ ಬಲಕ್ಕೆ ಸಖಿಯೊಬ್ಬಳು ಕೋತಿಮರಿಯೊಂದನ್ನು ಎತ್ತಿಕೊಂಡು ಅದಕ್ಕೆ ತಿನ್ನುವುದಕ್ಕೆ ದ್ರಾಕ್ಷಿಯ ಗೊಂಚಲನ್ನು ಕೊಡುತ್ತಿದ್ದಾಳೆ. ಹೀಗೆ ದರ್ಪಣ ಅಥವಾ ಕನ್ನಡಿಯನ್ನುಹಿಡಿದುಕೊಂಡಿರುವುದರಿಂದಲೇ ಈ ಶಿಲಾಬಾಲಿಕೆಗೆ 'ದರ್ಪಣ ಸುಂದರಿ' ಎಂದು ಹೆಸರು. ಬಹಳ ಜನಪ್ರಿಯವೂ ಅತ್ಯಂತ ಸುಂದರವೂ ಆಗಿರುವ ಈ ಶಿಲ್ಪ, ಬೇಲೂರಿನ ಮುಖ್ಯಚಿಹ್ನೆಯಾಗಿ ಎಲ್ಲೆಡೆ ತೋರಿಸಲಾಗಿದೆ. ಇಂಥ ಶಿಲ್ಪ, ಖಜುರಾಹೋ ದೇವಾಲಯಗಳಲ್ಲೂ ಕಂಡುಬರುತ್ತದೆ. 2. ಶುಕಭಾಷಿಣಿ ಈ ಸುಂದರ ಶಿಲಾಬಾಲಿಕೆಯು ತನ್ನ ಎಡಗೈಯ ಮೇಲೆ ಒಂದು ಗಿಳಿಯನ್ನಿಟ್ಟುಕೊಂಡು ಯಾವುದೋ ಸಂದೇಶ ಹೇಳುತ್ತಿದ್ದಾಳೆ. ಅವಳ ಮುಖಭಾವವು ತನ್ನ ಪ್ರೇಮಿಗೆ ಪ್ರೇಮಸಂದೇಶ ಹೇಳುತ್ತಿರುವಂತಿದೆ. ಹಿಂದಿನ ಕಾವ್ಯಗಳಲ್ಲಿ ಪ್ರೇಮಿಗಳು ಹೀಗೆ ಪಕ್ಷಿಗಳ ಮೂಲಕ ಪ್ರೇಮಸಂದೇಶ ಕಳಿಸುವ ಪ್ರಸಂಗಗಳನ್ನು ಕಾಣಬಹುದು. ಉದಾಹರಣೆಗೆ ನಳದಮಯಂತಿಯರ ಪ್ರೇಮ ಕಥೆಯಲ್ಲಿ ನಳ, ದಮಯಂತಿಯರಿಬ್ಬರೂ ಒಂದು ಹಂಸದ ಮೂಲಕ ತಮ್ಮ ಪ್ರೇಮಸಂದೇಶ ಕಳಿಸುವ ಸುಂದರ ಪ್ರಸಂಗವಿದೆ. ಅದೇ ರೀತಿ, ಮನ್ಮಥನ ಅವತಾರವಾದ ಪ್ರದ್ಯುಮ್ನನ ಸೌಂದರ್ಯವನ್ನು ಅಸುರನಾದ ವಜ್ರನಾಭನ ಮಗಳು ಪ್ರಭಾವತಿಯ ಬಳಿ ಹಂಸವೊಂದು ವರ್ಣಿಸಿ ಹೇಳಿ ಅವಳಲ್ಲಿ ಪ್ರೇಮವನ್ನುಂಟುಮಾಡಿದಾಗ, ಅವಳೂಅವನಿಗೆ ಆ ಹಂಸದ ಮೂಲಕ ಸಂದೇಶ ಕಳಿಸುತ್ತಾಳೆ. ಸಂಸ್ಕೃತದಲ್ಲಿ ಶ್ರೀರಾಮನು ಸೀತೆಗೆ ಹನುಮಂತನ ಮೂಲಕ ಸಂದೇಶ ಕಳಿಸುವ ಕಥೆಯ ಆಧಾರದಿಂದ ವಿರಹದಲ್ಲಿರುವ ಶಾಪಗ್ರಸ್ತ ಯಕ್ಷನು ದೂರದಲ್ಲಿರುವ ತನ್ನ ಪತ್ನಿಗೆ ಒಂದು ಮೋಡದ ಮೂಲಕ ಪ್ರೇಮಸಂದೇಶ ಕಳಿಸುವ ಸುಂದರ ಕಲ್ಪನೆಯುಳ್ಳ ಸೊಗಸಾದ 'ಮೇಘದೂತ' ಎಂಬ ಕಾವ್ಯವನ್ನು ಕಾಳಿದಾಸನು ಬರೆದಿದ್ದಾನೆ. ಶುಕಭಾಷಿಣಿ ಶಿಲಾಬಾಲಿಕೆಯನ್ನು ನೋಡಿದಾಗ ಇವೆಲ್ಲವೂ ನೆನಪಾಗುತ್ತದೆ. (ಮುಂದುವರೆಯುವುದು) -ಡಾ. ಬಿ.ಆರ್.ಸುಹಾಸ್9880451062 (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/60791ಗೆ ಭೇಟಿನೀಡಿ.