ನಾನು ಬ್ರೂಸ್ ಅಲ್ಲ, ಕೈಟ್ಲಿನ್ ಜೆನ್ನರ್! ಬ್ರೂಸ್ ಜೆನ್ನರ್ ಕ್ರೀಡಾಪಟು, ಅಮೆರಿಕದ ರಿಯಾಲಿಟಿ ಶೋನ ಸ್ಟಾರ್. ಈಗ 65ನೇ ವಯಸ್ಸಿನಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಸುದ್ದಿಯಲ್ಲಿದ್ದಾರೆ. ಬ್ರೂಸ್ ಜೆನ್ನರ್ ಕ್ರೀಡಾಪಟು, ಅಮೆರಿಕದ ರಿಯಾಲಿಟಿ ಶೋನ ಸ್ಟಾರ್. ಈಗ 65ನೇ ವಯಸ್ಸಿನಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಸುದ್ದಿಯಲ್ಲಿದ್ದಾರೆ. ವಿವಿಧ ಚಿಕಿತ್ಸೆ ಮತ್ತು ಲಿಂಗ ಪರಿವರ್ತನೆಯ ಶಸ್ತ್ರಉಚಿಕಿತ್ಸೆ ಮೂಲಕ ಹೆಣ್ಣಾಗಿದ್ದಾರೆ. ತಮ್ಮ ಹೆಸರನ್ನು ಕೈಟ್ಲಿನ್ ಜೆನ್ನರ್ ಎಂದು ಬದಲಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ, ಅಮೆರಿಕದ ಮಾಧ್ಯಮದಲ್ಲಿ ಅವರದ್ದೇ ಸುದ್ದಿ. `ನಾನು ಹೆಣ್ಣು' ಹಾಗೆಂದು ಬ್ರೂಸ್ ಜೆನ್ನರ್ ಘೋಷಿಸಿ ಕೊಂಡಿದ್ದಾರೆ. ಇತ್ತೀಚಿನ ವರೆಗೆ ಬ್ರೂಸ್ ಜೆನ್ನರ್ ಹೆಸರಿನ ಗಂಡು ಎಂದು ಗುರುತಿಸಿಕೊಂಡಿದ್ದ ಇವರು ಹೆಣ್ಣಾದ ಮೇಲೆ, ಹೆಸರನ್ನು ಕೈಟ್ಲಿನ್ ಜೆನ್ನರ್ ಎಂದು ಬದಲಿಸಿಕೊಂಡಿದ್ದಾರೆ. ಜೆನ್ನರ್ ಈಗ ವಿಶ್ವದಾದ್ಯಂತ ಚರ್ಚೆಯಾಗುತ್ತಿರುವ ವ್ಯಕ್ತಿ. ಬರಾಕ್ ಒಬಾಮಾ ಕೂಡ ಟ್ವೀಟ್ ಮಾಡಿ ಜೆನ್ನರ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಗತ್ತಿನ ಪಾಪರಾಝಿಗಳು ಈಗ ಕೈಟ್ಲಿನ್ ಜೆನ್ನರ್ ಹಿಂದೆ ಬಿದ್ದಿದ್ದಾರೆ. ವ್ಯಾನಿಟಿ ಫೇರ್ ಪತ್ರಿಕೆ ಜೆನ್ನರ್ ಹೊಸ ರೂಪದ ಛಾಯಾಚಿತ್ರವನ್ನು `ಕಾಲ್ ಮಿ ಕೈಟ್ಲಿನ್' ಎಂಬ ಶೀರ್ಷಿಕೆಯೊಂದಿಗೆ ಮುಖಪುಟದಲ್ಲಿ ಪ್ರಕಟಿಸಿತು. ಜೊತೆಗೆ ಡೈನ್ ಸಾಯರ್ ಅವರು ನಡೆಸಿದ ಸಂದರ್ಶನದಲ್ಲಿ ಜೆನ್ನರ್ ತನ್ನೊಳಗಿದ್ದ ಹೆಣ್ತನದ ಕುರಿತ ತಮ್ಮ ಅನುಭವ ಮತ್ತು ಆಲೋಚನೆಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಮೂರು ಮದುವೆ, ಆರು ಮಕ್ಕಳೊಂದಿಗೆ ವಿಲಾಸಿ ಬದುಕನ್ನು ಬದುಕಿದ ಜೆನ್ನರ್ ವೈಯಕ್ತಿಕವಾಗಿ ತಮ್ಮದೇ ಐಡೆಂಟಿಯ ಸಮಸ್ಯೆಯಿಂದ ಜೀವನದುದ್ದಕ್ಕೂ ಬಳಲಿದ್ದರು. 80ರ ದಶಕದಲ್ಲಿ ಹೆಣ್ಣಿನ ಉಡುಪುಗಳನ್ನೇ ಧರಿಸುತ್ತಿದ್ದ ಜೆನ್ನರ್ ಕ್ರಿಸ್ ಕರ್ದಾಶಿಯಾ ಅವರನ್ನು ವಿವಾಹವಾಗುವ ಮೂಲಕ ಸಹಜ ಪುರುಷರಂತೆ ಇರುವ ಪ್ರಯತ್ನ ಮಾಡಿದ್ದರು. ಆದರೆ ತಾನು ಹೆಣ್ಣು ಎಂಬ ಭಾವ ಅವರಿಗೆ ಕಾಡುತ್ತಲೇ ಇತ್ತು. ಈಗ್ಗೆ ಐದು ವರ್ಷಗಳ ಹಿಂದೆ ಲಿಂಗ ಬದಲಿಸುವ ನಿರ್ಧಾರಕ್ಕೆ ಬಂದರು. ಐದು ವರ್ಷಗಳ ಕಾಲ ಹಾರ್ಮೋನ್ ಗಳನ್ನು ನಿರಂತರವಾಗಿ ತೆಗೆದುಕೊಂಡಿದ್ದಾರೆ. ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡರು. ನಂತರದಲ್ಲಿ ಲಿಂಗ ನಿರ್ಧರಿಸುವ ದೈಹಿಕ ಅಂಗಾಂಗಗಳ ಮಾರ್ಪಾಡಿಗೆ ಒಳಗಾದರು. ಸಂದರ್ಶನ ವ್ಯಾನಿಟಿ ಫೇರ್‍ನಲ್ಲಿ ಚಿತ್ರ ಪ್ರಕಟವಾಗುತ್ತಿದ್ದಂತೆ ವಿಶ್ವದೆಲ್ಲೆಡೆಯಿಂದ ಕೈಟ್ಲಿನ್ ಸುದ್ದಿಯೋ ಸುದ್ದಿ. ಅಮೆರಿಕದ ಎಬಿಸಿ ವಾಹಿನಿ ಅವರ ಸಂದರ್ಶನವನ್ನು ಮಾಡಿತು. ಅದರಲ್ಲಿ ಕೈಟ್ಲಿನ್ ಹೇಳಿದ ಕೆಲ ಮಾತುಗಳಿವು: `ನಾನು ಗಂಡೊ, ಹೆಣ್ಣೊ ಎಂಬ ಬಗ್ಗೆ ನಾನು ಬಹಳ ಕಾಲ ಗೊಂದಲದಲ್ಲೇ ಇದ್ದೆ. ನಾನು ಯಾರದೋ ದೇಹದಲ್ಲಿರಲಿಲ್ಲ. ನನ್ನ ಮಿದುಳು ಗಂಡಿಗಿಂತ ಹೆಚ್ಚಾಗಿ ಹೆಣ್ಣಿನಂತೆ ವರ್ತಿಸುತ್ತಿತ್ತು, ಪ್ರತಿಕ್ರಿಯಿಸುತ್ತಿತ್ತು. ಆದರೆ ಜನ ನನ್ನನ್ನು ಭಿನ್ನವಾಗಿ ನೋಡುತ್ತಿದ್ದರು. ನನ್ನನ್ನು ಕಟ್ಟುಮಸ್ತು ದೇಹದ ಗಂಡಿನಂತೆ ನೋಡುತ್ತಿದ್ದರು. ನನ್ನ ಹೃದಯ ಮತ್ತು ಆತ್ಮ ಮತ್ತು ನಾನು ಬದುಕಿನಲ್ಲಿ ಮಾಡುತ್ತಿದ್ದ ಪ್ರತಿ ಕೆಲಸ ಬೇರೆಯೇ ಆಗಿತ್ತು. ಅದು ಹೆಣ್ಣಾಗಿತ್ತು''. ``8ನೇ ವಯಸ್ಸಿನಲ್ಲಿ ನಾನು ಅಮ್ಮನ, ತಂಗಿಯ ಉಡುಪು ಹಾಕಿಕೊಳ್ಳಲು ಯತ್ನಿಸುತ್ತಿದೆ. ನನಗೆ ಆಗ ಹೆಣ್ಣು-ಗಂಡು ಎಂಬುದೂ ಗೊತ್ತಿರಲಿಲ್ಲ. ಆದರೆ ನನ್ನೊಳಗೇನೊ ಸುಪ್ತವಾಗಿತ್ತು. ಆ ಬಟ್ಟೆಗಳ ಬಗ್ಗೆ ವಿಪರೀತ ಕುತೂಹಲ ಮತ್ತು ಆಸಕ್ತಿಯನ್ನು ತೋರುತ್ತಿದ್ದೆ''. `ಲೈಂಗಿಕ ಬಯಕೆ ಮತ್ತು ಲಿಂಗ ಎರಡು ಬೇರೆ. ನನ್ನ ಲೈಂಗಿಕತೆಯ, ನಾನು ಹೊಂದಿದ್ದ ದೈಹಿಕತೆಗೂ ಸಂಬಂಧವಿಲ್ಲ. ಅದು ಸಂಪೂರ್ಣ ಭಿನ್ನ'' `ಮುಕ್ತ ಮನಸ್ಸು ಮತ್ತು ವಿಶಾಲವಾದ ಹೃದಯವುಳ್ಳವರಾಗಬೇಕು'' ಬಿಸಿ ಚರ್ಚೆಗೆ ಮುನ್ನುಡಿ ಲಿಂಗ ಪರಿವರ್ತನೆ ಸಾಮಾಜಿಕವಾಗಿ ನೋವು ಅನುಭವಿಸುತ್ತಿರುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ನೆಮ್ಮದಿ ತರುವುದೇ ಎಂಬ ಚರ್ಚೆಗೆ ಮತ್ತೆ ಚಾಲನೆ ದೊರೆತಿದೆ. ಲಿಂಗಪರಿವರ್ತನೆ ವೈದ್ಯಕೀಯವಾಗಿ ಹಲವು ಸಮಸ್ಯೆಗಳಿರುವ, ಪ್ರತಿಕೂಲ ಪರಿಣಾಮಗಳನ್ನು ಒಳಗೊಂಡ ಕ್ರಿಯೆ ಎಂಬ ತಕರಾರು ದಶಕಗಳಿಂದಲೂ ಇದೆ. ಬ್ರೂಸ್ ಲಿಂಗಪರಿವರ್ತನೆಗೆ ಒಳಗಾಗುವ ಮೂಲಕ ಮತ್ತೆ ಈ ಚರ್ಚೆ ಕಾವು ಪಡೆದುಕೊಂಡಿದೆ. ಲಿಂಗ ಪರಿವರ್ತನೆಯ ವಿದ್ಯಮಾನ ಇತ್ತೀಚಿನದೇನಲ್ಲ. ಐವತ್ತರ ದಶಕದಿಂದಲೂ ಲಿಂಗ ಪರಿವರ್ತನೆಯ ಪ್ರಯತ್ನಗಳು ನಡೆಯುತ್ತಲೇ ಇವೆ. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಕ್ಲಿನಿಕ್‍ಗಳಲ್ಲಿ ಗಂಡನ್ನು ಹೆಣ್ಣಾಗಿ ಪರಿವರ್ತಿಸುವ ಶಸ್ತ್ರಚಿಕಿತ್ಸೆಗಳು ಆರಂಭದಲ್ಲಿ ನಡೆದವು. ಇದು ಅರವತ್ತು ಮತ್ತು 70ರ ದಶಕದಲ್ಲೂ ಮುಂದುವರೆಯಿತು. ಆದರೆ ಮೂರು ದಶಕಗಳ ಅವಧಿಯಲ್ಲಿ ನಡೆದ ಶಸ್ತ್ರಚಿಕಿತ್ಸೆಗಳ ಫಲಿತಾಂಶವನ್ನು ಹೊಂದಿಸಿ ನೋಡಿದಾಗ ಯಶಸ್ವಿಯಾಗಿ ಕಂಡಿತಾದರೂ, ಅಪಾಯಕಾರಿ ಎಂಬ ಅಂಶವು ಹೊರಬಿತ್ತು. ವಿಶ್ವವಿದ್ಯಾನಿಲಯಗಳು ಪ್ರಯೋಗವನ್ನು ಅಲ್ಲಿಗೆ ಕೈ ಬಿಟ್ಟವು. ಆದರೆ ಖಾಸಗಿ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದನ್ನು ಮುಂದುವರೆಸಿದವು. ಯಾವುದೇ ಹೊಣೆಗಾರಿಕೆ, ನೈತಿಕತೆಯನ್ನು ಲೆಕ್ಕಿಸಿದೆ, ನಾಚಿಕೆ, ಅವಮಾನ, ಪಾಪಪ್ರಜ್ಞೆ ಮತ್ತು ಆತ್ಮಹತ್ಯೆಗೆ ಕಾರಣವಾಗುವಂಥ ಪ್ರಕರಣಗಳಿಗೆ ಕಾರಣರಾದರು. ಕೈಟ್ಲಿನ್ ಸುದ್ದಿ ಹೊರ ಬಿದ್ದ ಬಳಿಕ ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ವಾಲ್ಟರ ಹೇಯರ್ ಈ ಕುರಿತು ಸುದೀರ್ಘ ಲೇಖನ ಬರೆದಿದ್ದು, ಲೈಂಗಿಕ ಅಲ್ಪಸಂಖ್ಯಾತರು ಜೆಂಡರ್ ಡಿಸ್ ಪೊರಿಯಂ ಎಂಬ ಮಾನಸಿಕ ತೊಳಲಾಟಕ್ಕೆ ಬಿದ್ದಿರುತ್ತಾರೆ. ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ಅದರಿಂದ ಮುಕ್ತಿ ನೀಡುತ್ತದೆ ಎಂಬ ಭಾವನೆ ಇದೆ. ಆದರೆ ಇದುವರೆಗೂ ನಡೆದಿರುವ ಶಸ್ತ್ರಚಿಕಿತ್ಸೆಗಳು ಯಶಸ್ವಿ ಫಲಿತಾಂಶವನ್ನೂ ನೀಡಿಲ್ಲ. ಅನೇಕರು ಶಸ್ತ್ರಚಿಕಿತ್ಸೆ ಬಳಿಕ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ ಎಂದು ವಿವರಿಸಿದ್ದಾರೆ. ಆದರೆ ಕೈಟ್ಲಿನ್ ಪ್ರಕರಣ, ಸಾಮಾಜಿಕ ನಿಂದನೆಗೆ ಒಳಗಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವವರು ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆ ಮೂಲಕ ಹೊಸ ಬದುಕು ಕಂಡುಕೊಳ್ಳಬಹುದು ಎಂಬ ಆಶಾವಾದ ಮೂಡಿದೆ. ಪ್ರಶಸ್ತಿಯೂ ಬಂದಿದೆ! ಜೆನ್ನರ್, ಕೈಟ್ಲಿನ್ ಹೆಸರಿನೊಂದಿಗೆ ತನ್ನ ಹೊಸ ಗುರುತನ್ನು ಬಹಿರಂಗ ಗೊಳಿಸಿದ್ದಕ್ಕೆ ಆರ್ಥರ್ ಆಷ್ ಕರೇಜ್ ಪ್ರಶಸ್ತಿ ಲಭಿಸಿದೆ. ಜುಲೈ ತಿಂಗಳಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ. ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಮಿತಿ ನೀಡಿರುವ ಕಾರಣವಿದು: ` ಬಹುಕಾಲದಿಂದ ತನ್ನೊಳಗೆ ಇದ್ದ ಸತ್ಯವನ್ನು ಹೊರಹಾಕುವ ಧೈರ್ಯವನ್ನು ತೋರಿದ್ದಕ್ಕೆ, ನೆಮ್ಮದಿಯನ್ನಷ್ಟೇ ಅಲ್ಲ, ಕೆಲವು ಅಹಿತರಕರ ಅನುಭವಗಳಿಗೂ ಕಾರಣವಾಗಬಹುದಾದ ಹೊಸ ಪ್ರಯಾಣಕ್ಕೆ ಮುಂದಾಗಿದ್ದಕ್ಕೆ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಎದುರಿಸುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನೆರವಾಗಿದ್ದಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ'' ಗಿನ್ನೆಸ್ ದಾಖಲೆ! ಬ್ರೂಸ್, ಕೈಟ್ಲಿನ್ ಎಂದು ಬದಲಾಗುತ್ತಿದ್ದಂತೆ ದಾಖಲೆಯನ್ನೇ ಬರೆದಿದ್ದಾರೆ. ತಮ್ಮ ಹೆಣ್ಣಿನ ಅವತಾರದ ಟ್ವಿಟರ್ ಅಕೌಂಟ್ (@Caitly_jenner) ಆರಂಭಿಸಿದರು. ಕೇವಲ ನಾಲ್ಕು ಗಂಟೆ 7 ನಿಮಿಷಗಳಲ್ಲಿ 15 ಲಕ್ಷ ಫಾಲೋಯರ್ಸ್ ಈ ಖಾತೆಗೆ ಲಭಿಸಿದರು. ಇದು ಇತ್ತೀಚೆಗೆ ತಾನೇ ಟ್ವಿಟರ್ ಪ್ರವೇಶಿಸಿದ ಅಮೆರಿಕದ ಬರಾಕ್ ಒಬಾಮಾ ಅವರ ದಾಖಲೆಯನ್ನು ಹಿಂದಿಕ್ಕಿತ್ತು. ಏಕೆಂದರೆ ಒಬಾಮಾ ಅವರು ಟ್ವಿಟರ್ ಖಾತೆ ತೆರೆದ ಐದು ಗಂಟೆಗಳ ಅವಧಿಯಲ್ಲಿ 15 ಲಕ್ಷ ಫಾಲೋಯರ್ ಗಳನ್ನು ಗಳಿಸಿದ್ದರು. ಈಗೇನು ಮಾಡುವರು?! ಕೈಟ್ಲಿನ್, ತಮ್ಮ ಪೂರ್ವಾಶ್ರಮದಲ್ಲಿ ಅಂದರೆ ಬ್ರೂಸ್ ಜೆನ್ನರ್ ಆಗಿದ್ದಾಗ ಕ್ಯಾಲಿಫೊರ್ನಿಯಾದ ಪ್ರತಿಷ್ಠಿತ ಗಾಲ್ಫ್ ಕ್ಲಬ್ ಸದಸ್ಯತ್ವ ಪಡೆದಿದ್ದರು. ಹದಿನೈದು ವರ್ಷಗಳ ಹಿಂದೆ ಸದಸ್ಯತ್ವ ಪಡೆದ ಜೆನ್ನರ್ ಇದಕ್ಕಾಗಿ ಕೊಟ್ಟ ಹಣ 2.25 ಲಕ್ಷ ಡಾಲರ್. ಅಂದರೆ 1.35 ಲಕ್ಷ ರು.ಗಳು. ಇಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ನಿಯಮಗಳನ್ನು ಪಾಲಿಸಲಾಗುತ್ತದೆ. ಮಹಿಳೆಯರಿಗೆ ಪ್ರತ್ಯೇಕವಾದ ಭೋಜನ ವ್ಯವಸ್ಥೆ ಮಾಡಲಾಗಿದೆ. ವಿಪರ್ಯಾಸದ ಸಂಗತಿಯೆಂದರೆ ದುರಸ್ತಿ ಕಾರಣಕ್ಕೆ ಕಳೆದ ಡಿಸೆಂಬರ್‍ನಿಂದ ಮಹಿಳೆಯರಿಗೆ ಇದ್ದ ಸೌಲಭ್ಯಗಳು ಸಿಗುತ್ತಿಲ್ಲ. ಈಗ ಜೆನ್ನರ್ ಹೆಣ್ಣಾದ ಬಳಿಕ ಈ ಕ್ಲಬ್‍ನಲ್ಲಿ ತಮ್ಮನ್ನು ಹೇಗೆ ಗುರುತಿಸಿಕೊಳ್ಳುತ್ತಾರೆ? ಸದಸ್ಯತ್ವವನ್ನು ಮುಂದುವರೆಸಲು ಏನು ಮಾಡುತ್ತಾರೆ ಎಂಬ ಚರ್ಚೆ ಅಮೆರಿಕಾದ ಮಾಧ್ಯಮಗಳಲ್ಲಿ ನಡೆದಿದೆ. ಭಾರತದಲ್ಲೂ ಇದೆ! ಹೆಣ್ಣಿನ ಸಂವೇದನೆಗಳನ್ನಿಟ್ಟುಕೊಂಡು ಗಂಡಿನ ಅವತಾರದಲ್ಲಿ ಬದುಕುವುದು ಕಷ್ಟ. ಅವಮಾನ, ನೋವು, ಸಂಕಟಗಳಲ್ಲಿ ಅನೇಕರು ಮಾನಸಿಕವಾಗಿ ಕುಸಿದು ಹೋಗಿದ್ದಾರೆ, ಬದುಕನ್ನೇ ಕೊನೆಗಾಣಿಸಿಕೊಂಡಿದ್ದಾರೆ. ಕೈಟ್ಲಿನ್ ಪ್ರಕರಣ ಬೆಳಕಿಗೆ ಬರುವುದರೊಂದಿಗೆ ಲಿಂಗ ಬದಲಿಸಿಕೊಳ್ಳುವ ಪ್ರಕರಣಕ್ಕೆ ಮುಕ್ತವಾದ ವಾತಾವರಣವೊಂದು ಸೃಷ್ಟಿಯಾಗುತ್ತಿದೆ. ಒಂದು ಅಂಕಿ ಅಂಶದ ಪ್ರಕಾರ ದೆಹಲಿಯಲ್ಲಿ ವರ್ಷಕ್ಕೆ 25ರಿಂದ 30 ಲಿಂಗ ಬದಲಿಸುವ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಈ ಪೈಕಿ ಸಾಮಾನ್ಯ ವಾಗಿ ಗಂಡಿನಿಂದ ಹೆಣ್ಣಿಗೆ ಲಿಂಗ ಬದಲಿಸುವ ಪ್ರಕರಣಗಳೇ ಹೆಚ್ಚು. ಆದರೆ ಹೆಣ್ಣಿನಿಂದ ಗಂಡಾಗಿ ಬದಲಿಸುವ ಪ್ರಕರಣಗಳು ನಿಧಾನವಾಗಿ ಗೋಚರವಾಗುತ್ತವೆ. ಗಂಡು ಹೆಣ್ಣಾಗುವ ಶಸ್ತ್ರಚಿಕಿತ್ಸೆಗೆ 2 ರಿಂದ 5 ಲಕ್ಷ ರು. ವೆಚ್ಚವಾದರೆ, ಹೆಣ್ಣು ಗಂಡಾಗುವ ಶಸ್ತ್ರ ಚಿಕಿತ್ಸೆಗೆ 4 ರಿಂದ 8 ಲಕ್ಷ ರು.ಗಳಷ್ಟು ವೆಚ್ಚವಾಗುತ್ತದೆ. ವಿಲಿಯಮ್ ಬ್ರೂಸ್ ಜೆನ್ನರ್ ನ್ಯೂಯಾರ್ಕ್‍ನಲ್ಲಿ ಹುಟ್ಟಿ ಬೆಳೆದ ಬ್ರೂಸ್ ಮೂಲತಃ ಕ್ರೀಡಾಪಟು. 1976ರ ಒಲಿಂಪಿಕ್ಸ್‍ನಲ್ಲಿ ಡೆಕಾಥ್ಲಾನ್‍ನಲ್ಲಿ ಚಿನ್ನದ ಪದಕ ಗಳಿಸಿ ಸುದ್ದಿಯಾಗಿದ್ದರು.ದಾಖಲೆಯನ್ನೂ ನಿರ್ಮಿಸಿದ್ದರು. ಈ ಜನಪ್ರಿಯತೆಯಲ್ಲೇ ಟಿವಿ, ಸಿನಿಮಾಗಳಿಗೆ ಬಣ್ಣ ಹಚ್ಚಿದರು. ಜಾಹೀರಾತುಗಳಲ್ಲಿ ಮಿಂಚಿದರು. ತನ್ನ ಮಕ್ಕಳೊಂದಿಗೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ರಿಯಾಲಿಟಿ ಶೋನ ಸ್ಟಾರ್ ಕೂಡ ಆದರು. ಮೂರು ಮದುವೆಯಾಗಿ ಆರು ಮಕ್ಕಳನ್ನು ಹೊಂದಿರುವ ಬ್ರೂಸ್, ಆರು ತಿಂಗಳ ಹಿಂದೆಯೇ ತಮ್ಮೊಳಗೆ ಹೆಣ್ತನ, ಹೆಣ್ಣಿನ ಭಾವನೆಗಳಿರುವ ಬಗ್ಗೆ ಹೇಳಿಕೊಂಡಿದ್ದರು. ಇತ್ತೀಚೆಗೆ ವ್ಯಾನಿಟಿ ಫೇರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬ್ರೂಸ್ ಲಿಂಗ ಬದಲಿಸಿಕೊಂಡಿರುವ ಬಗ್ಗೆ ಮತ್ತು ಹೆಸರನ್ನು ಬದಲಿಸಿಕೊಂಡಿರುವ ಬಗ್ಗೆ ತಿಳಿಸಿದರು. ಪತ್ರಿಕೆಯ ಮುಖಪುಟದಲ್ಲಿ ಹೆಣ್ಣಿನ ಉಡುಪಿನಲ್ಲಿರುವ ಚಿತ್ರ ಪ್ರಕಟವಾಯಿತು. ಜಗತ್ತಿನಲ್ಲಿ ಗಂಡೊಬ್ಬ, ಹೆಣ್ಣಾಗಿ ಬದಲಾದದ್ದು ಇದೇ ಮೊದಲಲ್ಲ. ಆದರೆ ಅದನ್ನು ಮುಕ್ತವಾಗಿ ಹೇಳಿಕೊಂಡ ಉದಾಹರಣೆ ಎಂದು ಜಾಗತಿಕ ಮಾಧ್ಯಮಗಳು ಚರ್ಚಿಸುತ್ತಿವೆ. ಅಷ್ಟೇ ಅಲ್ಲ ಎಬಿಸಿ ವಾಹಿನಿಯಲ್ಲಿ ಪ್ರಸಾರ 2 ಗಂಟೆಗಳ ಸುದೀರ್ಘ ಕಾರ್ಯಕ್ರಮವನ್ನು 1.69 ಕೋಟಿ ಜನ ವೀಕ್ಷಿಸಿದ್ದಾರೆ. ಜುಲೈ ತಿಂಗಳಲ್ಲಿ 8 ಕಂತಿನ ವಿಶೇಷ ಸರಣಿ ಕೂಡ ಪ್ರಸಾರವಾಗುತ್ತಿದೆ.