ಪ್ರಾಚೀನ ಭಾರತದಲ್ಲಿ ಶೃಂಗಾರ (ಭಾಗ-3) ಸಂಸ್ಕೃತ ಸಾಹಿತ್ಯದಲ್ಲಿ ಭರ್ತೃಹರಿಯ ಹೆಸರು ಚಿರಸ್ಥಾಯಿಯಾಗಿದೆ.... ಸಂಸ್ಕೃತ ಸಾಹಿತ್ಯದಲ್ಲಿ ಭರ್ತೃಹರಿಯ ಹೆಸರು ಚಿರಸ್ಥಾಯಿಯಾಗಿದೆ. ಅವನ ನೀತಿಶತಕ, ಶೃಂಗಾರಶತಕ ಮತ್ತು ವೈರಾಗ್ಯಶತಕಗಳು ಶತಕತ್ರಯವೆಂದು ಪ್ರಸಿದ್ಧವಾಗಿವೆ! ಭರ್ತೃಹರಿಯ ಶೃಂಗಾರ ಶತಕದಲ್ಲಿ ಸ್ತ್ರೀಸೌಂದರ್ಯ, ಸಂಭೋಗ ವರ್ಣನೆ, ಋತುವರ್ಣನೆಗಳು ಮನೋಜ್ಞವಾಗಿದ್ದರೂ ಕೆಲವೆಡೆ ಸ್ತ್ರೀ ಮೋಹದ ದೋಷಗಳನ್ನೂ ವೈರಾಗ್ಯ ಪರವಾದ ಶ್ಲೋಕಗಳನ್ನೂ ರಚಿಸಿ ಸೇರಿಸಿರುವುದರಿಂದ ಇದು ಸಂಪೂರ್ಣ ತೆರೆದ ಮನಸ್ಸಿನ ಕಾವ್ಯವಾಗಿಲ್ಲವೆನ್ನಬಹುದು. ಸೂಕ್ಷ್ಮ ಸಂವೇದನೆಗಳಿಲ್ಲದೇ ಸ್ತ್ರೀಯೊಬ್ಬಳ ಬಾಹ್ಯ ಸೌಂದರ್ಯವನ್ನಷ್ಟೇ ಚಿತ್ರಿಸುತ್ತಾ, ಶೃಂಗಾರ ಮತ್ತು ವೈರಾಗ್ಯಗಳ ನಡುವೆ ದ್ವಂದ್ವಕ್ಕೊಳಗಾಗುತ್ತಾನೆ. ಆದರೂ ಕೆಲವು ಪದ್ಯಗಳಲ್ಲಿ ಚಮತ್ಕಾರ, ಶ್ಲೇಷ ಮತ್ತು ಶ್ರೀಮಂತ ವರ್ಣನೆಗಳಿದ್ದು, ಇದು ಇಷ್ಟವಾಗುತ್ತದೆ. ಗ್ರೀಷ್ಮ ಋತುವಿನ ಈ ವರ್ಣನೆಯನ್ನು ನೋಡಿ- ಪ್ರಜೋ ಹೃದ್ಯಾಮೋದಾ ವ್ಯಜನಪವನಶ್ಚಂದ್ರಕಿರಣಾಃ ಪರಾಗಃ ಕಾಸಾರೋ ಮಲಯಜರಜ ಶೀಧುವಿಶದಮ್ ಶುಚಿಃ ಸೌಧೋತ್ಸುಂಗಃ ಪ್ರತನುವಸನಂ ಪಂಕಜದೃಶೋ ನಿದಾಘರ್ತಾವೇತದ್ವಿಲಸತಿ ಲಭಂತೇ ಸುಕೃತಿನಃ ॥ 'ಮನೋಹರ ಪುಷ್ಪಹಾರಗಳು, ಬೀಸಣಿಕೆಗಳ ತಂಪಾದ ಗಾಳಿ, ತಂಪನ್ನೀಯುವ ಬೆಳದಿಂಗಳು, ಸುಗಂಧ ಸೂಸುವ ಪುಷ್ಪಪರಾಗ, ವಿಹಾರಯೋಗ್ಯವಾದ ಕ್ರೀಡಾ ಸರಸ್ಸುಗಳು, ಮಲಯ ಪರ್ವತದ ತಂಗಾಳಿ, ಶುದ್ಧವಾದ, ಸಿಹಿಯಾದ ಮಧು, ಶುಭ್ರವಾದ ದೊಡ್ಡ ಸೌಧಗಳು, ನವಿರಾದ ಅಂದವಾದ ವಸ್ತ್ರಗಳನ್ನು ಧರಿಸಿರುವ ಪದ್ಮಲೋಚನೆಯರಾದ ಪ್ರಿಯತಮೆಯರು, ಇಂಥ ಭೋಗವಸ್ತುಗಳು ಗ್ರೀಷ್ಮ ಋತುವಿನಲ್ಲಿ ಪುಣ್ಯಶಾಲಿಗಳಿಗೆ ದೊರೆಯುತ್ತವೆ!' ಭರ್ತೃಹರಿಯ ಶೃಂಗಾರಶತಕಕ್ಕೆ ಭಿನ್ನವಾಗಿ ಅಮರುಕ ಕವಿಯ 'ಅಮರುಶತಕ' ಬಿಚ್ಚು ಮನಸ್ಸಿನ, ಯಾವುದೇ ಗೊಂದಲ ಅಥವಾ ದ್ವಂದ್ವವಿರದ ವರ್ಣನೆಗಳನ್ನು ಹೊಂದಿದೆ. ಇದರ ಪದ್ಯಗಳು ಬಹಳ ಸೂಕ್ಷ್ಮವಾಗಿ ಪ್ರೇಮವನ್ನು ವರ್ಣಿಸುತ್ತವೆ. ಪ್ರಾಯಶಃ, ಸಂಸ್ಕೃತದ ಶೃಂಗಾರಮುಕ್ತಕ ಕಾವ್ಯಗಳಲ್ಲೇ ಇದು ಅತ್ಯುತ್ತಮವೆನ್ನಬಹುದು. 'ಅಮರುಕನ ಒಂದೊಂದು ಪದ್ಯವೂ ನೂರು ಪ್ರಬಂಧಗಳಿಗೆ, ಸಮ. ಈ ಅಮರುಕನ ಡಮರುಗವನ್ನಾಲಿಸಿದ ಬಳಿಕ ಬೇರಾವ ಕಾವ್ಯವೂ ರುಚಿಸುವುದಿಲ್ಲ' ಎಂಬ ಮಾತುಗಳಿವೆ. ಪ್ರೊ. ಮೆಕ್‌ಡಾನಲ್ ಎಂಬುವರು, 'ವಿಷಯದ ಚಿಕ್ಕ ಪರಿಮಿತಿಯಲ್ಲೇ, ಸಮಾನವಾದ ಭಾವ ಮತ್ತು ಸನ್ನಿವೇಶಗಳಲ್ಲೇ, ಕವಿಯು ಆಲೋಚನೆಗಳ ಆಶ್ಚರ್ಯಕರ ತಿರುವುಗಳೊಂದಿಗೆ ಎಲ್ಲೆಲ್ಲೂ ಹೊಸ ಹೊಸ ಸೂಕ್ಷ್ಮ ಸ್ಪರ್ಶಗಳನ್ನು ನೀಡುತ್ತಾ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ' ಎಂದಿದ್ದಾರೆ. ಹೀಗೆ ಅಮರುಶತಕವು ಶೃಂಗಾರಕಾವ್ಯಗಳಲ್ಲೆಲ್ಲಾ ಶಿಖರಪ್ರಾಯವಾಗಿದೆ. ಇದರ ಒಂದು ಸುಂದರ ಪದ್ಯ, ಮೊದಲು ಕೋಪಗೊಂಡ ದಂಪತಿಗಳು ಹೇಗೆ ನಿಧಾನವಾಗಿ ಒಂದಾದರು ಎಂಬುದನ್ನು ಮನೋಜ್ಞವಾಗಿ ವರ್ಣಿಸುತ್ತದೆ, ನೋಡಿ- ಏಕಸ್ಮಿನ್ ಶಯನೇ ಪರಾಜ್ಞ್ಮಖತಯಾ ವೀತೋತ್ತರಂ ತ್ಯಾಮತೋ ರನ್ಯೋನ್ಯಂ ಹೃದಯಸ್ಥಿತೇಪ್ಯನುನಯೇ ಸಂರಕ್ಷತೋರ್ಗೌರವಮ್ ೤ ದಂಪತ್ಯೋಃ ಶನಕೈರಪಾಂಗವಲನಾನ್ಮಿಶ್ರೀಭವಚ್ಚಕ್ಷುಷೋ ಭಗ್ನೋ ಮಾನಕಲಿಃ ಸಹಾಸರಭಸಂವ್ಯಾವೃತ್ತಕಂಠಗ್ರಹಃ ॥ 'ಒಂದು ಬಾರಿ, ದಂಪತಿಗಳಿಬ್ಬರೂ ಜಗಳವಾಡಿ ಮಂಚದ ಮೇಲೆ ಮಾತುಕತೆಯಿಲ್ಲದೇ ಮುಖ ತಿರುಗಿಸಿಕೊಂಡು ಮಲಗಿದರು. ಇದರಿಂದ ಇಬ್ಬರೂ ಒಳಗೊಳಗೇ ತಪಿಸುತ್ತಾ ಒಬ್ಬರನ್ನೊಬ್ಬರು ಸಮಾಧಾನಪಡಿಸಬೇಕೆಂದು ಆಶಿಸುತ್ತಿದ್ದೂ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಮೌನವಾಗಿದ್ದು ಕಡೆಗಣ್ಣಿನಿಂದ ನೋಡತೊಡಗಿದರು. ಆ ನೋಟಗಳು ಮಿಳಿತವಾಗಲು, ಅವರ ಕೋಪ ಕಲಹ ಮಾಯವಾಗಿ ಇಬ್ಬರೂ ನಗುತ್ತಾ ವೇಗವಾಗಿ ಕೊರಳ ಸುತ್ತ ತೋಳು ಬಳಸಿ ಬಿಗಿಯಪ್ಪುಗೆಯಲ್ಲಿ ಬಂಧಿತರಾದರು'. ಬಿಲ್ಹಣ ಕವಿಯ ಚೌರಪಂಚಾಶಿಕಾ ಅಥವಾ ಚೌರಸುರತಪಂಚಾಶಿಕಾ, ಐವತ್ತು ಪದ್ಯಗಳ ಪುಟ್ಟ ಕಾವ್ಯ. ಅವನದೇ ಪ್ರೇಮಕಥೆಗೆ ಸಂಬಂಧಿಸಿದ ಕಾವ್ಯವಿದೆಂದು ಹೇಳುತ್ತಾರೆ. ಕಾಶ್ಮೀರದ ಕವಿಯಾದ ಬಿಲ್ಹಣನು ರಾಜನೊಬ್ಬನ ಮಗಳಾದ ಶಶಿಕಲೆಗೆ ಸಂಸ್ಕೃತ ಕಲಿಸುತ್ತಾ ಅವಳೊಂದಿಗೆ ಪ್ರೇಮಸಲ್ಲಾಪ ನಡೆಸುತ್ತಿದ್ದು ರಾಜನ ಕೈಗೇ ಸಿಕ್ಕಿಬೀಳುತ್ತಾನೆ! ರಾಜನು ಅವನಿಗೆ ನೇಣುಶಿಕ್ಷೆ ವಿಧಿಸಿ, ನೇಣುಗಂಬದ ಬಳಿ ಅವನ ಕೊನೆಯಾಸೆ ಏನೆಂದು ಕೇಳಿದಾಗ, ಅವನು, ತನಗೆ ತನ್ನ ಪ್ರೇಮಿಯ ವಿನಃ ಬೇರೇನೂ ಬೇಡವೆಂದು, ತಾನು ಅವಳೊಂದಿಗೆ ನಡೆಸಿದ ಪ್ರೇಮಕ್ರೀಡೆಗಳನ್ನು 50 ಶ್ಲೋಕಗಳನ್ನು ಆಶುವಾಗಿ ರಚಿಸಿ ವರ್ಣಿಸುತ್ತಾನೆ. ಇದಕ್ಕೆ ರಾಜನು ಸೋತು ಅವನಿಗೆ ತನ್ನ ಮಗಳನ್ನು ಮದುವೆ ಮಾಡಿದನೆಂದು ಕಥೆ. ಈ ಐವತ್ತು ಶ್ಲೋಕಗಳ ಗುಚ್ಛವೇ 'ಚೌರಪಂಚಾಶಿಕಾ', ಅಂದರೆ ಚೋರತನದಲ್ಲಿ ನಡೆಸಿದ ಪ್ರೇಮ ಎಂಬ ಕಾವ್ಯ. ಈ ಕಾವ್ಯದ ಪಾಠಾಂತರಗಳೂ ಇವೆ. 'ಬಿಲ್ಹಣಕಾವ್ಯ' ಅಥವಾ 'ವೀರಸಿಂಹಚರಿತೆ' ಎಂಬ ಪಾಠಾಂತರದಲ್ಲಿ ಈ ಪೂರ್ವಕಥೆಯಿದ್ದು, ಚೌರಪಂಚಾಶಿಕಾದ ಐವತ್ತು ಪದ್ಯಗಳಲ್ಲಿನ ನಾಲ್ಕನ್ನು ಬಿಟ್ಟು ಬೇರೆಯೇ ಪದ್ಯಗಳಿವೆ. ಪೂರ್ವ ಕಥೆಯಿರುವ ಇನ್ನೊಂದು ಪಾಠಾಂತರವೂ ಇದೆ. ಬಿಲ್ಹಣನನ್ನು ನೇಣಿಗೆ ಕರೆದೊಯ್ದಾಗ, ರಾಜಕುಮಾರಿಯೂ ಹೇಳುವ ಐವತ್ತು ಪದ್ಯಗಳ ಒಂದು ಪಾಠವಿದೆ! ಚೌರಪಂಚಾಶಿಕಾದ ಎಲ್ಲ ಪದ್ಯಗಳೂ 'ಅದ್ಯಾಪಿ' (ಇಂದಿಗೂ) ಎಂದು ಆರಂಭವಾಗಿ, 'ಸ್ಮರಾಮಿ' (ನೆನೆಯುತ್ತೇನೆ) ಎಂದು ಮುಗಿಯುತ್ತದೆ! ಒಂದು ಪದ್ಯವನ್ನು ನೋಡೋಣ- ಅದ್ಯಾಪಿ ತಾಂ ಕನಕಕಾಂತಿಧೃತಾಲಸಾಂಗೀಂ ವ್ರೀಡೋತ್ಸುಕಾಂ ಮದನಭೀತಿವಿಕಂಪಮಾನಾಮ್ ೤ ಅಂಗಾಂಗಸಂಗಪರಿಚುಂಬನಜಾತಮೋಹಾಂ ಮಜ್ಜೀವನೌಷಧಿಮಿವ ಪ್ರಮದಾಂ ಸ್ಮರಾಮಿ ॥ 'ಈಗಲೂ ನಾನು, ಹೊಂಬಣ್ಣದ ಕಾಂತಿಯಿಂದ ಹೊಳೆಯುತ್ತಾ ಯೌವನಭಾರದಿಂದ ಸೋತಿದ್ದ ತನುವಿನ, ರತಿಯ ವಿಷಯದಲ್ಲಿ ನಾಚಿಕೆ, ಉತ್ಸಾಹ, ಭಯಗಳಿಂದ ಕಂಪಿಸುತ್ತಿದ್ದ, ನನ್ನ ಅಂಗಾಂಗ ಸಂಗದಿಂದಲೂ ಚುಂಬನಗಳಿಂದಲೂ ಮೋಹವುದಯಿಸಿದ್ದ, ನನ್ನ ಜೀವನೌಷಧಿಯಂತಹ ಆ ಪ್ರಮದೆಯನ್ನು ನೆನೆಯುವೆ'. ಮೊಘಲ್ ಚಕ್ರವರ್ತಿ ಶಹಜಹಾನನ ಆಸ್ಥಾನದಲ್ಲಿದ್ದ ಜಗನ್ನಾಥ ಪಂಡಿತನೆಂಬ ಕವಿಯ 'ಭಾಮಿನೀವಿಲಾಸ' ಎಂಬ ಕಾವ್ಯದ ಎರಡನೆಯ ಭಾಗವಾದ 'ಶೃಂಗಾರ ವಿಲಾಸ' ಒಂದು ಅದ್ಭುತವಾದ ಶೃಂಗಾರಶತಕ. ಇದರ ಪದ್ಯಗಳು ಒಂದಕ್ಕಿಂತ ಒಂದು ವಿಭಿನ್ನ ಕಲ್ಪನಾವಿಲಾಸದಿಂದ ಕೂಡಿದ್ದು ಬಹು ಸುಂದರವಾಗಿವೆ. ಪ್ರಾಕೃತದ 'ಗಾಥಾಸಪ್ತಶತೀಯ' ಮಾದರಿಯಲ್ಲೇ ಗೋವರ್ಧನಾಚಾರ್ಯನು ಸಂಸ್ಕೃತದಲ್ಲಿ ರಚಿಸಿರುವ ಏಳುನೂರು ಪದ್ಯಗಳ ಆರ್ಯಾಛಂದಸ್ಸಿನ 'ಆರ್ಯಾಸಪ್ತಸತೀ', ಇನ್ನೊಂದು ಸುಂದರವಾದ ಶೃಂಗಾರಕಾವ್ಯ. ಇದೇ ಹೆಸರಿನಲ್ಲಿ ವಿಶ್ವೇಶ್ವರನೆಂಬುವನೂ ಒಂದು ಶೃಂಗಾರಕಾವ್ಯ ರಚಿಸಿದ್ದಾನೆ. ಅಲ್ಲದೇ ಅವನು ಹೆಣ್ಣಿನ ರೋಮಾವಳಿಯನ್ನು ವರ್ಣಿಸುವ 'ರೋಮಾವಲೀಶತಕ'ವನ್ನೂ ಕುಚಗಳನ್ನು ವರ್ಣಿಸುವ 'ಸ್ತನಶತಕ'ವನ್ನೂ ರಚಿಸಿದ್ದಾನೆ. ಉತ್ಪ್ರೇಕ್ಷಾವಲ್ಲಭನ 'ಸುಂದರೀಶತಕ'ವು ಸುಂದರಸ್ತ್ರೀಯ ಅಂಗಾಂಗ ವರ್ಣನೆಯನ್ನು ಮನೋಜ್ಞವಾಗಿ ಮಾಡುತ್ತದೆ. ಕಾಮರಾಜದೀಕ್ಷಿತನು ಮುನ್ನೂರು ಪದ್ಯಗಳ 'ಶೃಂಗಾರಕಲಿಕಾತ್ರಿಶತೀ' ಎಂಬ ಶೃಂಗಾರಕಾವ್ಯವನ್ನು ರಚಿಸಿದ್ದಾನೆ. ಅನಂತಕವಿಯ 'ಕಾಮಸಮೂಹ', ಹಲವು ಆಕರಗಳಿಂದ ಸಂಗ್ರಹಿಸಿರುವ ಶೃಂಗಾರಮುಕ್ತಕಗಳ ದೊಡ್ಡ ಸಂಕಲನವಾದರೆ, ಅವನ 'ಶೃಂಗಾರಕಾವ್ಯ', ಕುಚಗಳ ವರ್ಣನೆಗೆ ಮೀಸಲಾದ ಪುಟ್ಟ ಕಾವ್ಯ. ಹೀಗೆ ಸಂಸ್ಕೃತದಲ್ಲಿ ಅನೇಕ ಶೃಂಗಾರಮುಕ್ತ ಕಾವ್ಯಗಳಿರುವವು ಅಲ್ಲದೇ ಅನೇಕ ಸುಭಾಷಿತ ಸಂಕಲನಗಳಲ್ಲಿಯೂ ಮೊದಲು ಹೇಳಿದ ಲಕ್ಷಣ ಗ್ರಂಥಗಳಲ್ಲೂ ಬಿಡಿಬಿಡಿಯಾಗಿ ಅನೇಕ ಶೃಂಗಾರ ಪದ್ಯಗಳು ಸಿಗುತ್ತವೆ. ಕೆಲವು ಪ್ರಸಿದ್ಧ ಸುಭಾಷಿತ ಸಂಕಲನಗಳೆಂದರೆ, ವಲ್ಲಭದೇವನ 'ಸುಭಾಷಿತಾವಲೀ', ಶ್ರೀಧರಸೇನನ 'ಸದುಕ್ತಿಕರ್ಣಾಮೃತ', ವಿದ್ಯಾಕರನ 'ಸುಭಾಷಿತರತ್ನಕೋಶ', 'ಶಾರ್ಜ್ಞಧರಪದ್ಧತಿ' ಮತ್ತು ಇತ್ತೀಚಿನ ನಾರಾಯಣ ರಾಮಾಚಾರ್ಯರ 'ಸುಭಾಷಿತರತ್ನಭಾಂಡಾಗಾರ'. ಇವುಗಳಲ್ಲಿ ಶೃಂಗಾರಸೂಕ್ತಿಗಳಿಗೇ ಒಂದು ವಿಭಾಗವಿದ್ದು ಅಲ್ಲಿ ಹೇರಳವಾದ ಅಂಥ ಪದ್ಯಗಳಿವೆ. ಸ್ತ್ರೀ ಪುರುಷರ ಶೃಂಗಾರದಂತೆಯೇ ರಾಧಾಕೃಷ್ಣರ ಭಕ್ತಿಮಿಶ್ರಿತ ಶೃಂಗಾರಕಾವ್ಯಗಳೂ ಇವೆ. ಜಯದೇವನ 'ಗೀತಗೋವಿಂದ' ಅವುಗಳಲ್ಲಿ ಬಹಳ ಪ್ರಸಿದ್ಧವಾದುದು. ಇದಲ್ಲದೇ ಲೀಲಾಶುಕನ 'ಕೃಷ್ಣಕರ್ಣಾಮೃತ', ನಾರಾಯಣ ಯತಿಗಳ 'ಕೃಷ್ಣಲೀಲಾತರಂಗಿಣಿ', ರೂಪಗೋಸ್ವಾಮಿಯ 'ಪದ್ಯಾವಲೀ', ಹಿತಹರಿವಂಶನ 'ರಾಧಾಸುಧಾನಿಧಿಸ್ತೋತ್ರ', ಇವುಗಳಲ್ಲೆಲ್ಲಾ ಶ್ರೀಕೃಷ್ಣಪರವಾದ ಶೃಂಗಾರಶ್ಲೋಕಗಳಿವೆ. ಮೇಘದೂತದ ಮಾದರಿಯಲ್ಲಿ ರಚಿತವಾದ ಅನೇಕ ಶೃಂಗಾರ ದೂತಕಾವ್ಯಗಳೂ ಇವೆ. ರೂಪಗೋಸ್ವಾಮಿಯ 'ಹಂಸದೂತ', ಗೋಪಿಯರು ಕೃಷ್ಣನಿಗೆ ಹಂಸದ ಮೂಲಕ ಪ್ರೇಮಸಂದೇಶ ಕಳಿಸುವ ಕಾವ್ಯ. ಅಂತೆಯೇ ವೆಂಕಟನಾಥನ ಇನ್ನೊಂದು 'ಹಂಸದೂತ'ವು ಮೇಘದೂತದಂತೆಯೇ ಯಕ್ಷನು ತನ್ನ ಪ್ರಿಯೆಗೆ ಹಂಸದ ಮೂಲಕ ಪ್ರೇಮಸಂದೇಶ ಕಳಿಸುವ ವಸ್ತುವನ್ನು ಹೊಂದಿದೆ. ಹೀಗೆಯೇ ಧೋಯಿಯೆಂಬುವನ ಹಾಗೂ ವಾದಿರಾಜಸೂರಿಯೆಂಬುವನ ಪವನದೂತವೆಂಬ ಎರಡು ಕಾವ್ಯಗಳು, 'ಪಿಕದೂತ', 'ಕೋಕಿಲಸಂದೇಶ' ಮೊದಲಾದವಿವೆ. ಮಂಡೀಕಲ್ ರಾಮಶಾಸ್ತ್ರಿಯೆಂಬುವರು ಯಕ್ಷನ ಪತ್ನಿಯು ಯಕ್ಷನಿಗೆ ಮರುಸಂದೇಶ ಕಳಿಸುವ 'ಮೇಘಪ್ರತಿಸಂದೇಶ'ವೆಂಬ ಶೃಂಗಾರಕಾವ್ಯವನ್ನು ಇತ್ತೀಚೆಗೆ ಬರೆದಿದ್ದಾರೆ. ವೇಶ್ಯೆಯರ ಶೃಂಗಾರ ಜೀವನವನ್ನು ಚಿತ್ರಿಸುವ ದಾಮೋದರ ಗುಪ್ತನ 'ಕುಟ್ಟಿನೀಮಿತ' ಅಥವಾ ಶಂಭಲೀಮತ ಹಾಗೂ ಕ್ಷೇಮೇಂದ್ರನ 'ಸಮಯ', 'ಮಾತೃಕಾ' ಎಂಬ ಎರಡು ಶೃಂಗಾರಕಾವ್ಯಗಳು ಪ್ರಸಿದ್ಧವಾಗಿವೆ. ಇವು ವೇಶ್ಯೆಯರಿಗೆ ಉಪದೇಶ ಕೊಡುವಂತೆ ಸಾಮಾನ್ಯ ಜನರಿಗೆ ಅವರ ಬಗ್ಗೆ ಎಚ್ಚರಿಕೆಯನ್ನೂ ಕೊಡುತ್ತವೆ. (ಮುಂದುವರೆಯುವುದು..) -ಡಾ. ಬಿ.ಆರ್. ಸುಹಾಸ್ 9880451062 (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/52390ಗೆ ಭೇಟಿನೀಡಿ.