ಬಳೆಗಳು ಹಾಡುತಿವೆ! ಬಳೆ ಮಲ್ಹಾರಗಳನ್ನು ಹೊತ್ತು ಊರು ಮನೆಗಳಿಗೆ ತೆರಳಿ ಸುದ್ದಿಗಳನ್ನು ರಸವತ್ತಾಗಿ... ನಿಮ್ಮ ಮನೆಯ ಹೆಣ್ಣುಮಕ್ಕಳ ಕೈಗಳಲ್ಲಿ ಘಲ್ಲೆನುವ ಬಳೆಗಳನ್ನು ತಯಾರಿಸುವುದು ಹೇಗೆ ಅಂತ ನಿಮಗೆ ಗೊತ್ತಾ? ಬಳೆ ಮಲ್ಹಾರಗಳನ್ನು ಹೊತ್ತು ಊರು ಮನೆಗಳಿಗೆ ತೆರಳಿ ಸುದ್ದಿಗಳನ್ನು ರಸವತ್ತಾಗಿ ವಿವರಿಸುತ್ತಿದ್ದ ಬಳೆಗಾರ. ಬಳೆಗಾರ ಬಳೆ ಇಡಲು ಮನೆಗೆ ಬಂದರೆ ಆತನಿಗೆ ವಿಶೇಷ ಗೌರವ. ಬಳೆ ತೊಟ್ಟ ಸುಂದರ ಹೆಂಗಳೆಯರ ಕೈಯ ಚೆಂದ ಕವಿತೆಗೆ ಸ್ಪೂರ್ತಿ. ಬಳೆ ಮಂಗಳದ ಸೂಚಕ. ಅದನ್ನು ತೊಟ್ಟ ಹೆಣ್ಣು ಮಕ್ಕಳು ಮನೆಯಲ್ಲಿ, ಮಂಗಳಕಾರ್ಯದಲ್ಲಿ ಓಡಾಡುತ್ತಿದ್ದರೆ ಅದೇ ಹಬ್ಬ. ಈ ದೃಶ್ಯಗಳೆಲ್ಲ ನಿಜವಾಗಬೇಕಾದರೆ ಬಳೆ ತಯಾರಿಸುವವರಿರಬೇಕು. ಬಳೆ ತಯಾರಿ ಹೇಗೆ ಎಂಬುದು ನಿಮಗೆ ಗೊತ್ತೆ? ಬಳೆ ಸುಸಜ್ಜಿತ ಕಟ್ಟಡದಲ್ಲಿರುವ ಯಂತ್ರಗಳ ಸಹಾಯದಿಂದ 23 ಕಿ.ಮೀ. ದೂರದಲ್ಲಿರುವ ಅರವಟಿಕೆಯ ಎಮ್ಮಿನಕಟ್ಟದ ಯಲ್ಲಪ್ಪನವರ ಬಳೆ ಭಟ್ಟಿಗೆ ಭೇಟಿ ನೀಡಬೇಕು. ಸಣ್ಣ ಗುಡಿಸಲಲ್ಲಿ ಒಂದು ಗುಡಾಣ, ಅದರ ಒಡಲೊಳಗೆ ಒಲೆಗಳು! ಇವೇ ಬಳೆಯ ಭಟ್ಟಿ. ಬಳೆಗಳ ತಯಾರಿಕೆ ಸುಲಭ ಅಲ್ಲ. ಅದೊಂದು ಪವಾಡದಂಥ ಕ್ರಿಯೆ. ಅರವಟಿಕೆಯ ಯಲ್ಲಪ್ಪ ತಯಾರು ಮಾಡುವ ಬಳೆಗಳು ಹಸಿರು ಮತ್ತು ಉಳವಿ ದೇವರಿಗೆ ಅರ್ಪಿಸುವ ವಿಶೇಷ ವಾದ ಬಳೆಗಳು. ವರ್ಷ ಪೂರ್ತಿ ದೂರದ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ತುಮಕೂರು, ಗದಗ, ರಾಯಚೂರು, ಬಳ್ಳಾರಿ, ಕರ್ನಾಟಕದ ಗಡಿಯಾಚೆಗೂ ಯಲ್ಲಪ್ಪ ತಯಾರಿಸುವ ಬಳೆಗಳಿಗೆ ಬಹಳ ಬೇಡಿಕೆ. ಮದುವೆ, ಸೀಮಂತ, ಹಬ್ಬ, ಬಾಗಿನ ನೀಡುವ ಸಂದರ್ಭಗಳಲ್ಲಿ ಯಲ್ಲಪ್ಪನವರ ಬಳೆಗಳು ಬೇಕು. ಏನಿದು ಭಟ್ಟಿ? ಮಣ್ಣಿನ ಗೋಡೆ ಒಳಗೆ 5-6 ಒಲೆ ಮಾಡಿರುತ್ತಾರೆ. ಪ್ರತಿ ಒಲೆಯ ಗರ್ಭದಲ್ಲಿ ಒಂದೊಂದು ಮಡಕೆ ಇಟ್ಟು ಅವುಗಳಲ್ಲಿ ಒಡೆದ ಬಳೆಗಳ ಚೂರುಗಳನ್ನು ತುಂಬುತ್ತಾರೆ. ಸುಮಾರು 1200 ಡಿಗ್ರಿ ಸೆಂಟಿಗ್ರೇಡ್ ತಾಪದಲ್ಲಿ ಬಳೆ ಚೂರುಗಳು ಕರಗಿ ದ್ರವರೂಪ ಪಡೆಯುತ್ತದೆ. ಆ ಗಾಜಿನ ದ್ರವವನ್ನು ಕಬ್ಬಿಣದ ರಾಡಿನಲ್ಲಿ ಅಳತೆಗೆ ತಕ್ಕಷ್ಟು ತೆಗೆದು, ಅದನ್ನು ಶಂಖಾಕೃತಿಯ ಸಲಕರಣೆಗೆ ಹಾಕಿ ಕೈಯಲ್ಲಿ ತಿರುಗಿಸುತ್ತಾ ಬೇಕಾದ ಅಳತೆಗೆ ತರುತ್ತಾರೆ. ಒಲೆಗಳ ಮುಂದೆ ಕೂತು ಝಳ ಮತ್ತು ಹೊಗೆ ಸಹಿಸಿಕೊಂಡು ಸಂಯಮ ಕಳೆದುಕೊಳ್ಳದೆ ಬಳೆ ಮಾಡುವುದು ನಿಜಕ್ಕೂ ಅದ್ಭುತ ಕೆಲಸ! ಗಾಜಿನ ದ್ರವ ವ್ಯರ್ಥವಾಗದಂತೆ ನೋಡಿಕೊಳ್ಳುವುದೂ ಜಾಣತನ. ರೋಲ್ ಮಾಡುತ್ತಿರುವಾಗಲೇ ಬಳೆಯು ನಿಶ್ಚಿತ ಗಾತ್ರದಲ್ಲಿ ರೂಪುಗೊಂಡಿರುತ್ತದೆ. ಅದು ಅನುಭವದಿಂದ ಬರುವ ಜ್ಞಾನ. ಕುಲುಮೆಯೊಳಗಿಂದ ಗಾಜಿನ ದ್ರವ ತೆಗೆದು ಬಳೆ ರೂಪಗೊಳ್ಳುವ ತನಕದ ಕೆಲಸ ಶೀಘ್ರಾತಿ ಶೀಘ್ರ ನಡೆಯಬೇಕು. ಹೆಚ್ಚು ಏಕಾಗ್ರತೆ ಬೇಡುವ ಕೆಲಸ. ಸ್ವಲ್ಪ ಅಜಾಗ್ರತೆಯಾದರೆ ಅಪಾಯ ತಪ್ಪಿದ್ದಲ್ಲ. ಒಂದು ದಿನದಲ್ಲಿ ಇಬ್ಬರು ಸೇರಿ ಎರಡು ಸಾವಿರಕ್ಕೂ ಹೆಚ್ಚು ಬಳೆ ತಯಾರಿಸುತ್ತಾರೆ. ಇನ್ನೂರ ನಲವತ್ತು ಬಳೆಗಳ ಒಂದು ಗೊಂಚಲು ತೋಡ. ಒಂದು ತೋಡಕ್ಕೆ ಎಂಬತ್ತು ರುಪಾಯಿ. ಬಳೆ ಖರೀದಿಸಲು ನಿಶ್ಚಿತವಾದ ಗಿರಾಕಿಗಳಿದ್ದಾರೆ. ಮಹಾರಾಷ್ಟ್ರದ ಮೀರಜಿನಿಂದ ವರ್ಷಕ್ಕೊಮ್ಮೆ ಕಚ್ಚಾ ವಸ್ತು ತರಿಸಿಕೊಳ್ಳುತ್ತಾರೆ. ಒಂದು ಲೋಡು ಗಾಜಿನ ಪುಡಿ ಅಂದರೆ ಹತ್ತು ಟನ್‌ಗೆ ನಲವತ್ತು ಸಾವಿರ ರುಪಾಯಿ. ಯಲ್ಲಪ್ಪನವರಿಗೆ ಇಪ್ಪತ್ತು ವರ್ಷಗಳಿಂದ ಬಳೆ ತಯಾರಿಸುವ ನಂಟು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯದಿಂದ ಸ್ವಂತ ಭಟ್ಟಿ ಹೊಂದಿ ಹನ್ನೊಂದು ಮಂದಿಗೆ ಕೆಲಸ ನೀಡಿದ್ದಾರೆ. ಹೆಂಡತಿ ಸಾವಕ್ಕ ಸಾಥ್. 'ಭಟ್ಟಿಯೊಳಗಿನ ಬೆಂಕಿ ಆರ್ಬಾರ್ದು, ಉರಿ ಹಾಕ್ತಾ ಇರಬೇಕ್ರಿ. ಕಟ್ಟಿಗೆ ಸಿಗೋದಿಲ್ಲಾರಿ, ಹಂಗಾಗಿ ಜಾಸ್ತಿ ರೊಕ್ಕ ಕೊಟ್ಟು ಮಿಲ್ಲಿಂದ ತರ್ಲೇಬೇಕು' ಎಂದು ಬಳೆ ಉದ್ಯಮದ ಕಷ್ಟ ಹೇಳುತ್ತಾರೆ ಯಲ್ಲಪ್ಪ. ವರ್ಷದ ಹನ್ನೆರಡು ತಿಂಗಳು ಕೆಲಸ, ಮಂಗಳವಾರ ಮತ್ತು ಅಮಾವಾಸ್ಯೆ ದಿನ ಬಿಡುವು. 'ನಮ್ಮ ಕಷ್ಟ ಯಾರು ಕೇಳ್ತಾರೆ ಸ್ವಾಮಿ. ಈಗ ಫ್ಯಾಷನ್ ಬಳೆಗಳು ಬಂದಿವೆ. ಎಲ್ಲರೂ ಅವನ್ನೇ ಇಷ್ಟಪಡ್ತಾರೆ. ನಮ್ಮ ಹಿರಿಯರ ಕಾಲದಿಂದಲೂ ಮಾಡಿಕೊಂಡು ಬಂದಿರುವ ಈ ಕಾಯಕ ಬಿಡುವಂತಿಲ್ಲ. ಶುಭಕಾರ್ಯಗಳಲ್ಲಿ ನಮ್ಮ ಬಳೆಗಳಿಗೆ ಬೇಡಿಕೆ ಇದೆ. ಅದಕ್ಕಾಗಿ ಕೆಲಸ ಮುಂದುವರಿಸಿಕೊಂಡು ಬರುತ್ತಿದ್ದೇವೆ' ಎನ್ನುತ್ತಾರೆ ಭಟ್ಟಿ ಮಾಲೀಕ ಯಲ್ಲಪ್ಪ. - ಟಿ. ಶಿವಕುಮಾರ್