ಹಾಸವಿಗನ್ನಡ ಎಸ್‌ಪಿಬಿ ಕನ್ನಡ ಹೆಸರಾಂತ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಮೂಲತ... ಹೆಸರಾಂತ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಮೂಲತ ಕನ್ನಡದವರಲ್ಲ ಎಂದು ಯಾರೂ ಹೇಳುವುದಿಲ್ಲ. ಯಾಕೆಂದರೆ ಅವರು ಕನ್ನಡಿಗರಿಗಿಂತಲೂ ಚೆನ್ನಾಗಿ ಕನ್ನಡ ಮಾತಾಡುತ್ತಾರೆ. ಅವರು ಹಾಡಿದ ಅಷ್ಟೂ ಕನ್ನಡ ಚಿತ್ರ ಗೀತೆಗಳು ಕನ್ನಡಿಗರ ಬದುಕಿನ ಭಾಗವೇ ಆಗಿ ಹೋಗಿದೆ. ಸ್ಪಷ್ಟವಾದ ಉಚ್ಛಾರ. ಪದಗಳಿಗೆ ತಕ್ಕಂತೆ ಭಾವ ತುಂಬಿದ ಸ್ವರ. ಅದು ಎಸ್‌ಪಿಬಿ ಗಾಯನದ ವೈಶಿಷ್ಟ್ಯ. ಹೀಗಾಗಿಯೇ ಎಸ್‌ಪಿ ಬಾಲಸುಬ್ರಣ್ಯಂ ಎನ್ನುವ ಹೆಸರು ಇವತ್ತು ಕನ್ನಡಿಗರ ಮನೆಮಾತು. ಕನ್ನಡವನ್ನು ಅಷ್ಟು ಸುಲಲಿತವಾಗಿ ಮಾತನಾಡುವ ಮೂಲಕವೇ ಕನ್ನಡಿಗರೇ ಆದ ಖ್ಯಾತಿ ಎಸ್‌ಪಿಬಿ ಅವರದ್ದು. ಅನೇಕರಿಗೆ ಇದು ಅಚ್ಚರಿಯ ಸಂಗತಿಯೂ ಹೌದು. ಇಂತಹ ಕುತೂಹಲದಲ್ಲಿಯೇ ಮೊನ್ನೆ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರ ಜೊತೆಗೆ ಮಾತಿಗಿಳಿದಿದ್ದ ಎಸ್‌ಪಿಬಿ ಕನ್ನಡ ಕಲಿತ ಬಗೆಯನ್ನು ಹೇಳಿಕೊಂಡರು. ಕಲಿಯ ಹಿಂದಿನ ಶ್ರಮದ ಗುಟ್ಟು ಬಿಚ್ಚಿಟ್ಟರು. ಕನ್ನಡ ಅಂದ್ರೆ ನನ್ನ ಭಾಷೆ, ಕರ್ನಾಟಕ ನನ್ನೂರು ಎಂಬ ಮಾತುಗಳು ಅವರ ಹೃದಯಾಂತರಾಳದಿಂದ ಬಂದವು. ಹಾಡುತ್ತಾ ಹಾಡುತ್ತಾ ರಾಗ ಎನ್ನುವ ಹಾಗೆ ಹಾಡಿ, ಹಾಡಿ ಗಾಯಕನಾದೆ. ಬರೆದು ಬರೆದು ಕನ್ನಡ ಕಲಿತೆ ಎಂದು ತಮಾಷೆಯಲ್ಲಿಯೇ ಬೆಂಗಳೂರಿನಲ್ಲಿಯೇ ಕನ್ನಡ ಕಲಿತ ದನಿಗಳಿಗೆ ಜಾರಿದರು. 1967, ಮೊಟ್ಟ ಮೊದಲ ಬಾರಿಗೆ ಎಸ್‌ಪಿಬಿ ಕನ್ನಡದ 'ನಕ್ಕರೆ ಅದೇ ಸ್ವರ್ಗ' ಚಿತ್ರಕ್ಕೆ ಹಿನ್ನೆಲೆ ಗಾಯಕರಾಗಿ ಹಾಡಿದ ವರ್ಷ. ಕನ್ನಡದ ಅಷ್ಟೂ ಹಾಡನ್ನು ತೆಲುಗು ಭಾಷೆಯಲ್ಲಿ ಬರೆಸಿಕೊಂಡು ಅದಕ್ಕೆ ಸ್ವರ ನೀಡಿದ್ದರು. ಇದಾದ ನಂತರ ಅನೇಕ ಚಿತ್ರಗಳಿಗೆ. ಹೀಗೆ ಸಾಗಿತ್ತು ಅವರ ಹಿನ್ನೆಲೆ ಗಾಯನದ ಹಾದಿ. ಇದೆಲ್ಲ ನಡೆದಿದ್ದು ಚೆನ್ನೈಯಲ್ಲಿ. ಆ ಹೊತ್ತಿಗೆ ಬೆಂಗಳೂರು ಅವರಿಗೆ ದೂರವೇ ಉಳಿದಿತ್ತು. ಆದರೆ ಅವರು 1975ರ ಹೊತ್ತಿಗೆ ಬೆಂಗಳೂರಿನ ಬೆಸುಗೆಗೆ ಬಿದ್ದರು. ಬಸವನಗುಡಿ ವಿದ್ಯಾರಣ್ಯ ಯುವಕ ಸಂಘದ ವಾರ್ಷಿಕ ಗಣೇಶ್ ಉತ್ಸವಕ್ಕೆ ನಿರಂತರವಾಗಿ ಬರತೊಡಗಿದ ನಂತರವೇ ಕನ್ನಡ ಕಲಿಕೆಯ ಯುಗ ಶುರುವಾಗಿದ್ದು. ಖ್ಯಾತ ಸಂಗೀತ ನಿರ್ದೇಶಕ ರಂಗರಾವ್ ಅವರ ಸಂಪರ್ಕದ ಮೂಲಕವೇ ಎಸ್‌ಪಿ ಅವರಿಗೂ ವಿದ್ಯಾರಣ್ಯ ಯುವಕ ಸಂಘದ ಗಣೇಶ ಉತ್ಸವಕ್ಕೂ ನೆಂಟು. ಸಂಘದ ಪ್ರತಿ ಸದಸ್ಯರೂ ಆತ್ಮೀಯರಾಗಿದ್ದರು. ಅವರ ಒಡನಾಟದಲ್ಲಿ ಮೊದಮೊದಲು ಕನ್ನಡ ಬರೆದು ಕಲಿಯತೊಡಗಿದೆ. ಮಾತಾಡತೊಡಗಿದೆ. ಅತ್ತ ಚೆನ್ನೈಯಲ್ಲಿ ನಡೆಯುತ್ತಿದ್ದ ಹಿನ್ನೆಲೆ ಗಾಯನಕ್ಕೂ ಭಾಷೆಯ ಅಗತ್ಯ ವಿದ್ದುದರಿಂದ ಭಾಷೆಯ ಕಲಿಕೆಯ ವೇಗ ಹೆಚ್ಚಾಯಿತು. ಕನ್ನಡ ಚಿತ್ರೋದ್ಯಮದವರಲ್ಲದೆ, ವಿದ್ಯಾರಣ್ಯ ಯುವಕ ಸಂಘದ ಸ್ನೇಹಿತರ ಜೊತೆ ಸಾಧ್ಯವಾದಷ್ಟು ಕನ್ನಡದಲ್ಲಿಯೇ ಮಾತನಾಡುತ್ತಾ ಹೋದೆ. ಕನ್ನಡಮ್ಮ ಹೀಗೆ ಒಲಿದಳು. ನಾನು ಇಲ್ಲಿಯವನಾದೆ. ಎಸ್‌ಪಿ ಮಾತುಗಳನ್ನು ಹೆಮ್ಮೆಯಿಂದ ಹೇಳಿಕೊಂಡರು. ವಿದ್ಯಾರಣ್ಯ ಯುವಕ ಸಂಘದ ಜೊತೆ 49 ವರ್ಷಗಳ ನಂಟು. ಒಂದೇ ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲವಷ್ಟೇ. ಪ್ರತಿವರ್ಷ ಭಾಗವಹಿಸಿದ್ದೇನೆ, ಮನರಂಜನೆ ನೀಡಿದ್ದೇನೆ. ಆದರಿಂದ ನನಗಾದ ಲಾಭ ಕನ್ನಡ ಕಲಿತಿದ್ದು, ಇಲ್ಲಿಯವನಾಗಿದ್ದು ಎಂದು ಎಸ್‌ಪಿಬಿ ಮನತುಂಬಿ ಹೇಳಿಕೊಂಡರು. ನೀವು ಹಾಡಿದ ಅಷ್ಟು ಚಲನಚಿತ್ರ ಗೀತೆಗಳ ಪೈಕಿ ನಿಮ್ಮ ಫೇವರಿಟ್ ಹಾಡು ಯಾವುದು? ಎಂಬ ಪ್ರಶ್ನೆ ಅವರಿಗೆ ಎದುರಾಯಿತು. ಎಸ್‌ಪಿಬಿ ಕ್ಷಣ ಮೌನ ವಹಿಸಿದರು. 'ನೋಡಿ ನಿಮ್ಮ ಪ್ರಶ್ನೆ ತುಂಬಾ ಸುಲಭವಿದೆ. ಆದರೆ ಉತ್ತರ ನೀಡುವುದು ತುಂಬಾ ಕಷ್ಟವಿದೆ' ಎಂದರು. ಈ ತನಕ ಹಾಡಿರುವ ಹಾಡುಗಳ ಸಂಖ್ಯೆ 4ರಿಂದ 5 ಸಾವಿರ. ಇಷ್ಟು ಹಾಡುಗಳಲ್ಲಿ ಯಾವುದು ಫೇವರಿಟ್ ಅಂತ ಕೇಳಿದರೆ ಹೇಗೆ ಹೇಳುವುದು? ನಾನು ಹಾಡಿರುವ ಹಾಡುಗಳೆಲ್ಲ ನನಗಿಷ್ಟ. ಏಕೆಂದರೆ ಎಲ್ಲ ಹಾಡುಗಳನ್ನು ಇಷ್ಟುಪಟ್ಟು ಹಾಡಿದ್ದೇನೆ ಎಂದರು. ಆ ಕಾಲಕ್ಕೆ ಒಂದು ಹಾಡಿನ ರೆಕಾರ್ಡಿಂಗ್ ನಡೆಯುವಾಗ ಇಡೀ ತಂಡವೇ ಸ್ಟುಡಿಯೋದಲ್ಲಿ ಇರುತ್ತಿತ್ತು. ಒಂದು ಹಾಡಿಗೆ ಕನಿಷ್ಠ ಮೂರ್ನಾಲ್ಕು ದಿನಗಳು ಬೇಕಾಗಿದ್ದವು. ಈಗ ತಂತ್ರಜ್ಞಾನ ಬಂದಿದೆ. ಸಂಗೀತ ನಿರ್ದೇಶಕ ಇಲ್ಲದಿದ್ದರೂ ರೆಕಾರ್ಡಿಗ್ ಮುಗಿಸಿಬಿಡಬಹುದು ಎಂದರು. ಕೆಲವು ಸಂಗೀತ ನಿರ್ದೇಶಕರ ತಲೆಪ್ರತಿಷ್ಠೆಯ ಕಾಳೆದರು. ಆದರೂ ಇತರೆ ಭಾಷೆಗಳಿಗೆ ಹೋಲಿಕೆ ಮಾಡಿದರೆ ಕನ್ನಡದಲ್ಲಿಯೇ ಅತೀ ಹೆಚ್ಚು ಮೆಲೊಡಿಯಸ್ ಹಾಡುಗಳು ಬರುತ್ತಿರುವುದು ಸಂತಸದ ಸಂಗತಿ ಎಂದು ಖುಷಿಪಟ್ಟರು. -ದೇಶಾದ್ರಿ ಹೊಸ್ಮನೆ