ಕವಳದ ದೆವ್ವಕ್ಕೆ ತೂತಿನ ಕೈ ಕವಳದ ದೆವ್ವಕ್ಕೆ ತೂತಿನ ಕೈ, ನನ್ನಜ್ಜನದು ಮಲೆನಾಡು. ಶಿರಸಿ... ನನ್ನಜ್ಜನದು ಮಲೆನಾಡು. ಶಿರಸಿ-ಸಿದ್ದಾಪುರದ ಬಳಿಯ ಕುಗ್ರಾಮ. ಅಡಕೆ ಬೆಳೆಯುವ ಆ ಪ್ರದೇಶದಲ್ಲಿ 50-60 ವರ್ಷದ ಹಿಂದೆ ಲಾರಿ, ಜೀಪುಗಳು ಇರಲಿಲ್ಲ. ಬೆಳೆದ ಅಡಕೆಯನ್ನು ಎತ್ತಿನಗಾಡಿಯಲ್ಲಿ ಹಾಕಿಕೊಂಡು ರಾತ್ರಿಯಿಡೀ ಪ್ರಯಾಣ ಮಾಡಿ ಪೇಟೆಗೆ ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿ ಮಾರಾಟ ಮಾಡಿ ಮರುದಿನ ರಾತ್ರಿಯಿಡೀ ಪ್ರಯಾಣ ಬೆಳೆಸಿ ಊರು ಸೇರಿಕೊಳ್ಳುತ್ತಿದ್ದರು. ವರ್ಷಕ್ಕೊಮ್ಮೆ, ಮಳೆಗಾಲ ಶುರುವಾಗುವುದಕ್ಕಿಂತ ಮೊದಲು ಹೀಗೆ ಅಡಕೆಯನ್ನು ಪೇಟೆಗೆ ತೆಗೆದುಕೊಂಡು ಹೋಗುವುದು ವಾಡಿಕೆ. ಮಳೆಗಾಲ ಶುರುವಾದರೆ ಅಲ್ಲಿನ ರಸ್ತೆಯಲ್ಲಿ ಎತ್ತಿನಗಾಡಿ ಓಡಾಡುವುದು ಹಾಗಿರಲಿ, ಮನುಷ್ಯರು ನಡೆದುಕೊಂಡು ಹೋಗುವುದೂ ಅಸಾಧ್ಯವಾಗಿತ್ತು. ನನ್ನಜ್ಜನಿಗೂ ಕವಳದ ದೆವ್ವಕ್ಕೂ ಭಯಂಕರ ಫ್ರೆಂಡ್‌ಶಿಪ್ಪು. ಮೊದಲು ನೀವು ಕವಳದ ದೆವ್ವದ ಪರಿಚಯ ಮಾಡಿಕೊಳ್ಳಬೇಕು. ಕವಳ ಅಂದರೆ ಹಳೆ ಮೈಸೂರು ಭಾಗದಲ್ಲಿ ಭಿಕ್ಷೆ. ಮಲೆನಾಡಿನಲ್ಲಿ ಎಲೆಯಡಿಕೆಗೆ ಕವಳ ಎನ್ನುತ್ತಾರೆ. ಅಡಕೆ ಬೆಳೆಯುವ ಪ್ರದೇಶದಲ್ಲಿ ಪ್ರತಿಯೊಬ್ಬರೂ ಕವಳ ತಿನ್ನುವವರೇ. ತಂಬಾಕಿನ ಎಸಳನ್ನು ಚೆನ್ನಾಗಿ ಹದಮಾಡಿ, ಅದನ್ನು ಎಲೆಯಡಿಕೆಯ ಜೊತೆ ಬಾಯಿಗೆ ಹಾಕಿಕೊಂಡರೆ ಇಡೀ ದಿನ ಕೆಲಸ ಮಾಡುವ ಶಕ್ತಿ ಬಂದುಬಿಡುತ್ತದೆ. ಹೀಗೆ ಕವಳ ತಿಂದು ತಿಂದು, ಕೊನೆಗೆ ವಯಸ್ಸಾಗಿ ಸತ್ತ ಕೆಲವರು ಅಲ್ಲಿ ದೆವ್ವಾಗಿರಬೇಕು. ಅವುಗಳಿಗೆ ಸತ್ತಮೇಲೂ ಕವಳದ ಚಟ ಬಿಟ್ಟಿಲ್ಲ. ಹಾಗಾಗಿ ದಾರಿಹೋಕರಿಂದ ಕವಳ ಕೇಳುತ್ತವೆ. ಆದರೆ, ಕವಳ ಕೊಟ್ಟರೆ ಸುಮ್ಮನೆ ತಿಂದು ಹೋಗುತ್ತವೆಯೇ ಅಂದರೆ ಇಲ್ಲ. ಇನ್ನೂ ಕೊಡು ಅನ್ನುತ್ತವೆ. ಎಷ್ಟು ಕೊಟ್ಟರೂ ಅವಕ್ಕೆ ಸಾಕಾಗುವುದೇ ಇಲ್ಲ. ಹೇಳಿಕೇಳಿ ಅವು ದೆವ್ವಗಳಲ್ಲವೇ. ನನ್ನಜ್ಜ ಒಮ್ಮೆ ಎತ್ತಿನಗಾಡಿಯಲ್ಲಿ ಅಡಕೆ ಹಾಕಿಕೊಂಡು ಪೇಟೆಗೆ ಹೊರಟಿದ್ದ. ರಾತ್ರಿ ಲಾಟೀನಿನ ಬೆಳಕಿನಲ್ಲಿ ಕಾಡು ದಾರಿಯಲ್ಲಿ ಗಾಡಿ ಹೋಗುತ್ತಿತ್ತು. ಗಾಡಿ ಓಡಿಸುವವನು ಒಬ್ಬ, ಜೊತೆಗೆ ಹಿಂದೆ ಅಡಕೆ ಚೀಲದ ಮೇಲೆ ನನ್ನಜ್ಜ. ಇಬ್ಬರೂ ಅದು-ಇದು ಕತೆ ಹೇಳುತ್ತ ದಾರಿ ಸವೆಸುತ್ತಿದ್ದರು. ಎತ್ತಿಗೆ ಕಟ್ಟಿದ ಗಂಟೆಯ ಸದ್ದು ಹಾಗೂ ಚಕ್ರದ ಚರಚರ ಸದ್ದು ರಾತ್ರಿಯ ನೀರವತೆಯನ್ನು ಸಹಿಸಿಕೊಳ್ಳಲು ಅವರಿಗೆ ಸಾಥ್ ನೀಡುತ್ತಿದ್ದವು. ಇದ್ದಕ್ಕಿದ್ದಂತೆ ಅಜ್ಜನಿಗೆ ದೂರದಲ್ಲೆಲ್ಲೋ ಕಾಡಿನಲ್ಲಿ ತರಗೆಲೆಗಳ ಮೇಲೆ ನಡೆದಾಡಿದ ಗೆಜ್ಜೆಯ ಸದ್ದು ಕೇಳಿಸಿತು. ಕಣ್ಣುಜ್ಜಿಕೊಂಡು ನೋಡಿದ. ಬಿಳಿಯ ಮಾಸಲು ಮಾಸಲು ಆಕೃತಿಯೊಂದು ಗಾಡಿಯತ್ತಲೇ ಬರುವುದು ಕಾಣಿಸಿತು. ಗಾಡಿ ಓಡಿಸುವವನ್ನು ಕರೆದು ಆ ಆಕೃತಿ ತೋರಿಸಿದ. ಅವನು ಇಂಥಾದ್ದನ್ನು ಸಾಕಷ್ಟು ನೋಡಿದವನು. ಇದು ದೆವ್ವವೇ ಎಂಬುದವನಿಗೆ ಖಾತ್ರಿಯಾಗಿ ಮತ್ತಷ್ಟು ಜೋರಾಗಿ ಗಾಡಿ ಓಡಿಸಿದ. ಆದರೂ ದೆವ್ವದ ವೇಗಕ್ಕೆ ಎತ್ತಿನಗಾಡಿಯ ವೇಗ ಯಾವ ಲೆಕ್ಕ. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಬಿಳಿ ಬಟ್ಟೆಯ ಗೆಜ್ಜೆ ಸುಂದರಿ ನನ್ನಜ್ಜನ ಗಾಡಿಯ ಎದುರು ನಿಂತಿದ್ದಳು. ಎತ್ತುಗಳು ಗಕ್ಕನೆ ಬ್ರೇಕ್ ಹಾಕಿದಂತೆ ಅಲ್ಲೇ ನಿಂತುಬಿಟ್ಟವು. ಗೆಜ್ಜೆ ಸುಂದರಿ ದೂರದಿಂದ ಕಂಡಷ್ಟು ಸುಂದರವಾಗಿರಲಿಲ್ಲ. ಅವಳ ಕೂದಲು ಕೆದರಿತ್ತು. ಬಾಯಿ ಕೆಂಪಗಾಗಿತ್ತು. ಹಲ್ಲುಗಳು ಅರ್ಧಕ್ಕರ್ಧ ಉದುರಿದ್ದವು. ಮುಖದ ಮೇಲೆ ಸುಟ್ಟ ಕಲೆಗಳಿದ್ದವು. ಕಾಲು ತಿರುವು ಮುರುವಾಗಿತ್ತು. ಮಾತನಾಡುವಾಗ ಸೊಂಯ್ ಸೊಂಯ್ ಎಂದು ಉಸಿರು ಎಳೆದುಕೊಳ್ಳುತ್ತಿದ್ದಳು. ನೆಟ್ಟಗೆ ಸೀರೆ ಕೂಡ ಉಟ್ಟಿರಲಿಲ್ಲ. ಅಸ್ತವ್ಯಸ್ತವಾಗಿಸುತ್ತಿಕೊಂಡು ಅರ್ಜೆಂಟಾಗಿ ಈ ಕಡೆ ಓಡಿ ಬಂದಂತಿತ್ತು. ಅದು ದೆವ್ವ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇರಲಿಲ್ಲ. ಗೆಜ್ಜೆ ಸುಂದರಿ ನನ್ನಜ್ಜನ ಬಳಿ ಕವಳ ಕೊಡು ಅಂದಳು. ಮೊದಲಿಗೆ ಅಜ್ಜ ತನ್ನ ಸಂಚಿಯಿಂದ ಒಂದು ವೀಳ್ಯದೆಲೆ ತೆಗೆದು ಕೊಟ್ಟ. ಅವಳು ತೆಗೆದುಕೊಂಡು ಅದರ ತೊಟ್ಟು, ತುದಿ ತೆಗೆದೆಸೆದು ಮುಂದೆ ಹಿಡಿದಳು. ಅದರ ಮೇಲೆ ಅಜ್ಜ ಒಂದಷ್ಟು ಅಡಕೆ ಹೋಳುಗಳನ್ನು ಹಾಕಿದ. ತಂಬಾಕೆಲ್ಲಿ ಎಂದು ಹೂಂಕರಿಸಿದಳು. ಅಜ್ಜ ಅರ್ಧ ಎಸಳು ತಂಬಾಕು ತೆಗೆದು ಅದರ ಮೇಲೆ ಹಾಕಿದ. ಬಹಳ ಖಡಕ್ ತಂಬಾಕು ಅದು. ಕವಳಕ್ಕೆ ಒಂದು ಚೂರು ಹಾಕಿದರೂ ತಲೆ ಧಿಮ್ ಎನ್ನುವಂತೆ ಅದನ್ನು ಅಜ್ಜ ಹದಮಾಡಿಟ್ಟುಕೊಳ್ಳುತ್ತಿದ್ದ. ಆದರೆ, ಅರ್ಧ ಎಸಳು ತಿಂದು ದೆವ್ವ ತಲೆತಿರುಗಿ ಬಿದ್ದರೆ ಬೀಳಲಿ ಎಂದು ಅಷ್ಟೊಂದು ಕೊಟ್ಟಿದ್ದ. ಅದನ್ನು ತೆಗೆದುಕೊಂಡು, ಸುಣ್ಣ ಯಾರು ಕೊಡ್ತಾರೆ ಎಂದು ದೆವ್ವ ಅಬ್ಬರಿಸಿತು. ತಗೋ ಎಂದು ಅಜ್ಜ ತನ್ನ ತೋರು ಬೆರಳಿನಲ್ಲಿ ಒಂದಷ್ಟು ಸುಣ್ಣ ಮುಂದೆ ಮಾಡಿದ. ಅವಳು ಅಂಗೈ ನೀಡಿದಳು. ಅದಕ್ಕೆ ಅಜ್ಜ ಸುಣ್ಣ ಒರೆಸಿದ. ಏನಾಶ್ಚರ್ಯ! ಆ ಅಂಗೈನಲ್ಲಿ ತೂತಿದೆ. ಒರೆಸಿದ ಸುಣ್ಣ ಕೆಳಗೆ ಬಿದ್ದು ಹೋಗುತ್ತದೆ. 'ಬಿದ್ದೋಯ್ತು, ಇನ್ನೊಂದ್ಸಲ ಕೊಡು' ಅಂದಿತು ದೆವ್ವ. ಅಜ್ಜ ಮತ್ತೆ ಕೊಟ್ಟ. ಅದೂ ಬಿದ್ದುಹೋಯಿತು. ಮತ್ತೆ ಕೊಡು ಅಂದಿತು. ಅಜ್ಜ ಕೊಟ್ಟ. ಬಿದ್ದುಹೋಯಿತು. ಹೀಗೆ ಕೊಟ್ಟು ಕೊಟ್ಟು ಅಜ್ಜನ ಸುಣ್ಣದಂಡೆಯಲ್ಲಿದ್ದ ಸುಣ್ಣ ಪೂರ್ತಿ ಖಾಲಿಯಾಯಿತು. ಗಾಡಿಯವನ ಬಳಿ ಇನ್ನೊಂದು ಕವಳದ ಸಂಚಿಯಿತ್ತು. ಅದರಿಂದ ಸುಣ್ಣ ತೆಗೆದು ಕೊಟ್ಟ. ಅದೂ ಬಿದ್ದು ಬಿದ್ದು ಖಾಲಿಯಾಯಿತು. ಆದರೆ ದೆವ್ವ ಮಾತ್ರ ಸುಣ್ಣ ಕೇಳುತ್ತಲೇ ಇತ್ತು. ಏನು ಮಾಡುವುದು? ಕವಳದ ದೆವ್ವದ ಕೈಗೆ ಸಿಕ್ಕಿ ಎಡವಟ್ಟಾಯಿತು, ಇವತ್ತು ಜೀವಸಹಿತ ಹೋಗುವುದು ಅನುಮಾನ ಎಂದು ಅಜ್ಜ ಹೆದರಿದ. ಸುಣ್ಣ ಕೊಡದಿದ್ದರೆ ದೆವ್ವದ ಕವಳ ಪೂರ್ತಿಯಾಗುವುದಿಲ್ಲ. ಕವಳ ಪೂರ್ತಿಯಾಗದ ಹೊರತು ಅದು ತನ್ನನ್ನು ಬಿಡುವುದಿಲ್ಲ. ಅಜ್ಜನಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಕೊನೆಗೊಂದು ಉಪಾಯ ಹೊಳೆಯಿತು. ದೆವ್ವಕ್ಕೆ ಹೇಳಿದ 'ನೋಡು, ನಿಂಗೆ ಕೊಟ್ಟ ತಂಬಾಕನ್ನು ಸುಣ್ಣದಲ್ಲೇ ಹದ ಮಾಡಿದ್ದೇನೆ. ಅದರಲ್ಲೇ ಸುಣ್ಣ ಇದೆ. ಮತ್ತೆ ಮೇಲಿಂದ ಸುಣ್ಣ ಹಾಕಿಕೊಂಡರೆ ಬಾಯಿ ಸುಟ್ಟುಹೋಗುತ್ತದೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ಮೊದಲಿಗೆ ನಿನ್ನ ಬಾಯಿ ಸುಟ್ಟರೆ ಸುಡಲಿ ಎಂದು ಸುಣ್ಣ ಕೊಟ್ಟೆ. ಆದರೆ, ನೀನು ಒಳ್ಳೆಯವಳಂತೆ ಕಾಣುತ್ತಿದ್ದೀಯೆ. ಹಾಗಾಗಿ ಈಗ ನಿಜ ಹೇಳುತ್ತಿದ್ದೇನೆ. ಆ ತಂಬಾಕು ಹಾಕಿಕೊಂಡು ಕವಳ ತಿಂದು ನೋಡು. ಸುಣ್ಣ ಇರಲಿಲ್ಲ ಅಂದರೆ ಆಮೇಲೆ ಹೇಳು'. ದೆವ್ವವೂ ಒಳ್ಳೆಯ ಮೂಡ್‌ನಲ್ಲಿತ್ತೋ ಏನು ಕತೆಯೋ. ಅಥವಾ ಅಜ್ಜನ ಪ್ರಾಮಾಣಿಕತೆ ಅದಕ್ಕೆ ಇಷ್ಟವಾಗಿರಬೇಕು. ಅವನ ಮಾತು ಒಪ್ಪಿಕೊಂಡು ಕವಳ ಹಾಕಿತು. ಎರಡು ನಿಮಿಷ ಅಲ್ಲೇ ನಿಂತು ಕವಳ ಜಗಿದು, 'ಭೇಷ್ ಮುದುಕ, ಒಳ್ಳೆ ಕವಳ ಕೊಟ್ಟಿದ್ದೀಯೆ. ನೀನಿನ್ನು ಹೊರಡು' ಎಂದು ಅಲ್ಲಿಂದ ಕಳಿಸಿತು. ಅಜ್ಜ ಮತ್ತು ಗಾಡಿಯವನು ಅಂತೂ ಜೀವ ಉಳಿಯಿತು ಎಂದ ನಿಟ್ಟುಸಿರು ಬಿಟ್ಟು ಅಲ್ಲಿಂದ ತೆರಳಿದರು. ವಾಪಸ್ ಬರುವಾಗ ಮತ್ತೆ ಆ ದೆವ್ವ ಸಿಕ್ಕಿತ್ತಂತೆ. ಆಗ ಸ್ವಲ್ಪವೂ ಹೆದರಿಸದೆ ಖುಷಿಯಿಂದ ಹರಟೆ ಹೊಡೆದು ಕವಳ ಹಾಕಿಕೊಂಡು ಹೋಯಿತಂತೆ. ನಂತರ ಪ್ರತಿ ವರ್ಷ ಅಡಕೆ ತೆಗೆದುಕೊಂಡು ಹೋಗುವಾಗಲೂ ಅದು ಸಿಗುತ್ತಿತ್ತಂತೆ. ಕೊನೆಗೆ ಅದರ ಜೊತೆಗೆ ಅಜ್ಜನಿಗೆ ಭಾರಿ ಸ್ನೇಹವೇ ಬೆಳೆದಿತ್ತಂತೆ! ಇಂತಹ ಕವಳದ ದೆವ್ವಗಳು ಮಲೆನಾಡಿನಲ್ಲಿ ನೂರಾರು ಇವೆ ಎಂದು ಹಿರಿಯ ತಲೆಗಳು ಕತೆ ಹೇಳುತ್ತವೆ. ಎಲ್ಲ ದೆವ್ವಗಳ ಅಂಗೈನಲ್ಲೂ ತೂತಿದೆಯಂತೆ. ಅವು ಬೇಕಂತಲೇ ಕವಳ ಕೇಳಿ ಜಗಳ ತೆಗೆದು ಗಾಡಿಯವರನ್ನು ಕೊಂದು ರಕ್ತ ಕುಡಿಯುತ್ತವಂತೆ. ಹಾಗಂತ ನನ್ನಜ್ಜನೂ ಕತೆ ಹೇಳಿದ್ದ. -ಅಮ್ಮಜ್ಜನದುಗ್ಗ (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/55398ಗೆ ಭೇಟಿನೀಡಿ.