ಸಾವಯವ ವೈದ್ಯ ವಿದೇಶದಲ್ಲಿ ವೈದ್ಯ. ಆದರೆ ತವರಿನ ಮಣ್ಣಿನ ಪ್ರೇಮ. ಹೀಗಾಗಿ ಹುಟ್ಟೂರಿಗೆ ಮರಳಿ ರೋಗಿಗಳ ಸೇವೆಯೊಂದಿಗೆ ಕೃಷಿ ಲೋಕದಲ್ಲಿಯೂ ಸಕ್ರಿಯರಾಗಿದ್ದಾರೆ ಈ ವ್ಯಕ್ತಿ. ಕುಶಾಲನಗರದ ವೈದ್ಯರೊಬ್ಬರು ಹೀಗೆ ವಿಭಿನ್ನವಾಗಿ ಗಮನ ಸೆಳೆದಿದ್ದಾರೆ. ವೈದ್ಯಕೀಯ, ಆರ್ಯರ್ವೇದ ಉನ್ನತ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉದ್ಯೋಗ ಹುಡುಕಿ ದೂರದ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವುದು ಸಾಮಾನ್ಯ. ಶಿಕ್ಷಣ ನೀಡಿದ ತಾಯ್ನಾಡಿನ ಋಣ ಮರೆತು ಹೊರ ದೇಶಗಳಿಗೆ ತೆರಳಿದವರು ಸಾಕಷ್ಟು. ಆದರೆ ಕುಶಾಲನಗರದಲ್ಲಿರುವ ಡಾ.ಪ್ರವೀಣ್ ಸೋಮಪ್ಪ ಇದಕ್ಕೆ ವಿರುದ್ಧ. ಹಳ್ಳಿಯಲ್ಲಿ ದಿಲ್ಲಿ ಕನಸು ಉನ್ನತ ವೈದ್ಯ ವ್ಯಾಸಂಗ ಯೂರೋಪ್ ಖಂಡದ ರೊಮೇನಿಯಾದಲ್ಲಿ ಮುಗಿಸಿ ಅಲ್ಲಿಯೇ 3-4 ವರ್ಷ ಕಾರ್ಯ ನಿರ್ವಹಿಸಿದರು. ಆ ದೇಶದ ಋಣ ತೀರಿಸಿ ತನ್ನ ಹಳ್ಳಿಗೆ ಬಂದರು. ಕೊಡಗಿನ ಕುಶಾಲನಗರ ಸರ್ಕಾರಿ ಆಸ್ಪತ್ರೆ ಬಳಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು ಖಾಸಗಿಯಾಗಿ ದಂತ ವೈದ್ಯಕೀಯದಲ್ಲಿ ತೊಡಗಿಕೊಂಡರು. ಡಾ.ಪ್ರವೀಣ್ ಸುಳ್ಳದ ದೇವರಗುಂಡ ಗ್ರಾಮದವರು. ಕೊಡಗಿನ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆ. ಹೀಗಾಗಿ ಗುಮ್ಮನಕೊಲ್ಲಿಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾವಯವ ಕೃಷಿಕ ದಂತ, ಬಾಯಿ, ಮೂಗು ರೋಗಗಳ ತಜ್ಞರೂ ಆಗಿರುವ ಡಾ.ಪ್ರವೀಣ್ ಸಾವಯವ ಕೃಷಿಯಲ್ಲಿಯೂ ಸಕ್ರಿಯ. ಹತ್ತು ಹಲವು ಔಷಧೀಯ ಗಿಡ ಬೆಳೆದು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಗುಮ್ಮನಕೊಲ್ಲಿ ಮುಖ್ಯ ರಸ್ತೆಯಲ್ಲಿ ಎರಡೂವರೆ ಎಕರೆ ಕೃಷಿ ಭೂಮಿ ಖರೀಸಿದ್ದು, ಕೃಷಿಯಲ್ಲೂ ಸಂತಸ ಕಂಡುಕೊಂಡಿದ್ದಾರೆ. ಸರಳವಾದ ಕಡಿಮೆ ಖರ್ಚಿನ ಮನೆ ನಿರ್ಮಿಸಿ ಅದರಲ್ಲಿ ಪತ್ನಿ, ದಂತ ವೈದ್ಯೆ ಡಾ.ರಶ್ಮಿ ಅವರೊಂದಿಗೆ ವಾಸ. ಬಿಡುವಿನ ಅವಧಿಯಲ್ಲಿ ಫಲವತ್ತಾದ ಭೂಮಿಯಲ್ಲಿ ಮನೆ ಬಳಕೆಗೆ ಅಗತ್ಯದ ಸಾವಯವ ತರಕಾರಿಗಳಾದ ಬೆಂಡೆ, ಬೀನ್ಸ್, ಬದನೆ, ಟೊಮಾಟೊ, ಹಸಿ ಮೆಣಸು, ಶುಂಠಿ, ನಿಂಬೆ ಬೆಳೆದಿದ್ದಾರೆ. ವಿಶೇಷವಾಗಿ ಔಷಧಿ ಸಸ್ಯಗಳಾದ ದೊಡ್ಡಪತ್ರ, ಗಾಳಿಗಿಡ, ಒಂದೆಲಗ, ಲೋಳೆಸರ ಬೆಳೆದು ಇತರರಿಗೂ ಈ ಗಿಡಗಳ ಪ್ರಯೋಜನ ವಿವರಿಸುತ್ತಿದ್ದಾರೆ. ತೆಂಗು, ಕಾಡು ನೆಲ್ಲಿಕಾಯಿ, ನಿಂಬೆ, ಬಟರ್ ಫ್ರೂಟ್ ಮೊದಲಾದ ಹಣ್ಣಿನ ಗಿಡಗಳು ಬೆಳೆದು ನಿಂತು ಪಕ್ಷಿಗಳನ್ನು ಆಹ್ವಾನಿಸುತ್ತಿದೆ. -ಎಚ್.ಟಿ.ಅನಿಲ್‌ಕುಮಾರ್