ಹೊಸ 2000 ನೋಟನ್ನು ನೀರಲ್ಲಿ ಅದ್ದಿದಾಗ ಬಣ್ಣ ಹೊಯಿತೇ..? ಖುಷಿ ಪಡಿ ಅದು ಅಸಲಿ ನೋಟು! ಹಳೆಯ ನೋಟು ನಿಷೇಧದ ಬಳಿಕ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿರುವ ಹೊಸ 2000 ರು. ಮುಖಬೆಲೆಯ ನೋಟಿನ ಪರೀಕ್ಷೆ ಕುರಿತ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದೀಗ ಆ ನೋಟು ನಕಲಿ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ನವದೆಹಲಿ: ಹಳೆಯ ನೋಟು ನಿಷೇಧದ ಬಳಿಕ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿರುವ ಹೊಸ 2000 ರು. ಮುಖಬೆಲೆಯ ನೋಟಿನ ಪರೀಕ್ಷೆ ಕುರಿತ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದೀಗ ಆ ನೋಟು ನಕಲಿ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಹೌದು.. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಹೊಸ ನೋಟಿನ ಪರೀಕ್ಷೆ ವಿಡಿಯೋದಲ್ಲಿ ಬಳಕೆ ಮಾಡಲಾಗಿದ್ದ ಹೊಸ 2000 ರು. ನೋಟು ನಕಲಿ ಎಂದು ಸಾಬೀತಾಗಿದೆ. ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದ ಹೊಸ ನೋಟಿನ ನೀರಿನ ಪರೀಕ್ಷೆಯ ವಿಡಿಯೋ ವ್ಯಾಪಕವಾಗಿ ಹರಿದಾಡುವ ಮೂಲಕ ವೈರಲ್ ಆಗಿತ್ತು. ಈ ವಿಡಿಯೋವನ್ನು ಸುಮಾರು 11 ಲಕ್ಷ ಮಂದಿ ವೀಕ್ಷಿಸಿದ್ದರು. ಅಲ್ಲದೆ ನೋಟಿನ ಗುಣಮಟ್ಟದ ಕುರಿತಂತೆ ವ್ಯಾಪಕ ಚರ್ಚೆ ಮಾಡಿದ್ದರು. ವಿಡಿಯೋದಲ್ಲಿ ತೋರಿಸಿದಂತೆ ಹೊಸ ನೋಟನ್ನು ನೀರಲ್ಲಿ ಅದ್ದಿದಾಗ ಅದರ ಮೇಲೆ ಯಾವುದೇ ರೀತಿಯ ಪರಿಣಾಮವಾಗಿರಲಿಲ್ಲ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಆದರೆ ಇದೀಗ ಆ ವಿಡಿಯೋದಲ್ಲಿ ಬಳಕೆಯಾಗಿದ್ದ ನೋಟು ನಕಲಿ ಎಂಬ ಅನುಮಾನಗಳು ಮೂಡತೊಡಗಿವೆ. ಇದಕ್ಕೆ ಕಾರಣ ಕೇಂದ್ರ ವಿತ್ತ ಇಲಾಖೆಯ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರ ಇತ್ತೀಚೆಗಿನ ಹೇಳಿಕೆ. ನೋಟು ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಕುರಿತಂತೆ ಪ್ರತಿಕ್ರಿಯೆ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶಕ್ತಿಕಾಂತ್ ದಾಸ್ ಅವರು ಮಾತನಾಡಿದ್ದರು. ಈ ವೇಳೆ ಸುದ್ದಿಗಾರರೊಬ್ಬರು ಹೊಸ 2000 ಸಾವಿರ ನೋಟಿನ ಗುಣಮಟ್ಟದ ಕುರಿತಂತೆ ಪ್ರಶ್ನೆ ಕೇಳಿದ್ದರು. ಅಲ್ಲದೆ ಯೂಟ್ಯೂಬಿನಲ್ಲಿ ಹರಿದಾಡುತ್ತಿರುವ ವಿಡಿಯೋ ಬಗ್ಗೆ ದಾಸ್ ಅವರ ಗಮನ ಸೆಳೆದಿದ್ದರು. ಈ ವೇಳೆ ಉತ್ತರಿಸಿದ ಶಕ್ತಿಕಾಂತ್ ದಾಸ್ ಅವರು, "ಹೊಸ ನೋಟಿನಲ್ಲಿ ತಾಂತ್ರಿಕವಾಗಿ ಮತ್ತು ಭದ್ರತಾ ಉದ್ದೇಶದಿಂದ ಒಂದಷ್ಟು ಬದಲಾವಣೆ ಮಾಡಲಾಗಿದೆಯಾದರೂ ಅದು ಕೂಡ ಹಳೆಯ ನೋಟುಗಳಂತೆಯೇ ಇದೆ. ಸಾಮಾನ್ಯವಾಗಿ ಅದನ್ನು ನೀರಿನಲ್ಲಿ ಅದ್ದಿ ತೆಗೆದು ಬಟ್ಟೆಯಿಂದ ಒರೆಸಿದರೆ ಅದು ಖಂಡಿತಾ ಬಣ್ಣ ಕಳೆದುಕೊಳ್ಳುತ್ತದೆ. ಇದಕ್ಕೆ ಕಾರಣ ನೋಟಿನಲ್ಲಿ ಬಳಕೆ ಮಾಡಲಾಗಿರುವ ಅದರ ಬಣ್ಣದ ಗುಣ. ಒಂದು ವೇಳೆ ಅದು ಬಣ್ಣ ಬಿಡದಿದ್ದರೆ ಅದು ನಕಲಿ ನೋಟಿನ ಒಂದು ಗುಣ ಎಂದು ಭಾವಿಸಬಹುದು ಎಂದು ಹೇಳಿದ್ದಾರೆ. ಆ ಮೂಲಕ ಹೊಸ ನೋಟನ್ನು ನೀರಿನಲ್ಲಿ ಅದ್ದಿದರೆ ಅದು ಬಣ್ಣ ಕಳೆದುಕೊಳ್ಳುತ್ತದೆ ಎಂದು ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಹೊಸ ನೋಟು ಚಲಾವಣೆಗೆ ಬಂದ ಬಳಿಕ ಸಾಕಷ್ಟು ಮಂದಿ ಅದರ ಗುಣಮಟ್ಟ ಹಾಗೂ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿದ್ದರು. ಅಲ್ಲದೆ ಈ ಪರೀಕ್ಷೆಗಳನ್ನು ವಿಡಿಯೋ ಮಾಡಿ ಯೂಟ್ಯೂಬಿನಲ್ಲಿ ಹರಿಬಿಟ್ಟಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಆದರೆ ಇದೀಗ ಈ ವಿಡಿಯೋಗಳಲ್ಲಿ ತೋರಿಸಲಾದ ನೋಟುಗಳು ನಕಲಿ ನೋಟು ಎಂದು ಹೇಳಲಾಗುತ್ತಿದೆ.