ಮನೆಮನೆಯಲೂ ಬೆಳಗಲಿ ಆ'ನಂದ'ದ ದೀಪ ಓ ಬೆಳಕೇ, ನೀನೊಂದು ಮೋಡಿ, ಸೊಗಸುಗಾರ. ಸದಾ ಮಿನುಗುವ... ಓ ಬೆಳಕೇ, ನೀನೊಂದು ಮೋಡಿ, ಸೊಗಸುಗಾರ. ಸದಾ ಮಿನುಗುವ ಸುಂದರಾಂಗ ಚಲನಶೀಲತೆಯೆ ಜೀವಾಳ. ಆಂತರ್ಯದ ಸಂಪತ್ತನ್ನು ಹಂಚುತ್ತ ಸಂಭ್ರಮಿಸುವ ಲಕಲಕನೆ ಹೊಳೆಯುವ ನಿಸ್ವಾರ್ಥಯಾನೀ ,ನಿನ್ನಂದಕ್ಕೆ ನೀ ಉಂಟು ಮಾಡುವ ಸಂಭ್ರಮಕ್ಕೆ ನಿನ್ನ ಸೆಳೆತಕ್ಕೆ ನೀನೇ ಸಾಟಿ. ಹಬ್ಬದ ನಿಮಿತ್ತ ಮತ್ತೊಮ್ಮೆ ಎಲ್ಲ ಪೊರೆಗಳನ್ನು ಕಳಚಿ ಬರುತ್ತಿರುವ ನಿನಗೆ ಸ್ವಾಗತ. ಬೆಳಕೆ ನೀ ಎಲ್ಲೋ ಅಲ್ಲೋ ಇಲ್ಲೋ ಮಾತ್ರ ಅಲ್ಲ ಎಲ್ಲಡೆ ವ್ಯಾಪಿಸಿದ್ದು ಬೆಳಕೆ ಜೀವನ ಅದುವೇ ಸತ್ಯದರ್ಶನ ಇದರಿಂದಲೇ ಮೌಲ್ಯಗಳ ಸಾಕ್ಷಾತ್ಕಾರ ಬೆಳಕಿಗೆ ಗಡಿ-ಸೀಮೆಗಳಲ್ಲಿ. ಬೇಧ-ಭಾವಗಳಿಲ್ಲ ಬೆಳಕನ್ನೋದು ಯಾವುದೋ ಭೌತಿಕ ಸಾಧನವಲ್ಲ ಅಥವಾ ತೀರಾ ಎಟುಕುಲಾರದ ಅಭೌತಿಕ ಸಂಗತಿಯೂ ಅಲ್ಲ. ಅದು ನಮ್ಮ ಆತ್ಮ ಸಂಗಾತಿ. ಜೀವದ ಗೆಳೆಯ. ಬದುಕಿಗೆ ಪಥದರ್ಶಕ. ನಮ್ಮದೆ ಒಳಗಣ್ಣು ಇದು ಬೆಳಕು ನಮ್ಮನ್ನು ಬೆಳಗದೇ ನಾವು ಬಾಳಲುಂಟೆ ? ಮಗುವಿನ ಮುಗ್ಧತೆಯಲ್ಲಿ, ತಾಯಿಯ ಮಮತೆಯಲ್ಲಿ, ತಂದೆಯ ಅಕ್ಕರೆಯಲ್ಲಿ ಅಣ್ಣನ ಪೋಷಣೆಯಲ್ಲಿ, ಗೆಳೆಯನ ಕಾಳಜಿಯಲ್ಲಿ, ನಲ್ಲ-ನಲ್ಲೆಯರ ಸಂಭಾಷಣೆಯಲ್ಲಿ ಗುರು-ಶಿಷ್ಯರ ಸಂವಾದದಲ್ಲಿ... ಹೀಗೆ ಎಲ್ಲಲ್ಲೂ, ದೃಷ್ಠಿ ಹಾಯಿಸಿದತ್ತಲೂ ಬೆಳಕಿನ ಸಾಕ್ಷಾತ್ಕಾರವೇ ಗೋಚರಿಸುತ್ತದೆ. ಅದರ ದೇದೀಪ್ಯಮಾನ ಪ್ರಕಾಶ ಹಿತ ನೀಡುತ್ತದೆ ಬೆಳಕಿನ ಹಬ್ಬವನ್ನು ನಮ್ಮ ಪೂರ್ವಜರು ಸುಖಸುಮ್ಮನೆ ಆರಂಭಿಸಿದ್ದೇನಲ್ಲ ಬೆಳಕು ನಮ್ಮನ್ನು ಬೆಳಗುತ್ತಾ, ಜೀವನದ ಪ್ರತಿ ಕ್ಷಣವನ್ನು ಉತ್ಸವವನ್ನಾಗಿಸುತ್ತದೆ .ಆಶಾವಾದ ಎಂಬ ಬೃಹತ್ ಎನಜರ್ಿಯನ್ನು ಸದಾ ಕಾಪಾಡುತ್ತದೆ ಇಷ್ಟೆಲ್ಲ ಉಪಕಾರ ಮಾಡುವ ಬೆಳಕಿಗೆ ಒಂದು ಸಣ್ಣ ಕೃತಜ್ಞತೆಯನ್ನು ಸಲ್ಲಿಸದಿದ್ದರೆ ಹೇಗೆ ? ಹೀಗೆ ಬೆಳಕಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ನಮ್ಮ ಆಶಾವಾದವನ್ನು ಇನ್ನಷ್ಟು ಗಟ್ಟಿಗೊಳಿಸದಿದ್ದರೆ ಹೇಗೆ ? ಯಾವುದೇ ಆರಂಭಕ್ಕೆ ಬೆಳಕೊಂಡು ಶುಭ ಮುನ್ನುಡಿ. ನಾವು ಬೆಳಕನ್ನು ನೇರವಾಗಿ ನೋಡಲಾರೆವು. ಆದರೆ ಬೆಳಕಿನಿಂದ ಎಲ್ಲಾ ವಸ್ತುಗಳನ್ನು ನೋಡಬಲ್ಲೆವು. ಸೂರ್ಯನ ಉಜ್ವಲ ಬೆಳಕು, ಚಂದ್ರನ ತಂಪು ಬೆಳಕು. ಮಿಂಚಿನ ಝಳಕಿನ ಬೆಳಕು, ತಾರೆಗಳ ಮಿಣುಕು ಬೆಳಕು ಹಣತೆಯ ಮಿಣಿ ಮಿಣಿ ಬೆಳಕು ಹೀಗೆ ಬೆಳಕಿನ ರೂಪ ನೂರು ತರಹ. ಮುಂಬಡ್ತಿ ತಾನು ಕರಗುತ್ತ ಇತರರಿಗೆ ಬೆಳಕು ನೀಡುತ್ತದೆ. ತನ್ನ ಬುಡ ಕತ್ತಲಿನಿಂದ ಕವಿದಿದ್ದರೂ ದೀಪ ಇತರರಿಗೆ ಬೆಳಕು ನೀಡುತ್ತದೆ ಇದು ತ್ಯಾಗದ ಸಂಕೇತ. ದೀಪವನ್ನು ಎಲ್ಲೇ ಇಡಿ, ಅದರ ಜ್ವಾಲೆ ಮೇಲ್ಮುಖವಾಗಿರುತ್ತದೆ. ಅದು ಅಭಿವೃದ್ಧಿಯ ಸಂಕೇತ. ಬೆಳಕಿಗೆ ಸ್ವಾರ್ಥವಿಲ್ಲ. ಒಂದು ದೀಪದಿಂದ ಸಾವಿರ ದೀಪ ಬೆಳಗಬಹುದು. ಅದು ಜ್ಞಾನವನ್ನು ಹರಡುವ ಪ್ರತೀಕ. `ಪ್ರೀತಿಯ ಮೊರೆ ಕೇಳಿ, ಆತ್ಮದ ಕರೆ ಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚಾ' ಅನ್ನುತ್ತದೆ ಕವಿ ಸಾಲು. ದೀಪಾವಳಿಯ ಹಂಬಲವೂ ಅದೇ ಹಣತೆ ಹಚ್ಚೋದು. ಬರೀ ಕತ್ತಲು ಕಳೆಯಲಿಕ್ಕಲ್ಲ. ಅಥವಾ ಹಣತೆಗೆ ಅಂತಹ ಭ್ರಮೆಯಿಲ್ಲ. ಅದಕ್ಕೆ ಬೆಳಕು ತುಂಬುವ ಕಸುವಿದೆ. ಭರವಸೆಯ ಮತ್ತೊಂದು ಹೆಸರೇ ಬೆಳಕು. ಈ ಬೆಳಕಿನ ಕುಡಿ ಸಾಲು ಎದೆಗಳಲ್ಲಿ ಹೊತ್ತಿದಾಗ ದಿನದಿನವೂ ದೀಪಾವಳಿ. ಸುಡುವ ಬೆಂಕಿಯನ್ನು ಬೆಳಕಿನ ಮೊಗ್ಗಾಗಿಸಿ ಉರಿಯುವ ಹಣತೆ ಸಾಲು, ಬೆಳಕಿನ ಕುಡಿ ಹೊಟ್ಟೆಯಲ್ಲಿಟ್ಟು ಕೊಂಡು ತೊಯ್ದಾಡುವ ಆಕಾಶಬುಟ್ಟಿ. ಹೂ ಪಕಳೆ ತುಂಬಿ ಬಿಡಿಸಿದ ರಂಗೋಲಿಯ ಚಿತ್ತಾರ. ದೀಪಾವಳಿ ಅಂದರೆ ಈ ಎಲ್ಲ ಅಲಂಕಾರದ ಮೊತ್ತ ಕೂಡ. ಬೆಳಕು ಅಂದರೆ ಹಣತೆಯಿಂದಲೋ ಸೂರ್ಯಚಂದ್ರರಿಂದಲೋ ಹೊಮ್ಮವ ಕಿರಣಗಳು ಮಾತ್ರ ಅಲ್ಲ. ಪ್ರೀತಿ ಕೂಡ ಬೆಳಕಿನ ಭಾವ ಹೊತ್ತಿರುತ್ತದೆ. ಜೀವಕ್ಕೆ ಬುದ್ಧಿ ಕೊಡುವ, ಬದುಕು ಕಟ್ಟಿಕೊಡುವ, ಗುರಿ ಮುಟ್ಟಲು ದಾರಿ ತೋರುವ ಎಲ್ಲವೂ ಬೆಳಕೇ. ಒಂದು ಒಳ್ಳೆಯ ಹಾಡು, ನೋಟ, ಊಟವೂ ಕೂಡ ಮನಸಿನ ಕತ್ತಲನ್ನು ಓಡಿಸಬಲ್ಲದು, ಹೊಸ ಹುರುಪು ಮೂಡಿಸಬಲ್ಲರು. ``ಬಂದಿತು ದೀಪಾವಳಿ ಮನೆ ಮನೆಯೊಳು, ಕುಡಿಯಾಡಿಸುತಿದೆ ನಸುಬೆಳಕು, ಮಿರು ಸೊಡರಿನ ಮಿತಮಾನದೊಳಿರುಳನು ಮೊಗೆದು ಸುರಿವ ಮೋದದ ತಳಕು.'' ಕವಿ ಪುತಿನ ಹೇಳುವಂತೆ ಮನೆಮನೆಯಲ್ಲೂ ನಸುಬೆಳಕು ಕುಡಿಯಾಡುವ ಬೆಳಕಿನ ಹಬ್ಬವು ತನ್ನ ಮಿತಿಯಲ್ಲೂ ಇರುಳ ಕತ್ತಲೆಯನ್ನು ಮೊಗೆದು ಹೊರ ಚೆಲ್ಲುವ ಮೋಜಿನ ತಳಕನ್ನು ಹಾಕಿಕೊಂಡಿದೆ. ನಿಜ. ಇರುಳ ದೂರ ಮಾಡುವ ಈ ಬೆಳಕು ಬಾಳ ಕತ್ತಲನ್ನು ಹೊಡೆದೋಡಿಸಿ ಅರಿವಿನ ಬೆಳಕನ್ನು ಮೂಡಿಸುವ ರೂಪಕ ಕ್ರಿಯೆಯೂ ಹೌದು. ನರಕ ಎಂಬ ಅಸುರನನ್ನು ಶ್ರೀಕೃಷ್ಣ ಸಂಹರಿಸಿದ ದಿನ ನಮ್ಮ ಪಾಲಿಗೆ ಹಬ್ಬವಾಯಿತು ಬೆಳಕಿನ ಹಬ್ಬವದು ನರಕಾಸುರನಿಗೆ ಐದು ತಲೆಗಳಿದ್ದವಂತೆ, ಇವು ಪಂಚಭೂತಗಳಿಗೆ ಪ್ರತೀಕ; ಪಂಚಭೂತಗಳೆಂದರೆ ಈ ಸೃಷ್ಟಿ; ನಮ್ಮ ಬದುಕು, ಈ ನರಕಾಸುರ ಹುಟ್ಟಿದ್ದು ಭೂದೇವಿಯಲ್ಲಿ ಎಂದರೆ ನರಕ ಕಾಣಿಸಿಕೊಳ್ಳುದು ಈ ಜಗತ್ತಿನಲ್ಲಿ, ನೀರು, ಆಕಾಶ, ವಾಯು, ಅಗ್ನಿ, ಪೃಥ್ವಿ ತತ್ವಗಳಿಂದ ಆದ ಈ ಸೃಷ್ಟಿಯಲ್ಲಿ ಈ ನರಕ ಎಂಬ ರಾಕ್ಷಸ ನಮಗೆ ಅಡ್ಡಿ ಒಡ್ಡುತ್ತಾ ಈ ಲೋಕದ ಜೀವನವನ್ನು ಯಾತನೆಗೆ ಒಡ್ಡುತ್ತಿರುತ್ತಾನೆ. ಇವರ ಸಂಹಾರ ಮಾಡಿದವನು ಕೃಷ್ಣ ಅಂದರೆ ಕತ್ತಲಿನಲ್ಲಿ ತೋರಿಕೊಂಡ ಬೆಳಕು ಅವನು. ದೀಪಾವಳಿಯೆಂದರೆ ಅಮಾವಾಸ್ಯೆಯ ಗಾಢಾಂಧಕಾರದಲ್ಲಿಯೂ ಪ್ರಕಾಶವನ್ನು ಹೊರಸೂಸುವ ಪರ್ವ.ಅಮಾವಾಸ್ಯ ದಿನ ಲಕ್ಷ್ಮಿಯನ್ನು ಆರಾಧಿಸಬೇಕು. ಲಕ್ಷ್ಮಿ ಅಂದರೆ ಕೇವಲ ಹಣ; ಸಂಪತ್ತುಗಳು ಮಾತ್ರವೇ ಅಲ್ಲ ನಮ್ಮ ಜೀವನದ ಕತ್ತಲಿನ ಕ್ಷಣಗಳನ್ನು ದೂರ ಮಾಡುವಂಥ ಎಲ್ಲವೂ ಕೂಡ ಲಕ್ಷ್ಮೀ ಸ್ವರೂಪವೇ ಹೌದು. ಬಲಿ ಪಾಡ್ಯಮಿಯ ದಿನ ದೀಪಾವಳಿಯ ಮೂರನೇ ದಿನ ವಾಮನನು ಬಲಿಯನ್ನು ನಿಗ್ರಹಿಸಿದ ದಿನ. ಬಲಿಚಕ್ರವತರ್ಿಯನ್ನು ಮೂರು ಹೆಜ್ಜೆಯಷ್ಟು ಸ್ಥಳವನ್ನು ಯೋಚಿಸಿದ ವಿಷ್ಣು ಎರಡು ಹೆಜ್ಜೆಗಳು ಭೂಮಿ - ಆಕಾಶಗಳನ್ನು ವ್ಯಾಪಿಸಿದವು. ಮೂರನೆ ಪಾದಕ್ಕೆ ಎಡೆಯಿಲ್ಲದಾಯಿತು. ಬಲಿಯು ತಲೆ ಅದಕ್ಕೆ ಅವಕಾಶವಾಯಿತು. ಇದರ ತಾತ್ಪರ್ಯ ವಿಷ್ಣುವು ತನ್ನ ಮೊದಲೆರಡು ಪಾದಗಳಲ್ಲಿ ಹಗಲು-ರಾತ್ರಿಗಳನ್ನು ಆಕ್ರಮಿಸಿದ; ಅಂದರೆ ಕತ್ತಲೆ - ಬೆಳಕುಗಳನ್ನು ಅಳೆದ. ಈ ಎರಡೂ ಸ್ಥಿತಿಗಳನ್ನು ಮೀರಿದ ಸ್ಥಿತಿಯೇ ಮೂರನೇ ಪಾದಕ್ಕೆ ನೆಲೆ ಕಲ್ಪಿಸಿಲು ಸಾಧ್ಯ. ಬೆಳಕು - ಕತ್ತಲೆಯನ್ನು ಮೀರಿದ ಸ್ಥಿತಿ ಎಂದರೆ `ನನ್ನದು' `ನನ್ನದಲ್ಲ' ಎಂಬ ಮೀರಿದ ಸ್ಥಿತಿ. ಸುಖ-ದುಃಖವನ್ನು ಮೀರಿದ ಸ್ಥಿತಿ. ಈ ಅಹಂಕಾರ ದಮನಕ್ಕೆ ಸಾಂಕೇತಿಕವಾಗಿಯೇ. ಬಲಿ ಚಕ್ರವತರ್ಿ ತನ್ನ ತಲೆಯನ್ನೇ ವಿಷ್ಣುಪಾದಕ್ಕೆ ಅಪರ್ಿಸಿದ್ದು. ಆ ಮೂಲಕ ಶಾಶ್ವ್ವತ ಸ್ಥಾನಕ್ಕೆ ಎರಿದ್ದು. ಸುಶುಪ್ತಿಯ ಗಾಢ ಕತ್ತಲೆಯ ಒಡಲು ಆನಂದಘನ ಸ್ವಸ್ಥ ರೂಪವನ್ನು ಧರಿಸಿಟ್ಟುಕೊಂಡಿದೆ. ಆದರೆ ಎಚ್ಚರದ ಬೆಳಕು ಹರಿಯದೆ ಆದು ಸ್ವಾನುಭವಕ್ಕೆ ಬರಲಾರದು. ಬೆಳಕು ತೋರದೆ ದಾರಿ ಕಾಣದು! ಕತ್ತಲ ಸ್ಥಾಯಿಯಲ್ಲಿ ಬೆಳಕಿಗಾಗಿ ಹಂಬಲಿಸುತ್ತಾ ಸಾಗುವುದು ಬದುಕಿನ ಪ್ರಕ್ರಿಯೆ ಕತ್ತಲು ಮುಸುಕಿದೆಂತೆಲ್ಲ ಬೆಳಕಿನ ಕಿಂಡಿಯನ್ನು ತೆರೆಯಲೇಬೇಕು ಹಣತೆಯನ್ನು ಹಚ್ಚುತ್ತಲೆ ಇರಬೇಕು. ವರ್ಷವರ್ಷವೂ ದೀಪಾವಳಿ ನಡೆಯಬೇಕು. ದೀಪಾವಳಿ ಹಬ್ಬದ ಇನ್ನೊಂದು ವಿಶೇಷತೆ ಏನೆಂದರೆ ಇದು ಬರೀ ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ ಹಬ್ಬವಿದು `ಹಿಂದೂ ಮೀಸಲಾತಿ'ಯಿಂದ ಹೊರಬಂದು ಜೈನ ಧಮರ್ೀಯರು ಹಾಗೂ ಸಿಖ್ ಧಮರ್ೀಯರೊಂದಿಗೆ ತನ್ನನ್ನು ಗುರುತಿಸಿಕೊಂಡಿದೆ. ಇದು ಸಕಲ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಯ ಜನ್ಮದಿನ ಅಂತೆಯೇ ಅವಳ ವಿವಾಹ ವಾಷರ್ಿಕೋತ್ಸವವೂ ಹೌದು. ಈ ಪರ್ವಕಾಲದಲ್ಲೇ ಶ್ರೀಕೃಷ್ಣ ಪರಮಾತ್ಮನು ಸತ್ಯಭಾಮಾ ಸಾರಥ್ಯದಲ್ಲಿ `ಲೋಕಕಂಟಕ'ನಾದ ನರಕಾಸುರನನ್ನು ಸಂಹರಿಸುತ್ತಾನೆ. ಮತ್ತೊಂದು ಕಥಾನಕದ ಪ್ರಕಾರ ನರಕಾಸುರನ ಭೂದೇವಿಯ ಮಗ. ನಾವು ಜನ್ಮಕೊಟ್ಟ ಮಕ್ಕಳು ಸಮಾಜಘಾತುಕರು, ಲೋಕಕಂಟಕರೂ ಮತ್ತು ಉಗ್ರಗಾಮಿಗಳಾಬಾರದು ಆದರೆ ಹೆತ್ತವರು ಅವರನ್ನು ಸಹಿಸಿಕೊಳ್ಳಬಾರದು. ಅವರನ್ನು ಕೊಚ್ಚಿಹಾಕಬೇಕು. ಮಮತೆುಯ ನೆಪದಲ್ಲಿ ಸಮಾಜಘಾತುಕ ಶಕ್ತಿಗಳನ್ನು ಪೋಷಿಸಿಕೊಂಡಿರಬಾರದು ಎಂಬ ಸಂದೇಶವನ್ನು ಸತ್ಯಭಾಮೆಯ `ಮಾತೃ-ಜಗತ್ತಿಗೆ' ರವಾನಿಸಿದ್ದಾಳೆ. ವಿಷ್ಣು `ವಾಮನಾವತಾರ'ದಲ್ಲಿ ಒಂದು ಬಲಿಯ ತಲೆಯನ್ನು ತುಳಿದು ಅವನನ್ನು `ಕೀತರ್ಿಶೇಷನನ್ನಾಗಿ' ಮಾಡಿ `ಬಲಿದಾನ' `ಬಲಿಪಶು' ಎಂಬ ಪದಗಳಿಗೆ `ಹಿನ್ನಲೆ'ಯಾದ ದಿನವಿದು. ರಾಮನು ಹದಿನಾಲ್ಕು ವರ್ಷಗಳ ವನವಾಸವನ್ನು ಪೊರೈಸಿಕೊಂಡು ರಾವಣನನ್ನು ಸಂಹರಿಸಿ `ಸೀತಾಸಮೇತ'ನಾಗಿ ದೀಪಾವಳಿಯ ಪರ್ವದಿನದಂದು ಅಯೋಧ್ಯೆಗೆ ಮರಳಿ ಬರುತ್ತಾನೆ. ಆಚರಣೆಯ ಪೌರಾಣಿಕ ಹಿನ್ನೆಲೆ ಆಶ್ವಯುಜ ಮಾಸದ ಕೊನೆಯಲ್ಲಿ ಮತ್ತು ಕಾತರ್ೀಕ ಮಾಸದ ಆರಂಭದಲ್ಲಿ ಹೀಗೆ ಒಟ್ಟು ಐದು ದಿನಗಳ ಅವಧಿಯ ಹಬ್ಬವಾದ ದೀಪಾವಳಿಗೆ, ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನದ ಆಚರಣೆಗೆ ಚಾಲನೆ ಸಿಗುತ್ತದೆ. ಹಬ್ಬದ ಮೊದಲ ದಿನವನ್ನು `ಧನತ್ರಯೋದಶಿ' ಎಂದೂ ಕರೆಯಲಾಗುತ್ತದೆ. ಹಿಮರಾಜನ 16 ವರ್ಷದ ಮಗನು ತನ್ನ ಜಾತಕದ ಪ್ರಕಾರ ಮದುವೆಯಾದ ನಾಲ್ಕೇ ದಿನಗಳಲ್ಲಿ ಹಾವು ಕಡಿತದಿಂದ ಮೃತನಾಗುವನೆಂದು ಹೇಳಲಾಗಿತ್ತು. ಮದುವೆಯ ನಾಲ್ಕನೆಯ ರಾತ್ರಿಯಂದು ಆತನ ನವವಧುವು ಅಂತಃಪುರವನ್ನೆಲ್ಲ ದೀಪ ಹಚ್ಚಿ ಬೆಳಗಿದಳು. ತನ್ನ ಒಡವೆ, ಧನ ಸಂಪತ್ತನ್ನು ರಾಶ ಹಾಕಿ ಪೂಜಿಸಿ ಭಗವಂತನ ಸಂಕೀರ್ತನೆಯನ್ನು ಮಾಡುತ್ತಾ ನತರ್ಿಸತೊಡಗಿದಳು. ರಾತ್ರಿಯಲ್ಲಿ ಅಲ್ಲಿಗೆ ಸರ್ಪರೂಪದಲ್ಲಿ ಬಂದು ಯಮದೇವನಿಗೆ ದೀಪದ ಝಗಮಗಿಸುವ ಬೆಳಕಿನಲ್ಲಿ ಕಣ್ಣು ಕುಕ್ಕಿದಂತಾಯಿತು. ಸರ್ಪವು ಚಿನ್ನಾಭರಣಗಳ ರಾಶಿಯ ಮೇಲೆ ಹತ್ತಿ ಕುಳಿತು, ನವವಧುವಿನ ಮಧುರ ಗೀತೆಗಳನ್ನು ಆಲಿಸುತ್ತ ಮುಂಜಾನೆ ಹೊರಟು ಹೋಯಿತು. ಹೀಗೆ ಪತ್ನಿಯು ತನ್ನ ಪತಿಯಾದ ರಾಜಕುಮಾರನ ಜೀವನನ್ನು ಕಾಪಾಡಿದ ದಿನವೆಂಬ ಹಿನ್ನೆಲೆಯಲ್ಲಿ ಈ ದಿನವನ್ನು `ಯಮದೀಪದಾನ' ದಿನವೆಂದು ಆಚರಿಸುತ್ತಾರೆ. ಇನ್ನೊಂದು ಉಲ್ಲೇಖದ ಪ್ರಕಾರ ಕರೋಪನಿಷತ್ತಿನ ಬಾಲಕ ನಾಯಕ `ನಚಿಕೇತ'ನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೂ ಇದೇ. ಲಕ್ಷ್ಮೀ ಪಂಚಾಯತನ ಪೂಜೆಯನ್ನು ಅಮಾವಾಸ್ಯೆಯ ದಿನ ನಡೆಸಲಾಗುತ್ತದೆ ಲಕ್ಷ್ಮೀ ಪಂಚಾಯತನ ಪೂಜೆ ಎಂದರೆ ವಿಷ್ಣು (ಆನಂದ ಅಧಿಪತಿ), ಕುಬೇರ (ಸಂಪತ್ತಿನ ಅಧಿಪತಿ) ಇಂದ್ರ (ಸಂತೃಪ್ತಿಯ ಅಧಿಪತಿ) ಗಜೇಂದ್ರ (ಸಂಪತ್ತಿನ ವಾಹನ) ಹಾಗ ಲಕ್ಷ್ಮೀದೇವಿ (ಸರ್ವಶಕ್ತಿ ಸಂಪತ್ತಿನ ಸ್ವರೂಪಿಣಿ) ಲಕ್ಷ್ಮೀ ಐಶ್ವರ್ಯದ ಅಧಿದೇವತೆ ಮಾತ್ರವಲ್ಲ. ನಮ್ಮ ಜೀವನ ಲೌಕಿಕ, ಪಾರಮಾಥರ್ಿಕ ಗುರಿ ಸಾಧನೆಗೂ ಈಕೆಯ ಕೃಪೆ ಅತ್ಯಗತ್ಯವಾಗಿದೆ. ದೀಪಾವಳಿಯಂದೇ ಹಸ್ತಿನಾಪುರಕ್ಕೆ ಕುಂತಿಸಮೇತವಾಗಿ ಪಾಂಡವಪುತ್ರರು ಮತ್ತು ದ್ರೌಪದಿಯು 12 ವರ್ಷಗಳ ಕಾಲದ ವನವಾಸ ಮತ್ತು 1 ವರ್ಷದ ಅಜ್ಞಾತವಾಸವನ್ನು ಪೂರೈಸಿ ಬಂದ ದಿನ. ಇಂದ್ರನ ಕೋಪಕ್ಕೆ ತುತ್ತಾಗಿ ಕಂಗೆಟ್ಟ ಗೋಕುಲದ ಗೋಪ-ಗೋಪಿಕೆಯರನ್ನು ಕೃಷ್ಣ `ಗೋವರ್ಧನ ಗಿರಿ'ಯನ್ನು ಎತ್ತಿ ಹಿಡಿದು ಶುಭದಿನ. ಭಾರತದ ಕೀತರ್ಿಯನ್ನು `ಐತಿಹಾಸಿಕ' ಗೊಳಿಸಿದ ರಾಜಾವಿಕ್ರಮಾದಿತ್ಯನ ಪಟ್ಟಾಭಿಷೇಕದ ದಿನವದು. ಜೈನಧರ್ಮದ 24ನೇ ತೀರ್ಥಂಕರರಾದ ವರ್ಧಮಾನ ಮಹಾವೀರರು ಮಹಾ ನಿವರ್ಾಣಗೈದ ಪಾವನ ದಿನವದು. ದೀಪಾವಳಿಯ ಶುಭ ಘಳಿಗೆಯಲ್ಲೇ 1577ರಲ್ಲಿ ಸದ್ಯ ಅಮೃತ ಸರದಲ್ಲಿರುವ ಸುವರ್ಣ ಮಂದಿರ'ವನ್ನು ಕಟ್ಟುವುದಕ್ಕೆ `ಭೂಮಿ ಪೂಜೆ' ಮಾಡಲಾಯಿತು. ಆರ್ಯ ಸಮಾಜದ ಸಂಸ್ಥಾಪಕರಾದ ಶ್ರೀ ದಯಾನಂದ ಸರಸ್ವತಿಯವರು `ದಿವ್ಯಜ್ಞಾನ'ವನ್ನು ಪಡೆಯುವ ಮೂಲಕ `ಮಹಷರ್ಿ ದಯಾನಂದ'ರಾದರು. ನಮ್ಮ ಪ್ರಾಚೀನರು ಹಿಂದಿನ ಕಾಲದಲ್ಲಿ ಆಕರ್ೆಟಿಕ್ ಪ್ರದೇಶದಲ್ಲಿ ನೆಲೆ ನಿಂತಿದ್ದರಂತೆ. ಈ ಧೃವ ಪ್ರದೇಶದಲ್ಲಿ ವರ್ಷದ ಆರು ತಿಂಗಳ ಕಾಲ ಮಾತ್ರ ಬೆಳಕಿದ್ದು, ಇನ್ನುಳಿದ ಆರು ತಿಂಗಳು ಕಾಲ ಕತ್ತಲೆಯೇ ತುಂಬಿರುತ್ತದೆ. ಸೂರ್ಯನು ಮೇಷ ಸಂಕ್ರಾಂತಿಯಂದು ಪ್ರಕಟವಾಗುತ್ತಾನೆ. ಹಾಗು ತುಲಾ ಸಂಕ್ರಾಂತಿಯಂದು ಮರೆಯಾಗುತ್ತಾನೆ. ಕಾತರ್ಿಕ ಚತುದಶರ್ಿಯಂದು ಆರಂಭವಾಗುವ ಅಯನವನ್ನು `ಕೌಮುದೀ'ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ಅಲ್ಲಿ ನಿತ್ಯವೂ ದೀಪವನ್ನು ಬೆಳಗುತ್ತಿದ್ದರೂ ಇದನ್ನು `ನಿತ್ಯಜ್ಯೋತಿ' ಎಂದು ಪೂಜಿಸುತ್ತಿದ್ದರು. ಹೀಗೆ ದೀಪಾವಳಿ ಆಚರಣೆ ಜಾರಿಗೆ ಬಂತು ಎಂಬ ಪ್ರತೀತಿಯೂ ಇದೆ. -ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಇ-ಮೇಲ್ : @.