ಸೂಪರ್‌ಸ್ಟಾರ್‌ನ ಆತ್ಮಕಥೆ: ಮುನಿತಾಯಿ ತನ್ನ ಮೊದಲ ಚಿತ್ರದ ಬಳಿಕ ಕೆಲವು ತಿಂಗಳುಗಳ ಕಾಲ ಕೆಲಸವಿಲ್ಲದೆ... ತನ್ನ ಮೊದಲ ಚಿತ್ರದ ಬಳಿಕ ಕೆಲವು ತಿಂಗಳುಗಳ ಕಾಲ ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆದ ರಜನಿಯನ್ನು ಹುಡುಕಿಕೊಂಡು ಬಂದದ್ದು ಪುಟ್ಟಣ್ಣ ಕಣಗಾಲ್ ಕರೆ. 'ಕಥಾಸಂಗಮ' ಎನ್ನುವ ಮೂರು ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್ ಕೊನೆಯ ಭಾಗವಾದ 'ಮುನಿತಾಯಿ' ಚಿತ್ರಕ್ಕೆ ರಜನಿಯನ್ನು ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡರು. ಹಳ್ಳಿಗಾಡಿನಲ್ಲಿ ಕುರುಡಿ ಮುನಿತಾಯಿ (ಆರತಿ) ತನ್ನ ತಾತನೊಡನೆ ವಾಸಿಸುತ್ತಿರುತ್ತಾಳೆ. ತಾನು ಸತ್ತ ಬಳಿಕ ಮೊಮ್ಮಗಳ ಗತಿಯೇನು? ಎಂದು ಸದಾ ಆಲೋಚಿಸುವ ತಾತನ ಚಿಂತೆ ದೂರ ಮಾಡಲೆಂದೇ ಒಂದು ಘಟನೆ ನಡೆಯುತ್ತದೆ. ಹಳ್ಳಿಯ ಪುಟ್ಟ ಹುಡುಗರು 'ಕುರುಡಿಯನ್ನು ಯಾರು ಮದುವೆಯಾಗುತ್ತಾರೆ?' ಎಂದು ರೇಗಿಸುವುದನ್ನು ಕಂಡು ಅಲ್ಲಿಗೆ ಬಂದ ಆದಾಯ ತನಿಖೆಗಾರ ಚೆನ್ನಪ್ಪ (ಗಂಗಾಧರ್) ಅವರನ್ನು ಓಡಿಸುವುದು ಮಾತ್ರವಲ್ಲ, ಅವಳನ್ನು ಮದುವೆಯಾಗುವುದಾಗಿಯೂ ಹೇಳುತ್ತಾನೆ. ಮದುವೆಯ ಬಳಿಕ ನೆರೆಯ ಪಟ್ಟಣಕ್ಕೆ ತೆರಳುವ ಅವರಿಬ್ಬರೂ ಕೆಲವು ಸಂತಸದ ದಿನಗಳನ್ನು ಕಾಣುತ್ತಾರೆ. ದಂಪತಿಗಳ ಸಂತಸಕ್ಕೆ ಕಲ್ಲು ಹಾಕುವವರು ಬೇಕಲ್ಲವೇ? ಆ ಪಾತ್ರಕ್ಕೆ ಕಣಗಾಲ್ ನಮ್ಮ ರಜನಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಮೊದಲ ಚಿತ್ರದ ಹಾಗೆ ಇಲ್ಲಿಯೂ ರಜನಿಗೆ ನಾಟಕೀಯ ಪ್ರವೇಶವಿದೆ. 'ಅಪೂರ್ವ ರಾಗಂಗಳ್‌' ಚಿತ್ರದಲ್ಲಿ ನಾಯಕ ಕಮಲಹಾಸನ್‌ಗೆ ಈ ರೀತಿಯ ನಾಟಕೀಯ ಪ್ರವೇಶದ ಅವಕಾಶವಿಲ್ಲ. ಇಲ್ಲಿಯೂ ನಾಯಕ ಗಂಗಾಧರ್‌ಗೆ ಆ ನಾಟಕೀಯ ಪ್ರವೇಶ ದೊರೆಯುವುದಿಲ್ಲ. ಅದೇನಿದ್ದರೂ ಖಳನಾಯಕ ರಜನಿಯ ಪಾಲು. ಹಳೆಯ ದೇವಸ್ಥಾನವೊಂದರ ಮೇಲೆ ಕ್ಯಾಮರಾ ಬೆಳಕು ಚೆಲ್ಲುತ್ತದೆ. ಪಾಳು ಬಿದ್ದ ಗುಡಿಯ ಅಂಗಳದಲ್ಲಿರುವ ಮರವೊಂದರ ಕೆಳಗೆ ಒಂದು ಗುಂಪು ಇಸ್ಪೀಟಾಡುವುದರಲ್ಲಿ ಮಗ್ನವಾಗಿಇರುವುದು ತಿಳಿಯುತ್ತದೆ. ಆಟಗಾರ ಮೇಲೆ ಗಮನ ಹರಿಸಿದಾಗ, ಒಬ್ಬ ಹೇಳುತ್ತಾನೆ. 'ಸತ್ಯಕ್ಕಾಗಿ ಹರಿಶ್ಚಂದ್ರ ಹುಟ್ಟಿದ, ಚತುರತೆಗಾಗಿ ಕೌರವೇಶ್ವರ ಹುಟ್ಟಿದ, ದಾನಕ್ಕಾಗಿ ಕರ್ಣ ಹುಟ್ಟಿದ ಮತ್ತು ಇಸ್ಪೀಟಾಟಕ್ಕಾಗಿ ಕೊಂಡೋಜಿ ಹುಟ್ಟಿದ' ಕೊಂಡೋಜಿ ಪಾತ್ರಕ್ಕಾಗಿ ರಜನಿಯ ಆಯ್ಕೆಯಾಗಿತ್ತು. ಮೊದಲ ಚಿತ್ರ 'ಅಪೂರ್ವ ರಾಗಂಗಳ್‌'ನಲ್ಲಿ ರಜನಿಗೆ ಪಂಚ್‌ಲೈನ್ ದೊರೆತರೆ, ಇಲ್ಲಿ ಅದನ್ನು ಆತನ ಗೆಳೆಯರ ಬಾಯಲ್ಲಿ ಕಣಗಾಲ್ ಹೇಳಿಸಿದ್ದಾರೆ. ಎಲ್ಲರಿಗೂ ತಿಳಿಯುವಂತೆ ಕೊಂಡೋಜಿ ಆ ಗುಂಪಿನ ನಾಯಕ. ಆತನ ಮೇಲೆ ಕ್ಯಾಮರಾ ಹರಿದಾಡಿದಾಗ ಅವನು ಕೃತಕವಾಗಿ ನಕ್ಕು, ತನ್ನದೇ ಸ್ಟೈಲ್‌ನಲ್ಲಿ ಕೇವಲ ಬಲಗೈ ಉಪಯೋಗಿಸಿ ಬಾಯಲ್ಲಿರುವ ಬೀಡಿಗೆ ಬೆಂಕಿ ಹಚ್ಚುವುದು ಕಾಣಿಸುತ್ತದೆ. ಆಗ ತಿಮ್ಮರಾಯಿ (ಉಮೇಶ್) ಎನ್ನುವ ಹುಡುಗ ಅವನಿಗಾಗಿ ಸಾರಾಯಿ ತರುತ್ತಾನೆ. ಚೂರುಪಾರು ಚಿಲ್ಲರೆಗಾಗಿ ಕೆಟ್ಟ ಸಹವಾಸದಲ್ಲಿದ್ದ ತಿಮ್ಮರಾಯಿಯನ್ನು ಚೆನ್ನಪ್ಪ ತನ್ನ ಮನೆಗೆ ಕರೆದುಕೊಂಡು ಹೋಗಿ ಮುನಿತಾಯಿಗೆ ನೆರವಾಗುವ ಕೆಲಸಕ್ಕೆ ಸೇರಿಸುತ್ತಾನೆ. ಒಂದು ರಾತ್ರಿ ಕುಡಿದ ಮತ್ತಿನಲ್ಲಿದ್ದ ಕೊಂಡೋಜಿ ತನ್ನ ಗೆಳೆಯರೊಂದಿಗೆ ಚಲನಚಿತ್ರದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವರ್ಣನೆ ಮಾಡುತ್ತಿದ್ದುದನ್ನು ತಿಮ್ಮರಾಯಿ ಕೇಳಿಸಿಕೊಳ್ಳುತ್ತಾನೆ. ಮರುದಿನ ಸಾಮಾನು ತರಲು ಅಂಗಡಿಗೆ ಹೋಗೆಂದು ತಿಳಿಸುವ ಮುನಿತಾಯಿಗೆ ಅರಿವಾಗದಂತೆ, ಮನೆಯಲ್ಲೇ ಅವಿತಿದ್ದು ಆಕೆ ಸ್ನಾನ ಮಾಡುವುದನ್ನು ನೋಡುತ್ತಾನೆ. ಕೆಲವು ದಿನಗಳ ಬಳಿಕ, ಅರ್ಧ ಬೆತ್ತಲೆ ಚಿತ್ರವೊಂದನ್ನು ಆಸೆ ಕಣ್ಣುಗಳಿಂದ ನೋಡುತ್ತಿದ್ದ ಕೊಂಡೋಜಿಯನ್ನು ಕಂಡು ಅಪಹಾಸ್ಯ ಮಾಡಿ ನಗುವ ತಿಮ್ಮರಾಯಿ ತಾನು ಮಹಿಳೆಯೊಬ್ಬಳು ಸ್ನಾನ ಮಾಡುವುದನ್ನು ನಿಜವಾಗಿಯೂ ನೋಡಿರುವುದಾಗಿ ತಿಳಿಸುತ್ತಾನೆ. ಕಾಸು ಪಡೆದು ಕೊಂಡೋಜಿ, ಮತ್ತು ಅವನ ಗೆಳೆಯರಿಗೆ ಮುನಿತಾಯಿ ಸ್ನಾನ ಮಾಡುವುದನ್ನು ನೋಡಲು ಅನುವು ಮಾಡಿಕೊಡುತ್ತಾನೆ. ಒಂದು ರಾತ್ರಿ ಹೆಂಡತಿಯೊಡನೆ ಜಗಳವಾಡಿ ಮನೆಯಿಂದ ಹೊರಹೋಗುವ ಚೆನ್ನಪ್ಪ ತಿಮ್ಮರಾಯಿಯನ್ನು ಕರೆದು ಮುನಿತಾಯಿಯನ್ನು ಸಮಾಧಾನ ಮಾಡುವಂತೆ ಹೇಳುತ್ತಾನೆ. ಚೆನ್ನಪ್ಪ ಆ ರಾತ್ರಿ ಮನೆಯಲ್ಲಿಲ್ಲದಿರುವ ವಿಷಯವನ್ನು ತಕ್ಷಣವೇ ಕೊಂಡೋಜಿಗೆ ತಿಳಿಸುವ ತಿಮ್ಮರಾಯಿ ಅವನೊಂದಿಗೆ ಸೇರಿ ಒಂದು ಹಂಚಿಕೆ ಹೂಡುತ್ತಾನೆ. ಆ ರಾತ್ರಿ ಕೊಂಡೋಜಿ ಮುನಿತಾಯಿಯ ಮನೆಗೆ ಬರುತ್ತಾನೆ. ಮೌನವಾಗಿರುವ ಅವನನ್ನು ಕಂಡು ತಿಮ್ಮರಾಯಿ ಅವಳ ಗಂಡನ ಕೋಪವಿನ್ನೂ ತಣ್ಣಗಾಗಿಲ್ಲಎಂದು ಸಮಾಧಾನ ಮಾಡುತ್ತಾನೆ. ಗಂಡನೆಂದು ತಿಳಿದು ಕೊಂಡೋಜಿಗೆ ಊಟ ಬಡಿಸುವ ಮುನಿತಾಯಿ ಮಲಗಿದಾಗ ಬಳಿಯಲ್ಲಿರುವುದು ಚೆನ್ನಪ್ಪನಲ್ಲವೆಂದು ಅರಿಯುತ್ತಾಳೆ. ಅವಳ ಪ್ರತಿಭಟನೆ, ಚೀರಾಟ ಯಾವುದೂ ಕೆಲಸಕ್ಕೆ ಬರುವುದಿಲ್ಲ, ಆಕೆ ಕೊಂಡೋಜಿಯ ಅತ್ಯಾಚಾರಕ್ಕೆ ಬಲಿಯಾಗುತ್ತಾಳೆ. ಮರುದಿನ ಬೆಳಗ್ಗೆ ಬಂದ ಚೆನ್ನಪ್ಪ ಹೆಂಡತಿಯ ಕಣ್ಣೇರು ಕಂಡು ಜಗಳದ ಕಾರಣವಿರಬಹುದು ಎಂದು ಸುಮ್ಮನಾಗುತ್ತಾನೆ. ಅವನು ಕೆಲಸಕ್ಕೆ ತೆರಳಿದ ಬಳಿಕ ಮನೆಗೆ ಬರುವ ತಿಮ್ಮರಾಯಿ ಅವಳನ್ನು ಹಣಕ್ಕಾಗಿ ಪೀಡಿಸುತ್ತಾನೆ. ಅವಳ ಗಂಡನಿಗೆ ವಿಷಯವೆಲ್ಲವನ್ನೂ ಹೇಳುವುದಾಗಿ ಹೆದರಿಸಿ ಹಲವು ದಿನ ಹಣ ವಸೂಲಿ ಮಾಡುತ್ತಾನೆ. ಕೆಲವು ದಿನಗಳ ಬಳಿಕ ಮುನಿತಾಯಿ ತಾನು ತಿಮ್ಮರಾಯಿಯೊಡನೆ ಮಲಗುವುದಾಗಿ ಆಸೆ ತೋರಿಸಿ ಅವನನ್ನು ಮನೆಯಲ್ಲಿ ಕೂಡಿಹಾಕಿ ಚೆನ್ನಾಗಿ ಹೊಡೆದುಬಡಿಯುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಚೆನ್ನಪ್ಪನಿಗೆ ನಡೆದ ಘಟನೆಯನ್ನೆಲ್ಲಾ ತಿಳಿಸುತ್ತಾಳೆ. ತಿಮ್ಮರಾಯಿ ಅಲ್ಲಿಂದ ತಕ್ಷಣ ತಪ್ಪಿಸಿಕೊಂಡು ಓಡುತ್ತಾನೆ. ಕೊಂಡೋಜಿ ಮತ್ತು ತಿಮ್ಮರಾಯಿ ಲಗುಬಗೆಯಲ್ಲಿ ಪಟ್ಟಣದಿಂದ ಹೊರಗೆ ಹೋಗುತ್ತಾರೆ. ನಡೆದ ಘಟನೆಯಲ್ಲಿ ಅವಳ ತಪ್ಪೇನೂ ಇಲ್ಲವೆಂದು ಚೆನ್ನಪ್ಪ ಮುನಿತಾಯಿಯನ್ನು ಸಮಾಧಾನಿಸುತ್ತಾನೆ. ನಿಜವಾದ ಖಳನಾಯಕನಾಗಿ ರಜನಿ ಕಾಣಿಸಿಕೊಳ್ಳುವುದು ಈ ಚಿತ್ರದಲ್ಲಿ. ಆತನ ಕಣ್ಣುಗಳಲ್ಲಿ ಮೈಗಳ್ಳತನದ ಸೊಕ್ಕು, ಕುಡಿದಾಗ ಕಾಣುವ ಕೆಂಪು ಕಣ್ಣುಗಳು, ಮುನಿತಾಯಿಯನ್ನು ಕಂಡಾಗ ಅವನ ಕಣ್ಣಲ್ಲಿ ಕಾಣುವ ಭೋಗಾಪೇಕ್ಷೆ, ಅವಳನ್ನು ಅತ್ಯಾಚಾರ ಮಾಡುವ ಮೊದಲು ಅವನ ಕಣ್ಣಲ್ಲಿ ಕಾಣುವ ದುಷ್ಟತನ ಅವನನ್ನು ಒಬ್ಬ ಸಂಪೂರ್ಣ ಖಳನಾಯಕನನ್ನಾಗಿ ತೋರಿಸುವಲ್ಲಿ ಯಶಸ್ವಿಯಾಗಿವೆ. ತಿಮ್ಮರಾಯಿ ಅವನ ಬಳಿ ಓದಿ ಬಂದು ವಿಷಯ ತಿಳಿಸಿದಾಗ ಅವನಲ್ಲಿ ಯಾವುದೇ ಭಯ ಕಾಣಿಸುವುದಿಲ್ಲ. ಬದಲಾಗಿ ಕೆಲವು ದಿನಗಳ ಕಾಲ ನಗರದಿಂದ ಹೊರಗೆ ಹೋಗುವುದಾಗಿ ಆಲೋಚಿಸುತ್ತಾನೆ. ಅವನಿಗೆ ತನ್ನ ಮೇಲೆ ಅಷ್ಟು ನಂಬಿಕೆಯಿದೆ. ಅವನಿಗೆ ಏನಾಗಿರಬಹುದೆಂಬುದು ಪ್ರೇಕ್ಷಕರ ಊಹೆಗೆ ಬಿಟ್ಟದ್ದು. ಈ ಚಿತ್ರದಲ್ಲಿ ರಜನಿಯ ಪಾತ್ರವನ್ನು ಪ್ರೇಕ್ಷಕರು ಮಾತ್ರವಲ್ಲ, ವಿಮರ್ಶಕರೂ ಗಮನಿಸಿದರು. ಕೆಲವು ವರ್ಷಗಳ ಬಳಿಕ ಇದೇ ಚಿತ್ರವನ್ನೂ ತಮಿಳಿನಲ್ಲಿ ಮಾಡಿದಾಗ ಗಂಗಾಧರ್ ಪಾತ್ರವನ್ನು ರಜನಿಗೆ ನೀಡಲಾಯಿತು. ಸಹ ನಿರ್ದೇಶಕನಾಗಿ ಈ ಚಿತ್ರದಲ್ಲಿ ಕೆಲಸ ಮಾಡಿದ ಚಿನ್ನಸಾಮಿ ಪೆರಿಯ ಮಾಯ ತೇವರ್ ಎನ್ನುವ ವ್ಯಕ್ತಿ ಮುಂದೆ ಭಾರತೀರಾಜ ಎನ್ನುವ ಹೆಸರಿನಲ್ಲಿ ನಿರ್ದೇಶಕನಾಗಿ ರಜನಿಯನ್ನು ತನ್ನ ಚಿತ್ರದಲ್ಲಿ ಬಳಸಿಕೊಂಡರು. - ಚೈತ್ರಾ ಅರ್ಜುನಪುರಿ @. (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.