ಸ್ತಂಭ ಸುಂದರಿ 51ರ ನತಾಶಾ ಪೇನ್ ತನ್ನ ಲುಕ್ಸ್‌ಗಳಿಂದ ಗ್ಲಾಮರಸ್ ಅಥ್ಲೀಟ್ ಎಂದು ಕರೆಸಿಕೊಂಡು ಬೀಗುತ್ತಾಳೆ. ಅಂತರಾಷ್ಟ್ರೀಯ ಮಟ್ಟದ ಪೋಲ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಹೆಮ್ಮೆ ಅವಳದು. ಆದರೆ ಆಕೆಯ ರೂಪ, ನೋಡಿದವರಿಗೆ ಅರ್ಧ ಸತ್ಯವನ್ನಷ್ಟೇ ಹೇಳುತ್ತದೆ. ಏಕೆಂದರೆ ಈ ನತಾಶಾ 8 ವರ್ಷಗಳ ಹಿಂದಷ್ಟೇ ಡೇವಿಡ್ ಎಂಬ ಹೆಸರಿನಲ್ಲಿ ನೌಕಾದಳದ ಆಫೀಸರ್ ಆಗಿದ್ದವಳು. ಅಷ್ಟೇ ಅಲ್ಲ, ಹೆಂಡತಿ ಹಾಗೂ ಎರಡು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದವಳು! ಪ್ರಶಸ್ತಿಯನ್ನು ಕೈಲಿ ಹಿಡಿದ ನತಾಶಾಗೆ ಕನ್‌ಫ್ಯೂಸ್ಟ್ ಹುಡುಗನಾಗಿ ಬೆಳೆದು ಬಂದ ತಾನು, ವಿಶ್ವಮಟ್ಟದ ಸ್ಪರ್ಧೆಯಲ್ಲಿ ಮಹಿಳೆಯಾಗಿ ಸ್ಪರ್ಧಿಸಿ ಪದಕ ಗೆದ್ದ ಬಗ್ಗೆ ಸ್ವತಃ ಅಚ್ಚರಿಯಿತ್ತು. ತಾನು ತಾನಲ್ಲದ ಬದುಕಿದ ಹಳೆಯ ಜೀವನ ಅವಳ ಕಣ್ಮುಂದೆ ಹಾದು ಹೋಗಿತ್ತು. 27ನೇ ವರ್ಷದಲ್ಲಿ ಮದುವೆಯಾದ ಡೇವಿಡ್ ಹೆಂಡತಿ ಮತ್ತು ಮಗನೊಂದಿಗೆ ಸುಖಸಂಸಾರ ನಡೆಸುತ್ತಿದ್ದವ. ಆದರೆ ಆತನೊಳಗಿನ ತುಮುಲಗಳು ಹೊ ಜಗತ್ತಿಗೆ ತಿಳಿಯುತ್ತಿರಲಿಲ್ಲ. ಹೆಣ್ಣಿನ ಆತ್ಮವೊಂದು ಗಂಡಿನ ದೇಹದೊಳಗೆ ಸೇರಿಕೊಂಡಿದೆ ಎಂದು ತನ್ನ ಬಗ್ಗೆ ತನಗೇ ಅನಿಸುತ್ತಿದ್ದುದನ್ನು ಆತ ಒಮ್ಮೆ ಧೈರ್ಯ ಮಾಡಿ ಹೆಂಡತಿಗೆ ಹೇಳಿದ. ಶಾಕ್ ಆದರೂ ಅವನ ಬಗ್ಗೆ ಅವಳಲ್ಲಿ ಕರುಣೆ ಹುಟ್ಟಿತ್ತು. 3 ವರ್ಷಗಳ ನಂತರ ತನ್ನ ಗಂಡನೊಂದಿಗಿನ ಸಂಬಂಧವನ್ನು ಮುರಿದುಕೊಂಡು ಆತನನ್ನು ತನ್ನಿಚ್ಛೆಯಂತೆ ಹಾರಲು ಬಿಟ್ಟಳು. ಆದರೆ ಆ ನಂತರ ಡೇವಿಡ್ ಮರುಮದುವೆಯಾದ. ಎರಡನೇ ಹೆಂಡತಿಗೆ ಈತನ ಹುಡುಗಿಯಂತೆ ಬದುಕುವ ಬಯಕೆ ವಿಚಿತ್ರವಾಗಿ ತೋರಿದ್ದರಿಂದ ಅವಳೂ ಈತನ ಕೈ ಬಿಟ್ಟಳು. ಆಗಲೇ ಡೇವಿಡ್ ಕದ್ದು ಮುಚ್ಚಿ ಹೆಂಡತಿಯೆದುರು ಹೆಂಗಸಂತೆ ಬದುಕಿದರೇನು ಬಂತು ಎಂದು ಯೋಚಿಸಿದ್ದು. ಧೈರ್ಯ ಮಾಡಿ ಆಪರೇಶನ್ ಮೂಲಕ ನತಾಶಳಾಗಿ ಬದಲಾಗಿದ್ದು. ಈಗ ನತಾಶ ತನ್ನ 26 ವರ್ಷದ ಗರ್ಲ್‌ಫ್ರೆಂಡ್ ಮೇರಿ ವ್ಯಾಟ್ಸ್‌ನ್‌ಳೊಂದಿಗೆ ಸುಖಸಂಸಾರ ನಡೆಸುತ್ತಿದ್ದಾಳೆ. ಬದಲಾದ ದೇಹ ತನ್ನ ಆಸಕ್ತಿಯ ಪೋಲ್ ಡ್ಯಾನ್ಸ್‌ನ ಅಭ್ಯಾಸಕ್ಕೂ ಅವಕಾಶ ಮಾಡಿಕೊಟ್ಟಿದ್ದು, ಒಂದು ಸಂತಸವಾದರೆ, ಮನಸ್ಸು ದೇಹ ಒಂದಾದ ನಂತರ ಅದನ್ನು ಜಗತ್ತೂ ಒಪ್ಪಿಕೊಂಡು ಸಂತಸ ಅವಳಿಗೆ ದೊರೆತಿದ್ದು ಮಹಿಳೆಯರ ಪ್ರತಿನಿಧಿಯಾಗಿ ಪೋಲ್ ಡ್ಯಾನ್ಸ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ. ಅಲ್ಲದೆ ಆಕೆಯ ಮಗ ಕೂಡಾ ಒಮ್ಮೊಮ್ಮೆ ಲೋಕಲ್ ಕ್ಲಬ್‌ಗಳಲ್ಲಿ ಇವಳ ಪೋಲ್ ಡ್ಯಾನ್ಸ್‌ನ್ನು ನೋಡಿ ತಂದೆಗೆ ಖುಷಿಯಾಗಲೆಂದು ಮೆಚ್ಚಿಕೊಳ್ಳುತ್ತಾನಂತೆ. ಗೆಳತಿ ವ್ಯಾಟ್ಸನ್ ಕೂಡಾ ತನ್ನ ಆಸಕ್ತಿಗೆ ಸಂಪೂರ್ಣ ನೀರೆರೆಯುತ್ತಿದ್ದಾಳೆ ಎಂದು ನಗೆ ಬೀರುತ್ತಾಳೆ ನತಾಶಾ. -ರೆಶ್ಮಾ