ಡಬಲ್ ಎಂಜಿನ್: ದುಡಿಮೆಯೇ ಕುಟುಂಬದ ಕಣ್ಣು 'ಅವಳು ಆಫೀಸ್ ಕೆಲಸಕ್ಕೆ ಹೋಗ್ತಾಳಂತೆ. ಎಷ್ಟು ದುರಹಂಕಾರ ನೋಡ' ಎಂದು ಹಳ್ಳಿಗಳಲ್ಲಿ ಮಾತನಾಡುತ್ತಿದ್ದ ಕಾಲ ಒಂದಿತ್ತು ಎಂದು ಹೇಳಿದರೆ ಇಂದಿನ ಜನರೇಶನ್ ಅಪನಂಬಿಕೆಯಿಂದ ನಕ್ಕು ಬಿಡಬಹುದು. ಅಷ್ಟು ಬೇಗನೆ ಕಾಲ ಬದಲಾಗಿದೆ, ಆದ್ಯತೆಗಳೂ ಬದಲಾಗಿವೆ. ಎಸ್ಸೆಸ್ಸೆಲ್ಲಿ ಮಾಡಿದ ಹುಡುಗಿ, ಕೆಲಸವಿಲ್ಲ ಎಂದರೆ ನಗರದಲ್ಲಿ ಕೆಲಸದಲ್ಲಿರುವ ಹುಡುಗ ಮದುವೆಯಾಗಲು ಹಿಂದೇಟು ಹಾಕುತ್ತಾನೆ. ಯಾಕೆಂದರೆ ಆತ ದುಡಿದದ್ದು ಹೊಸ ಮನೆಯ ಲೋನ್ ಕಂತು ಕಟ್ಟಲು ಸರಿಹೋಗುತ್ತದೆ. ಮನೆ ಖರ್ಚು ತೂಗಿಸಲು ಅವಳ ಸಂಬಳವೇ ಆಗಬೇಕು. ಇದು ಇಬ್ಬರ ದುಡಿತದ ಕಾಲ. ಆದರೆ ಪತ್ನಿ ಮನೆಯಲ್ಲಿದ್ದರೆ ಅನುಕೂಲ, ಮನೆಯನ್ನೂ ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ನಂಬುವವರೂ ಬಹಳ ಸಂಖ್ಯೆಯಲ್ಲಿದ್ದಾರೆ. ಗಂಡ-ಹೆಂಡತಿ ಭಾವನಾತ್ಮಕ ಸಂಬಂಧವೂ ಚೆನ್ನಾಗಿರುತ್ತದೆ ಎಂದು ಹೇಳುವವರೂ ಇದ್ದಾರೆ. ಇದರಲ್ಲಿ ಕೊಂಚ ಸತ್ಯವಿದೆ, ಅದಕ್ಕಿಂತ ಹೆಚ್ಚಾಗಿ ಮಿಥ್ ಇದೆ. ಮನೆಯನ್ನು ನೋಡಿಕೊಳ್ಳುವ ಸಂಗಾತಿಗಿಂತ ದುಡಿಯುವ ಸಂಗಾತಿ ಬಗ್ಗೆಯೇ ಪುರುಷರ ಒಲವು ಹೆಚ್ಚಾಗುತ್ತಿದೆಯಂತೆ. ಇದು ಅಧ್ಯಯನಗಳಲ್ಲೂ ವ್ಯಕ್ತವಾಗಿರುವ ಸಂಗತಿ. ಎರಡು ಆದಾಯ ದುಡ್ಡು ಯಾರಿಗೆ ತಾನೆ ಇಷ್ಟವಿಲ್ಲ? ಪ್ರತಿ ವಸ್ತುವಿನ ಬೆಲೆ ದಾವಾನಲದಂತೆ ಏರುತ್ತಿದೆ. ಆದರೆ ಸಂಪಾದನೆ ಪ್ರಗತಿ ಆಮೆವೇಗದಲ್ಲಿದೆ. ಹೀಗಿರುವಾಗ ಪುರುಷರು ಆರ್ಥಿಕವಾಗಿ ಸಬಲಳಾಗಿರುವ ಹೆಣ್ಣಿನ ಕಡೆಗೆ ವಾಲುವುದರಲ್ಲಿ ಆಶ್ಚರ್ಯವೇನಿದೆ? ಬದಲಾಗಿರುವ ಜಮಾನದ ಯುವತಿಯರು ಪುರುಷರಂತೆಯೇ ತಾವು ಸಹಾ ಎಲ್ಲ ಹುದ್ದೆಗಳಲ್ಲಿ ಸಮಾನವಾಗಿ ಕಾರ್ಯನಿರ್ವಹಿಸ ಬಲ್ಲೆವು ಎಂದು ಸಾಬೀತು ಮಾಡಿದ್ದಾರೆ. ಪುರುಷರ ಅಭಿರುಚಿಯೂ ಬದಲಾಗಿದೆ. ಉತ್ತಮ ಹೊಂದಾಣಿಕೆ ದುಡಿಯುವ ಸಂಗಾತಿಗಳ ಮಾನಸಿಕ ಹೊಂದಾಣಿಕೆ ಉಳಿದವರಿಗಿಂತ ಉತ್ತಮವಾಗಿರುತ್ತಂೊದಂತೆ. ಮಾತಾಡಲು ಅವರಿಗೆ ಸಮಾನ ವಿಷಯಗಳಿರುತ್ತವೆ. ಇಬ್ಬರೂ ಸಮಾನ ಅಭಿರುಚಿ ಹೊಂದಿರುತ್ತಾರೆ. ಇಬ್ಬರೂ ಏಕಕಾಲಕ್ಕೆ ದುಡಿಯುತ್ತಿರುತ್ತಾರೆ, ಅಥವಾ ರಜೆ ಪಡೆಯುತ್ತಾರೆ. ಮಹಿಳೆ ಬೌದ್ಧಿಕವಾಗಿ ತನ್ನ ಸಮಾನವಾಗಿದ್ದಾಳೆ ಅಥವಾ ಮೇಲ್ಮಟ್ಟದಲ್ಲಿದ್ದಾಳೆ ಎಂದಾಗ ಪುರುಷ ಅಸೂಯೆ ಪಡುವುದಿಲ್ಲ. ಇದು, ಪರಸ್ಪರರ ಗೌರವದ ಹೆಚ್ಚಳಕ್ಕೆ ಮತ್ತು ಇಬ್ಬರ ಸ್ವಯಂ ಅಭಿವೃದ್ಧಿಗೆ ದಾರಿಯಾಗುತ್ತದೆ. ಸುರಕ್ಷಿತ ಭಾವ ಇಂದು ಪ್ರತಿಯೊಬ್ಬರಲ್ಲೂ ಅಭದ್ರತೆಯಿದೆ. ಕೆಲಸ ಕಳೆದುಕೊಂಡರೇನುಗತಿ ಎಂಬ ಭಾವನೆಯದು. ಆದರೆ ಒಬ್ಬರು ಕೆಲಸ ಕಳೆದುಕೊಂಡರೆ ಇನ್ನೊಬ್ಬರು ಆಧಾರವಾಗಿರುತ್ತಾರೆ ಎಂಬ ಸುರಕ್ಷತಾ ಭಾವ ಇಂಥ ಫ್ಯಾಮಿಲಿಗಳಲ್ಲಿರುತ್ತದೆ. ಆರ್ಥಿಕ ಭದ್ರತೆಯೂ ಅಲ್ಲಿರುತ್ತದೆ. ಅವರು ತಮಗಾಗಿ ಮನೆ, ಕಾರು ಮತ್ತು ಉತ್ತಮ ಜೀವನಶೈಲಿಯ ಕನಸುಗಳನ್ನು ಕಾಣಬಹುದು. ಪುರುಷ ಮತ್ತು ಮಹಿಳೆ ಇಬ್ಬರೂ, ಮನೆಯ ದಿನಚರಿಗಳನ್ನು ಹಾಗೂ ವ್ಯವಹಾರಗಳನ್ನು ಸುಲಭವಾಗಿ ನಿಭಾಯಿಸುತ್ತಾರೆ. ಪರಸ್ಪರರಿಗೆ ತಮ್ಮ ಉದ್ಯೋಗದ ಅರಿವಿರುವ ಕಾರಣ, ಕೌಟುಂಬಿಕ ಕೆಲಸ ಕಾರ್ಯಗಳಲ್ಲಿ ಅಗತ್ಯ ಬಿದ್ದಾಗ ಸಣ್ಣಪುಟ್ಟ ರಾಜಿ ಸಮಸ್ಯೆಯಾಗುವುದಿಲ್ಲ. ಬೌದ್ಧಿಕವಾಗಿ ಮತ್ತು ಆರ್ಥಿಕವಾಗಿ ಗಟ್ಟಿಯಾಗಿರುವ ಹೆಣ್ಣು ಕೌಟುಂಬಿಕ ವ್ಯವಹಾರಗಳ ನಿರ್ವಹಣೆಯಲ್ಲೂ ಗಟ್ಟಿಗಿತ್ತಿ ಆಗಿರುತ್ತಾಳೆ. ವೃತ್ತಿಪರ ಮಹಿಳೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾಳೆ. ಬುದ್ಧಿವಂತ ಹಾಗೂ ಚತುರ ಮಂತ್ರಿಯಂತೆ ಆಕೆ ಪತಿಗೆ ನೆರವಾಗಬಲ್ಲಳು. ಸಮಯ ಪತಿ ಮತ್ತು ಪತ್ನಿ ಇಬ್ಬರು ದುಡಿಯುತ್ತಿದ್ದರೆ ವಿಭಿನ್ನ ಪಾಳಿಗಳಲ್ಲಿ ಕೆಲಸ ನಿರ್ವಹಿಸಬೇಕಿರುತ್ತದೆ. ಇಂತಹ ವೇಳೆ ಕೂಡಿ ಕಳೆಯಲು ಸಿಕ್ಕ ಕೆಲವೇ ಸಮಯದಲ್ಲಿ ಪರಸ್ಪರರು ಅತ್ಯಂತ ಪ್ರೀತಿಪೂರ್ವಕವಾಗಿ, ಅರ್ಥಪೂರ್ಣವಾಗಿ ಮತ್ತು ಉಪಯೋಗಕಾರಿಯಾಗಿ ಕಳೆಯಲು ಇಚ್ಛಿಸುತ್ತಾರೆ. ಪರಸ್ಪರರ ನಡುವಿನ ಪ್ರೀತಿ ಮತ್ತು ಆತ್ಮೀಯತೆಯ ಮೌಲ್ಯ ಹೆಚ್ಚಾಗುತ್ತಂದೆ. ಈ ಗಳಿಗೆಗಳು ನಿಜಕ್ಕೂ ಅವರ ಪಾಲಿಗೆ ಅಮೂಲ್ಯವಾಗುತ್ತವೆ. ಆರ್ಥಿಕ ಭದ್ರತೆ ಮಾನಸಿಕ ನೆಮ್ಮದಿಗೆ ದಾರಿ ಮಾಡುತ್ತದೆ. ಮುಂದಿನ ಭವಿಷ್ಯಕ್ಕಾಗಿ ರಿಸ್ಕ್ ತೆಗೆದುಕೊಳ್ಳಲು ಪ್ರೇರೇಪಣೆ ನೀಡುತ್ತದೆ. ಸೋ, ನಿಮಗೇನು ಸ್ವಾಮಿ, ಎರಡು ಇಂಜಿನ್ ಗಾಡಿ ಎಂದೆಲ್ಲ ಮಾತು ಬಂದರೆ ತಲೆಕೆಡಿಸಿಕೊಳ್ಳಬೇಡಿ. ಮುಂದೆ ಹೋಗ್ತಾ ಇರಿ. ಯಾರೇನಂದರು?