ಆ ತುಟಿಗಳು ಬರಿಯ ಚರ್ಮದ ತೀಟೆಗಾಗಿ ಗಂಡನ್ನು ಸಮೀಪಿಸುವ ಹೆಣ್ಣು, ಹೆಣ್ಣಿನ ಬಳಿ ಸುಳಿದಾಡುವ ಗಂಡು... ಗಂಡು ಹೆಣ್ಣಿನ ಸಮಾಗಮಕ್ಕೆ ಒಂದು ಘನತೆ ಇರಬೇಕು. ಬರಿಯ ಚರ್ಮದ ತೀಟೆಗಾಗಿ ಗಂಡನ್ನು ಸಮೀಪಿಸುವ ಹೆಣ್ಣು, ಹೆಣ್ಣಿನ ಬಳಿ ಸುಳಿದಾಡುವ ಗಂಡು ಉತ್ತಮರಲ್ಲ. ಮಿಲನದ ಮಂಚದಲ್ಲಿ ಕೇವಲ ಕಾಮದ ಒಗರು ಇರಬಾರದು. ಅಲ್ಲಿ ಪ್ರೇಮದ ನವುರೂ ಇರಬೇಕು. ಆಗಷ್ಟೇ ಅದು ಶ್ರೇಷ್ಠವೆನಿಸುತ್ತದೆ. ಹಾಗಿದ್ದರೆ ವೇಶ್ಯೆಯರ ಗತಿ? ಇದು ಜಗತ್ತಿನ ಅತ್ಯಂತ ಪ್ರಾಚೀನ ವೃತ್ತಿ. ಸಂಸ್ಕೃತ ಕಾವ್ಯ ನಾಟಕಗಳಲ್ಲಿ ವೇಶ್ಯಾವಾಟಿಕೆಗಳ ವರ್ಣನೆ ಧಾರಾಳ. ಕವಿಗಳೂ ಸಾಕಷ್ಟು ರಸಿಕರೇ ಇದ್ದುದರಿಂದ, ಈ ಭಾಗಗಳನ್ನು ಮನೋಹರ ವರ್ಣನೆಗಳಿಗೆ ಮೀಸಲಿಟ್ಟಿದ್ದಾರೆ. ಅಲ್ಲಿ ಗೌರವಾನ್ವಿತ ವೇಶ್ಯೆಯರೂ ಸಾಕಷ್ಟು ಮಂದಿ ಇದ್ದರು. ಆದರೆ ಕೆಲ ಕವಿಗಳಿಗಳಿಗೆ ವೇಶ್ಯೆಯರನ್ನು ಕಂಡರೆ ಆಗದು. ಅಂಥವರು ಆ ಬಗ್ಗೆ ಜಿಗುಪ್ಸೆ ಹುಟ್ಟಿಸುವ ಚಿತ್ರಣ ಕೊಡುತ್ತಾರೆ. ವೇಶ್ಯೆಯರ ತುಟಿಗಳು ಮೇಲ್ನೋಟಕ್ಕೆ ಚೆಲುವೆಯಾಗಿಯೂ ಎಳೆಚಿಗುರಿನಂತ ಕೋಮಲವಾಗಿಯೂ ತೋರುತ್ತದೆ. ಆದರೆ ಅವು ಗೂಢಚರರು, ಸೈನಿಕರು, ಕಳ್ಳರು, ಚೇಟಕರು(ಪಿಂಪ್‌ಗಳು), ವಿಟಪುರುಷರು, ಸೋಗುಗಾರ ನಟರು ಮುಂತಾದವರು ಉಗುಳುವ ಪಾತ್ರೆಗಳಲ್ಲವೇ? ಅಂಥವುಗಳನ್ನು ಕುಲೀನನಾದ ಪುರುಷನು ಚುಂಬಿಸಲುಂಟೇ ವೇಶ್ಯೆಯರ ಬಗ್ಗೆ ಜಿಗುಪ್ಸೆ ಹುಟ್ಟಿಸಲೆಂದೇ ಕವಿ ಇದನ್ನು ಬರೆದಂತಿದೆ. ಆದರೆ ವಿಟರು ಇರುವವರೆಗೆ ಜಾರಿಣಿಯರೂ ಇರುತ್ತಾರೆ ಎಂಬುದನ್ನು ಮರೆಯುವಂತಿಲ್ಲ.