ಇಂಟರ್ನೆಟ್ ಮದುವೆಯ ಪ್ರಾಬ್ಲಂ ಏನು? ವರ್ಷಗಟ್ಟಲೆ ಮುಖಾಮುಖಿಯಾಗಿ ಪ್ರೀತಿಸಿ ಅಥವಾ ಮನೆಯವರೆ.. ವರ್ಷಗಟ್ಟಲೆ ಮುಖಾಮುಖಿಯಾಗಿ ಪ್ರೀತಿಸಿ ಅಥವಾ ಮನೆಯವರೆಲ್ಲ ನೋಡಿ ಮಾಡಿದ ಮದುವೆಗಳೇ ಇಂದು ಹೆಚ್ಚು ಕಾಲ ಬಾಳಿಕೆ ಬರುತ್ತಿಲ್ಲ. ಅಂಥದ್ದರಲ್ಲಿ, ಖುದ್ದಾಗಿ ಒಮ್ಮೆಯೂ ಭೇಟಿಯಾಗದೆ ಇಂಟರ್ನೆಟ್‌ನಲ್ಲೇ ಮಾತುಕತೆ ನಡೆಸಿ ಆಗುವ ಮದುವೆಗಳು ಬಾಳಿಕೆ ಬರುತ್ತವೆಯೇ? ಇದು ಆನ್‌ಲೈನ್ ಮದುವೆಗಳ ಬಗ್ಗೆ ಇರುವ ಪ್ರಮುಖ ಆತಂಕ. ವಾಸ್ತವವಾಗಿ ಮದುವೆಯೊಂದು ಯಶಸ್ವಿಯಾಗಲು ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಮುಖ್ಯ. ಅರೇಂಜ್ಡ್ ಮದುವೆಯಾದರೂ, ಲವ್ ಮ್ಯಾರೇಜಾದರೂ, ಇಂಟರ್ನೆಟ್‌ನಲ್ಲಿ ಮದುವೆಯಾದರೂ ಅದನ್ನು ರಕ್ಷಿಸುವ ಮೂಲ ಸೂತ್ರ ಒಂದೇ: ಅದು ಬೇಷರತ್ ಪ್ರೀತಿ ಹಾಗೂ ಹೊಂದಾಣಿಕೆ. ಇವೆರಡು ಇಲ್ಲದಿದ್ದರೆ ಯಾವ ಮದುವೆಯೂ ಉಳಿಯುವುದಿಲ್ಲ. ಸರ್ಕಾರ ಎಷ್ಟು ಫ್ಯಾಮಿಲಿ ಕೋರ್ಟ್ ಆರಂಭಿಸಿದರೂಅವುಗಳಿಗೆ ಇಂದು ಡೈವೊರ್ಸ್ ಅರ್ಜಿಗಳನ್ನು ಇತ್ಯರ್ಥಪಡಿಸಲು ಟೈಂ ಸಾಲುತ್ತಿಲ್ಲ. ಅಂದರೆ ವಿಚ್ಛೇದನ ಪ್ರಕರಣಗಳು ಎಷ್ಟು ಹೆಚ್ಚುತ್ತಿವೆ ಎಂಬುದನ್ನು ಊಹಿಸಿ. ಆನ್‌ಲೈನ್ ಮದುವೆಯ ಬಹುದೊಡ್ಡ ಸಮಸ್ಯೆ ಇದೇ. ಹೀಗೆ ಮದುವೆಯಾದವರು ಒಂದೆರಡು ವರ್ಷದಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚು ಎಂದು ಕೆಲ ಅಧ್ಯಯನಗಳು ಹೇಳುತ್ತವೆ. ಇಲ್ಲಿ ಗಂಡು-ಹೆಣ್ಣು ಇಂಟರ್ನೆಟ್‌ನಲ್ಲಿ ಎಷ್ಟೇ ಮಾತನಾಡಿದ್ದರೂ ಅಥವಾ ವರ್ಷಗಟ್ಟಲೆ ವೆಬ್‌ಚಾಟ್ ನಡೆಸಿದ್ದರೂ ಅವರ ನಡುವೆ ಪರಸ್ಪರ ಭೇಟಿಯಲ್ಲಿ ಏರ್ಪಡುವ ಸಾಮೀಪ್ಯ ಸಾಧ್ಯವಾಗಿರುವುದಿಲ್ಲ. ಹುಡುಗ, ಹುಡುಗಿ ಒಬ್ಬರನ್ನೊಬ್ಬರು ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿದರೆ ಮಾತ್ರ ಅವರ ನಡುವೆ ವಿಶೇಷವಾದ ಸಂವಹನವೊಂದು ನಡೆಯುತ್ತದೆ. ಹುಡುಗನ ಆಂಗಿಕ ಚಲನವಲನಗಳನ್ನು ಗಮನಿಸಿ ಹುಡುಗಿಅವನ ಬಗ್ಗೆ ಸಾಕಷ್ಟು ತಿಳಿದುಕೊಳ್ಳುತ್ತಾಳೆ. ಅದೇ ರೀತಿ ಹುಡುಗನೂ ಅವಳ ಉಪಸ್ಥಿತಿಯಲ್ಲಿ ಅವಳ ಬಗ್ಗೆ ಬಹಳ ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತಾನೆ. ಮಾತಿನಿಂದ ಸಾಧ್ಯವಾಗದ ವಿಶಿಷ್ಟ 'ಅಂಡರ್‌ಸ್ಟ್ಯಾಂಡಿಂಗ್‌' ಇದು. ಆನ್‌ಲೈನ್ ಮದುವೆಗಳಲ್ಲಿ ಇದು ಸಾಧ್ಯವಿಲ್ಲ. ಮದುವೆಯೇ ದೊಡ್ಡ ಪ್ರಾಬ್ಲಂ, ಹಾಗಿರುವಾಗ ಇಂಟರ್ನೆಟ್ ಮದುವೆಯಲ್ಲಿರುವ ಪ್ರಾಬ್ಲಂ ಏನು ಎಂದು ಕೇಳುವುದು ಹಾಸ್ಯಾಸ್ಪದ ಎಂದು ಅನೇಕರು ತಮಾಷೆ ಮಾಡಬಹುದು. ಮದುವೆಯ ಬಗ್ಗೆ ಎಷ್ಟೇ ಜೋಕುಗಳಿದ್ದರೂ ಹಾಗೊಂದು ವ್ಯವಸ್ಥೆ ನಮ್ಮ ಸಮಾಜದಲ್ಲಿ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ ಎಂಬುದಂತೂ ಸುಳ್ಳಲ್ಲ. ಡೈವೊರ್ಸ್‌ನಲ್ಲಿ ಅಂತ್ಯವಾಗುವ ಮದುವೆಗಳ ಪ್ರಮಾಣ ಶೇ.1ಕ್ಕಿಂತ ಕಡಿಮೆ. ಹಾಗಾಗಿ ಮದುವೆಗೆ ಅದರದ್ದೇ ಆದ ಪಾವಿತ್ರ್ಯತೆ ಇದ್ದೇ ಇದೆ. ಅದನ್ನು ತಂತ್ರಜ್ಞಾನವೆಂಬ ಯಾಂತ್ರಿಕ ಕಲ್ಪನೆಗೆ ಇಳಿಸಲು ಸಾಧ್ಯವಿಲ್ಲ. ವರ್ಚುವಲ್ ಅಥವಾ ಪ್ರಾಕ್ಸಿ ಮದುವೆಗಳುಸೋಲುವುದು ಇಲ್ಲೇ. ತೀರಾ ಅನಿವಾರ್ಯ ಎಂಬ ಪರಿಸ್ಥಿತಿಯಲ್ಲಿ, ಕಾನೂನಿನ ಮಾನ್ಯತೆ ಸಿಕ್ಕರೆ, ಆನ್‌ಲೈನ್‌ನಲ್ಲಿ ಮದುವೆಯಾಗುವುದು ತಪ್ಪಲ್ಲ. ಆದರೆ ಕೇವಲ ಮೋಜಿಗಾಗಿ ಅಥವಾ ಹಣ ಉಳಿಸಲು ಹೀಗೆ ಮದುವೆಯಾದರೆ ಮುಂದೆ ಗಂಡ ಹೆಂಡತಿ ಇಬ್ಬರೂ ಜೀವನಪೂರ್ತಿ ದುಃಖ ಪಡುವ ಸಂದರ್ಭಗಳು ಬರಬಹುದು. ಕಾಲ ಬಹಳ ಮುಂದುವರೆದಿದೆ, ಒಬ್ಬರನ್ನೇ ಮದುವೆಯಾಗಿ ಜೀವನಪರ್ಯಂತ ಅವರಿಗೆ ನಿಷ್ಠರಾಗಿರುವ ಅಗತ್ಯವಿಲ್ಲ ಎಂದು ಸೆಲೆಬ್ರಿಟಿಗಳಷ್ಟೇ ಹೇಳಲು ಸಾಧ್ಯ. ಜನಸಾಮಾನ್ಯರಿಗೆ ಇವತ್ತಿಗೂ ಮದುವೆಯೆಂದರೆ ಅದು ಬದುಕಿನಲ್ಲಿ ಒಮ್ಮೆ ಮಾತ್ರ ನಡೆಯುವಂಥದ್ದು. ಆ ಬಂಧವನ್ನು ಪವಿತ್ರವಾಗಿಯೇ ಉಳಿಸಿಕೊಳ್ಳಬೇಕಲ್ಲವೇ. -ರೇಖಾ ಭಟ್ (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.