ಆ ಮುಖಗಳು! ಆ ಒಂದು ಫೋಟೋ... ನಮಗೆ ಗೊತ್ತಿರದ ನಮ್ಮ ಮುಖವನ್ನೇ ನಮ್ಮೆದುರು ತಂದಿಡುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ರಾತ್ರೋರಾತ್ರಿ ಹೀರೋ ಮಾಡುತ್ತದೆ. ಅಲ್ಲದೆ ಅದೊಂದು ನೆನಪು. ಸಾವಿರಾರು ಪದಗಳನ್ನು ಒಂದೇ ಬಾರಿಗೆ ಹೇಳುವ ಮಾಯಾಲೋಕ. ಅದು ಜಗತ್ತಿನ ಗಮನ ಸೆಳೆಯುವ ಪವರ್ ಪೆಟ್ಟಿಗೆ. ಹತ್ತಾರು ತಿರುವುಗಳಿಗೆ ನಾಂದಿಯಾಗಬಲ್ಲ ಬ್ರಹ್ಮ. ನೀವು ಆಸ್ಕರ್ ಪ್ರಶಸ್ತಿ ಪುರಸ್ಕೃತ ದಿ.ಆರ್ಟಿಸ್ಟ್ ಚಿತ್ರ ನೋಡಿದ್ದೀರಾ? ಆ ಚಿತ್ರದ ನಾಯಕ ದೊಡ್ಡ ಸ್ಟಾರ್. ಈತ ಎಲ್ಲೇ ಹೋದರೂ ಜನ ಮುತ್ತಿಕೊಳ್ಳುತ್ತಾರೆ. ಹಾಗೆ ಅಭಿಮಾನದಿಂದ ನೋಡಲು ಬರುವ ಸಾಮಾನ್ಯ ಹುಡುಗಿಯೊಬ್ಬಳು ಆಯ ತಪ್ಪಿ ಬೀಳುವಾಗ ಆ ಸ್ಟಾರ್ ನಟನ ಕೆನ್ನೆಗೆ ಮುತ್ತಿಡುತ್ತಾಳೆ. ಮರು ದಿನ ಸ್ಟಾರ್ ನಟನ ಕೆನ್ನೆಗೆ ಮುತ್ತಿಟ್ಟ ಸಾಮಾನ್ಯ ಹುಡುಗಿಯ ಫೋಟೋ ಎಲ್ಲ ಪತ್ರಿಕೆಗಳ ಮುಖಪುಟ ಅಲಂಕರಿಸುತ್ತದೆ. ಆ ಒಂದು ಫೋಟೋ ಮುಂದೆ ಆಕೆಯನ್ನು ಚಿತ್ರ ಜಗತ್ತಿನತ್ತ ಮುಖ ಮಾಡಿಸುತ್ತದೆ. ಹೀಗೆ ಇಡೀ ಕಥೆಗೆ ತಿರುವು ಕೊಡುವುದು ಒಂದು ಫೋಟೋ. ತೆಲುಗು ಮತ್ತು ತಮಿಳಿನಲ್ಲಿ ಬಂದ ರಂಗಂ ಚಿತ್ರದ ಕಥೆ ಕೂಡ ಒಬ್ಬ ಛಾಯಾಗ್ರಹಕನ ಫೋಟೋಗಳಿಂದಲೇ ಹೊಸ ಹೊಸ ತಿರುವು ಪಡೆದುಕೊಳ್ಳುತ್ತದೆ. ಸಾಮಾನ್ಯ ಸಂಗತಿಗಳು ಅಸಾಮಾನ್ಯವಾಗಿ ಆಡಳಿತ ಪಕ್ಷದ ಸೋಲಿಗೆ ಕಾರಣವಾಗುತ್ತವೆ. ಇದು ರೀಲ್ ಜಗತ್ತಿನೊಳಗಿನ ಫೋಟೋ ಸ್ಟೋರಿಯಾದರೆ, ರಿಯಲ್ ಜಗತ್ತಿನಲ್ಲಿ ಈ ಫೋಟೋಗಳೂ ಸಹ ಇಂಥ ಅಚ್ಚರಿಗಳನ್ನು ಮೂಡಿಸಿವೆ. ಸಾಮಾನ್ಯ ಜನರನ್ನು ಹೀರೋಗಳನ್ನಾಗಿಸಿದ ಉದಾಹರಣೆಗಳು ನಮ್ಮೆದರು ಸಾಕಷ್ಟು ಇವೆ. ವೈದ್ಯಕೀಯ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ವಿರೋಧಿಸಿ ದೇಶಾದ್ಯಂತ ದೊಡ್ಡ ಅಂದೋಲನವೇ ನಡೆಯಿತು. ಆ ಹೋರಾಟದ ದಿನಗಳನ್ನು ನೆನಪಿಸಿಕೊಂಡರೆ ನಿಮಗೆ ಒಬ್ಬ ಹುಡುಗಿಯ ಮುಖ ರಪ್ ಅಂತ ಕಣ್ಣಮುಂದೆ ಬರುತ್ತದೆ. ರಭಸವಾಗಿ ಎರಚುವ ನೀರಿಗೆ ಎದೆಯೊಡ್ಡಿರುವ ಆ ಹುಡುಗಿ ಯಾರು, ಅವಳ ಹೆಸರೇನು, ಊರು ಯಾವುದು? ಯಾರಿಗೂ ಗೊತ್ತಿಲ್ಲ. ಆದರೆ, ಆ ಮುಷ್ಕರ ಅಂದಾಕ್ಷಣ ಈಕೆಯ ಮುಖ ನೆನಪಾಗುತ್ತದೆ. ಅದಕ್ಕೆ ಕಾರಣ ಆ ಫೋಟೋ. ಒಂದು ಫೋಟೋ ಆ ಹುಡುಗಿಯನ್ನು ದೇಶದ ಜನರ ಕಣ್ಣಲ್ಲಿ ಕಾಯಂ ಆಗಿ ನಿಲ್ಲಿಸಿತು. ಹಾಗೇ ಗುಜರಾತಿನ ಗೋಧ್ರಾ ನಂತರದ ಗಲಭೆಯಲ್ಲಿ ಅಳುತ್ತ ಕೈ ಮುಗಿಯುತ್ತಿರುವ ವ್ಯಕ್ತಿ ಹಾಗೂ ಕೈಯಲ್ಲಿ ಕತ್ತಿ ಹಿಡಿದು ಅಬ್ಬರಿಸುತ್ತಿರುವಾತನ ಮುಖಗಳನ್ನು ಯಾರು ಮರೆಯಲು ಸಾಧ್ಯ? ಗುಜರಾತ್ ಹತ್ಯಾಕಾಂಡ ನೆನಪಾದಾಗಲೆಲ್ಲ ಈ ಇಬ್ಬರು ನಮ್ಮೆದುರು ನಿಲುತ್ತಾರೆ. ಈ ಅಪರಿಚಿತರನ್ನು ದೇಶಕ್ಕೆ ಪರಿಚಯಿಸಿದ್ದು ಒಂದು ಫೋಟೋ. ಇನ್ನು ಅತ್ಯಾಚಾರಿಗಳ ವಿರುದ್ಧ ಶುರುವಾದ ಆಂದೋಲನದಲ್ಲಿ ಒಂದು ಕೈಯಲ್ಲಿ ಕಟ್ಟಿಗೆ ಹಿಡಿದು ಪೊಲೀಸರ ಮುಂದೆ ನಿಂತ ಹುಡುಗಿ, ದೆಹಲಿಯ ಇಂಡಿಯಾ ಗೇಟ್ ಮುಂದೆ ಫೈರ್ ಇಂಜಿನ್ ನೀರಿಗೆ ಎದುರಾಗಿ ನಿಂತು ಘೋಷಣೆ ಕೂಗುತ್ತಿರುವ ಮಹಿಳೆ, ಚೀನಾ ಸರ್ಕಾರದ ವಿರುದ್ಧ ಟಿಬೆಟ್ ಜನತೆ ದಂಗೆ ಎದ್ದಾಗ ಯುವಕನೊಬ್ಬ ಮೈಗೆ ಬೆಂಕಿ ಹಚ್ಚಿಕೊಂಡು ಭಸ್ಮವಾದ ಕ್ಷಣ.... ಈ ಎಲ್ಲವೂ ನಮ್ಮ ನೆನಪಿನಲ್ಲಿ ಶಾಶ್ವತವಾಗಿರುವುದು ಆಯಾ ಪೋಟೋಗಳಿಂದ. ಇತ್ತೀಚಿಗೆ ಅತ್ಯಾಚಾರ ಪ್ರಕರಣಗಳ ಖಂಡಿಸಿ ಬೆಂಗಳೂರಿನ ವಿಗ್ಗ್ಯೋರ್ ಶಾಲೆಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೋಷಾವೇಶದಿಂದ ಚಿಮ್ಮುತ್ತಿರುವ ಈ ಹುಡುಗಿ ಸಾವಿರಾರು ಮಂದಿಯ ಆಕ್ರೋಶಕ್ಕೆ ದನಿಯಾದವಳು. ಆಕೆಯ ಆಕ್ರೋಶದ ನೋಟಕ್ಕೆ ಕ್ಯಾಮೆರಾ ಕೂಡ ಹೆದರಿರಬೇಕು! ತಿಯಾನಾನ್ಮೆನ್ ಚೌಕದಲ್ಲಿ ವಿದ್ಯಾರ್ಥಿಗಳ ಮುಷ್ಕರವನ್ನು ಹತ್ತಿಕ್ಕಲು ಚೀನಾ ಸರ್ಕಾರ ಟ್ಯಾಂಕ್ಗಳನ್ನು ಬಳಸಿತು. ಆ ಟ್ಯಾಂಕ್ಗಳ ಮುಂದೆ ಎದೆಯೊಡ್ಡಿ ನಿಂತ ಒಬ್ಬನೇ ಒಬ್ಬ ವಿದ್ಯಾರ್ಥಿಯ ಫೋಟೋ ಇಂದಿಗೂ ಸಿಗುತ್ತದೆ. ಅವನ ಗತಿಯೇನಾಯಿತು? ಯಾರಿಗೂ ಗೊತ್ತಿಲ್ಲ. ನ್ಯಾಷನಲ್ ಜಿಯಾಗ್ರಫಿ ಪತ್ರಿಕೆಯ ಕ್ಯಾಮೆರಾಗೆ ಸೆರೆ ಸಿಕ್ಕ ಅಫ್ಘಾನ್ ಹುಡುಗಿಯ ಬೆರಗಿನ ನೋಟವನ್ನು ನೋಡುವವರು ತೀರಾ ಕಡಿಮೆ. ಅಫ್ಘಾನಿಸ್ತಾನದ ರುದ್ರಮನೋಹರ ಸ್ಥಿತಿಗೆ ಪ್ರತಿಮೆಯಂತಿತ್ತು ಆಕೆಯ ಮುಖ. ಜಗತ್ತಿನ್ನು ಬೆಚ್ಚಿ ಬೀಳಿಸುವ ಸಂಗತಿಗಳೂ ಫೋಟೋದಲ್ಲಿ ಬಂದಿಯಾಗಿವೆ. ಸೋಮಾಲಿಯದ ಮೂಳೆಗಳನ್ನೇ ತುಂಬಿಕೊಂಡಿರುವ ಕಡು ಕಪ್ಪಿನ ಪುಟ್ಟ ಕಂದನ ದೇಹ, ಹಸಿವಿನಿಂದ ಕಾಯುತ್ತಿರುವ ಹದ್ದು ಕಣ್ಣಮುಂದೆ ಬರುತ್ತವೆ. ಈಗಲೂ ನೆಟ್ನಲ್ಲಿ ಸೋಮಾಲಿಯಾ ಅಂತ ಟೈಪ್ ಮಾಡಿದರೆ ಇದೇ ಫೋಟೋ ಮೊದಲ ಸಾಲಿನಲ್ಲಿ ಕಾಣಿಸುತ್ತದೆ. ಹಿರೋಶಿಮಾ ಹಾಗೂ ನಾಗಸಾಕಿ ಮೇಲೆ ಬಾಂಬ್ ದಾಳಿಯಾದಾಗ ಅಳುತ್ತ ನಡು ಬೀದಿಯಲ್ಲಿ ಬೆತ್ತಲಾಗಿ ಓಡುತ್ತಿರುವ ಬಾಲಕಿಯ ಮುಖ ಕೂಡ ಇಂಥದೇ. - ಆರ್.ಕೇಶವಮೂರ್ತಿ