ಈ ಯಶೋದೆ ಸ್ವಾರ್ಥಿಯಲ್ಲ... ಏನೇನೋ ಕಾರಣಗಳನ್ನು ಹೇಳಿಕೊಂಡು ಗೆಳತಿಯರು ನಮ್ಮ ಮನೆಗೆ ಬರುತ್ತಿದ್ದರು. ಬಂದವರು ಕೃಷ್ಣನನ್ನು ಎತ್ತಿ ಮುದ್ದಾಡುವ ಸಂಭ್ರಮದಲ್ಲಿ, ಬಂದ ಕಾರಣವನ್ನೇ ಮರೆಯುತ್ತಿದ್ದರು. ಕಪ್ಪೆಂದರೆ ಕಪ್ಪು, ನೀಲವೆಂದರೆ ನೀಲಿ, ಒಟ್ಟಿನಲ್ಲಿ ಮೋಹಕ ಬಣ್ಣ. ಗುಂಗುರು ಕೂದಲು. ಜುಟ್ಟಿಗೊಂದು ನವಿಲುಗರಿ ಸಿಕ್ಕಿಸಿಕೊಂಡು, ಕೈಯ್ಯಲ್ಲೊಂದು ಕೊಳಲು ಹಿಡಿದು ಹೊರಟನೆಂದರೆ ಗೋಕುಲದ ದನಗಳ ಗುಂಪು, ಗೊಲ್ಲ ಹುಡುಗರ ಗುಂಪು ಅವನ ಹಿಂದೆ ಹಿಂದೆ. ಆ ಮೋಡಿಗೆ ಒಳಗಾಗದವರಾರು? ಅಂದು ಶ್ರಾವಣ ಮಾಸ. ಕೃಷ್ಣ ಪಕ್ಷ, ಅಷ್ಟಮಿ. ಧೋ ಎಂದು ಸುರಿಯುವ ಮಳೆ. ಮಿಂಚು-ಗುಡುಗುಗಳ ಸಮ್ಮೇಳನ. ಎಂದಿಲ್ಲದ ಮಳೆ ಇಂದೇಕೆ ಈ ಪರಿ ಸುರಿಯುತ್ತಿದೆ, ಪ್ರಪಂಚದ ಕೊಳೆಯನ್ನೆಲ್ಲ ತೊಳೆದುಬಿಡುವ ಹಾಗೆ? ನನಗೋ ಹೆರಿಗೆಯ ನೋವು. ಸೂಲಗಿತ್ತಿ ಹೆಣ್ಣು ಮಗು ಎಂದ ನೆನಪು. ಕತ್ತಲೆಯ ರಾತ್ರಿ... ಮಗುವಿನ ಮುಖವನ್ನು ನೋಡಿದೆನೋ ಇಲ್ಲವೋ.. ಅರೆ ನಿದ್ದೆ... ಅರೆ ಎಚ್ಚರ! ಈ ಪ್ರಪಂಚದ ಕಷ್ಟವನ್ನು ದೂರ ಮಾಡುವ ಮಗುವನ್ನು ಕೊಡು ತಂದೆ ಎಂಬುದೊಂದೇ ಭಗವಂತನಲ್ಲಿ ನಾವು ಅನುದಿನವೂ ಮಾಡಿದ ಪ್ರಾರ್ಥನೆ. ಬೆಳಗಿನ ಜಾವವಿರಬೇಕು. ಸ್ವಲ್ಪ ಸುಧಾರಿಸಿಕೊಂಡ ಬಳಿಕ ಪಕ್ಕದಲ್ಲಿ ನೋಡಿದರೆ ಆಕರ್ಷಕ ಗಂಡು ಮಗು ಕಣ್ಮುಚ್ಚಿ ನಿದ್ರಿಸಿತ್ತು! ನಿದ್ದೆಯಲ್ಲೆ ನಗುತ್ತಿತ್ತು. ಆಹಾ. ಎಂಥ ಆಕರ್ಷಕ ನಗುವದು! ಕೃಷ್ಣ ಪಕ್ಷದಲ್ಲಿ ಹುಟ್ಟಿದವನಲ್ಲವೇ? ನನ್ನ ಪುಟ್ಟನಿಗೆ ಕೃಷ್ಣನೆಂದೇ ಹೆರಸಿಟ್ಟೆವು. ದಿನದಿನಕ್ಕೆ ಅವನ ಆಕರ್ಷಣೆ ಬೆಳೆಯುತ್ತಲೇ ಹೋಯಿತು. ಏನೇನೋ ಕಾರಣಗಳನ್ನು ಹೇಳಿಕೊಂಡು ಗೆಳತಿಯರು ನಮ್ಮ ಮನೆಗೆ ಬರುತ್ತಿದ್ದರು. ಬಂದವರು ಕೃಷ್ಣನನ್ನು ಎತ್ತಿ ಮುದ್ದಾಡುವ ಸಂಭ್ರಮದಲ್ಲಿ, ಬಂದ ಕಾರಣವನ್ನೇ ಮರೆಯುತ್ತಿದ್ದರು. ನೀವು ಕಾರಣ ಹೇಳುವ ಅಗತ್ಯವಿಲ್ಲ. ಕೃಷ್ಣನನ್ನು ನೋಡುವುದಕ್ಕೆಂದೇ ನಮ್ಮ ಮನೆಗೆ ಬರಬಹುದು ಎಂದು ನಾನು ಹೇಳಿದ ಮೇಲೆ ಪರಿಸ್ಥಿತಿ ಇನ್ನಷ್ಟು ಬದಲಾಗಿ ಹೋಯಿತು. ನನ್ನನ್ನು ಮಾತನಾಡಿಸುವುದಕ್ಕೆ ಬರುವವರ ಸಂಖ್ಯೆ ಇಳಿಮುಖವಾಗಿ ಹೋಯಿತು. ಇರಲಿ ಇರಲಿ... ಮುಂದೊಮ್ಮೆ ವಿಶ್ವ ಪ್ರೇಮಿಯಾಗಲಿರುವ ನನ್ನ ಕೃಷ್ಣನಿಗೆ ಈ ಜಗದ-ಜನರ ಪ್ರೀತಿ ಸಿಕ್ಕುವಷ್ಟೂ ಸಿಕ್ಕಬಿಡಲಿ! ಪ್ರೀತಿ ದಕ್ಕದ ಮನುಷ್ಯ ಪ್ರಪಂಚಕ್ಕೆ ಪ್ರೀತಿ ಹಂಚುವುದಕ್ಕೆ ಹೇಗೆ ಸಾಧ್ಯ? ನನ್ನ ಕೃಷ್ಣನ ವಿಚಾರದಲ್ಲಿ ಹಾಗಗಲೇ ಇಲ್ಲ! ನಾನು- ನಂದಗೋಪ ಸರಿಯೇ ಸರಿ, ನನ್ನ ಗೆಳತಿಯರು- ನಂದಗೋಪನ ಗೆಳೆಯರು- ಅವರೆಲ್ಲರ ಮಕ್ಕಳು ಎಲ್ಲರ ಪ್ರೀತಿಯನ್ನು ಅದು ಹೇಗೆ ಸಂಪಾದಿಸಿಬಿಟ್ಟ ಈ ನಮ್ಮ ಪೋರ? ಕೃಷ್ಣ ಬೆಳೆದಂತೆಲ್ಲ ಅವನ ಸ್ನೇಹಕ್ಕೆ ಹಾತೊರೆಯುವವರ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಅವನನ್ನು ವಿರೋಧಿಸುವವರು ಯಾರೂ ಇರಲಿಲ್ಲ ಎಂಬುದು ಸರಿಯಾದ ಮಾತು. ಕೃಷ್ಣನ ಪುಂಡಾಟಿಕೆಗಳೇನು ಸಾಮಾನ್ಯವಾದುವುಗಳೇ? ಅಬ್ಬ, ಅವನೊಬ್ಬ ಪ್ರಚಂಡ. ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲ ಕೆಡಿಸಿತು ಎಂಬಂತೆ ಗೆಳೆಯರ ಗುಂಪಿನ ಲೂಟಿಗಳಿಗೆ ಇವನದೇ ಸಾರಥ್ಯ. ಬೆಣ್ಣೆ ಕದಿಯುವುದೆಂದರೆ ಎಲ್ಲಿಲ್ಲದ ಪ್ರೀತಿ. ಕದ್ದು ತಾನು ಮಾತ್ರ ತಿನ್ನುತ್ತಿದ್ದನೇ? ಗೆಳೆಯರೆಲ್ಲರಿಗೂ ಹಂಚಿ ತಿನ್ನುತ್ತಿದ್ದ. ಆದರೂ ಕಳ್ಳತನದ ಮುಂದಾಳತ್ವ ವಹಿಸುತ್ತಿದ್ದನಾದ್ದರಿಂದ ಆರೋಪ ಅವನ ಪಾಲಿಗೆ, ದೂರುಗಳೆಲ್ಲ ನನ್ನ ಪಾಲಿಗೆ. ಕಳ್ಳತನವೆಂಬುದು ಅವನ ಮತ್ತು ಅವನ ಗೆಳೆಯರ ಪಾಲಿನ ಮೋಜು. ಕಳ್ಳತನ ಮಾಡದಿದ್ದರೆ ನಿನಗೆ ತಿಂದ ಅನ್ನ ಕರಗುವುದಿಲ್ಲವೇ ಎಂದು ನಾನು ಬೈಯುತ್ತಿದ್ದುದ್ದುಂಟು. ದೂರು ಕೊಟ್ಟವರಿಗೆ ಸಮಾಧಾನವಾಗಲಿ ಎಂದು ಶಿಕ್ಷಿಸುತ್ತಿದ್ದದ್ದೂ ಉಂಟು. ಮನೆಯಲ್ಲಿ ಬೇಕಾದಷ್ಟು ಬೆಣ್ಣೆ ಇರುವಾಗ ಅವರೆಲ್ಲರ ಮನೆಗೆ ಹೋಗಿ ಕದಿಯುವುದ್ಯಾಕೆ ಎಂದು ನಾನು ಬೈಯ್ಯುವಾಗ ಕೃಷ್ಣ ನನ್ನ ಬೈಗುಳವನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಇಷ್ಟೇ ಅಲ್ಲ, ಕೃಷ್ಣನ ಮೇಲೆ ತರೇವಾರಿ ದೂರುಗಳು ಬರುತ್ತಲೇ ಇರುತ್ತವೆ. ಅವನು ನನ್ನ ಜಡೆ ಎಳೆದ ಎಂಬ ದೂರಿಂದ ಹಿಡಿದು ಅವನು ನಮ್ಮ ಸೀರೆ ಕದ್ದ ಎಂಬಲ್ಲಿನವರೆಗೆ! ಸಾಕಪ್ಪ ಸಾಕು... ಅವನನ್ನು ಕಠಿಣ ಶಿಕ್ಷೆಗೊಳಪಡಿಸೋಣವೆಂದರೆ ದೂರು ಕೊಟ್ಟವರಿಂದಲೇ 'ಕೃಷ್ಣನನ್ನು ಬಿಟ್ಟು ಬಿಡಿ. ಅವನು ನಮ್ಮ ಜೊತೆ ಇಲ್ಲದಿದ್ದರೆ ಗೋಕುಲಕ್ಕೆ ಜೀವಕಳೆಯೇ ಇಲ್ಲ... ನಮಗೆ ಆಡುವುದಕ್ಕೆ ಮನಸ್ಸೇ ಬಾರದು' ಎಂಬ ಬೇಡಿಕೆ! ಕೊಟ್ಟ ದೂರು ಇತ್ಯಾರ್ಥವಾಗುವುದರ ಒಳಗೆ-ಕದ್ದು ತಿಂದ ಬೆಣ್ಣೆ ಜೀರ್ಣವಾಗುವುದರ ಒಳಗೆ ಬೃಂದಾವನದಿಂದ ಕೇಳಿ ಬರುತ್ತದೆ ಕೃಷ್ಣನ ಕೊಳಲಿನ ಧ್ವನಿ. ಅದೆಂಥ ಮೋಡಿ ಆ ಕೊಳಲಿನ ಧ್ವನಿಗೆ? ಯಮುನೆಯೇ ಒಂದು ನಿಮಿಷ ನಿಂತು ಹರಿಯುವಳೇನೋ? ಗೊಲ್ಲ ಬಾಲರೇನು-ಗೋವುಗಳೆಲ್ಲ ಅವನ ಸುತ್ತ ಮುತ್ತ! ಅವನ ಪಿಳ್ಳಂಗೋವಿಯ ಮೋಡಿಗೆ ಗೋಕುಲದ ಹೆಂಗಳೆಯರೆಲ್ಲ-ದೂರು ಕೊಟ್ಟವರೂ ಸಹಿತವಾಗಿ-ದೀಪವನ್ನರಸಿ ಹೋಗುವ ಪತಂಗಗಳಂತೆ- ಆ ನಾದವನ್ನರಸಿ ಹೊರಟೇ ಬಿಡುತ್ತಾರೆ. ಈಗ ಹೇಳಿ, ಯಾರನ್ನು ಶಿಕ್ಷಿಸಲಿ? ನಾನೆಷ್ಟು ಭಾಗ್ಯವಂತೆ... ಕೃಷ್ಣನನ್ನು ಎತ್ತಿ ಮುದ್ದಾಡಿದೆ. ಅಮೃತಧಾರೆಯನ್ನುಣಿಸಿ, ಮುದ್ದು ಮಗುವಿನ ಹಸಿವನ್ನು ತಣಿಸಿದೆ. ಮೊನ್ನೆ ಮೊನ್ನೆಯಷ್ಟೆ ಮಡಿಲಲ್ಲಿ ಕೇಕೆ ಹಾಕಿ ನಗುತ್ತಿದ್ದ ಪುಟ್ಟ ಕೃಷ್ಣ, ಈಗ ಎದೆ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ. ಅಬ್ಬಾ... ಅದೆಷ್ಟು ಬೇಗ ದಿನಗಳು ಸರಿದು ಹೋದವು! ಪ್ರಪಂಚವನ್ನೇ ಮರೆಸಿದ ಈ ನಮ್ಮ ಮಗುವಿಗೆ ಮಾತೃ ಪ್ರೇಮದ ಹೊರತಾಗಿ ನಾನೇನನ್ನು ತಾನೆ ಕೊಡಬಲ್ಲೆ? ಬಾಲ್ಯದಿಂದ ಯವೌನಕ್ಕೆ ಕಾಲಿಡದ ಕೃಷ್ಣನನ್ನಾಗಲೇ ಪ್ರಪಂಚ ಕರೆಯುತ್ತಿದೆ. ಬಿಲ್ಲ ಹಬ್ಬದ ನೆವದಲ್ಲಿ ಕಂಸ ಕೃಷ್ಣನನ್ನು ಮಥುರೆಗೆ ಬರಹೇಳಿದ್ದಾನಂತೆ. ಹೇಗೆ ಕಳಿಸಿಕೊಡಲಿ ನನ್ನ ಮುದ್ದು ಕಂದನನ್ನು? ಕಳಿಸಿ ಕೊಡದಿದ್ದರಾದೀತೆ? ಹಾಗಾಗದು. ಕೃಷ್ಣನ ಹುಟ್ಟಿನ ಉದ್ದೇಶ ಸಫಲವಾಗುವ ಗಳಿಗೆ ಹತ್ತಿರ ಬಂದಾಗ, ಅವನ ಸೀಮೋಲ್ಲಂಘನಕ್ಕೆ ಸಹಕಾರಿಯಾಗಬೇಕಾದ್ದು ನನ್ನ ಕರ್ತವ್ಯ. ಅವನು ಕೇವಲ ನನ್ನ ಮಗನಲ್ಲ. ಅವನು ಈ ಪ್ರಪಂಚದ ಕಷ್ಟವನ್ನು ದೂರ ಮಾಡಲು ಬಂದ ಮಗ. ನನ್ನ ಮಗ ಕೇವಲ ನನಗಾಗಿ ಎನ್ನುವಷ್ಟು ಸ್ವಾರ್ಥಿಯಲ್ಲ ಈ ಯಶೋಧೆ.. - ಸುರೇಖಾ ಭೀಮಗುಳಿ