ಮಾವ ಎಂಬ ಸಾಫ್ಟ್ ವಿಲನ್ ಅತ್ತೆ ಬಗ್ಗೆ ಬಹಳಷ್ಟು ಕೇಳಿದ್ದಾಗಿದೆ, ಅನುಭವಿಸಿದ್ದೂ ಆಗಿದೆ. ಸೀರಿಯಲ್‌ನಿಂದ ಹಿಡಿದು ಸೀರಿಯಲ್ ಕಿಲ್ಲರ್ ಪಾತಕಿಯವರೆಗೆ ಅತ್ತೆಯಂದಿರು ತುಂಬಾ ಕಡೆ ಬಂದು... ಅತ್ತೆ ಬಗ್ಗೆ ಬಹಳಷ್ಟು ಕೇಳಿದ್ದಾಗಿದೆ, ಅನುಭವಿಸಿದ್ದೂ ಆಗಿದೆ. ಸೀರಿಯಲ್‌ನಿಂದ ಹಿಡಿದು ಸೀರಿಯಲ್ ಕಿಲ್ಲರ್ ಪಾತಕಿಯವರೆಗೆ ಅತ್ತೆಯಂದಿರು ತುಂಬಾ ಕಡೆ ಬಂದು ಹೋಗುತ್ತಿರುತ್ತಾರೆ. ಅತ್ತೆ-ಸೊಸೆಯರು ಒಂದು ರೌಂಡು ಜಗಳ ಮುಗಿಸಿ ಇದೀಗ ಕನ್ನಡದ ಟೀವಿ ಚಾನಲ್ಲುಗಳಲ್ಲಿ ಆದರ್ಶ ಜೋಡಿಯಂತೆ ಕಾಣಿಸಿಕೊಳ್ಳತೊಡಗಿದ್ದಾರೆ. ಸೊಸೆಯ ಅತ್ತೆ ಕತೆ ಒಂದು ರೀತಿಯದ್ದಾದರೆ ಅಳಿಯನ ಅತ್ತೆ ಕತೆ ಬೇರೆಯದೇ ರೀತಿಯದು. ಈ ಅತ್ತೆಯ ಬಗ್ಗೆ ಅಸಂಖ್ಯ ಜೋಕುಗಳನ್ನು ಕೇಳಿದ್ದೇವೆ. ಕಾರ್ಟೂನಿಸ್ಟುಗಳು ಅಳಿಯ-ಅತ್ತೆ ವೈಷಮ್ಯದ ಬಗ್ಗೆ ಲಕ್ಷಾಂತರ ವ್ಯಂಗ್ಯಚಿತ್ರ ಬರೆದು ತಮ್ಮ ಅತ್ತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂಟರ್ನೆಟ್‌ನಲ್ಲಿ ಮದರ್ ಇಲ್ಲಾ ಜೋಕ್ಸ್ ಎಂದು ಟೈಪಿಸಿದರೆ ಓದಿ ಮುಗಿಸಲಾಗದಷ್ಟು ಪುಟಗಳು ಪ್ರತ್ಯಕ್ಷವಾಗುತ್ತವೆ. ಮದುವೆಗೆ ಮುಂಚೆ ಅಳಿಯನಿಗೆ ಕನಸಿನಲ್ಲಿ ಭಾವಿ ಹೆಂಡತಿ ಬಂದು ಕಾಡುತ್ತಾಳೆ ಮತ್ತು ಮದುವೆ ನಂತರ ಅವಳಮ್ಮ ಕಾಡುತ್ತಾಳೆ ಎಂಬುದು ಅವುಗಳಲ್ಲೊಂದು. ಅದೆಲ್ಲ ಸರಿ, ಈ ಮಾವ ಎಂಬ ಬಡಪಾಯಿ ಎಲ್ಲಿಗೆ ಹೋದ ಅವನು ಕನ್ನಡಕ ಹಾಕಿಕೊಂಡು ಪೇಪರ್ ಓದುತ್ತಿರುತ್ತಾನೆ. ಮೊಮ್ಮಕ್ಕಳನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಾನೆ. ಆಗಾಗ ತರಕಾರಿ ತರುತ್ತಾನೆ ಮತ್ತು ಯದ್ವಾತದ್ವಾ ಟೀ ಕುಡಿಯುತ್ತಾನೆ! ಇಷ್ಟು ಬಿಟ್ಟರೆ, ವರದಕ್ಷಿಣೆ ಕಿರುಕುಳದ ಕೇಸ್‌ನಲ್ಲಿ ಗಂಡನ ಫ್ಯಾಮಿಲಿ ಅರೆಸ್ಟ್ ಆದರೆ ಅದರಲ್ಲಿ ಮಾವನೂ ಸೇರಿರುತ್ತಾನೆ. ಇನ್ನುಳಿದಂತೆ ಅವನು ಮಿಂಚುವುದು ಸಿನಿಮಾಗಳಲ್ಲಿ ಮಾತ್ರ. ಅಲ್ಲೂ ಹೆಚ್ಚಿನ ಸಲ ಅತ್ತೆಯ ಗಂಡನಾಗಿಯೇ ಕಾಣಿಸಿಕೊಳ್ಳುತ್ತಾನೆ. ವಾಸ್ತವವಾಗಿ ಈ ಮಾವ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಮುದ್ರಿತ ಸಾಹಿತ್ಯದಲ್ಲಿ ಈ ವ್ಯಕ್ತಿಯ ಉಲ್ಲೇಖ ಅಷ್ಟಾಗಿ ಬರುವುದಿಲ್ಲ. ಸೊಸೆಯ ಮಾವನನ್ನು ಬಿಟ್ಟರೆ ಇನ್ನೊಬ್ಬ ಮಾವನಿದ್ದಾನಲ್ಲ, ಅದೇ ಅಳಿಯನ ಮಾವ, ಅವನು ನಮ್ಮ ಇಂದಿನ ಲೇಖನದ ಹೀರೋ ಅಥವಾ ಆ್ಯಂಟಿ ಹೀರೋ. ಈ ಮಾವ ಮೇಲ್ನೋಟಕ್ಕೆ ಪಾಪದ ಆಸಾಮಿಯಂತೆ ಕಾಣಿಸಿದರೂ ಒಮ್ಮೊಮ್ಮೆ ಬಹಳ ಪ್ರಮುಖ ವ್ಯಕ್ತಿಯಾಗಿ ಮಗಳ ಕುಟುಂಬದಲ್ಲಿ ಆಟ ಆಡುತ್ತಾನೆ. ಕೊಪ್ಪರಿಗೆಯಲ್ಲಿ ಬೆಲ್ಲ ತಯಾರಿಸುವಾಗ ಸೌಟು ಆಡಿಸುವವನಿಗೆ ಹೆಚ್ಚು ಮಹತ್ವ ಇಲ್ಲದಿದ್ದರೂ ಅವನು ಮನಸ್ಸು ಮಾಡಿದರೆ ಬೆಲ್ಲ ಕೆಡಿಸಬಲ್ಲ. ಹಾಗೆಯೇ ಅಳಿಯನ ಬದುಕಿನಲ್ಲಿ ಹೆಣ್ಣು ಕೊಟ್ಟ ಮಾವ ಎಂಬ ಪಾತ್ರಧಾರಿ ಒಮ್ಮೊಮ್ಮೆ ವಿಲನ್ ಆಗುವುದೂ ಇದೆ. ಯಾವುದೇ ಕಾರಣಕ್ಕೂ ಇದನ್ನು ಜನರಲೈಸ್ ಮಾಡಿ ಓದಿಕೊಂಡು ಎಲ್ಲ ಮಾವಂದಿರೂ ಹೀಗೇ ಎಂದು ಆತುರಾತುರವಾಗಿ ಅಂದುಕೊಳ್ಳಬಾರದು. ಇಂಥ ಮಾವಂದಿರು ಅಪರೂಪದ ವ್ಯಕ್ತಿಗಳು. ಆದರೂ ಅಳಿಯನ ಬದುಕಿನಲ್ಲಿ ಇವರ ಪಾತ್ರ ಬಹಳ ಮುಖ್ಯವಾದದ್ದು. ನೀವು ಮಗಳಾಗಿದ್ದರೂ ಸರಿ, ಅಳಿಯನಾಗಿದ್ದರೂ ಸರಿ, ಯಾವುದಕ್ಕೂ ಈ ಮಾವನ ಬಗ್ಗೆ ತಿಳಿದುಕೊಂಡಿರಿ. ಮುಂದೆ ಪ್ರಯೋಜನಕ್ಕೆ ಬರಬಹುದು. ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡಪ್ಪೋ ರಿಮ್ಯಾಂಡು, ಎಂದು ರಾಘವೇಂದ್ರ ರಾಜಕುಮಾರ್ ಹಾಡಿ ದಶಕಗಳೇ ಕಳೆದಿವೆ. ಈಗ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡೇ ಇಲ್ಲ, ಇನ್ನೆಲ್ಲಿ ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡು? ಹುಡುಗರು ಮೀಸೆ ಬಿಟ್ಟರೆ ಈಗಿನ ಹುಡುಗಿಯರು ಇಷ್ಟಪಡುವುದಿಲ್ಲ ಎಂಬುದು ಒಂದೆಡೆ. ಹುಡುಗಿಯರ ಸಂಖ್ಯೆ ಕಡಿಮೆ ಇರುವುದರಿಂದ ಹೆಣ್ಣು ಕೊಡುವ ಮಾವನಿಗೇ ಡಿಮ್ಯಾಂಡ್ ಬಂದಿದೆ ಎಂಬುದು ಇನ್ನೊಂದೆಡೆ. ಹಾಗಾಗಿ, ಅಕಸ್ಮಾತ್ ಅಳಿಯನಿಗೆ ಮೀಸೆಯಿದ್ದರೂ ಅವನು ಅದನ್ನು ತಿರುವಿಕೊಳ್ಳುವ ಸೀನ್ ಇಲ್ಲವೇ ಇಲ್ಲ ಎಂಬಷ್ಟು ಅಪರೂಪವಾಗಿದೆ. ಎಲ್ಲೋ ಹಳೇಕಾಲದ ನೆನಪಿನಲ್ಲಿ ಕೆಲ ಅಳಿಯಂದಿರು ಮೀಸೆ ತಿರುವುತ್ತ ಭ್ರಮಾಲೋಕದಲ್ಲಿ ವಿಹರಿಸುತ್ತಿರಬಹುದಾದರೂ ವಾಸ್ತವದಲ್ಲಿ ಅವರೀಗ ಹೀರೋ ಆಗಿ ಉಳಿದಿಲ್ಲ. ಸಿನಿಮಾದಲ್ಲಿ ಈಗಲೂ ಐವತ್ತು ದಾಟಿದವರೇ ಹೀರೋ ಆಗಿರುವಂತೆ ನಿಜ ಬದುಕಿನಲ್ಲಿ ಐವತ್ತು ದಾಟಿದ ಮಾವಂದಿರೇ ಹೀರೋಗಳು. ಸಿನಿಮಾದ ವಿಲನ್‌ಗಳಿಗೂ ಇಷ್ಟೇ ವಯಸ್ಸಾಗಿರುತ್ತದೆ ಎಂಬುದನ್ನು ಮರೆಯಬೇಡಿ. ಅಳಿಯ ಹತ್ತನೇ ಗ್ರಹ ಎಂದು ಗಾದೆ ಹೇಳುತ್ತದೆ. ಆದರೆ 21ನೇ ಶತಮಾನದ ಅಳಿಯನಿಗೆ ಮಾವನನ್ನು ಗೋಳು ಹೊಯ್ದುಕೊಳ್ಳುವುದಕ್ಕೆ ಟೈಮೇ ಇಲ್ಲ. ಅವನು ಮೂರು ಹೊತ್ತೂ ಆಫೀಸಿನಲ್ಲಿ ಬಿದ್ದಿರುತ್ತಾನೆ. ವೀಕೆಂಡ್ ಬಂದರೆ ಎಂ.ಜಿ.ರೋಡು ಅಥವಾ ಬ್ರಿಗೇಡ್ ರೋಡಿನ ಪಬ್ಬಿನಲ್ಲಿರುತ್ತಾನೆ. ಯಾವಾಗ ನೋಡಿದ್ರೂ ಕೆಲಸ ಕೆಲಸ ಎಂದು ಹೆಂಡತಿ ಬೈಯುತ್ತಾಳೆ. ಹಾಗಾಗಿ ಮನೆಯಲ್ಲಿದ್ದಷ್ಟು ಹೊತ್ತು ಈ ಕಿರಿಕಿರಿ ತಪ್ಪಿಸಿಕೊಳ್ಳಲು ಅವನು ಮಗನನ್ನೋ ಮಗಳನ್ನೋ ಕರೆದುಕೊಂಡು ಹೊರಗೆಲ್ಲಾದರೂ ಅನುಮಾನಾಸ್ಪದವಾಗಿ ಓಡಾಡುತ್ತಿರುತ್ತಾನೆ. ಅಪರೂಪಕ್ಕೊಮ್ಮೆ ಮೂರು ದಿನ ರಜೆ ಹಾಕಿ ಎಲ್ಲಿಗಾದರೂ ಫ್ಯಾಮಿಲಿ ಟೂರ್‌ಗೆ ಹೋಗುತ್ತಾನೆ. ನಂತರ ಅದರ ಫೋಟೋಗಳನ್ನು ಹೆಂಡತಿ ಫೇಸ್‌ಬುಕ್ಕಿನಲ್ಲಿ ಹಾಕಿದಾಗ ಅದರಲ್ಲಿ ಮಾವ ಎದ್ದುಕಾಣುತ್ತಿರುತ್ತಾನೆ. ಅಳಿಯನ ಮುಖ ಬಾಡಿರುತ್ತದೆ. ಅದನ್ನು ಮೊಟ್ಟಮೊದಲಿಗೆ ಲೈಕ್ ಮಾಡುವುದು ಅತ್ತೆಯೇ! ಅಳಿಯನಿಗೇನೋ ಟೈಮ್ ಇಲ್ಲ ಅಥವಾ ಅವನ ಟೈಮು ಸರಿಯಾಗಿಲ್ಲ ಎಂಬುದೇ ನಿಜವಿರಬಹುದು. ಆದರೆ ಮಾವನಿಗೆ ಬೇಕಾದಷ್ಟು ಟೈಮಿದೆ. ಏಕೆಂದರೆ ಅವನು ರಿಟೈರಾಗಿದ್ದಾನೆ. ರಿಟೈರಾದ ಮೇಲೆ ಊರಿಗೆ ಹೋಗಿ ತೋಟ ನೋಡಿಕೊಂಡಿರುತ್ತೇನೆ ಎಂದು ಮೊದಲು ಹೇಳುತ್ತಿದ್ದವನು ಈಗ ಮಗಳ ಮನೆಯ ಸಮೀಪವೇ ಮನೆ ಮಾಡಿಕೊಂಡು ಸಿಟಿಯಲ್ಲೇ ಸೆಟ್ಲ್ ಆಗಿರುತ್ತಾನೆ. ಬೆಳಿಗ್ಗೆ ವಾಕಿಂಗ್ ಹೋಗಿ, ಪೇಪರ್ ಓದಿ, ಸಂಜೆ ಮತ್ತೊಂದು ಸುತ್ತು ಪಾರ್ಕಿಗೆ ಹೋಗಿ ಸ್ನೇಹಿತರ ಜೊತೆ ಕಾಲ ಕಳೆದರೂ ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಇನ್ನೂ 10 ತಾಸು ಬಾಕಿಯುಳಿದಿರುತ್ತದೆ. ಆಗ ಮಗಳ ಮನೆಯ ಕಡೆಗೆ ಕಾಲು ತನ್ನಿಂತಾನೇ ಹೋಗುತ್ತದೆ. ಅಳಿಯನ ಆಫೀಸ್ ಟೈಮಿಂಗ್ ಸ್ವಲ್ಪ ಭಿನ್ನವಾಗಿದ್ದರೆ ಹುಲಿಯೂ ಕುರಿಯೂ ಮುಖಾಮುಖಿಯಾಗಲೇಬೇಕು ಅದಿಲ್ಲವಾದರೂ ಅಳಿಯನನ್ನು ಹ್ಯಾಂಡಲ್ ಮಾಡಲು ಮಾವನಿಗೆ ಮಗಳು ಸಿಕ್ಕೇ ಸಿಗುತ್ತಾಳಲ್ಲ, ಅಷ್ಟು ಸಾಕು. ಇದೆಲ್ಲ ಸ್ವಲ್ಪ ಉತ್ಪ್ರೇಕ್ಷೆಯಾಯಿತು ಅನ್ನಿಸುತ್ತಿದೆಯೇ? ಹಾಗಾದರೆ ನೀವು ಅಪ್ಪನ ಮುದ್ದಿನ ಮಗಳಾಗಿರುತ್ತೀರಿ ಅಥವಾ ಹೋದ ಜನ್ಮದಲ್ಲಿ ಪುಣ್ಯ ಮಾಡಿದ ಅಳಿಯನಾಗಿರುತ್ತೀರಿ. ಇವೆರಡೂ ಅಲ್ಲದಿದ್ದರೆ ಇಲ್ಲಿ ಹೇಳಿದ್ದೆಲ್ಲ ನಿಮಗೆ ಸರಿಯಾಗಿ ಕನೆಕ್ಟ್ ಆಗುತ್ತದೆ. ಏಕೆಂದರೆ ಮಾವನಿಂದ ಸಂತ್ರಸ್ತರಾದ ಅಳಿಯಂದಿರ ಸಂಖ್ಯೆ ಈಗ ದೊಡ್ಡದಿದೆ. ರೋಗ ಬಂದವರಿಗೇ ಅದರ ನೋವು ಅರ್ಥವಾಗುತ್ತದೆ ಎನ್ನುತ್ತಾರಲ್ಲ, ಹಾಗೆಯೇ ಮಾವನ 'ಬಾಸ್‌ಗಿರಿ' ಅನುಭವಿಸಿದ ಅಳಿಯಂದಿರಿಗೇ ಇದರ ಹಕೀಕತ್ತು ಅರ್ಥವಾಗುತ್ತದೆ. ಅಂದಹಾಗೆ ಇಲ್ಲಿ ಅಳಿಯಂದಿರು ಎಂದು ಹೇಳಿದ್ದು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಸೂಚಿಸುವುದಕ್ಕೇ ಹೊರತು ಮಾವನ ಆ್ಯಂಗಲ್‌ನಲ್ಲಿ ಹೇಳಿದ್ದಲ್ಲ. 'ಅಳಿಯಂದ್ರೇ' ಎಂದು ಮಾವ ಬಹುವಚನದಲ್ಲಿ ಕರೆಯುವ ಕಾಲ ಹೋಯಿತು. ಹೆಂಡತಿಯಂತೆ ಅವನೂ ಅವಳ ಗಂಡನನ್ನು ಹೆಸರು ಹಿಡಿದೇ ಕರೆಯುತ್ತಾನೆ. ಇಷ್ಟೇ ಆದರೆ ಮಾವ ಯಾಕೆ ಅಳಿಯನ ಪಾಲಿಗೆ ವಿಲನ್ ಆಗಬೇಕು? ವೇಯ್ಟ್. ಇದು ಆರಂಭ ಮಾತ್ರ. ಪಿಕ್ಚರ್ ಅಭೀ ಬಾಕಿ ಹೈ. ಅಳಿಯನಿಗೆ ಮಾವನಿಂದ ಆಗುವ ತೊಂದರೆಗಳೇನು ಎಂಬುದನ್ನು ನೋಡೋಣ. ಇವು ಮಾವನಿಗೆ ಗೊತ್ತಿದ್ದೇ ಆಗಬಹುದು ಅಥವಾ ಗೊತ್ತಿಲ್ಲದೆಯೂ ಆಗಬಹುದು. ಆದರೆ ಅಳಿಯನಿಗಂತೂ ಚೆನ್ನಾಗಿ ಗೊತ್ತಾಗುವ ಹಾಗೆಯೇ ತೊಂದರೆಯಾಗುತ್ತದೆ ಎಂಬುದು ಬಾಟಮ್ ಲೈನ್. ಉಪದೇಶ ಮಾವನಿಗೆ ಅಳಿಯ ಮಗನಿದ್ದಂತೆ ಎಂದು ಒಳ್ಳೆಯವರು ಬಹಳ ಹಿಂದೆಯೇ ಹೇಳಿದ್ದಾರೆ. ಈ ಮಾತನ್ನು ಮಾವ ಅಕ್ಷರಶಃ ನಂಬಿದ್ದಾನೆ. ಆದ್ದರಿಂದಲೇ ಅವನು ಅಳಿಯನನ್ನು ತನ್ನ ಮಗನಂತೆ ನೋಡುತ್ತಾನೆ. ಹೀಗೆ ಮಗನಂತೆ ನೋಡುವುದರಲ್ಲಿ ಪ್ರೀತಿಯೂ ಇದೆ, ಸವಾರಿಯೂ ಇದೆ. ಬೆಳೆದ ಮಗನನ್ನು ಅಪ್ಪ ಯಾವತ್ತೂ ಬಹಿರಂಗವಾಗಿ ಪ್ರೀತಿಸುವುದಿಲ್ಲ ಎಂಬುದು ನಿಮಗೆ ಗೊತ್ತಿರಲಿ. ಅವನಿಗೆ ಮಗನ ಬಗ್ಗೆ ಮನಸ್ಸಿನೊಳಗೇ ಪ್ರೀತಿಯಿರುತ್ತದೆ. ಆದರೆ ಅದನ್ನವನು ಹೊರಗೆ ತೋರಿಸಿಕೊಳ್ಳುವುದಿಲ್ಲ. ಅದರ ಬದಲಿಗೆ ಮಗನಿಗೆ ಉಪದೇಶ ಕೊಡುತ್ತಾನೆ. ಅಳಿಯನಿಗೂ ಅವನ ಲೆಕ್ಕದಲ್ಲಿ ಇದೇ ಅನ್ವಯಿಸುತ್ತದೆ. ಅಳಿಯ ಕೇಳದಿದ್ದರೂ ಜಗತ್ತಿನ ಎಲ್ಲಾ ಸಂಗತಿಗಳ ಬಗ್ಗೆಯೂ ಮಾವ ಉಪದೇಶ ಮಾಡುತ್ತಾನೆ. ಎಲ್ಲಿ ಸೈಟ್ ತೆಗೆದುಕೊಳ್ಳಬೇಕು, ಮನೆ ಕಟ್ಟಿಸಲು ಯಾರಿಗೆ ಕಾಂಟ್ರಾಕ್ಟ್ ಕೊಡಬೇಕು, ಯಾವ ಕಂಪನಿಯ ಶೇರು ಖರೀದಿಸಬೇಕು, ಮನೆಗೆ ದಿನಸಿ ಸಾಮಾನು ಯಾವ ಅಂಗಡಿಯಿಂದ ತರಬೇಕು, ಯಾವ ಕಟಿಂಗ್‌ಶಾಪ್ ಒಳ್ಳೆಯದು, ಮಕ್ಕಳಿಗೆ ಯಾವ ಸ್ಕೂಲು ಒಳ್ಳೆಯದು, ಭವಿಷ್ಯಕ್ಕಾಗಿ ಹೇಗೆ ಸೇವಿಂಗ್ಸ್ ಮಾಡಬೇಕು, ನಾನು ಹೇಗೆ ಮೇಲೆ ಬಂದೆ ಮತ್ತು ನೀನು ಹೇಗೆ ಮೇಲೆ ಬರಬೇಕು, ಸಂಸಾರ ನಡೆಸುವುದು ಹೇಗೆ... ಇವು ಅಳಿಯನಿಗೆ ಮಾವ ಕೊಡುವ ಉಪದೇಶಗಳಲ್ಲಿ ಕೆಲವು ಸ್ಯಾಂಪಲ್ ಮಾತ್ರ. ತನ್ನ ಅಳಿಯನಿಗೆ ಮದುವೆಯ ವಯಸ್ಸು ಈಗಾಗಲೇ ದಾಟಿದೆ, ಅವನೂ ಬೆಳೆದಿದ್ದಾನೆ ಎಂಬುದು ಮಾವನ ಗಮನದಲ್ಲಿ ಇರುವುದೇ ಇಲ್ಲ. ನನ್ನ ಮಗಳನ್ನು ಈ ಎಡಬಿಡಂಗಿಯ ಕೈಲಿ ಇರಿಸಿದ್ದೇನೆ, ಅವಳು ಚೆನ್ನಾಗಿರಬೇಕು ಅಂದರೆ ಅಳಿಯನನ್ನು ದುರಸ್ತಿ ಮಾಡುವುದು ನನ್ನದೇ ಜವಾಬ್ದಾರಿ ಎಂಬ ಭಾವನೆ ಸಾಮಾನ್ಯವಾಗಿ ಮಾವನ ಮನಸ್ಸಿನಲ್ಲಿರುತ್ತದೆ. ಈ ಭಾವನೆ ಹೋಗುವವರೆಗೂ ಉಪದೇಶ ನಿರಂತರ. ಆರ್ಡರ್ ಆರ್ಡರ್ ಬರೀ ಉಪದೇಶ ಮಾಡಿಕೊಂಡಿದ್ದರೆ ಪರವಾಗಿಲ್ಲ. ಕೆಲ ಮಾವಂದಿರು ಅಳಿಯನಿಗೆ ಪ್ರತಿಯೊಂದನ್ನೂ ಆರ್ಡರ್ ಮಾಡುತ್ತಾರೆ. ನಾನು ಹೆಣ್ಣು ಕೊಡದಿದ್ದರೆ ನಿನಗೆ ಮತ್ತೆಲ್ಲೂ ಸಿಗುತ್ತಿದ್ದುದು ಡೌಟು, ಹಾಗಾಗಿ ನಾನು ಹೇಳಿದಂತೆ ನೀನು ಕೇಳಬೇಕು ಎಂಬಂತೆ ಅವರ ನಡೆ-ನುಡಿ ಇರುತ್ತದೆ. ನನಗೆ ನಿನ್ನ ಎರಡು ಪಟ್ಟು ವಯಸ್ಸಾಗಿರುವುದರಿಂದ ಹೀಗೆ ಆದೇಶ ನೀಡಲು ನನಗೆ ಹಕ್ಕಿದೆ ಎಂಬುದು ಅವರ ಸಿದ್ಧಾಂತ. ಹಾಗಾಗಿ ಮಗಳ ಸಂಸಾರಕ್ಕೆ ಯಾವುದು ಬೇಕು, ಯಾವುದು ಬೇಡ ಎಂಬುದನ್ನು ಅವರೇ ನಿರ್ಧರಿಸತೊಡಗುತ್ತಾರೆ. ಕೆಲವೊಮ್ಮೆ ಮಗಳಿಗೂ ಇದು ಬೇಸರ ತರಿಸುತ್ತದೆ. ನಾನು ಮತ್ತು ನನ್ನ ಗಂಡ ಇಬ್ಬರೂ ಸೇರಿ ರೂಪಿಸಿಕೊಳ್ಳಬೇಕು ಎಂದುಕೊಂಡಿದ್ದ ಅಚ್ಚುಕಟ್ಟಾದ ಬದುಕಿನಲ್ಲಿ ಅಪ್ಪ ವಿನಾಕಾರಣ ಹೆಚ್ಚು ಕೈಯಾಡಿಸುತ್ತಿದ್ದಾರೆ ಎಂದು ಅವಳಿಗೆ ಅನ್ನಿಸಿದರೂ ಏನೂ ಹೇಳುವಂತಿಲ್ಲ. ಅಳಿಯ ಇದನ್ನೆಲ್ಲ ಖಡಾಖಡಿಯಾಗಿ ವಿರೋಧಿಸಬಹುದು. ಆದರೆ ಹಾಗೆ ಮಾಡಿದರೆ ಸಂಬಂಧ ಕೆಡುತ್ತದೆ. ಅದಕ್ಕಿಂತ ಹೆಚ್ಚಾಗಿ ಹೆಂಡತಿಗೆ ನೋವಾಗುತ್ತದೆ. ಹಾಗಾಗಿ ಮಾವನನ್ನು ಹೇಗೆ ಎದುರಿಸಬೇಕು ಎಂಬ ಅವನ ರಿಹರ್ಸಲ್ಲು ಬಾತ್‌ರೂಮಿನ ಶವರ್ ಕೆಳಗೇ ಅಂತ್ಯಗೊಳ್ಳುತ್ತದೆ. ನಿಜವಾದ ಶೋ ಇಲ್ಲ. ಹಣಕಾಸಿನ ಕಂಟ್ರೋಲ್ ದುಡ್ಡು ಬಹಳ ಮುಖ್ಯ ಎಂದು ಮಾವನಿಗೆ ಅವನ ಇಷ್ಟು ವರ್ಷದ ಅನುಭವವೇ ಕಲಿಸಿಕೊಟ್ಟಿದೆ. ಆ ಪಾಠವನ್ನು ಅವನು ಅಳಿಯನಿಗೆ ಹೇಳಲು ತುದಿಗಾಲಿನಲ್ಲಿ ನಿಂತಿರುತ್ತಾನೆ. ಮುಂದೂವರೆಯಲಿದೆ... -ಗೇಬ್ರಿಯಲ್ (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.