ಮಳೆ ನೆನಪುಗಳು ಮತ್ತೊಮ್ಮೆ ಮಲೆನಾಡು, ಅಲ್ಲಿಯ ಮಳೆಗಾಲ, ನೆರೆ, ಗಾಳಿ, ಎಲ್ಲ ನೆನಪಾಯಿತು,ಅವೆಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕೆಂಬ ತವಕವೂ ಹೆಚ್ಚಿತು. ತುಂಬಾ ಸುಂದರ ಅಲ್ವಾ? ನಮ್ಮ ಮಲೆನಾಡು ಮಳೆಗಾಲ ಶುರುವಾಯ್ತು ಅಂದ್ರೆ? ಮೈತುಂಬಾ ಕೆಲಸ ಶುರುವಾಗಿಬಿಡುತ್ತೆ, ನೆಟ್ಟಿ ಕೆಲಸ ಶುರುಮಾಡಬೇಕು ಅದಕ್ಕೂ ಮುಂಚೆ ಹೋಗಿ ಒಂದು ಒಳ್ಳೆಯ ಕಂಬಳಿ ಕೊಳ್ಳಬೇಕು, ಅದರ ಕಸೆ ಕಟ್ಟಬೇಕು. ಎಲ್ಲಾ ಕೆಲಸದವರನ್ನ ಒಟ್ಟುಗೂಡಿಸಬೇಕು, ತೋಟದ ಕಳೆ ಕೀಳಬೇಕು, ಔಷಧಿ ಹೊಡೆಯುವರನ್ನ ಕರೆಸಬೇಕು, ಮಳೆ ಜಾಸ್ತಿ ಇದ್ದರೆ ಎರಡು ಅಥವಾ ಮೂರು ಬಾರಿ ಔಷಧಿ ಹೊಡೆಸಬೇಕಾಗಬಹುದು. ಮತ್ತದೇ ಫಸಲಿಗಾಗಿ ಹೋರಾಟ, ಕಾಯುವಿಕೆ,ಒಳ್ಳೆ ಬೆಲೆಯ ನಿರೀಕ್ಷೆ, ಎಷ್ಟೊಂದು ಕೆಲ್ಸ ಅಲ್ವಾ? ನಮ್ಮೂರಲ್ಲಂತೂ ಮಳೆಗಾಲ ಒಂದು ಸುಂದರ ಅನುಭವ. ಸಮಸ್ಯೆಗಳೂ ಇದ್ದೇ ಇರುತ್ತವೆ ಅನ್ನಿ. ಗಾಳಿ, ಮಳೆ, ತೋಟದ ಅಡಿಕೆ ಮರಗಳು ನೆಲಕಚ್ಚುವ ಭಯ, ಮಳೆಗಾಲವಿಡೀ ಹಳ್ಳಿಗಳಲ್ಲಂತೂ ಕರೆಂಟ್‌ನ ಸಮಸ್ಯೆ, ಫೋನ್ ಅಂತು ಕೇಳಲೇಬಾರದು, ಅದರ ಮಧ್ಯದಲ್ಲೂ ಒಂದು ತೆರನಾದ ಮಜಾ. ನೆನಪಿದೆಯಾ? ಶಾಲೆ ಆರಂಭವಾಗುವ ಸಮಯ ಬಂದರೆ ಸಾಕು ರೈನ್‌ಕೋಟ್, ಕೊಡೆಗಳಿಗೋಸ್ಕರ ರಂಪಾಟ, ಅದರಲ್ಲೂ ವಿವಿಧ ವರ್ಣಗಳದ್ದೇ ಬೇಕೆಂಬ ಹಠ. ಮಳೆಗಾಲ ಶುರುವಾಯ್ತು ಅಂದ್ರೆ ಹೊಸ ಛತ್ರಿ ಆಗಬೇಕು, ಅದು ಬಟನ್ ಛತ್ರಿ! ಜೋರಾಗಿ ಗಾಳಿ ಬೀಸಿದರೆ ಅದು ತಲೆಕೆಳಗಾಗಿ ನಮ್ಮನ್ನೂ ಬ್ಯಾಗನ್ನೂ ಮಳೆಯಲ್ಲಿ ತೋಯಿಸಿಬಿಡುತ್ತಿತ್ತು. ನಂತರ ಮೇಷ್ಟ್ರ ಭಯ, ಪುಸ್ತಕ ನೆಂದಿದ್ದಕ್ಕೆ ಹೊಡೆದು ಬಿಟ್ರೆ ಅಂತ? ಆದರೂ ಆ ಬಟನ್ ಛತ್ರಿಯೇ ಬೇಕು.ಮಳೆಗಾಲದ ತಿನಿಸುಗಳ ಬಗ್ಗೆ ಹೇಳುವಂತೆಯೇ ಇಲ್ಲ! ಪತ್ರೊಡೆ, ಹಲಸಿನ ಹಣ್ಣಿನ ಮುಳ್ಕ, ವಾಹ್! ಸ್ವಲ್ಪ ಯೋಚನೆ ಮಾಡಿ, ಆ ಹಲಸಿನ ಹಪ್ಪಳ, ಹಲಸಿನ ಚಿಪ್ಸ್ ಇವೆಲ್ಲವೂ ಇದ್ದು, ಅದೃಷ್ಟಕ್ಕೆ ಕರೆಂಟು ಇದ್ರೆ ಟಿವಿ ನೋಡ್ತಾ ಸವಿಯುವ ಮಜಾನೆ ಬೇರೆ ಬಿಡಿ. ಇನ್ನೂ ಮಜಾ ಅಂದ್ರೆ ಗೇರು ಹಣ್ಣಿನ ಬೀಜಗಳದ್ದು, ಅದನ್ನ ಒಲೆಯ ಒಳಗಡೆ ಹಾಕಿ ಬೂದಿಯಲ್ಲಿ ಬೇಯಿಸಿ ತಿನ್ನೋದು, ಬೇಯಿಸುವಾಗ ಮಧ್ಯದಲ್ಲಿ ಅದು ಬಾಂಬಿನಂತೆಸ್ಛೋಟಗೊಂಡರೆ ಸುತ್ತ ಬೂದಿ ಹಾರಿಅಮ್ಮನಿಂದ ಬೈಗುಳ ಬೇರೆ. ಶಾಲೆಯಿಂದ ವಾಪಾಸಾಗುವಾಗ ದಾರಿಯಲ್ಲಿ ಸಿಗುತ್ತಿದ್ದ ಸಂಪಿಗೆ ಹಣ್ಣು, ರಂಜದ ಹಣ್ಣು, ನೇರಳೆ, ಪೇರಲೆ, ಹಲಸಿನ ಹಣ್ಣು, ಮಾವಿನ ಹಣ್ಣು, ಪನ್ನೇರಳ ಹಣ್ಣು, ಗೇರು ಹಣ್ಣುಗಳನ್ನು ಮೆಲ್ಲುತ್ತಿದ್ದ ದಿನಗಳೇ ದಿನಗಳು. ನೆನಪಿದೆಯಾ? ಒಂಚೂರು ನೆರೆ ಬಂದಾಗ ತೋಟಕ್ಕೆ ಕೊಳೆರೋಗ ಬರುವ ಭಯದಿಂದ ನಮಗೆ ಶಾಲೆಗೆ ರಜಾ ಸಿಗುತ್ತಿತ್ತು. ಇನ್ನು ಕೆಲವು ಸಲ ಪಿಳ್ಳೆನೆವ ಸೃಷ್ಟಿಸಿ ಸ್ಕೂಲಿಗೆ ಚಕ್ಕರ್ ಹೊಡೆದದ್ದೂ ಇದೆ. ಅವರಿವರ ಮನೆಯ ಮಾವಿನ ಮರ ಹತ್ತಿ ಬೈಸಿಕೊಳ್ಳೋದು, ಸ್ವಲ್ಪ ತುಂಬಿದ ಹಳ್ಳ ದಾಟೋದು, ನೆಡೆದು ಜಾರಿಬಿದ್ದು ಎದ್ದು ಮನೆಗೆ ಹೋಗೋದು, ಜಾರುತ್ತೆ ಅಂತ ಗೊತ್ತಿದ್ದೂ ಮರ ಹತ್ತಿ ಬಿದ್ದು ಏಟು ಮಾಡಿಕೊಳ್ಳೋದು ಇವೆಲ್ಲಾ ನಮ್ಮ ಮಳೆಗಾಲದ ಸಾಹಸ ಕ್ರೀಡೆಗಳು. ಮಳೆಗಾಲದಲ್ಲಿ ಶಾಲೆಗೆ ರಜೆ ಇದ್ದರೆ ಆಡೋ ಚೆನ್ನೆ ಮಣೆ, ಹಾವು ಏಣಿ, ಚದುರಂಗ, ಕಣ್ಣ ಮುಚ್ಚಾಲೆ ಆಟ ಇದೆಲ್ಲ ಸೂಪರ್. ರಜೆ ಇಲ್ಲದಿದ್ದರೆ ಹೋಂವರ್ಕ್ ಮಾಡೋಕೆ ಸೀಮೆಎಣ್ಣೆಯ ಚಿಮಣಿಯೇ ಗತಿ ಅದರ ಹೊಗೆಯೋ ಯಾವುದೇ ಕಾರ್ಖಾನೆಯ ಹೊಗೆಗೇನೂ ಕಮ್ಮಿ ಇರುತ್ತಿರಲಿಲ್ಲ. ಈ ಸಲವೂ ಮಳೆಗಾಲ ಶುರುವಾಗಿ ಬಿಟ್ಟಿದೆ. ವರುಣನ ಸಿಂಚನ ನಮ್ಮ ಬಾಲ್ಯದ ನೆನಪುಗಳನ್ನೂ ತನ್ನೊಡನೆ ಹೊತ್ತು ತರುತ್ತದೆ. ಆ ಮಳೆಯ ಸದ್ದು, ಆ ತಂಪಾದ ಗಾಳಿ, ಗುಡುಗು, ಮಿಂಚು, ಮಂದವಾದ ಚಳಿ, ಎಲ್ಲವೂ ಅನುಭವಿಸಿದವನಿಗೆ ಗೊತ್ತು. ವರ್ಷ ಋತುವಿಗೆ ಸೋಲದ ಮನಸುಗಳೇ ಇರಲಾರವು. ನನ್ನ ಬಾಲ್ಯದಲ್ಲಿನ ಮಳೆಗಾಲದ ನೆನಪುಗಳು ಅಚ್ಚಳಿಯದ್ದು, ಮೊದಲ ಮಳೆಗೆ ತುಂಬುತ್ತಿದ್ದ ಮನೆಯ ಮುಂದಿನ ತೋಡುಗಳು, ಆ ಹರಿಯುವ ನೀರಿನಲ್ಲಿ ಮುಳುಗಿ ಆಟವಾಡಿಒದ್ದೆಯಾಗುತ್ತಿದ್ದ ಸಂದರ್ಭಗಳು, ಅದೆಲ್ಲಾ ಈಗ ಸುಮಧುರ ನೆನಪುಗಳು ಮಾತ್ರ.ಅಮ್ಮನಿಗೆ ತಿಳಿಯಂತೆ ಡಬ್ಬದಿಂದ ಕದ್ದು ತಿನ್ನುತ್ತಿದ್ದ ಆ ದಿನಗಳ ನೆನಪು ಇಂದಿಗೂ ಖುಷಿ ಕೊಡುತ್ತದೆ. ಹೊರಗೆ ಭೋರ್ಗರೆದು ಸುರಿವ ಮಳೆಗೆ, ಬೆಚ್ಚಗೆ ಬೆಡ್‌ಶೀಟ್ ಹೊದ್ದು ಅಮ್ಮ ಮಾಡಿದ ಚಿಪ್ಸ್, ಹಪ್ಪಳ, ತಿನ್ನುವ ಸುಖವೇ ಬೇರೆ. ಅದರ ಸುಖ ಅನುಭವಿಸಿದವನಿಗೇ ಗೊತ್ತು. ಇಷ್ಟೆಲ್ಲಾ ಸವಿ ನೆನಪುಗಳನ್ನು ಹೊತ್ತು ತಂದ ಈ ಮಳೆಗಾಲಕ್ಕೆ ನನ್ನ ನೂರೊಂದು ಥ್ಯಾಂಕ್ಸ್... -ಸವಿತಾ ಗುರುಪ್ರಸಾದ್ @. (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.