ಕೋವಿಡ್ ಸೋಂಕಿತ ಮಹಿಳೆಯನ್ನು ಏಕಾಂಗಿಯಾಗಿ ಬಿಟ್ಟು ಹೋದ ಕುಟುಂಬ, ವಕೀಲರ ಸಮಯ ಪ್ರಜ್ಞೆಯಿಂದ ಆಸ್ಪತ್ರೆ ಸೇರಿದ ಅಸಹಾಯಕ ಜೀವ! ಕೋವಿಡ್ ಸೋಂಕಿತ ಮಹಿಳೆಯನ್ನು ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಸಂತ್ರಸ್ಥ ಮಹಿಳೆ ವಕೀಲರೊಬ್ಬರ ಸಮಯ ಪ್ರಜ್ಞೆಯಿಂದ ಆಸ್ಪತ್ರೆ ಸೇರಿದ್ದಾರೆ. ಬೆಂಗಳೂರು: ಕೋವಿಡ್ ಸೋಂಕಿತ ಮಹಿಳೆಯನ್ನು ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಸಂತ್ರಸ್ಥ ಮಹಿಳೆ ವಕೀಲರೊಬ್ಬರ ಸಮಯ ಪ್ರಜ್ಞೆಯಿಂದ ಆಸ್ಪತ್ರೆ ಸೇರಿದ್ದಾರೆ.ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೂರು ದಿನಗಳಿಂದ ಮಹಿಳೆ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಮಲಗಿದ್ದರು. ಅದೇ ದಾರಿಯಲ್ಲಿ ನಿತ್ಯ ಓಡಾಡುತ್ತಿದ್ದ ವಕೀಲ ಎಂ.ಶ್ರೀಧರನ್ ಆಕೆಯನ್ನು ಗಮನಿಸಿ ಅಧಿಕಾರಿಗಳ ಗಮನಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.ಸುಮಾರು 30 ವರ್ಷ ವಯಸ್ಸಿನ ಮಹಿಳೆ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಮಲಗಿದ್ದರು. ನಿಲ್ದಾಣದ ಹಿಂಭಾಗದ ಪ್ರವೇಶದ್ವಾರದ ಬಳಿ ಆಕೆಯನ್ನು ಕಂಡ ವಕೀಲ ಶ್ರೀಧರನ್ ಅವರು ಆರಂಭದಲ್ಲಿ ಯಾರೋ ಪ್ರಯಾಣಿಕರಿರಬಹುದು ಎಂದು ನಿರ್ಲಕ್ಷಿಸಿದ್ದಾರೆ. ಮಾರನೆಯ ದಿನ ಅದೇ ಮಹಿಳೆಯನ್ನು ಸ್ಥಳೀಯ ಆಟೋ ಚಾಲಕರು ಪ್ರಶ್ನಿಸುತ್ತಿರುವುದನ್ನು ಕಂಡಿದ್ದ ಶ್ರೀಧರನ್ ಮಾರನೆ ದಿನ ಸಂಜೆ 5 ಗಂಟೆ ವೇಳೆಯಲ್ಲಿ ಕೂಡ ಆಕೆಯನ್ನು ಅದೇ ಸ್ಥಳದಲ್ಲಿ ಕಂಡಿದ್ದಾರೆ. ಹೀಗಾಗಿ ಇದರಿಂದ ಅನುಮಾನಗೊಂಡ ಶ್ರೀಧರನ್ ಆಕೆಯನ್ನು ಪ್ರಶ್ನಿಸಿದ ವೇಳೆ ಆಕೆಯ ಹೀನಾಯ ಪರಿಸ್ಥಿತಿ ಬೆಳಕಿಗೆ ಬಂದಿದೆ. ಕೂಡಲೇ ಇಂಟರ್ ನೆಟ್ ನಲ್ಲಿ ರೈಲ್ವೇ ಅಧಿಕಾರಿಗಳ ಮೊಬೈಲ್ ಸಂಖ್ಯೆ ಪಡೆದ ಶ್ರೀಧರನ್ ಅವರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಪ್ರತಿಕ್ರಿಯಿಸಿದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಆಕೆಯನ್ನು ನಗರದ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವಕೀಲ ಶ್ರೀಧರನ್ ಅವರು, 'ರೈಲ್ವೆ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುವ ನನ್ನ ತಂಗಿಯನ್ನು ಪ್ರತಿದಿನ ಸಂಜೆ 5 ಗಂಟೆ ಸುಮಾರಿಗೆ ಕರೆದುಕೊಂಡು ಹೋಗಲು ನಾನು ಈ ಮಾರ್ಗದಲ್ಲಿ ಬರುತ್ತಿದ್ದೆ. ಒಬ್ಬ ಮಹಿಳೆಯು ಎರಡು ದಿನಗಳ ಕಾಲ ಮಳೆ ಸುರಿಯುತ್ತಿದ್ದರೂ ರೈಲ್ವೇ ಪ್ರವೇಶ ದ್ವಾರದಲ್ಲಿರುವುದನ್ನು ನಾನು ನೋಡಿದೆ. ಇನ್ನೊಂದು ದಿನ ಆಕೆಯ ಸುತ್ತ ನೊಣಗಳು ಮುಸುರಿದ್ದವು. ಇದು ನಿಜವಾಗಿಯೂ ನನ್ನನ್ನು ಅಸಮಾಧಾನಗೊಳಿಸಿತು. ಸುತ್ತಲೂ ಆಟೋ ಡ್ರೈವರ್‌ಗಳು ಇದ್ದರೂ, ಯಾರೂ ಸಹಾಯ ಮಾಡಲು ಮುಂದಾಗಿರಲಿಲ್ಲ. ಮಾರನೆಯ ದಿನ ಸಂಜೆ ನನ್ನ ತಂಗಿಯನ್ನು ಕರೆದುಕೊಂಡು ಹೋಗಲು ನಾನು ಬಂದಾಗ ಆಕೆಯನ್ನು ವಿಚಾರಿಸಿದೆ. ಈ ವೇಳೆ ಅಕೆಯ ದಯನೀಯ ಸ್ಥಿತಿ ತಿಳಿಯಿತು. ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದರು.ಶ್ರೀಧರನ್ ಅವರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನ (ಆರ್‌ಪಿಎಫ್) ಸಂಪರ್ಕ ಸಂಖ್ಯೆಯನ್ನು ಪಡೆದು ಅವರಿಗೆ ಮಾಹಿತಿ ನೀಡಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಆರ್ ಪಿಎಫ್ ಸಿಬ್ಬಂದಿಗಳು ಆಕೆಯನ್ನು ಆಸ್ಪತ್ರೆಗೆ ರವಾನೆ ಮಾಡಿದರು. ಈ ಕುರಿತು ಮಾತನಾಡಿದ ಆರ್ ಪಿಎಫ್ ಸಿಬ್ಬಂದಿ ಶಂಕರಪ್ಪ ಅವರು, ನಾವು ಸ್ಥಳಕ್ಕಾಗಮಿಸಿದಾಗ ಆಕೆ ತುಂಬಾ ದುರ್ಬಲಳಾಗಿದ್ದಳು. ಆಕೆಗೆ ನಿಲ್ಲಲೂ ಕೂಡ ಸಾಧ್ಯವಾಗುತ್ತಿರಲಿಲ್ಲ. ನಾವು ಆಕೆಗೆ ನೀರು ಕೊಟ್ಟೆವು. ಆದರೆ ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ. ಅವಳು ಹಿಂದಿಯಲ್ಲಿ ಕೆಲವು ಮಾತುಗಳನ್ನು ಉಚ್ಚರಿಸಿದಳು. ಆಂಬ್ಯುಲೆನ್ಸ್ ಬರುವವರೆಗೂ ನಮ್ಮ ವೈದ್ಯರು ಆಕೆಯ ಬಳಿಯೇ ಇದ್ದು ಪ್ರಥಮ ಚಿಕಿತ್ಸೆ ನೀಡಿದ್ದರು. ಆಕೆಯ ನಾಡಿ ಬಡಿತ ದುರ್ಬಲವಾಗಿ ದೇಹದ ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಇತ್ತು ಎಂದು ಹೇಳಿದರು.ಇನ್ನು ಮಹಿಳೆಯ ಪರಿಸ್ಥಿತಿ ನೋಡಿ ಸೂಕ್ತ ಸಮಯದಲ್ಲಿ ಮಾಹಿತಿ ನೀಡಿ ಆಕೆಗೆ ನೆರವಾದ ಶ್ರೀಧರನ್ ಅವರಿಗೆ ನಾವು ನಿಜವಾಗಿಯೂ ಕೃತಜ್ಞರಾಗಿರುತ್ತೇವೆ ಎಂದು ಡಿಆರ್ಎಂ ಎ ಕೆ ವರ್ಮಾ ಹೇಳಿದ್ದಾರೆ.