ಕುಳಿತಲ್ಲಿಗೇ ಸಂಗಾತಿ ಆತನೊಬ್ಬ ರಗ್ಬಿ ಪ್ಲೇಯರ್. ಆತನಿಗೆ 17 ವರ್ಷ ವಯಸ್ಸಾಗಿದ್ದಾಗ, ರಗ್ಬಿ ಆಡುತ್ತಿದ್ದ ಅಂಗಳದಲ್ಲಿ ಇನ್ನೊಬ್ಬ ಆಟಗಾರನ ಮೊಣಕಾಲು ಆತನ ಬೆನ್ನಿಗೆ ಜೋರಾಗಿ ತಾಗಿತು... ಆತನೊಬ್ಬ ರಗ್ಬಿ ಪ್ಲೇಯರ್. ಆತನಿಗೆ 17 ವರ್ಷ ವಯಸ್ಸಾಗಿದ್ದಾಗ, ರಗ್ಬಿ ಆಡುತ್ತಿದ್ದ ಅಂಗಳದಲ್ಲಿ ಇನ್ನೊಬ್ಬ ಆಟಗಾರನ ಮೊಣಕಾಲು ಆತನ ಬೆನ್ನಿಗೆ ಜೋರಾಗಿ ತಾಗಿತು. ಅಷ್ಟೇ, ಆಮೇಲೆ ಯಾವ ಸಂವೇದನೆಯೂ ಇಲ್ಲ. ಮೈಗೆ ಪಾಶ್ರ್ವವಾಯು ಬಡಿಯಿತು. ಏಳುವುದು, ನಡೆಯುವುದು ಅಸಾಧ್ಯವಾಯ್ತು. ಬದುಕೆಲ್ಲ ವ್ಹೀಲ್‍ಚೇರ್ ಮೇಲೆ. ಒಂದು ಎರಡು ಎಲ್ಲ ಕೂತಲ್ಲೇ. ಶ್ವಾಸನಾಳಕ್ಕೆ ಬೆನ್ನುಮೂಳೆ ತೊಡರಿಕೊಂಡು, ಉಸಿರಾಡಲು ಕಷ್ಟವಾಗಿ, ಅದಕ್ಕಾಗಿಯೇ ಬೇರೆ ವಿಂಡ್ ಪೈಪ್ ಜೋಡಿಸಬೇಕಾಯ್ತು. ಇಂಥ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿಗೆ ಪ್ರೇಮಜೀವನ, ಲೈಂಗಿಕ ಬದುಕು ಸಾಧ್ಯವೆಂದು ಊಹಿಸಬಹುದೆ? ಆದರೆ ನ್ಯೂಯಾರ್ಕಿನ ಮ್ಯಾಥ್ಯೂ ಕಿಂಗ್ ವಿಚಾರದಲ್ಲಿ ವೀನಸ್ ದೇವತೆ ಉದಾರವಾಗಿತ್ತು. ಪೋಲೆಂಡ್ ನ ಲೋನಾ ರೋಜ್ ಕುಬಿಕಾ ಎಂಬ ಸುರಸುಂದರಿ ಒಲಿದು ಬಂದಳು. ಆನ್ ಲೈನ್ ನಲ್ಲಿ ಪರಿಚಯವಾಯ್ತು. ಕಾಫಿಶಾಪ್ ನಲ್ಲಿ ಮೊದಲ ಡೇಟಿಂಗ್ ಆಯ್ತು. ಈತ ಸಂಪೂರ್ಣ ಪರಾವಲಂಬಿ ಎಂದು ಗೊತ್ತಾದರೂ ಆಕೆ ಆತನಿಗೆ ಮನಸು ಕೊಟ್ಟಳು. ಅಷ್ಟರಲ್ಲಾಗಲೇ ಆತ ಶತಪ್ರಯತ್ನದಿಂದ ಶಿಕ್ಷಣ ಪಡೆದು, ಪದವಿ ಪಡೆದಿದ್ದ. ಮೊತ್ತಮೊದಲ ಪಾಶ್ರ್ವವಾಯು ಪೀಡಿತ, ವೆಂಟಿಲೇಟರ್ ಮೇಲೆ ಆಧಾರಗೊಂಡಿದ್ದ ಅಥ್ಲೀಟ್ ಅನಿಸಿಕೊಂಡಿದ್ದ. ಮೊನ್ನೆ ಮೊನ್ನೆ ಆತ ಆಕೆಗೆ ರಿಂಗ್ ನೀಡಿದ. ಆಕೆ ಭಾವಾವಿಷ್ಟಳಾಗಿ ಅತ್ತಳು. `ನಮ್ಮ ಬದುಕಿನ ರೀತಿಗಳು ಬೇರೆಬೇರೆ ಇರಬಹುದು. ಆದರೆ ಎಲ್ಲ ಲವ್ ಸ್ಟೋರಿಗಳೂ ಒಂದೇ. ನಾವು ಯಾರನ್ನು ಭೇಟಿಯಾಗುತ್ತೇವೋ ಅವರನ್ನು ಬಿಟ್ಟಿರಲಾಗದೆಂದು ಅನಿಸಿದಾಗ, ಎರಡು ಜೀವಗಳೂ ಒಳಿತಿಗಾಗಿ ಕೂಡಿಕೊಳ್ಳುತ್ತವೆ' ಎನ್ನುತ್ತಾಳೆ ಆಕೆ. ತಮ್ಮ ದೈಹಿಕ ಮಿಲನಕ್ಕೆ ವ್ಹೀಲ್‍ಚೇರ್ ತೊಡಕಾಗದು ಎಂಬುದನ್ನೂ ಆಕೆ ನಿರೂಪಿಸಿದಳು ಎಂದು ಆತ ಮುಚ್ಚಿಡದೆ ಹೇಳುತ್ತಾನೆ.