ಸೈನಾ ನೆಹ್ವಾಲ್ - ಸೈನ್ಯಾ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಸಾಧನೆಯ ಹಿಂದೆ ಆಕೆಯ ಕುಟುಂಬದ ಪ್ರೋತ್ಸಾಹವಿದೆ. ಸೈನಾಳ ಅಪ್ಪ ಹರ್ವೀರ್ ಸಿಂಗ್ ಕೃಷಿ ವಿಜ್ಞಾನಿ... ಅವಳ ಆಟ ! ಅಂತಾರೆ. ಮೊನ್ನೆ ಮೊನ್ನೆ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕ. ಏಷ್ಯನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್. 2010ರಲ್ಲಿ ಹಾಂಗ್ಕಾಂಗ್, ಇಂಡೋನೇಷ್ಯಾ ಮತ್ತು ಸಿಂಗಾಪೂರ್ ಸೂಪರ್ ಸೀರೀಸ್ ಕಿರೀಟಗಳು! ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮತ್ತು ಇಂಡಿಯನ್ ಓಪನ್ನಲ್ಲಿ ಚಿನ್ನ ಗೆದ್ದಾಕೆ. ಅಷ್ಟೇ ಯಾಕೆ 2012ರ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ನಲ್ಲಿ ಇತಿಹಾಸ ಸೃಷ್ಟಿಸಿದಾಕೆ. ಮೊನ್ನೆ ಮೊನ್ನೆ ಡೆನ್ಮಾರ್ಕ್ ಓಪನ್ ಸಿರೀಸ್ ಗೆದ್ದಾಕೆ. ಬ್ಯಾಡ್ಮಿಂಟನ್ನಲ್ಲಿ ದೇಶದ ಕೀರ್ತಿ ಪತಾಕೆ ಎತ್ತಿ ಹಿಡಿದ ಭಾರತದ ಪ್ರಥಮ ಮಹಿಳಾ ಆಟಗಾರ್ತಿ. ಅವಳೇ ಸೈನಾ ನೆಹ್ವಾಲ್. ಮಧ್ಯಮ ವರ್ಗದಲ್ಲಿ ಬೆಳೆದ ಸೈನಾ ನೆಹ್ವಾಲ್ ಎಂಬ ಈ ಹೆಣ್ಣು, ಬ್ಯಾಡ್ಮಿಂಟನ್ ಲೋಕದ 'ಶೈನಿಂಗ್ ಸೈನಾ' ಆಗಿದ್ದು ಹೇಗೆ? ಓದಿ ನೋಡಿ. ಇಲ್ಲಿಂದ ಆರಂಭವೋ! ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಸಾಧನೆಯ ಹಿಂದೆ ಆಕೆಯ ಕುಟುಂಬದ ಪ್ರೋತ್ಸಾಹವಿದೆ. ಸೈನಾಳ ಅಪ್ಪ ಹರ್ವೀರ್ ಸಿಂಗ್ ಕೃಷಿ ವಿಜ್ಞಾನಿ. ಅಮ್ಮ ಉಷಾ ರಾಣಿ. ಈ ದಂಪತಿಗಳು ಟೈಂಪಾಸ್ಗಾಗಿ ಶಟಲ್ ಆಡಲು ಆರಂಭಿಸಿದ್ದರಂತೆ. ಹೀಗೆ ಆಡುತ್ತಾ ಜಿಲ್ಲಾ ಮಟ್ಟದಲ್ಲಿಯೂ ಮಿಕ್ಸೆಡ್ ಡಬಲ್ಸ್ ಪಂದ್ಯಗಳನ್ನಾಡಿ ಗೆದ್ದು ಬಂದರು. ಇದರ ಪರಿಣಾಮ ಕಚೇರಿಯಲ್ಲಿ ಹರ್ವೀರ್ ಸ್ಪೋರ್ಟ್ಸ್ ಸೆಕ್ರೆಟರಿಯಾಗಿ ಆಯ್ಕೆಯಾದರು. 1983ರಲ್ಲಿ ಮೊದಲ ಮಗು ಅಬು ಸೂರ್ಯಾಂಶು ಹುಟ್ಟಿದಳು. ನಂತರ 1990 ಮಾರ್ಚ್ 17ರಂದು ಹುಟ್ಟಿದವಳೇ ಸೈನಾ. ಸಾಯಿ'ನಾ' ಶಿರಡಿಯ ಸಾಯಿನಾಮದ ಸಂಕ್ಷಿಪ್ತ ರೂಪವೇ ಸೈನಾ. ಮೊದಲನೆ ಮಗು ಹೆಣ್ಣಾಗಿದ್ದು, ನಂತರದ ಮಗುವು ಹೆಣ್ಣಾದರೆ ಬೇಜಾರು ಮಾಡುವ ಜನ ಹರ್ಯಾಣದಲ್ಲಿದ್ದಾರೆ. ಆದರೆ ನಾವು ಇದ್ಯಾವುದಕ್ಕೂ ಕಿವಿಗೊಡಲಿಲ್ಲ. ಸೈನಾ ರ್ಯಾಕೆಟ್ ಹಿಡಿದದ್ದೂ ಕೂಡಾ ಆಕಸ್ಮಿಕವಾಗಿಯೇ. ಚಿಕ್ಕಂದಿನಿಂದಲೇ ಆಕೆಯ ಆಟಿಕೆ ಎಂದರೆ ರಾಕೆಟ್ ಆಗಿತ್ತು. ಅಪ್ಪ ಅಮ್ಮ ಆಡುವುದನ್ನು ನೋಡಿಯೇ ಆಕೆಗೆ ಬ್ಯಾಡ್ಮಿಂಟನ್ ಏನೆಂಬುದು ಅರಿವಾಗಿತ್ತು. ಹೀಗೆ ಬಾಲ್ಯದಲ್ಲೇ ಬ್ಯಾಡ್ಮಿಂಟನ್ ವಾತಾವರಣದಲ್ಲಿ ಬೆಳೆದ ಸೈನಾಗೆ ಮುಂದೆ ಅದೇ ಉಸಿರಾಯಿತು. ಶಾಲೆಯಲ್ಲಿಯೂ ಆಕೆ ರನ್ನಿಂಗ್ ರೇಸ್, ಕಪ್ಪೆ ಜಿಗಿತದಲ್ಲಿ ಫಸ್ಟ್ ಬರುತ್ತಿದ್ದಳು. ಕರಾಟೆಯಲ್ಲಿ ಸೈನಾ ಬ್ರೌನ್ ಬೆಲ್ಟ್. ಆದರೆ ಅಂದೊಮ್ಮೆ ಮಕ್ಕಳ ಕೈ ಮೇಲೆ ಬೈಕ್ ಓಡಿಸುವುದಾಗಿ ಕರಾಟೆ ಟೀಚರ್ ಹೇಳಿದಾಗ, ಹರ್ವೀರ್ ಸಿಂಗ್ ತನ್ನ ಮಗಳನ್ನು ಇನ್ಮುಂದೆ ಕರಾಟೆ ಕ್ಲಾಸಿಗೆ ಕಳುಹಿಸುವುದಿಲ್ಲ ಎಂದು ಹೇಳಿಯೇ ಬಿಟ್ಟರು. ಟರ್ನಿಂಗ್ ಪಾಯಿಂಟ್ ಈ ನಡುವೆ ಹರ್ವೀರ್ ಸಿಂಗ್ಗೆ ಹೈದ್ರಾಬಾದ್ಗೆ ವರ್ಗವಾಯಿತು. ಸ್ಪೋರ್ಟ್ಸ್ ಸೆಕ್ರಟರಿ ಆಗಿದ್ದ ಕಾರಣ ಕೃಷಿ ವಿಶ್ವ ವಿದ್ಯಾಲಯದ ಕ್ರೀಡಾಕೂಟಕ್ಕಾಗಿ ಜಾಗ ನಿರ್ಧರಿಸುವ ಸಲುವಾಗಿ ಲಾಲ್ ಬಹದ್ದೂರ್ ಒಳಾಂಗಣ ಕ್ರೀಡಾಂಗಣಕ್ಕೆ ಬಂದಿದ್ದರು. ಜತೆಯಲ್ಲಿ ಸೈನಾಳೂ ಇದ್ದಳು. ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಸೈನಾ ರ್ಯಾಕೆಟ್ ಹಿಡಿದು ನಿಂತಿದ್ದಳು. ಅವಳ ಜತೆಗೆ ಒಬ್ಬ ಹಿರಿಯ ವ್ಯಕ್ತಿಯೂ ಇದ್ದರು. ಅವರೇ ನಾನೀ ಪ್ರಸಾದ್ ರಾವ್, ಅಲ್ಲಿನ ಬ್ಯಾಡ್ಮಿಂಟನ್ ಕೋಚ್. ಸೈನಾಳಿಗೆ ಬ್ಯಾಡ್ಮಿಂಟನ್ನಲ್ಲಿ ಉಜ್ವಲ ಭವಿಷ್ಯವಿದೆ. ಅವಳನ್ನು ನನ್ನಲ್ಲಿ ತರಬೇತಿಗೆ ಕಳುಹಿಸಿ ಎಂದರು ನಾನೀ. ಅದು ಸೈನಾಳ ಜೀವನದ ಟರ್ನಿಂಗ್ ಪಾಯಿಂಟ್. ಈ ನಡುವೆ ಪಂದ್ಯಗಳನ್ನಾಡುವ ಸಲುವಾಗಿ ಕ್ಲಾಸಿಗೆ ಚಕ್ಕರ್ ಹೊಡೆಯಬೇಕಾಗಿ ಬರುತ್ತಿತ್ತು. ಆವಾಗ ಶಾಲೆಯ ಪ್ರಿನ್ಸಿಪಾಲ್, ಸೈನಾಳಿಗೆ ಪಾಠ ಹೇಳಿಕೊಡಲು ಶಾಲೆಯಿಂದ ಇಬ್ಬರು ಅಧ್ಯಾಪಕರನ್ನು ಮನೆಗೆ ಕಳುಹಿಸುವ ವ್ಯವಸ್ಥೆಮಾಡಿದರು. ಹೀಗೆ ಸೈನಾಳ ಆಟ, ಪಾಠ ಎಲ್ಲವೂ ಬ್ಯಾಲೆನ್ಸಡ್ ಆಗಿತ್ತು. ಅಪ್ಪನ ಸ್ಕೂಟರ್ನಲ್ಲಿ ನಿದ್ದೆ ಬ್ಯಾಡ್ಮಿಂಟನ್ ತರಬೇತಿಗಾಗಿ ಬೆಳಗ್ಗೆ 6 ಗಂಟೆಗೆ ಸ್ಟೇಡಿಯಂ ತಲುಪಬೇಕಿತ್ತು. ಮನೆಯಿಂದ 25 ಕಿ.ಮೀ ಪ್ರಯಾಣ. ಆವೇಳೆ ಪುಟ್ಟ ಸೈನಾ ತಂದೆಯ ಸ್ಕೂಟರ್ನಲ್ಲೇ ನಿದ್ದೆ ಹೋಗುತ್ತಿದ್ದಳು. ಹೀಗೆ ಸೈನಾ ಬ್ಯಾಡ್ಮಿಂಟನ್ನ ಪಾಠಗಳನ್ನು ಕಲಿಯುತ್ತಾ ಮುಂದೆ ಮುಂದೆ ಹೆಜ್ಜೆಯಿಡುತ್ತಿದ್ದರೆ, ಅವಳ ಬ್ಯಾಟ್, ಶೂ ಖರೀದಿಸುವ ಖರ್ಚು ತಿಂಗಳಿಗೆ 12,000 ದಾಟುತ್ತಿತ್ತು. ಎಲ್ಲವನ್ನೂ ಸಂಭಾಳಿಸಲು ಪಿ.ಎಫ್ ಖಾತೆಯಿಂದ ಹಣ ತೆಗೆದುಕೊಳ್ಳುತ್ತಿದ್ದರಂತೆ ಹರ್ವೀರ್. ಹರ್ವೀರ್ ಹೇಳುತ್ತಾರೆ, 'ನಾವ್ಯಾವತ್ತೂ ನಮ್ಮ ಕಷ್ಟದ ಬಗ್ಗೆ ಸೈನಾಳಿಗೆ ಹೇಳಿಲ್ಲ, ಅವಳು ಮುಂದೆ ಮುಂದೆ ಸಾಗಬೇಕು ಎಂಬುದು ನಮ್ಮ ಆಸೆ. ಈಗ ನಮ್ಮ ಕನಸು ನನಸಾಗಿದೆ. ಅವಳು ಗೆದ್ದ ಪ್ರಶಸ್ತಿ, ಪದಕಗಳಿಂದ ಮನೆ ತುಂಬಿದೆ. ವಿದೇಶ ಪ್ರವಾಸಕ್ಕೆ ಹೋದಾಗೆಲ್ಲಾ ಅವಳು ನಮಗಾಗಿ ದುಬಾರಿ ಗಿಫ್ಟ್ಗಳನ್ನು ತರುತ್ತಾಳೆ. ಮಗಳ ಈ ಯಶಸ್ಸಿನಿಂದ ನಾವು ಹೆಮ್ಮೆ ಪಡುವಂತಾಗಿದೆ'. ಸೋತು ಗೆದ್ದವಳು ಸೈನಾ ಪಂದ್ಯಗಳನ್ನು ಗೆಲ್ಲುತ್ತಾ ಸುದ್ದಿ ಮಾಡುತ್ತಿದ್ದಂತೆ ಇತ್ತ ಆಕೆಯ ಖರ್ಚೂ ಹೆಚ್ಚಾಗುತ್ತಿತ್ತು. ಆಗ ಕೆಲವೊಂದು ಕಂಪನಿಗಳು ಪ್ರಾಯೋಜಕತ್ವ ನೀಡಿದ್ದರಿಂದಲೇ ಸೈನಾಳ ಪಯಣ ಅಡೆತಡೆಯಿಲ್ಲದೆ ಮುಂದೆ ಸಾಗಿತು. 2009ರಲ್ಲಿ ಡೆಕ್ಕನ್ ಕ್ರಾನಿಕಲ್ನ ರವಿ ರೆಡ್ಡಿ ಹರ್ವೀರ್ನ್ನು ಕರೆದು ಸೈನಾಳಿಗೆ ನಾನು 1 ಕೋಟಿಯ ಪ್ರಾಯೋಜಕತ್ವವನ್ನು ನೀಡುತ್ತೇನೆ ಎಂದಾಗ ಹರ್ವೀರ್ಗೆ ಫುಲ್ ಶಾಕ್. ಯಾಕೆ ಗೊತ್ತಾ? ಈ ಹಿಂದೆ ರವಿ ರೆಡ್ಡಿ ಅವರ ಮಗಳು ಅಂಜನಾ ರೆಡ್ಡಿ ಎದುರು ಸೈನಾ ಪರಾಭವಗೊಂಡಿದ್ದಳು. ಆವಾಗ ಸೈನಾಗೆ ಕೇವಲ 9 ವರ್ಷ. ಅಂಜನಾ ಸೈನಾಗಿಂತ ಹಿರಿಯಳು. ಹರ್ವೀರ್ನ ಮುಖಚರ್ಯೆ ಕಂಡ ರವಿರೆಡ್ಡಿ, ಸೈನಾ ಕೂಡಾ ನನ್ನ ಮಗಳೇ ಎಂದು ಹೇಳಿದಾಗ ಹರ್ವೀರ್ಗೆ ಸೈನಾಳ ಆ ದಿನದ ಸೋಲು ಕೂಡಾ ಗೆಲವಾಗಿ ಕಂಡಿತ್ತು. ಮಾರ್ ಡಾಲೂಂಗೀ! ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಎದುರಾಳಿ ಜತೆ ಸೆಣಸಾಡುವಾಗ ಆಕೆಯ ಮನಸ್ಸಲ್ಲಿರುವುದು ಒಂದೇ ಭಾವನೆ. ನಾನು ಈ ಪಂದ್ಯ ಗೆಲ್ಲಬೇಕು. ಅದೊಂದು ಹಠ. ಆಕೆಯ ಸ್ಟೈಲೇ ಅಂಥದ್ದು. ಎದುರಾಳಿಗಳನ್ನು ಆದಷ್ಟು ಆಯಾಸವಾಗುವಂತೆ ಮಾಡಬೇಕು. ನಮ್ಮ ಮೂವ್ಮೆಂಟ್ ಅವರಿಗೆ ಗೊತ್ತಾಗಲೇ ಬಾರದು. ಅವರ ಬಾಡಿಲಾಂಗ್ವೇಜ್ನಿಂದಲೇ ಎಲ್ಲವನ್ನೂ ಅರಿತುಕೊಳ್ಳಬೇಕು. 'ಹಿಮ್ಮತ್ತ್ ಸೆ ಖೇಲೋ... ಜೀತೋಗೆ' ಹರ್ವೀರ್ ತನ್ನ ಮಗಳಿಗೆ ಹೇಳಿಕೊಟ್ಟದ್ದು ಇಷ್ಟು. ಸೈನಾ ಅದನ್ನು ಅಕ್ಷರಷಃ ಪಾಲಿಸಿದ್ದಾಳೆ. ಅವಳ ಆಟದ ಬಗ್ಗೆ ಹೇಳಬೇಕೆಂದರೆ ಆಕೆಯದ್ದು 'ಮಾರ್ಡಾಲೂಂಗಿ' ಎಂಬ ಮನೋಭಾವ. ವಿದೇಶಿ ಆಟಗಾರರನ್ನು ಬಗ್ಗು ಬಡಿಯಲು ಸಹಾಯವಾದುದೇ ಆಕೆಯ ಈ ಮನೋಭಾವ! ಗೋಪಿ ಮಾಸ್ಟರ್ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿದ್ದ ಪುಲ್ಲೇಲ ಗೋಪಿ ಚಂದ್ ಅವರ ಶಿಷ್ಯೆಯಾದ ಮೇಲೆ ಸೈನಾಳ ಆಟದ ಗತಿಯೇ ಬದಲಾಯಿತು. 'ಗೋಪಿ ಭಯ್ಯಾ'... ಸೈನಾ ಗೋಪಿಚಂದ್ನ್ನು ಕರೆಯುವುದೇ ಹಾಗೆ. ಬ್ಯಾಡ್ಮಿಂಟನ್ನಲ್ಲಿ ಅಧಿಪತ್ಯ ಸ್ಥಾಪಿಸಿರುವ ಚೈನಾ, ಕೊರಿಯಾ, ಜಪಾನ್ನ ಆಟಗಾರರು ದೈಹಿಕವಾಗಿ ತುಂಬಾ ಗಟ್ಟಿಯಾಗಿರುತ್ತಾರೆ. ಅಂಥವರನ್ನು ಮಣಿಸಬೇಕಾದರೆ ಜಾಸ್ತಿ ಹೊತ್ತು ಆಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸೈನಾಳನ್ನು ಇನ್ನಷ್ಟು ಸಶಕ್ತಳನ್ನಾಗಿ ಮಾಡುವುದಕ್ಕಾಗಿ ಗೋಪಿ, ಸೈನಾ ಜತೆ ಪುರುಷರನ್ನೇ ಕಣಕ್ಕಿಳಿಸುತ್ತಿದ್ದರು. ಸೈನಾಳನ್ನು ಮಾನಸಿಕ ಹಾಗೂ ಶಾರೀರಿಕವಾಗಿ ಗಟ್ಟಿ ಮಾಡಿದ್ದೇ ಗೋಪಿ. 'ವಿದೇಶಿ ನೆಲದಲ್ಲಿ ನೀನು ಗೆದ್ದಾಗ, ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಮೊಳಗುತ್ತದೆ. ಆ ರಾಷ್ಟ್ರಗೀತೆಯಲ್ಲಿ ಅಸಂಖ್ಯಾತ ಭಾರತೀಯರ ಪ್ರಾರ್ಥನೆ ಇದೆ. ಆಡುವ ಸಮಯದಲ್ಲಿ ಇದನ್ನೆಲ್ಲಾ ನೆನಪಿಸ್ಕೋ. ಗೆಲ್ಲುವ ಹುಮ್ಮಸ್ಸು ತಾನಾಗಿಯೇ ಬಂದು ಬಿಡುತ್ತೆ' ಎಂದು ಸೈನಾಳಿಗೆ ಹೇಳಿಕೊಟ್ಟಿದ್ದೇ ಗೋಪಿ. ರಾಷ್ಟ್ರಗೀತೆಯ ಕೊನೆಯಲ್ಲಿ 'ಜಯ ಜಯ ಜಯಹೇ' ಎಂದು ಕೇಳುವಾಗೆಲ್ಲಾ ನಾನು ಹೊಸ ಉತ್ಸಾಹವನ್ನು ಪಡೆಯುತ್ತೇನೆ ಅಂತಾಳೆ ಸೈನಾ. ಆಡಬೇಕೂ! ಮೊದಲೇ ನೋಡಬೇಕು! ಇಷ್ಟೇ ಅಲ್ಲ, ಪಂದ್ಯಕ್ಕಿಂತ ಮೊದಲು ತನ್ನ ಎದುರಾಳಿಯ ಆಟವನ್ನು ಲ್ಯಾಪ್ಟಾಪ್ನಲ್ಲಿ ನೋಡುವ ಮೂಲಕ ಆಕೆಯ ಎಲ್ಲ ಟ್ರಿಕ್ಗಳನ್ನು ಅರಿತುಕೊಳ್ಳುತ್ತಾಳೆ ಸೈನಾ. ಇದರಿಂದ ಮೈದಾನಕ್ಕಿಳಿಯುವ ಮುನ್ನ ಆತ್ಮವಿಶ್ವಾಸ ಬರುತ್ತದೆ. ನಮ್ಮ ಎದುರಾಳಿ ಎಷ್ಟೇ ಬಲಿಷ್ಠವಾಗಿರಲಿ, ಅವರನ್ನು ಸದೆ ಬಡಿಯಬೇಕಾದರೆ ಅವರ ಎಲ್ಲ ಚಲನವಲನಗಳತ್ತ ಗಮನ ಹರಿಸಲೇ ಬೇಕು ಎಂಬುದನ್ನು ಈಕೆಗೆ ಗೋಪಿಯೇ ಹೇಳಿಕೊಟ್ಟಿರುವುದು. ಚಾಕೊಲೆಟ್ ಗರ್ಲ್ ಸೈನಾಳಿಗೆ ಚಾಕಲೇಟ್ ಮೇಲೆ ತುಂಬಾ ಪ್ರೀತಿ. ಆದರೇನು ಮಾಡುವುದು ಗೋಪಿ ಭಯ್ಯಾ ಬಿಡಲ್ಲ. 'ಚಾಕೊಲೆಟ್ ತಿಂದರೆ ಡುಮ್ಮಿ ಆಗ್ತೀಯಾ. ಆಟಗಾರರು ತಮ್ಮ ಆಹಾರದ ಬಗ್ಗೆ ನಿಯಂತ್ರಣದಲ್ಲಿರಬೇಕು. ಸಾಕಷ್ಟು ಎನರ್ಜಿ ನೀಡುವ ಆಹಾರಗಳನ್ನೇ ತಿನ್ನಬೇಕು' ಎಂಬುದು ಗೋಪಿ ನಿರ್ದೇಶಿಸಿದ್ದರು. ಆದರೂ ಗೋಪಿಯ ಕಣ್ತಪ್ಪಿಸಿ ಸೈನಾ ಚಾಕಲೇಟ್ ತಿನ್ನುತ್ತಿದ್ದಳಂತೆ! ಪಂದ್ಯ ಗೆದ್ದರಂತೂ ಎರಡ್ಮೂರು ಐಸ್ಕ್ರೀಂ ತಿನ್ನುವ ಮೂಲಕವೇ ಸೈನಾ ಸಂಭ್ರಮಾಚರಣೆ ಮಾಡುತ್ತಿದ್ದಳು. ಚಾಕೊಲೆಟ್, ಐಸ್ಕ್ರೀಂ ಎಷ್ಟು ಇಷ್ಟವೋ ಕಾರು ಅಂದರೆ ಸೈನಾಗೆ ಅಷ್ಟೇ ಇಷ್ಟ. ಅದರಲ್ಲೂ ಅಂದ್ರೆ ತುಂಬಾ ಇಷ್ಟ. ಹೈದ್ರಾಬಾದ್ನ ರಸ್ತೆಯಲ್ಲಿ ಕಾರು ಓಡಿಸುವುದೇ ಖುಷಿ ಅಂತಾಳೆ ಸೈನಾ. ಅಮ್ಮನ ಏಟು, ಅಪ್ಪನ ಸಂಯಮ ಹರ್ವೀರ್ ಹೇಳುವಂತೆ ಸೈನಾಗೆ ಹಠ ಜಾಸ್ತಿ. ಆಕೆಯ ಅಮ್ಮನೂ ಹಾಗೆ. ಯಾವತ್ತೂ ಸೋಲೊಪ್ಪುವುದಿಲ್ಲ. ಉಷಾರಾಣಿ ಮಗಳ ಎಲ್ಲ ಕಾರ್ಯದಲ್ಲಿಯೂ ನಿಗಾ ವಹಿಸುತ್ತಾರೆ. ಸೈನಾಳನ್ನು ಪಂದ್ಯವಾಡಲು ಕರೆದುಕೊಂಡು ಹೋಗುವ ವೇಳೆ ಬ್ಯಾಡ್ಮಿಂಟನ್ ವಿಷಯ ಬಿಟ್ಟರೆ ಬೇರೆ ಯಾವ ವಿಷಯವನ್ನೂ ಆಕೆ ಸೈನಾ ಜತೆ ಚರ್ಚಿಸುವುದಿಲ್ಲ. ಪಂದ್ಯ ಸೋತರೆ ಮುಗಿಯಿತು. ನೀನ್ಯಾಕೆ ಚೆನ್ನಾಗಿ ಆಡಿಲ್ಲ? ಎಷ್ಟೊಂದು ತಪ್ಪು ಮಾಡಿದ್ದೀಯಾ? ಎಂದು ಕಪಾಳಕ್ಕೆ ಬಾರಿಸಿದ್ದೂ ಇದೆ. ಉಷಾರಾಣಿ ಯಾವತ್ತೂ ತನ್ನ ಮಗಳು ನನ್ನಿಂದ ತುಂಬಾ ಮುಂದೆ ಹೋಗಬೇಕು. ನನಗೆ ಮಾಡಲು ಸಾಧ್ಯವಾಗದೇ ಇರುವುದನ್ನು ಅವಳು ಮಾಡಬೇಕು ಎಂದು ಆಶಿಸುವ ಅಮ್ಮ. ಆದಾಗ್ಯೂ, ಸೈನಾಗೆ ಅಪ್ಪ ಎಂದರೆ ತುಂಬಾ ಅಚ್ಚುಮೆಚ್ಚು. ಹರ್ವೀರ್ ಹೇಳುವಂತೆ 'ನನ್ನ ಸೈನಾ ನನ್ನಂತೆಯೇ ಇದ್ದಾಳೆ. 'ಪಿತೃಮುಖಿ ಸದಾಸುಖಿ'. ನಿಮ್ಮ ಮಗಳೇನು ಮಾಡುತ್ತಾಳೆ ಎಂದು ಯಾರಾದರೂ ಕೇಳಿದರೆ ನಾನು ಹೇಳುವ ಉತ್ತರ ಇಷ್ಟೇ -ಅವಳು ಆಡ್ತಾಳೆ.' ಗೋಪಿ-ಸೈನಾ ಬ್ರೇಕ್ಅಪ್ ಸೈನಾ ಗೋಪಿಯ ಬ್ಯಾಡ್ಮಿಂಟನ್ ಅಕಾಡೆಮಿ ತೊರೆದು ಭಾಸ್ಕರ್ ಬಾಬು ಅವರಲ್ಲಿ ಅಕಾಡೆಮಿಯಲ್ಲಿ ತರಬೇತಿ ಮುಂದುವರಿಸಿದಾಗ ಮಾಧ್ಯಮಗಳಲ್ಲಿ ಅದು ದೊಡ್ಡ ಸುದ್ದಿಯಾಗಿತ್ತು. ಸೈನಾಳನ್ನು ಉತ್ತಮ ಕ್ರೀಡಾಪಟುವನ್ನಾಗಿ ಮಾಡುವಲ್ಲಿ ಗೋಪಿಯ ಶ್ರಮ ಎಷ್ಟು ಇತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ ಸೈನಾ ಜಾಹೀರಾತುಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಸಮಯವನ್ನು ಕಳೆಯುವುದು ಗೋಪಿಗೆ ಇಷ್ಟವಿರಲಿಲ್ಲ. ಮಾತ್ರವಲ್ಲದೆ ಲ್ಯಾಪ್ಟಾಪ್ನಲ್ಲಿ ಬ್ರೌಸಿಂಗ್ ಮಾಡುವುದು, ರಾತ್ರಿಯೆಲ್ಲಾ ಮೊಬೈಲ್ನಲ್ಲಿ ಚಾಟ್ ಮಾಡುತ್ತಾ ಇರುವುದು ಇದೆಲ್ಲದಕ್ಕೂ ಗೋಪಿ ನಿಷೇಧ ಹೇರಿದ್ದರು. 'ಪ್ರತಿಯೊಬ್ಬ ಆಟಗಾರನೂ ತನ್ನ ಅಮೂಲ್ಯ ಸಮಯವನ್ನು ಕ್ರೀಡೆಗಾಗಿ ಮೀಸಲಿಡಬೇಕು. ಜಾಹೀರಾತುಗಳಲ್ಲಿ ಅತಿಯಾಗಿ ತೊಡಗಿಕೊಳ್ಳುವುದರಿಂದ ಅಭ್ಯಾಸ ಸಮಯ ಕಡಿಮೆಯಾಗುತ್ತದೆ. ಪರಿಣಾಮ ಸೋಲು' ಎಂಬುದು ಅವರ ನಿಲುವಾಗಿತ್ತು. ಹೀಗೆ ರ್ಯಾಂಪ್ಗಳಲ್ಲಿ, ಜಾಹೀರಾತುಗಳಲ್ಲಿ ಸೈನಾ ಹೆಚ್ಚಾಗಿ ಕಾಣಿಸಿಕೊಂಡ ಸಂದರ್ಭದಲ್ಲೇ ಸೈನಾ ಸೋಲನ್ನು ಅನುಭವಿಸಿದ್ದು. ಇದಾದ ನಂತರ ಗೋಪಿಯ ಅಕಾಡೆಮಿ ತೊರೆದ ಸೈನಾ ಕೆಲವು ಕಾಲ ಭಾಸ್ಕರ್ ಬಾಬು ಬಳಿ ತರಬೇತಿ ಪಡೆದಳು. ಮತ್ತೇನಾಯಿತೋ ಗೊತ್ತಿಲ್ಲ, ಒಂದು ದಿನ ಗೋಪಿ ಬಳಿಗೆ ಬಂದ ಸೈನಾ 'ನನ್ನಲ್ಲಿ ಏನೂ ಕೇಳ್ಬೇಡಿ, ನನ್ನನ್ನು ವಾಪಸ್ ಕರೆದುಕೊಳ್ಳಿ' ಎಂದು ಹೇಳಿದಳು. ಇದೆಲ್ಲಾ ನಡೆದದ್ದು 2011 ಮೇ ತಿಂಗಳಲ್ಲಿ. ಗೋಪಿ ಸೈನಾಳನ್ನು ಸ್ವೀಕರಿಸಿ, ಆಕೆಯನ್ನು ಒಲಿಂಪಿಕ್ಸ್ಗೆ ಸಜ್ಜುಗೊಳಿಸಿದರು. ಮತ್ತೆ ನಡೆದದ್ದೆಲ್ಲಾ ಇತಿಹಾಸ. ಒಲಿಂಪಿಕ್ಸ್ ಒಲಿದಾಗ ಹಲವಾರು ಪ್ರಶಸ್ತಿಗಳನ್ನು ಬಾಚಿರುವ ಸೈನಾಗೆ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲಬೇಕು ಎಂಬುದೇ ಮಹತ್ತರವಾದ ಆಸೆಯಾಗಿತ್ತು. ಆದರೆ ದಕ್ಕಿದ್ದು ಕಂಚಿನ ಪದಕ. ಏತನ್ಮಧ್ಯೆ, ಒಲಿಂಪಿಕ್ಸ್ನಲ್ಲಿ ಚೀನಾದ ವಾಂಗ್ ಕ್ಸಿನ್ಗೆ ಗಾಯವಾದ ಕಾರಣ ಆಟ ನಿಲ್ಲಿಸಿದ್ದರಿಂದ ಆಕಸ್ಮಿಕವಾಗಿ ಸೈನಾಳಿಗೆ ಪದಕ ಸಿಕ್ಕಿದೆ ಎಂದವರೇ ಹೆಚ್ಚು. ಪದಕ ಗೆದ್ದು ಸಂಭ್ರಮಿಸಿದಾಗ, ಅದು 'ಅದೃಷ್ಟದ ಪದಕ' ಎಂದು ವಾದಿಸಿದವರೂ ಇದ್ದಾರೆ. ಆದರೆ 'ಇದನ್ನು ಅದೃಷ್ಟದ ಪದಕ ಎನ್ನಬೇಡಿ, ಇದರ ಹಿಂದೆ 13 ವರ್ಷಗಳ ಕಠಿಣ ಪ್ರಯತ್ನವಿದೆ' ಎಂದು ಸೈನಾ ಖಡಕ್ಕಾಗಿಯೇ ಉತ್ತರಿಸುತ್ತಾಳೆ. 'ಹೌದು, ಸೈನಾಳಿಗೆ ಲಭಿಸಿದ್ದು ಅದೃಷ್ಟದ ಪದಕವಲ್ಲ. ಆಕೆ ಅದಕ್ಕಾಗಿ ಅಷ್ಟೊಂದು ಪರಿಶ್ರಮ ಪಟ್ಟಿದ್ದಾಳೆ. ಅವಳ ವಯಸ್ಸಿನ ಮಕ್ಕಳೆಲ್ಲಾ ಬೊಂಬೆ ಜತೆ ಆಡುತ್ತಿದ್ದರೆ, ಅವಳು ಮೈದಾನದಲ್ಲಿ ಬೆವರು ಸುರಿಸಿದ್ದಾಳೆ. ನಾನು ಆಕೆಗೆ ಬೊಂಬೆ ತಂದುಕೊಡುವ ಬದಲು ಕೈಯಲ್ಲಿ ರ್ಯಾಕೆಟ್ ಹಿಡಿಸಿದ್ದೇನೆ. ಇದನ್ನೆಲ್ಲಾ ನೆನೆಯುವಾಗ ಭಾವುಕನಾಗುತ್ತೇನೆ. ಹೆಣ್ಣು ಮಗಳು ಹುಟ್ಟಿದ್ದಾಳೆಂದರೆ ಅಸಡ್ಡೆ ತೋರುವವರು ನನ್ನ ಮಗಳನ್ನು ನೋಡಿ ಕಲಿಯಬೇಕು. ಅವಳು ನಮ್ಮ ಹೆಮ್ಮೆ' ಎಂದು ಮತ್ತೆ ಮತ್ತೆ ಹೇಳುವಾಗ ಹರ್ವೀರ್ನ ಮುಖದಲ್ಲಿ ಸಂತೃಪ್ತಿ ಮೂಡುತ್ತದೆ. ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ತಾಯ್ನಾಡಿಗೆ ಮರಳಿದಾಗ ಸೈನಾ ಹೇಳಿದ್ದು 'ನಾನೊಬ್ಬಳು ಸಾಧಾರಣ ಹೆಣ್ಮಗಳು. ನನ್ನ ಈ ಸಾಧನೆಗೆ ನಿಮ್ಮೆಲ್ಲರ ಪ್ರಾರ್ಥನೆ ಹಾರೈಕೆಗಳು ಸಾಥ್ ನೀಡಿವೆ. ನನ್ನ ಅಪ್ಪ, ಅಮ್ಮ, ಕೋಚ್ ಗೋಪಿಚಂದ್ರ ಬೆಂಬಲದಿಂದಾಗಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಜಗತ್ತಿನ ಎಲ್ಲ ಹೆಣ್ಮಕ್ಕಳಿಗೂ ಈ ರೀತಿಯ ಪ್ರೀತಿ ಮತ್ತು ಬೆಂಬಲ ಸಿಗುವುದಿಲ್ಲ. ಆ ವಿಷಯದಲ್ಲಿ ನಾನು ಲಕ್ಕಿ.' ಸೈನಾ ತಿಂದೇಬಿಟ್ಳು ಮೀನಾ! ಅಂದಹಾಗೆ ಸೈನಾ ಪಕ್ಕಾ ಸಸ್ಯಹಾರಿ. ಅಂದೊಮ್ಮೆ ಏನಾಯ್ತು ಅಂದ್ರೆ ಚೀನಾದ ಹೊಸವರ್ಷದ ದಿನದಂದು ಸೈನಾ ಮತ್ತು ಗೋಪಿ ರೆಸ್ಟೋರೆಂಟ್ಗೆ ಹೋದಾಗ ಅಲ್ಲಿ ನಾನ್ವೆಜ್ ಮಾತ್ರ ಇತ್ತು. ಆ ದಿನ ವೆಜ್ ಹುಡುಕಿಕೊಂಡು ಹೋಗುವಷ್ಟು ಸಮಯವೂ ಇರಲಿಲ್ಲ. ಗೋಪಿ ಸೈನಾಳಿಗೆ ಮೀನು ತಿನ್ನುವಂತೆ ಹೇಳಿದ್ರು. ನೋಡುತ್ತಿದ್ದಂತೆಯೇ ಸೈನಾ ನಾನ್ವೆಜ್ ತಿಂದು ಬಿಟ್ಟಳು. ನಾನು ತಿನ್ನಲ್ಲ. ನೀವ್ಯಾಕೆ ನನ್ನನ್ನು ನಾನ್ವೆಜ್ ತಿನ್ನಲು ಒತ್ತಾಯಿಸುತ್ತಿದ್ದೀರಾ? ಎಂಬ ಪ್ರಶ್ನೆಯನ್ನೂ ಸೈನಾ ಗೋಪಿಗೆ ಕೇಳಿಲ್ಲ. ಗೋಪಿ ಭಯ್ಯಾ ಹೇಳಿದ್ರು...ನಾನು ತಿಂದೆ ಅಷ್ಟೇ. ಗೋಪಿ ಏನೇ ಹೇಳಲಿ ಅದನ್ನು ಶಿರಸಾ ಪಾಲಿಸುವ ವಿಧೇಯ ಶಿಷ್ಯೆ ಸೈನಾ ಎಂಬುದಕ್ಕೆ ಇನ್ನೊಂದು ಉದಾಹರಣೆ ಬೇಕೆ? -ರಶ್ಮಿ ಕಾಸರಗೋಡು (ಸಖಿ ಪಾಕ್ಷಿಕದಲ್ಲಿ ಪ್ರಕಟವಾದ ಬರಹ)