ಅಗಸ್ಟ್ ಅಪಿಯರೆನ್ಸ್ ಆಗಸ್ಟ್ ಆಗಮಿಸುತ್ತಿದಂತೆಯೇ ಚಿತ್ರ ಸಂಭ್ರಮ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ.. ಆಗಸ್ಟ್ ಆಗಮಿಸುತ್ತಿದಂತೆಯೇ ಚಿತ್ರ ಸಂಭ್ರಮ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಮೊದಲ ವಾರದಲ್ಲೇ ಗಾಂಧಿನಗರ ಬರಪೂರ ಮಳೆ ಕಂಡಿದೆ. ಒಂದಲ್ಲ ಎರಡಲ್ಲ ನಾಲು ಮಳೆಗಳನ್ನು ನೋಡಿದೆ. ಎಲ್ಲಿ ಅತಿವೃಷ್ಟಿಯಾಗಿಬಿಡುತ್ತದೋ ಎನ್ನುವ ಆತಂಕ ಮಾತ್ರ ಚಿತ್ರ ಪಂಡಿತರನ್ನು ಕಾಡುತ್ತಿಲ್ಲ ಎಂಬುದೇ ಸಂತಸದ ಸಂಗತಿ. ಮೂರು ಹೊಸ ಮಳೆಯಾದರೆ ಉಳಿದಂತೆ ಒಂದು ಹಳೇ ಮಳೆ. ಅಂದಹಾಗೆ ಇದು ಪ್ರಕೃತಿಯ ಮಳೆ ಅಲ್ಲ. ಸಿನಿ ಮಳೆ. ಹೌದು ಮೊದಲ ವಾರದಲ್ಲೇ ನಾಲ್ಕು ಚಿತ್ರಗಳು ಬಿಡುಗಡೆಯಾಗಿವೆ. ಡಾ.ರಾಜ್ ಕುಮಾರ್ ಅಭಿನಯದ 'ನಾನೊಬ್ಬ ಕಳ್ಳ' ಚಿತ್ರ ಮರು ಬಿಡುಗಡೆಯಾಗಿದ್ದರೆ, 'ಬಾಸು ಅದೇ ಹಳೇ ಕಥೆ', 'ಪಂಗನಾಮ', '143' ಚಿತ್ರಗಳಿಗೆ ಪ್ರಥಮ ಬಿಡುಗಡೆ. ಗಾಂಧಿನಗರದ ಈ ಬಿಡುಗಡೆಯ ಸಂಭ್ರಮ ನೋಡಿದವರು ಚಿತ್ರೋದ್ಯಮಕ್ಕೆ ನಿಜವಾದ ಅರ್ಥದಲ್ಲಿ ಆಗಸ್ಟ್ ಎಂದರೆ ಬ್ರಿಟಿಷರಿಂದ ದೇಶಕ್ಕೆ ಬಿಡುಗಡೆ ಸಿಕ್ಕಷ್ಟೆ ಸಂಭ್ರಮ ಎನಿಸಿದೆ. ಅಷ್ಟರ ಮಟ್ಟಿಗೆ ಆಗಸ್ಟ್ ಚಂದನವನಕ್ಕೆ ಅದೃಷ್ಟದ ಮಾಸ. ಸ್ವಾತಂತ್ರ್ಯ ಎಂಬುದು ಹಾಲಿವುಡ್ ಪಾಲಿಗೆ 'ದಿ ಗ್ರೇಟ್ ಎಸ್ಕೇಪ್‌' ನಮ್ಮೂರಿನ ಚಿತ್ರದ್ಯೋಮಕ್ಕೆ ಅದು 'ಬಿಡುಗಡೆ' ಸಂಭ್ರಮ. ಎರಡೂ ಒಂದೇ ಆದರೂ ನೆಲೆಗಟ್ಟು ಮಾತ್ರ ಬೇರೆ. ಹಾಗೆ ಕಥಾ ಜಗತ್ತೂ ಭಿನ್ನ. ಇಬ್ಬರಿಗೂ ಸಿನಿ ತೆರೆಯಿಂದ ಎಸ್ಕೇಪ್ ಆಗುವ ಕನಸು. ಸದ್ಯಕ್ಕೆ ಈ ಕನಸು ಕನ್ನಡದಲ್ಲಿ ಜೋರಾಗಿದೆ. ತೆರೆಯ ಮೇಲಿನ ನಮ್ಮವರ ಸಾಹಸಗಳಿಗೆ ಬಿಡುಗಡೆಯ ಮೋಕ್ಷವಂತೂ ದೊಡ್ಡ ಮಟ್ಟದಲ್ಲಿ ದೊರೆತಿದೆ. ಇದಕ್ಕೆ ಸಾಕ್ಷಿ ಮೊದಲ ವಾರದಲ್ಲಿ ತೆರೆಕಂಡ ಮೂರು ಪ್ಲಸ್ ಒಂದು ಚಿತ್ರಗಳು. ಇಷ್ಟೂ ಚಿತ್ರಗಳ ಪೈಕಿ ಯಾವ ಚಿತ್ರ ಎದ್ದೇಳುತ್ತೋ, ಯಾವ ಸಿನಿಮಾ ಪಾಳಕ್ಕೆ ಸೇರುತ್ತದೋ ಎನ್ನುವ ಭವಿಷ್ಯವಾಣಿ ಪ್ರೇಕ್ಷಕನ ಕೈಯಲ್ಲಿ ಭದ್ರವಾಗಿದೆ. ಆದರೂ ಪ್ರೇಕ್ಷಕರ ಮೇಲೆ ಮತ್ತಷ್ಟು ಭಾರ ಹಾಕಿ ಗಾಂಧಿನಗರದ ಮಂದಿ ಚಿತ್ರಮಂದಿರಗಳ ಮುಂದೆ ತಮ್ಮ ತಮ್ಮ ಚಿತ್ರ ಡಬ್ಬಾಗಳನ್ನು ಹಿಡಿದು ನಿಂತಿದ್ದಾರೆ. ಹಾಗೆ ಸಾಲಿನಲ್ಲಿ ನಿಂತಿರುವ ಚಿತ್ರಗಳ ಪೈಕಿ ಮೊದಲು ಕಾಣುವುದು ಶರಣ್ ಅಭಿನಯದ 'ಅಧ್ಯಕ್ಷ' ಚಿತ್ರ ಮುಂದಿನ ವಾರವೇ ತೆರೆ ಕಾಣುತ್ತಿದೆ. ಇದರ ನಂತರ ನಟಿ ಪೂಜಾಗಾಂಧಿ ಅಭಿನಯದ 'ಅಭಿನೇತ್ರಿ', ನಟ ಪುನೀತ್ ರಾಜ್‌ಕುಮಾರ್‌ರ 'ಪವರ್‌', ಗಾಯಕ ರಾಜೇಶ್ ಕೃಷ್ಣನ್‌ರ 'ಮೆಲೋಡಿ', ಧ್ರುವ ಸರ್ಜಾರ 'ಬಹದ್ದೂರ್‌' ಮುಂತಾದ ಚಿತ್ರಗಳು ಮೊದಲ ಕಂತಿನಲ್ಲಿ ತೆರೆಗೆ ಬರುತ್ತಿವೆ. ಈ ಚಿತ್ರಗಳ ನಡುವೆ ಗಾಂಧೀಜಿ ಕನಸು ಎನ್ನುವ ಚಿತ್ರಕ್ಕೂ ಮುಂದಿನ ವಾರವೇ ಬಿಡುಗಡೆ ಸಂಭ್ರಮ. ಇನ್ನೂ ಗಣೇಶ್ ಅಭಿನಯದ 'ಖುಷಿ' ಖುಷಿಯಾಗಿ, ದರ್ಶನ್‌ರ 'ಅಂಬರೀಶ', ಪ್ರಜ್ವಲ್ ದೇವರಾಜ್‌ರ 'ನೀನಾದೆನಾ', ಪ್ರೇಮ್ 'ಫೇರ್ ಆಂಡ್ ಲವ್ಲಿ', ಶಿವರಾಜ್ ಕುಮಾರ್ ಅವರ 'ಬೆಳ್ಳಿ', ಜಗ್ಗೇಶ್ ನಟನೆಯ 'ಸಾಫ್ಟ್‌ವೇರ್ ಗಂಡ', ಸುಮಂತ್‌ರ ತಿರುಪತಿ ಎಕ್ಸ್‌ಪ್ರೆಸ್, ರವಿಚಂದ್ರನ್ ಅವರ 'ಪರಮಶಿವ', ವಿಜಯ್ ನಟನೆಯ ಸಿಂಹಾದ್ರಿ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಎರಡನೇ ಕಂತಿನಲ್ಲಿ ಡಬ್ಬಾದಿಂದ ಹೊರ ಬರುವ ಸಾಧ್ಯತೆಗಳಿವೆ. ಉಳಿದಂತೆ ನಮಸ್ತೆ ಮೇಡಂ, ತಿಪ್ಪಜ್ಜಿ ಸರ್ಕಲ್, ಮಳೆ, ರುದ್ರ ತಾಂಡವ, ವಾಸ್ತು ಪ್ರಕಾರ, ಕೆಂಡಸಂಪಿಗೆ ಮುಂತಾದವು ತೆರೆಯ ಬಾಗಿಲಿನ ಮುಖ ನೋಡಲಿವೆ. ಆಗಸ್ತ್ ತಿಂಗಳು ಸೇರಿದಂತೆ ಮುಂದಿನ ಮೂರು ತಿಂಗಳಲ್ಲಿ ತೆರೆ ಕಾಣಲಿರುವ ಈ ಎಲ್ಲ ಚಿತ್ರಗಳ ಪೈಕಿ 'ಅಧ್ಯಕ್ಷ', ಅಭಿನೇತ್ರಿ, ಪವರ್, ಬಹದ್ದೂರ್, ಅಂಬರೀಶ, ಬೆಳ್ಳಿ, ಕೆಂಡ ಸಂಪಿಗೆ ಚಿತ್ರಗಳ ಮೇಲೆ ಹೆಚ್ಚು ನಿರೀಕ್ಷೆ ಇದೆ. ಇವುಗಳ ಹೊರತಾಗಿಯೂ ಈಗ ಗಮನ ಸೆಳೆಯದ ಚಿತ್ರಗಳೂ ಬಿಡುಗಡೆಯ ನಂತರ ಮೋಡಿ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಒಟ್ಟಿನಲ್ಲಿ ಚಿತ್ರರಂಗಕ್ಕೆ ಆಗಸ್ಟ್ ನಿಜವಾದ ಅರ್ಥದಲ್ಲಿ ಬಿಡುಗಡೆಯ ಸಂಭ್ರಮ ನೀಡಿದೆ. -ಆರ್. ಕೇಶವಮೂರ್ತಿ