ಹಾರರ್ ಹ್ಯಾಲೋವೀನ್ ಆ ರಾತ್ರಿಯಿಡಿ ಮನುಷ್ಯರು ಮನುಷ್ಯರಾಗಿ ಕಾಣೋದೇ ಇಲ್ಲ. ಕಂಡಕಂಡಲ್ಲಿ ಕಾಣಸಿಗುವವರೆಲ್ಲಾ ಒಂದಲ್ಲಾ ಒಂದು... ಆ ರಾತ್ರಿಯಿಡೀ ಮನುಷ್ಯರು ಮನುಷ್ಯರಾಗಿ ಕಾಣೋದೇ ಇಲ್ಲ. ಕಂಡಕಂಡಲ್ಲಿ ಕಾಣಸಿಗುವವರೆಲ್ಲಾ ಒಂದಲ್ಲಾ ಒಂದು ಮಾದರಿಯ ವ್ಯಾಂಪೈರ್ ಉಡುಗೆಯಲ್ಲೇ ಎದುರಾಗುತ್ತಾರೆ. ಬೀದಿಬೀದಿಗಳಲ್ಲಿ ನಾನಾ ಮಾದರಿಯ ಪಿಶಾಚಿಗಳು, ದೆವ್ವಗಳು, ಮಾಟಗಾತಿಯರು ಹೀಗೆ ಸಾವಿರಾರು ಬಗೆಯ ಅವತಾರಗಳಲ್ಲಿ ಜನರ ಮೆರವಣಿಗೆ ಸಾಗಿರುತ್ತದೆ. ತಡರಾತ್ರಿಯಾದಂತೆಲ್ಲ ಈ ವಿಲಕ್ಷಣ ಹಬ್ಬ ಮತ್ತಷ್ಟು ರಂಗೇರುತ್ತದೆ. ಶತಶತಮಾನಗಳಿಂದ ಆಚರಿಸಿರಕೊಂಡು ಬಂದಿರುವ ಈ ಹಬ್ಬಕ್ಕೆ ಅಮೆರಿಕೆ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ 'ಹ್ಯಾಲೋವೀನ್‌' ಎನ್ನುತ್ತಾರೆ. ಅದೆಂದೋ 16-17ನೇ ಶತಮಾನದಲ್ಲಿ ನವೆಂಬರ್ 1 ರಂದು ಯುರೋಪ್‌ನ ಮಧ್ಯ ಬ್ರಿಟನ್ ಭಾಗದಲ್ಲಿ ಸುಗ್ಗಿ ಹಬ್ಬ ಆಚರಿಸುತ್ತಿದ್ದಂತೆ. ಇದೇ ಸುಗ್ಗಿಯ ಸಮಯಕ್ಕೆ ಸರಿಯಾಗಿ ಭೂಮಿಗೂ ಸ್ವರ್ಗಕ್ಕೂ ಸೇತುವೆಯೊಂದು ನಿರ್ಮಾಣವಾಗುತ್ತೆ ಎಂದು ಜನ ನಂಬಿದ್ದರು. ಅಗಲಿದ ಅವರವರ ಸಂಬಂಧಿಗಳ ಪ್ರೇತಾತ್ಮಗಳು ಅಂದು ರಾತ್ರಿ ಈ ಸೇತುವೆ ಬಳಸಿ ಭೂಮಿಗೆ ಬರುತ್ತವೆಂಬುದೂ ಜನರ ನಂಬಿಕೆಯಾಗಿತ್ತು. ಆ ನಂಬಿಕೆಯಿಂದಲೇ ಹಿಂದಿನ ರಾತ್ರಿ ಅಂದರೆ, ಅಕ್ಟೋಬರ್ 31ರಂದು ಅವರವರ ಮನೆಗಳ ಮುಂದೆ ಪ್ರೇತಾತ್ಮಗಳಿಗಾಗಿ ವೈನ್, ಕುಕೀಸ್, ಮತ್ತಿತರೆ ತಿಂಡಿತಿನಿಸುಗಳನ್ನಿಡುತ್ತಿದ್ದರಂತೆ. ತಿಂದವರ್ಯಾರೇ ಆದರೂ ಹಿಂದಿನ ದಿನ ಇಟ್ಟಿದ್ದು ಮಾರನೇ ದಿನಕ್ಕೆ ಕಾಣ್ತ ಇರಲಿಲ್ಲವಂತೆ.. ಇದು ಪ್ರತಿವರ್ಷ ಹಾಗೇ ಮುಂದುವರಿದು ಸುಗ್ಗಿ ಹಬ್ಬಕ್ಕಿಂತಲೂ ಅದರ ಹಿಂದಿನ ದಿನವೇ ಹೆಚ್ಚಿನ ಪ್ರಾಮುಖ್ಯತೆ ಪಡೆದು 'ಹ್ಯಾಲೋವೀನ್‌' ಆಗಿ ರೂಪಗೊಂಡಿತು. ಈ ನಡುವೆ ಚರ್ಚ್‌ಗಳಲ್ಲಿ ಹಗಲಿರುಳು ಎಲ್ಲರಿಗಾಗಿ ಪ್ರಾರ್ಥಿಸುತ್ತಿದ್ದ ಅನೇಕ ಸಂತರು ಸಹ ಮರಣಿಸಿದ ನಂತರ, ಅವರ ಆತ್ಮಗಳು ಇದೇ ಹಬ್ಬದ ದಿನ ಭೂಮಿಗೆ ಬಂದು ಹೋಗುತ್ತವೆ ಎಂದೂ ನಂಬಿ ಅವರಿಗಾಗಿಯೂ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿ, ಕ್ಯಾಂಡಲ್‌ಗಳನ್ನು ಹಚ್ಚಿಡುವ ಸಂಪ್ರದಾಯ ರೂಢಿಗೆ ಬಂತು. ಇತ್ತ ಸ್ಕಾಟ್‌ಲೆಂಡ್, ಐರ್‌ಲೆಂಡ್, ಆಸ್ಟ್ರಿಯ ಭಾಗಗಳಲ್ಲಿ ಈ ದಿನವನ್ನು ಆತ್ಮಗಳ ದಿನವೆಂದೂ ಆಚರಿಸಲಾಗುತ್ತದೆ. ಪ್ರಮುಖವಾಗಿ ಕ್ರಿಶ್ಚಿಯನ್ ಸಂಪ್ರದಾಯದವರು ಸ್ಮಶಾನಗಳಿಗೆ ತೆರಳಿ ಅಗಲಿದ ಕುಟುಂಬ ಸದಸ್ಯರ ಗೋರಿಗಳ ಮುಂದೆ ಪ್ರಾರ್ಥನೆ ಸಲ್ಲಿಸುತ್ತಾರೆ. ಬದಲಾದ ಹ್ಯಾಲೋವೀನ್ ಟ್ರೆಂಡ್ ಕಾಲ ಕಳೆದಂತೆಲ್ಲ ಹ್ಯಾಲೋವೀನ್ ಹಬ್ಬದ ರೂಪವೂ ಬದಲಾಯ್ತು. ನಾಗರಿಕತೆ ಬೆಳೆದಂತೆಲ್ಲಾ ಆಧುನಿಕ ಲೇಪದೊಂದಿಗೆ ಹ್ಯಾಲೋವೀನ್ ಮತ್ತಷ್ಟು ಪ್ರಸಿದ್ಧವಾಯ್ತು. 50ರ ದಶಕದಿಂದೀಚೆಗೆ ಈ ಹಬ್ಬವನ್ನು ನೆಪವಾಗಿಟ್ಟುಕೊಂಡು ಚಿತ್ರವಿಚಿತ್ರ ಉಡುಗೆಗಳನ್ನು ಧರಿಸಿ, ಜನ ತಾವೇ ಪ್ರೇತಾತ್ಮಗಳಂತೆ ಸಿಂಗರಿಸಿಕೊಂಡು ಅವರಿವರ ಮನೆಗೆ ಭೇಟಿ ನೀಡಿ ಎಲ್ಲರೂ ಒಂದೆಡೆ ಸೇರುವ ಸಂಪ್ರದಾಯ ಬೆಳೆಸಿಕೊಂಡರು. ಭೂತ, ಪ್ರೇತ, ಪಿಶಾಚಿಗಳು, ವ್ಯಾಂಪೈರ್‌ಗಳು, ಪೈರೆಟ್‌ಗಳು, ಸ್ಕೆಲಿಟನ್, ಝೋಂಬಿಗಳು ಸೇರಿದಂತೆ ವಿಕೃತ ಆಕಾರಗಳಿರುವ, ಭಯ ಹುಟ್ಟಿಸುವಂಥ ಎಲ್ಲ ಮಾದರಿಯ ವೇಷಾವತಾರಗಳನ್ನು ಧರಿಸಿಕೊಂಡು ನಡುರಾತ್ರಿ ರಸ್ತೆಗಳಲ್ಲಿ ಸಂಚರಿಸುವುದು ಮತ್ತೊಂದು ಟ್ರೆಂಡ್ ಆಯ್ತು. ಈಗ ಅಕ್ಟೋಬರ್ ಮೊದಲ ವಾರದಿಂದಲೇ ಮನೆಮನೆಗಳಲ್ಲಿ ಹ್ಯಾಲೋವೀನ್ ಸಂಭ್ರಮ ಆರಂಭವಾಗತ್ತದೆ. ಹ್ಯಾಲೋವೀನ್ ಸಂಭ್ರಮ ಆರಂಭವಾಗುತ್ತದೆ. ಮನೆಯ ಕಿಟಕಿಗಳಿಗೆ, ಕಾಂಪೌಂಡ್ ಆವರಣದಲ್ಲಿ, ಮನೆಯ ಬಾಗಿಲುಗಳಿಗೆ ನಾನಾ ಮಾದರಿಯ ಪಿಶಾಚಿಗಳ ಚಿಹ್ನೆಗಳು, 'ಬಿವೇರ್ ಆಫ್ ಡೆವಿಲ್ಸ್....' ಮುಂತಾದ ಚಿತ್ರ ವಿಚಿತ್ರ ಬರಹಗಳು, ಮೂಳೆಗಳು ಮತ್ತು ತಲೆಬುರುಡೆ ಸಿಂಬಲ್‌ಗಳನ್ನು ನೇತುಹಾಕುವುದು ಎಲ್ಲವೂ ನಡೆದಿರುತ್ತದೆ. ಅಷ್ಟೇ ಅಲ್ಲ, ಕೆಲವರು ಮನೆಯ ಒಂದು ಕೋಣೆಯನ್ನು 'ದೆವ್ವದ ಮನೆ'ಯಂತೆ ಸಿದ್ಧಗೊಳಿಸಿರುತ್ತಾರೆ. ಮನೆಗೆ ಬಂದ ಅತಿಥಿಗಳನ್ನು ಈ 'ದೆವ್ವದ ಮನೆ'ಯಂತೆ ಸಿದ್ಧಗೊಳಿಸಿರುತ್ತಾರೆ. ಮನೆಗೆ ಬಂದ ಅತಿತಿಗಳನ್ನು ಈ 'ದೆವ್ವದಮನೆ'ಯೊಳಗೆ ಕರೆತಂದು, ಅಲ್ಲಿ ಸಿದ್ಧಪಡಿಸಲಾದ ಭಯಾನಕ ಮಾದರಿಗಳಿಂದ ಅವರನ್ನು ಹೆದರಿಸಿ ತಮಾಷೆ ಮಾಡಿ ಸಂತಸ ಹಂಚಿಕೊಳ್ಳುವರು. ಎಲ್ಲದರ ಜೊತೆಗೆ ಇಡಿ ತಿಂಗಳು ದೆವ್ವದ ಕಥೆಗಳನ್ನು ಹೇಳುವುದು, ಕೇಳುವುದು, ದೆವ್ವ ಪಿಶಾಚಿಗಳ ಸಿನಿಮಾಗಳನ್ನು ನೋಡುವುದು ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ ಹಗಲಿರುಳೂ ಅವುಗಳದ್ದೇ ಧ್ಯಾನ ಎಂಬಂತಾಗಿರುತ್ತೆ ಜನಜೀವನ. ಹ್ಯಾಲೋವೀನ್-'ಕಮಾಯಿ' ಇನ್ ಹ್ಯಾಲೋವೀನ್ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಸಹಸ್ರ ಮಾದರಿಯ ವೇಷಗಳು ಲಭ್ಯ. ಶಾಪಿಂಗ್ ಮಾಲ್‌ಗಳಲ್ಲಿ ಆನ್‌ಲೈನ್ ಶಾಪಿಂಗ್ ನೆಟ್‌ವರ್ಕ್‌ಗಳಲ್ಲಿ, ಎಲ್ಲ ವ್ಯಾಪಾರಿ ಸ್ಥಳಗಳಲ್ಲಿ ಬೇಕಾದ ಮಾದರಿಯ, ಬೇಕಾದ ಸೈಜಿನ ವೇಷಗಳು ಲಭ್ಯ. ಮಕ್ಕಳಿಗಂತೂ ನೆಚ್ಚಿನ ಕಾರ್ಟೂನ್ ಕ್ಯಾರೆಕ್ಟರ್‌ಗಳಾದ ನಿಂಜಾ ಯ್ಯಾವೆಂಜರ್ಸ್ , ಹ್ಯಾರಿಪಾಟರ್, ರಾಬಿನ್‌ಹುಡ್, ನೊಡಿ, ಸೂಪರ್ ಮ್ಯಾನ್, ಸ್ಪೈಜರ್‌ಮ್ಯಾನ್ ಕಾಸ್ಟ್ಯೂಮ್ಸ್‌ಗಳು ಕೈ ಬೀಸಿ ಕರೆಯುತ್ತವೆ. ಜೊತೆಗೆ ಮುಕವಾಡಗಳು, ಆಯುಧಗಳು, ಟೋಫನ್, ಜೆಲ್, ತಲೆಗೂದಲಿಗಾಗಿ ಬಣ್ಣಗಳು-ಎಲ್ಲವೂ ಒಂದೇ ಕಡೆ ರೆಡಿಯಾಗಿ ಸಿಗುತ್ತವೆ. ಕೆಲವರಂತೂ 'ಹಾಂಟೆಡ್ ಹೌಸ್‌', 'ಸ್ಕೇರಿ ಹೌಸ್‌'ಗಳನ್ನು ನಿರ್ಮಿಸಿ ಪ್ರದರ್ಶನಕ್ಕೆ ಟಿಕೆಟ್ ವ್ಯವಸ್ಥೆ ಮಾಡಿರುತ್ತಾರೆ. ಜನ ಹಣ ಕೊಟ್ಟು ಹೆದರಿಕೊಳ್ಳುತ್ತಾರೆ. ಈ ಹಬ್ಬವನ್ನು ಆಚರಿಸುವ ಎಲ್ಲ ರಾಷ್ಟ್ರಗಳಲ್ಲಿ ಕ್ರಿಸ್‌ಮಸ್ ನಂತರದ ಅತಿ ಹೆಚ್ಚು ವ್ಯಾಪಾರ ವ್ಯವಹಾರ ನಡೆಯುವ ಹಬ್ಬ ಎಂದರೆ ಹ್ಯಾಲೋವೀನ್. - ಅನಿಲ್ ಭಾರದ್ವಾಜ್, ಫೀನಿಕ್ಸ್, ಯುಎಸ್‌ಎ