ಹೊಸ ವರ್ಷಕ್ಕೆ ಹೊಚ್ಚ ಹೊಸ ಐಡಿಯಾ: ದುಡ್ಡು ಉಳಿಸಲು 20 ಅಡ್ಡದಾರಿಗಳು ಹೊಸ ವರ್ಷದ ಪಾರ್ಟಿ ಮುಗಿಸಿದ್ದೀರಿ.. ಹೊಸ ವರ್ಷದ ಪಾರ್ಟಿ ಮುಗಿಸಿದ್ದೀರಿ. ಈ ವರ್ಷ ಒಂದಷ್ಟು ಉಳಿತಾಯ ಮಾಡಲೇಬೇಕು ಎಂದು ಪ್ರತಿವರ್ಷ ನ್ಯೂ ಇಯರ್ ರೆಸಲ್ಯೂಷನ್ ಹಾಕಿಕೊಳ್ಳುತ್ತ ಬಂದಿದ್ದೀರಾದರೂ ಅದು ನಿಮ್ಮಿಂದ ಸಾಧ್ಯವಾಗಿಲ್ಲ ಎಂಬುದು ನಮಗೆ ಚೆನ್ನಾಗಿ ಗೊತ್ತು! ಉಳಿತಾಯ ಮಾಡುವುದು ಹೇಗೆ ಎಂದು ವಾರನ್ ಬಫೆಟ್ ಭಾಷಣ ಕೇಳಿ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಉಳಿತಾಯಕ್ಕಿರುವ ನೇರ ಮಾರ್ಗಗಳೆಲ್ಲ ಹೆಚ್ಚಿನ ಸಲ ಫಲ ನೀಡುವುದಿಲ್ಲ. ಏಕೆಂದರೆ ನಾವು ಅಷ್ಟು ಸೀರಿಯಸ್ಸಾಗಿ ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಉಳಿತಾಯಕ್ಕೆ ಅಡ್ಡದಾರಿ ಹಿಡಿಯಲೇಬೇಕು. ಅವೇನೂ ಕೆಟ್ಟ ದಾರಿಗಳಲ್ಲ. ನೇರವಾಗಿ ಸಾಧ್ಯವಾಗದ್ದನ್ನು ಪರೋಕ್ಷವಾಗಿ ಮಾಡಿ ತೋರಿಸುವ ದಾರಿಗಳು. ಅಂತಹ ಒಂದಷ್ಟು ಶಾರ್ಟ್‌ಕಟ್‌ಗಳು ಇಲ್ಲಿವೆ. ಇವುಗಳಲ್ಲಿ ಕನಿಷ್ಠ ಪಕ್ಷ ಐದನ್ನಾದರೂ ನೀವು ಫಾಲೋ ಮಾಡಿದರೆ ಮುಂದಿನ ವರ್ಷ ಇಷ್ಟೊತ್ತಿಗೆ ನಿಮ್ಮ ಕೈಲಿ ಒಂದಷ್ಟು ದುಡ್ಡು ಉಳಿದೇ ಉಳಿಯುತ್ತದೆ. ಆ ದುಡ್ಡನ್ನು ಏನು ಮಾಡಬೇಕು ಎಂಬುದನ್ನು ಮುಂದಿನ ವರ್ಷ ಹೇಳುತ್ತೇವೆ! ದುಡ್ಡು ಉಳಿಸುವುದು ಸುಲಭವಲ್ಲ. ಅದರಲ್ಲೂ, ಖರ್ಚು ಮಾಡಲು ಲಕ್ಷಾಂತರ ದಾರಿಗಳಿರುವ ಈ ಕನ್‌ಸ್ಯೂಮರ್ ಯುಗದಲ್ಲಿ ಕಿಸೆ ಭದ್ರವಾಗಿಟ್ಟುಕೊಳ್ಳಲು ಬಹಳ ಕಷ್ಟಪಡಬೇಕಾಗುತ್ತದೆ. ನಮ್ಮ ದುಡ್ಡನ್ನು ಇನ್ಯಾರೋ ಕದ್ದುಕೊಂಡು ಹೋದರೆ ಪೊಲೀಸರಿಗೆ ಕಂಪ್ಲೇಂಟ್ ಕೊಡಬಹುದು. ಆದರೆ, ನಮ್ಮ ದುಡ್ಡನ್ನು ಪ್ರತಿದಿನ ನಾವೇ ಕದಿಯುತ್ತಿದ್ದರೆ ಯಾರು ನಮ್ಮ ನೆರವಿಗೆ ಬರುತ್ತಾರೆ? ಆ ಸ್ವಯಂ-ಕಳ್ಳತನ ನಿಲ್ಲಿಸಲು ಒಂದಷ್ಟು ದಾರಿಗಳಿವೆ. ಇವು ಮೇಲ್ನೋಟಕ್ಕೆ ತಮಾಷೆಯಾಗಿ ಕಂಡರೂ ಬಹಳ ಗಂಭೀರವಾಗಿ ಕೆಲಸಕ್ಕೆ ಬರುತ್ತವೆ. ಮಾಡಿ ನೋಡಿ. 1. ಯಜಮಾನಿಕೆ ಬಿಡಿ ನಿಮ್ಮನೆಯಲ್ಲಿ ಹೆಚ್ಚು ಖರ್ಚು ಮಾಡುವವರು ಯಾರು? ಗಂಡನೋ ಹೆಂಡತಿಯೋ? ಮೊದಲು ಇಬ್ಬರೂ ಕುಳಿತು ಇದನ್ನು ಬಗೆಹರಿಸಿಕೊಳ್ಳಿ. ಹೆಚ್ಚು ಖರ್ಚು ಮಾಡುವವರು ಯಾರು ಎಂಬುದರ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬಂದ ಮೇಲೆ ನಿಮ್ಮ ಜೀವನದ ಇನ್ನೊಂದು ಮಹತ್ವದ ನಿರ್ಧಾರ ಕೈಗೊಳ್ಳಿ. ಅದು- ದುಡ್ಡಿನ ಯಜಮಾನಿಕೆಯನ್ನು ಕಡಿಮೆ ಖರ್ಚು ಮಾಡುವವರಿಗೆ ವಹಿಸುವುದು. ಇದು ಸುಲಭದ ಕೆಲಸವಲ್ಲ. ಆದರೆ ಗ್ಯಾರೆಂಟಿ ವರ್ಕೌಟ್ ಆಗುತ್ತದೆ. ಕಡಿಮೆ ಖರ್ಚು ಮಾಡುವವರ ಕೈಗೆ ಯಜಮಾನಿಕೆ ಸಿಕ್ಕರೆ ಅವರು ಎಲ್ಲಾ ಖರ್ಚುವೆಚ್ಚಗಳಿಗೂ ಮೂಗುದಾರ ಹಾಕುತ್ತಾರೆ. ಈ ವಿಷಯದಲ್ಲಿ ಯಜಮಾನಿಕೆ ಬಿಟ್ಟುಕೊಡುವ ಸಂದರ್ಭ ಬಂದರೆ ಖುಷಿಯಿಂದ ಬಿಟ್ಟುಕೊಡಿ. ಕೊನೆಗೆ ಉಳಿಯುವುದು ನಿಮ್ಮ ದುಡ್ಡೇ. 2. ಷೇರು, ಮ್ಯೂಚುವಲ್ ಫಂಡ್ ಬಗ್ಗೆ ಹುಷಾರು ದಿಢೀರ್ ದುಡ್ಡು ಮಾಡುವ ಐಡಿಯಾ ಬಂತು ಅಂದರೆ ಎಲ್ಲರ ಗಮನ ಷೇರು ಮಾರ್ಕೆಟ್‌ನತ್ತ ಹೋಗುತ್ತದೆ. ಅದರಷ್ಟು ಅಪಾಯಕಾರಿ ಯಾವುದೂ ಇಲ್ಲ. ದುಡ್ಡು ಕಳೆಯುವ ಜಗತ್ತಿನ ಅತ್ಯಂತ ಪರಿಣಾಮಕಾರಿ ಉಪಾಯದಲ್ಲಿ ಷೇರು ಕೂಡ ಒಂದು. ಹಾಗಾದರೆ ಷೇರು ಮಾರ್ಕೆಟ್‌ನಲ್ಲಿ ಹಣ ಹಾಕಿ ಯಾರೂ ಉದ್ಧಾರವಾಗಿಲ್ಲವೇ? ಆಗಿದ್ದಾರೆ. ಆದರೆ ಅವರು ಷೇರು ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡುವ ದಂಧೆಯಲ್ಲೇ ಇರುವವರು. ನಿಮ್ಮ ಹಾಗೆ ಬೆಳಗಿನಿಂದ ಸಂಜೆಯವರೆಗೆ ಯಾವುದೋ ಆಫೀಸಿನಲ್ಲಿ ಮೈಮುರಿದು ದುಡಿಯುತ್ತ ಅದರಲ್ಲಿ ಉಳಿಸಿದ ಅಷ್ಟಿಷ್ಟು ಹಣವನ್ನು ಷೇರು ಮಾರ್ಕೆಟ್‌ನಲ್ಲಿ ಹಾಕುವ ಯಾರೂ ಅದರಿಂದ ಉದ್ಧಾರವಾದ ಉದಾಹರಣೆಯಿಲ್ಲ. ಏಕೆಂದರೆ, ಷೇರು ಮಾರ್ಕೆಟ್‌ನಲ್ಲಿ ದುಡ್ಡು ಹಾಕಿದರೆ ದಿನವಿಡೀ ಅದನ್ನು ಗಮನಿಸುತ್ತಿರಬೇಕಾಗುತ್ತದೆ. ಅದು ನಿಮಗೆ ಸಾಧ್ಯವಿಲ್ಲ. ಮ್ಯೂಚುವಲ್ ಫಂಡ್ ಹಣೆಬರಹವೂ ಇದೇ. ಆದರೆ ಬುದ್ಧಿವಂತಿಕೆಯಿಂದ ಮ್ಯೂಚುವಲ್ ಫಂಡ್ ಆಯ್ದುಕೊಂಡರೆ ಅದು ಷೇರಿನಷ್ಟು ಅಪಾಯಕಾರಿಯಲ್ಲ. 3. ಪಿಪಿಎಫ್, ಇನ್ಷೂರೆನ್ಸ್ ಕಡೆ ನೋಡಿ ಇವತ್ತಿನ ಪರಿಸ್ಥಿತಿಯಲ್ಲಿ ದುಡ್ಡು ಉಳಿಸಲು ಒಳ್ಳೆಯ ಮಾರ್ಗವೆಂದರೆ ಪಿಪಿಎಫ್, ಇನ್ಷೂರೆನ್ಸ್ ಹಾಗೂ ಎಫ್‌ಡಿಗಳು. ಅತಿ ಹೆಚ್ಚು ಹಾಗೂ ನಿಶ್ಚಿತ ರಿಟರ್ನ್ಸ್ ಇರುವುದು ಇವುಗಳಲ್ಲೇ. ಪಿಪಿಎಫ್‌ಗೆ ದುಡ್ಡು ಹಾಕಿದರೆ 15 ವರ್ಷ ವಾಪಸ್ ತೆಗೆಯಲು ಬರುವುದಿಲ್ಲ. ಆರ್‌ಡಿ ಕಟ್ಟುತ್ತಿದ್ದರೆ 5 ವರ್ಷ ದುಡ್ಡು ಅಲ್ಲೇ ಬೆಳೆಯುತ್ತಿರುತ್ತದೆ. ಮನಿ ಬ್ಯಾಕ್ ಲೈಫ್ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಹಣ ಹಾಕುವುದೂ ಒಳ್ಳೆಯ ಮಾರ್ಗ. ಎಫ್‌ಡಿ ಮಾಡುವುದು ಕೂಡ ಸುರಕ್ಷಿತವೇ. ನಿಮ್ಮಲ್ಲಿರುವ ಉಳಿತಾಯದ ಹಣವನ್ನೆಲ್ಲ ಇವುಗಳಲ್ಲಿ ಯಾವುದಾದರೂ ಒಂದರಲ್ಲೇ ಹಾಕಬೇಡಿ. ಇವೆಲ್ಲವುಗಳಿಗೂ ಹಂಚಿ ಹೂಡಿಕೆ ಮಾಡಿ. ಏನೇ ಖರ್ಚು ಬಂದರೂ ಇವುಗಳಲ್ಲಿ ಹಾಕಿರುವ ಹಣ ವಾಪಸ್ ತೆಗೆಯುವ ಮುನ್ನ ಹತ್ತು ಸಲ ಯೋಚಿಸಿ. 4. ಮೆಕ್‌ಡೊನಾಲ್ಡ್ ಬಗ್ಗೆ ಭಯವಿರಲಿ ಬೆಂಗಳೂರಿನಲ್ಲಿ ಲಕ್ಷಕ್ಕಿಂತ ಕಡಿಮೆ ಸಂಬಳ ಪಡೆಯುವವರ ದುಡ್ಡು ಹೆಚ್ಚಾಗಿ ಸೋರಿಹೋಗುವುದು ಎಲ್ಲಿ ಗೊತ್ತಾ? ಮೆಕ್‌ಡೊನಾಲ್ಡ್, ಪಿಜ್ಜಾಹಟ್, ಕೆಂಟಕಿ, ಕಾಫಿ ಡೇಯಲ್ಲಿ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಮಾಡುವ ಉದರ ಸೇವೆಯಲ್ಲಿ. ವಿಶೇಷವಾಗಿ ಹೆಂಡತಿಯರಿಗೆ ಹಾಗೂ ಮಕ್ಕಳಿಗೆ ಅಲ್ಲಿಗೆ ಹೋಗಿ ತಿನ್ನದಿದ್ದರೆ ವೀಕೆಂಡ್ ಕಳೆಯುವುದೇ ಇಲ್ಲ. ಹೆಂಡತಿ, ಮಕ್ಕಳ ಜೊತೆ ಇಲ್ಲಿಗೆ ಒಮ್ಮೆ ಎಂಟ್ರಿ ಕೊಟ್ಟರೆ ಮಿನಿಮಮ್ ಎರಡು ಸಾವಿರಕ್ಕೆ ಚಕ್ರ ಗ್ಯಾರಂಟಿ. ಇದರ ಬದಲು ಮಕ್ಕಳಿಗೆ ಫುಟ್‌ಪಾತ್ ತಿಂಡಿಯ ರುಚಿ ಹತ್ತಿಸಿ. ಹೆಂಡತಿ, ಮಕ್ಕಳ ಜೊತೆ ಅಲ್ಲಿಗೆ ಹೋಗಿ ಎಷ್ಟು ತಿಂದರೂ ಇನ್ನೂರು ರೂಪಾಯಿ ದಾಟುವುದಿಲ್ಲ. ಆದರೆ, ಸ್ವಲ್ಪ ಕ್ಲೀನಾಗಿರುವ ಫುಟ್‌ಪಾತ್ ಅಂಗಡಿಗಳಿಗೆ ಮಾತ್ರ ಹೋಗಿ. ಇಲ್ಲವಾದರೆ ಪಿಜ್ಜಾಹಟ್‌ಗೆ ಹಾಕುವ ದುಡ್ಡು ಆಸ್ಪತ್ರೆಗೆ ಸುರಿಯಬೇಕಾದೀತು. ಅದೇನೋ ಅಂತಾರಲ್ಲ, ಎಣ್ಣೆಯಲ್ಲಿ ಬಂದ ದುಡ್ಡು ಬೆಣ್ಣೆಯಲ್ಲಿ ಹೋಯ್ತು ಅಂತ. 5. ಸಾಲ ಮಾಡಿ, ಆದರೆ ತುಪ್ಪ ತಿನ್ನಬೇಡಿ ಏನು ಮಾಡಿದರೂ ದುಡ್ಡು ಕೈಲಿ ನಿಲ್ಲುತ್ತಿಲ್ಲ ಅನ್ನಿಸಿದರೆ ಭಗವಂತನ ಮೇಲೆ ಭಾರ ಹಾಕಿ ಧೈರ್ಯ ಮಾಡಿ ಸಾಲ ಮಾಡಿಬಿಡಿ! ಅಂದರೆ ಸಾಲ ಮಾಡಿ ಪ್ರಾಪರ್ಟಿ ಮೇಲೆ ಅಥವಾ ಚಿನ್ನದ ಮೇಲೆ ಇನ್ವೆಸ್ಟ್ ಮಾಡಿ. ಆಗ ಪ್ರತಿ ತಿಂಗಳು ಇಎಂಐ ಕಟ್ಟುವ ಕರ್ಮಕ್ಕಾದರೂ ಖರ್ಚು ಕಡಿಮೆ ಮಾಡುತ್ತೀರಿ. ಆಗ ನಿಮಗೇ ಗೊತ್ತಿಲ್ಲದಂತೆ ಒಂದಷ್ಟು ದುಡ್ಡು ಉಳಿಯುತ್ತ ಹೋಗುತ್ತದೆ. ಜೊತೆಗೆ ಇನ್ವೆಸ್ಟ್ ಮಾಡಿದ ಹಣ ಬೆಳೆಯುತ್ತಲೂ ಇರುತ್ತದೆ. ಮನೆಯಲ್ಲಿ ಖರ್ಚಿನ ಬಾಬ್ತು ಬಂದಾಗಲೆಲ್ಲ ಹೆಂಡತಿ, ಮಕ್ಕಳಿಗೆ ಸಾಲದ ಅಮೌಂಟನ್ನು ಒಂದ್ಸಲ ಹೇಳಿದರೆ ಸಾಕು, ದೂಸರಾ ಮಾತಾಡದೆ ಸುಮ್ಮನಾಗುತ್ತಾರೆ. ಆದರೆ, ಹೀಗೆ ಸಾಲ ಮಾಡುವಾಗ ನಿಮ್ಮ ತಾಕತ್ತನ್ನೂ ಸರಿಯಾಗಿ ನೋಡಿಕೊಂಡಿರಿ. ಐವತ್ತು ಸಾವಿರ ಸಂಬಳ ಬರುತ್ತಿದ್ದರೆ ಐವತ್ತು ಲಕ್ಷ ರೂಪಾಯಿ ಸಾಲ ಮಾಡಿಕೊಂಡು ಗುಂಡಿಗೆ ಬೀಳಬೇಡಿ. 6. ಸಾಲ ಕೊಟ್ಟು ಕೋಡಂಗಿಯಾಗಬೇಡಿ ದುಡ್ಡು ಕಳೆದುಕೊಳ್ಳುವ ಇನ್ನೊಂದು ಅತ್ಯಂತ ಸುಲಭ ದಾರಿಯೆಂದರೆ ಸಾಲ ಕೊಟ್ಟು ಉಂಡೆನಾಮ ಹಾಕಿಸಿಕೊಳ್ಳುವುದು. ನೆನಪಿರಲಿ, ನಿಮ್ಮ ಹತ್ತಿರ ದುಡ್ಡು ಕೇಳಲು ಬರುವವರೆಲ್ಲ ಮಹಾನ್ ಸಂಕಷ್ಟದಲ್ಲಿ ಸಿಲುಕಿದವರೇ ಆಗಿರುತ್ತಾರೆ. ಅವರ ಮಾತಿಗೆ ಮರುಳಾಗಿ ಸಾಲ ಕೊಟ್ಟಿರೋ, ಕೆಟ್ಟಿರಿ. ಹಾಗಂತ ಯಾರಿಗೂ ಸಹಾಯವನ್ನೇ ಮಾಡದೆ ಸ್ವಾರ್ಥಿಯಾಗಿ ಎಂದಲ್ಲ. ತೀರಾ ಹತ್ತಿರದವರಾಗಿದ್ದು, ದುಡ್ಡು ತೆಗೆದುಕೊಂಡ ಮೇಲೆ ಅವರು ನಿಮ್ಮಿಂದ ತಪ್ಪಿಸಿಕೊಂಡು ಓಡಾಡುವುದಿಲ್ಲ ಹಾಗೂ ಅವರಿಗೆ ನಿಜವಾಗಿಯೂ ದುಡ್ಡಿನ ಅವಶ್ಯಕತೆಯಿದೆ ಎಂಬುದು ಖಾತ್ರಿಯಾದರೆ ಮಾತ್ರ ಸಾಲ ಕೊಡಿ. ಅವರಿಗೂ ತೀರಾ ದೊಡ್ಡ ಅಮೌಂಟ್ ಕೊಟ್ಟು ಮುಂಡಾಸು ದೊಡ್ಡದು ಮಾಡಿಕೊಳ್ಳಬೇಡಿ. ಅವರ ಕಷ್ಟಕ್ಕೇನೋ ನೀವಾಗುತ್ತಿದ್ದೀರಿ, ನಾಳೆ ನೀವೇ ಅಂತಹ ಕಷ್ಟಕ್ಕೆ ಸಿಲುಕಿದರೆ ಎಷ್ಟು ಜನ ದುಡ್ಡು ಕೊಡುತ್ತಾರೆ ಎಂಬುದನ್ನೊಮ್ಮೆ ಯೋಚಿಸಿ. ಸಾಲ ಕೊಟ್ಟ ಮೇಲೆ ಅದನ್ನು ವಾಪಸ್ ಕೇಳುವುದರಷ್ಟು ಹಿಂಸೆಯ ಕೆಲಸ ಯಾವುದೂ ಇಲ್ಲ. ಸಾಲ ತಗೊಂಡವರು ನೆಮ್ಮದಿಯಾಗಿ ನಿಮ್ಮ ಕಣ್ಣಿಗೆ ಬೀಳದೆ ಓಡಾಡಿಕೊಂಡಿರುತ್ತಾರೆ. ಆದರೆ ನೀವು ಕಷ್ಟಪಟ್ಟು ದುಡಿದ ಹಣ ಎಲ್ಲೋ ಅಬ್ಬೇಪಾರಿಯಾಗಿ ಬಿದ್ದಿದೆ ಎಂಬುದನ್ನು ನಿಮಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. 7. ಲೆಕ್ಕ ಬರೆಯಿರಿ, ಆರೋಗ್ಯಕ್ಕೆ ಒಳ್ಳೇದು ಚಿಕ್ಕವರಾಗಿದ್ದಾಗ ಅಪ್ಪ ಕೊಟ್ಟ ಪ್ರತಿ ಪೈಸೆಗೂ ಲೆಕ್ಕ ಬರೆಯುತ್ತಿದ್ದಿರಿ. ಈಗ ನೀವೇ ದುಡಿಯತೊಡಗಿದ ಮೇಲೆ ಅದನ್ನು ಮಾಡುವುದಕ್ಕೆ ಆಲಸ್ಯ ಅಲ್ಲವೇ? ಎಷ್ಟಾದರೂ ಖರ್ಚು ಮಾಡಿ, ಆದರೆ ಲೆಕ್ಕ ಬರೆಯುವ ಅಭ್ಯಾಸ ಇಟ್ಟುಕೊಳ್ಳಿ. ಅದು ನಿಮ್ಮ ಹಣಕಾಸು ಆರೋಗ್ಯಕ್ಕೆ ಬಹಳ ಒಳ್ಳೆಯದು. ನೀರಿಗೆ ಹಾಕುವುದಾದರೂ ಲೆಕ್ಕ ಮಾಡಿ ಹಾಕು ಎಂದು ದೊಡ್ಡವರು ಹೇಳಿದ್ದಾರೆ. ಲೆಕ್ಕಾಚಾರವಿಲ್ಲದೆ ಏನನ್ನೂ ಖರ್ಚು ಮಾಡಬೇಡಿ. ಬರೆದಿಟ್ಟ ಲೆಕ್ಕವನ್ನು ಆಗಾಗ ಟೈಮ್ ಸಿಕ್ಕಾಗ ನೋಡುವ ಅಭ್ಯಾಸವನ್ನೂ ಮಾಡಿಕೊಳ್ಳಿ. ಆಗ ನಾನು ಅನಗತ್ಯವಾಗಿ ಯಾವ್ಯಾವುದಕ್ಕೆಲ್ಲಾ ಖರ್ಚು ಮಾಡಿದ್ದೇನೆಂಬುದು ನಿಮಗೇ ತಿಳಿಯುತ್ತದೆ. ಮುಂದಿನ ಸಲ ಅದಕ್ಕೆ ಖರ್ಚು ಮಾಡುವಾಗ ಮನಸ್ಸು ಬ್ರೇಕ್ ಹಾಕುತ್ತದೆ. ಲೆಕ್ಕ ಬರೆಯುವುದರಿಂದ ನಿಮ್ಮ ಗಣಿತದ ಜ್ಞಾನ ಕೂಡ ಹೆಚ್ಚುತ್ತದೆ. ಕೆಲಸಕ್ಕೆ ಹೋಗಲು ಶುರು ಮಾಡಿದ ಮೇಲೆ ಗಣಿತ ಬೇಕಾಗುವುದು ಉಳಿದ ದುಡ್ಡು ಲೆಕ್ಕ ಹಾಕುವುದಕ್ಕೆ ಮಾತ್ರ. ಆ ಜ್ಞಾನ ಚೆನ್ನಾಗಿದ್ದರೆ ನಿಮ್ಮ ಆರ್ಥಿಕ ಸ್ಥಿತಿಯೂ ಚೆನ್ನಾಗಿಯೇ ಇರುತ್ತದೆ. ಮಾರ್ವಾಡಿಗಳು, ಶೆಟ್ಟರು ಯಾಕೆ ಬೇಗ ಶ್ರೀಮಂತರಾಗುತ್ತಾರೆ ಗೊತ್ತಾ? ಅವರು ಬಹಳ ಶ್ರದ್ಧೆಯಿಂದ ಲೆಕ್ಕ ಬರೆಯುತ್ತಾರೆ. 8. ಡಿಸ್ಕೌಂಟು ಎಂಬ ಅಪಾಯಕಾರಿ ಸೌಕರ್ಯ ಕೆಲವರು ಡಿಸ್ಕೌಂಟ್ ಇದೆ ಎಂದು ಶಾಪಿಂಗ್ ಮಾಡುತ್ತಾರೆ, ಇನ್ನು ಕೆಲವರು ಡಿಸ್ಕೌಂಟ್ ಇದ್ದಾಗ ಮಾತ್ರ ಶಾಪಿಂಗ್ ಮಾಡುತ್ತಾರೆ. ಎರಡನೇ ಥರದವರು ಹಣ ಉಳಿಸುತ್ತಾರೆ. ಡಿಸ್ಕೌಂಟ್ ಎಂಬ ಸೌಕರ್ಯವನ್ನು ಚೆನ್ನಾಗಿ ಬಳಸಿಕೊಳ್ಳುವವರು ಇವರೇ. ಮೊದಲನೆಯವರು ಯಾವಾಗಲೂ ಡಿಸ್ಕೌಂಟ್‌ನಲ್ಲಿ ನಷ್ಟವನ್ನೇ ಮಾಡಿಕೊಳ್ಳುತ್ತಾರೆ. ಕೆಲವರಿಗೆ ಡಿಸ್ಕೌಂಟ್ ಬೋರ್ಡ್ ನೋಡಿದ ತಕ್ಷಣ ಅದನ್ನು ಖರೀದಿಸಬೇಕು ಎಂಬ ಗುದುಮುರಿಗೆ ಒಳಗಿನಿಂದ ಹುಟ್ಟುತ್ತದೆ. ಹಾಗೆ ಮಾಡುವವರು ಕಡಿಮೆ ರೇಟಿಗೆ ಸಿಕ್ಕಿದೆ ಎಂದು ಕತ್ತೆಯನ್ನು ಬೇಕಾದರೂ ಮನೆಗೆ ತಂದು ಕಟ್ಟಿಕೊಳ್ಳುವವರು! ಟೀವಿ, ಫ್ರಿಜ್, ವಾಷಿಂಗ್ ಮಷೀನ್ ಇತ್ಯಾದಿ ಕೊಳ್ಳುವಾಗ ಹಬ್ಬದ ಸೀಸನ್ನಿಗೆ ಕಾದು ಡಿಸ್ಕೌಂಟ್ ಇದ್ದಾಗಲೇ ಅಂಗಡಿಗೆ ದಾಂಗುಡಿಯಿಟ್ಟರೆ ಲಾಭ ಮಾಡಿಕೊಳ್ಳಬಹುದು. ಬಟ್ಟೆಯನ್ನೂ ಡಿಸ್ಕೌಂಟ್ ಇದ್ದಾಗ ಕೊಳ್ಳುವುದು ಒಳ್ಳೆಯದು. ನೆನಪಿಡಿ, ಡಿಸ್ಕೌಂಟ್ ಸಿಗುತ್ತದೆ ಎಂದು ನಿಮಗೆ ಬೇಕಿಲ್ಲದ್ದನ್ನೆಲ್ಲ ಕೊಳ್ಳುತ್ತ ಹೋದರೆ ನಿಮ್ಮ ಉಳಿತಾಯದಲ್ಲೂ 'ಡಿಸ್ಕೌಂಟ್‌' ಆಗುತ್ತಲೇ ಹೋಗುತ್ತದೆ. ಅದು ನಿಮಗೆ ಗೊತ್ತಾಗುವಾಗ ಬಹಳ ತಡವಾಗಿರುತ್ತದೆ. 9. ನಿಜಕ್ಕೂ ನಿಮ್ಮ ಲೆವೆಲ್ಲಿಗೆ ಕಾರು ಬೇಕಾ? ಯಾರೂ ನಿಮಗೆ ಈ ಬೀಜದ ಮಾತು ಹೇಳಿರುವುದಿಲ್ಲ. ನೆನಪಿಡಿ- ಕಾರು ಕಂಡುಹಿಡಿದಿರುವುದು ಶ್ರೀಮಂತರಿಗಾಗಿ ಮಾತ್ರ. ಓಡಾಡಲು ಕಾರಿದ್ದರೆ ಎಲ್ಲರಿಗೂ ಖುಷಿಯೇ. ಆದರೆ ಅದರಂಥಾ ಖರ್ಚಿನ ಐಷಾರಾಮ ಯಾವುದೂ ಇಲ್ಲ. ಮಧ್ಯಮ ವರ್ಗದ ಒಂದು ಕುಟುಂಬವನ್ನು ನುಣ್ಣಗೆ ಬೋಳಿಸಲು ಕಾರಿಗಿಂತ ಅದ್ಭುತ ಸಾಧನ ಯಾವುದೂ ಇಲ್ಲ. ಕಾರು ಕೊಳ್ಳುವುದು ಮಹಾನ್ ಕೆಲಸವಲ್ಲ, ಆದರೆ ಅದನ್ನು ಸಾಕುವುದು ಆನೆ ಸಾಕಿದಂತೆ. ಹತ್ತು ಕಿಲೋಮೀಟರ್‌ಗೆ ಒಂದು ಲೀಟರ್ ಪೆಟ್ರೋಲ್ ಕುಡಿಯುವ, ಆದರೆ ಅದಕ್ಕೆ ತಕ್ಕಂತೆ ಸೇವೆ ನೀಡದ ಪರಮಪಾಪಿ ವಾಹನ ಕಾರು. ದುಡ್ಡಿದ್ದವರು ಅದರಲ್ಲೇ ಓಡಾಡಲಿ, ನೀವು ನೋಡಿ ಖುಷಿಪಡಿ. ಆದರೆ ಖರ್ಚು ಕಡಿಮೆ ಮಾಡಬೇಕು ಎಂಬ ಮನಸ್ಥಿತಿಯವರು ನೀವಾಗಿದ್ದರೆ ನಿಮಗೆ ಅದರ ಸಹವಾಸ ಬೇಡ. ಬೈಕು ಸಾಕು. ಬೈಕಿಗೆ ಹೆಲ್ಮೆಟ್ ನೇತುಹಾಕಲು ಒಂದು ಲಾಕ್ ವ್ಯವಸ್ಥೆ ಮಾಡಿಕೊಂಡರೆ ನೀವು ಬಂದಿದ್ದು ಕಾರಿನಲ್ಲೋ ಬೈಕಿನಲ್ಲೋ ಎಂಬುದು ಹೊಸತಾಗಿ ನಿಮ್ಮನ್ನು ಭೇಟಿಯಾಗುವವರಿಗೆ ಗೊತ್ತಾಗುವುದಿಲ್ಲ. ತೀರಾ ಶೋಕಿಯಿದ್ದರೆ ರಸ್ತೆಯಲ್ಲಿರುವ ಕಾರಿನ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಫೇಸ್‌ಬುಕ್ಕಿಗೆ ಹಾಕಿ. ಪುಕ್ಕಟೆ ಮೈಲೇಜ್ ಸಿಗುತ್ತದೆ. 10. ಟಿಡಿಎಸ್ ಬಂದರೆ ಪಾರ್ಟಿ ಬೇಡ ವರ್ಷಕ್ಕೊಮ್ಮೆ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ ಮೇಲೆ ಟಿಡಿಎಸ್ ಅಂತ ಒಂದಷ್ಟು ದುಡ್ಡು ಕೈಗೆ ಬರುತ್ತದೆಯಲ್ಲ, ಅದು ನೀವೇ ಕಷ್ಟಪಟ್ಟು ದುಡಿದ ದುಡ್ಡು ಸ್ವಾಮೀ! ನಿಮ್ಮಿಂದ ತೆರಿಗೆ ಇಲಾಖೆಯವರು ಕಿತ್ತುಕೊಂಡು ನಿಮಗೇ ಬಡ್ಡಿ ಸಮೇತ ಅದನ್ನು ವಾಪಸ್ ಕೊಟ್ಟಿದ್ದಾರೆ. ಹಾಗಾಗಿ ಟಿಡಿಎಸ್ ಫಂಡ್ ಬಂತು ಅಂತ ಪಾರ್ಟಿ ಮಾಡುವ ಯಾವುದೇ ಅಗತ್ಯವಿಲ್ಲ. ಅದೇನೂ ಖುಷಿಪಡುವ ವಿಚಾರವಲ್ಲ. ಅದು ಬೋನಸ್ಸೂ ಅಲ್ಲ. ವಾಪಸ್ ಬಂದ ಟಿಡಿಎಸ್ಸನ್ನು ನೇರವಾಗಿ ಬ್ಯಾಂಕಿನಲ್ಲೇ ಎಫ್‌ಡಿಗೆ ಜಮೆಯಾಗುವಂತೆ ಮಾಡಿ ಅಥವಾ ಪಿಪಿಎಫ್ ಅಕೌಂಟಿಗೆ ಹಾಕಿ. ಯಾವುದೇ ಕಾರಣಕ್ಕೂ, 'ಮುಂದಿನ ತಿಂಗಳು ಟಿಡಿಎಸ್ ಬಂದ್ರೆ ಹೊಸ ವಾಷಿಂಗ್ ಮಷೀನ್ ತರ್ತೇನೆ' ರೀತಿಯ ಅನಾಹುತಕಾರಿ ನಿರ್ಧಾರಕ್ಕೆ ಬರಬೇಡಿ. ಇದರ ಹೊರತಾಗಿ ಆಫೀಸಿನಿಂದ ಏನಾದರೂ ಎಕ್ಸ್‌ಟ್ರಾ ದುಡ್ಡು ಬಂದರೆ ಅದನ್ನು ಮಜಾ ಉಡಾಯಿಸಿ ಖರ್ಚು ಮಾಡುವುದು ಕೂಡ ಒಳ್ಳೆಯ ಅಭ್ಯಾಸವಲ್ಲ. ಆಫೀಸಿನವರು ಹಾಗೆಲ್ಲಾ ಪದೇಪದೇ ಕೊಡುವುದಿಲ್ಲ. ಅವರಿಗೆ ನಿಮ್ಮ ಮೇಲೆ ವಿಶೇಷ ಪ್ರೀತಿಯೇನೂ ಇಲ್ಲ. ಅಪರೂಪಕ್ಕೆ ಕೊಟ್ಟಿದ್ದನ್ನು ಉಳಿಸಿಟ್ಟುಕೊಂಡರೆ ಆಗಾಗ ಅದನ್ನು ನೆನಪು ಮಾಡಿಕೊಂಡು ಖುಷಿಪಡಬಹುದು. ಆಗ ಆಫೀಸಿನ ಮೇಲೆ ಅಭಿಮಾನ ಹೆಚ್ಚುತ್ತದೆ. 11. ಚಿನ್ನದ ಅಪಾಯದ ಬಗ್ಗೆ ಭಾಷಣ ಮಾಡಿ! ಪೇಪರ್ ಓದುವಾಗ 'ಚಿನ್ನ ಕಳವು', 'ನೆಕ್ಲೇಸ್ ಕದ್ದು ಪರಾರಿ' ಮುಂತಾದ ಸುದ್ದಿಗಳನ್ನು ಜೋರಾಗಿ ಹೆಂಡತಿಗೂ ಕೇಳಿಸುವಂತೆ ಓದಿ. ಟೈಮ್ ಸಿಕ್ಕಾಗ, ಅಥವಾ ಅವಕಾಶ ಸೃಷ್ಟಿಸಿಕೊಂಡು ಆಗಾಗ ಚಿನ್ನದ ಅಪಾಯದ ಬಗ್ಗೆ ಹೆಂಡತಿ, ಮಕ್ಕಳಿಗೆ ಭಾಷಣ ಮಾಡುತ್ತಿರಿ. ಚಿನ್ನ ಮನೆಯಲ್ಲಿಟ್ಟುಕೊಂಡರೆ ಹೇಗೆ ಅಪಾಯ ಆಹ್ವಾನಿಸಿದಂತೆ, ಅದನ್ನು ಮೈಮೇಲೆ ಹಾಕಿಕೊಂಡು ಓಡಾಡಿದರೆ ಹೇಗೆ ಜೀವಕ್ಕೇ ಅಪಾಯ ತಂದುಕೊಂಡಂತೆ ಎಂಬುದನ್ನು ಅವರಿಗೆ ಅರ್ಥ ಮಾಡಿಸಿ. ಆಗ ನೆಕ್ಲೇಸು, ಬಳೆ, ಚೈನು, ರಿಂಗು ಅದು-ಇದು ಅಂತ ಹೆಂಡತಿ ಬ್ಲೇಡ್ ಹಾಕುವುದು ಕಡಿಮೆಯಾಗುತ್ತದೆ. ಜ್ಯುವೆಲರಿ ಶಾಪ್ ಮುಂದೆ ನಡೆದು ಹೋಗುವಾಗಲೆಲ್ಲ ಹೆಂಡತಿ ಬಳಿ 'ನೋಡು, ಹೆಂಗೆ ಹುಚ್ಚರ ಥರಾ ಚಿನ್ನಕ್ಕಾಗಿ ಸಾಯ್ತಾರೆ' ಎಂದು ಮನಸಾರೆ ಬೈಯಿರಿ. ಮುಂದಿನ ಸಲ ಆಕೆ ಚಿನ್ನಕ್ಕಾಗಿ ನಿಮ್ಮ ಬಳಿ ಪೀಠಿಕೆ ಹಾಕುವಾಗ ಈ ಡೈಲಾಗ್ ನೆನಪಾಗಿ ಸುಮ್ಮನಾದರೂ ಆಗಬಹುದು. ನಿಮ್ಮ ಅದೃಷ್ಟ ಏನಿದೆಯೋ ಯಾರಿಗೆ ಗೊತ್ತು, ಒಂದೊಂದ್ಸಲ ಹೆಂಡತಿಯರಿಗೂ ಇವೆಲ್ಲ ಅರ್ಥವಾಗುವುದುಂಟು! 12. ಆಳು ಮಾಡಿದ್ದು ಹಾಳು ನೀವು ನಿಜವಾಗಿಯೂ ಶ್ರೀಮಂತರಾಗಿಲ್ಲದಿದ್ದರೆ ನಿಮಗೆ ಮನೆಗೆಲಸದವರ ಅಗತ್ಯವಿಲ್ಲ. ಪಾತ್ರೆ, ಬಟ್ಟೆ ಒಗೆಯುವುದಕ್ಕೆ ತಿಂಗಳಿಗೆ ಮೂರು ಸಾವಿರ ರೂಪಾಯಿ ವೇಸ್ಟ್ ಮಾಡಬೇಕೆ? ಅದನ್ನು ನೀವೇ ಮಾಡಿಕೊಳ್ಳುವುದು ಕಿಸೆಗೂ ಒಳ್ಳೆಯದು, ದೇಹಕ್ಕೂ ಒಳ್ಳೆಯದು. ಆಫೀಸಿನಲ್ಲಿ ಕೂತು ಕೂತು ನಿಮ್ಮ ದೇಹಕ್ಕೆ ಚಟುವಟಿಕೆಯೇ ಇರುವುದಿಲ್ಲ. ಮನೆಯಲ್ಲಿ ಹೆಂಡತಿಗೆ ಕೆಲಸ ಜಾಸ್ತಿಯಾಯಿತು ಅನ್ನಿಸಿದರೆ ಗಂಡ ಒಂದಷ್ಟು ಕೆಲಸ ಮಾಡಿಕೊಡಲಿ. ಅಥವಾ ಯಾವ ಕೆಲಸಕ್ಕೆ ಕೆಲಸದವಳು ಬೇಕು ಎಂದು ಹೆಂಡತಿ ಹೇಳುತ್ತಾಳೋ ಆ ಕೆಲಸವನ್ನು ಸ್ವಲ್ಪ ದಿನ ಗಂಡನೇ ಮಾಡಿಕೊಡಲಿ. ಕೊನೆಗೆ ಗಂಡನ ಕಷ್ಟ ನೋಡಲಾರದೆ ಹೆಂಡತಿಯರೇ ಅದನ್ನು ಮಾಡುತ್ತಾರೆ! ಪಾಪ ಅವರು! ಇದು ತಮಾಷೆಯೆನ್ನಿಸಿದರೆ, ಸೀರಿಯಸ್ಸಾಗಿ ಯೋಚಿಸಿ ನೋಡಿ. ಗಂಡ, ಹೆಂಡತಿ, ಒಂದು ಮಗು ಇರುವ ಮನೆಯಲ್ಲಿ ಏನು ಮಹಾ ಕೆಲಸವಿರುತ್ತದೆ? ಅಷ್ಟೂ ಮಾಡಿಕೊಳ್ಳದೆ ಸೋಫಾ ಮೇಲೆ ಕೂತು ಚಿಪ್ಸ್ ತಿನ್ನುತ್ತ ಟೀವಿ ನೋಡಿದರೆ ಮುಂದೆ ಅದರ ಐವತ್ತು ಪಟ್ಟು ಹಣವನ್ನು ಬೀಪಿ, ಶುಗರ್‌ಗೆ ಖರ್ಚು ಮಾಡಬೇಕಾಗುತ್ತದೆ. ಒಂದು ಧಾರಾವಾಹಿ ಕಡಿಮೆ ನೋಡಿದರೆ ದೇಶ ಬಿದ್ದು ಹೋಗುವುದಿಲ್ಲ. ನೀವೇ ಕೆಲಸ ಮಾಡಿಕೊಂಡರೆ ಮನೆ ಎಷ್ಟು ಅಚ್ಚುಕಟ್ಟಾಗಿರುತ್ತದೆ ಗೊತ್ತೇ? 13. ಸಂಬಳ ಸ್ವಲ್ಪ ಕಡಿಮೆ ಹೇಳಿ, ಪ್ರಾಬ್ಲಂ ಏನಿಲ್ಲ ಹೆಂಡತಿಯೆದುರು ನೀವು ದೊಡ್ಡವರಾಗಿ ತೋರಿಸಿಕೊಂಡು ಯಾವ ಘನತೆಯನ್ನೂ ಸಂಪಾದಿಸಲಾರಿರಿ. ನೀವೆಷ್ಟೇ ದುಡಿಯುವವರಾಗಿದ್ದರೂ ಅವರ ಕಣ್ಣಿಗೆ ನೀವು ಯಃಕಶ್ಚಿತ್ ಗಂಡನೇ. ಗಂಡ ಎಂಬ ಅನಾದಿಕಾಲದ ಜೀವಿಯನ್ನು ಹೇಗೆ ನೋಡಬೇಕು ಎಂಬುದು ಆಕೆಗೆ ಹುಟ್ಟಿನಿಂದಲೇ ಗೊತ್ತಿರುತ್ತದೆ. ಲಕ್ಷ ದುಡಿಯುವವರಾಗಿದ್ದರೂ ಐವತ್ತು ಸಾವಿರ ದುಡಿಯುವವರಾಗಿದ್ದರೂ ಅವರ ಪಾಲಿಗೆ ಗಂಡ ಗಂಡನೇ. ಹಾಗಾಗಿ ನಿಮ್ಮ ಸಂಬಳವನ್ನು ಒಂದು ಹತ್ತು ಸಾವಿರ ಕಡಿಮೆ ಹೇಳಿದರೆ ಯಾವ ವ್ಯತ್ಯಾಸವೂ ಆಗುವುದಿಲ್ಲ. ಆದರೆ, ನಿಮ್ಮ ಉಳಿತಾಯದಲ್ಲಿ ವ್ಯತ್ಯಾಸವಾಗುತ್ತದೆ. ಆ ಹತ್ತು ಸಾವಿರ ಪ್ರತಿ ತಿಂಗಳು ನಿವ್ವಳವಾಗಿ ಉಳಿಯುತ್ತದೆ. ಹೆಂಡತಿಗೆ ಸುಳ್ಳು ಹೇಳುತ್ತಿದ್ದೇನೆ ಎಂದು ನಿಮಗೆ ಅನ್ನಿಸಿದರೂ ನೀವು ದುಡ್ಡು ಕೂಡಿಡುವುದಾದರೂ ಯಾರಿಗಾಗಿ? ಅವಳಿಗೆ ಹಾಗೂ ನಿಮ್ಮ ಮಕ್ಕಳಿಗಾಗಿಯೇ ಅಲ್ಲವೇ? ಮುಂದೆ ಆಪತ್ಕಾಲದಲ್ಲಿ ಆ ದುಡ್ಡೇ ನೆರವಿಗೆ ಬರುತ್ತದೆ. ಇಲ್ಲವಾದರೆ ಆಗ ಅದೇ ಹೆಂಡತಿ ನಿಮಗೆ ಬಾಯ್ತುಂಬಾ ಅರ್ಚನೆ ಮಾಡುತ್ತಾಳೆ- 'ತಿಂಗಳಿಗೆ ಹತ್ತು ಸಾವಿರ ಜಾಸ್ತಿ ಉಳಿತಾಯ ಮಾಡಿದ್ರೆ ಏನಾಗ್ತಿತ್ತು ನಿಮಗೆ ಧಾಡಿ?!' 14. ಆ್ಯಪ್ಸ್ ಇರೋದು ಆಡೋಕಷ್ಟೇ ಅಲ್ಲ ಬೇಕೋ ಬೇಡವೋ, ನಿಮ್ಮ ಕೈಲೊಂದು ದುಬಾರಿ ಆ್ಯಂಡ್ರಾಯ್ಡ್ ಫೋನಿದೆ. ಅಷ್ಟು ದುಡ್ಡು ಕೊಟ್ಟು ಅದನ್ನು ಕೊಂಡ ಮೇಲೆ ವಿಡಿಯೋ ಗೇಮ್, ಫಿಲಂ ಡೌನ್‌ಲೋಡ್, ಮತ್ತೊಂದು ಮಗದೊಂದು ಅಂತ ಬರೀ ಖರ್ಚುಮಾಡುವ ಸ್ಕೀಮ್‌ಗಳನ್ನೇ ಹಾಕ್ತೀರೋ ಅಥವಾ ಅದರಿಂದ ಏನಾದರೂ ದುಡಿಯಲು ಸಾಧ್ಯವೇ ಎಂಬುದನ್ನೂ ಸ್ವಲ್ಪ ನೋಡ್ತೀರೋ? ಮೊಬೈಲ್‌ನಲ್ಲಿ ಆ್ಯಪ್ಸ್‌ಗಳಿರುವುದು ಬರೀ ಆಡುವುದಕ್ಕೆ ಅಥವಾ ಮಜಾ ಮಾಡುವುದಕ್ಕಷ್ಟೇ ಅಲ್ಲ. ದುಡ್ಡು ಉಳಿಸುವ ಉಪಾಯ ಹೇಳಿಕೊಡಲು ಸಾಕಷ್ಟು ಆ್ಯಪ್ಸ್‌ಗಳು ಆ್ಯಂಡ್ರಾಯ್ಡ್‌ನಲ್ಲಿವೆ. ಅವುಗಳ ಕಡೆಗೂ ನೋಡಿ. ನಿಮ್ಮ ಖರ್ಚಿನ ಮೇಲೆ ಕಣ್ಣಿಡುವ ಆ್ಯಪ್‌ಗಳೂ ಇವೆ. ಅವುಗಳನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ. ಮತ್ತು ಬಳಸಿ. 15. ಕ್ರೆಡಿರ್ಟ್ ಕಾರ್ಡ್ ಬಿಸಾಕಿ ಕ್ರೆಡಿಟ್ ಕಾರ್ಡ್ ಕಂಡುಹಿಡಿದಿದ್ದೇ ಜನರಿಂದ ಹೆಚ್ಚು ದುಡ್ಡು ಖರ್ಚು ಮಾಡಿಸುವುದಕ್ಕೆ. ಇವತ್ತು ಖರ್ಚು ಮಾಡಿ, ಇನ್ನು ಮೂವತ್ತು ದಿನ ಬಿಟ್ಟು ದುಡ್ಡು ಕೊಡಿ ಅಂದ್ರೆ ಯಾರಿಗೆ ತಾನೇ ಟೆಂಪ್ಟ್ ಆಗೋದಿಲ್ಲ? ಆದರೆ, ಕ್ರೆಡಿಟ್ ಕಾರ್ಡ್ ನಿಮಗೇ ಗೊತ್ತಿಲ್ಲದಂತೆ ನಿಮ್ಮಿಂದ ಅನಗತ್ಯವಾಗಿ ಖರ್ಚು ಮಾಡಿಸುತ್ತದೆ. ಸಾಧ್ಯವಾದರೆ ಇವತ್ತೇ ಕ್ರೆಡಿಟ್ ಕಾರ್ಡ್ ರದ್ದುಮಾಡಿಸಿ. ಆನ್ಲೈನ್ ಅಥವಾ ಪ್ಲಾಸ್ಟಿಕ್ ಕಾರ್ಡ್ ಪೇಮೆಂಟ್‌ಗೆ ಡೆಬಿಟ್ ಕಾರ್ಡ್ ಸಾಕು. ಡೆಬಿಟ್ ಕಾರ್ಡ್ ಬಳಸುವವರು ತಮ್ಮ ಅಕೌಂಟ್‌ನಲ್ಲಿ ಇರುವಷ್ಟನ್ನು ಮಾತ್ರ ಖರ್ಚು ಮಾಡಲು ಸಾಧ್ಯ. ಕ್ರೆಡಿಟ್ ಕಾರ್ಡ್ ಇದ್ದವರು ಮೂರು ಜನ ಮಲಗುವಷ್ಟು ದೊಡ್ಡ ಹಾಸಿಗೆ ಹಾಸಿಕೊಂಡು ಅದರ ತುದಿಯವರೆಗೂ ಕಾಲು ಚಾಚಲು ಟ್ರೈ ಮಾಡುತ್ತಿರುತ್ತಾರೆ. ಕ್ರೆಡಿಟ್ ಕಾರ್ಡ್ ಬಿಡಲು ಸಾಧ್ಯವೇ ಇಲ್ಲ ಎಂದಾದರೆ, ಅದರ ಬಿಲ್ಲನ್ನು ಸಮಯಕ್ಕೆ ಸರಿಯಾಗಿ ಕಟ್ಟಿ. ಈ ತಿಂಗಳ ಬಿಲ್ ಕಟ್ಟಲು ಸಾಧ್ಯವಾಗಿಲ್ಲ ಎಂದಾದರೆ ಮುಂದಿನ ತಿಂಗಳು ಕ್ರೆಡಿಟ್ ಕಾರ್ಡ್ ಬಳಸಲು ಹೋಗಲೇಬೇಡಿ. 16. ಇಲ್ಲಿ ಉಳಿಸು, ಅಲ್ಲಿ ಅಳಿಸು ನಮಗೊಂದು ಕೆಟ್ಟ ಚಾಳಿಯಿದೆ. ಡಿಸ್ಕೌಂಟ್‌ನಲ್ಲಿ ಏನಾದರೂ ಖರೀದಿಸಿ, ಅಲ್ಲಿ ಉಳಿದ ದುಡ್ಡನ್ನು ಇನ್ನೆಲ್ಲೋ ಖರ್ಚು ಮಾಡುವುದು. ಅಥವಾ ಈ ತಿಂಗಳು ಕಿರಾಣಿ ಖರ್ಚು ಸ್ವಲ್ಪ ಕಡಿಮೆ ಬಂತು ಎಂದು ಅದರಲ್ಲಿ ಉಳಿದ ದುಡ್ಡಿನಲ್ಲಿ ಇನ್ನೇನಾದರೂ ಖರೀದಿಸುವುದು. ದುಡ್ಡು ಉಳಿಸುವವರು ಮಾಡಲೇಬಾರದ ಅತ್ಯಂತ ಪಾಪದ ಕೆಲಸವಿದು! ಎಲ್ಲಾದರೂ ದುಡ್ಡು ಉಳಿಯಿತೇ, ಅದನ್ನು ಸೀದಾ ಮನೆಗೆ ತಂದು 'ಇದು ನನ್ನದಲ್ಲ' ಅಂತ ಪಿಗ್ಗಿ ಬ್ಯಾಂಕ್‌ಗೆ ಹಾಕಿಬಿಡಿ. ಮನೆಗೆ ಏನು ತರದಿದ್ದರೂ ಪರವಾಗಿಲ್ಲ, ನಿಮಗೊಂದು, ನಿಮ್ಮ ಹೆಂಡತಿಗೊಂದು, ನಿಮ್ಮ ಮಕ್ಕಳಿಗೊಂದು ಹೀಗೆ ಎಲ್ಲರಿಗೂ ಒಂದೊಂದು ಪಿಗ್ಗಿ ಬ್ಯಾಂಕಿನ ಹಂದಿಮರಿ ತಂದುಕೊಟ್ಟುಬಿಡಿ. ಅವರು ಉಳಿಸಿದರೆ ನಿಜಕ್ಕೂ ಹಣ ಉಳಿದಂತೆ. ಅವರಿಗೂ ಉಳಿತಾಯದ ರುಚಿ ಹತ್ತಿಸಿ. ಇವತ್ತು ಹತ್ತು ರೂಪಾಯಿ ಉಳೀತು ಅಂತ ಅದರಲ್ಲಿ ಚಾಕ್ಲೇಟ್ ತಿನ್ನುವ ಅಭ್ಯಾಸವನ್ನು ಯಾವತ್ತೂ ಮಕ್ಕಳಿಗೆ ಮಾಡಿಸಬೇಡಿ. 17. ಉಪ ಕಸುಬು ಏನಾದ್ರೂ ಇಟ್ಕೊಳ್ಳಿ ದುಡ್ಡು ಉಳಿಸುವುದು ಅಂದರೆ ಹೆಚ್ಚು ಗಳಿಸುವುದು ಎಂದೂ ಅರ್ಥ. ಬರೀ ಆಫೀಸಿಗೆ ಹೋಗುವುದು ಬರುವುದನ್ನು ಎಲ್ಲರೂ ಮಾಡುತ್ತಾರೆ. ನೀವು ಸ್ವಲ್ಪ ಡಿಫರೆಂಟಾಗಿರಬೇಕು ಅಂದರೆ ಹೊಸತೇನನ್ನಾದರೂ ಮಾಡಿ. ಮನೆಯಲ್ಲೇ ಕುಳಿತು ಹಣ ಗಳಿಸುವ ಏನಾದರೂ ಕೆಲಸ ಕಂಡುಕೊಳ್ಳಿ. ಆಫೀಸಿಗೆ ಹೋಗುವುದು ಎಂಟು ತಾಸು; ಇನ್ನುಳಿದ ಹದಿನಾರು ತಾಸನ್ನು ಖಾಲಿ ಪುಕ್ಕಟೆ ಕಳೆಯುತ್ತೀರಾ? ತಿಂಗಳಿಗೆ ಏಳೆಂಟು ಸಾವಿರ, ಅದು ಸಾಧ್ಯವಿಲ್ಲ ಎಂದರೆ ಮೂರ್ನಾಲ್ಕು ಸಾವಿರ ಗಳಿಸುವ ಉಪ ಕಸುಬುಗಳು ಸಾಕಷ್ಟಿವೆ. ಅವುಗಳಿಂದ ನಿಮಗೂ ಬದುಕಿನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಆಫೀಸಿನ ಕೆಲಸ ಹೋದರೆ ಬದುಕಲು ನನಗೆ ಬೇರೆ ದಾರಿ ಗೊತ್ತು ಎಂಬ ಕಾನ್ಫಿಡೆನ್ಸ್ ಬರುತ್ತದೆ. ಜೊತೆಗೆ ಈ ಉಪಕಸುಬು ನಿಮಗೆ ಗೊತ್ತಿರುವ ಇತರ ವಿದ್ಯೆಗಳನ್ನು ನೆನಪಿಟ್ಟುಕೊಳ್ಳಲು ಕೂಡ ಸಹಕಾರಿ. ಯಾರಿಗೆ ಗೊತ್ತು, ಅದೃಷ್ಟ ಭಯಂಕರ ಚೆನ್ನಾಗಿದ್ದರೆ ಈ ಉಪಕಸುಬೇ ಮುಂದೆ ದೊಡ್ಡದಾಗಿ ಬೆಳೆದು ನೀವು ಉದ್ಯಮಿಯಾದರೂ ಆಗಬಹುದು. 18. ಆಟೋಮ್ಯಾಟಿಕ್ ಆಗಿ ದುಡ್ಡು ಹೋಗುತ್ತಿರಲಿ ಈ ತಿಂಗಳ ಎಲ್ಲಾ ಬಿಲ್ ಚುಕ್ತಾ ಮಾಡಿದ ಮೇಲೆ ಉಳಿಯುವ ದುಡ್ಡನ್ನು ಸೇವಿಂಗ್ಸ್‌ಗೆ ಹಾಕ್ತೀನಿ ಎಂಬ ಮಹಾ ಸಂಕಲ್ಪವನ್ನೇನಾದರೂ ನೀವು ಮಾಡಿಕೊಳ್ಳುವವರಾದರೆ, ನಿಮಗೂ ಗೊತ್ತು, ಎಲ್ಲಾ ಬಿಲ್ ಚುಕ್ತಾ ಆದ ಮೇಲೆ ನಿಮ್ಮಲ್ಲಿ ಉಳಿಯುವುದು ಚಿಪ್ಪು ಎಂದು! ಮಾಡುವ ಖರ್ಚನ್ನೆಲ್ಲ ಮಾಡಿದ ಮೇಲೆ ಉಳಿಯುವುದನ್ನು ಸೇವಿಂಗ್ಸ್ ಮಾಡ್ತೀನಿ ಎನ್ನುವವರು ಯಾವತ್ತೂ ಉಳಿತಾಯ ಮಾಡುವುದಿಲ್ಲ. ಬದಲಿಗೆ, ಮೊದಲೇ ಪ್ರತಿ ತಿಂಗಳು ಇಷ್ಟು ಉಳಿಸಬೇಕು ಎಂದು ಖಡಕ್ಕಾದ ಪ್ಲಾನ್ ಮಾಡಿಕೊಳ್ಳಿ. ಅಷ್ಟು ಹಣ ನಿಮಗೆ ಸಂಬಳವಾದ ತಕ್ಷಣ ಆಟೋಮ್ಯಾಟಿಕ್ ಆಗಿ ಅಲ್ಲಿಗೆ ಹೋಗಿಬಿಡಲಿ. ಅಂದರೆ ಮ್ಯೂಚುವಲ್ ಫಂಡ್, ಪಿಪಿಎಫ್, ಇನ್ಷೂರೆನ್ಸ್, ಆರ್‌ಡಿ ಅಥವಾ ಅಂತಹ ಯಾವುದೇ ಸ್ಕೀಮ್‌ಗೆ ಪ್ರತಿ ತಿಂಗಳು ನಿಮ್ಮ ಆದೇಶವಿಲ್ಲದೆ ಹಣ ಹೋಗುವಂತೆ ಮಾಡಿಟ್ಟುಕೊಳ್ಳಿ. ಆಗ ಅಷ್ಟು ಹಣ ಗ್ಯಾರಂಟಿ ಉಳಿಯುತ್ತದೆ. ಮೊದಲು ನಿಮಗೆ ನೀವು ಪಾವತಿ ಮಾಡಿಕೊಳ್ಳಿ, ಆಮೇಲೆ ಬಿಲ್ ಪಾವತಿಸಿ. 19. ಒಂದೇ ಸಲಕ್ಕೆ ಖರೀದಿಸಿ ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಎಲ್ಲರೂ ಮನೆಯಲ್ಲಿನ ಸಾಮಾನುಗಳು ಖಾಲಿಯಾದಾಗಲೇ ಅಂಗಡಿಗಳತ್ತ ಓಡುತ್ತಾರೆ. ಇವತ್ತು ಟೂತ್‌ಪೇಸ್ಟ್ ಮುಗಿದಿದ್ದರೆ ನಾಳೆ ಇನ್ನೇನೋ ಖಾಲಿಯಾಗಿರುತ್ತದೆ. ಆಲಸ್ಯತನ ಬಿಟ್ಟು ಮನೆಯ ಕಡೆ ನಿಗಾ ವಹಿಸಿ ತಿಂಗಳಿಗೆ ಬೇಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ಪಟ್ಟಿ ಮಾಡಿ ಒಂದೇ ಕಡೆ ಒಂದೇ ಸಲ ಖರೀದಿಸಿ. ಎಲ್ಲ ಸಾಮಗ್ರಿಗಳನ್ನು ಒಂದೇ ಸಲ ಖರೀದಿಸಿದಾಗ ಅಂಗಡಿಯಾತ ನೀಡುವ ಡಿಸ್ಕೌಂಟ್ ಬಿಡಿ ಬಿಡಿಯಾಗಿ ಖರೀದಿಸಿದಾಗ ಸಿಗುವುದಿಲ್ಲ. ಅದೂ ಅಲ್ಲದೆ ಈಗೀಗ ಅನೇಕ ರೀಟೇಲ್ ಮಾಲ್‌ಗಳಲ್ಲಿ ಮನೆ ಸಾಮಾನುಗಳನ್ನು ಖರೀದಿಸಿದಾಗ ತುಂಬಾ ಮೊತ್ತದ ದರಕಡಿತ ಸಿಗುತ್ತದೆ, ಅದರ ಜೊತೆಗೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಬಿಲ್ಲಾದರೆ ಗಿಫ್ಟ್ ವೋಚರ್ ಅದೂ ಇದೂ ಎಂದು ಬೇರೆ ಆಫರ್‌ಗಳನ್ನು ಕೆಲ ಮಾಲ್‌ಗಳು ತನ್ನ ಗ್ರಾಹಕರಿಗೆ ನೀಡುತ್ತವೆ. ಕೆಲವೊಮ್ಮೆ ಒಂದೇ ದಿನದಲ್ಲಿ ಪಾಪರ್ ಆದಂತೆ ಅನ್ನಿಸಿದರೂ ಮನೆಯಲ್ಲಿನ ನೆಮ್ಮದಿಗಾಗಿ 'ಏಕ್ ದಿನ್ ಕಾ ಸುಲ್ತಾನ್‌' ಆಗುವುದು ಉತ್ತಮ. ಇನ್ನೊಂದು ಗಂಭೀರವಾದ ಸಲಹೆ: ನೀವು ಬಿಲ್‌ಗಳನ್ನು ಅಂಟಿಸಿಡಲು ಅಥವಾ ಪಿನ್ ಮಾಡಲು ಒಂದು ನೂರು ಪುಟಗಳ ಪುಸ್ತಕ ಇಡಿ. ಇದು 'ಸಂಗ್ರಹಯೋಗ್ಯ'! 20. ದುಡ್ಡಿದೆ ಎಂದು ತೋರಿಸಿಕೊಳ್ಳಬೇಡಿ ಗೆಳೆಯರ ಜೊತೆ ಆಗಾಗ ಹೋಟೆಲ್ಲು, ಪಬ್ಬಿಗೆ ಹೋಗುವ ಚಟವಿದ್ದರೆ ಎಲ್ಲಾ ಸಲವೂ ನೀವೇ ಬಿಲ್ ಕೊಡಬೇಕಿಲ್ಲ. ಆಗಾಗ ಅವರೂ ಕೊಡಲಿ. ನಿಮ್ಮಲ್ಲಿ ದುಡ್ಡಿದೆ ಎಂದು ತೋರಿಸಿಕೊಳ್ಳುವುದು ಬ್ಯಾಂಕ್ ಅಕೌಂಟಿಗೆ ಹಾನಿಕರ. ಇದು ದುಡ್ಡಿನ ಶಾಸನ ವಿಧಿಸಿದ ಎಚ್ಚರಿಕೆ! ಅದಕ್ಕೆ ತದ್ವಿರುದ್ಧವಾಗಿ 'ಹಣ ಖರ್ಚು ಮಾಡಿ' ಎಂದು ಆರ್‌ಬಿಐ ಗವರ್ನರ್ ಹೇಳುತ್ತಿರುತ್ತಾರೆ, ಅದನ್ನು ಜಾಸ್ತಿ ಕೇಳಬೇಡಿ. ಅವರಿಗೆ ಆರ್‌ಬಿಐ ಆರೋಗ್ಯ ಮುಖ್ಯ, ನಿಮ್ಮದಲ್ಲ. ನನ್ನ ಬಳಿ ದುಡ್ಡಿದೆ ಎಂದು ತೋರಿಸಿಕೊಳ್ಳುವುದು ಖರ್ಚಿಗೆ ನೀಡುವ ಮುಕ್ತ ಆಹ್ವಾನ. ನೀವು ಖರ್ಚು ಮಾಡಲು ರೆಡಿಯಿದ್ದೀರಿ ಎಂದಾದರೆ ಖರ್ಚು ಮಾಡಿಸಲು ಬಹಳ ಜನ ಪೈಪೋಟಿಯಲ್ಲಿ ಬರುತ್ತಾರೆ. ಅರ್ಜೆಂಟಾಗಿ ದುಡ್ಡು ಬೇಕು ಎಂದಾದರೆ ಯಾರೂ ನಿಮ್ಮತ್ತ ತಲೆ ಹಾಕುವುದಿಲ್ಲ. ಇಷ್ಟೆಲ್ಲ ಮಾಡಿದರೂ ಅಥವಾ ಇವುಗಳಲ್ಲಿ ನಾಲ್ಕೈದನ್ನು ಶಿರಸಾವಹಿಸಿ ಪಾಲಿಸಿದ ಮೇಲೂ ನಿಮ್ಮಲ್ಲಿ ದುಡ್ಡು ಉಳಿಯಲಿಲ್ಲ ಎಂದಾದರೆ ನೀವು ಉಳಿತಾಯ ಮಾಡಲು ಯೋಗ್ಯ ವ್ಯಕ್ತಿ ಅಲ್ಲ. ನಿಮ್ಮ ಹಸ್ತದಲ್ಲಿ ಖರ್ಚಿನ ರೇಖೆಯನ್ನು ಬ್ರಹ್ಮ ಬಹಳ ದಪ್ಪದಾಗಿ ಪ್ರಿಂಟ್ ಮಾಡಿದ್ದಾನೆ. ಅದನ್ನು ಅಳಿಸಲು ನಿಮ್ಮಿಂದ ಸಾಧ್ಯವಿಲ್ಲ. ಪ್ಲಾಸ್ಟಿಕ್ ಸರ್ಜರಿ ಬಹಳ ದುಬಾರಿ. ಹಾಗಾಗಿ ಪ್ರತಿ ತಿಂಗಳೂ ಸಂಬಳ ಬಂದ ತಕ್ಷಣ ಈ ದುಡ್ಡು ನನ್ನದಲ್ಲ ಅಂತ ಹುಂಡಿಗೆ ಹಾಕಿದ ಹಾಗೆ ಖರ್ಚು ಮಾಡಿಬಿಡಿ. ಜೀವನದಲ್ಲಿ ಹಳ್ಳಕ್ಕೆ ಬೀಳುವ ತನಕವಾದರೂ ಖುಷಿಯಾಗಿರುತ್ತೀರಿ! -ರೇಖಾ ಭಟ್ (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.