'ಹರೆಯ' ಬಂದ ಸಮಯ ಯುವಕರು ಹೀಗೇಕೆ?, ಬಿಸಿ ರಕ್ತ, ಹುಮ್ಮಸ್ಸು, ಉತ್ಸಾಹ. ಕಲ್ಲನ್ನೂ... ಬಿಸಿ ರಕ್ತ, ಹುಮ್ಮಸ್ಸು, ಉತ್ಸಾಹ. ಕಲ್ಲನ್ನೂ ಕುಟ್ಟಿ ಪುಡಿ ಮಾಡಿಬಿಡುವ ವಯಸ್ಸು. ಸಾಹಸ, ರಿಸ್ಕ್ ಎಂದರೆ ಹಿಂದೆ-ಮುಂದೆ ನೋಡುವ ಪ್ರಶ್ನೆಯೇ ಇಲ್ಲ. ಎಷ್ಟಾದರೂ ಹುಡುಗರು, ಹುಡುಗರು ತಾನೆ? ಅದರಲ್ಲೂ ಹದಿವಯಸ್ಸಿನ ಹುಡುಗರು ಎಂದರೆ ಕೇಳಬೇಕೆ? ಅಂದ ಹಾಗೆ ಸಂಶೋಧಕರು ಸಹ ಈ ಅಭಿಪ್ರಾಯಕ್ಕೆ ಸಮ್ಮತಿಯ ಮುದ್ರೆ ಒತ್ತಿದ್ದಾರೆ. ಅತ್ಯಂತ ಅಪಾಯಕಾರಿ ಸಾಹಸ ಮಾಡುವುದರಲ್ಲಿ ಹದಿವಯಸ್ಸಿನ ಹುಡುಗರೇ ಮುಂದು ಎಂದು ಪ್ಲೋರಿಡಾದ ಸಂಶೋಧಕರು ಹೇಳಿದ್ದಾರೆ. ಅಪಾಯದ ಸನ್ನಿವೇಶ ಎದುರಾದಾಗ ಹದಿವಯಸ್ಸಿನವರ ಮೆದುಳಿನಲ್ಲಿ ಹಾರ್ಮೋನುಗಳ ಚಟುವಟಿಕೆ ಹೆಚ್ಚಾಗುತ್ತದಂತೆ. ಈ ಕಾರಣಕ್ಕಾಗಿಯೇ ಅಪಾಯದ ಸನ್ನಿವೇಶದಲ್ಲಿ ಅವರು ಬೇಡವೆಂದರೂ ಪ್ರತಿಕ್ರಿಯಿಸುವುದು ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ. ಮಕ್ಕಳು ಮತ್ತು ವಯಸ್ಕರಿಗೆ ಹೋಲಿಸಿದರೆ ಯುವಕರ ವರ್ತನೆ ಭಿನ್ನವಾಗಿರುತ್ತದೆ. ಮೆದುಳು ಬೆಳೆಯುವ ಹಂತದಲ್ಲಿದ್ದಾಗ ಯುವಕರು ಅಪಾಯಗಳನ್ನು ಆಹ್ವಾನಿಸಲು ಮುಂದಾಗುವುದು ಹೆಚ್ಚಂತೆ. ಯುವತಿಯರು ಮತ್ತು ವಯಸ್ಕರಿಗೆ ಹೋಲಿಸಿದರೆ ಹದಿಹರೆಯದ ಹುಡುಗರು ಅಪಾಯದ ನಿರ್ಧಾರಗಳನ್ನು ತೆಗೆದುಕೊಳ್ಳವುದು ಹೆಚ್ಚಂತೆ. ಪ್ಲೋರಿಡಾ ಸ್ಟೇಟ್ ವಿಶ್ವವಿದ್ಯಾಲಯದ ಔಷಧಶಾಸ್ತ್ರ ಕಾಲೇಜಿನ ನರವಿಜ್ಞಾನಿ ಪ್ರದೀಪ್ ಭಿಡೆ ಅವರ ನೇತೃತ್ವದ ತಂಡ ಈ ಸಂಶೋಧನೆ ನಡೆಸಿದೆ. ಕಾರ್ನೆಲ್ ವಿಶ್ವವಿದ್ಯಾಲಯದ ಜತೆಗೂಡಿ ಹಲವಾರು ಸಂಶೋಧನೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಹದಿಹರೆಯದವರ ಈ ಪ್ರತಿಕ್ರಿಯೆ ಅಥವಾ ವರ್ತನೆಯನ್ನು ಅವರ ಮೆದುಳಿನ ಬೆಳವಣಿಗೆ ಆಧರಿಸಿ ವಿವರಿಸಬಹುದು. ಹದಿಹರೆಯದವರ ಈ ವರ್ತನೆಯನ್ನು ಇತರರು, ಕೇವಲ ಮಾತಾಪಿತರಷ್ಟೇ ಅಲ್ಲ, ಖುದ್ದು ಅವರೇ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಕೆಲವು ಯುವಕರು ಭಾರಿ ರಿಸ್ಕ್ಗಳನ್ನು ತೆಗೆದುಕೊಳ್ಳುವುದು, ಕೆಲವೊಮ್ಮೆ ಸಮಾಜ ಘಾತುಕ ಶಕ್ತಿಗಳಂತೆ ವರ್ತಿಸುವುದು ಏಕೆ ಎಂದು ವಿಜ್ಞಾನಿಗಳು ಪರಿಶೀಲಿಸಿದ್ದಾರೆ. ಅಪಾಯದ ಸನ್ನಿವೇಶದಲ್ಲಿ ಈ ಯುವಕರ ಮೆದುಳಿನ ಕೆಲವು ಭಾಗಗಳು ಹಿಗ್ಗುತ್ತವೆ ಎಂದು ಡಲ್ಲಾಸ್ನ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧನೆ ಪತ್ತೆ ಮಾಡಿದೆ. ನಮ್ಮ ಮೆದುಳಿನಲ್ಲಿ ಭಾವನೆಗಳ ನಿಯಂತ್ರಣ ಜಾಲ ಇರುತ್ತದೆ. ಭಾವನೆಗಳ ನಿರ್ವಹಣೆ ಮತ್ತು ನಿರ್ಧಾರಗಳ ಮೇಲೆ ಇದು ಪ್ರಭಾವ ಬೀರುತ್ತದೆ. ಈ ಜಾಲದಲ್ಲಿನ ಅಸಮತೋಲನ ಅಪಾಯಗಳನ್ನು ಆಹ್ವಾನಿಸುವ ವರ್ತನೆ ಅಥವಾ ಸಮಾಜಘಾತಕ ವರ್ತನೆಗೆ ಕಾರಣವಾಗುತ್ತದೆ. ಇದು ಅವರ ಜೀವನದಲ್ಲಿ ಅತ್ಯಂತ ಸೂಕ್ಷ್ಮ ಸಮಯ. ಜತೆಗೆ ಇದು ತೀವ್ರ ಒತ್ತಡ ಕಾರಿಯೂ ಹೌದು ಎಂದು ವಿಜ್ಞಾನಿಗಳು ವಿವರಿಸುತ್ತಾರೆ. ಹದಿಹರೆಯ, ಮೆದುಳಿನ ಬೆಳವಣಿಗೆಯ ಚಟುವಟಿಕೆ ತೀವ್ರವಾಗಿರುವ ವಯಸ್ಸು. ಹಾಗಾಗಿಯೇ ಸಂಕಷ್ಟದ, ಅಪಾಯದ ಸನ್ನಿವೇಶ ಎದುರಾದಾಗ ಇವರು ಪ್ರತಿಕ್ರಿಯಿಸುವ ರೀತಿ ಭಿನ್ನ. ಅಪಾಯವನ್ನು ಹಗುರವಾಗಿ ಪರಿಗಣಿಸುವುದು ಮತ್ತು ಕೆಲವೊಮ್ಮೆ ಎರ್ರಾಬಿರ್ರಿಯಾಗಿ ವರ್ತಿಸುವುದು ಇದೇ ಕಾಣಕ್ಕಾಗಿ. ಮಾದಕದ್ರವ್ಯ ಮತ್ತು ಮದ್ಯಪಾನದ ದುಷ್ಪರಿಣಾಗಳಿಂದ ಹಾನಿಗೊಳಗಾಗುವ ಸಾಧ್ಯತೆಯೂ ಹೆಚ್ಚು ಎಂದು ವಿಜ್ಞಾನಿಗಳು ಹೇಳುತ್ತಾರೆ. ಜೋಪಾನ, ಜೋಕೆ, ಮೈಮೇಲೆ ಎಚ್ಚರವಿರಲಿ ಎಂದು ಮಾತಾಪಿತರು ಹೇಳುತ್ತಾರೆ. ಆದರೆ ಹದಿಹರೆಯದ ಯುವಕರು ಮಾತ್ರ ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳುವುದಿಲ್ಲ. ಏಕೆಂದರೆ ಅವರ ಮೆದುಳಿನಲ್ಲಿ ನಡೆಯುವುದೇ ಬೇರೆ.