ಬೇಲೂರು ಬಾಲೆಯರು ಏನು ಹೇಳುವರು? (ಭಾಗ- 2) ವಾಸಂತ ಕೇಳೀರತೆ: ಚಿಕ್ಕ ಹಂಪನೆಂಬ.. 3 ವಾಸಂತ ಕೇಳೀರತೆ ಚಿಕ್ಕ ಹಂಪನೆಂಬ ಶಿಲ್ಪಿಯು ರಚಿಸಿರುವ ಈ ಶಿಲಾಬಾಲಿಕೆಯು ವಸಂತೋತ್ಸವದಲ್ಲಿ ಬಣ್ಣದ ಓಕುಳಿಯಾಡಲು ತನ್ನ ಎಡಗೈಯಲ್ಲಿ ಪಿಚಕಾರಿ ಹಿಡಿದು ನಿಂತಿದ್ದಾಳೆ. ಅವಳ ಸಖಿಯರು ಒಂದು ಬೋಗುಣಿಯಿಂದ ಪಿಚಕಾರಿಗಳಿಗೆ ಓಕುಳಿಯನ್ನು ತುಂಬುತ್ತಿದ್ದಾರೆ. ಪ್ರಾಚೀನ ಭಾರತದಲ್ಲಿ ಮತ್ತು ಈಗಲೂ ಕೂಡ ಓಕುಳಿಯಾಟ ಅಥವಾ ಹೋಳಿಹಬ್ಬ ಒಂದು ಶೃಂಗಾರದ ಹಬ್ಬ. ವಸಂತ ಋತುವು ಬಂದು ಎಲ್ಲೆಲ್ಲೂ ಹಸಿರು ಮತ್ತು ಬಣ್ಣ ಬಣ್ಣದ ಪುಷ್ಪಗಳ ಉಗಮವಾಗಲು, ಜನರು ಗಂಡು, ಹೆಣ್ಣುಗಳ ಭೇದವಿಲ್ಲದೇ ಪರಸ್ಪರ ಬಣ್ಣಗಳನ್ನೆರಚುತ್ತಾ ಅಪ್ಪಿ, ಕುಣಿದು, ಶೃಂಗಾರ ಮತ್ತು ಕಾಮಸಂಬಂಧಿ ಹಾಡುಗಳನ್ನು ಹಾಡುತ್ತಾ ವಸಂತೋತ್ಸವ ಅಥವಾ ಮದನೋತ್ಸವವನ್ನು ಆಚರಿಸುತ್ತಾರೆ. ಶಿವನು ಕಾಮನನ್ನು ಸುಟ್ಟು, ಅನಂತರ ಅವನು ಪಾರ್ವತಿಯನ್ನು ವಿವಾಹವಾದ ಬಳಿಕ ಕಾಮನು ಪುನರ್ಜನ್ಮ ಪಡೆದುದನ್ನು, ಹಳೆಯ ವಸ್ತುಗಳಿಗೆ ಬೆಂಕಿ ಹಚ್ಚಿ ಅನಂತರ ಈ ಬಣ್ಣದಾಟ ಆಡುವ ಮೂಲಕ ಕಾಮದೇವನ ಪೂಜೆಯನ್ನೂ ಹಿಂದೆ ಮಾಡಲಾಗುತ್ತಿತ್ತು. ಅನೇಕ ಸಂಸ್ಕೃತ ಕಾವ್ಯಗಳಲ್ಲಿ ಈ ವಸಂತೋತ್ಸವದ ವರ್ಣನೆಯಿದೆ. ವಾತ್ಸ್ಯಾಯನನೂ ಕಾಮಸೂತ್ರದಲ್ಲಿ ಇದನ್ನು ವರ್ಣಿಸಿದ್ದಾನೆ. ಶ್ರೀಕೃಷ್ಣನೂ ಗೋಪಿಕಾಸ್ತ್ರೀಯರ ಮೇಲೂ, ತನ್ನ ಹಲವಾರು ಪತ್ನಿಯರ ಮೇಲೂ ಓಕುಳಿಯೆರಚುತ್ತಾ ಜಲಕ್ರೀಡೆಯಾಡುವ ವರ್ಣನೆಗಳು ಭಾಗವತ, ಹರಿವಂಶ ಮೊದಲಾದ ಗ್ರಂಥಗಳಲ್ಲಿವೆ. ಫಲ್ಗುಣಮಾಸದಲ್ಲಿ ಪೌರ್ಣಿಮೆಯ ದಿನ ಬರುವ ಈ ಹೋಳಿಹಬ್ಬವನ್ನು ಈಗಲೂ ವಜ್ರಭೂಮಿ (ಮಥುರಾ), ಬಂಗಾಳ, ಒರಿಸ್ಸಾಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. 3. ಕೀರವಾಣಿ ಸುಂದರವಾದ ಈ ಶಿಲಾಬಾಲಿಕೆಯ ಬಲಗೈಯ ಮೇಲೆ ಒಂದು ಗಿಳಿಯು ಕುಳಿತಿರಲು, ಅವಳು ತನ್ನ ಎಡಗೈಯಲ್ಲಿ ವೀಳ್ಯದೆಲೆಯ ಪಟ್ಟಿ ಹಿಡಿದುಕೊಂಡಿದ್ದಾಳೆ.ಅವಳ ಎಡಕ್ಕೂ ಬಲಕ್ಕೂ ಸಖಿಯರಿದ್ದು ಫಲವನ್ನೂ ಆಭರಣಗಳನ್ನೂ ಹಿಡಿದು ಸರ್ವಾಲಂಕಾರಕ್ಕೆ ಕಾದಿರುವಂತೆ ಕಾಣುತ್ತದೆ. ಇಲ್ಲಿಯೂ ಮದನಿಕೆಯು ಗಿಳಿಯೊಡನೆ ಸಂಭಾಷಿಸುತ್ತಿರುವಂತಿದೆ. ಶೃಂಗಾರಕ್ಕೆ ಗಿಳಿಯ ಸಂಬಂಧನಿಕಟವಾಗಿರುತ್ತದೆ. ಕಾಮದೇವನ ವಾಹನವೂ ಗಿಳಿಯೇ! ಗಿಳಿಯು ಶೃಂಗಾರಭಾವಗಳನ್ನು ಉದ್ದೀಪಿಸುತ್ತದೆ. ಗಿಳಿಗಳು ಪರಸ್ಪರ ಚೆನ್ನಾಗಿ ಪ್ರೀತಿಸುತ್ತವೆ, ಮುದ್ದಿಸುತ್ತವೆ, ಈ ಶಿಲಾಬಾಲಿಕೆ ಗಿಳಿಯೊಡನೆ ಸಂಭಾಷಿಸುತ್ತಿರುವುದನ್ನು ನೋಡಿದರೆ, ಅಮರುಕ ಕವಿಯ ಸಂಸ್ಕೃತ ಶೃಂಗಾರಕಾವ್ಯದ ಎರಡು ಸುಂದರ ಪ್ರಸಂಗಗಳು ನೆನಪಿಗೆ ಬರುತ್ತವೆ. ಒಂದರಲ್ಲಿ, ಗಿಳಿಯು ನಾಯಿಕೆಗೆ 'ಬೇಗನೆ ಆಹಾರ ಕೊಡು, ಇಲ್ಲವಾದರೆ ರಾತ್ರಿ ನಿನ್ನ ಮತ್ತು ನಿನ್ನ ಪ್ರಿಯತಮನ ನಡುವೆ ನಡೆದ ಪ್ರೇಮಸಲ್ಲಾಪವನ್ನೆಲ್ಲಾ ಜೋರಾಗಿ ಹೇಳಿಬಿಡುತ್ತೇನೆ' ಎಂದು ಹೆದರಿಸುವ ಪ್ರಸಂಗ. ಇನ್ನೊಂದರಲ್ಲಿ, ಗಿಳಿಯು ಬೆಳಿಗ್ಗೆ ಮನೆಯಲ್ಲಿ ಹಿಂದಿನ ರಾತ್ರಿ ನಡೆದ ನಾಯಕಿಯ ಮತ್ತವಳ ಪ್ರಿಯತಮನ ಪ್ರೇಮಸಲ್ಲಾಪವನ್ನು ಹೇಳತೊಡಗುತ್ತದೆ. ಆಗಅವಳು ಅದರ ಕೊಕ್ಕಿನಲ್ಲಿ ದಾಳಿಂಬೆ ಬೀಜದ ನೆಪದಲ್ಲಿ ಪದ್ಮರಾಗಮಣಿಯನ್ನಿಟ್ಟು ಅದನ್ನು ಸುಮ್ಮನಾಗಿಸುತ್ತಾಳೆ. (ಮುಂದುವರೆಯುವುದು) -ಡಾ. ಬಿ.ಆರ್.ಸುಹಾಸ್ 9880451062 (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/60791ಗೆ ಭೇಟಿನೀಡಿ.