ಬುದ್ಧಿಮಾನ್ ಭವ! ಮಕ್ಕಳಿರಲವ್ವ ಮನೆ ತುಂಬಾ ಎಂದರಷ್ಟೆ ಸಾಲದು, ಬುದ್ಧಿಯಿರಲವ್ವ ಮಕ್ಕಳ ತಲೆ ತುಂಬಾ ಎನ್ನುವುದೂ ಇರಬೇಕು. ಮಕ್ಕಳನ್ನು ಸುಖದ ಸುಪ್ಪತ್ತಿಗೆಯಲ್ಲಿ ಲ್ಯಾಪ್‌ಟಾಪ್, ಐಫೋನುಗಳನ್ನು ಕೊಡಿಸಿ ಪ್ರೋಟೀನು ವಿಟಮಿನ್‌ಗಳನ್ನು ತಿನ್ನಿಸಿ ಬೆಳೆಸಿದ ಮಾತ್ರಕ್ಕೆ ಬುದ್ಧಿವಂತರಾಗಿಬಿಡುವುದಿಲ್ಲ. ಮಕ್ಕಳ ಪೋಷಣೆಯೆಂದರೆ ಕೇವಲ ಉದರ ಪೋಷಣೆಯಷ್ಟೇ ಅಲ್ಲ. ಚುನಾವಣಾ ಕಾಲವಾದ್ದರಿಂದ ಆ ಭಾಷೆಯಲ್ಲಿ ಹೇಳುವುದಾದರೆ ಮಕ್ಕಳ ಪೋಷಣೆ ಎನ್ನುವುದು ಅತಿ ಸೂಕ್ಷ್ಮ ಮತಗಟ್ಟೆ ಕ್ಷೇತ್ರ, ಹಾಗೆಂದು ಮಕ್ಕಳ ಮೇಲೆ ಹದ್ದಿನ ಕಣ್ಣಿಡಬೇಡಿ, ನೀವು ಹದ್ದಲ್ಲ, ಮಕ್ಕಳು ದರೋಡೆಕೋರರೂ ಅಲ್ಲ. ಪೋಷಕರ ಕಣ್ಣಿಡಿ ಸಾಕು. ಮಕ್ಕಳನ್ನು ಬುದ್ಧಿವಂತರನ್ನಾಗಿ ಮತ್ತು ಜ್ಞಾನವಂತರನ್ನಾಗಿ ಬೆಳೆಸುವುದೂ ಒಂದು ಕಲೆ. ಈ ಕಲೆಯ ಬಗ್ಗೆ ವಿಜ್ಞಾನ ಏನನ್ನುತ್ತದೆ ಎನ್ನುವುದನ್ನು ಹತ್ತೇ ಹತ್ತು ಸರಳ ವಿಧಾನಗಳಲ್ಲಿ ನಿರೂಪಿಸಿದ್ದೇವೆ, ಓದಿಕೊಳ್ಳಿ. ಎಲ್ಲೆಲ್ಲೂ ಸಂಗೀತವೇ ನಿಮ್ಮ ಮಕ್ಕಳು ಕರ್ಕಶವಾಗಿ ಮನೆಗಳಲ್ಲಿ ಸೂರು ಹಾರಿಹೋಗುವಂತೆ ಹಾಡುತ್ತಾರೆಯೇ? ಹೌದಾದರೆ ಖುಷಿಪಡಿ. ಇತ್ತೀಚಿನ ಸಮೀಕ್ಷೆಯೊಂದು ಸಂಗೀತಾಭ್ಯಾಸ ಮಕ್ಕಳನ್ನು ಚುರುಕುಗೊಳಿಸುತ್ತದೆ ಎನ್ನುವುದನ್ನು ದೃಢಪಡಿಸಿದೆ. ಆಯ್ದ ಮಕ್ಕಳನ್ನು ವಿವಿಧ ಚಟುವಟಿಕೆಗಳ ಗುಂಪುಗಳಲ್ಲಿ ವಿಂಗಡಿಸಿ ಪರೀಕ್ಷೆ ನಡೆಸಿ ಅಭ್ಯಸಿಸಿದಾಗ ಸಂಗೀತದ ಗುಂಪಿನಲ್ಲಿದ್ದ ಮಕ್ಕಳ ಬುದ್ಧಿಮತ್ತೆ, ಐ್ಕನಲ್ಲಿ ಇತರ ಗುಂಪಿನ ಮಕ್ಕಳಿಗಿಂತ ಅಲ್ಪ ಪ್ರಮಾಣದ ಬೆಳವಣಿಗೆಯಾಗಿರುವುದು ಕಂಡುಬಂದಿದೆ. ಈ ಬೆಳವಣಿಗೆ ತೀರಾ ಅಲ್ಪವೆಂದು ಕಡೆಗಣಿಸಬೇಡಿ, ಈಗ ಅದು ಸಣ್ಣಕ್ಕೆ ಕಂಡರೂ ಎಲ್ಲಾ ರೀತಿಯಲ್ಲೂ ಮುಂದೆ ಅದು ಭಾರಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಆಶ್ಚರ್ಯವೆಂಬಂತೆ ಸಂಗೀತಾಭ್ಯಾಸ ಕೇವಲ ಮಕ್ಕಳ ಐ್ಕ ಮಾತ್ರವಲ್ಲ, ದೊಡ್ಡವರ ಬುದ್ಧಿಮತ್ತೆಯನ್ನೂ ಹೆಚ್ಚಿಸಿದೆ. ಇನ್ನು ಮುಂದೆ ದೊಡ್ಡವರು ಕೂಡ ತಮ್ಮ ತಮ್ಮ ಕೆಲಸಗಳಿಗೆ ತೆರಳುವಾಗ, ಬಸ್ಸಿನಲ್ಲಿ, ದಾರಿಯಲ್ಲಿ ನಡೆಯುವಾಗ ಅಥವಾ ಆಫೀಸಿನಲ್ಲಿ ಹಾಡಿಕೊಳ್ಳಬಹುದು. ಇತರರಿಗೆ ನಿಮ್ಮ ಹಾಡಿನಿಂದ ತೊಂದರೆಯಾಗುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಿ. ಆದಷ್ಟು ಒಬ್ಬರೇ, ಏಕಾಂತದಲ್ಲಿದ್ದಾಗ ಹಾಡಿಕೊಳ್ಳಿ. ಬುದ್ಧಿ ಪಡೆಯಲು ಹೋಗಿ ಗುದ್ದು ಪಡೆಯಬೇಡಿ. ನಲಿ ಕಲಿ ಮಕ್ಕಳು ಕ್ರೀಡೆಯಲ್ಲಿ ಮುಂದಿದ್ದರೆ ಸದಾ ಶಾಲಾ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ಓದಿನಲ್ಲಿ ಹಿಂದೆ ಬೀಳುತ್ತಾರೆಂಬ ಭಯ ಬಹುತೇಕ ಪೋಷಕರಿಗೆ. ಮಕ್ಕಳು ಪ್ರಶಸ್ತಿ ಗಳಿಸಿ ಶಾಲೆಯಲ್ಲಿ ಶಹಬ್ಬಾಸ್‌ಗಿರಿ, ಸನ್ಮಾನ ಮಾಡಿಸಿಕೊಂಡು ಮನೆಗೆ ಬಂದರೆ ಪೋಷಕರಿಂದ ಅದಕ್ಕೆ ಕಿಮ್ಮತ್ತಿನ ಬೆಲೆಯೂ ಸಿಕ್ಕದು. ಆದರೆ ಆ ಒಂದು ಕಾರಣಕ್ಕೆ ಮಕ್ಕಳನ್ನು ಕ್ರೀಡೆಯಿಂದ ದೂರವಿಡುವುದು ಸಲ್ಲದು. ಬದಲಾಗಿ ನಿಮ್ಮ ಮಗು ಆಟ ಮತ್ತು ಪಾಠ ಎರಡಕ್ಕೂ ಸಮಾನ ಮಹತ್ವ ನೀಡುವಂತೆ ಪ್ರೋತ್ಸಾಹಿಸಿ. ಆಟ, ವ್ಯಾಯಾಮದ ನಂತರ ಕಲಿಯುವ ಮಗುವಿಗೆ ಹೊಸ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಶೇಕಡಾ 20ರಷ್ಟು ಹೆಚ್ಚಿರುತ್ತದೆಂದು ಸಂಶೋಧನೆಯಿಂದ ತಿಳಿದುಬಂದಿದೆ. ಹೀಗಿರುವಾಗ, ಓಟದಲ್ಲಿ ಮುಂದಿರುವ ಮಗಳು ದೊಡ್ಡವಳಾದ ನಂತರ ಓಡಿಹೋಗುತ್ತಾಳೆಂಬ ಭಯ ಅನವಶ್ಯಕ. ಎಲ್ಲರೂ ಪಿ. ಟಿ. ಉಷಾ ಆಗಲು ಸಾಧ್ಯವಿಲ್ಲ. ಆಟ, ವ್ಯಾಯಾಮಗಳಿಂದ ಮೆದುಳಿಗೆ ರಕ್ತ ಸಂಚಾರ ಹೆಚ್ಚಾಗಿ ಆಗುವುದರಿಂದ ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ, ಬುದ್ಧಿ ಚುರುಕಾಗುತ್ತದೆ. ಆದ್ದರಿಂದ ನಿಮ್ಮ ಮಗುವಿಗೆ ಆಟವಾಡಲೂ ಸಮಯ ಕೊಡಿ. ಒಟ್ಟಿಗೆ ಓದಿ ನಿಮ್ಮ ಮಗು ಇದೀಗ ತಾನೆ ಓದಲು ಶುರು ಮಾಡಿದೆಯೇ? ಹಾಗಾದರೆ ನೀವು ಪುಸ್ತಕ ಓದುತ್ತಾ ಮಗುವನ್ನು ಪುಸ್ತಕದಲ್ಲಿನ ಚಿತ್ರಗಳನ್ನು ನೋಡುವಂತೆ ಮಾಡಿ ಸುಮ್ಮನೆ ಕೂರಲು ಬಿಡಬೇಡಿ. ಮಗುವನ್ನು ನಿಮ್ಮ ಜೊತೆ ಓದುವಂತೆ ಪ್ರೋತ್ಸಾಹಿಸಿ. ನೀವೂ ನಿಮ್ಮ ಮಗುವಿನ ಜೊತೆಯಲ್ಲೇ ಓದಿ. ಇದು ಓದಿನ ಕಲೆಯನ್ನು ಕಲಿಯಲು ಮಗುವಿಗೆ ಸಹಕಾರಿಯಾಗಲಿದೆ. ಇದರಿಂದಾಗಿ ನಿಮ್ಮ ತಪ್ಪುಗಳು ನಿಮ್ಮ ಮಕ್ಕಳಿಗೆ ತಿಳಿಯುವುದೆಂಬ ನಾಚಿಕೆ ಬೇಡ, ಮಕ್ಕಳ ತಪ್ಪನ್ನು ದೊಡ್ಡವರು ಕ್ಷಮಿಸುವಂತೆ ಅವರೂ ನಿಮ್ಮ ತಪ್ಪನ್ನು ಕ್ಷಮಿಸುತ್ತಾರೆ ಬಿಡಿ. ಒಟ್ಟಿಗೆ ಓದುವ ಈ ವಿಧಾನ ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಪೋಷಕರು ಮಕ್ಕಳ ಜೊತೆ ಒಟ್ಟಿಗೆ ಓದುವುದರಿಂದ ಅವರೊಂದಿಗೆ ಹೆಚ್ಚಿನ ಸಮಯ ಕಳೆದಂತೆಯೂ ಆಗುವುದು. ಶಿಸ್ತಿನ ಸಿಪಾಯಿ ಜೀವನದಲ್ಲಿ ಏಳಿಗೆ ಹೊಂದಲು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ಶಿಸ್ತನ್ನು ಅಭ್ಯಾಸ ಮಾಡಿಸಿದರೆ ಒಳ್ಳೆಯದು. ಚಿಕ್ಕಂದಿನಲ್ಲಿ ಕಲಿತದ್ದು ದೊಡ್ಡವನಾದ ಮೇಲೂ ಮರೆತು ಹೋಗುವುದಿಲ್ಲ, ಉದಾಹರಣೆಗೆ ಮಹಾಭಾರತದ ಅಭಿಮನ್ಯು ಇಲ್ಲವೆ? ಆದರೆ ಒಂದು ವಿಷಯ, ಏನೇ ಕಲಿಸಿದರೂ ಅರ್ಧಂಬರ್ಧ ಕಲಿಸಬೇಡಿ, ಅಷ್ಟೆ. ಅದಕ್ಕೂ ಉದಾಹರಣೆಯಾಗಿ ಮಹಾಭಾರತದ ಅಭಿಮನ್ಯು ಇದ್ದಾನೆ. ಇನ್ನೂ ಚಿಕ್ಕವನು, ದೊಡ್ಡವನಾದ ಮೇಲೆ ನೋಡಿದರಾಯಿತು ಎಂದು ಹೆತ್ತವರೇ ಅಶಿಸ್ತು ತೋರಿದರೆ ಚೆನ್ನಾಗಿರೋದಿಲ್ಲ. ರಾಜಕೀಯ ಪಕ್ಷಗಳಲ್ಲಿ ಅಶಿಸ್ತು ತೋರಿದವರನ್ನು ತೋರಿಕೆಗೆ ಮಾತ್ರ ಶಿಕ್ಷಿಸಿದಂತೆ ಮಾಡಿ ವಿವಾದ ತಣ್ಣಗಾದ ನಂತರ ಅವರಿಗೆ ಬಡ್ತಿ ಕೊಡುವ ಹೈಕಮಾಂಡ್ ಮಾದರಿಯನ್ನು ಹೆತ್ತವರು ಅನುಸರಿಸಬಾರದು. ಶಿಸ್ತಿಲ್ಲದಿದ್ದರೆ ಎಷ್ಟೆ ಹೆಚ್ಚಾಗಿ ಐ್ಕ ಹೊಂದಿದ್ದರೂ ಪ್ರಯೋಜನವಾಗದು. ನಿದ್ದೆಗೆಡಿಸಬೇಡಿ ನಿಮ್ಮ ಮಗು ನಿದ್ರಿಸುತ್ತಿದ್ದರೆ ತಾನಾಗೆ ಏಳಲು ಬಿಡಿ, ಆದರೆ ಸಾಮಾನ್ಯವಾಗಿ ಏಳುವ ಸಮಯಕ್ಕೆ ಮುಂಚಿತವಾಗಿ ಮಾತ್ರ ಮಗುವನ್ನು ಎಬ್ಬಿಸಬೇಡಿ. 6ನೇ ತರಗತಿ ಓದುವ ಹುಡುಗನ ನಿದ್ದೆಕೆಡಿಸಿದರೆ ಆತ 4ನೇ ತರಗತಿಯ ಬುದ್ಧಿಮತ್ತೆಗೆ ಹಿಂಬಡ್ತಿ ಹೊಂದುತ್ತಾನೆ. ಅಂದರೆ ಒಂದು ಗಂಟೆಯ ನಿದ್ರಾಭಂಗ ಎರಡು ವರ್ಷದ ಬುದ್ಧಿ ನಷ್ಟವನ್ನುಂಟು ಮಾಡಬಲ್ಲದು. 4-5 ಗಂಟೆಗಳಷ್ಟು ನಿದ್ದೆಗೆಡಿಸಿದರೆ ಶಿಶುವಿನ ಬುದ್ಧಿಮತ್ತೆಯನ್ನು ಹೊಂದಿ ಹೆತ್ತವರನ್ನೇ ಯಾರೆಂದು ಕೇಳಿದರೂ ಕೇಳಬಹುದು! ಹಾಗಾದಾಗ ಟಿವಿಯಲ್ಲಿ ತಮ್ಮ ವಿಶಿಷ್ಟ ಶಕ್ತಿಯಿಂದ, ದಿವ್ಯ ದೃಷ್ಟಿಯಿಂದ ಮಲೇಷ್ಯಾ ವಿಮಾನ ಹುಡುಕಿಕೊಟ್ಟ ಸ್ವಾಮೀಜಿ ಬಂದರೂ ಏನೂ ಮಾಡಲಾಗದು. ನಿದ್ದೆ ಮತ್ತು ಜ್ಞಾನಕ್ಕೆ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಪರೀಕ್ಷಾ ಕಾಲವೆಂದು ಮಕ್ಕಳನ್ನು ನಿದ್ದೆಗೆಟ್ಟು ಓದಿಸದಿರಿ, ಅದರ ಪರಿಣಾಮ ಪರೀಕ್ಷೆಯ ಫಲಿತಾಂಶದಲ್ಲಿ ತಿಳಿಯುವುದು. ಆದ್ದರಿಂದ ಬದುಕಿನಲ್ಲಿ ಸಾಧನೆ ಮಾಡಲು ಮಕ್ಕಳಿಗೆ ಮಾತ್ರವಲ್ಲದೆ ಎಲ್ಲ ವಯೋವಾನದವರಿಗೂ ತೃಪ್ತಿಕರ ನಿದ್ದೆ ಅತ್ಯಗತ್ಯ. ನಿರಂತರ ಕಲಿಕೆ ಮೆದುಳನ್ನು ಶಾರ್ಪ್ ಆಗಿಸಲು ಆಟಿಕೆ, ವೀಡಿಯೋ ಗೇಮ್ಸ್ ಇನ್ನೂ ಏನೇನೆಲ್ಲಾ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳಿಂದ ಗಮನಾರ್ಹ ಬೆಳವಣಿಗೆ ಸಾಧ್ಯವಿಲ್ಲ. ಅವುಗಳನ್ನು ಆಡಿದ ಮಾತ್ರಕ್ಕೆ ಮೈಂಡ್ ಶಾರ್ಪ್ ಆಗೋಕೆ ಅದೇನು ಪೆನ್ಸಿಲ್ ಶಾರ್ಪ್‌ನರ್ ತರಹ ಅಲ್ಲ. ಕಲಿಕೆ ಯಾವತ್ತೂ ನಿಂತ ನೀರಾಗಬಾರದು. ನಿರಂತರ ಕಲಿಕೆಯೇ ಬುದ್ಧಿವಂತರಾಗೋಕೆ ಶಾಶ್ವತ ಪರಿಹಾರ. ಮಕ್ಕಳಿಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಮೂಡಿಸಬೇಕು. ಸಾಮಾನ್ಯವಾಗಿ ಮಕ್ಕಳು ಏನಾದರೂ ಪ್ರಶ್ನೆ ಕೇಳಿದರೆ ಅದನ್ನು ಉಡಾಫೆಯಾಗಿ ತೆಗೆದುಕೊಳ್ಳುವ ಪೋಷಕರೇ ಹೆಚ್ಚು. ಮಕ್ಕಳ ಪ್ರಶ್ನೆ ಎಷ್ಟೆ ತರಲೆಯಾಗಿದ್ದರೂ ಅಥವಾ ತಲೆಬುಡಇಲ್ಲದಂತಿದ್ದರೂ ಸಾವಧಾನವಾಗಿ ಅವರ ಪ್ರಶ್ನೆಗಳಿಗೆ ಉತ್ತರಿಸಿ. ಇಲ್ಲವಾದರೆ ಮುಂದೆ ದೊಡ್ಡವರಾದಾಗ ನಿಮ್ಮ ಪ್ರಶ್ನೆಗಳಿಗೆ ಅವರು ಉತ್ತರಿಸದೆ ಎದುರೇಟು ನೀಡಬಹುದು. ಮಕ್ಕಳು ಪ್ರಶ್ನೆಗಳನ್ನು ಕೇಳಿದರೆ ಸಿಟ್ಟಾಗಬೇಡಿ, ಖುಷಿಪಡಿ, ಇದು ತಮ್ಮ ಜ್ಞಾನವನ್ನು ್ಡಠಜಛಡಿಜ ಆಗಿಡುವುದಕ್ಕೆ ಅವರನ್ನುಪ್ರೇರೇಪಿಸುತ್ತದೆ. ಹೊಟ್ಟೆಗೆ ಹಾಕೊಳ್ಳಿ ಕೇವಲ ತಪ್ಪುಗಳನ್ನು ಮಾತ್ರವೇ ಹೊಟ್ಟೆಗೆ ಹಾಕೊಂಡ್ರೆ ಸಾಲದು, ತಿಂಡಿ ತಿನಿಸುಗಳನ್ನೂ ಹೊಟ್ಟೆಗೆ ಹಾಕಿಕೊಳ್ಳಬೇಕು. ಖಾಲಿ ಹೊಟ್ಟೆ ಖಾಲಿ ತಲೆ ಎರಡೂ ಒಂದೇ, ಹೊಟ್ಟೆ ಖಾಲಿಯಾದರೆ ಸದ್ದು ಮಾಡುತ್ತೆ ಆದರೆ ತಲೆ ಮಾಡಲ್ಲ ಅಷ್ಟೆ ವ್ಯತ್ಯಾಸ. ಎಂದೂ ಖಾಲಿ ಹೊಟ್ಟೆಯಲ್ಲಿ ಮಕ್ಕಳನ್ನು ಓದಿಸಬೇಡಿ. ಹೇಗೆ ನೀವು ಮಕ್ಕಳನ್ನು ಬೆಳಗ್ಗೆ ಎಬ್ಬಿಸಿ ಓದಿಸಲು ಮರೆಯುವುದಿಲ್ಲವೋ ಹಾಗೆಯೇ ಅವರಿಗೆ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಕೊಡಲು ಮರೆಯದಿರಿ. ಆಹಾರದಲ್ಲಿ ಪೌಷ್ಠಿಕಾಂಶವಿರಬೇಕಾದ್ದು ಕೂಡಾ ಬಹಳ ಮುಖ್ಯ. ಇಂದಿನ ಮಕ್ಕಳಿಗೆ ಮನೆಯಲ್ಲಿ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಸಿಗುತ್ತಿದ್ದರೂ ಆರೋಗ್ಯ ಕೈಕೊಡುತ್ತಿರುವುದಕ್ಕೆ ಮನೆಯಲ್ಲಿನ ಆಹಾರ ಪದ್ಧತಿಯೇ ಕಾರಣ. ಇಡ್ಲಿ, ದೋಸೆ, ಇನ್ನೂ ಥರ ಥರದ ಅಡುಗೆ ಮಾಡಲು ಪುರುಸೊತ್ತಿಲ್ಲದೆ ಹೋಟೆಲ್‌ನಲ್ಲಿ ಸಿದ್ಧಗೊಂಡ ಖಾದ್ಯಗಳೋ, ನೂಡಲ್ಸ್, ಪಾಸ್ತಾ ಮುಂತಾದವುಗಳಿಂದ ಮಕ್ಕಳ ಹೊಟ್ಟೆ ತುಂಬಿಸಿಬಿಡುತ್ತಾರೆ. ಹೀಗಾದಾಗ ಮಕ್ಕಳಿಗೆ ಅಗತ್ಯ ಪೋಷಕಾಂಶ ಗಳು ಎಲ್ಲಿಂದ ಸಿಗಬೇಕು. ಇದರಿಂದಾಗಿ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಎರಡೂ ಕುಂಠಿತವಾಗುತ್ತದೆ. ಖುಷಿಪಡಿಸಿ ಸಂತಸದಿಂದಿರುವ ಮಕ್ಕಳ ಮನಸ್ಸು ಅನೇಕ ಪಾಸಿಟಿವ್ ವಿಚಾರಗಳ ತವರುಮನೆ. ಮಕ್ಕಳು ಸಂತಸದಿಂದಿದ್ದರೆ ಅದೇ ಅವರನ್ನು ಯಶಸ್ಸಿನ ದಾರಿಗೆ ಕರೆದೊಯ್ಯುತ್ತದೆ. ಆದ್ದರಿಂದ ಮಕ್ಕಳು ನಿಮ್ಮನ್ನೆಷ್ಟೇ ಗೋಳು ಹುಯ್ದುಕೊಂಡರೂ ನೀವು ಅವರನ್ನು ಗೋಳು ಹುಯ್ದುಕೊಳ್ಳದೆ ಖುಷಿಯಾಗಿರಿಸಿ, ಅವರ ಖುಷಿಯಲ್ಲಿ ನಿಮ್ಮ ಖುಷಿಯನ್ನು ಕಾಣಿ. ತಮ್ಮ ಬದುಕಿನಲ್ಲಿ ಸಾಧನೆ ಮಾಡಿದ, ಯಶಸ್ವಿ ವ್ಯಕ್ತಿಗಳನ್ನು ಸಂದರ್ಶಿಸಿದಾಗ ಅವರೆಲ್ಲರಲ್ಲೂ ಕಂಡುಬಂದ ಸಾಮಾನ್ಯ ಸಂಗತಿಯೇನೆಂದರೆ ಅವರೆಲ್ಲರೂ ಯಶಸ್ಸು ಸಿಗುವ ಮುಂಚೆಯೂ ಸಂತೋಷದಿಂದಿದ್ದರು, ತಾಳ್ಮೆಯಿಂದಿದ್ದರು. ಮಕ್ಕಳಲ್ಲಿ ಸಂತಸ, ತಾಳ್ಮೆ ಜನ್ಮಜಾತವಾಗಿ ಬಂದಿದ್ದರೂ ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳ ಮನಸ್ಸು ವಾತಾವರಣದ ದೆಸೆಯಿಂದ ಅವೆಲ್ಲವೂ ಕಳೆದುಹೋಗಿ ಮನುಷ್ಯ ಸೃಷ್ಟಿಯಾದ ದ್ವೇಷ, ಅಸೂಯೆ ಭಾವನೆಗಳಿಂದ ತುಂಬಿಕೊಳ್ಳುತ್ತವೆ. ಮನಸ್ಸು ಸಂತಸದಿಂದಿದ್ದರೆ ಕೆಟ್ಟ ವಿಚಾರಗಳು ಸುಳಿಯುವುದಿಲ್ಲ. ಮನಸ್ಸು ಏಕಾಗ್ರತೆ ಹೊಂದಿ ಬುದ್ಧಿವಂತನಾಗಲು ಸಹಕಾರಿಯಾಗುತ್ತದೆ. ವಂಶವಾಹಿನಿ ಸಂಸಾರದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರ ವಂಶವಾಹಿಗಳ ಪ್ರಭಾವ ಮಕ್ಕಳ ಮೇಲೆ ಆಗಿಯೇ ಇರುತ್ತದೆ, ಆದರೆ ಮಕ್ಕಳ ಬೆಳವಣಿಗೆ ಮತ್ತು ಅವರ ಭವಿಷ್ಯವನ್ನು ವಂಶವಾಹಿಗಳ ಮೇಲೆ ನಿರ್ಭರಗೊಳಿಸುವುದು ಸರಿಯಲ್ಲ. ಎಲ್ಲಕ್ಕಿಂತ ನೀವು ನಿಮ್ಮ ಮಕ್ಕಳನ್ನು ಹೇಗೆ ಬೆಳೆಸಿದ್ದೀರಿ ಎಂಬುದು ತುಂಬಾ ಮುಖ್ಯವಾಗುತ್ತದೆ. 'ನಗು ಅಪ್ಪನಂತೆಯೇ', 'ನಡೆ ತಾತನಂತೆ' ಎಂದು ಮಕ್ಕಳ ಪ್ರತಿ ಯೊಂದು ವ್ಯಕ್ತಿತ್ವವನ್ನು ಕುಟುಂಬದ ಇತರರಿಗೆ ಹೋಲಿಸುವುದನ್ನು ನೀವು ನೋಡಿರಬಹುದು. ಮಕ್ಕಳ ಬುದ್ಧಿಯ ವಿಷಯಕ್ಕೆ ಬಂದಾಗ ಕುಟುಂಬದ ಹಳೆ ತಲೆಗಳಿಗೆ ಕೆಲವು ಹೋಲಿಕೆಗಳನ್ನು ಮಾಡಬಹುದಾದರೂ ಪೂರ್ತಿಯಾಗಿ ಎಲ್ಲಾ ಕ್ರೆಡಿಟ್ಟನ್ನೂ ಅವರಿಗೇ ಕೊಡುವುದು ನ್ಯಾಯಸಮ್ಮತವಲ್ಲ. ಮಕ್ಕಳು ಯಾವ ವಾತಾವರಣದಲ್ಲಿ ಬೆಳೆದಿದ್ದಾರೆ, ಅವರ ಸ್ನೇಹಿತ ವರ್ಗದಲ್ಲಿ ಯಾವ ತರಹದ ಮಕ್ಕಳಿದ್ದಾರೆ ಇಂತಹ ಎಲ್ಲಾ ಚಿಕ್ಕ ವಿಚಾರಗಳೂ ಮಹತ್ವ ಪಡೆದುಕೊಳ್ಳುತ್ತವೆ. ಆದ್ದರಿಂದ ಮಕ್ಕಳು ತಪ್ಪು ಮಾಡಿದಾಗಲೆಲ್ಲ ಅದನ್ನು ಹಿರೀಕರ ಮೇಲೆ ಹಾಕಿ ಗೂಬೆ ಕೂರಿಸಬೇಡಿ, ಗೂಬೆಗೂ ಹಿರೀಕರಿಗೂ ಆಗಿ ಬರುವುದಿಲ್ಲ. ಬದಲಾಗಿ ಮಕ್ಕಳು ಬೆಳೆಯಲು ಒಂದೊಳ್ಳೆ ವಾತಾವರಣವನ್ನು ಸೃಷ್ಟಿಸಿ. ನಂಬಿಕೆಯಿರಬೇಕು ಹೆತ್ತವರಿಗೆ ಹೆಗ್ಗಣ ಕೂಡ ಮುದ್ದು ಎಂದು ಗಾದೆಯಿಲ್ಲವೆ, ಅದು ದಿಟ. ಆದ್ದರಿಂದ ಅದನ್ನು ಶಿರಸಾವಹಿಸಿ ಪಾಲಿಸಿ. ಹೆಗ್ಗಣವನ್ನು ನಿಮ್ಮ ಮಕ್ಕಳಂತೆ ಮುದ್ದಿಸಿ ಎನ್ನುತ್ತಿಲ್ಲ, ಇಲ್ಲಾ ನಿಮ್ಮ ಮಕ್ಕಳನ್ನು ಹೆಗ್ಗಣವೆಂದು ಹೇಳಿ ಮರ್ಯಾದೆ ತೆಗೆಯುತ್ತಿದ್ದೇನೆಂದೂ ಗಾಬರಿ ಬೀಳಬೇಡಿ. ನಿಮ್ಮ ಮಕ್ಕಳ ಮೇಲೆ ನೀವು ನಂಬಿಕೆಯಿಡಿ ಎಂದಷ್ಟೆ ಹೇಳುತ್ತಿದ್ದೇನೆ. ಮಕ್ಕಳು ಓದಿನಲ್ಲಿ ಹಿಂದಿದ್ದರೂ ಅದನ್ನು ಅವರ ಮುಂದೆ ತೋರ್ಪಡಿಸಿ ಹೀಯ್ಯಾಳಿಸದಿರಿ. ಯಾವತ್ತೂ ನಿಮ್ಮ ಮಕ್ಕಳನ್ನು ಬುದ್ಧಿವಂತರಂತೆಯೆ ಕಾಣಿ, ಅದು ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ. ಒಂದು ಪ್ರಯೋಗದಲ್ಲಿ ಶಾಲೆಯ ಸಾಮಾನ್ಯ ವಿದ್ಯಾರ್ಥಿಗಳನ್ನು ಒಂದು ಗುಂಪು ಮಾಡಿ ಬುದ್ಧಿವಂತರೆಂದು ಸನ್ಮಾನ ಮಾಡಲಾಗುತ್ತದೆ. ಅವರನ್ನು ಬುದ್ಧಿವಂತರಂತೆ ನಡೆಸಿಕೊಳ್ಳಬೇಕೆಂದು ಶಿಕ್ಷಕರಿಗೆ ಮಾರ್ಗದರ್ಶನ ಕೊಡಲಾಗುತ್ತದೆ. ಮುಂದೆ ಅದೇ ವಿದ್ಯಾರ್ಥಿಗಳ ಗುಂಪು ಇತರ ನಿಜವಾಗಲೂ ಹೆಚ್ಚು ಅಂಕ ಗಳಿಸುತ್ತಿದ್ದ ಗುಂಪಿಗಿಂತ ಸರಾಸರಿ ಹೆಚ್ಚು ಅಂಕ ಗಳಿಸುತ್ತಾರೆ. ಆದ್ದರಿಂದ ನೀವು ಮಕ್ಕಳನ್ನು ಬುದ್ಧಿವಂತರೆಂದು ಟ್ರೀಟ್ ಮಾಡಿದರೆ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಒಂದು ವೇಳೆ ಅವರು ದಡ್ಡರಾಗಿದ್ದರೂ, ಜಾಗೃತಗೊಂಡು ಬುದ್ಧಿವಂತನಾಗುವ ನಿಟ್ಟಿನಲ್ಲಿ ಶ್ರಮಪಟ್ಟು ನಿಜಕ್ಕೂ ಬುದ್ಧಿವಂತರಾಗಲು ಪ್ರಯತ್ನಿಸುತ್ತಾರೆ. -ಹರ್ಷವರ್ಧನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.