ಸೂಪರ್‌ಸ್ಟಾರ್‌ನ ಆತ್ಮಕಥೆ: ಕೂಲಿ, ಬಡಗಿ, ಬಸ್ ನಿರ್ವಾಹಕ ಪಿಯುಸಿ ಮುಗಿಸಿದ ಶಿವಾಜಿ ಮುಂದಿನ... ಪಿಯುಸಿ ಮುಗಿಸಿದ ಶಿವಾಜಿ ಮುಂದಿನ ಓದಿನಲ್ಲಿ ಆಸಕ್ತಿ ಇಲ್ಲವೆಂದು ಅಣ್ಣನಿಗೆ ಹೇಳಿಬಿಡುತ್ತಾನೆ. ನಾಟಕಗಳಲ್ಲಿ ಅವನ ಆಸಕ್ತಿ ಹೆಚ್ಚಾಗುತ್ತಾ ಹೋಯಿತು. ಶೇಷಾದ್ರಿಪುರಂನಲ್ಲಿ ಮೈಸೂರ್ ಮಷಿನರಿಯಲ್ಲಿ ಕೆಲ ಕಾಲ ಕೆಲಸ ಮಾಡಿದ ಶಿವಾಜಿ ಕೆಲ ಸಮಯದ ಬಳಿಕ ಸಂಬಂಧಿಯೊಬ್ಬರ ಅಂಗಡಿಯಲ್ಲಿ ಮೂಟೆ ಹೊರುವ ಕೆಲಸಕ್ಕೆ ಸೇರಿದ. ಪ್ರತಿ ಮೂಟೆಗೆ 10 ಪೈಸೆ ಮಾತ್ರ ದೊರೆಯುತ್ತಿತ್ತು. ಆದರೂ ಸುಮ್ಮನೆ ಕೂತಿರದೆ ಕೆಲಸ ಮಾಡುತ್ತಿದ್ದಾನಲ್ಲ ಎನ್ನುವ ನೆಮ್ಮದಿ ಅಣ್ಣ ಸತ್ಯನಾರಾಯಣನಿಗೆ. ಆ ಸಮಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ದೂರದ ಸಂಬಂಧಿ ವೆಂಕೋಬ ರಾವ್ ನೆರವಿನಿಂದ ಶಿವಾಜಿಗೆ ಬಸ್ ನಿರ್ವಾಹಕನ ಕೆಲಸವನ್ನು ಸತ್ಯನಾರಾಯಣ ಕೊಡಿಸಿದರು. ಅದು ಕೇವಲ ಶಿಫಾರಸ್ಸಾಗಿರಲಿಲ್ಲ. ಶಿವಾಜಿ ಪರೀಕ್ಷೆಗೆ ಕುಳಿತು ನಿರ್ವಾಹಕನ ಪರವಾನಗಿ ಪಡೆಯಬೇಕಾಗಿತ್ತು. ಅದನ್ನೆಲ್ಲಾ ಪೂರೈಸಿ ಶಿವಾಜಿ ಬೆಂಗಳೂರು ಸಾರಿಗೆ ಸೇವೆಯ ನಿರ್ವಾಹಕ ಪರವಾನಗಿ ಪಡೆದ. 'ನಾನು ನಿರ್ವಾಹಕನಾಗುವ ಮೊದಲು ಸಾಧಾರಣ ವ್ಯಕ್ತಿಯಾಗಿದ್ದೆ. ಕಚೇರಿ ಹುಡುಗ, ಕೂಲಿ, ಬಡಗಿ, ಎಲ್ಲ ಕೆಲಸವನ್ನೂ ಮಾಡಿದೆ' ಎನ್ನುವ ರಜನಿ ನಿರ್ವಾಹಕನಾಗಿದ್ದ ಸಮಯದಲ್ಲಿ ಸಿಕ್ಕ ಗೆಳೆಯನನ್ನು ಈಗಲೂ ತನ್ನ ಪ್ರಾಣ ಸ್ನೇಹಿತನೆಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ರಾಜ ಬಧಾರ್ ಈ ಮುಂಚೆ ಬಂದ ರಜನಿಯ ಆತ್ಮಚರಿತ್ರೆಗಳಲ್ಲೆಲ್ಲಾ ತನ್ನ ಹೆಸರನ್ನು ತಪ್ಪಾಗಿ ಬರೆದಿರುವುದರ ಬಗ್ಗೆ ಬಧಾರ್ ವಿಷಾದಿಸುತ್ತಾರೆ ಎಂದು ಲೇಖಕ ಹೇಳುತ್ತಾರೆ. 'ಕೆಲವರು ನನ್ನನ್ನು 'ರಾಜ್‌' ಎಂದೂ, ಮತ್ತೆ ಕೆಲವರು 'ರಾಜ ಬಹಾದ್ದೂರ್‌' ಎಂದೂ ಕರೆಯುತ್ತಾರೆ. 'ನಾನು ತಮಿಳು ಪರಂಪರೆಯವನು. 'ಬಹಾದ್ದೂರ್‌' ಹೆಸರು ನನ್ನನ್ನು ನೇಪಾಳಿಯವನಂತೆ ಕಾಣುವಂತೆ ಮಾಡುತ್ತದೆ' ಎನ್ನುತ್ತಾರೆ ಬಧಾರ್. ಶಿವಾಜಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದ ದಿನಾಂಕ ಬಧಾರ್‌ಗೆ ಇನ್ನೂ ಚೆನ್ನಾಗಿ ನೆನಪಿದೆ. 'ಮಾರ್ಚ್ 19, 1970 ನಾವಿಬ್ಬರೂ ಒಂದೇ ದಿನ ಕೆಲಸಕ್ಕೆ ಸೇರಿದೆವು. ನಮ್ಮ ಬಸ್ ಮಾರ್ಗಸಂಖ್ಯೆ '10ಎ' - ಶ್ರೀನಗರದಿಂದ ಬೆಂಗಳೂರು ಬಸ್‌ನಿಲ್ದಾಣ. ನಮ್ಮ ಜೋಡಿ ಹಲವು ಬಾರಿ ಒಟ್ಟೊಟ್ಟಿಗೆ ಒಂದೇ ಬಸ್ಸಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಬೆಳಗ್ಗೆ 6 ಗಂಟೆಗೆ ಕೆಲಸ ಶುರುವಾದರೆ ಮಧ್ಯಾಹ್ನ 2 ಗಂಟೆಗೆ ಮುಗಿಯುತ್ತಿತ್ತು. ಅವನ ಹಾಗೆ ವೇಗವಾಗಿ ಟಿಕೆಟ್ ಹಂಚುತ್ತಿದ್ದ ನಿರ್ವಾಹಕರು ಬೇರೆ ಯಾರೂ ಇರಲಿಲ್ಲ. ಟಿಕೆಟ್ ನೀಡಿ ತನ್ನದೇ ಆದ ಸ್ಟೈಲ್‌ನಲ್ಲಿ ಚಿಲ್ಲರೆ ಕೊಡುತ್ತಿದ್ದ. ಸದಾ ತನ್ನ ಮುಂಗುರುಳನ್ನು ಸರಸರನೆ ಬೆರಳುಗಳಲ್ಲಿ ತಿರುವುತ್ತಿದ್ದ. ಅದಕ್ಕೇ ಈಗ ಬಕ್ಕ ತಲೆ' ಎಂದು ಬಧಾರ್ ನೆನೆಸಿಕೊಂಡು ನಗುತ್ತಾರೆ. ತನ್ನ ಪ್ರಯಾಣಿಕರನ್ನು ಹೇಗೆ ಮೋಡಿಮಾಡಬೇಕೆಂಬ ಕಲೆ ಶಿವಾಜಿಗೆ ಕರಗತವಾಗಿಬಿಟ್ಟಿತ್ತು. 'ಸದಾ ಕೀಟಲೆ ಮಾಡುತ್ತಾ ಮನರಂಜನೆ ನೀಡುವ ನಿರ್ವಾಹಕನಿರುವಾಗ ಪ್ರಯಾಣಿಕರು ಬೇರೆ ಬಸ್‌ಗಳಲ್ಲಿ ಹೇಗೆ ಹೋಗುತ್ತಾರೆ? ಹಲವರು ಮುಂಚೆ ಹೋದ ಬಸ್ ಹತ್ತದೆ ನಮ್ಮ ಬಸ್‌ಗಾಗಿಯೇ ಕಾಯುತ್ತಾ ನಿಲ್ಲುತ್ತಿದ್ದರು'. ಮಹಿಳಾ ಪ್ರಯಾಣಿಕರನ್ನು ಛೇಡಿಸುತ್ತಿದ್ದ ಶಿವಾಜಿ ಯಾರನ್ನಾದರೂ ಪ್ರೀತಿಸುತ್ತಿದ್ದರೇ? ಎಂದು ಕೇಳುವ ಲೇಖಕರಿಗೆ, 'ಇಲ್ಲಾ' ಎಂದು ನಿರಾಕರಿಸುವ ಬಧಾರ್, 'ಆ ರೀತಿ ಏನೂ ಇರಲಿಲ್ಲ. ಆತನಿಗೆ ಯಾವ ಪ್ರೇಮವೂ ಆಗಿರಲಿಲ್ಲ' ಎಂದು ಹೇಳುತ್ತಾರೆ. ಆದರೆ ಕೆಲವು ವರ್ಷಗಳ ಕೆಳಗೆ ಸಾರ್ವಜನಿಕ ವೇದಿಕೆಯೊಂದರಲ್ಲಿ ಪತ್ನಿ ಲತಾ, ಮಗಳು ಐಶ್ವರ್ಯ ಮತ್ತು ಅಳಿಯ ಧನುಷ್ ಉಪಸ್ಥಿತಿಯಲ್ಲಿ ದಕ್ಷಿಣ ಭಾರತದ ಮೇರು ನಿರ್ದೇಶಕ ಕೆ. ಬಾಲಚಂದರ್ 'ನಿರ್ವಾಹಕನಾಗಿದ್ದಾಗ ಯಾರನ್ನಾದರೂ ಪ್ರೀತಿಸಿದ್ದೆಯ?' ಎಂದು ನೇರವಾಗಿ ಪ್ರಶ್ನಿಸಿದಾಗ ರಜನಿಕಾಂತ್, 'ಹೌದು, ಪ್ರೀತಿಸಿದ್ದೆ' ಎಂದು ಸರಳವಾಗಿ ಹೇಳಿದ್ದರು. ಆದರೆ ಆಕೆ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಲೂ ನಿರಾಕರಿಸಿದ್ದರು! ಕೆಲಸದ ಬಳಿಕ ಮನೆಗೆ ತೆರಳುತ್ತಿದ್ದ ಶಿವಾಜಿ ಪ್ರತಿ ಸಾಯಂಕಾಲ ಹನುಮಂತನಗರದಲ್ಲಿದ್ದ ಬಧಾರ್ ಮನೆಗೆ ತೆರಳುತ್ತಿದ್ದರು. ಅಲ್ಲಿಂದ ಒಟ್ಟಿಗೆ ಚಾಮರಾಜಪೇಟೆ ಪೋಲಿಸ್ ಠಾಣೆಯ ಬಳಿಯಿದ್ದ ಸಭಾಂಗಣದಲ್ಲಿ ನಾಟಕಗಳ ಪೂರ್ವಾಭ್ಯಾಸವನ್ನು ಸಂಜೆ 5ರಿಂದ ರಾತ್ರಿ 8 ಗಂಟೆಯವೆರೆಗೆ ಮಾಡುತ್ತಿದ್ದರು. ಬಳಿಕ ಕಲಾಸಿಪಾಳ್ಯದವರೆಗೆ ನಡೆದು ಇಬ್ಬರೂ ಕುಡಿಯುತ್ತಿದ್ದರು. 'ಅವನು ಸಾರಾಯಿ ಕುಡಿಯುತ್ತಿದ್ದ, ನಾನು ಬೀರ್ ಕುಡಿಯುತ್ತಿದ್ದೆ' ಎಂದು ಬಧಾರ್ ನೆನೆಸಿಕೊಳ್ಳುತ್ತಾರೆ. ಬಳಿಕ ಇಬ್ಬರೂ ನಡೆದು ತಮ್ಮ ಮನೆಗೆ ತೆರಳುತ್ತಿದ್ದರು. ಅವರ ಮಾತುಕತೆ ಸದಾ ಸಿನೆಮಾದ ಕುರಿತೇ ಆಗಿರುತ್ತಿತ್ತು. ಪ್ರತಿ ವಾರವೂ ಬಿಡುಗಡೆಯಾಗುತ್ತಿದ್ದ ಶಿವಾಜಿ ಗಣೇಶನ್, ಎಂಜಿಆರ್, ರಾಜ್‌ಕುಮಾರ್ ಚಿತ್ರಗಳನ್ನೂ ತಪ್ಪದೆ ನೋಡುತ್ತಿದ್ದರು. 'ಚಿತ್ರ ಮುಗಿದ ಬಳಿಕ ಅವನು ನಾಯಕರ ಅನುಕರಣೆ ಮಾಡುತ್ತಿದ್ದ. ನಾಟಕಗಳಲ್ಲಿ ಅವನು ಮಾಡುತ್ತಿದ್ದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುತ್ತಿದ್ದ. ದುರ್ಯೋಧನನ ಪಾತ್ರದಲ್ಲಿ ಗದೆ ಎತ್ತಿ ಭುಜದ ಮೇಲೆ ಇರಿಸಿಕೊಳ್ಳುವ ಶೈಲಿಯೇ ಬೇರೆಆಗಿತ್ತು. ಬೇರೆ ಯಾರೂ ಆ ರೀತಿಯಲ್ಲಿ ಮುಂಚೆ ಮಾಡಿರಲಿಲ್ಲ. ಕಟ್ಟಿ ಎತ್ತುವುದರಲ್ಲಿ, ನಡೆಯುವುದರಲ್ಲಿ, ಎಲ್ಲದರಲ್ಲೂ ಒಂದು ಬೇರೆಯದೇ ಆದ, ಅವನದೇ ಆದ ಒಂದು ಶೈಲಿಯಿತ್ತು. ತನ್ನದೇ ಧೋರಣೆಯಲ್ಲಿ ಸಂಭಾಷಣೆಯನ್ನು ಹೇಳುತ್ತಿದ್ದ' ಎನ್ನುವ ಬಧಾರ್ ಅವನ ರೀತಿಯನ್ನು ಕಂಡು ಒಮ್ಮೆ ಬೆರಗಾಗಿ 'ನೋಡಿಲ್ಲಿ, ನಿನಗೆ ನಿನ್ನ ಪ್ರತಿಭೆಯ ಅರಿವಿಲ್ಲ. ನಿನ್ನನ್ನು ಹತ್ತಿರದಿಂದ ನೋಡಿದ್ದೇನೆ. ನೀನು ಬಹಳ ಚೆನ್ನಾಗಿ ಅಭಿನಯಿಸುತ್ತೀಯೇ. ನೀನು ಸ್ಟೇಜ್ ಮೇಲೆ ಬಂದಾಗ ಜನ ಹೇಗೆ ಕೇಕೆ ಹೊಡೆಯುತ್ತಾ, ಚಪ್ಪಾಳೆ ಹೊಡೆಯುತ್ತಾರೆ ನೋಡು. ನೀನು ಸಿನೆಮಾಗಳಲ್ಲಿ ಅಭಿನಯಿಸು' ಎಂದು ಗೆಳೆಯನನ್ನು ಪ್ರೋತ್ಸಾಹಿಸುತ್ತಾರೆ. ರಜನಿ ಇದನ್ನು ಸದಾ ನೆನೆಸಿಕೊಳ್ಳುತ್ತಾರೆ: 'ರಂಗಭೂಮಿ ನನ್ನ ತಾಯಿಯಿದ್ದ ಹಾಗೆ. ನಾನು ಬಸ್ ನಿರ್ವಾಹಕನಾಗಿದ್ದಾಗ 25ಕ್ಕೂ ಹೆಚ್ಚು ನಾಟಕಗಳಲ್ಲಿ ಸತತವಾಗಿಅಭಿನಯಿಸಿದ್ದೆ. ನನ್ನ ಗೆಳೆಯರು, ಚಾಲಕರು ಮತ್ತು ಇತರೆ ನಿರ್ವಾಹಕರು ನನ್ನನ್ನು ಸಿನೆಮಾಗಳಲ್ಲಿ ಏಕೆ ಅಭಿನಯಿಸಬಾರದು? ನೀನೊಬ್ಬ ಒಳ್ಳೆಯ ಖಳನಾಯಕನಾಗುತ್ತೀ ಎನ್ನುತ್ತಿದ್ದರು. ಅವರು ನನ್ನನ್ನು ಉತ್ತೇಜಿಸುತ್ತಿದ್ದರು. ನನಗೆ ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಯಾರ ಮುಂದೆಯೂ ಸಹಾಯ ಮಾಡಿ ಎಂದು ಕೇಳುವ ಸ್ವಭಾವ ನನ್ನದಾಗಿರಲಿಲ್ಲ. ಯಾರ ಬಳಿ ಕೇಳಲೂ ನನಗೆ ಮುಜುಗರವಾಗುತ್ತಿತ್ತು. ಕಾರಣ ನಾನೇನೂ ಸ್ಫುರದ್ರೂಪಿಯಲ್ಲ ಎಂದು ನನಗೆ ತಿಳಿದಿತ್ತು. ನಾನೊಬ್ಬ ನಿರ್ವಾಹಕ, ನನಗೊಂದು ಅವಕಾಶ ಕೊಡಿ ಎಂದರೆ ನನಗೆ ಯಾರು ಅವಕಾಶ ಕೊಡುತ್ತಿದ್ದರು?'.(ಮುಂದುವರಿಯುವುದು) - ಚೈತ್ರಾ ಅರ್ಜುನಪುರಿ @. (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.