2025ರ ರಾಜ್ಯೋತ್ಸವ ಹೇಗಿರುತ್ತದೆ? 'ಮಾಮ್ ವಾಟ್ ಈಸ್ ಕನ್ನಡ್?' ಅಮ್ಮ ಹೇಳುತ್ತಾಳೆ, 'ಒನ್ಸ್ ಅಪಾನ್ ಎ ಟೈಮ್... 'ಮಾಮ್ ವಾಟ್ ಈಸ್ ಕನ್ನಡ್?' ಅಮ್ಮ ಹೇಳುತ್ತಾಳೆ, 'ಒನ್ಸ್ ಅಪಾನ್ ಎ ಟೈಮ್ ದೇರ್ ಯೂಸಡ್ ಟು ಬಿ ಎ ಲ್ಯಾಂಗ್ವೇಜ್ ಕಾಲ್ಡ್ ಕನ್ನಡ. ಬಹಳ ಜನ ಅದೇ ಭಾಷೆಯಲ್ಲಿ ಮಾತನಾಡುತ್ತಿದ್ದರು. ನಾನು ಕೂಡ ಕಾನ್ವೆಂಟ್ನಲ್ಲಿ ಆ ಭಾಷೆ ಓದಿದ್ದೆ. ಒಂಥರಾ ವಿಚಿತ್ರ ಭಾಷೆ ಅದು. ನಿನಗೆ ಅರ್ಥವಾಗೋದಿಲ್ಲ ಬಿಡು. ಸಾಧ್ಯ ಆದ್ರೆ ಯಾವತ್ತಾದ್ರೂ ಒಂದಿನ ಅದನ್ನು ಹೇಗೆ ಬರೀತಾರೆ ಅಂತ ನ್ಯೂಸ್ ಪೇಪರಿನಲ್ಲಿ ತೋರಿಸ್ತೀನಿ.' ಮಾಮ್, ವಾಟ್ ಈಸ್ ಕನ್ನಡ್? ಬಾರಿಸು ಕನ್ನಡ ಡಿಂಡಿಮವಾ ಎಂದುಬೆಂಗಳೂರಿನ ಗಲ್ಲಿಯಲ್ಲಿ ನವೆಂಬರ್ 1ರ ಬೆಳಿಗ್ಗೆ ಹಾಕಿದ ಹಾಡು ಕೇಳಿ ಮಕ್ಕಳುಅಮ್ಮಂದಿರ ಬಳಿ ಕೇಳುತ್ತಾರೆ, 'ಮಾಮ್ ವಾಟ್ ಈಸ್ ಕನ್ನಡ್?' ಅಮ್ಮ ಹೇಳುತ್ತಾಳೆ, 'ಒನ್ಸ್ ಅಪಾನ್ ಎ ಟೈಮ್ ದೇರ್ ಯೂಸಡ್ ಟು ಬಿ ಎ ಲ್ಯಾಂಗ್ವೇಜ್ ಕಾಲ್ಡ್ ಕನ್ನಡ. ಬಹಳ ಜನ ಅದೇ ಭಾಷೆಯಲ್ಲಿ ಮಾತನಾಡುತ್ತಿದ್ದರು. ನಾನು ಕೂಡಕಾನ್ವೆಂಟ್ನಲ್ಲಿ ಆ ಭಾಷೆ ಓದಿದ್ದೆ. ಒಂಥರಾ ವಿಚಿತ್ರ ಭಾಷೆ ಅದು. ನಿನಗೆ ಅರ್ಥವಾಗೋದಿಲ್ಲ ಬಿಡು. ಸಾಧ್ಯ ಆದ್ರೆ ಯಾವತ್ತಾದ್ರೂ ಒಂದಿನ ಅದನ್ನು ಹೇಗೆ ಬರೀತಾರೆ ಅಂತ ನ್ಯೂಸ್ ಪೇಪರಿನಲ್ಲಿ ತೋರಿಸ್ತೀನಿ.' 25 ವೃದ್ಧರಿಗೆ ಸನ್ಮಾನ ಇವತ್ತಿಗೂ ಕನ್ನಡದಲ್ಲೇ ಮಾತನಾಡುವ 25 ವೃದ್ಧರನ್ನು ಹುಡುಕಿ ರಾಜಭವನದ ಗಾಜಿನ ಮನೆಯಲ್ಲಿ ಸನ್ಮಾನ ಮಾಡಲಾಗುತ್ತದೆ.ಅವರನ್ನು ಹುಡುಕಲು ತಿಂಗಳ ಮೊದಲೇ ದಿನಪತ್ರಿಕೆಗಳಲ್ಲಿ ಸರ್ಕಾರ ಜಾಹೀರಾತು ನೀಡಿರುತ್ತದೆ. ಸನ್ಮಾನಿತರು ಕನ್ನಡದಲ್ಲಿ ಮಾಡುವ ಭಾಷಣ ಯಾರಿಗೂ ಅರ್ಥವಾಗುವುದಿಲ್ಲ. ಅವುಗಳನ್ನು ಸ್ಥಳದಲ್ಲೇದುಭಾಷಿಯಿಂದ ಇಂಗ್ಲಿಷ್ಗೆ ಅನುವಾದ ಮಾಡಿಸಲಾಗುತ್ತದೆ. ನಂತರ, ಕನ್ನಡವೆಂಬುದು ಎಂಥಾ ಅದ್ಭುತ ಭಾಷೆಯಾಗಿತ್ತು ಎಂದು ಮುಖ್ಯಮಂತ್ರಿ ಹಾಗೂರಾಜ್ಯಪಾಲರು ಇಂಗ್ಲಿಷ್ನಲ್ಲಿ ಭಾಷಣ ಮಾಡುತ್ತಾರೆ. ಒಂದು ತಿಂಗಳು ಕನ್ನಡ ಕಡ್ಡಾಯ ನವೆಂಬರ್ ತಿಂಗಳು ಪೂರ್ತಿ ರಾಜ್ಯದ ಜನರೆಲ್ಲರೂ ಕನ್ನಡದಲ್ಲೇ ಮಾತನಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸುತ್ತದೆ. ಅದು ಸಾಧ್ಯವಾಗದೇ ಇರುವುದರಿಂದ ಜನರೆಲ್ಲ ಮಾತನಾಡುವುದನ್ನೇ ಕಡಿಮೆ ಮಾಡುತ್ತಾರೆ. ಮೆಜೆಸ್ಟಿಕ್, ಮಾರ್ಕೆಟ್, ಜನನಿಬಿಡ ಸ್ಥಳಗಳೆಲ್ಲ ಒಂದು ತಿಂಗಳು ಸೈಲೆಂಟಾಗಿರುತ್ತವೆ. ಕನ್ನಡ ಪತ್ರಿಕೆಗಳು ಪ್ರತಿದಿನ ಒಂದೊಂದು ಪ್ರಮುಖ ಸುದ್ದಿಯನ್ನು ಅಚ್ಚ ಕನ್ನಡದಲ್ಲೇ ಬರೆದು ಮುಖಪುಟದಲ್ಲಿ ಬಾಕ್ಸ್ ಐಟಂ ಆಗಿ ಮುದ್ರಿಸುತ್ತವೆ.ಅವುಗಳಿಗೆ ಒಳ್ಳೆಯ ಫೀಡ್ಬ್ಯಾಕ್ ಬರುವುದಿಲ್ಲ. ನಂತರ ಆ ಕೆಲಸ ಮಾಡಿದ ಉಪ ಸಂಪಾದಕನನ್ನು ಸಂಪಾದಕರು ತರಾಟೆ ತೆಗೆದುಕೊಳ್ಳುತ್ತಾರೆ. ಇನ್ನೊಮ್ಮೆ ಇಂಥಾ ಐಡಿಯಾ ಕೊಟ್ಟರೆ ಡಿಸ್ಮಿಸ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡುತ್ತಾರೆ. ಮೂರು ಶಾಲೆಗಳಲ್ಲಿ ಸಂಭ್ರಮ ಇನ್ನೂ ಕನ್ನಡದಲ್ಲೇ ಪಾಠ ಮಾಡುತ್ತಿರುವ ರಾಜ್ಯದ ಮೂರೇ ಮೂರು ಶಾಲೆಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿರುತ್ತದೆ. ಆ ಶಾಲೆಗಳಿಗೆ ಬೇರೆ ಬೇರೆ ಊರುಗಳಿಂದ ಪ್ರವಾಸಿಗರು ಬರುತ್ತಾರೆ. ಬೆಂಗಳೂರಿನಲ್ಲಿ ಇಂತಹದ್ದೊಂದು ಶಾಲೆ ಹುಡುಕಿ ಅಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಆಚರಿಸಬೇಕೆಂಬ ಸರ್ಕಾರದ ಬಯಕೆ ಈಡೇರುವುದಿಲ್ಲ. ಏಕೆಂದರೆ ಕನ್ನಡದಲ್ಲಿ ಪಾಠ ಮಾಡುವ ಒಂದು ಶಾಲೆಯೂ ಅಧಿಕಾರಿಗಳ ಕಣ್ಣಿಗೆ ಬೀಳುವುದಿಲ್ಲ. ಮಂಗಳೂರು ಅಥವಾ ಕಾರವಾರದಲ್ಲಿ ಅಪ್ಪಟ ಕನ್ನಡ ಶಾಲೆಯೊಂದನ್ನು ಸರ್ಕಾರ ಮ್ಯೂಸಿಯಂ ಆಗಿ ಅಭಿವೃದ್ಧಿಪಡಿಸುವ ಘೋಷಣೆ ಮಾಡುತ್ತದೆ. ಅದಕ್ಕಾಗಿ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಅಲ್ಲಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ. ಜನರ್ಯಾರೂಬರದಿರುವುದರಿಂದ ಸೆಕ್ಯುರಿಟಿ ಗಾರ್ಡ್ ನೆಮ್ಮದಿಯಿಂದ ನಿದ್ದೆ ಮಾಡುತ್ತಾನೆ. ಅಮೆರಿಕನ್ನನ ಸೈಕಲ್ ಜಾತ್ರೆ ಕನ್ನಡ ಎಷ್ಟು ಸುಂದರ ಭಾಷೆ ಎಂಬುದನ್ನು ತಿಳಿಸಲು ಅಮೆರಿಕನ್ ಒಬ್ಬ ಕರ್ನಾಟಕದಾದ್ಯಂತ ಸೈಕಲ್ ಜಾತ್ರೆ ಮಾಡುತ್ತಾನೆ.ಅವನು ಹತ್ತು ವರ್ಷ ಕಷ್ಟಪಟ್ಟು ಕನ್ನಡ ಕಲಿತಿರುತ್ತಾನೆ. ಇವನಿಗೇನು ಹುಚ್ಚು ಎಂದು ಜನ ಇಂಗ್ಲಿಷ್ನಲ್ಲಿ ಮಾತನಾಡಿಕೊಳ್ಳುತ್ತಾರೆ. ಕನ್ನಡಕ್ಕಾಗಿ ನಿಸ್ವಾರ್ಥ ಸೇವೆ ಮಾಡಿದ ವ್ಯಕ್ತಿ ಎಂದು ಅವನಿಗೆ ಊರೂರಲ್ಲಿ ಸನ್ಮಾನ ಮಾಡಲಾಗುತ್ತದೆ. ಆದರೆ, ಜನರೆಲ್ಲ ತನ್ನ ಬಳಿ ಇಂಗ್ಲಿಷ್ನಲ್ಲೇ ಮಾತನಾಡುವುದನ್ನು ಕೇಳಿ ನಿರಾಸೆಗೊಂಡು ಅವನುಅಮೆರಿಕಕ್ಕೆ ವಾಪಸಾಗುತ್ತಾನೆ. ಮತ್ತೆಂದೂ ಇಲ್ಲಿಗೆ ಬರುವುದಿಲ್ಲ. ಕನ್ನಡ ವೇದಿಕೆ ಪ್ರತಿಭಟನೆ ನವೆಂಬರ್ 1ರ ದಿನ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಕರ್ನಾಟಕದ ಬಗ್ಗೆ ಸಮೀಕ್ಷೆ ಪ್ರಕಟವಾಗುತ್ತದೆ. ಅದರಲ್ಲಿ, ರಾಜ್ಯದಲ್ಲಿ ಯಾವ್ಯಾವ ಭಾಷೆಯನ್ನು ಎಷ್ಟು ಜನ ಮಾತನಾಡುತ್ತಾರೆ ಎಂಬ ವಿವರಗಳಿರುತ್ತವೆ. ಇಂಗ್ಲಿಷ್ ಶೇ. 80, ಹಿಂದಿ- ಶೇ.9, ತಮಿಳು- ಶೇ.3, ತೆಲುಗು- ಶೇ.2, ಮಲೆಯಾಳಂ- ಶೇ.2, ಗುಜರಾತಿ- ಶೇ.2, ತುಳು- ಶೇ.1, ಕನ್ನಡ- ಶೇ.1 ಹೀಗೆ ಅಂಕಿ ಅಂಶಗಳಿರುತ್ತವೆ. ಇದನ್ನು ಕನ್ನಡ ಕಾವಲು ವೇದಿಕೆ ವಿರೋಧಿಸಿ, 'ಈ ಸಮೀಕ್ಷೆ ಪೂರ್ವಾಗ್ರಹದಿಂದ ಕೂಡಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ಇಲ್ಲಿ ಕೇವಲ ಶೇ.1ರಷ್ಟು ಜನ ಕನ್ನಡ ಮಾತನಾಡುತ್ತಾರೆಂಬುದು ಶುದ್ಧ ಸುಳ್ಳು. ವಾಸ್ತವವಾಗಿ ಇಲ್ಲಿ ಶೇ.1.5ರಷ್ಟು ಜನ ಕನ್ನಡ ಮಾತನಾಡುತ್ತಾರೆ' ಎಂದು ಪ್ರತಿಭಟನೆ ನಡೆಸುತ್ತದೆ. ಮಹಿಷಿ ವರದಿ ಜಾರಿಗೆ ಒತ್ತಾಯ ಕನ್ನಡಕ್ಕಾಗಿ ಹೋರಾಟ ಮಾಡಿ ಮಾಡಿಕನ್ನಡಪರ ಸಂಘಟನೆಗಳಿಗೆ ವಯಸ್ಸಾಗಿರುತ್ತದೆ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕೆಂದು ಈಗಲೂ ಅವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತವೆ. ಆ ವರದಿಯ ಸಾಧಕ ಬಾಧಕ ಚರ್ಚೆ ನಡೆಸಲು ಮುಖ್ಯಮಂತ್ರಿಗಳು ಸಮಿತಿ ನೇಮಕ ಮಾಡುತ್ತಾರೆ. ಆ ಸಮಿತಿ ಸರೋಜಿನಿ ಮಹಿಷಿ ವರದಿಯನ್ನು ಇಂಗ್ಲಿಷ್ಗೆ ಅನುವಾದ ಮಾಡಿಸಿಕೊಂಡು ಓದಿ ರಿಜೆಕ್ಟ್ ಮಾಡುತ್ತದೆ. ಆಗ ಕನ್ನಡ ಪರ ಸಂಘಟನೆಗಳು ಮತ್ತೆ ಪ್ರತಿಭಟನೆ ನಡೆಸುತ್ತವೆ. ಮುಖ್ಯಮಂತ್ರಿಗಳು ಕನ್ನಡ ರಕ್ಷಣೆಗೆ ಇನ್ನೊಂದು ವರದಿ ಸಿದ್ಧಪಡಿಸಲು ಹೊಸ ಸಮಿತಿಯನ್ನು ನೇಮಿಸಿ ಅದಕ್ಕೆ 2050ರ ಗಡುವು ವಿಧಿಸಿ ನಿಶ್ಚಿಂತೆಯಿಂದ ಇರುತ್ತಾರೆ. ಕಾನ್ವೆಂಟ್ಗಳಿಗೆ ಹಣದ ಹೊಳೆ ಒಂದು ತಿಂಗಳು ಕಡ್ಡಾಯವಾಗಿ ಕನ್ನಡವನ್ನೇ ಮಾತನಾಡಬೇಕೆಂದು ಸರ್ಕಾರ ಹೊರಡಿಸಿದ ಆದೇಶ ಕೇಳಿ ರಾಜ್ಯಾದ್ಯಂತ ಕಾನ್ವೆಂಟ್ಗಳಲ್ಲಿ ಮಕ್ಕಳು ಕಷ್ಟಪಟ್ಟು ಒಂದಷ್ಟು ಕನ್ನಡ ಶಬ್ದಗಳನ್ನು ಆಡುತ್ತವೆ. ಅದನ್ನು ಕೇಳಿ ಕೆಂಡಾಮಂಡಲವಾಗುವ ಶಾಲೆಗಳ ಆಡಳಿತ ಮಂಡಳಿ, ಒಂದು ಕನ್ನಡ ಶಬ್ದಕ್ಕೆ ಸಾವಿರ ರೂ. ದಂಡ ವಿಧಿಸಿ ಚೆನ್ನಾಗಿ ದುಡ್ಡು ಮಾಡಿಕೊಳ್ಳುತ್ತವೆ. ಕನ್ನಡ ಮಾತನಾಡುವುದು ಇಷ್ಟು ದೊಡ್ಡ ಅಪರಾಧವೇ ಎಂದು ಮಕ್ಕಳು ಆತಂಕಗೊಂಡು ಮತ್ತೆ ತಮ್ಮ ಜೀವಮಾನದಲ್ಲಿ ಕನ್ನಡದ ತಂಟೆಗೆ ಹೋಗುವುದಿಲ್ಲ. ಇದನ್ನು ಕನ್ನಡ ಕಾವಲು ವೇದಿಕೆ ತೀವ್ರವಾಗಿಖಂಡಿಸುತ್ತದೆ. ಅದರ ಸುದ್ದಿ ಎಲ್ಲಾ ಇಂಗ್ಲಿಷ್ ಪತ್ರಿಕೆಗಳಲ್ಲಿ ಉದ್ಗಾರವಾಚಕಚಿಹ್ನೆಯೊಂದಿಗೆ ಪ್ರಕಟವಾಗುತ್ತದೆ. ಭಟ್ಟರ ಹಾಡುಗಳಿಗೆ ಡಿಮ್ಯಾಂಡ್ ರಾಜ್ಯೋತ್ಸವದ ಆರ್ಕೆಸ್ಟ್ರಾಗಳಲ್ಲಿ ಪ್ಲೇ ಮಾಡುವ ಕನ್ನಡದ ಸೀಡಿಗಳು ಧೂಳು ಹಿಡಿದು ಐದು ನಿಮಿಷವೂ ಓಡದಷ್ಟು ಸ್ಕ್ರಾಚ್ ಆಗಿರುತ್ತವೆ. ಆಗ ಉಳಿದಿರುವುದು ಯೋಗರಾಜ ಭಟ್ಟರು ಕನ್ನಡ ಎನ್ನಲಾದ ಭಾಷೆಯನ್ನು ಅಷ್ಟಿಷ್ಟು ಬಳಸಿಕೊಂಡು ಬರೆದ ಸಿನಿಮಾ ಹಾಡುಗಳು ಮಾತ್ರ. ಅವುಗಳನ್ನೇ ಎಲ್ಲೆಡೆ ಪ್ಲೇ ಮಾಡಲಾಗುತ್ತದೆ. ಭಟ್ಟರ ಹಾಡುಗಳಿಗೆ ಬಹಳ ಡಿಮ್ಯಾಂಡ್ ಬರುತ್ತದೆ. ಅದನ್ನು ನೋಡಿ ಖುಷಿಗೊಂಡ ಅವರು 'ನನ್ನ ಮುಂದಿನ ಸಿನಿಮಾದಲ್ಲಿ ಶುದ್ಧ ಕನ್ನಡದ ಹಾಡೊಂದನ್ನು ಬರೆದು, ಅದನ್ನು ಕನ್ನಡದ ಗಾಯಕಿಯಿಂದಲೇ ಹಾಡಿಸಿ, ಅದರ ಶೂಟಿಂಗನ್ನು ಕರ್ನಾಟಕದಲ್ಲೇ ಮಾಡುತ್ತೇನೆ' ಎಂದು ಘೋಷಿಸುತ್ತಾರೆ. ಆ ಸಿನಿಮಾ ಫ್ಲಾಪ್ ಆಗುತ್ತದೆ. ಕನ್ನಡ ಶಾಲೆಯ ಮ್ಯೂಸಿಯಂನಲ್ಲಿ ಅದರ ಡಿವಿಡಿಯನ್ನು ಪ್ರದರ್ಶನಕ್ಕಿಡಲಾಗುತ್ತದೆ. ಅಕ್ಷರಮಾಲೆಯ ಕಟೌಟ್ ಜನರಿಗೆ ಕನ್ನಡದ ಅಕ್ಷರಗಳ ಪರಿಚಯವಾಗಲಿ ಎಂದು ರಾಜ್ಯಾದ್ಯಂತ ಸರ್ಕಾರದ ವತಿಯಿಂದ ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಕಟೌಟ್ ಹಾಕಲಾಗುತ್ತದೆ. ಕನ್ನಡದ ಅಕ್ಷರ ಬರೆಯಲು ಗೊತ್ತಿರುವ ಮೂರ್ನಾಲ್ಕು ಕಲಾವಿದರಿಗೆ ಈ ಒಂದು ತಿಂಗಳು ಕೈತುಂಬಾ ಕೆಲಸ ಸಿಗುತ್ತದೆ. ನಂತರ ನಡೆಯುವ ಚುನಾವಣೆಯಲ್ಲಿ ತಮ್ಮ ಸರ್ಕಾರ ಕನ್ನಡಕ್ಕಾಗಿ ಮಾಡಿದ ಸೇವೆಯನ್ನು ಒತ್ತಿ ಹೇಳಿ ಆಡಳಿತಾರೂಢ ಪಕ್ಷ ಮತ ಕೇಳುತ್ತದೆ. ಆದರೆ, ಈ ಪಕ್ಷ ಕನ್ನಡಿಗರ ಓಲೈಕೆಗೆ ಹೊರಟಿದೆಯೆಂದು ಅಸಮಾಧಾನಗೊಂಡು ಬೇರೆ ಭಾಷೆ ಮಾತನಾಡುವ ಯಾರೂ ಅದಕ್ಕೆ ಮತ ಹಾಕುವುದಿಲ್ಲ. ಆ ಪಕ್ಷ ಸೋಲುತ್ತದೆ. -ಸಮು