ಮಹಾತ್ಮ ಗಾಂಧಿ ಭಾರತಕ್ಕೆ ಹಿಂದಿರುಗಿ ೧೦೦ ವರ್ಷ ೯ ಜನವರಿ ೨೦೧೫- ರಾಷ್ಟ್ರಪಿತ ಮಹಾತ್ಮ ಗಾಂಧಿ... ೯ ಜನವರಿ ೨೦೧೫- ರಾಷ್ಟ್ರಪಿತ ಮಹಾತ್ಮ ಗಾಂಧಿ (ಮೋಹನ್ ದಾಸ್ ಕರಮಚಂದ್ ಗಾಂಧಿ) ದಕ್ಷಿಣ ಆಫ್ರಿಕಾದಿಂದ ಸ್ವದೇಶಕ್ಕೆ ಹಿಂದಿರುಗಿ ಇಂದಿಗೆ ೧೦೦ ವರ್ಷ! ಗಾಂಧಿ ಹಿಂದಿರುಗಿದ ನಂತರ ಸ್ವಾತಂತ್ರ್ಯ ಚಳವಳಿಗೆ ದೈತ್ಯ ಶಕ್ತಿಯೇ ಬಂದದ್ದು ಈಗ ಇತಿಹಾಸ. ಈ ಒಂದು ನೂರು ವರ್ಷಗಳಿಗೂ ಮುಂಚೆ ಸುಮಾರು ೨೦ ವರ್ಷಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಕಳೆದಿದ್ದರು. ಅಲ್ಲಿ ಬ್ರಿಟಿಶ್ ಆಳ್ವಿಕೆಯಿಂದ ತುಳಿತಕ್ಕೊಳಗಾದವರ ನಾಗರಿಕ ಹಕ್ಕುಗಳಿಗೆ ವಕೀಲರಾಗಿ ಹೋರಾಟ ನಡೆಸಿದ್ದರು. ೧೦೦ ವರ್ಷಗಳ ಈ ದಿನ ಎಸ್ ಎಸ್ ಅರೇಬಿಯಾ ಹಡಗಿನಲ್ಲಿ ಬಾಂಬೆ ಹಡಗು ನಿಲ್ದಾಣಕ್ಕೆ ಬಂದಿಳಿದ ಗಾಂಧಿ ಅವರಿಗೆ ಆಗ ವಯಸ್ಸು ೪೬. ತಮ್ಮ ರಾಜಕೀಯ ಗುರು ಗೋಪಾಲ ಕೃಷ್ಣ ಗೋಖಲೆ ಅವರಿಂದ ಪ್ರಭಾವಿತರಾಗಿದ್ದ ಮಹಾತ್ಮ ಗಾಂಧಿ ಭಾರತಕ್ಕೆ ಬಂದ ನಂತರ ದಂತಕಥೆಯಾಗಿಬಿಟ್ಟರು. ಗುಜರಾತಿನಲ್ಲಿ ಆಶ್ರಮ ಸ್ಥಾಪಿಸಿ ಸ್ವಾತಂತ್ರ್ಯ ಚಳವಳಿಗೆ ಇಳಿದ ನಂತರವಂತೂ ಸ್ವಾತಂತ್ರ ಚಳವಳಿಯಲ್ಲಿ ಸಕ್ರಿಯವಾಗಿದ್ದ ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸ್ವಾತಂತ್ರ್ಯ ಚಳವಳಿಗೆ ಆನೆ ಬಲ. ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸಿಬಿಟ್ಟರು. ಟಾಲ್ಸ್ಟಾಯ್, ಜಾನ್ ರಸ್ಕಿನ್ ಅವರ ಬರವಣಿಗೆ ಮತ್ತು ಭಗವದ್ಗೀತೆಯಿಂದ ಹೆಚ್ಚು ಪ್ರಭಾವಗೊಂಡಿದ್ದ ಮಹಾತ್ಮ ಗಾಂಧಿ ಅವರಿಗೆ ದೇಶದ ಎಲ್ಲ ಸಮುದಾಯದ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಛಾತಿ ಅವರಲ್ಲಿದ್ದಿತು. ಅಂತರ ಧರ್ಮ ಸಾಮರಸ್ಯವನ್ನು ಯಾವಾಗಲು ಭೋದಿಸುತ್ತಿದ್ದ ಅವರು, ಸ್ವಾತಂತ್ರ್ಯ ಚಳವಳಿಗೆ ಅಹಿಂಸಾತ್ಮಕ ರೂಪ ಕೊಟ್ಟರು. ನಂತರ ೧೯೪೭ ರಲ್ಲಿ ದೇಶಕ್ಕೆ ಸ್ವಾಂತ್ರ್ಯ ಬಂದಿದ್ದು ಭಾರತ ದೇಶದ ಅತಿ ಸಂಭ್ರಮದ ದಿನವಾದರೆ, ಹಿಂದೂ ರಾಷ್ಟ್ರೀಯವಾದಿ ನಾಥೂರಾಮ್ ಘೋಡ್ಸೆ ಜನವರಿ ೩೦ ೧೯೪೮ ರಂದು ಮಹಾತ್ಮ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದದ್ದು ದೇಶದ ಅತ್ಯಂತ ಕರಾಳ ದಿನ. ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಪೂರ್ಥಿಯಾಗಿರುವ ಮಹಾತ್ಮ ಗಾಂಧಿ ಸ್ವದೇಶಕ್ಕೆ ಹಿಂದಿರುಗಿದ ಈ ದಿನ ಇನ್ನೂ ಹೆಚ್ಚೆಚ್ಚು ಜನಕ್ಕೆ ಸ್ಪೂರ್ಥಿಯಾಗಲಿ.