ಡಿಂಪಲ್ ಡಾರ್ಲಿಂಗ್ ನಿಮ್ಮ ಮನದೊಡತಿ ಅದೆಷ್ಟು ಸುಂದರಿಯಲ್ಲವೇ? ಅವಳ ನಗು.. ಅಬ್ಬಾ! ಅದೊಂದಕ್ಕಾಗಿ ಏನು ಬೇಕಾದರೂ ಮಾಡಬಲ್ಲೆ ಎಂಬ ವಿಶ್ವಾಸ ಕಟ್ಟಿಕೊಡುತ್ತದೆ. ಅವಳು ನಕ್ಕರೆ ಈ ಜನ್ಮಕ್ಕಿಷ್ಟು ಸಾಕು ಎನಿಸುವಂಥ ವಿಶೇಷ ಆತ್ಮತೃಪ್ತಿ... ಹೃದಯವನ್ನೇ ಪರ ಪರ ಕೆರೆದುಕೊಳ್ಳುವಂತೆ ಮಾಡಿದ ಈ ಪ್ರೀತಿಪಾತ್ರಳ ಹುಟ್ಟುಹಬ್ಬಕ್ಕಾಗಿ ಏನು ಕೊಟ್ಟರೂ ಕಡಿಮೆ. ಏನು ಮಾಡಲಿ ಎಂದು ತಲೆ ಕೆರೆದುಕೊಳ್ಳುತ್ತಿದ್ದರೆ, ನಿಮಗಿನ್ನಷ್ಟು ವಿಶ್ವಾಸ ನೀಡುವ ಹೆಚ್ಚು ಆಕರ್ಷಕವೆನಿಸುವಂಥ ನಗುವನ್ನು ಉಡುಗೊರೆಯಾಗಿ ನೀಡಬಹುದು. ಅರೆರೆ... ನಗುವನ್ನು ನೀಡುವುದು ಹೇಗೆ ಎನ್ನುತ್ತೀರಾ? ಆಕೆಯ ತುಂಬಿದ ಕೆನ್ನೆಗಳ ನಡುವೆ ಮರೆಯಾಗಿರುವ ಗುಳಿಯನ್ನು ಹುಡುಕಿ ಕೊಟ್ಟರಾಯಿತು. ಅಮ್ಮಾ, ತಾಯಿ ಕೂರೀಬೇಡ... ಅದೇನೆಂದು ಬಿಡಿಸಿ ಹೇಳು ಎಂದು ನೀವು ನನಗೆ ಬೈದುಕೊಳ್ಳುವ ಮೊದಲು ಹೇಳಿಬಿಡುತ್ತೀನಿ... ನಗುವಿನ ಅಂದ ಹೆಚ್ಚಿಸುವ ಕೆನ್ನೆಯ ಗುಳಿಯನ್ನು ಸೃಷ್ಟಿಸಿಕೊಡುತ್ತಾರೆ ಇಂದಿನ ಪ್ಲಾಸ್ಟಿಕ್ ಸರ್ಜನ್‌ಗಳು. ನಿಮ್ಮ ಕೆಲಸವೇನಿದ್ದರೂ ಹುಟ್ಟುಹಬ್ಬದ ದಿನ ಪ್ರೇಯಸಿಯನ್ನು ಕ್ಲಿನಿಕ್‌ಗೆ ಕರೆದುಕೊಂಡು ಹೋಗುವ ತನಕ ಮಾತ್ರ. ತಿರುಗಿ ಬರುವಾಗ ಮನದನ್ನೆಯ ಕೆನ್ನೆಯ ಮೇಲೆ ಸಂಭ್ರಮದ ನಗುವಿನೊಂದಿಗೆ ಗುಳಿ ಬಿದ್ದಿರುತ್ತದೆ. ಮತ್ತು ಈ ನಗು ಶಾಶ್ವತವಾಗಿರುತ್ತದೆ. ಹೆಚ್ಚು ಅಂದವಾಗಿ ಕಾಣುವುದೆಂದರೆ ಯಾವ ಹೆಣ್ಣಿಗೆ ಬೇಡ ಹೇಳಿ? ಆಕೆಯ ಸೌಂದರ್ಯವನ್ನು ಸೌಂದರ್ಯವರ್ಧಕಗಳಿಲ್ಲದೆ ಇಮ್ಮಡಿಗೊಳಿಸುವ ಗುಳಿ ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ ಹೊಸ ರೀತಿಯ ಉಡುಗೊರೆಯಾಗಿ ಹೆಸರು ಪಡೆಯುತ್ತಿದೆ. ವಿಶೇಷ ದಿನದ ಉಡುಗೊರೆಯಾಗಿ ಹೂಗುಚ್ಛ ಬಟ್ಟೆ, ಪುಸ್ತಕ, ಆಭರಣ, ಶೋಕೇಸ್ ಮೆಟೀರಿಯಲ್‌ಗಳೆಲ್ಲ ಹಳತಾದ ಈ ದಿನಗಳಲ್ಲಿ ಹೊಸ ಹೊಳವಿನಂತೆ ಡಿಂಪಲ್ ಕೆನ್ನೆ ಸೃಷ್ಟಿ ಉಡುಗೊರೆಯಾಗಿ ಬದಲಾಗಿದೆ. ಎಷ್ಟು ಆಳ, ಅಗಲ ಬೇಕು ಎಂಬುದೆಲ್ಲ ನಿಮ್ಮದೇ ನಿರ್ಧಾರ. ಎಕ್ಸ್‌ಟ್ರಾ ರೆಸ್ಟೂ ಬೇಕಾಗಿಲ್ಲ. ಆರೋಗ್ಯಕ್ಕೆ ಹಾನಿಯಿಲ್ಲದ ಎರಡು ಕುಳಿಗಳು ಅವಳ ಕೆನ್ನೆ ಮೇಲೆ ಕುಳಿತರೆ ನೀವು ಸಂತೋಷದಿಂದ ಅಲ್ಲಿ ಬಿದ್ದೇ ಬೀಳುತ್ತೀರಿ. ಮತ್ತಲ್ಲಿಂದ ಎದ್ದು ಬಂದರೆ ಕೇಳಿ.