ಸೋಲೇ ಇಲ್ಲಾ!!! ಮನುಷ್ಯನ ಬದುಕಿನ ಪ್ರತಿಯೊಂದು ಕ್ಷಣವೂ ಯುದ್ಧರಂಗದಲ್ಲಿನ.. ಮನುಷ್ಯನ ಬದುಕಿನ ಪ್ರತಿಯೊಂದು ಕ್ಷಣವೂ ಯುದ್ಧರಂಗದಲ್ಲಿನ ಹೋರಾಟ ಇದ್ದಂತೆ. ಪ್ರತಿಯೊಬ್ಬರೂ ಇಲ್ಲಿ ನಾ ಮುಂದು ತಾ ಮುಂದು ಎಂದು ಗೆಲುವಿನ ಕುದುರೆಯನ್ನೇರಿ ಸಾಗುತ್ತಿರುವವರೇ ಎಲ್ಲಾ. ಸೋತರೂ, ಸೋಲನೊಪ್ಪದೆ ಗೆಲುವಿನ ಮರೀಚಿಕೆಯ ಕನಸನ್ನು ನನಸಾಗಿಸುವ ಭರದಲ್ಲಿ ಕಾಣದ ಮನಸ್ಸಿಗೆ ಆಗುವ ಘಾಸಿಗೆ ಗೆಲುವನ್ನು ಕಾಣುವವರೆಗೂ ಶಾಂತಿ ಇರುವುದಿಲ್ಲ. ಜೀವನದಲ್ಲಿ ಗೆಲುವು ಎಷ್ಟು ಮುಖ್ಯವೋ ಸೋಲೂ ಕೂಡ ಅದರ ಅವಿಭಾಜ್ಯ ಅಂಗ ಎಂದು ಎಲ್ಲರೂ ಭಾವಿಸಬೇಕು. ಸೋಲು ನೂರರಲ್ಲಿ ಶೇ.95 ಜನರಿಗೆ, ಗೆಲುವು ಬೆರಳೆಣಿಕೆಯಷ್ಟು ಮಂದಿಗೆ ಎಂದು ಗೊತ್ತಿದ್ದರೂ ಆ ಗೆಲುವ ಗಳಿಸುವ ಅಪರೂಪದ ನಕ್ಷತ್ರಗಳು ನಾವೇ ಆಗಬೇಕೆಂಬ ತುಡಿತ ಎಲ್ಲರಲ್ಲೂ ಇರುತ್ತದೆ. ಒಮ್ಮೆ ಸೋತ ಮನಸ್ಸು ನೊಂದು ಹರಿದ ಬಟ್ಟೆಯಾಗಿರುತ್ತದೆ. ಅದರಿಂದ ಹೊರಬರಲು ಗೆಲುವೆಂಬ ದಾರದ ಹೊಲಿಗೆಯೇ ಬೇಕು. ಮುಂದಿನ ಸಾರಿಯಾದರೂ ಗೆಲುವಿಗೆ ಮಣೆ ಹಾಕುವ ಮನಸ್ಸು ಮತ್ತೊಂದು ಸೋಲು ಕೈಹಿಡಿದಾಗ ತತ್ತರಿಸಿ ಹೋಗುತ್ತದೆ. ಸೋಲಿನ ಕಹಿ ತುಂಬಿದ ದಿನಗಳು ಸಂಬಂಧಿಗಳನ್ನು, ಸ್ನೇಹಿತರನ್ನು ನಮಗೇ ತಿಳಿಯದೆ ನಮ್ಮಿಂದ ದೂರ ಮಾಡುತ್ತದೆ. (ಒಬ್ಬಿಬ್ಬರು ಸಾಂತ್ವನಕ್ಕೆ ಸಿಕ್ಕರೆ ನಮ್ಮ ಪೂರ್ವ ಜನ್ಮದ ಪುಣ್ಯವೇ ಸರಿ!) ಯೋಚಿಸಿ ನೋಡಿ ಸೋತವರು ಸೋಲನ್ನು ಗೆಲುವಾಗಿ ಪರಿವರ್ತಿಸುವ ತವಕ ಪಡುವ ಮೊದಲು ಸೋಲಿಗೆ ಕಾರಣ, ಅದರ ಬಗ್ಗೆ ಚಿಂತನೆ, ಚರ್ಚೆ, ವಿಮರ್ಶೆ ಮಾಡಬೇಕು. ಗೆಲುವಿಗಾಗಿ ಕಲ್ಪನೆ, ಕನಸುಗಳನ್ನು ಹೆಣೆಯಬೇಕು. ಸೋಲಿನ ನಂತರ ಗೆಲುವನ್ನು ಪಡೆಯಲು ಸೋತ ದಾರಿಯಲ್ಲೇ ನಡೆಯಬೇಕೆಂದಿಲ್ಲ. ಮುಂದೆ ಕಾಣುವ ತಿರುವಿನಲ್ಲಿ ಗೆಲುವು ಖಚಿತವಾಗಿದ್ದರೆ, ಅದರತ್ತಲೇ ಮನಸ್ಸು ಸದಾ ತುಡಿಯುತಿದ್ದರೆ, ಅಲ್ಲಿಗೆ ನಡೆಯಲು ಯಾವುದೇ ಹಿಂಜರಿಕೆ ಬೇಡ. ಸೋಲು ಪ್ರತಿಯೊಬ್ಬ ಸಾಧಕನ ಜೀವನದ ಭಾಗ. ಸೋತಾಗ ನಿರಾಶೆ, ಹತಾಶೆಯಿಂದ ಬದುಕಿಗೇ ಕೊನೆಯ ಚುಕ್ಕಿ ಇಡಲು ನಿರ್ಧರಿಸಿಬಿಡುತ್ತಾರೆ. ಕೊಟ್ಟ ಮಾತನ್ನು ಈಡೇರಿಸಲು ಸಾಧ್ಯವಾಗದ ಭರದಲ್ಲಿ, ನಾಲ್ಕು ಜನ ಏನೆಂದುಕೊಂಡಾರು ಎಂಬ ಯೋಚನೆಯಲ್ಲಿ ಸಾವಿನ ಬಾಗಿಲನ್ನು ತಟ್ಟಲು ನಿರ್ಧರಿಸಿಬಿಡುತ್ತಾರೆ. ತಾಳಿದವನು ಬಾಳಿಯಾನು ಸೋಲೇ ಗೆಲುವಿಗೆ ಬುನಾದಿ. ಸಂಯಮ ಸಹನೆಯನ್ನು ಒಗ್ಗೂಡಿಸಿಕೊಂಡು 'ತಾಳಿದವನು ಬಾಳಿಯಾನು' ನಾಣ್ಣುಡಿಯಂತೆ ನಡೆದರೆ ಅತ್ಯಮೂಲ್ಯ ಜೀವವನ್ನು ಕೊನೆಗಾಣಿಸಿ ನಂಬಿದವರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುವುದನ್ನು ತಪ್ಪಿಸಬಹುದು. 'ಪ್ರಯತ್ನ ನಮ್ಮದು ಗೆಲುವು ನಾವು ಪಟ್ಟ ಶ್ರಮದ್ದು. ಸೋತರೆ ಅದೊಂದು ನಾಳಿನ ಗೆಲುವಿಗೆ ಪಾಠ. ಗೆದ್ದರೆ ಮತ್ತೊಂದು ಉತ್ತುಂಗವನ್ನೇರಲು ಮೆಟ್ಟಿಲು' ಎಂದು ಭಾವಿಸಿ ಸಾಗುತ್ತಿದ್ದರೆ ಗೆಲುವುಗಳ ಸಾಲು ಸಾಲು ಇಂದಲ್ಲಾ ನಾಳೆ ನಮ್ಮ ಕೈಹಿಡಿಯುತ್ತದೆ. ಸೋಲು-ಗೆಲುವು ಯಾವುದೂ ಶಾಶ್ವತವಲ್ಲ. ಗೆದ್ದಾಗ ಬೀಗಿ ಸೋತಾಗ ಮುದುಡುವುದನ್ನು ಬಿಟ್ಟು ಜೀವನದ ಪ್ರತಿಕ್ಷಣದಲ್ಲೂ ನಗುವನ್ನು ಚೆಲ್ಲಿ, ನಗುವನ್ನು ಹೆಕ್ಕುತಾ, ಮುನ್ನಡೆಯುವ ಸ್ಥೈರ್ಯ ಬೆಳೆಸಿಕೊಂಡರೆ ಜೀವನವೆಲ್ಲ ರಸಮಯವಾಗುತ್ತದೆ. ಎಲ್ಲರೂ ಸೋಲನ್ನು ಕಂಡರೆ ಮೂತಿ ಮುರಿಯುವವರೇ. ಇಂದಿನ ಸೋಲೇ ನಾಳಿನ ಬೃಹತ್ ಯಶಸ್ಸಿಗೆ ಮೆಟ್ಟಿಲು ಎಂದು ಯಾರೂ ಪರಿಗಣಿಸುವುದೇ ಇಲ್ಲ. ಯಶಸ್ಸಿನ ಉತ್ತುಂಗದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ನಿನ್ನೆಗಳಲ್ಲಿ ಸಾಲು ಸಾಲು ಸೋಲುಗಳು ಅಡಗಿರುವುದು ನೂರಕ್ಕೆ ನೂರರಷ್ಟು ಖಚಿತ. ಇಲ್ಲಿವೆ ನೋಡಿ ಸೋಲನ್ನು ಗೆಲುವನ್ನಾಗಿಸಿಕೊಳ್ಳುವ ಸೂತ್ರಗಳು. ತಪ್ಪುಗಳು ಮತ್ತು ಸೋಲುಗಳಿಂದ ಪಾಠ ಕಲಿಯಿರಿ ನಾವೆಲ್ಲಾ ಹೇಗೆ ಸೈಕಲ್ಲನ್ನು ಕಲಿತೆವು? ನೆನಪಿರಬೇಕಲ್ಲಾ...! ಹತ್ತಾರು ಬಾರಿ ಬಿದ್ದು ಎದ್ದು ಮಂಡಿಯ ತುಂಬಾ ಎಳನೀರು ಕೆತ್ತಿದಂತೆ ರಕ್ತದ ರಾಡಿಮಾಡಿಕೊಂಡು ಕಲಿತದ್ದು. ಹಾಗೆಯೇ ಬದುಕಿನ ಪ್ರತಿಯೊಂದು ಸಾಧನೆಯ ಮಜಲೂ ಸ್ವಲ್ಪ ಕಹಿ ಸ್ವಲ್ಪ ಸಿಹಿ. ಪ್ರತೀ ಸೋಲಿನಿಂದಲೂ ಗೆಲುವಿನ ಮೆಟ್ಟಿಲನ್ನು ಹಸನು ಮಾಡಿಕೊಳ್ಳಬೇಕು. ನಿಮ್ಮ ಹೆಜ್ಜೆ: ಸೋಲಿ(ತಪ್ಪಿ)ನಿಂದ ಕಲಿತ ಪಾಠಗಳನ್ನು ಬರೆದುಕೊಳ್ಳಿ. ಸೋಲಿನ ಬಾಣಲೆಯಲಿ ಪ್ರತಿದಿನ ಕುದಿಯದಿರಿ ಈಗ ಸೋಲಿನಿಂದ ಪಾಠ ಕಲಿತಾಗಿದೆ. ಮತ್ತೆ ಮತ್ತೆ ಅದನ್ನೇ ಕೆದಕುತ್ತಾ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಹಿಂದೆ ನೋಡುತ್ತಾ ಸಾಗಿದರೆ ಮುಂದಿನ ದಾರಿ ಕಾಣದು. ನಿನ್ನೆಗಳ ಸೋಲಿನಲ್ಲೇ ಮುಳುಗಿದರೆ ವರ್ತಮಾನ ಕತ್ತಲ ಕೋಟೆಯಿಂದ ಸುತ್ತುವರೆಯುತ್ತದೆ. ನಿಮ್ಮ ಹೆಜ್ಜೆ: ನಾಳೆಗಳಲ್ಲಿ ಪ್ರಯತ್ನಿಸ ಬಯಸುವ ಎಲ್ಲಾ ವಿಷಯಗಳನ್ನೂ ಪಟ್ಟಿ ಮಾಡಿಕೊಳ್ಳಿ. ಮತ್ತೊಮ್ಮೆ ಪ್ರಯತ್ನಿಸಲು ಹಿಂಜರಿಯಬೇಡಿ ಹಳೆಯ ಸೋಲು ನಿಮ್ಮನ್ನು ನಿಮ್ಮ ಗುರಿಯಿಂದ, ಕನಸಿನಿಂದ, ತಲುಪಬೇಕಿರುವ ಉತ್ತುಂಗದ ವಿರುದ್ದ ದಿಕ್ಕಿನಲ್ಲಿ ಎಳೆಯಲು ಪ್ರಯತ್ನಿಸುತ್ತದೆ. ಸೈಕಲ್ ಕಲಿತ ಅನುಭವವನ್ನು ಪದೇ ಪದೇ ನೆನೆದು ಮುನ್ನುಗ್ಗಿ. ನಿಮ್ಮ ಹೆಜ್ಜೆ: ಸೋಲಿನಿಂದ ಕಲಿತ ಪಾಠದಿಂದ ಉತ್ತಮ ತಯಾರಿ ನಡೆಸಿ ಪ್ರಯತ್ನ ಮಾಡಿ. ಎದುರಾಗುವ ಕಳಪೆ ಸಂದರ್ಭಗಳ ಬಗ್ಗೆಯೂ ಯೋಚಿಸಿರಿ ಗೆಲುವು ದಕ್ಕದಿದ್ದರೆ ಏನಾಗಬಹುದು? ಕುತ್ತಿಗೆಗೇ ಕುತ್ತು ಬರುವ ಸಂಗತಿಯೇ? ಅಥವಾ ನಮ್ಮ ಕೈಯಿಂದಲೇ ಸೂಕ್ಷವಾಗಿ ನಿರ್ವಹಿಸಲು ಸಾಧ್ಯವೇ? ಎಂದು ಮೊದಲೇ ಯೋಚಿಸಿರಿ. ಇದರಿಂದ ಸೋಲಿನ ಭಯವನ್ನು ಕುಂದಿಸಲು ಸಾಧ್ಯ. ನಿಮ್ಮ ಹೆಜ್ಜೆ: ನಿಮ್ಮ ಕಲ್ಪನೆಯಂತೆ ಸಂಪೂರ್ಣ ಕೆಟ್ಟ ಸಂದರ್ಭವನ್ನು ಬರೆದಿಟ್ಟುಕೊಳ್ಳಿ. ನಿಮ್ಮನ್ನು ನೀವೇ ನನಗೆ ಇದು ನಿರ್ವಹಿಸಲು ಸಾಧ್ಯವೇ? ಎಂದು ಕೇಳಿಕೊಳ್ಳಿ. 'ಸಾಧ್ಯ' ಎಂಬುದು ನಿಮ್ಮ ಉತ್ತರವಾದರೆ ಮುಂದಡಿಯಿಡಿ. ಪುಟ್ಟ ಹೆಜ್ಜೆಯೊಂದಿಗೆ ಖಾತೆ ತೆಗೆಯಿರಿ ನಿಮ್ಮಲ್ಲಿರುವ ಸೋಲುವ ಭಯ ಮುಂದೆ ಸಾಗಲು ತಡೆಯೊಡ್ಡುತ್ತಿದ್ದರೆ ಹಂತ ಹಂತವಾಗಿ ಚಲಿಸಲು ಪ್ರಯತ್ನಿಸಿ. ಇದರಿಂದ ಗೆಲುವಿನ ಹಾದಿ ದೂರ ಎನಿಸಬಹುದು ಆದರೆ ಸೋಲಿನ ಪ್ರಮಾಣ ಕಡಿಮೆಯಾಗುತ್ತದೆ, ಗೆಲುವು ಸನಿಹವಾಗಲು ಶುರುವಾಗುತ್ತದೆ. ನಿಮ್ಮ ಹೆಜ್ಜೆ: ಗುರಿಯ ಮುಟ್ಟಲು ಪ್ರತಿಯೊಂದು ಸಣ್ಣ ಹಂತಗಳನ್ನೂ ಬರೆದಿಟ್ಟುಕೊಳ್ಳಿ. 'ನಾನು ಮಾಡಬಲ್ಲೆ' ಎಂದು ನೂರು ಬಾರಿ ನಿಮಗೆ ನೀವೇ ಹೇಳಿಕೊಳ್ಳಿ. ನಿನ್ನೆಗಳಲ್ಲಿ ಅನುತ್ತೀರ್ಣನಾ(ಳಾ)ಗಿರಬಹುದು. ಆದರೆ ಅದರರ್ಥ ನಾಳೆಗಳೂ ಹಾಗೆಯೇ ಇರಬೇಕೆಂದೇನೂ ಇಲ್ಲ. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಫಲ ಕಟ್ಟಿಟ್ಟ ಬುತ್ತಿ. ಪ್ರಯತ್ನವೇ ಇಲ್ಲದೆ ಕೈಚೆಲ್ಲಿ ಕೂತರೆ ನಾವೇ ನಾವಾಗಿ ಸೋಲಿನ ಸುಳಿಯಲ್ಲಿ ಮುಳುಗಿದಂತೆ. ಪಾಸಿಟಿವ್ ಆಗಿ ಯೋಚಿಸಿ ಆತ್ಮ ವಿಶ್ವಾಸದೊಂದಿಗೆ ನಿಮ್ಮ ಅತ್ಯುತ್ತಮ ಕೊಡುಗೆ ನೀಡಿ. ನಿಮ್ಮ ಹೆಜ್ಜೆ: ಕನ್ನಡಿಯ ಮುಂದೆ ನಿಂತು ಜೋರಾಗಿ 'ನಾನು ಎಲ್ಲವನ್ನೂ ಮಾಡಬಲ್ಲೆ. ಎಲ್ಲವನ್ನೂ ಮಾಡುತ್ತೇನೆ. ಸೋಲಿಗೆ ಬೆನ್ನುತೋರಿಸಿ ನಿಲ್ಲುತ್ತೇನೆ' ಎಂದು ಹೇಳಿ. ಪಾಸಿಟಿವ್‌ಆಗಿ ಯೋಚಿಸುವ ಜನರೊಂದಿಗೆ ಬೆರೆಯಿರಿ ನೀವು ಸಾಧಿಸಲು ಪ್ರಯತ್ನ ಮಾಡುತ್ತಿರುವ ಎತ್ತರ ಎಷ್ಟೇ ಇರಲಿ ನಿಮ್ಮನ್ನು ಸುತ್ತುವರಿದ ಜನರು ಪ್ರೋತ್ಸಾಹ ನೀಡಿ ಹುರಿದುಂಬಿಸುವವರಾಗಿರಬೇಕು ಹಾಗಾಗಿ ಸಕಾರಾತ್ಮಕ ಚಿಂತನೆಯಿರುವ ಗೆಳೆಯ/ಗೆಳತಿಯರೊಂದಿಗೆ ಹೆಚ್ಚು ಬೆರೆಯಿರಿ. ನಿಮ್ಮ ಹೆಜ್ಜೆ: ನಿಮ್ಮ ಹೆಜ್ಜೆಗೆ ಗೆಜ್ಜೆ ಮೂಡುವಾಗ ತಾಳ ಹಾಕುವವರಿಗಾಗಿ ಹುಡುಕಿ. ಸಾಧಕರೊಡನೆ ಮಾತನಾಡಿ ನೀವು ಮಾಡುತ್ತಿರುವ ಪ್ರಯತ್ನದಲ್ಲಿ ಈಗಾಗಲೇ ಜಯಿಸಿದವರನ್ನು ತಲುಪಲು ಪ್ರಯತ್ನಿಸಿ. ಅವರೊಡನೆ ಅನಿಸಿಕೆಗಳನ್ನು ಹಂಚಿಕೊಳ್ಳಿ, ಸಲಹೆಗಳನ್ನು ಪಡೆಯಿರಿ. ಇದರಿಂದ ನೈತಿಕ ಬೆಂಬಲದೊಡನೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಅಥವಾ ನಿಮ್ಮದೇ ಕ್ಷೇತ್ರದ ಸಾಧಕರ ಬಗ್ಗೆ ಇರುವ ಪುಸ್ತಕಗಳನ್ನು ಓದಿ ಸಾಧಕ ಬಾಧಕಗಳ ಬಗ್ಗೆ ತಿಳಿಯಿರಿ. ನಿಮ್ಮ ಹೆಜ್ಜೆ: ನೀವು ಚರ್ಚಿಸಬೇಕಾಗಿರುವ ವ್ಯಕ್ತಿಗಳ, ಸಂಗ್ರಹಿಸ ಬೇಕಾಗಿರುವ ಪುಸ್ತಕಗಳ ಪಟ್ಟಿ ಮಾಡಿ. ಸೋಲೆಂಬುದು ಕಲಿಕಾ ಹಾದಿಯ ತಿರುವಿನ ಭಾಗ ತಪ್ಪುಗಳು ಮತ್ತು ಸೋಲುಗಳು ತಮಾಷೆಯಲ್ಲ. ಇವುಗಳೇ ಗೆಲುವಿನ ಹಾದಿಯಲ್ಲಿನ ಪಾಠಗಳು. 'ಯಶಸ್ಸಿಗೆ ಯಾವುದೇ ರಹಸ್ಯಗಳಿಲ್ಲ. ಸಿದ್ಧತೆ, ಕಠಿಣ ಪರಿಶ್ರಮ ಮತ್ತು ವೈಫಲ್ಯದ ಕಲಿಕೆಯೇ ಸಾಧನೆ' ಎಂದ ಕಾಲಿನ್ ಪೊವೆಲ್‌ರ ಮಾತು ನೆನಪಿರಲಿ. ನಿಮ್ಮ ಹೆಜ್ಜೆ: ಹಿಂದಿನ ಯಶಸ್ಸಿನ ಬಗ್ಗೆ, ವಿಫಲತೆಯ ಬಗ್ಗೆ ಯೋಚಿಸಿ ಗೆದ್ದಾಗ ತೆಗೆದುಕೊಂಡಿದ್ದ ನಿರ್ಣಯಗಳ ಬಗ್ಗೆ, ಸೋತಾಗ ಆಗಿದ್ದ ತಪ್ಪುಗಳ ಬಗ್ಗೆ ಅವಲೋಕಿಸಿ. ಮನದಲ್ಲಿನ ಭಯವನ್ನು ಹೊರದಬ್ಬಿ ನಮ್ಮಲ್ಲೇ ಅಡಗಿರುವ ಸೋಲಿನ ಭೀತಿಯನ್ನು ಸ್ಫೂರ್ತಿ, ಪ್ರೇರೇಪಣೆ ಎಂದು ಭಾವಿಸಿ ಹಿಂದೆ ನೋಡದೆ ಸಾಗಿ. ಯಾರೂ ನಮ್ಮ ಗೆಲುವನ್ನು ತಡೆಯಲಾರರು. ಗೆಲುವು ಯಾರ ಅಪ್ಪನ ಮನೆಯ ಸ್ವತ್ತೂ ಅಲ್ಲ ಹಾಗೆಯೇ ಸೋಲು ಬೇಡವೆಂದರೂ ಅನುಸರಿಸಲು ನಮ್ಮ ಮನೆಯ ನಾಯಿಯೂ ಅಲ್ಲ...! -ಜಮುನಾ ರಾಣಿ .@.