ದಿರಿಸಿಗೆ ನುಗ್ಗಿದ ದೇವರು ವ್ಯಾಪಾರಿ ಸಂಸ್ಥೆಗಳು ಸಾಮಾನ್ಯವಾಗಿ ತಮ್ಮ ವಿಶ್ವಾಸಾರ್ಹತೆಗೆ ಧಕ್ಕೆ ಬರುವಂಥ ಕೆಲಸಗಳಿಗೆ ಕೈ ಹಾಕುವವರಲ್ಲ... ವ್ಯಾಪಾರಿ ಸಂಸ್ಥೆಗಳು ಸಾಮಾನ್ಯವಾಗಿ ತಮ್ಮ ವಿಶ್ವಾಸಾರ್ಹತೆಗೆ ಧಕ್ಕೆ ಬರುವಂಥ ಕೆಲಸಗಳಿಗೆ ಕೈ ಹಾಕುವವರಲ್ಲ. ಆದರೂ ಆನ್‌ಲೈನ್ ವ್ಯಾಪಾರ ಬಿಗ್‌ಬ್ರಾಂಡ್ ಆಗಿರುವ ಅಮೆಜಾನ್ ಮಾತ್ರ ಇಲ್ಲಿ ಸ್ವಲ್ಪ ಯಾಮಾರಿಬಿಟ್ಟಿದೆ. ಈಗಷ್ಟೇ ಭಾರತಕ್ಕೆ ಕಾಲಿಡುತ್ತಿರುವ ಸಂಸ್ಥೆ ಇಲ್ಲೇ ಭಾರತೀಯರನ್ನು ತಡವಿಕೊಂಡುಬಿಟ್ಟಿದೆ. ಹಿಂದೂಗಳ ದೇವದೇವತೆಯರ ಚಿತ್ರಗಳಿರುವ ಲೆಗ್ಗಿಂಗ್ಸ್‌ಗಳನ್ನು ಅಮೆಜಾನ್ ಮಾರಾಟ ಮಾಡುತ್ತಿದೆ. ಲೆಗ್ಗಿಂಗ್ಸ್ ಮತ್ತು ಸೊಂಟದವರೆಗೂ ಧರಿಸುವ ಯೋಗಾ ಪ್ಯಾಂಟುಗಳಲ್ಲಿ ಭಾರತೀಯ ದೇವತೆಗಳಾದ ಗಣೇಶ ಶಿವ , ಬ್ರಹ್ಮ, ವಿಷ್ಣು, ಸುಬ್ರಹ್ಮಣ್ಯ, ಹನುಮಾನ್, ಶ್ರೀರಾಮ, ಕಾಳೀ ಮಾತೆ ಮತ್ತು ರಾಧಾಕೃಷ್ಣರ ಚಿತ್ರಗಳನ್ನು ಪ್ರಿಂಟ್ ಮಾಡಲಾಗಿದೆ. ಯಿಜ್ಜಾಂ ಎಂಬ ಉಡುಪು ಮಾರಾಟ ಸಂಸ್ಥೆ ಇದನ್ನು ತಯಾರಿಸಿದೆ. ಇದಕ್ಕೆ ಭಾರತೀಯರು ಆಕ್ಷೇಪವನ್ನೂ ಸಲ್ಲಿಸಿದ್ದಾರೆ. ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂನ ಅಧ್ಯಕ್ಷ ರಾಜನ್ ಜೇದ್ ಅಮೆಜಾನ್‌ಗೆ ಪತ್ರ ಬರೆದು ಇದನ್ನು ವಿರೋಧಿಸಿದ್ದಾರೆ. ಹಿಂದೂ ಧರ್ಮದಲ್ಲಿ ದೇವ-ದೇವತೆಯರಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಇವರ ಚಿತ್ರಗಳನ್ನು ದೇವಾಲಯಗಳು ಮತ್ತು ಮನೆಗಳ ಪೂಜಾಸ್ಥಳಗಳಲ್ಲಿ ಪವಿತ್ರವಾಗಿಟ್ಟು ಪೂಜಿಸಲಾಗುತ್ತದೆ. ಇವು ಕಾಲು, ನಿತಂಬ ಮತ್ತು ತೊಡೆಗಳಲ್ಲಿ ಧರಿಸುವ ವಸ್ತುವಲ್ಲ ಎಂದು ಕಿಡಿ ಕಾರಿದ್ದಾರೆ. ಈ ಕುರಿತು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.