ಓ ನನ್ನ ಚೇತನ ಅವಳು ಯಾವ ಅರ್ಥದಲ್ಲಿ 'ಡಾನ್'? ಯಾರಿಗೂ ಗೊತ್ತಿಲ್ಲ! ಎಲ್ಲರೂ ಮಗನನ್ನು ಮುದ್ದಾಡುವಾಗ ಅವಳ ತಾಯ್ತನದ ಕಣ್ಣುಗಳು ತೇವಗೊಳ್ಳುತ್ತಿದ್ದವು. ಅವಳು ಯಾವ ಅರ್ಥದಲ್ಲಿ 'ಡಾನ್'? ಯಾರಿಗೂ ಗೊತ್ತಿಲ್ಲ! ಎಲ್ಲರೂ ಮಗನನ್ನು ಮುದ್ದಾಡುವಾಗ ಅವಳ ತಾಯ್ತನದ ಕಣ್ಣುಗಳು ತೇವಗೊಳ್ಳುತ್ತಿದ್ದವು. ಅಂಗಾಂಗಗಳಲ್ಲಿ ಚಲನೆ ಅಲ್ಲ. ಕಟ್ಟಿಕೊಂಡ ಆಸೆಯ ಕನಸುಗಳಿಗೆ ಆ ದೇವರು ರೆಕ್ಕೆ ಜೋಡಿಸಿಲ್ಲ. ಟೂರ್ ಟೂರ್ ಎಂದು ಸುತ್ತಾಡುತ್ತಾ, ಲವಲವಿಕೆಯಿಂದ ಇರುತ್ತಿದ್ದವಳನ್ನು ಈಗ ಅಲುಗಾಡಿಸಿದರೂ ಮಾತನಾಡುವುದಿಲ್ಲ. ಒಳಗೊಳಗೇ ಆಳುವ ಅಳು. ಕಣ್ಣ ಹನಿಗಳು ಯಾವ ಸಮುದ್ರ ಸೇರುತ್ತವೆ? ಸ್ವತಃ ಡಾನ್ ಪೇಝಿ ವೆಬಸ್ಟರ್ಗೇ ಗೊತ್ತಿಲ್ಲ. ಅಂಚೆ ನೌಕರ ಸಿಮನ್ ಅನ್ನು ಪತಿಯಾಗಿ ಸ್ವೀಕರಿಸುವಾಗ ಡಾನ್ ಆ ಏಸುವನ್ನು ಬೇಡಿದ್ದೇ 'ಈ ಗಂಡನ ಥರದ ಮುದ್ದು ಮಗುವನ್ನು ಕೊಡು' ಎಂದು. ಅಧಿಕ ರಕ್ಷದೊತ್ತಡವಿದ್ದ ಡಾನ್ ಅವಧಿಗೂ ಮುನ್ನವೇ ಗಂಡು ಮಗುವನ್ನು ಹೆತ್ತಳು. ಕಡಿಮೆ ತೂಕವಿದ್ದ ಮಗು ಇನ್ಕ್ಯೂ ಬೇಟರ್ಗೆ ಹೋಯಿತು. ಡಾನ್ ಆರೋಗ್ಯ ಸ್ಥಿತಿ ಬರುಬರುತ್ತಾ ಹದಗೆಟ್ಟಿತ್ತು. ತಾನೊಂದು ಬಯಸಿದರೆ ವಿಧಿಯೊಂದ ಬಯಸಿತು ಎನ್ನುವಂತೆ ಮಗುವಿನ ಆಗಮನವನ್ನು ಸಂಭ್ರಮಿಸಬೇಕಾಗಿದ್ದ ಡಾನ್ಗಳಿಗೆ ಪಾರ್ಶ್ವವಾಯು ಆವರಿಸಿತು. ಎಷ್ಟು ದಿನ, ಹೇಗೆ ಬದುಕುತ್ತಾಳೋ ಗೊತ್ತಿಲ್ಲ. ಡಾನ್ ಮುಂಚಿನಂತಾಗೊದು ಕಷ್ಟ. ಆಕೆಗಿರುವುದು ಲಾಕಡ್ ಇನ್ ಸಿಂಡ್ರೋಮ್ ಎಂದು ಬಿಟ್ಟರು ವೈದ್ಯರು. ಸ್ವಲ್ಪ ದಿನ ಕಾಯಿ. ನಾನು ಮುಂಚಿನಂತೆಯೇ ಆಗ್ತೇನೆ. ದೇಹ ನಿಷ್ಕ್ರಿಯವಾಗಿದೆ. ಮನಸ್ಸಲ್ಲ' ಎಂದು ಹೇಳಬೇಕೆನಿಸುತ್ತಿತ್ತು ಡಾನ್ಗೆ. ಈಕೆಯ ಮೂಕ ಆರ್ತನಾದಕ್ಕೆ ಕಿವುಡನಾದ ಗಂಡ. ಸ್ವಲ್ಪ ದಿನಗಳ ನಂತರ ಮತ್ತೊಂದು ಹೆಣ್ಣೆಗೆ ಗಂಡನಾದ! ಕೈ ಹಿಡಿದವನೇ ಕೈ ಕೊಟ್ಟ. ಆದರೆ, ಹೆತ್ತ ಕರುಳು ಹಾಗೆ ಮಾಡಲಿಲ್ಲ. ದೈಹಿಕವಾಗಿ ಡಾನ್ ಸತ್ತಂತಾಗಿದ್ದರೂ ಅವಳ ಮೆದುಳಿನ ಯಾವುದೋ ಭಾಗ ಆ್ಯಕ್ಟಿವ್ ಆಗಿದೆ ಎಂಬ ನಂಬಿಕೆ ಶಿರ್ಲಿ ಮತ್ತು ಅಲೇಜ್ ಪೇಝಿ ದಂಪತಿಗಿತ್ತು. ಆ ನಂಬಿಕೆಯಿಂದಲೇ ಮಗಳಿಗೆ ಸಿನಿಮಾಗಳನ್ನು ಕಣ್ಣು ಮಿಟುಕಿಸಿ ಪೋಷಕರ ವಿಶ್ವಾಸಕ್ಕೆ ಡಾನ್ ತಣ್ಣೀರೆರಚಲಿಲ್ಲ. ದೈಹಿಕವಾಗಿ ಸಂಪೂರ್ಣ ಸತ್ತಂತೆ ಕಾಣುತ್ತಿದ್ದ ಡಾನ್ಳ ಮೆದುಳು ಸಕ್ರಿಯವಾಗಿದೆ ಎಂಬುದು ಸಹೋದರ ಮಾರ್ಕ್ ಗಮನಕ್ಕೆ ಬಂತು. ನಾನು ಹೇಳಿದ್ದು ಕೇಳಿಸಿದರೆ ಕಣ್ಣು ಮಿಟುಕಿಸು ಎಂದ. ಮಿಟುಕಿಸಿದಳು. ಕಿವಿಗೆ ಇಯರ್ ಫೋನ್ ಹಾಕಿ ಸಂಗೀತ ಆಲೈಸುವಂತೆ ಮಾಡುತ್ತಿದ್ದರು ಅಪ್ಪ. ಆಫ್ ಮಾಡ್ಬೇಡಿ ಎನ್ನಬೇಕು ಎನಿಸುತ್ತಿತ್ತು ಡಾನ್ಗೆ. ಒಳಗೊಳಗೇ ಕುದ್ದು ಹೋಗುತ್ತಿದ್ದಳು. ಈಕೆ ಪ್ರಪಂಚದೊಡನೆ ಕಣ್ಣು ಮಿಟುಕಿಸಿಯೇ ಸಂಪರ್ಕಿಸಬಹುದು ಎಂದು ಹೆತ್ತವರಿಗೆ ಯಾವಾಗ ಅರ್ಥವಾಯಿತೋ, ಆಗ ಡಾನ್ಳ ಬದುಕೇ ಬದಲಾಯಿತು. ಮನಸ್ಸಿನ ಭಾವನೆಗಳನ್ನು, ಆಸೆ, ಆಕಾಂಕ್ಷೆ, ಕೋಪ-ತಾಪಗಳನ್ನು ಕಣ್ಣನ್ನು ಮೇಲೆ, ಕೆಳಗೆ ಚಲಿಸಿಯೇ ಅಭಿವ್ಯಕ್ತಗೊಳಿಸಿ ಡಾನ್ ಉತ್ತಮ 'ವಾಗ್ಮಿ'ಯಾದಳು. ತನ್ನ ಆಲೋಚನೆಗಳನ್ನು ಮತ್ತಷ್ಟು ಹೊರ ಜಗತ್ತಿಗೆ ತೋರಿಸಿಕೊಳ್ಳುವ ತವಕ ಡಾನ್ಗಿತ್ತು. ಒಂದೊಮ್ಮೆ ಐಟಿ ಟೀಚರ್ ಆಗಿದ್ದ ಡಾನ್ ಸತತ ಪ್ರಯತ್ನದಿಂದ ಕಣ್ಣಿನೊಂದಿಗೆ ಹೌದೋ, ಅಲ್ವೋ ಎನ್ನುವಷ್ಟು ನಿಧಾನವಾಗಿ ತಲೆಯನ್ನೂ ಅಲುಗಾಡಿಸಲಾರಂಭಿಸಿದಳು. ಹಾಗೂ ಹೀಗೂ ಯತ್ನಿಸಿ ಆರು ತಿಂಗಳ ನಂತರ ನಿಧಾನವಾಗಿ ಅವಳದ್ದೇ ಶೈಲಿಯಲ್ಲಿ ಬರೆಯುವುದನ್ನೂ ಕಲಿತುಕೊಂಡಳು. ನಂತರ ಭಾವನೆಗಳನ್ನು ಹಂಚಿಕೊಳ್ಳಲು ಡಾನ್ಗೆ ಮತ್ಯಾವ ಸಮಸ್ಯೆಯೂ ಆಗಲೇ ಇಲ್ಲ. ಹಠ ಬಿಡದೆ ಪಡೆದ ಡಿಗ್ರಿ ಮಗಳ ಖುಷಿಗಾಗಿಯೇ ಬದುಕನ್ನು ಮೀಸಲಿಟ್ಟ ಡಾನ್ ಅಪ್ಪ ಅಮ್ಮ, ಮಗಳಿಗಾಗಿಯೇ ನೂರು ಕಾಲ ಬದುಕುತ್ತೇವೆ ಎನ್ನುತ್ತಾರೆ. ಜೀವನವನ್ನು ಪ್ರಕಾಶಮಾನವಾಗಿ ಮಾಡಿದ ಪೋಷಕರನ್ನು ಡಾನ್ ನಕ್ಷತ್ರಗಳಿಗೆ ಹೋಲಿಸುತ್ತಾಳೆ. ದಿನಕ್ಕೆ ನಾಲ್ಕು ಗಂಟೆಯಂತೆ ಆರು ವರ್ಷ ಸತತ ಓದಿದ ಡಾನ್ ಮುಕ್ತ ವಿವಿಯಿಂದ 'ಪ್ರಾಚೀನ ಇತಿಹಾಸ' ವಿಷಯದಲ್ಲಿ ಡಿಗ್ರಿಯನ್ನೂ ಪಡೆಯುತ್ತಾಳೆ. ಈಗ ಮಾಸ್ಟರ್ಸ್ ಮಾಡಲು ತಯಾರಿ ನಡೆಸುತ್ತಿದ್ದಾಳೆ. ಡಾಕ್ಟರೇಟ್ ಪಡೆದೇ ತೀರುವೆ ಎನ್ನುವ ವಿಶ್ವಾಸವೂ ಇದೆ. ಇಷ್ಟು ಸಾಧನೆಗೆ ಕಾರಣ ಕೇಳಿದರೆ 'ಹಠ' ಎನ್ನುತ್ತಾಳೆ ಡಾನ್. ಪ್ರೀತಿಸುತ್ತಿದ್ದ ಗಂಡ ಕೈ ಕೊಟ್ಟಾಗ ಎಲ್ಲವೂ ಮುಗಿಯಿತು ಎನ್ನುವಂತೆ ವರ್ತಿಸಲಿಲ್ಲ. 'ಮಿಸಸ್ ನೋಬಡಿ'ಯಾಗಿದ್ದ ಡಾನ್ಗೆ ತನ್ನ ಮೆದುಳು ಚುರುಕಾಗಿದೆ ಎಂಬುದನ್ನು ಪ್ರಪಂಚಕ್ಕೆ ತೋರಿಸುವ ತವಕವಿತ್ತು. ಯಶಸ್ವಿಯಾಗಿದ್ದಾಳೆ. ದೈಹಿಕವಾಗಿ ಸಂಪೂರ್ಣ ನಿಷ್ಕ್ರೀಯವಾಗಿದ್ದರೂ ಡಾನ್ಗೆ ಜೀವನ ಪ್ರೀತಿ ಇದೆ. ಬದುಕನ್ನು ಪ್ರೀತಿಸುತ್ತಾಳೆ. ನೂರುಕಾಲ ಬದುಕುವ ಆಸೆಯಿದೆ. ಇಂಥ ಪಾಸಿಟಿವ್ ಹಠವಿರುವ ಡಾನ್ ಮತ್ತಷ್ಟು ಸ್ವತಂತ್ರವಾಗಲಿ. ಡಾನ್ ಪರೀಕ್ಷೆ ಬರೆದಿದ್ದು ಹೇಗೆ? ವ್ಹೀಲ್ಚೇರ್ನಲ್ಲಿ ಕುಳಿತು ಡಾನ್ ಮುಂದೆ ಕಪ್ಪು ಹಲಗೆ ಮೇಲೆ ಬುಕ್ಕನ್ನಿಡುತ್ತಿದ್ದರು. ಒಂದು ಪೇಜ್ ಓದಿದ ನಂತರ ಡಾನ್ ಕಣ್ಣು ಮಿಟುಕಿಸುತ್ತಿದ್ದಳು. ನಂತರ ಮುಂದಿನ ಪುಟವನ್ನು ಡಾನ್ ಅಪ್ಪ ಅಥವಾ ಅಮ್ಮ ಟರ್ನ್ ಮಾಡುತ್ತಿದ್ದರು. ಕಣ್ಣಿನ ಚಲನವಲನವನ್ನು ಅಕ್ಷರಗಳನ್ನಾಗಿಸುವಂತೆ ರಚಿಸಿದ ವಿಶೇಷ ಲ್ಯಾಪ್ ಟಾಪ್ನಲ್ಲಿ ಡಾನ್ ಪರೀಕ್ಷೆ ಬರೆದಳು. ಅವಳು ಬರೆಯಬೇಕೆಂದೆನಿಸಿದ ಪದಗಳನ್ನು ನಿಧಾನವಾಗಿ ಕರ್ಸರ್ ಮೂವ್ ಮಾಡಿ ಸೂಚಿಸುವಂತೆ ಸಹಕರಿಸಲಾಯಿತು. ಅದು ಟೈಪ್ ಆಗುವಂತೆ ಕಣ್ಣಿನ ಮೂಲಕವೇ ಸೂಚಿಸುತ್ತಿದ್ದಳು. ಹೀಗೆ ದೈಹಿಕ ಹಾಗೂ ಮಾನಸಿಕ ಒತ್ತಡದಿಂದ ಪದಗಳು ಕೂಡಿ, ವಾಕ್ಯ ರಚನೆಯಾಗಲು ಡಾನ್ಗೆ ಸಾಕಷ್ಟು ಸಮಯ ಹಿಡಿಯುತ್ತಿತ್ತು. ಅಬ್ಬಬ್ಬಾ ಅಂದ್ರೆ ಗಂಟೆಗೆ 50 ಪದಗಳನ್ನು ಬರೆಯಬಹುದಿತ್ತು. ಸಾಮಾನ್ಯವಾಗಿ 3 ಗಂಟೆ ಬರೆಯಬೇಕಾದ ಪರೀಕ್ಷೆಯನ್ನು ಮೂರು ವಾರಗಳು ಬರೆದು ಡಾನ್ ಡಿಗ್ರಿ ಪಡೆದಳು. -ನಿರುಪಮಾ ಕೆ.ಎಸ್.