ಅವನಲ್ಲಿ ಇವಳಿಲ್ಲಿ 'ಆನ್‌ಲೈನ್‌ನಲ್ಲಿ ಮದುವೆ'! ಅವನಲ್ಲಿ ಇವಳಿಲ್ಲಿ 'ಆನ್‌ಲೈನ್‌ನಲ್ಲಿ ಮದುವೆ'! ಇಡೀ ದಿನ ಇಂಟರ್ನೆಟ್ಟು, ಫೇಸ್‌ಬುಕ್ಕಲ್ಲೇ ಮುಳುಗಿರ್ತೀರಲ್ಲಾ, ಅದರಲ್ಲಿ ಸಂಸಾರ ಮಾಡೋಕಾಗುತ್ತಾ? ಹಾಗಂತ ಹಿರಿಯರು ಕೇಳಿದರೆ ಈಗ ರಪ್ಪಂತ ಉತ್ತರ ಹೇಳುವ ಕಾಲ ಬಂದಿದೆ: 'ಹೌದು, ಆನ್‌ಲೈನಲ್ಲೇ ಮದುವೇನೂ ಆಗಬಹುದು, ಇದರಲ್ಲೇಸಂಸಾರಾನೂ ಮಾಡಬಹುದು!' ಮ್ಯಾಟ್ರಿಮೋನಿ ವೆಬ್‌ಸೈಟುಗಳಲ್ಲಿ ಗಂಡು-ಹೆಣ್ಣು ಹುಡುಕುವುದು ನಮಗೆ ಗೊತ್ತು. ಶಾದಿ ಡಾಟ್‌ಕಾಮ್, ಭಾರತ್ ಮ್ಯಾಟ್ರಿಮೋನಿಯಂತಹ ನೂರಾರು ವೆಬ್‌ಸೈಟುಗಳಿವೆ. ಇಲ್ಲಿ ಹುಡುಗನನ್ನೋ ಹುಡುಗಿಯನ್ನೋ ಹುಡುಕಿಕೊಂಡ ಮೇಲೆ ಅವರಿಬ್ಬರೂ ಭೇಟಿಯಾಗುವುದು, ಸಾಂಪ್ರದಾಯಿಕವಾಗಿ ಗಂಡು, ಹೆಣ್ಣಿನ ಕಡೆಯವರು ಮಾತುಕತೆ ನಡೆಸುವುದು, ಆಮೇಲೆ ಮದುವೆಗೆ ದಿನಾಂಕ ಫಿಕ್ಸ್ ಮಾಡುವುದು, ಕೊನೆಗೆ ಕಲ್ಯಾಣ ಮಂಟಪದಲ್ಲಿ ವಾಲಗ ಊದಿಸುವುದು. ಇದು ಪದ್ಧತಿ. ಬೆಂಗಳೂರಿನಂತಹ ಊರುಗಳಲ್ಲಿ ಅರ್ಧಕ್ಕರ್ಧ ಮದುವೆಗಳು ಇಂದು ಹೀಗೇ ನಡೆಯುತ್ತವೆ. ಬೇರೆ ಬೇರೆ ಊರು ಅಥವಾ ದೇಶದಲ್ಲಿರುವ ಬಹಳಷ್ಟು ಹುಡುಗ, ಹುಡುಗಿಯರೂ ಹೀಗೇ ತಮ್ಮ ಬಾಳ ಸಂಗಾತಿಯನ್ನು ಹುಡುಕಿಕೊಳ್ಳುತ್ತಾರೆ. ಇದರಲ್ಲೀಗವಿಶೇಷವೇನೂ ಇಲ್ಲ. ವಿಶೇಷ ಏನಪ್ಪಾ ಅಂದರೆ, ಕಾಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಈಗ ಹೊಸತೊಂದು ಮದುವೆ ಟ್ರೆಂಡ್ ಶುರುವಾಗಿದೆ. ಇದರಲ್ಲಿ, ಮ್ಯಾಟ್ರಿಮೋನಿ ಸೈಟುಗಳಲ್ಲಿ ಹುಡುಗ ಅಥವಾ ಹುಡುಗಿಯನ್ನು ಹುಡುಕಿಕೊಂಡ ನಂತರಅವರು ಪರಸ್ಪರ ಇಂಟರ್ನೆಟ್‌ನಲ್ಲೇ ಮಾತುಕತೆ ನಡೆಸುತ್ತಾರೆ. ಅವರ ಅಪ್ಪಅಮ್ಮಂದಿರೂ ಗೂಗಲ್ ಹ್ಯಾಂಗೌಟ್ ಅಥವಾ ಸ್ಕೈಪ್‌ನಲ್ಲಿ ವಿಡಿಯೋ ಚಾಟ್ ಮಾಡುತ್ತಾರೆ. ಹುಡುಗನ ಕಡೆಯವರು ದುಬೈನಲ್ಲಿರುತ್ತಾರೆ, ಹುಡುಗಿ ಕಡೆಯವರು ಕೇರಳದಲ್ಲಿರುತ್ತಾರೆ ಅಂತಿಟ್ಟುಕೊಳ್ಳಿ. ಅವರ ನಡುವೆ ಇಂಟರ್ನೆಟ್‌ನಲ್ಲೇ ಮದುವೆ ಮಾತುಕತೆಯೂ ನಡೆಯುತ್ತದೆ.ಅಲ್ಲೇ ಮದುವೆಗೆ ಮುಹೂರ್ತ ಫಿಕ್ಸ್ ಆಗುತ್ತದೆ. ಮುಂದೆ? ಹುಡುಗನ ಕಡೆಯವರು ವಿಮಾನ ಹತ್ತಿ ಕೇರಳಕ್ಕೆ ಬರುತ್ತಾರೆ ಎಂದುಕೊಂಡಿರಾ? ಇಲ್ಲ. ಅವರು ದುಬೈನಲ್ಲೇ ಇರುತ್ತಾರೆ. ಹುಡುಗಿ ಕಡೆಯವರೂ ಕೇರಳ ಬಿಟ್ಟು ಹೋಗುವುದಿಲ್ಲ. ಮುಹೂರ್ತದ ದಿನಅವರು ಅಲ್ಲಿ, ಇವರು ಇಲ್ಲಿ ನೀಟಾಗಿ ಮದುವೆಯ ಡ್ರೆಸ್ ಮಾಡಿಕೊಂಡು, ಪುರೋಹಿತರ ಜೊತೆಗೆ ಇಂಟರ್ನೆಟ್ ಮುಂದೆ ಕುಳಿತುಕೊಳ್ಳುತ್ತಾರೆ. ಅವರು ಕುಳಿತ ಜಾಗವೇ ಮದುವೆ ಛತ್ರ.ಅಲ್ಲೇ ಮದುವೆ ಶಾಸ್ತ್ರೋಕ್ತವಾಗಿ ನಡೆಯುತ್ತದೆ! ಇದು ಹೇಗೆ ಸಾಧ್ಯ? ಇದಕ್ಕೆ ಕಾನೂನಿನ ಮಾನ್ಯತೆ ಇದೆಯೇ? ಹೀಗೆ ಮದುವೆಯಾದವರು ಸಂಸಾರ ಹೇಗೆ ಮಾಡುತ್ತಾರೆ? ಇವೆಲ್ಲದಕ್ಕೂ ಉತ್ತರವಿದೆ. ಸೈಬರ್ ಮ್ಯಾರೇಜ್ ಇಂತಹ ಮದುವೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿಲ್ಲವಾದರೂ ವರ್ಷಕ್ಕೆ ನೂರಾದರೂ ನಡೆಯುತ್ತಿವೆ. ಜಗತ್ತಿನಾದ್ಯಂತ ಹೆಚ್ಚಾಗಿ ಇವು ನಡೆಯುವುದು ಮುಸ್ಲಿಂ ಸಮುದಾಯದಲ್ಲಿ. ಅನಿವಾರ್ಯ ಕಾರಣಗಳಿಂದ ಮದುವೆಯ ಸಮಯಕ್ಕೆ ಹುಡುಗ, ಹುಡುಗಿ ಒಂದೆಡೆ ಸೇರಲು ಸಾಧ್ಯವಾಗದಿದ್ದರೆ ಇಂಟರ್ನೆಟ್‌ನಲ್ಲೇ ಮದುವೆಯಾಗುವ ವ್ಯವಸ್ಥೆ ಈ ಸಮುದಾಯದಲ್ಲಿ ತಕ್ಕಮಟ್ಟಿಗೆ ಸ್ವೀಕೃತವಾಗಿದೆ. ಹಿಂದುಗಳಲ್ಲಿರುವಂತೆ ತಾಳಿ ಕಟ್ಟುವ ಶಾಸ್ತ್ರ ಮುಸ್ಲಿಮರಲ್ಲಿಲ್ಲ. ಇವರಲ್ಲಿ 'ಕಬೂಲ್ ಹೈ, ಕಬೂಲ್ ಹೈ' ಎಂದು ಧರ್ಮಗುರುವಿನ ಮುಂದೆ ಹುಡುಗ, ಹುಡುಗಿ ಹೇಳಿದರೆ ಮದುವೆಯಾದಂತೆ. ಇದನ್ನು ವಿಡಿಯೋ ಚಾಟ್‌ನಲ್ಲೂ ಹೇಳಬಹುದು. ಹಾಗಾಗಿ ಈ ರೀತಿಯ ಮದುವೆಗೆ ಬೇರೆ ಬೇರೆ ದೇಶಗಳ ಕೆಲ ಮುಸ್ಲಿಂ ಧಾರ್ಮಿಕ ಸಂಘಟನೆಗಳು ಮಾನ್ಯತೆ ನೀಡಿವೆ. ಭಾರತದಲ್ಲೂ ಇಂತಹ ಕೆಲ ಮದುವೆಗಳಾಗಿವೆ. ಕ್ರಿಶ್ಚಿಯನ್ನರಲ್ಲೂ ಈ ರೀತಿಯ ಮದುವೆ ನಡೆದಿದೆ. ಇವರಲ್ಲಿ ಗಂಡು-ಹೆಣ್ಣು 'ಐ ಡು, ಐ ಡು' ಎಂದು ಹೇಳಿ ಕಿಸ್ ಮಾಡಿದರೆ ಮದುವೆಯಾದಂತೆ. ಇದನ್ನು ಇಂಟರ್ನೆಟ್‌ನಲ್ಲೇ ಮಾಡಬಹುದು. ಕಿಸ್ ಮಾಡುವವರು ಕಂಪ್ಯೂಟರ್ ಸ್ಕ್ರೀನ್‌ಗೇ ತುಟಿ ಒತ್ತುತ್ತಾರೆ! ಚರ್ಚ್‌ನ ಧಾರ್ಮಿಕ ಮುಖಂಡರು ಅಲ್ಲಿ ಹಾಜರಿದ್ದು ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ. ಅಮೆರಿಕದ ಕ್ಯಾಲಿಫೋರ್ನಿಯಾ, ಕೊಲರಾಡೋ, ಟೆಕ್ಸಾಸ್, ಮೊಂಟಾನಾ ಮುಂತಾದ ರಾಜ್ಯಗಳಲ್ಲಿ ಇಂತಹ 'ಪ್ರಾಕ್ಸಿ' ಮದುವೆಗೆ ಕಾನೂನಿನ ಮಾನ್ಯತೆಯೂ ಸಿಕ್ಕಿದೆ. 'ಐ ಡು' ಎಂದು ಬಾಯಿಯಲ್ಲಿ ಹೇಳುವುದರ ಜೊತೆಗೆ ಕಂಪ್ಯೂಟರ್‌ನಲ್ಲಿ ಟೈಪ್ ಕೂಡ ಮಾಡಲಾಗುತ್ತದೆ. ಅದುಲಿಖಿತವಾಗಿ ಉಳಿಯುವುದರಿಂದ ಮದುವೆಗೆ ಅಧಿಕೃತ ದಾಖಲೆಯೂ ಸಿಕ್ಕಂತಾಗುತ್ತದೆ. ಆದರೆ, ಇಂತಹ ಮದುವೆಗಳು ಹೆಚ್ಚಿನ ದೇಶಗಳಲ್ಲಿ ಕಾನೂನು ಬದ್ಧವಲ್ಲ. ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಇವುಗಳಿಗೆ ಕಾನೂನಿನ ಮಾನ್ಯತೆ ಇಲ್ಲ. ಮುಸ್ಲಿಂ ಸಮುದಾಯದಲ್ಲೂ ಕೆಲವೇ ಕೆಲವು ಧಾರ್ಮಿಕ ಸಂಸ್ಥೆಗಳು ಮಾತ್ರ ಇದನ್ನು ಒಪ್ಪಿಕೊಂಡಿವೆ. ಇನ್ನುಳಿದವುಇವುಗಳನ್ನು ಕಾನೂನುಬಾಹಿರ ಎಂದು ಘೋಷಿಸಿವೆ. ಸಂಸಾರ ಹೇಗೆ ಮಾಡುತ್ತಾರೆ? ನೆನಪಿಡಿ: ಇಂಟರ್ನೆಟ್‌ನಲ್ಲಿ ಹೀಗೆ ಮದುವೆಯಾಗುವವರು ಅನಿವಾರ್ಯ ಕಾರಣಗಳಿಂದ ದೂರದಲ್ಲಿರುವವರಾಗಿರುತ್ತಾರೆ. ಹಾಗಾಗಿ ಪರಸ್ಪರ ಭೇಟಿಯಾಗುವವರೆಗೆ ಫೋನ್ ಹಾಗೂ ಅಂತರ್ಜಾಲವೇ ಅವರಿಗೆ ಸಂಪರ್ಕ ಮಾಧ್ಯಮ. ಅಲ್ಲೇ ಪ್ರೀತಿಯ ವಿನಿಮಯ ನಡೆಯುತ್ತದೆ. ಇಷ್ಟಕ್ಕೂ ಮದುವೆಯೆಂಬುದು ದೈಹಿಕ ಸಂಬಂಧಕ್ಕಿಂತ ಹೆಚ್ಚಾಗಿ ಒಂದು ಭಾವನಾತ್ಮಕ ಸಂಬಂಧ ಎಂದು ನಾವೆಲ್ಲಾ ಹೇಳುತ್ತೇವಲ್ಲವೇ? ಈ ಸೂತ್ರವೇ ಇಲ್ಲಿ ಯಥಾವತ್ತು ಪಾಲನೆಯಾಗುತ್ತಿರುವುದು. ಮುಂದೊಂದು ದಿನ ಈ ದಂಪತಿ ಪರಸ್ಪರ ಭೇಟಿಯಾದಾಗ ಮೊದಲ ರಾತ್ರಿ ನಡೆಯುತ್ತದೆ. ಕೇವಲ ಮೋಜಿಗಾಗಿಯೂ ಹೀಗೆ ಮದುವೆಯಾಗುವವರಿದ್ದಾರೆ. ತಮ್ಮ ಮದುವೆ ವಿಶೇಷವಾಗಿರಬೇಕು ಅಥವಾ ಸದಾ ನೆನಪಿನಲ್ಲುಳಿಯಬೇಕು ಎಂದು ವಿಮಾನದಲ್ಲಿ, ನೀರಿನಾಳದಲ್ಲಿ ಅಥವಾ ಹಾರುವ ಬಿಸಿಗಾಳಿಯ ಬಲೂನ್‌ನಲ್ಲಿ ಮದುವೆಯಾಗುವುದಿಲ್ಲವೇ? ಹಾಗೆಯೇ ಇಂಟರ್ನೆಟ್‌ನಲ್ಲಿ ಮದುವೆಯಾಗುವುದೂ ಉಂಟು. ಭಾರತದ ಮೊದಲ ಮದುವೆ ನಮ್ಮ ದೇಶದಲ್ಲಿ ಮೊದಲ ಬಾರಿಗೆ ಆನ್‌ಲೈನ್ ಮದುವೆ ನಡೆದಿದ್ದು ಬಹುಶಃ 2007ರಲ್ಲಿ. ಅದು ಉತ್ತರಪ್ರದೇಶದಲ್ಲಿ. ಆ ಮದುವೆಗೆ ದೇವಬಂದ್‌ನ ಮುಸ್ಲಿಂ ಧಾರ್ಮಿಕ ಸಂಘಟನೆ 'ದಾರೂಲ್ ಉಲೂಂ' ಕೂಡ ಮಾನ್ಯತೆ ನೀಡಿತು. ಈ ಸಂಸ್ಥೆಯ ಫತ್ವಾ ವಿಭಾಗವಾದ ದಾರೂಲ್ ಇಫ್ತಾ 'ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಇಂಟರ್ನೆಟ್‌ನಲ್ಲಿ ಮದುವೆ ನಡೆದರೆ ಅದಕ್ಕೆ ಮಾನ್ಯತೆಯಿದೆ. ಮದುವೆಯಾಗುವವರು ದೈಹಿಕವಾಗಿ ಸಮೀಪದಲ್ಲೇ ಇರಬೇಕೆಂದಿಲ್ಲ. ಖುರಾನ್‌ನಲ್ಲಿ ಇದಕ್ಕೆ ಸಹಮತವಿದೆ' ಎಂದು ಹೇಳಿತ್ತು. ನಂತರ ಈ ತೀರ್ಮಾನ ಸಾಕಷ್ಟು ವಿವಾದವನ್ನೂ ಹುಟ್ಟುಹಾಕಿತ್ತು. ಇದು ಸರಿಯೋ ತಪ್ಪೋ ಎಂದುದೇಶಾದ್ಯಂತ ಚರ್ಚೆ ನಡೆದಿತ್ತು. ಆನ್‌ಲೈನ್ ನಿಖಾದಲ್ಲಿ ಇಂಟರ್ನೆಟ್ಟೇ 'ವಕೀಲ್‌'ನ ಪಾತ್ರ ವಹಿಸುತ್ತದೆ. ಇವರು ಹುಡುಗ, ಹುಡುಗಿಯ ನಡುವೆ ಇಜಾಬ್ ಹಾಗೂ ಕಬೂಲ್‌ನ ವಿನಿಮಯವಾಗಿದ್ದನ್ನು ಅಧಿಕೃತವಾಗಿ ದಾಖಲಿಸುತ್ತಾರೆ. 2005ರಲ್ಲೇ ಈ ಬಗ್ಗೆ ಒಂದಷ್ಟು ಚರ್ಚೆ ನಡೆದು ಕೊನೆಗೆ ಇಂತಹ ವಿವಾಹಕ್ಕೆ ಒಪ್ಪಿಗೆ ನೀಡಲಾಗಿದೆ. ಲಕ್ನೋದಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಇಂತಹ ಏಳೆಂಟು ಮದುವೆಗಳು ನಡೆದ ಬಗ್ಗೆ ಪತ್ರಿಕಾ ವರದಿಗಳಿವೆ. ಆದರೆ, ಅನಿವಾರ್ಯವಾಗಿದ್ದಾಗ ಮಾತ್ರ ಈ ರೀತಿ ಮದುವೆಯಾಗಬೇಕು. ಹುಡುಗ ಅಥವಾ ಹುಡುಗಿ ವಿದೇಶದಲ್ಲಿದ್ದು, ಮದುವೆಯ ಸಮಯಕ್ಕೆ ಇಬ್ಬರಿಗೂ ಒಂದೇ ದೇಶದಲ್ಲಿ ಸೇರಲು ಸಾಧ್ಯವಾಗದೆ ಇದ್ದರೆ ಅಥವಾ ಊರಿಗೆ ಬರಲು ಹಣಕಾಸಿನ ತೊಂದರೆಯಿದ್ದರೆ ಮಾತ್ರ ಹೀಗೆ ಮದುವೆಯಾಗಬಹುದು ಎನ್ನುತ್ತಾರೆ ಉಲ್ಮಾ ಕೌನ್ಸಿಲ್‌ನ ಮೌಲಾನಾ ನೈಮುರಹ್ಮನಾನ್. ಆದರೆ, ಬಹುತೇಕ ಮುಸ್ಲಿಂ ಧಾರ್ಮಿಕ ಸಂಘಟನೆಗಳು ಮ್ಯಾಟ್ರಿಮೋನಿ ವೆಬ್‌ಸೈಟುಗಳೇ ಕಾನೂನುಬಾಹಿರ ಎಂದು ಘೋಷಿಸಿವೆ. ಇಂಟರ್ನೆಟ್‌ನಲ್ಲಿ ಪರಸ್ಪರ ಪರಿಚಯಮಾಡಿಕೊಂಡು ನಂತರ ಎಲ್ಲರಂತೆ ಮದುವೆಯಾಗುವುದು ಕೂಡ ಅವುಗಳ ಪ್ರಕಾರ ತಪ್ಪು. ಆನ್‌ಲೈನ್‌ನಲ್ಲೇ ಮದುವೆಯಾಗುವುದನ್ನಂತೂ ಅವು ಒಪ್ಪುವುದೇ ಇಲ್ಲ. ದೂರದೊಂದು ತೀರದಿಂದ ಒಂದು ಕ್ಷಣ ಯೋಚಿಸಿ; ಭೂಮಿಯ ಒಂದು ತುತ್ತತುದಿಯಲ್ಲಿರುವ ಗಂಡು, ಭೂಮಿಯ ಇನ್ನೊಂದು ತುದಿಯಲ್ಲಿ ಕುಳಿತ ಹೆಣ್ಣು. ಜಗತ್ತಿನ ಎರಡು ಮೂಲೆಯನ್ನು ಮದುವೆಯ ಮೂಲಕ ಬೆಸೆಯುವ ಯೋಚನೆಯೇ ಥ್ರಿಲ್ ಕೊಡುತ್ತದೆಯಲ್ಲವೇ? ಇಂತಹ ಥ್ರಿಲ್‌ಗಾಗಿಯೇ ಕೆಲವರು ಆನ್‌ಲೈನ್‌ನಲ್ಲಿ ಮದುವೆಯಾಗುತ್ತಾರೆ. ಕಳೆದ ವರ್ಷಅಮೆರಿಕ ಹಾಗೂ ಬಾಂಗ್ಲಾದೇಶದ ನಡುವೆ ಹೀಗೊಂದು ಮದುವೆ ನಡೆಯಿತು. ಅಮೆರಿಕದ ಕ್ವೀನ್ಸ್‌ನ ಜಾಕ್ಸನ್ ಹೈಟ್ಸ್ ಚರ್ಚ್‌ನಲ್ಲಿ ವಧು ಪೂನಂ ಚೌಧರಿ ಸರ್ವಾಭರಣ ಭೂಷಿತೆಯಾಗಿ ಸಕುಟುಂಬಪರಿವಾರ ಸಮೇತ ಕುಳಿತಿದ್ದಳು. ಆಕೆಯ ಭಾವಿ ಪತಿ ತನ್ವೀರ್‌ಅಹಮ್ಮದ್ ಬಾಂಗ್ಲಾದೇಶದ ತನ್ನ ಮನೆಯಲ್ಲಿ ಶರಿಯಾ ಜಡ್ಜ್ ಜೊತೆ ಪವಡಿಸಿದ್ದ. ಅವರ ನಡುವೆ ಎರಡು ಲ್ಯಾಪ್‌ಟಾಪ್‌ಗಳಲ್ಲಿ ಸ್ಕೈಪ್ ಕನೆಕ್ಟ್ ಆಗಿತ್ತು. ಎರಡೂ ಕಡೆಯಿಂದ ಮದುವೆಯ ಶಾಸ್ತ್ರಗಳು ಮುಗಿದ ಮೇಲೆ ಧರ್ಮಗುರುಗಳು ಮದುವೆಯನ್ನು ಘೋಷಿಸಿದರು. ಎಲ್ಲರೂ ಚಪ್ಪಾಳೆ ಹೊಡೆದರು. ವಧೂವರರು ಲ್ಯಾಪ್‌ಟಾಪಿನ ಸ್ಕ್ರೀನ್‌ಗೆ ಮುತ್ತಿಕ್ಕಿದರು.ಅಷ್ಟರಲ್ಲಿ ಇಂಟರ್ನೆಟ್ ಸಂಪರ್ಕ ಕಟ್ ಆಯಿತು! ಇವರಿಬ್ಬರೂ ಇಂಟರ್ನೆಟ್‌ನಲ್ಲೇ ಭೇಟಿಯಾದವರು. ಮದುವೆಗೂ ಮುನ್ನ ಖುದ್ದಾಗಿ ಒಮ್ಮೆ ಭೇಟಿಯಾಗಿದ್ದರು. ಆದರೆ ಆಗ ಮದುವೆಯಾಗಲು ಸಾಧ್ಯವಾಗಲಿಲ್ಲ. ಅದೇನೂ ಪ್ರಾಬ್ಲಂ ಅಲ್ಲ, ನಾವಿಬ್ಬರೂ ನಮ್ಮ ನಮ್ಮ ದೇಶಕ್ಕೆ ಹೋದ ಮೇಲೆ ಇಂಟರ್ನೆಟ್‌ನಲ್ಲೇ ಮದುವೆಯಾಗೋಣ ಎಂದು ನಿರ್ಧರಿಸಿದರು. ಕೊನೆಗೆ ಹಾಗೇ ಮದುವೆಯಾದರು. ತಂತ್ರಜ್ಞಾನ ಮುಂದುವರಿದಿರುವುದರ ಲಾಭವನ್ನು ಹೀಗೂ ಪಡೆಯಬಹುದು ಎಂದು ಜಗತ್ತಿಗೆ ತೋರಿಸಿದರು. ಆನ್‌ಲೈನ್ ಮದುವೆಗಳನ್ನು ಪ್ರಾಕ್ಸಿ ಮದುವೆ ಎನ್ನಲಾಗುತ್ತದೆ. ಗಂಡು ಹೆಣ್ಣು ದೂರದಲ್ಲಿದ್ದುಕೊಂಡೇ ಮದುವೆಯಾಗುವುದು ಈಗಿನ ಹೊಸ ಟ್ರೆಂಡ್ ಆಗಿದ್ದರೂ, ಶತಮಾನದ ಹಿಂದೆಯೇ ಇಂತಹ ಮದುವೆ ನಡೆದ ದಾಖಲೆಯಿದೆ. ಫ್ರಾನ್ಸ್‌ನ ರಾಜಕುಮಾರ ಲೂಯಿಸ್ ಹಾಗೂ ಆಸ್ಟ್ರಿಯಾದ ರಾಜಕುಮಾರಿ ಮ್ಯೇಂಟೋನಿಯೋ ಎಂಬಾಕೆ ಹೀಗೆ ಮದುವೆಯಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಆಗ ಇಂಟರ್ನೆಟ್‌ಇರಲಿಲ್ಲವಲ್ಲ, ಹಾಗಾಗಿ ಇವರಿಬ್ಬರ ಮದುವೆಟೆಲಿಗ್ರಾಫ್‌ನಲ್ಲಿ ನಡೆದಿತ್ತು! ನಂತರ ಆಸ್ಟ್ರಿಯಾದ ರಾಜಕುಮಾರಿ ತನ್ನ ಗಂಡನನ್ನು ಸೇರಲು ಹಡಗಿನಲ್ಲಿ ಫ್ರಾನ್ಸ್‌ಗೆ ಹೋಗಿದ್ದಳು. ಮ್ಯಾರೇಜ್ ಆಫ್ ಬೆನೆಫಿಟ್ ಅಮೆರಿಕದಲ್ಲಿ ಆನ್‌ಲೈನ್ ಮದುವೆಗಳು ಹೆಚ್ಚಾಗಿ ಸೈನಿಕರ ಕುಟುಂಬದಲ್ಲಿ ನಡೆಯುತ್ತವೆ. ಸೇನೆಗೆ ಸೇರಿ ಯುದ್ಧ ಮಾಡಲು ಹೋದ ಬ್ರಹ್ಮಚಾರಿ ಹುಡುಗ ಅಲ್ಲೇ ಸತ್ತುಹೋದರೆಅವನ ಭಾವಿ ಹೆಂಡತಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸಿಗದೆ ಅನ್ಯಾಯವಾಗುತ್ತದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಇಂಟರ್ನೆಟ್ ಮೂಲಕ ಮದುವೆ ಮಾಡಿಸುವುದುಂಟು. ಇದಕ್ಕೆ ಕಾನೂನಿನ ಮಾನ್ಯತೆ ಇದೆ. ಆತನನ್ನು ಪ್ರೀತಿಸುತ್ತಿರುವ ಹುಡುಗಿಗೂ ಇದು ಭಾವನಾತ್ಮಕ ಅಗತ್ಯವನ್ನು ಈಡೇರಿಸುತ್ತದೆ. ಇಷ್ಟೇ ಪ್ರಮಾಣದಲ್ಲಿ ವಲಸಿಗ ಸಮುದಾಯದಲ್ಲೂ ಇಂತಹ ಮದುವೆಗಳು ನಡೆಯುತ್ತವೆ. ದೇಶ ಬಿಟ್ಟು ಕಷ್ಟಪಟ್ಟು ಹಣ ಹೊಂದಿಸಿಕೊಂಡು ಅಮೆರಿಕಕ್ಕೆ ಬಂದವರು ವಾಪಸ್ ತಮ್ಮೂರಿಗೆ ಹೋಗಿ ಮದುವೆಯಾಗಲು ಸಾಧ್ಯವಾಗುವುದಿಲ್ಲ. ಅವರ ಬಳಿ ಅಷ್ಟು ಹಣವಿರುವುದಿಲ್ಲ. ಆಗ ಆನ್‌ಲೈನ್ ಮದುವೆ ಅವರ ನೆರವಿಗೆ ಬರುತ್ತದೆ. ಮುಂದೆ ಯಾವತ್ತೋ ಪತಿ, ಪತ್ನಿ ಒಂದಾಗುತ್ತಾರೆ. ಆದರೆ, ಇಂತಹ ಮದುವೆಗಳು ಮೋಸಕ್ಕೂ, ಮಾನವ ಸಾಗಣೆಗೂ ಕಾರಣವಾಗುತ್ತಿವೆ. ಶ್ರೀಮಂತ ದೇಶಗಳ ನಾಗರಿಕತ್ವ ಪಡೆಯುವುದಕ್ಕೂ ಈ ಮದುವೆಯನ್ನು ದುರ್ಬಳಕೆ ಮಾಡಿಕೊಳ್ಳುವವರು ಹೆಚ್ಚುತ್ತಿದ್ದಾರೆ. ಹಾಗಾಗಿ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭದ್ರತಾ ವಿಭಾಗದವರು ಹಾಗೂ ವಲಸೆ ವಿಭಾಗದವರು ಇವುಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಲವ್ ಇನ್ ದಿ ಟೈಮ್ ಆಫ್ ಇಂಟರ್ನೆಟ್ ವೆಬ್‌ಚಾಟ್, ಫೇಸ್‌ಬುಕ್, ಟ್ವಿಟ್ಟರ್‌ಗಳು ಬಂದ ಮೇಲೆ ಇಂಟರ್ನೆಟ್‌ನಲ್ಲಿ ಲವ್ ಅಫೇರುಗಳು ಹೆಚ್ಚುತ್ತಿವೆ. ಇಂಟರ್ನೆಟ್‌ನಲ್ಲೇ ಪರಿಚಯವಾಗಿ, ಅಲ್ಲೇ ಪ್ರೇಮಾಂಕುರವಾಗಿ, ವರ್ಷಗಟ್ಟಲೇ ವರ್ಚುವಲ್ ಪ್ರೇಮಲೋಕದಲ್ಲಿ ವಿಹರಿಸುತ್ತ ಕೊನೆಗೆ ಕೆಲವರು ಒಂದೆಡೆ ಸೇರಿ ಮದುವೆಯಾಗುತ್ತಾರೆ, ಹೆಚ್ಚಿನವರು ಬ್ರೇಕಪ್ ಆಗುತ್ತಾರೆ. ಕೆಲ ಹುಡುಗಿಯರು ಇದರಲ್ಲಿ ಮೋಸ ಹೋಗುವುದೂ ಉಂಟು. 'ಫೇಸ್‌ಬುಕ್ ಪ್ರೇಮಿಯೊಂದಿಗೆ ಓಡಿಹೋಗಿ ಕಣ್ಮರೆಯಾದ ಹುಡುಗಿ' ಎಂಬಂತಹ ಸುದ್ದಿಗಳು ಆಗಾಗ ಬರುತ್ತಿರುತ್ತವೆ. ಹಾಗೆ ಓಡಿಹೋದವರು ವೇಶ್ಯಾವಾಟಿಕೆಗೆ ಅಥವಾ ಶ್ರೀಮಂತ ವಿಟಪುರುಷರಿಗೆ ಮಾರಾಟವಾಗಿರುತ್ತಾರೆ. ಪ್ರೀತಿ ಹೇಗೆ ಮಾನಸಿಕ ಸಂಬಂಧವೋ ಹಾಗೆಯೇ ದೈಹಿಕ ಸಾಮೀಪ್ಯವನ್ನೂ ಬಯಸುತ್ತದೆ. ಕನಸಿನ ಲೋಕದಲ್ಲಿ ಅಲೆಯುವುದು ಒಂದು ಹಂತದವರೆಗಷ್ಟೇ ಖುಷಿ ಕೊಡಬಹುದು. ನಂತರ ಮದುವೆಯ ವೇಳೆಗಾದರೂ ಹುಡುಗ ಹುಡುಗಿ ಸಮೀಪಕ್ಕೆ ಬರಲೇಬೇಕು. ಇಲ್ಲವಾದರೆದಾಂಪತ್ಯಕ್ಕೆ ಅರ್ಥವಿಲ್ಲ. ಆನ್‌ಲೈನ್ ಮದುವೆ ಎಂಬುದು ಕೇಳಲು ಸುಂದರವಾಗಿರುತ್ತದೆ. ಆದರೆ ಅದರಲ್ಲಿ ಅಪಾಯಗಳೇ ಹೆಚ್ಚು.ಮದುವೆಯೆಂದರೆ ಹುಡುಗಾಟ ಅಲ್ಲವಲ್ಲ. ಆನ್‌ಲೈನ್ ಮದುವೆ ಏಜೆನ್ಸಿ ಆನ್‌ಲೈನ್‌ನಲ್ಲಿ ಪ್ರಾಕ್ಸಿ ಮದುವೆ ಮಾಡಿಸಲೆಂದೇ ಸಾಕಷ್ಟುಕಂಪನಿಗಳೂ ಇವೆ. ಇವು ಕಾನೂನುಬದ್ಧವಾಗಿ ಇಂಟರ್ನೆಟ್‌ನಲ್ಲಿ ಮದುವೆ ಮಾಡಿಸುತ್ತೇವೆ ಎಂದು ಹೇಳಿಕೊಳ್ಳುತ್ತವೆ. ಅಂತಹದ್ದೊಂದು ಕಂಪನಿ ಅಮೆರಿಕದ ನಾರ್ಥ್ ಕೆರೋಲಿನಾದ 'ಪ್ರಾಕ್ಸಿ ಮ್ಯಾರೇಜ್ ನೌ'. ಸಂಪೂರ್ಣ ಉಚಿತವಾಗಿ ಆನ್‌ಲೈನ್‌ನಲ್ಲಿ ಮದುವೆಮಾಡಿಸುತ್ತೇವೆ ಎಂದು ಈ ಕಂಪನಿ ಹೇಳುತ್ತದೆ. 'ಪ್ರಾಕ್ಸಿ ಮ್ಯಾರೇಜ್ ನೌ' ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಆ್ಯಂಡ್ರೂಸ್ ಪ್ರಕಾರ, 'ಸ್ಕೈಪ್, ಗೂಗಲ್ ಹ್ಯಾಂಗೌಟ್‌ನಂತಹ ಟೆಕ್ನಾಲಜಿಗಳಿಂದಾಗಿ ಇಂದು ಆನ್‌ಲೈನ್ ಮದುವೆಗಳು ಜನಪ್ರಿಯವಾಗುತ್ತಿವೆ. ನಮ್ಮ ಕಂಪನಿ ಶುರುವಾಗಿ ಎಂಟು ವರ್ಷವಾಯಿತು. ವರ್ಷದಿಂದ ವರ್ಷಕ್ಕೆ ನಮ್ಮ ಬಿಸಿನೆಸ್ ಶೇ.15ರಷ್ಟುಬೆಳೆಯುತ್ತಿದೆ. ವರ್ಷಕ್ಕೆ ಸುಮಾರು 400ರಿಂದ 500 ಆನ್‌ಲೈನ್ ಮದುವೆ ಮಾಡಿಸುತ್ತೇವೆ. ಇದರಲ್ಲಿ ಸೇನೆಯಲ್ಲಿರುವವರು ಮಾಡಿಕೊಳ್ಳುವ ಆನ್‌ಲೈನ್ ಮದುವೆಗಳು ಸೇರಿಲ್ಲ. ಸೇನೆಯಲ್ಲಿ ನಡೆಯುವ ಆನ್‌ಲೈನ್ ಮದುವೆಯ ಪ್ರಮಾಣ ವರ್ಷಕ್ಕೆ ಶೇ.40ರಷ್ಟು ಹೆಚ್ಚುತ್ತಿದೆ.' ಅಮೆರಿಕನ್ನರು ಬೇರೆ ದೇಶದವರನ್ನು ಆನ್‌ಲೈನ್‌ನಲ್ಲಿ ಮದುವೆಯಾಗುವುದಕ್ಕೆ ಮುಖ್ಯ ಕಾರಣ ತಮ್ಮ ಸಂಗಾತಿಗೆ ವೀಸಾ ಅಥವಾ ಅಮೆರಿಕದ ನಾಗರಿಕತ್ವ ಕೊಡಿಸುವುದು. ಬೇರೆ ದೇಶದವರಿಗೆ ಅಮೆರಿಕಕ್ಕೆ ಹೋಗಲು ಸುಲಭವಾಗಿ ವೀಸಾ ಸಿಗುವುದಿಲ್ಲ. ಅಲ್ಲಿರುವವರನ್ನು ಮದುವೆಯಾದರೆ ವೀಸಾ ಸಿಗುತ್ತದೆ. ಹಾಗಾಗಿ ಅಮೆರಿಕನ್ನರು ತಮ್ಮ ದೇಶಕ್ಕೆ ಪ್ರೇಯಸಿಯನ್ನುಕರೆಸಿಕೊಳ್ಳುವ ಸಲುವಾಗಿ ಮೊದಲು ಆನ್‌ಲೈನ್‌ನಲ್ಲಿ ಮದುವೆಯಾಗುತ್ತಾರೆ. ನಂತರ ವೀಸಾಕ್ಕೆ ಅರ್ಜಿ ಹಾಕಿಸುತ್ತಾರೆ. ಆದರೆ, ಅಮೆರಿಕದಲ್ಲಿರುವ ಸಂಗಾತಿಯನ್ನು ಸೇರಿಕೊಳ್ಳಲು ವೀಸಾಕ್ಕಾಗಿ ಅರ್ಜಿ ಹಾಕುವವರನ್ನು ಮೊದಲಿಗೆ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯವರು ಸಂದರ್ಶನ ಮಾಡುತ್ತಾರೆ. ಅಲ್ಲಿ ಹತ್ತಾರು ಪ್ರಶ್ನೆ ಕೇಳುತ್ತಾರೆ. ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗಲೆಂದು ಇಂಟರ್ನೆಟ್‌ನಲ್ಲಿ ಮದುವೆಯಾಗಿದ್ದಾರೆಯೇ ಎಂದು ತನಿಖೆನಡೆಸುತ್ತಾರೆ. ಎಲ್ಲವೂ ಪ್ರಾಮಾಣಿಕವಾಗಿ ನಡೆದಿದೆ ಎಂಬುದು ಖಾತ್ರಿಯಾದರೆ ಮಾತ್ರ ವೀಸಾ ಕೊಡುತ್ತಾರೆ. ಇಂತಹ ಹೆಚ್ಚಿನ ಪ್ರಕರಣಗಳಲ್ಲಿ ವೀಸಾ ಸಿಗುವುದು ಕಷ್ಟ. ಏಕೆಂದರೆ,ಮದುವೆಯಾಗಿದ್ದೇವೆ ಎಂದು ಹೇಳಿಕೊಂಡು ಬೇರೆ ಬೇರೆದೇಶಗಳಿಂದ ಮಹಿಳೆಯರನ್ನು ಅಮೆರಿಕಕ್ಕೆ ಕರೆಸಿಕೊಳ್ಳುವ ಗಂಡಸರು, ನಂತರ ಅವರನ್ನು ವೇಶ್ಯಾವಾಟಿಕೆಗೆ ತಳ್ಳುವ ದಂಧೆ ಇತ್ತೀಚೆಗೆ ಹೆಚ್ಚುತ್ತಿದೆ. ಸ್ಕೈಪ್‌ನಲ್ಲಿ ಮದುವೆಯಾಗಿ ಜೈಲಿಗೆ ಹೋದರು! ಕಳೆದ ವರ್ಷ ದುಬೈನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿತ್ತು. 39 ವರ್ಷದ ಪಾಕಿಸ್ತಾನಿವ್ಯಕ್ತಿಯೊಬ್ಬ ತನ್ನ ದೇಶದಲ್ಲಿ ಕುಳಿತು ಯುಎಇಯ 19 ವರ್ಷದ ಹುಡುಗಿಯನ್ನು ಸ್ಕೈಪ್‌ನಲ್ಲಿ ಮದುವೆಯಾಗಿದ್ದ. ಮುಸ್ಲಿಂ ಧಾರ್ಮಿಕ ಮುಖಂಡನ ಸಮ್ಮುಖದಲ್ಲಿ, ಇಬ್ಬರು ಸಾಕ್ಷಿಗಳ ಉಪಸ್ಥಿತಿಯಲ್ಲಿ ಅವರ ಮದುವೆ ನಡೆದಿತ್ತು. ಒಂದು ವರ್ಷದ ನಂತರ ಹುಡುಗ ದುಬೈಗೆ ಹೋಗಿ ತನ್ನ ಹೆಂಡತಿಯನ್ನು ಸೇರಿಕೊಂಡ. ನಂತರ ಅವರಿಬ್ಬರೂ ಚಿರಕಾಲ ಸುಖವಾಗಿ ಬಾಳಿ ಬದುಕಿದರು ಎಂಬಲ್ಲಿಗೆ ಈ ಕತೆ ಮುಗಿಯಬೇಕಿತ್ತು. ಆದರೆ, ಹುಡುಗಿಯ ಅಪ್ಪ ತನ್ನ'ಅಳಿಯ'ನ ವಿರುದ್ಧ ಇವನು ನನ್ನ ಮಗಳನ್ನು ರೇಪ್ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ಕೊಟ್ಟ. ಪ್ರಕರಣ ಕೋರ್ಟ್‌ಗೆ ಹೋಯಿತು. ನ್ಯಾಯಾಲಯ ಆ ಹುಡುಗನ ವಿರುದ್ಧದ ಅತ್ಯಾಚಾರ ಆರೋಪವನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಈ ಹುಡುಗ ಮತ್ತು ಹುಡುಗಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟು ಇಬ್ಬರನ್ನೂ ಜೈಲಿಗೆ ಕಳಿಸಿತು. ಯುಎಇಯಲ್ಲಿ ವಿವಾಹೇತರ ದೈಹಿಕ ಸಂಬಂಧ ಅಪರಾಧ. ಇವರಿಬ್ಬರು ಮದುವೆಯಾದ ರೀತಿ ಕಾನೂನುಬದ್ಧವಲ್ಲ ಎಂದು ಪರಿಗಣಿಸಿದ್ದ ಕೋರ್ಟ್, ಇವರ ನಡುವೆ ಏರ್ಪಟ್ಟ ದೈಹಿಕ ಸಂಬಂಧವನ್ನು ವಿವಾಹೇತರ ಸಂಬಂಧ ಎಂದು ವ್ಯಾಖ್ಯಾನಿಸಿತ್ತು. ಆದರೆ, ಪಾಕಿಸ್ತಾನದಲ್ಲಿ ಇಂತಹ ಮದುವೆ ಕಾನೂನುಬದ್ಧ. ಹೀಗೆ ಬೇರೆ ಬೇರೆ ರೀತಿಯ ಕಾನೂನುಗಳಿರುವ ಎರಡು ದೇಶದ ವ್ಯಕ್ತಿಗಳ ನಡುವೆ ಆನ್‌ಲೈನ್‌ನಲ್ಲಿ ಮದುವೆ ನಡೆದರೆ ಅದಕ್ಕೆ ಯಾವ ದೇಶದ ಕಾನೂನು ಅಪ್ಲೈ ಆಗುತ್ತದೆ ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ. ಭಾರತದಲ್ಲಿ ವೈವಾಹಿಕ ಕಾನೂನಿನಡಿ ಇಂತಹ ಮದುವೆಗಳಿಗೆ ಮಾನ್ಯತೆಯಿಲ್ಲ. ಆದರೆ, ಉತ್ತರಪ್ರದೇಶದದೇವಬಂದ್‌ನ ದಾರೂಲ್ ಉಲೂಂ, ಮುಸ್ಲಿಮರಲ್ಲಿ ಧರ್ಮಗುರುವಿನ ಸಮ್ಮುಖದಲ್ಲಿ ಆನ್‌ಲೈನ್ ಮದುವೆ ನಡೆದರೆ ಅದಕ್ಕೆ ಕಾನೂನಿನ ಮಾನ್ಯತೆಯಿದೆ ಎಂದು ಘೋಷಿಸಿದೆ. -ರೇಖಾ ಭಟ್ (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/ಗೆ ಭೇಟಿನೀಡಿ.