189 ಕೋಟಿ ವೆಚ್ಚದ ಫಿಫಾ ಕಥೆಯಾಧಾರಿತ ಚಿತ್ರ ಗಳಿಸಿದ್ದು 38 ಸಾವಿರ! 111 ವರ್ಷಗಳ ಸಾಧನೆಯನ್ನು ಬಿಂಬಿಸುವ ಯುನೈಟೆಡ್‌ ಪ್ಯಾಶನ್ಸ್‌ ಸಿನಿಮಾ... ಜೂರಿಚ್‌: ಹಾಲಿವುಡ್‌ನಲ್ಲಿ ಯಾವುದೇ ಸಿನಿಮಾ ರಿಲೀಸ್ ಆದರೂ ಮೊದಲ ವಾರದಲ್ಲಿ ಕೋಟಿಗಟ್ಟಲೆ ಹಣ ಮಾಡುವುದು ಸಾಮಾನ್ಯ. ಆದರೆ ಫಿಫಾದ 111 ವರ್ಷಗಳ ಸಾಧನೆಯನ್ನು ಬಿಂಬಿಸುವ ಯುನೈಟೆಡ್‌ ಪ್ಯಾಶನ್ಸ್‌ ಸಿನಿಮಾ ಮಾತ್ರ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ನಲ್ಲಿ ತೊಪ್ಪೆದುಹೋಗಿದೆ. ಯುನೈಟೆಡ್ ಫ್ಯಾಶನ್ಸ್ ಸಿನಿಮಾ ನಿರ್ಮಾಣವಾಗಿದ್ದು ಬರೋಬ್ಬರಿ 189 ಕೋಟಿ ವೆಚ್ಚದಲ್ಲಿ. ಆದರೆ ಸಿನಿಮಾ ಬಿಡುಗಡೆಯಾಗಿ ಮೊದಲ ವಾರಾಂತ್ಯದಲ್ಲಿ ಗಳಿಸಿದ್ದು ಮಾತ್ರ ಕೇವಲ 38,241 ರು. 1000 ಕೋಟಿ ರು. ಹಗರಣದಿಂದ ತತ್ತರಿಸಿರುವ ಜಾಗತಿಕ ಫ‌ುಟ್‌ಬಾಲ್‌ ಸಂಸ್ಥೆ ಫಿಫಾ ಈಗ ಮತ್ತೊಂದು ಅವಮಾನಕ್ಕೊಳಗಾಗಿದೆ. ಚಿತ್ರ ನೈಜ ವಿಷಯಾಧಾರಿತ ಚಿತ್ರವಾಗಿರುವುದರಿಂದ ಅಥವಾ ಸಿನಿಮಾದ ಮೇಲೆ ಫಿಫಾದ ಹಗರಣವೂ ಪ್ರಭಾವ ಬೀರಿರುವ ಕಾರಣವೋ ಪ್ರೇಕ್ಷಕರು ಚಿತ್ರಮಂದಿರದ ಕಡೆ ಮುಖ ಹಾಕಿಲ್ಲ. ಚಿತ್ರದಲ್ಲಿ ಬ್ರಿಟಿಷ್‌ ನಟ ಟಿಮ್‌ ರಾಥ್‌ ಫಿಫಾ ಮಾಜಿ ಅಧ್ಯಕ್ಷ ಸೆಪ್‌ ಬ್ಲಾಟರ್‌ ಪಾತ್ರ ನಿರ್ವಹಿಸಿದ್ದಾರೆ. ನ್ಯೂಜಿಲೆಂಡ್‌ನ‌ ಸ್ಯಾಮ್‌ ನೀಲ್‌, ಬ್ಲಾಟರ್‌ಗೂ ಹಿಂದಿನ ಫಿಫಾ ಅಧ್ಯಕ್ಷನ ಪಾತ್ರ ನಿರ್ವಹಿಸಿದ್ದಾರೆ. ಜೆರಾರ್ಡ್‌ ಡಿಪಾರ್ಡಿಯೋ, ಫಿಫಾದ ಮೂರನೇ ಅಧ್ಯಕ್ಷ ಜೂಲ್ಸ್‌ ರಿಮೆಟ್‌ ಪಾತ್ರನಿರ್ವಹಿಸಿದ್ದಾರೆ. ಸಿನಿಮಾದ ಕುರಿತು ಪ್ರಮುಖ ಪತ್ರಿಕೆಗಳು ಕಟು ಟೀಕೆ ಮಾಡಿವೆ. ನೋಡಲು ಸಾಧ್ಯವೇ ಇಲ್ಲದಿರುವ ಸಿನಿಮಾಗಳಲ್ಲಿ ಇದೂ ಒಂದು ಎಂದು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವಿಶ್ಲೇಷಿಸಿದ್ದರೆ. ಈ ಸಿನಿಮಾದಲ್ಲಿ ಫ‌ುಟ್‌ಬಾಲ್‌ ಮೈದಾನದಲ್ಲಿ ನಡೆಯುವ ಕದನಗಳಿಗಿಂತ ಸಭಾ ಕಾರ್ಯಕ್ರಮಗಳೇ ತುಂಬಿಕೊಂಡಿವೆ ಎಂದು ಮತ್ತೊಂದು ಪತ್ರಿಕೆ ಟೀಕಿಸಿದೆ.