ಒಂದು ಲೈಕಿಗಾಗಿ! ಗೆಳತಿಯೊಬ್ಬಳು ವಾರಕ್ಕೊಮ್ಮೆ ತಾನು ಭೇಟಿ ನೀಡಿದ ಸ್ಥಳಗಳ ಫೋಟೋಗಳನ್ನು ಫೇಸ್‌ಬುಕ್‌ಗೆ ಹಾಕುತ್ತಾಳೆ. ಇಟ್‌ವಾಸ್ ಯಾನ್ ಆಸಮ್ ವೀಕೆಂಡ್ ಎಂದು ಬರೆದುಕೊಂಡು ಹಾಕಿದ ಹಾರುತ್ತಿರುವ, ಕುಣಿಯುತ್ತಿರುವ ಫೋಟೋಗಳನ್ನು ನೋಡಿದರೆ ಸಾಕು, ಲೈಕ್ ಒತ್ತುವ ಮುಂಚೆ ಒಮ್ಮೆ 'ಅಬ್ಬಾ ಲೈಫ್ ಎಂದರೆ ಇವಳದು. ನಾನಂತೂ ಬರಿ ಬೋರ್ ಹೊಡೆಸಿಕೊಂಡೇ ಕಾಲ ಕಳೆಯುತ್ತಿದ್ದೇನೆ. ಈ ಹೆಕ್ಟಿಕ್ ಕೆಲಸ ಯಾರಿಗೆ ಬೇಕು? ಎಲ್ಲ ಬಿಟ್ಟು ಊರು ಸುತ್ತತೊಡಗಲೇ' ಎಂಬ ಯೋಚನೆ ಮನಸ್ಸಿನಲ್ಲೊಮ್ಮೆ ಸುಳಿದಾಡುತ್ತದೆ. ಆದರೆ ನಿಮಗೆ ಗೊತ್ತಿಲ್ಲದ್ದೇನೆಂದರೆ, ಆಕೆ ಆ ನಿಮ್ಮ ಒಂದು ಲೈಕ್‌ಗಾಗಿಯೇ ಊರು ಸುತ್ತುತ್ತಾಳೆ, ಪುಸ್ತಕ ಓದುತ್ತಾಳೆ, ಮೂವಿಗೆ ಹೋಗಿ ಬರುತ್ತಾಳೆ, ಮಳೆಯಲ್ಲೂ ನೆನೆಯುತ್ತಾಳೆ ಮತ್ತು ಕೊನೆಗೆ ಫೇಸ್‌ಬುಕ್ ಎಷ್ಟು ಲೈಕ್‌ಗಳು ಬಿದ್ದವು ಎಂಬ ಮಾನದಂಡದ ಮೇಲೆ ತನ್ನ ಕೆಲಸಗಳಿಗೆ ಸರ್ಟಿಫಿಕೇಟ್ ನೀಡಿಕೊಳ್ಳುತ್ತಾಳೆ! ಅದೇನು ಸಾಮಾಜಿಕ ಜಾಲತಾಣಗಳ ಮೋಡಿಯೋ, ಲೈಕ್ ಎಂಬುದನ್ನು ಜನ ಲೈಫ್‌ಗಿಂತಲೂ ಹೆಚ್ಚಾಗಿ ಲೈಕ್ ಮಾಡುತ್ತಿದ್ದಾರೆ. ವರ್ಚುಯಲ್ ವರ್ಲ್ಡ್‌ನಲ್ಲಿ ಲೈಕ್ ಪಡೆಯಲೋಸ್ಕರವೇ ರಿಯಲ್ ವರ್ಲ್ಡ್‌ನಲ್ಲಿ ಊರು ಸುತ್ತುವುದು, ಪುಸ್ತಕ ಓದುವುದು, ಕತೆ ಕವನ ಗೀಚುವುದು, ಎಲ್ಲದಕ್ಕಿಂತ ಹೆಚ್ಚಾಗಿ ಫೇಸ್‌ಬುಕ್‌ನಲ್ಲಿ ಕಾಲಹರಣ ಮಾಡುತ್ತಲೇ ಏನೋ ಮಾಡುತ್ತಿರುವಂತೆ ತೋರಿಸಿಕೊಳ್ಳುವುದು... ಒಂದು ಪಕ್ಷ ಸಾಮಾಜಿಕ ಜಾಲತಾಣಗಳಿಲ್ಲದಿದ್ದರೆ ಯಾವುದನ್ನೆಲ್ಲ ಮಾಡುತ್ತಿರಲಿಲ್ಲವೋ, ಅವೆಲ್ಲವನ್ನೂ ಮಾಡುತ್ತಿದ್ದಾರೆ ಎನ್ನುತ್ತಿದೆ ಹೊಸ ಸರ್ವೆಯೊಂದು. ರಜೆಯೊಂದು ಸಿಕ್ಕಿ ಎಲ್ಲದರಿಂದ ದೂರ ಹೋಗುವಂತಾದರೆ ಎಂದು ಕನಸು ಕಾಣುವವರಿಗೂ ಆ ರಜೆಯಲ್ಲಿ ಸಾಮಾಜಿಕ ಜಾಲಾತಣಗಳನ್ನು ಜಾಲತಾಣಗಳನ್ನು ಚೆಕ್ ಮಾಡದೇ ಇದ್ದರೆ ವಿಚಿತ್ರ ಕಸಿವಿಸಿಯೊಂದು ಆವರಿಸಿಕೊಂಡು ಬಿಡುತ್ತದೆ. ಚೆನ್ನೈನಲ್ಲೊಂದು ಟೂರಿಂಗ್ ಸಂಸ್ಥೆ ನವದಂಪತಿಗಳು ಹನಿಮೂನ್‌ಗೆ ಹೊರಡುವಾಗ ಅವರೊಂದಿಗೆ ಫೋಟೋಗ್ರಾಫರ್‌ನನ್ನು ಕಳಿಸುತ್ತದೆ. ಆ ಫೋಟೋಗ್ರಾಫರ್ ಹೇಳುವ ಪ್ರಕಾರ, ಹೆಚ್ಚಿನ ದಂಪತಿ ಫೋಟೋ ತೆಗೆಯುತ್ತಿದ್ದಂತೆಯೇ ಅಪ್‌ಲೋಡ್ ಮಾಡುತ್ತಾರಂತೆ. ಅಲ್ಲೇನಾದರೂ ನೆಟ್‌ವರ್ಕ್ ಇಲ್ಲವೆಂದಾದಲ್ಲಿ ಫೋಟೋ ಗ್ರಾಫರ್‌ಗೇ ಅಪ್‌ಲೋಡ್ ಮಾಡಿ ಅವರನ್ನು ಟ್ಯಾಗ್ ಮಾಡಲು ದುಂಬಾಲು ಬೀಳುತ್ತಾರಂತೆ! ಪ್ರತಿನಿತ್ಯ ಗೆಳೆಯ, ಗೆಳತಿಯರ ಪ್ರತಿಕ್ಷಣದ ಚಟುವಟಿಕೆಗಳು ಆ ಕ್ಷಣದಲ್ಲೇ ಮುಖಹೊತ್ತಿಗೆಯ ಗೋಡೆಯ ಮೇಲೆ ರಾರಾಜಿಸುವಾಗ, ಎಲ್ಲೋ ಹೋಗಿ ಬಂದ ವಾರದ ನಂತರ ಅದನ್ನು ಹಾಕುವುದೆಂದರೆ... ಛೆ ಅವಮಾನವಲ್ಲವೇ?! ಎಷ್ಟು ಹಿಂದುಳಿದವರೆನಿಸಿ ಕೊಳ್ಳುವುದಿಲ್ಲವೇ? ಎಲ್ಲಕ್ಕಿಂತ ಹೆಚ್ಚಾಗಿ ಅಷ್ಟು ತಡವಾಗಿ ಲೈಕ್ ಪಡೆದುಕೊಳ್ಳುವ ತಾಳ್ಮೆ ಯಾರಲ್ಲಿದೆ? ನಮ್ಮ ಈ ಕ್ಷಣದ ಆನಂದವನ್ನು ಈ ಕ್ಷಣವೇ ಹೆಚ್ಚಿಸಲು ಲೈಕ್‌ಗಳು ಬೇಕು. ಈ ಲೈಕ್ ಸೈಕಾಲಜಿಯ ಹಿಂದೆ ನಮ್ಮನ್ನು ನಾವು ಇರುವುದಕ್ಕಿಂತ ಹೆಚ್ಚಾಗಿ ತೋರಿಸಿಕೊಳ್ಳುವ, ನನಗೆ ಇಂತಿಂಥವುಗಳೆಂದರೆ ಇಷ್ಟವೆಂಬುದನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ಅರ್ಥ ಮಾಡಿಸುವ ಹಪಹಪಿ ಇರುತ್ತದೆ. ಈಗಂತೂ ಇವನು ನನ್ನ ಫೋಟೋ ಲೈಕ್ ಮಾಡಿದ್ದ, ಅದಕ್ಕೆ ನಾನಿವನ ಫೋಟೋ ಲೈಕ್ ಮಾಡುತ್ತೇನೆ ಎಂದೋ, ಸುಮ್ಮನೆ ಕಂಡದ್ದಕ್ಕೆಲ್ಲ ಸರಿಯಾಗಿ ಕಣ್ಣೂ ಹಾಯಿಸದೆ ಲೈಕ್ ಮಾಡುವ ಚಟಕ್ಕೋ, ಬೇಜಾರಾಗದಿರಲಿ ಎಂದೋ ಒಟ್ಟಿನಲ್ಲಿ ಲೈಕುಗಳು ಏರುಗತಿಯಲ್ಲಿ ಹೋಗುತ್ತಲೇ ಇರುತ್ತವೆ. ಅಂತೆಯೇ ಸ್ವಪ್ರೇಮ, ಅಭಿಮಾನವೂ. ಸಾಮಾಜಿಕ ಜಾಲತಾಣದಲ್ಲಿರುವ ಅನೇಕರ ಆತ್ಮವಿಶ್ವಾಸ, ಸ್ವಪ್ರೇಮಗಳು ಅವರು ಪಡೆವ ಲೈಕ್ ಹಾಗೂ ಕಾಮೆಂಟ್‌ಗಳ ಮೇಲೆ ನಿರ್ಧರಿತವಾಗುತ್ತಿವೆ. ಅಷ್ಟೆ ಅಲ್ಲ, ಕಡಿಮೆ ಸಂಖ್ಯೆಯ ಲೈಕ್‌ಗಳು ಏನನ್ನೋ ಕಳೆದುಕೊಂಡ ಭಾವವನ್ನು ಹುಟ್ಟುಹಾಕಿದೆ, ಇನ್ನಾರದೋ ಪೋಸ್ಟ್‌ಗೆ ಸಿಗುವ ತಮಗೆ ಸಿಗದ ನೂರಾರು ಸಂಖ್ಯೆಯ ಲೈಕ್‌ಗಳು ಡಿಪ್ರೆಶ್‌ನಗಳೂ ತಳ್ಳಬಲ್ಲವು. ಹೀಗೆ ನಮ್ಮ ಬಗ್ಗೆ ನಾವೇ ಒಂದು ಲೈಕಿಸ್ತಾನ ಕಟ್ಟಿಕೊಂಡು ಬರುಬರುತ್ತಾ ಆ ಭ್ರಮಾಲೋಕದಲ್ಲಿ ನಿಜವೆಂದು ಇದ್ದು ಬಿಡುತ್ತೇವೆ. ಆದರೆ ವರ್ಚುಯಲ್ ಲೋಕದಲ್ಲಿ ಯಾವುದೇ ಬೆಲೆಯೂ ಇಲ್ಲ ಎಂಬುದು ಮಾತ್ರ ಇವರಿಗೆ ಅರ್ಥವಾಗುವುದಿಲ್ಲ. ಅಮೆರಿಕದ ಸೈಕಾಲಜಿಸ್ಟ್ ಒಬ್ಬರ ಅಧ್ಯಯನದ ಪ್ರಕಾರ ಮನುಷ್ಯರು ಪ್ರತಿದಿನ ಕನಿಷ್ಠ ಒಂದೆರಡು ಸುಳ್ಳನ್ನಾದರೂ ಹೇಳುತ್ತಾರಂತೆ. ಬಹುಷಃ ಫೇಸ್‌ಬುಕ್‌ನಲ್ಲಿ ಲೈಕ್ ಕೌಂಟ್ ಹೆಟ್ಟಿಸಿಕೊಳ್ಳುವ ಭರದಲ್ಲಿ ನಮ್ಮ 'ಲೈ' ಕೌಂಟೂ ಮೇಲೇರುತ್ತಿರುತ್ತದೆ!